Posts

Showing posts from 2008

ಹೊಸ ವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡು, ಆಗೋದಾದ್ರೆ ಒಂದೋ ಎರಡೋ ಒಳ್ಳೇ ಕೆಲಸ ಮಾಡಿ, ಕಷ್ಟದಲ್ಲಿದ್ದೋರಿಗೆ ಅಯ್ಯೋ ಪಾಪ ಅಂದು ಕೈಲಾದ ಸಹಾಯ ಮಾಡಿದ್ರೆ ಸಾಕಲ್ಲಪ್ಪ? ಎತ್ತೆತ್ತರದ ಗುರಿಗಳನ್ನ ಇಟ್ಟುಕೊಂಡಿರುವವರಿಗೆ ಅದು ಸಾಕು ಅನ್ನಿಸದಿರಬಹುದು. ಆದರೆ ನನ್ನ ಮಟ್ಟಿಗೆ ಅದು ಸಾಕು. ಯಾಕಂದ್ರೆ, ಬಸವಣ್ಣೋರು ಹೇಳಿರೋದು ಕೇಳಿದ್ದೀವಲ್ಲ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಹಾಗಿದ್ದ ಮೇಲೆ, ನಮ್ಮ ನಮ್ಮ ತನು-ಮನಕ್ಕೆ ಹಿತವಾಗೋ ಕೆಲಸ ನಾವು ಮಾಡ್ಕೊಂಡು ಹೋಗ್ತಾ ಇದ್ರೆ ಸಾಕು. ಈ ವರ್ಷ ಅಂತಾ ಒಂದು ಕೆಲಸದಲ್ಲಿ ಕೈಯಿಟ್ಟ ನೆಮ್ಮದಿ ನನಗಿದೆ. ಹಿಂದೆ ಯಾವಾಗಲೋ ಒಂದು ಪೇಪರ್ ಬರೆಯೋವಾಗ ದಾಸಸಾಹಿತ್ಯ ಅಂತರ್ಜಾಲದಲ್ಲಿ ಸಿಗೋ ಹಾಗೆ ಮಾಡ್ಬೇಕು ಅನ್ನೋದು ನನ್ನ ಕನಸು ಅಂತ ಬರೆದಿದ್ದರ ನೆನಪಿದೆ. ಆದರೆ ಆ ಗಳಿಗೆಯಲ್ಲಿ ನನಗೆ ಅದಕ್ಕೆ ಯಾವರೀತಿ ತಾಂತ್ರಿಕ ಪರಿಣತಿ ಬೇಕಾಗುತ್ತೆ ಅನ್ನೋದೂ ಕೂಡ ಗೊತ್ತಿರಲಿಲ್ಲ. ಆದರೆ ಆ ಪರಿಣತಿ ನನ್ನಲ್ಲಿಲ್ಲದಿದ್ದರೂ, ಒಂದಲ್ಲ ಒಂದು ದಿವಸ ಕನಸು ನನಸು ಮಾಡಬೇಕು ಅನ್ನೋ ಆಸೆಯಂತೂ ಇತ್ತು.

ಸಂಪದದ ಹರಿಪ್ರಸಾದ ನಾಡಿಗರ ಸಹಯೋಗದಿಂದ ಹರಿದಾಸ ಸಂಪದ ಈ ವರ್ಷ ಹುಟ್ಟಿ, …

ವರ್ಷವನ್ನು ಬೀಳ್ಕೊಡುತ್ತಾ ಒಂದು ಗ್ರಹಕೂಟ

೨೦೦೮ ವರ್ಷದ ಕಡೆಯ ದಿನ ಆಕಾಶದಲ್ಲೊಂದು ಗ್ರಹಕೂಟ ಕಾಣುತ್ತಿದೆ.

ಸಾಮಾನ್ಯವಾಗಿ ಬರಿಗಣ್ಣಿಂದ ನೋಡಲು ಕಷ್ಟವಾದ ಬುಧ ಮತ್ತು ಗುರು ಸಂಜೆಯ ಆಕಾಶದಲ್ಲಿ ಬಹಳ ಹತ್ತಿರ ಬಂದಿದ್ದಾರೆ.

ಸಂಜೆ ಸೂರ್ಯ ಮುಳುಗಿದ ಕೂಡಲೆ, ಪಶ್ಚಿಮ ದಿಗಂತ ಕಾಣುವಂತಹ ಎಡೆಯಲ್ಲಿ ನಿಂತು ನೀವಿದನ್ನು ನೋಡಬಹುದು. ಆಕಾಶ ನೋಡಲು ನೂಕುನುಗ್ಗಲೇ? ಇಲ್ಲ. ಆದರೆ, ಸೂರ್ಯ ಮುಳುಗಿ ಸುಮಾರು ಒಂದು ಗಂಟೆಯೊಳಗೆ ಈ ಗ್ರಹಗಳೂ ಮುಳುಗಿಬಿಡುವುದರಿಂದ ನೀವು ಓಡಬೇಕಾಗಬಹುದು, ದಿಗಂತ ಕಾಣುವ ಕಡೆಗೆ!

ಹೆಚ್ಚಿನ ಮಾಹಿತಿಗೆ ಇಲ್ಲಿ ಚಿಟಕಿಸಿ.

-ಹಂಸಾನಂದಿ

ವಿದ್ಯೆ

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು
ಬೇಸರದಿ ಮನವ ನಲಿಸುವುದು ಇನಿಯೆಯೊಲು
ಸಿರಿಯ ತರಿಸುವುದು ಹೆಸರ ಮೆರೆಸುವುದು
ಏನೇನ ಮಾಡದದು ಕಲಿಕೆಯ ಕಲ್ಪತರುವು!

ಸಂಸ್ಕೃತ ಮೂಲ:

ಮಾತೇವ ರಕ್ಷತಿ ಪಿತೇವ ಹಿತೇ ನಿಯುಂಕ್ತೇ
ಕಾಂತೇವ ಚಾಭಿರಮಯಂತ್ಯಪನೀಯ ಖೇದಮ್ |
ಲಕ್ಷ್ಮೀಂ ತನೋತಿ ವಿತನೋತಿ ಚ ದಿಕ್ಷು: ಕೀರ್ತಿಮ್
ಕಿಮ್ ಕಿಮ್ ನ ಸಾಧಯತಿ ಕಲ್ಪ ಲತೇವ ವಿದ್ಯಾ|| ೨||

-ಹಂಸಾನಂದಿ

ದಾರಿ ಯಾವುದಯ್ಯಾ ವೈಕುಂಠಕೆ?

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ?
आकाशात् पतितम् तोयम् यथा गच्छति सागरम् ।
सर्वदेव नमस्कारः केशवम् प्रति गच्छति ॥

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

ಹಾಗಂದ್ರೆ, ಎಲ್ಲಾದಾರಿಗಳೂ ಹೋಗೋದು ವೈಕುಂಠಕ್ಕೇನೇ. ಅಥ್ವಾ, ನಿಮಗೆ ಬೇಕಾದ್ರೆ ಎಲ್ಲಾದಾರಿಗಳೂ ಹೋಗೋದು ಕೈಲಾಸಕ್ಕೆ ಅಂತ ಇಟ್ಕೊಳ್ಳಿ. ತಪ್ಪೇನಿಲ್ಲ. ಅಥವಾ, ಬರೀ ಶಿವ ವಿಷ್ಣು ವಿಷಯ ಯಾಕೆ ಅನ್ನೋದಾದ್ರೆ ’ಎಲ್ಲಾ ದಾರಿಗಳೂ ಸ್ವರ್ಗಕ್ಕೇ ಹೋಗೋದು’ ಅಂತ ಹೇಳ್ಬಿಡಬಹುದು. ಯಾರಿಗೂ ಬೇಜಾರಾಗೋದಿಲ್ಲ. ಆದ್ರೆ ಈಗ ಡಿಸೆಂಬರ್ ತಿಂಗ್ಳಲ್ವಾ, ಅದಕ್ಕೇ ಇದನ್ನ ಸ್ವಲ್ಪ ಬದ್ಲಾಯ್ಸಿ ಹೇಳೋದು ಒಳ್ಳೇದು ಅನ್ಸತ್ತೆ. ’ಎಲ್ಲಾ ದಾರಿಗಳೂ ಹೋಗೋದು ಮೈಲಾಪುರಕ್ಕೆ’ ಅಂದ್ಬಿಡೋಣ. ಹೌದು. ಮೈಲಾಪುರ. ಅಂದ್ರೆ ಸ್ವರ್ಗ. ಸಂಗೀತ ಸ್ವರ್ಗ.

ಗೊತ್ತಾಯ್ತಲ್ಲ? ತಿಂಗಳು ಡಿಸೆಂಬರ್ ಆದ್ರೆ, ನೀವು ಹೋಗ್ಬೇಕಾದ್ದು ಮದರಾಸಿಗೆ. ಮದ್ರಾಸಿಗೆ ಹೋದರೆ, ನೀವು ಅಲ್ಲಿ ತೆರಳಬೇಕಾದ್ದು ಮೈಲಾಪುರಕ್ಕೆ. ಕರ್ನಾಟಕ ಸಂಗೀತ ರಸಿಕರಿಗೆಲ್ಲ ಮೈಲಾಪುರ ಅಂದ್ರೆ, ಡಿಸೆಂಬರ್ ತಿಂಗಳಿನ ಕಾಶಿ ಅಂತಲೇ ಅರ್ಥ. ನೀವು ಸಂಗೀತಪ್ರೇಮಿಯಾಗಿದ್ದು ಈ ತಿಂಗಳು ಅಲ್ಲಿಗೆ ಹೋದ್ರೆ, ಕಾಶೀಯಾತ್ರೆಗಿಂತ ಹೆಚ್ಚು ಫಲ ನಿಮಗೆ ದಕ್ಕುತ್ತೆ ನೋಡಿ.

ಚೆನ್ನೈ, ಸೆನ್ನೈ, ಚೆನ್ನಪಟ್…

ಗ್ರಹಭೇದ

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ! ಮೊನ್ನೆ ಚಿಕ್ಕ ಮಕ್ಕಳಿಗೆ ಒಂದು ವಿಷಯ ಹೇಳಿಕೊಡೋ ಅವಕಾಶ ಬಂದಿತ್ತು. ನನಗೆ ಪ್ರೀತಿಯಾದ ವಿಷಯ. ಹಾಗಾಗಿ, ಹೇಳಿಕೊಡೋದೇನೂ ಕಷ್ಟ ಅನಿಸಲಿಲ್ಲ. ಮಕ್ಕಳೂ ಒಳ್ಳೇ ಚೆನ್ನಾಗಿ ಪಾಲುಗೊಂಡರು. ಅದನ್ನೇ ಹಂಚಿಕೊಳ್ಳೋಣ ಅಂತ ಇಲ್ಲಿ ಹಾಕುತ್ತಿರುವೆ.

ಗ್ರಹಭೇದ: ಒಂದು ಕೈಪಿಡಿ

-ಹಂಸಾನಂದಿ

ನೀರು ಹರಿಯುವುದು ಕಡಲಿನ ಕಡೆಗೆ

ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!


ಸಂಸ್ಕೃತ ಮೂಲ:

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

(* ಮೂಲದ ಕೇಶವ ಅನ್ನುವ ಪದವನ್ನು ಕನ್ನಡದಲ್ಲಿ ಹರಿ ಎಂದು ಬದಲಾಯಿಸಿದ್ದೇನೆ. ಹರಿ, ಮತ್ತು ಕಡೆ ಎರಡೂ ಪದಗಳಲ್ಲಿ ಶ್ಲೇಷೆ ಮಾಡುವಾಸೆಯಿಂದ)

-ಹಂಸಾನಂದಿ

ಬಾಯ್ಬಿಟ್ಟು ನುಡಿಯಬೇಕೆ?

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು

*ಎಣಿಸು= ಊಹೆ ಮಾಡು, ತರ್ಕಿಸು

ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ):

ಉದೀರಿತೋSರ್ಥಃ ಪಶುನಾಪಿ ಗೃಹ್ಯತೇ
ಹಯಾಶ್ಚ ನಾಗಾಶ್ಚ ವಹಂತಿ ದೇಶಿತಾಃ
ಅನುಕ್ತಮಪ್ಯೂಹತಿ ಪಂಡಿತೋ ಜನಃ
ಪರೇಂಗಿತ ಜ್ಞಾನಫಲಾ ಹಿ ಬುದ್ಧಯಃ

-ಹಂಸಾನಂದಿ

ತಂತಾನೇ ಅರಳುವ ಹಿರಿಮೆ

ಹಿರಿಮೆಯಿರಲು ಮನುಜರಲಿ
ಅರಳುವುವು ಅವು ತಂತಾನೇ.
ಪರಿಮಳ ಸೂಸಲು ಕತ್ತುರಿಗೆ
ಹೇರಬೇಕೇನು ಒತ್ತಾಯ?

ಸಂಸ್ಕೃತ ಮೂಲ:

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ

-ಹಂಸಾನಂದಿ

ದಿಟವಾದ ಒಲವು

ದಿಟವಾಗಿರುವ ಒಲವೆಂಬುದು
ದೂರವಿದ್ದರು ಕಂಗೆಡದು
ಆಗಸದಿ ಹೊಳೆವ ಚಂದಿರನು
ಚಕೋರಕೆ ತಂಪೆರೆವನು

*ಚಕೋರ ಪಕ್ಷಿಯು ಚಂದ್ರನ ಬೆಳಕಿಗೆ ಕಾಯುತ್ತಿರುತ್ತೆ ಅನ್ನುವುದು ಕವಿಸಮಯ - ಬಸವಣ್ಣನವರ ’ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ’ ಎನ್ನುವ ವಚನವನ್ನು ನೆನಪಿಸಿಕೊಳ್ಳಿ.

ಸಂಸ್ಕೃತ ಮೂಲ:

ಅಹೋ ಸಾಹಜಿಕಂ ಪ್ರೇಮ ದೂರಾದಪಿ ವಿರಾಜತೇ |
ಚಕೋರ ನಯನದ್ವಂದ್ವಮಾಹ್ಲಾದಯತಿ ಚಂದ್ರಮಾಃ ||

-ಹಂಸಾನಂದಿ

ಮೆರುಗುವುದು ಹೇಗೆ?

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರುಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ)

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಕೊಸರು: ಇದು ಸುಭಾಷಿತಕಾರನ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯ ಎಂದು ಎಣಿಸುವ ಅಗತ್ಯವಿಲ್ಲ

ಕೊನೆಯ ಕೊಸರು: ಇದೇ ಸುಭಾಷಿತಕ್ಕೆ "ಅನಾಶ್ರಯಾ ನ ಶೋಭಂತೇ ಕವಿತಾ ವನಿತಾ ಲತಾಃ" ಎನ್ನುವ ಪಾಠಾಂತರವೂ ಇದೆ ಎಂದು ಕಾಣುತ್ತದೆ.

-ಹಂಸಾನಂದಿ

ಮರೆಯಲಾರದ ಸಣ್ಣ ಕಥೆಗಳು - ೪

Image
ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಇವತ್ತು ನನಗೆ ಹೊಳೆದ ಕಥೆ ಸಂಜಯ ಹಾವನೂರರ ’ಲಿಫ್ಟ್’.ಇದು ನಾನು ಮುಂಚೆ ಹೇಳಿದ ಹಳೆಯ ಕಥೆಗಳಷ್ಟಂತೂ ಹಳೆಯದಲ್ಲ. ೧೯೮೩-೮೪ರಲ್ಲೋ ಏನೋ ಇದು ಮಯೂರದಲ್ಲಿ ಪ್ರಕಟವಾಗಿತ್ತು. ನಂತರ ಭಾರತೀಯ ಭಾಷೆಗಳಲ್ಲಿ ಬಂದಿರುವ ವೈಜ್ಞಾನಿಕ ಹಿನ್ನಲೆಯ (science fiction) ಕಥೆಗಳನ್ನೆಲ್ಲ ಒಟ್ಟುಗೂಡಿಸಿರುವ ಕಥಾಸಂಕಲನವೊಂದರಲ್ಲಿ ಈ ಕಥೆಯ ಇಂಗ್ಲಿಷ್ ಗೆ "The Lift" ಎಂಬ ಹೆಸರಲ್ಲೇ ಅನುವಾದವಾಗಿದೆಯೆಂದು ಎಲ್ಲೋ ಓದಿದ ನೆನಪು.ಕೀಮತಿಲಾಲ್ ದಲಾಲ್ ರಸ್ತೆಯ ಶೇರುಪೇಟೆಯ ಒಬ್ಬ ದಳ್ಳಾಳಿ. ಶೇರುಗಳ ಜೊತೆ ಜೂಜಾಡುವುದೊಂದೇ ಅಲ್ಲ, ಕುದುರೆ ಜೂಜಿನಲ್ಲಿಯೂ ಅವನಿಗೆ ಆಸಕ್ತಿ. ಒಂದು ದಿನ ತನ್ನ ದಕ್ಷಿಣ ಮುಂಬಯಿಯ ಬಹುಮಹಡಿ ಕಟ್ಟದವೊಂದರಲ್ಲಿರುವ ತನ್ನ ಕಚೇರಿಗೆ ಹೋದಾಗ ಲಿಫ್ಹ್ಟಿನಿಂದ ಹೊರ ಬಿದ್ದಾಗ, ಅವನು ಹೊರ ಬರುವಾಗ, ಒಳಗೆ ಯಾರೂ ಇಲ್ಲವೇ ಇಲ್ಲ ಎನ್ನುವ ರೀತಿ ಹೊರಗಿದ್ದ ಜನರೆಲ್ಲ ಅವನ ಮೇಲೇ ಬೀಳುವಂತೆ ಒಳಬರುವುದನ್ನು ಗಮನಿಸುತ್ತಾನೆ. ಏಕೆ ಯಾರಿಗೂ ತಾನು ಕಾಣುತ್ತಲೇ ಇಲ್ಲವ ಎಂದು ಬೈದುಕೊಂಡು ಹೋದ ಅವನಿಗೆ ಇನ್ನೊಂದೆರಡು ಜನರನ್ನು ನೋಡಿದ ಮೇಲೆ, ತಾನು ಯಾರಿಗೂ ಕಾಣದಂತೆ ಆಗಿಹೋಗಿದ್ದಾನೆ ಎಂದು ತಿಳಿಯುತ್ತೆ. ಹಾಗೇ ಅವನಿಗೆ ಕಾಣುತ್ತಿರುವ ನೋಟ, ಜನ ಎಲ್ಲರೂ ಮೂರು ದಿನ ಮೊದಲಿನವು ಎನ್ನುವುದೂ ಅವನಿಗೆ ಅರಿವಾಗುತ್ತೆ. ಚುರುಕು ಬುದ್ಧಿಯ ಕೀಮತಿ ಲಾಲ್, ಈ ಬದಲಾವಣೆ ಲಿಫ್ಟ್ ನ ಒಳಗಿ…

ಚೆಲುವು ಇರುವುದೆಲ್ಲಿ?

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ -ಹಂಸಾನಂದಿ

ಮುತ್ತುಗಕ್ಕೆ ಮೂರೇ ಎಲೆ!

Image
ಅರಸ ಮೆಚ್ಚಿ ಎಷ್ಟು ಕೊಡುವ?
ಬರೆದಿಹಷ್ಟು ಹಣೆಯಲಿ ಬೊಮ್ಮ!
ಸುರಿದರೂ ಮಳೆ ಎಡೆಬಿಡದೆ
ಮೂರೇ ಎಲೆ ಮುತ್ತುಗಕೆ* *- ಮುತ್ತುಗದ ಎಲೆಗಳು ಮೂರುಮೂರಾಗಿ ಒಟ್ಟಾಗಿರುತ್ತವೆ. ಅಲ್ಲದೆ, ಮೂಲದಲ್ಲಿ ಅರಸ ಎಂದಿದ್ದರೂ, ಇವತ್ತಿಗೂ ಹೊಂದುವ ಮಾತು ಎಂದು ನನಗನಿಸುತ್ತೆ. ಚಿತ್ರ : ವಿಕಿಪಿಡಿಯಾದಿಂದ ಸಂಸ್ಕೃತ ಮೂಲ:

ತುಷ್ಟೋ ಹಿ ರಾಜಾ ಯದಿ ಸೇವಕೇಭ್ಯೋ
ಭಾಗ್ಯಾತ್ ಪರಂ ನೈವ ದದಾತಿ ಕಿಂಚಿತ್
ಅಹರ್ನಿಶಂ ವರ್ಷತಿ ವಾರಿವಾಹಃ
ತಥಾಪಿ ಪತ್ರತ್ರಿತಯಃ ಪಲಾಶಃ -ಹಂಸಾನಂದಿ

ಪುರಂದರ ದಾಸರು ಮತ್ತು ಬತ್ತೀಸ ರಾಗಗಳು

ಪುರಂದರ ದಾಸರ ರಚನೆಗಳಲ್ಲಿ ಅವರ ಕಾಲದ ಸಂಗೀತದ ಬಗ್ಗೆ ಹಲವು ಹೊಳಹುಗಳು ನಮಗೆ ದೊರೆಯುತ್ತವೆ. ಅವರ ಕಾಲದ ರಾಗ ತಾಳಗಳು, ವಾದ್ಯಗಳು, ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಮೊದಲಿಗೆ ಈ ಹಾಡನ್ನು ನೋಡೋಣ: ತುತ್ತುರು ತೂರೆಂದು ಬತ್ತಿಸರಾಗಗಳನ್ನು ಚಿತ್ತಜ ಜನಕ ತನ್ನ ಕೊಳಲಲ್ಲೂದಿದನು ಕೊಳಲನ್ನು ನುಡಿಸುವಾದ ತುರ್-ತುರ್ ಎಂಬ ಸದ್ದಿನೊಡನೆ ಬರುವಂತಹ ರಂಜಕ ಪ್ರಯೋಗಗಳನ್ನು ಮಾಡುವ ಕೊಳಲು ವಾದಕರನ್ನು ನಾವು ನೋಡಿದ್ದೇವೆ. ಕೃಷ್ಣನು ಒಬ್ಬ ಚತುರ ಕೊಳಲು ನುಡಿಸುವ ಸಂಗೀತಗಾರನಾಗಿದ್ದ ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಆದರೆ, ಕೃಷ್ಣನು ಕೊಳಲು ನುಡಿಸಿದ್ದನ್ನು ನಾವಾರೂ ಕಂಡಿಲ್ಲ. ೧೫-೧೬ನೇ ಶತಮಾನದಲ್ಲಿ ಕೃಷ್ಣನ ಬಗ್ಗೆ ಹಾಡುವ ಪುರಂದರದಾಸರು, ಕೊಳಲು ನುಡಿಸುವಲ್ಲಿ ಇಂತಹ ಪ್ರಯೋಗಗಳ ಬಗ್ಗೆ
ಬರೆದಿದ್ದಾರೆಂದರೆ, ಅಂತಹ ಪ್ರಯೋಗಗಳನ್ನು ಕೊಳಲುವಾದಕರು ಸುಮಾರು ಐದುನೂರು ವರ್ಷಗಳಿಂದಲಾದರೂ ಮಾಡಿಕೊಂಡೇ ಬಂದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ. ಅಂದರೆ, ಪುರಂದರರು ತಾವು ಕಂಡ ಕೊಳಲು ನುಡಿಸುವ ವಿಧಾನವೊಂದನ್ನು ಕೃಷ್ಣನ ಕೊಳಲಲ್ಲಿ ತೋರಿಸಿದ್ದಾರೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ದಾಸ ಸಾಹಿತ್ಯವನ್ನು ನಾವು ಆ ಕಾಲಕ್ಕೊಂದು ಕನ್ನಡಿ ಎಂದು ಹೇಳುವುದು ಸರಿಯಾದ ಮಾತು. ಈ ಹಾಡು ಇನ್ನೂ ಇನ್ನೊಂದು ಬಗೆಯಲ್ಲಿ ಸಂಗೀತಾಭ್ಯಾಸಿಗಳಿಗೆ ಹೆಚ್ಚಾಯದ್ದಾಗುತ್ತೆ. ಪುರಂದರದಾಸರು ಲಕ್ಷಗಟ್ಟಲೆ …

ಕಂಗ್ಲಿಷ್ ನಲ್ಲಿ ಮಾತಾಡುವುದು ಹೇಗೆ?

Image
ಇವತ್ತು ಗೆಳೆಯರೊಬ್ಬರ ಜೊತೆ ಮಾತಾಡ್ತಾ ಹೇಳ್ದೆ - ನಾನು ಇಂಟರ್ನೆಟ್ ಫೋರಮ್ ಗಳಿಗೆ ಭೇಟಿ ಮಾಡೋಕೆ ಶುರು ಮಾಡ್ದಾಗ, ನೀವಿನ್ನೂ ಹೈಸ್ಕೂಲ್ ಮೆಟ್ಟಿಲೂ ಹತ್ತಿರ್ಲಿಲ್ಲ ಅಂತ. ನಾನು ಕೆಲಸಕ್ಕೆ ಸೇರಿದ ಮೇಲೇ ಇ-ಮೆಯ್ಲ್ ಇಂಟರ್ನೆಟ್ ಇವೆಲ್ಲ ಕಂಡದ್ದು. ಆಗಿನ್ನೂ ನ್ಯೂಸ್ ಗ್ರೂಪ್ ಗಳ ಕಾಲ. ನಮ್ಮಲ್ಲಿ ನ್ಯೂಸ್ ಗ್ರೂಪ್ ಗಳಿಗೂ ಪೋಸ್ಟ್ ಮಾಡೋಕಾಗ್ತಿರಲಿಲ್ಲ. ಆ ಕಾಲದಲ್ಲಿ ನಾನು ಬರೆದಿದ್ದ ಒಂದು ಇ-ಮೆಯ್ಲ್ ಎಲ್ಲೆಲ್ಲೋ ಸುತ್ತಿ ಕೊನೆಗೆ ನ್ಯೂಸ್ ಗ್ರೂಪ್ ನಲ್ಲೂ ಪೋಸ್ಟ್ ಆಗಿದ್ದನ್ನ ಕೆಲವು ವರ್ಷಗಳ ನಂತರ ಕಂಡಿದ್ದೆ. ಇದೆಲ್ಲ ನೆನಪಾಗಿ, ಸಪ್ತಾಕ್ಷರೀ ಮಂತ್ರವನ್ನು ಜಪಿಸಲು ಸಿಕ್ಕೇಬಿಡಬೇಕೇ? ಸುಮ್ಮನೆ ಇರಲಿ ಎಂದು ಇಲ್ಲಿ ಈಗ ಹಾಕುತ್ತಿರುವೆ. ಇದು ನಾನು ಬರೆದದ್ದು ಸುಮಾರು ೧೯೯೩-೧೯೯೪ ರಲ್ಲಿ ಇರಬೇಕು - ನನ್ನ ನಂತರದ ಇಂಟರ್ನೆಟ್ ಅವತಾರಗಳನ್ನು ತಾಳುವ ಮೊದಲು ಬರೆದಿರುವುದಿದು ;) ಯಾವುದೇ ಬದಲಾವಣೆಗಳಿಲ್ಲದೆ ಹಾಕುತ್ತಿರುವುದರಿಂದ out of times ಎನ್ನಿಸಬಹುದೇನೋ! ************************************************************************************* ಹೇಗಿದ್ದೀರಾ ಸ್ವಾಮಿ ,ಸ್ವಲ್ಪ ಮುಂಚೆ Banglish ಬಗ್ಗೆ ಒಂದು ಮೈಲ್ ಬಂತು. Banglish ಅಂದ್ರೆ ಗೊತ್ತಲ್ಲ, ಬೆಂಗಳೂರಿನಲ್ಲಿ ಮಾತಾಡೋ English. ನನಗನ್ನಿಸ್ತು, ನಾನ್ಯಾಕೆ Kanglish ಬಗ್ಗೆ ಬರೀಬಾರ್ದು ಅಂತ. ಏನಂತೀರಾ ?
Kanglish ಇದರ definition ಏನ…

’ರೀ’ ಅನ್ನುವ ಒಂದೇ ಸ್ವರ

ಸರಸರನೆ ಸರಾಗವಾಗಿ
ಸ್ವರಗಳ ಜೋಡಿಸಿ
ರಾಗವ ಹಾಡುವ
ಭಾರೀ ಹಾಡುಗಾರ

ಅವಳ ’ರೀ’ ಎಂಬ
ಒಂದು ಸ್ವರದ ಹಿಂದಿನ
ನೂರು ಭಾವಗಳ
ಅರಿಯದೇ ತಿಣುಕಿದನಂತೆ!

-ಹಂಸಾನಂದಿ

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೨

Image
ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು. ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.


"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.

"ಸರಿಯಾಗಿ ಹೇಳ್ದೆ ಪುಟ್ಟಾ. ಆಮೇಲೆ, ಇನ್ನೊಂದು ವಿಷ್ಯ ಗಮನಿಸು. ಇದು ನಮ್ಮೂರು ಸೀಗೇಗುಡ್ಡದಿಂದ ಆಗಲಿ, ಅಥವಾ ಮಾಲೇಕಲ್ಲಿಂದ ಆಗಲಿ, ಅಥವಾ ಬೇರೆ ಊರು - ತೋರಣಗಲ್ಲೋ, ಗಂಗಡಿಕ…

ಹುರುಪುಳ್ಳವರಿಗೆ ಮಾಡಲಾಗದ್ದೇನು?

ಉರಿಯ ಹುಟ್ಟಿಸಬಹುದು ಕಟ್ಟಿಗೆಯ ಕಡೆದು
ನೀರ ಚಿಮ್ಮಿಸಬಹುದು ನೆಲವನಗೆದು
ಹುರುಪುಳ್ಳವರಿಗೆ ಮಾಡಲಾಗದು ಉಂಟೆ?
ಸರಿಯಾದ ಜತನಗಳು ಹಣ್ಣೇ ಆಗುವುವು!

ಸಂಸ್ಕೃತ ಮೂಲ: - ಭಾಸನ ಪ್ರತಿಜ್ಞಾ ಯೌಗಂಧರಾಯಣ ನಾಟಕದಿಂದ

ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್
ಭೂಮಿಸ್ತೋಯಂ ಖನ್ಯಮಾನಾ ದದಾತಿ
ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ
ಮಾರ್ಗಾರಬ್ಧಾಃ ಸರ್ವಯತ್ನಾಃ ಫಲಂತಿ

-ಹಂಸಾನಂದಿ

ಕರ್ಣ ರಸಾಯನ - ಒಂದು ನಾಟಕ

ಕೆಲವು ವರ್ಷಗಳ ಹಿಂದೆ ನಮ್ಮ ಕನ್ನಡ ಕೂಟವು ನಡೆಸಿದ ಕನ್ನಡೋತ್ಸವದಲ್ಲಿ ನಾನು ನಾಟಕವೊಂದನ್ನು ಬರೆದು ಆಡಿಸಿದ್ದೆ. ಇದೊಂದು ತರಹದ ಹೊಸ ಪ್ರಯೋಗವಾಗಿತ್ತು. ಕರ್ನಾಟಕ ಎರಡು ಕಲೆಗಳಾದ ಗಮಕ ವಾಚನ ಮತ್ತು ಯಕ್ಷಗಾನ ಇವೆರಡೂ ಬೆರೆಸಿ ಮಾಡಿಸಿದ ನೃತ್ಯನಾಟಕ ಇದು.

ಕಾವ್ಯ ವಾಚನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ವಾಲ್ಮೀಕಿ ಬರೆದ ರಾಮಾಯಣವನ್ನು ರಾಮನ ಮುಂದೇ ಲವ-ಕುಶರು ವಾಚಿಸಿದರು ಎಂದು ಉತ್ತರಕಾಂಡದಲ್ಲಿ ಬರುತ್ತದೆ. ನೂರಾರು ವರ್ಷಗಳಿಂದ ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಗದುಗಿನ ಭಾರತ, ಜೈಮಿನಿ ಭಾರತವನ್ನು ವಾಚನ ಮಾಡುವ ಪದ್ಧತಿ ನಡೆದುಕೊಂಡು ಬಂದಿತ್ತು.ಇನ್ನು ಯಕ್ಷಗಾನವೂ ಕೂಡ ಕರ್ನಾಟಕಕ್ಕೇ ವಿಶಿಷ್ಟವಾದೊಂದು ಕಲಾಪ್ರಕಾರ ಎಂದು ಹೇಳುವ ಅಗತ್ಯವೇ ಇಲ್ಲ.

ಕುಮಾರವ್ಯಾಸನ ಬಗ್ಗೆ ಒಂದು ಕಾಲ್ಪನಿಕ ಪ್ರಸಂಗವನ್ನೂ, ಮತ್ತು ಅವನ ಗದುಗಿನ ಭಾರತದಿಂದ ಆಯ್ದ ಕೆಲವು ಭಾಗಗಳನ್ನೂ ಆಯ್ದು ಬರೆದ ನಾಟಕವಿದು. ಇಲ್ಲಿ ಬರುವ ಪದ್ಯಗಳೆಲ್ಲಾ ನಾರಣಪ್ಪನದ್ದೇ. ಅಲ್ಲದೆ, ಕೃಷ್ಣ, ಕರ್ಣ, ಅರ್ಜುನರ ಸಂಭಾಷಣೆಯಲ್ಲಿ ಬರುವ ಹಲವಾರು ಸಾಲುಗಳೂ ಕೂಡ ಕುಮಾರವ್ಯಾಸನ ಪದ್ಯಗಳ ರೂಪಾಂತರಗಳೇ ಆಗಿವೆ.

ಈ ನಾಟಕದ ರಂಗ ಪ್ರಯೋಗದಲ್ಲಿ ಸಂದರ್ಭಕ್ಕೆ ತಕ್ಕ ಕೆಲವು ಯಕ್ಷಗಾನದ ಹಾಡುಗಳನ್ನು ಕೂಡಾ ಬಳಸಲಾಗಿತ್ತು.

ಇನ್ನು ಓದಿ - ಕರ್ಣ ರಸಾಯನ; ಏನೆನ್ನಿಸಿತೆಂದು, ಸಾಧ್ಯವಾದರೆ ಒಂದೆರಡು ಸಾಲು ಬರೆಯಿರಿ Smiling-----------------------------------------------------------…

ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ

Image
ನವೆಂಬರ್ ೧೫ರಂದು ಕನಕದಾಸರ ಜಯಂತಿ ಎನ್ನುವ ವರದಿ ಓದಿದೆ. ಕನಕದಾಸರನ್ನು ನೆನೆಯಲು ಯಾವ ದಿನವಾದರೂ ಒಳ್ಳೆಯದೇ, ಆದರೆ ಇವತ್ತು ಅವರ ಜಯಂತಿಯಾಗಿದ್ದರೆ ಇನ್ನೂ ಒಳ್ಳೆಯದೇ ಅಲ್ಲವೇ ಎನ್ನಿಸಿತು.ದಾಸಸಾಹಿತ್ಯವನ್ನೇ ಆಗಲಿ, ವಚನಸಾಹಿತ್ಯವನ್ನೇ ಆಗಲಿ ಬರೀ ಭಕ್ತಿಮಾರ್ಗದ ಮೆಟ್ಟಿಲೆಂದೆಣಿಸದೇ, ಅವರ ಕಾಲಕ್ಕೊಂದು ಕನ್ನಡಿ ಎಂದು ನೋಡುವುದೇ ಒಳ್ಳೆಯದು. ಎಷ್ಟೋ ವಿಷಯಗಳನ್ನು ನಾವು ಅಲ್ಲಿಂದ ತಿಳಿಯಬಹುದಾಗಿದೆ. ಈ ಬಗ್ಗೆ ಹಿಂದೆಯೂ ನಾನು ಬರೆದಿದ್ದೆ. ಈಗ ಕನಕದಾಸರ ಕಥೆ ಎಲ್ಲರಿಗೂ ಗೊತ್ತಿರುವುದೇ. ಕನಕನ ಕಿಂಡಿಯ ಕಥೆ, ’ನಾನು ಹೋದರೆ ಹೋದೇನು’ ಪ್ರಸಂಗಗಳೂ ಜನಜನಿತವಾಗಿವೆ. ಹಾಗೇ, ಬಾಳೇಹಣ್ಣಿನ ಪ್ರಸಂಗವೂ ಕೂಡ.

ಆದರೆ ಪುರಂದರದಾಸರು ಈ ಪ್ರಸಂಗದ ಬಗ್ಗೆ ಬರೆದಿರುವ ದೇವರನಾಮವೊಂದಿದೆ ಎಂದು ನಿಮಗೆ ಗೊತ್ತೇ?

ಗೊತ್ತಿಲ್ಲದಿದ್ದರೆ, ಓದಿ- ಪುರಂದರ ದಾಸರು ಈ ಬಾಳೇಹಣ್ಣಿನ ಪ್ರಸಂಗವನ್ನು ವಿವರಿಸುತ್ತಾ, ಕನಕದಾಸರನ್ನು ಹೊಗಳಿ ಹಾಡಿರುವ ಈ ರಚನೆ:

ಪಲ್ಲವಿ: ಕನಕದಾಸನ ಮೇಲೆ ದಯೆ ಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬುವರೊ ||

ಚರಣಗಳು:

ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ
ಸಾರ್ಥಕವಾ ಇದು ಇವರ ಸನ್ಯಾಸಿತನವೆಲ್ಲ
ಪೂರ್ತ್ಯಾಗಲೆಂದೆನಲು ಯತಿಯು ನಗುತ್ತಿದ್ದನು

ಮರುದಿನ ಅವರವರ ಪರೀಕ್ಷಿಸಬೇಕೆಂದು
ಕರೆದು ವಿದ್ವಾಂಸರ ಕನಕ ಸಹಿತ
ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು
ಯಾರಿರದ ಸ್ಥಳದಲಿ ಮೆದ್ದು ಬನ್ನಿರೆನಲು

ಊರ ಹೊರಗೆ ಹೋಗಿ ಬೇರೆ ಬ…

ಬೇರೊಂದು ನಕ್ಷತ್ರವನ್ನು ಸುತ್ತುವ ಗ್ರಹದ ಮೊದಲ ಚಿತ್ರಗಳು

ನಮ್ಮ ಸೂರ್ಯನನ್ನು ಬಿಟ್ಟು ಬೇರೆ ನಕ್ಷತ್ರಗಳಿಗೆ ಗ್ರಹಗಳಿರುವ ವಿಷಯವನ್ನು ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದಿದ್ದರೂ, ನೇರವಾದ ಚಿತ್ರಗಳು ಯಾವುದೂ ಸಿಕ್ಕಿರಲಿಲ್ಲ.

ಇವತ್ತಿನ ತನಕ!

ಫೋಮಲ್‍ಹಾಟ್ ಅನ್ನುವ ನಕ್ಷತ್ರದ ಸುತ್ತ ಇರುವ ಒಂದು ಗ್ರಹದ ಚಿತ್ರವನ್ನು ಹಬಲ್ ದೂರದರ್ಶಕ ತೆಗೆದಿದೆ!

ಚಿತ್ರ ಮತ್ತು ಬರಹ ಓದಲಿಕ್ಕೆ ಇಲ್ಲಿ ಚಿಟಕಿಸಿ

ಅಂದಹಾಗೆ, ಫೋಮಲ್‍ಹಾಟ್ ಬರಿಗಣ್ಣಿಗೆ ಕಾಣುವ ನಕ್ಷತ್ರಗಳಲ್ಲಿ ಮೊದಲ ಇಪ್ಪತ್ತರೊಳಗೇ ಇದೆ.

ಆದ್ರೆ ತಮಾಷಿ ನೋಡಿ, ಒಳ್ಳೇ ಸುದ್ದಿ ಬಂದರೆ ಒಟ್ಟೊಟ್ಟಿಗೆ ಬರತ್ತೆ ಅಂತಾರಲ್ಲ್ವಾ?

ಇದೇ ದಿನ, ಪೆಗಾಸಸ್ ಪುಂಜದಲ್ಲಿರುವ HR8799 ಅನ್ನುವ ನಕ್ಷತ್ರದ ಸುತ್ತ ಸುತ್ತುವ ಮೂರು ಗ್ರಹಗಳ ಚಿತ್ರ ತೆಗೆದಿರುವುದೂ ಇವತ್ತೇ ವರದಿಯಾಗಿದೆ.

ಈ ವರದಿ ನೋಡೋದಿಕ್ಕೆ ಇಲ್ಲಿ ಚಿಟಕಿಸಿ.

-ಹಂಸಾನಂದಿ

ಸೀಗೇಗುಡ್ಡದ ಕರಡೀ ಸಂಸಾರ - ಭಾಗ ೧

Image
ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.

ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ಬ್ರು ಹೇಳ್ತಿದ್ರೆ, ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇದ್ದಾಗ ಕರಡೀ ಮರಿಗೆ ಯಾರಾದ್ರೂ ನೋಡಿದ್ರೆ ಅಂತ ಭಯವಾಗಿ ಓಟ ಕಿತ್ತಿತು.

ಅತ್ಲಾಗಿ ಅಮ್ಮ ಕರಡೀಗೆ ಜೀವವೇ ಬಾಯಿಗೆ ಬಂದಿತ್ತು. …

ಕಣ್ಣಿದ್ದೂ ಕುರುಡನಾಗುವುದು ಹೇಗೆ?

ಇರುವುದೊಂದನೆ ಕಣ್ಣು ಸಾಜದಾ ತಿಳಿವೆಂದು!
ಅರಿತವರ ಒಡನಾಟವೆರಡನೆಯದು!!
ಎರಡು ಇವು ಇರದಾತ ಹುಟ್ಟುಗುರುಡನು ತಾನೆ?
ದಾರಿ ತಪ್ಪಿದರೆ ತಪ್ಪವನದೇನು?

ಸಂಸ್ಕೃತ ಮೂಲ:

ಏಕಂ ಹಿ ಚಕ್ಷುರಮಲಂ ಸಹಜೋ ವಿವೇಕಃ
ವಿದ್ವದ್ಭಿರೇವ ಸಹ ಸಂವಸನಂ ದ್ವಿತೀಯಂ |
ಯಸ್ಯಾಸ್ತಿ ನ ದ್ವಯಮಿದಂ ಸ್ಫುಟಮೇವ ಸೋಂsಧಃ
ತಸ್ಯಾಪಮಾರ್ಗ ಚಲನೇ ವದ ಕೋsಪರಾಧ:|| ?

-ಹಂಸಾನಂದಿ

ಮುಖ ನೋಡಿ ಮಣೆ ಹಾಕುವುದು ಸರಿಯೇ?

ಚರಿಯೆ* ನೋಡಿ ಮನದಾಳವ
ಅರಿಯುಬೇಕು ಚತುರರು!
ಅರಳದ ಕೇದಗೆ ಪರಿಮಳವನು
ಅರಿವಂತೆ ಅಲರುಣಿ**ಗಳು!

ಸಂಸ್ಕೃತ ಮೂಲ:

ಆಕಾರಾಣೈವ ಚತುರಾಃ ತರ್ಕಯಂತಿ ಪರೇಂಗಿತಂ
ಗರ್ಭಸ್ಥಂ ಕೇತಕೀ ಪುಷ್ಪಂ ಆಮೋದೇನೇವ ಷಟ್ಪದಾಃ

*ಕೊ:ಚರಿಯೆ ~= ಚರ್ಯೆ, ಚಹರೆ, ಹೊರಕ್ಕೆ ತೋರುವ ನಡವಳಿಕೆ

**ಕೊ.ಕೊ: ಮೂಲದಲ್ಲಿ ದುಂಬಿ, ಚಿಟ್ಟೆಗಳಿಗೆ ಷಟ್ಪದಾ: = ಆರು ಕಾಲಿನ "ಜೀವಿ"ಗಳು ಎಂದು ಹೇಳಿದ್ದರೆ, ಅನುವಾದದಲ್ಲಿ ನಾನು ["ಜೀವಿ"ಯವರ ನಿಘಂಟು ಬಳಸಿ] ಅಲರುಣಿ =ಹೂವನ್ನು ಆಹಾರ ಮಾಡಿಕೊಳ್ಳುವ, ಎನ್ನುವ ಪದವನ್ನು ಬಳಸಿರುವೆ.

-ಹಂಸಾನಂದಿ

ಭೀಮಸೇನ ಜೋಶಿ - ಈಗ ಭಾರತ ರತ್ನ!

ಭೀಮಸೇನ ಜೋಶಿಯವರಿಗೆ ಭಾರತರತ್ನ ಪ್ರಶಸ್ತಿ ಕೊಡುವ ಸುದ್ದಿ ಕೇಳಿ ಬಲು ಹಿತವಾಯಿತು!

http://timesofindia.indiatimes.com/India/Bharat_Ratna_for_Pandit_Bhimsen...

ಸಂಗೀತಗಾರರೊಬ್ಬರಿಗೆ ಸಂದಿರುವ ಈ ಗೌರವದಿಂದ ಸಂಗೀತಪ್ರೇಮಿಗಳಿಗೂ ಕನ್ನಡಿಗರಿಗೂ ಬಹಳ ಸಂತೋಷವಾಗುವುದಂತು ಖಂಡಿತ!

ಈ ಸಂದರ್ಭದಲ್ಲಿ ಅವರ ಕೆಲವು ಹಾಡುಗಳನ್ನು ಕೇಳಿ ಸಂತಸ ಪಡುವುದಕ್ಕಿಂತ ಹೆಚ್ಚಿನ್ನೇನು ಬೇಕು? ನನ್ನ ಮೆಚ್ಚಿನ ಕೆಲವು ಹಾಡುಗಳು ಇಲ್ಲಿವೆ :

ನೋಡಿ ಸ್ವಾಮಿ ನಾವಿರೋದೆ ಹೀಗೆ ಚಿತ್ರದಲ್ಲಿ ಪುರಂದರ ದಾಸರ ರಚನೆ (ರಾಗ ಪೂರಿಯಾ ಧನಾಶ್ರೀ?)ಸಂಧ್ಯಾ ರಾಗ ಚಿತ್ರದ - ನಂಬಿದ ನಿನ್ನ ನಾದದೇವತೆಯೆ (ರಾಗ ಪೂರ್ವಿ ಕಲ್ಯಾಣಿ)


ಅದೇ ಚಿತ್ರದ ಇನ್ನೊಂದು ಸುಮಧುರ ರಚನೆ - ಪುರಂದರ ದಾಸರ ಈ ಪರಿಯ ಸೊಬಗು (ರಾಗ ಸೋಹಿನಿ)


ಸಂತ ರಾಮದಾಸರ ಒಂದು ಸುಂದರ ಅಭಂಗ - ಆರಂಭೀ ವಂದೀನ ಅಯೋಧ್ಯೇಚಾ ರಾಜಾ (ರಾಗ ಕಲಾವತಿ)


ಸಂಧ್ಯಾರಾಗ ಚಿತ್ರದ್ದೇ ಇನ್ನೊಂದು ಗೀತೆ - ಕನ್ನಡತಿ ತಾಯಿ ಬಾ ( ರಾಗಮಾಲಿಕೆ: ಕೇದಾರ್, ಗೋರಖ್ ಕಲ್ಯಾಣ್, ಬಿಭಾಸ್ ??)-ಹಂಸಾನಂದಿ

ನಮ್ಮವರ ಗೆಳೆತನ

ಸಣ್ಣವರು ಚಿಕ್ಕವರು ಪುಟ್ಟವರು ಎಂಥವರೂ
ನಮ್ಮವರು ಎಂದಾಗ ಗೆಳೆತನವ ಬಿಡದಿರು!
ಹೊಟ್ಟನ್ನು ತೆಗೆದು ಅಕ್ಕಿಯನು ಮಾಡಿರುವ
ಬತ್ತವದು ಮೊಳೆಯದೆಂಬುದ ಮರೆಯದಿರು!!

ಸಂಸ್ಕೃತ ಮೂಲ (ಹಿತೋಪದೇಶದ ಮಿತ್ರಲಾಭ ಭಾಗದಿಂದ) :

ಸಂಹತಿ: ಶ್ರೀಯಸೀ ಪುಂಸಾಂ ಸ್ವಕುಲೈರಲ್ಪಕೈರಪಿ |
ತುಷೇಣಾಪಿ ಪರಿತ್ಯಕ್ತಃ ತಂಡುಲೋ ನ ಪ್ರರೋಹತಿ ||

-ಹಂಸಾನಂದಿ

ಹಾಳೂರಿಗುಳಿದವನೇ ...

ಅರಿತವರೇ ಇರದೂರಿನಲಿ
ಗೌರವ ದೊರೆತೀತು ಮಡೆಯನಿಗೂ!
ಮರಗಳ ಕಾಣದ ದೇಶದಲಿ
ಹರಳು ಗಿಡವದೇ ಅತಿಶಯವು!!

ಸಂಸ್ಕೃತ ಮೂಲ:

ಯತ್ರ ವಿದ್ವದ್ಜನೋ ನಾಸ್ತಿ ಶ್ಲಾಘ್ಯಸ್ತತ್ರಾಲ್ಪಧೀರಪಿ |
ನಿರಸ್ತ ಪಾದಪೇ ದೇಶೇ ಏರಂಡೋಪಿ ದ್ರುಮಾಯತೇ||

-ಹಂಸಾನಂದಿ

ಹೊತ್ತಿಗೆ-ಹಣ-ಹುಡುಗಿ

ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?

ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!

ಸಂಸ್ಕೃತ ಮೂಲ:

ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ

ಕೊನೆಯ ಕೊಸರು: ಇದೇ ಸುಭಾಷಿತವನ್ನೇ ಪಾವೆಂ ಆಚಾರ್ಯರೋ, ಎಸ್ವಿ ಪರಮೇಶ್ವರ ಭಟ್ಟರೋ( ಯಾರೆಂದು ಮರೆತಿರುವೆ) ಹೀಗೆ ಕನ್ನಡಿಸಿದ್ದಾರೆ ಎಂದು ಬಹಳ ಹಿಂದೆ ಓದಿದ ನೆನಪು:

ಹೆಣ್ಣು ಹೊನ್ನು ಪುಸ್ತಕ
ಆದರೆ ಪರಹಸ್ತಕ
ಹೋಗೇ ಹೋಯ್ತು! ಮರಳಿದರೂ
ಭ್ರಷ್ಟ, ನಷ್ಟ, ಹರುಕ!

-ಹಂಸಾನಂದಿ

ಹೇಮಂತ ಋತುರಾಜ

ಕಾಲೇಜಿನಲ್ಲಿದ್ದಾಗ ಒಬ್ಬ ಸಹಪಾಠಿ ಒಂದು ಹಾಡನ್ನು ಬಹಳ ಚೆನ್ನಾಗಿ ಹಾಡುತ್ತಿದ್ದ. ಅದರಲ್ಲಿ ಹೇಮಂತ ಋತುರಾಜ ಬಂದಾಗ ಹೇಗೆ "ಹೂವಿಲ್ಲ- ಚಿಗುರಿಲ್ಲ - ಹಸಿರೆಲೆಗಳಿಲ್ಲ" ಎಂದು ವರ್ಣಿಸುತ್ತಿತ್ತು. ಆ ಹಾಡನ್ನು ಸ್ವಲ್ಪ ಶೋಕರಸಪೂರ್ಣವಾದ ಶುಭಪಂತುವರಾಳಿ ರಾಗದಲ್ಲಿ ನಿಯೋಜಿಸಿದ್ದರಿಂದ ಹೇಮಂತದ ಬಗ್ಗೆ ಯಾವುದೇ ಒಳ್ಳೆಯ ಕಲ್ಪನೆ ನನ್ನಲ್ಲಿ ಮೂಡಿರಲಿಲ್ಲ- ಆರು ಋತುಗಳಲ್ಲಿ ಅದೂ ಒಂದು ಅನ್ನುವುದನ್ನು ಬಿಟ್ಟರೆ. ಎಲೆ ಉದುರದ ದಕ್ಷಿಣ ಕರ್ನಾಟಕದಲ್ಲಿ, ಹೂವಿಲ್ಲ ಚಿಗುರಿಲ್ಲ ಅನ್ನುವುದನ್ನು ಮಾತ್ರ ಗಮನಿಸಿದ್ದೆ.

ಕೆಲ ಕಾಲದ ನಂತರ ಹಿಂದೂಸ್ತಾನಿ ಸಂಗೀತದ ಪರಿಚಯವಾಗುತ್ತ ಅದರಲ್ಲಿರುವ ಹೇಮಂತ್ ರಾಗವನ್ನು ಕೇಳಿದಾಗ - ಅದು ಒಂದು ಉತ್ಸಾಹ ತುಂಬುವ ಭಾವನೆಯ ರಾಗ ಅನ್ನುವುದು ಗೊತ್ತಾಯಿತು. ಮುಂಚೆ ಕೇಳಿದ್ದ ’ಹೇಮಂತ ಋತುರಾಜ’ ಎಂಬ ಹಾಡಿನಲ್ಲಿ ರಾಜ ಎಂದು ಬಂದರೂ ಅದೇಕೋ ಮುದಗೊಳ್ಳದೇ ಇದ್ದ ಮನಸ್ಸು ಹೇಮಂತ್ ರಾಗದ ಸ್ವರಗಳಿಗೂ, ಅದರ ಹುರುಪಿಗೂ ಮನಸೋತಿತು!

ಇಷ್ಟೆಲ್ಲ ಹೇಳಿ, ಹೇಮಂತ ರಾಗವನ್ನು ನಿಮಗೆ ಕೇಳಿಸದಿದ್ದರೆ ಹೇಗೆ? ಕೆಳಗೆ ನೋಡಿ-ಕೇಳಿ - ಶ್ರೀನಿವಾಸ್ ರೆಡ್ಡಿ ಅವರ ಸಿತಾರ್ ವಾದನದಲ್ಲಿ ಹೇಮಂತ್ ರಾಗದ ಆಲಾಪ:ಹಿಂದೂಸ್ತಾನಿ ವಾದ್ಯ ಸಂಗೀತದಲ್ಲಿ ರಾಗಗಳಿಗೆ ಆಲಾಪ್-ಜೋಡ್- ಮತ್ತು ಝಾಲಾ ಎನ್ನುವ ಮೂರು ಹಂತಗಳಿರುತ್ತವೆ. ಆಲಾಪವು ನಿದಾನಗತಿಯಲ್ಲಿದ್ದರೆ, ಜೋಡ್ ದುರಿತಗತಿಯಲ್ಲಿರುತ್ತೆ. ಹೇಮಂತ್ ರಾಗದ ನಿಜವಾದ ಹುರುಪು ನಿಮಗೆ ತ…

ಹೂ ಬಾಣ ಹಿಡಿದವಗೆ ಒಂದು ನಮನ

ಹರಿ ಹರ ಬೊಮ್ಮರನೂ ಚಿಗರೆಗಣ್ಣಿಯರಿಂದ
ಮೂರ್ಕಾಲ ಮನೆಕೆಲಸದಾಳುಗಳಂತಾಗಿಸಿದ
ತೋರದಿಹ ನೋಟದಲಿ ಮಾತಿನಲಿ ನಿಲುಕದಾ ದೇ
-ವರಿಗೆ ನಮಿಪೆ ಹೂ ಬಾಣಗಳ ಹಿಡಿದಿಹಗೆ

ಕೊ.ಕೊ: ಮನ್ಮಥನು ಅರವಿಂದ,ಅಶೋಕ, ನೀಲೋತ್ಪಲ, ಚೂತ, ನವಮಲ್ಲಿಕಾ - ಈ ಐದು ಹೂಗಳ ಬಾಣವನ್ನು ಹಿಡಿದು ವಸಂತ ಋತುವಿನಲ್ಲಿ ಬರುತ್ತಾನೆ ಎನ್ನುವುದು ಒಂದು ಕವಿ ಸಮಯ. ಅಂದಹಾಗೇ ಇವೆಲ್ಲ ನಿಜವಾದ ಹೂಗಳೇ :)

ಸಂಸ್ಕೃತ ಮೂಲ:

ಶಂಭುಃ ಸ್ವಯಂಭು ಹರಯೋ ಹರಿಣೇಕ್ಷಣಾನಾಂ
ಯೇನಾಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ

ಇದು ಭರ್ತೃಹರಿಯ ಶೃಂಗಾರಶತಕದ ಮೊದಲ ಪದ್ಯ.

-ಹಂಸಾನಂದಿ

ಜಾತಕ ಫಲ

ಸುಬ್ರಾಯರು ಮೇಜಿನ ಮೇಲೆ ಕುಳಿತು ಯಾರೋ ಕೇಳಿದ್ದ ಮದುವೆ ಮುಹೂರ್ತ ನೋಡುತ್ತಿದ್ದರು. ಈ ಕೆಲಸಗಳನ್ನೆಲ್ಲ ಅವರು ಬೆಳಗ್ಗೆ ಎಂಟರಿಂದ ಹತ್ತರೊಳಗೆ ಮಾಡಿ ಮುಗಿಸಿ ಆಮೇಲೆ ದೇವಸ್ಥಾನಕ್ಕೆ ಹೋಗುತ್ತಿದ್ದರು. ಅಷ್ಟರಲ್ಲಿ ಕಿಟಕಿಯ ಹೊರಗೆ ಯಾರದೋ ಮಾತು ಕೇಳಿತು. ತಲೆಯೆತ್ತಿ ನೋಡಿದರೆ, ಕಿಟಕಿ ಹೊರಗೆ ಒಂದು ಮಾರು ಆಚೆ ಮೂಲೆಮನೆಯ ನಾಗರಾಜ.

ನಾಗರಾಜನ್ನ ಸುಬ್ರಾಯರು ಹುಟ್ಟಿದಾಗಿಂದ ನೋಡ್ತಾ ಬಂದಿದಾರೆ. ಒಳ್ಳೇ ಹುಡುಗ. ಚೆನ್ನಾಗಿ ಓದಿ ಒಳ್ಳೇ ಕೆಲಸದಲ್ಲಿದಾನೆ. ಯಾವಾಗ್ಲಾದ್ರೂ ಎದುರುಗಡೆ ಸಿಕ್ಕರೆ "ನಮಸ್ಕಾರ ಶಾಸ್ತ್ರಿಗಳೇ" ಅಂತ ಹೇಳೋದು ಮರೆಯೋದಿಲ್ಲ. ಅವರಮ್ಮ ನಾಗಲಕ್ಷ್ಮಿ ಸುಬ್ರಾಯರು ಕೆಲಸ ಮಾಡ್ತಿದ್ದ ಮೈನ್ ಮಿಡಲ್ ಸ್ಕೂಲ್ ನಲ್ಲೇ ಓದಿದ್ದವಳಲ್ಲವೇ! ಅವತ್ತಿಂದ ಗೊತ್ತಿರುವ ಕುಟುಂಬ. ಮೂರು ತಿಂಗಳ ಹಿಂದೆ ಮಗನಿಗೆ ಸಂಬಂಧಗಳು ಬರ್ತಿವೆ. ಯಾವುದಾದರೂ ಕೂಡಿ ಬಂದರೆ ಜಾತಕ ತೋರಿಸೋದಕ್ಕೆ ಬರ್ತೀನಿ ಎಂದು ನಾಗಲಕ್ಷ್ಮಿ ಹೇಳಿದ್ದು ನೆನಪಾಯಿತು ಸುಬ್ರಾಯರಿಗೆ.

ನಾಗರಾಜ ಯಾರ ಜೊತೆಯೋ ಮಾತಾಡ್ತಿದ್ದ ಮೊಬೈಲಲ್ಲಿ. ಅರ್ಧರ್ಧ ಕೇಳಿಸ್ತು ಸುಬ್ರಾಯರಿಗೆ

"ನಮಸ್ಕಾರ. ನಾನು ನಾಗರಾಜ -ಮೊನ್ನೆ ನಾವೆಲ್ಲ ನಿಮ್ಮ ಮನೇಗೆ ಬಂದಿದ್ವಲ್ಲ?"

"..."

ಆ ಕಡೆಯಿಂದ ಏನು ಉತ್ತರ ಬಂತೋ, ಸುಬ್ರಾಯರಿಗೆ ಕೇಳಲಿಲ್ಲ. ಆದ್ರೂ ಕುತೂಹಲದಿಂದ ಗಮನವಿತ್ತರು.

"ನಿಮ್ಮ ಮಗಳು ನನಗೆ ಬಹಳ ಇಷ್ಟವಾಗಿದ್ದಾರೆ. ಅವರಿಗೆ ನಾನು ಹಿಡಿಸಿದೀನಾ?"

&q…