Posts

Showing posts from January, 2008

ಮುಖಸ್ತುತಿ

ಮುಖಸ್ತುತಿಗೆ ಮರುಳಾಗದವರು ಕಡಿಮೆಯೇ. ಮನುಷ್ಯರು, ಪ್ರಾಣಿ ಪಕ್ಷಿಗಳಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇದು ತಕ್ಕುದಾದ ಮಾತು ಎನ್ನುವಂತಹ ಈ ಪದ್ಯವನ್ನು ನೋಡಿ ಇಲ್ಲಿ:

ಮೂತಿಗೆ ಗಿಡಿದರೆ ಓಗರವ
ಹಿತದಲೆ ಅಳವಿಗೆ ಸಿಗುವರೆಲ್ಲ!
ಮೆತ್ತಿದರೆ ಬದಿಗೆ ತುಸುವೇ ಸಜ್ಜಿಗೆ
ಇನಿದನಿಯಲಿ ಮೃದಂಗ ನುಡಿವುದಲ್ಲ!


(ಅನುವಾದ ನನ್ನದು)

ಮೃದಂಗ ವನ್ನು ಶ್ರುತಿಮಾಡಿ ನುಡಿಸುವಾಗ, ರವೆಯನ್ನು ಕಲೆಸಿ ಮಾಡಿದ ಮಿಶ್ರಣವನ್ನು ಒಂದು ಬದಿಗೆ ಮೆತ್ತುತ್ತಾರೆ. ಇದು ಅದರ ನಾದವನ್ನು ಪಳಗಿಸಲು ಸಂಗೀತಗಾರರು ಉಪಯೋಗಿಸುವ ವಿಧಾನ. ಅದನ್ನೇ ನಾನು ಸ್ವಲ್ಪ ಹೆಚ್ಚು ಕಡಿಮೆ ಮಾಡಿ ಸಜ್ಜಿಗೆ ಎಂದಿದ್ದೇನೆ. ಈ ಮಾತಿನಲ್ಲಿ ಹೊಟ್ಟೆಗೆ ಕೊಡುವ ಆಹಾರವನ್ನು ಹೇಳಿದ್ದರೂ, ಮಾತಿನ ಮುಖಸ್ತುತಿಗೂ ಇದು ಖಂಡಿತ ಹೊಂದುತ್ತದೆಂಬ ನಂಬಿಕೆ ನನ್ನದು:).

ಇನ್ನು ಇದರ ಸಂಸ್ಕೃತಮೂಲ ಹೀಗಿದೆ:

ಕಃ ನ ಯಾತಿ ವಶಂ ಲೋಕೇ ಮುಖಂ ಪಿಂಡೇನ ಪೂರಿತಃ
ಮೃದಂಗೋ ಮುಖಲೇಪೇನ ಕರೋತಿ ಮಧುರಂ ಧ್ವನಿಂ

ಮೂಲದಲ್ಲಿರುವ ಒಂದು ಶ್ಲೇಷವನ್ನು ನಾನು ಕನ್ನಡಿಸಲಾರದೇ ಹೋದೆ. ಸಂಸ್ಕೃತದಲ್ಲಿ ಮುಖ ವೆಂದರೆ ಬಾಯಿ ಎಂದೂ, ಮುಖ(=ಮೊಗ) ಎಂದೂ ಎರಡೂ ಅರ್ಥವಿದೆ. ಬಾಯಿಗೆ ಆಹಾರ ತುಂಬುವುದಕ್ಕೂ , ಮೃದಂಗದ ಮುಖ - ಎಂದರೆ ಒಂದು ಬದಿಗೆ ರವೆಯ ಸಜ್ಜಿಗೆಯನ್ನು ಬಳಿಯುವುದಕ್ಕೂ ಮುಖವೆನ್ನುವ ಪದವನ್ನೇ ಬಳಸಲಾಗಿದೆ.

ಮೂತಿ ಎನ್ನುವ ಪದವನ್ನೂ ನಾವು ಕನ್ನಡದಲ್ಲಿ ಬಾಯಿ, ಮುಖ ಎರಡೂ ಅರ್ಥದಲ್ಲಿಯೂ ಬಳಸುವುದಾದರೂ, ಸ್ವಲ್ಪ ಸಂಗೀತದ ಅರಿವಿರುವ ನನಗೆ &…

ತನ್ನಂತೆ ಪರರು

ಅನ್ನವನು ಇಕ್ಕುವುದು ನನ್ನಿಯನು ನುಡಿಯುವುದು
ತನ್ನಂತೆ ಪರರ ಬಗೆದಡೆ ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ!

ಸರ್ವಜ್ಞನ ಈ ವಚನ ಬಹಳ ಜನರಿಗೆ ತಿಳಿದದ್ದೇ. ಆದರೆ ತನ್ನಂತೆ ಪರರು ಎಂದು ಬಗೆಯುವುದರಲ್ಲಿ ಮಾತ್ರ ಸ್ವಲ್ಪ ಹಿಂದೇಟು ಹಾಕುತ್ತೇವಷ್ಟೇ!

ಈ ರೀತಿ ಒಳ್ಳೆಯ ಮಾತುಗಳು ಎಲ್ಲಾ ಭಾಷೆಗಳಲ್ಲಿಯೂ ಬಂದಿರುವಂತಹವೇ. ಹೇಳುವ ಪರಿಯಲ್ಲಿ ತುಸು ವ್ಯತ್ಯಯವಿರಬಹುದಷ್ಟೇ. ಇವತ್ತು ಬೆಳಗ್ಗೆ ಸಂವೇದನೆ ಕಾರ್ಯಕ್ರಮದಲ್ಲಿ (ಉದಯ ಟಿವಿ) ಈಶ್ವರ ದೈತೋಟ ಅವರು ಮತ್ತೂರು ಕೃಷ್ಣಮೂರ್ತಿ ಅವರೊಡನೆ ಮಾತಾಡುತ್ತಿದ್ದರು. ಆಗ ಕೃಷ್ಣಮೂರ್ತಿ ಅವರು ಹೇಳಿದ ಒಂದು ಸುಭಾಷಿತಕ್ಕೂ, ಸರ್ವಜ್ಞನ ವಚನಕ್ಕೂ ಇರುವ ಹೋಲಿಕೆ ಕಂಡು ಬರೆಯೋಣವೆನ್ನಿಸಿತು.

ಅಯಂ ನಿಜ ಪರೋವೇತಿ ಗಣನಾ ಲಘುಚೇತಸಾಂ
ಉದಾರ ಚರಿತಾನಾಂ ತು ವಸುಧೈವ ಕುಟುಂಬಕಂ

अयं निज परोवेति गणना लघु चेतसाम्
उदार चरितानाम् तु वसुधैव कुटुम्बकम्

ಕನ್ನಡದಲ್ಲೇ ಹೇಳುವುದಾದರೆ,

ಇದು ನನದು ಇದು ಅವರದೆಂದೆಣಿಪರು ಕಿರುಬಗೆಯವರು
ಉದಾರ ನಡತೆಯವರಿಗೋ ಜಗವೆಲ್ಲ ತಮದೆ ಪರಿವಾರ


ಸರ್ವಜ್ಞ ತನ್ನಂತೆ ಪರರನ್ನೂ ಬಗೆ ಎಂದರೆ, ಈ ಸಂಸ್ಕೃತ ಶ್ಲೋಕ ಉದಾರ ಮನೋಭಾವದವರಿಗೆ ಇಡೀ ಪ್ರಪಂಚವೇ ಸ್ವಂತ ಕುಟುಂಬದಂತೆ ಎನ್ನುತ್ತದೆ. ದೇಶ ಯಾವುದಾದರೇನು? ಭಾಷೆ ಯಾವುದಾದರೇನು? ಒಳ್ಳೇ ಮಾತು ಎಲ್ಲಿಂದ ಬಂದರೇನು? ನಲ್ನುಡಿಗಳಿಗೆ ಕಿವಿಗೊಡೋಣ ಅಲ್ಲವೇ?

-ಹಂಸಾನಂದಿ

ಎರಡು ಬಗೆಯ ಜನರು!!

ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು.
ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತ ಕರ್ತೃ ಬಣ್ಣಿಸುತ್ತಾನೆ.

ಕಲಿಕೆ ತಗಾದೆಗೆ ಹಣವು ಗರುವಕ್ಕೆ ಕೆಡುಕನ ಶಕುತಿಯೋ ಕಂಡವರ ಕಾಡಲು
ಸಾಧುಗಳಿಗೋ ಅದು ತಿರುವುಮುರುವು - ಅರಿವಿಗೂ,ಕೊಡುಗೆಗೂ ಮತ್ತೆ ಕಾಪಿಡಲೂ

ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು ಪೀಡಿಸುವುದಕ್ಕೆ ದಾರಿ ಎಂದುಕೊಳ್ಳುತ್ತಾರೆ. ಒಳ್ಳೆಯ ಸ್ವಭಾವವಿದ್ದವರೋ, ಅದನ್ನು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವುದಕ್ಕೂ, ಬೇರೆಯವರಿಗೆ ಅಗತ್ಯ ಬಿದ್ದಾಗ ಧನಸಹಾಯ ಮಾಡಲೂ, ತಮ್ಮ ಶಕ್ತಿಯನ್ನು ಇತರರನ್ನು ಕಾಪಾಡಲೂ ಉಪಯೋಗಿಸುತ್ತಾರೆ! ಎಷ್ಟು ಸೊಗಸಾಗಿ ಹೇಳಿದ್ದಾನಲ್ಲವೆ ಸುಭಾಷಿತಕಾರ?

ಇದರ ಸಂಸ್ಕೃತ ಮೂಲ ಹೀಗಿದೆ:

ವಿದ್ಯಾ ವಿವಾದಾಯ ಧನಂ ಮದಾಯ ಖಲಸ್ಯ ಶಕ್ತಿಃ ಪರಪೀಡನಾಯ
ಸಾಧೋಸ್ತು ಸರ್ವಂ ವಿಪರೀತಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ

-ಹಂಸಾನಂದಿ

ಮೂರು ಬಗೆಯ ಜನರು

ಎಡರುಗಳಿಗೆ ಹೆದರಿ ತೊಡಗರು ಬೀಡಾಡಿಗಳು
ನಡುನಡುವೆ ತಡೆಬರಲು ಬಿಡುವರು ನಾಡಾಡಿಗಳು
ಎಡಬಿಡದೆ ಬರುವೆಡರುತೊಡರುಗಳ ಹೊಡೆತದಲೂ
ಹಿಡಿದುದನು ಕೈ ಬಿಡದೆ ಮುಗಿಸುವವರಗ್ಗಳರು

(ಬೀಡಾಡಿ: ನೀಚ ; ನಾಡಾಡಿ : ಸಾಮಾನ್ಯ ; ಅಗ್ಗಳ : ಶ್ರೇಷ್ಟ)*

ಮೂಲ ಸಂಸ್ಕೃತ ಸುಭಾಷಿತ:

ಪ್ರಾರಭ್ಯತೇ ನ ಖಲು ವಿಘ್ನ ಭಯೇನ ನೀಚೈ:
ಪ್ರಾರಭ್ಯ ವಿಘ್ನ ವಿಹತಾ ವಿರಮಂತಿ ಮಧ್ಯಾಃ
ವಿಘ್ನೈಃ ಪುನಃಪುನರಪಿ ಪ್ರತಿಹನ್ಯಮಾನಾ:
ಪ್ರಾರಬ್ದಮುತ್ತಮ ಜನಾಃ ನ ಪರಿತ್ಯಜಂತಿ

-ಹಂಸಾನಂದಿ

*: ವೆಂಕಟಸುಬ್ಬಯ್ಯನವರ ನಿಘಂಟುವಿನ ನೆರವು ಪಡೆದೆನೆಂದು ತಿಳಿಸಲು ನನಗೆ ಹಿಂಜರಿಕೆಯೇನಿಲ್ಲ :)

ಏನ್ ಗುರು ಮತ್ತು ದಿಲ್ಲಿಯ ರಾಜ್ಯಭಾರ

ಇತ್ತೀಚಿನ ದಿನ್ಗಳಲ್ಲಿ ’ಏನ್ ಗುರು, ಕಾಫಿ ಆಯ್ತಾ’ ಕನ್ನಡದ ಮನ್ನಣೆ ಪಡೆದ ಬ್ಲಾಗ್ ಆಗಿ ಹೊರಹೊಮ್ಮಿರುವುದು ಬ್ಲಾಗ್ ಗಳ ಓದುಗ್ರಿಗೆಲ್ಲವೂ ತಿಳಿದ ವಿಷಯವೇ. ಹೇಳೋ ವಿಷ್ಯಾನ ’ಚಪ್ಪಲಿನ ಮಲ್ಲಿಗೆ ಹೂವಲ್ಲಿ ಸುತ್ತಿ’ ಹೊಡೆಯೋ ಬದಲು, ನೇರವಾಗಿ ಮನ ಮುಟ್ಟೋ ಹಾಗೆ ಹೇಳ್ತಿರೋದು ಬನವಾಸಿ ಬಳಗದವ್ರ ಹೆಗ್ಗಳಿಕೆ. ದಿಲ್ಲಿಯ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಸಿಗ್ಬೇಕಾದ್ದು ಹೇಗೆ ಸಿಗ್ತಿಲ್ಲ ಅನ್ನೋದ್ನ ಮನವರಿಕೆ ಮಾಡೋದಕ್ಕೆ ಒಳ್ಳೇ ಪ್ರಯತ್ನ್ಸ್ ಮಾಡ್ತಿದಾರೆ ಇವರು. ನಾನಂತೂ, ಅಲ್ಲಿಯ ಬರಹಗಳನ್ನ ತಪ್ಪದೇ ಓದ್ತಿದೀನಿ.

ಇದೇನಪ್ಪ ವಟವಟ ಅಂತ ಬೇರೆ ಬ್ಲಾಗ್ ಬಗ್ಗೆ ಜಾಹೀರಾತು ಕೊಡಕ್ಕೆ ಶುರು ಮಾಡ್ಬಿಟ್ಯಲ್ಲ ಅನ್ಬೇಡಿ. ಅಷ್ಟಕ್ಕೂ, ನನ್ಗೂ ಬನವಾಸಿ ಬಳಗಕ್ಕೂ ಯಾವ ಸಂಬಂಧವೂ ಇಲ್ಲ. ಮತ್ತೆ, ಅಲ್ಲಿ ಬರಹ ಯಾರ್ಯಾರು ಬರೀತಾರೆ ಅಂತ್ಲೂ ನಂಗೆ ಗೊತ್ತಿಲ್ಲ. ಮತ್ಯಾಕೆ ಅವರ ವಿಷ್ಯ ಮಾತಾಡ್ತಿದೀನಿ ಅಂತೀರಾ? ಇವತ್ತು ಎಲ್ಲೋ ಏನ್ನೋ ಓದ್ತಿದ್ದಾಗ ಒಂದು ಸಂಸ್ಕೃತ ಸುಭಾಷಿತ ಕಣ್ಗೆ ಬಿತ್ತು. ಅದು ಯಾರು, ಯಾವಾಗ ಬರ್ದಿದ್ದು ಅಂತ ನನ್ಗೆ ಸುತರಾಂ ಗೊತ್ತಿಲ್ಲ. ಆದ್ರೆ, ಅದು ಓದ್ದಾಗ, ದೇವ್ರೆ, (ಕಮ್ಮಿ ಅಂದ್ರೆ) ನೂರಾರು ವರ್ಷಗಳಿಂದ ಇದೇ ಸ್ಥಿತಿ ಇದ್ಯಲ್ಲಪ್ಪ? ಯಾವಾಗ ಸರೀ ಹೋಗತ್ತೇ? ಅನ್ನಿಸ್ತು. ಅದಕ್ಕೇ ಏನ್ಗುರು ಮಾಡ್ತಿರೋ ಕೆಲ್ಸನ ಹೊಗಳ್ದೆ ಅಷ್ಟೆ.

ಆ ಸುಭಾಷಿತ ಹೀಗಿದೆ ನೋಡಿ.

ದಿಲ್ಲೀಶ್ವರಃ ವಾ ಜಗದೀಶ್ವರಃ ವಾ ಮನೋರಥಾನ್ ಪೂರಯಿತುಂ ಸಮರ್ಥಃ |

ಅನ್…

ಇಳಿದ ಜ್ವರ

ಅರಿವಿರಲು ಮೊನೆಯಷ್ಟು ಕುರುಡಾಗಿದ್ದೆ ಸೊಕ್ಕಿದಾನೆಯೊಲು

ಗರುವದಲಿ ಮನವಿತ್ತು ಎಲ್ಲನರಿತವವ ನಾನೆಂದು !

ಅರಿತವರ ಒಡನಾಟ ತರಲು ತುಸು ತುಸು ತಿಳಿವು,

ಮರುವ ನಾನೆಂದರಿತೆ; ಇಳಿಯಿತು ಸೊಕ್ಕಿನ ಜ್ವರವು.

(ಭರ್ತೃಹರಿಯ ಸುಭಾಷಿತವೊಂದರ ಭಾವಾನುವಾದ)ಇದರ ಮೂಲ ಹೀಗಿದೆ:

ಯದಾ ಕಿಂಚಿದ್ ಜ್ಞೋಹಂ ಗಜ ಇವ ಮದಾಂಧಃ ಸಮಭವಮ್

ತದಾ ಸರ್ವಜ್ಞೋಸ್ಮಿತ್ಯಭವಲಿಪ್ತಮ್ ಮಮ ಮನಃ

ಯದಾ ಕಿಂಚಿದ್ಕಿಂಚಿತ್ ಬುಧಜನ ಸಂಕಾಶಾದವಗತಂ

ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ

-ಹಂಸಾನಂದಿ

ಟಾಪ್ ಟೆನ್!

ಅವಧಿ (http://avadhi.wordpress.com) ಬ್ಲಾಗ್ ನಿರ್ವಾಹಕರು ಅವರ ಓದುಗರೆಲ್ಲರಿಗೆ ನಿಮ್ಮ ಟಾಪ್ ಟೆನ್ ಪುಸ್ತಕ ಪಟ್ಟಿ ಹೇಳಿ ಎಂದಿದ್ದರು ಕೆಲವು ದಿನಗಳ ಹಿಂದೆ. ಪಟ್ಟಿ ಹೇಳುವುದು ಕಷ್ಟವೇ ಆದರೂ, ಆಗ ನೆನಪಾದವನ್ನು ಅವರಿಗೆ ಬರೆದು ಕಳಿಸಿದ್ದೆ. ಅದನ್ನೆ ಇಲ್ಲಿ ಮತ್ತೆ ಬರೆದಿದ್ದೇನೆ.

ಇದರಲ್ಲಿ ಕೆಲವು ಪುಸ್ತಕಗಳನ್ನು ಓದಿ ವರ್ಷಗಳೇಕೆ, ದಶಕಗಳೇ ಕಳೆದಿವೆ. ಆದರೂ ಅವನ್ನು ಓದಿದಾಗ ಆಗಿದ್ದ ಭಾವದ ನೆನಪಿನಲ್ಲಿ ಬರೆಯುತ್ತಿದ್ದೇನೆ.

೧. ಪರ್ವ - ಎಸ್.ಎಲ್.ಭೈರಪ್ಪ
೨. ಚೆನ್ನಬಸವನಾಯಕ - ಶ್ರೀನಿವಾಸ
೩. ವೈಶಾಖ - ಚದುರಂಗ
೪.ಶಾಂತಲಾ - ಕೆ.ವಿ.ಐಯ್ಯರ್
೫.ವಂಶವೃಕ್ಷ - ಎಸ್.ಎಲ್.ಭೈರಪ್ಪ
೬.ಪುರುಷೋತ್ತಮ - ಯಶವಂತ ಚಿತ್ತಾಲ
೭.ದುರ್ಗಾಸ್ತಮಾನ- ತ.ರಾ.ಸು
೮. ಹಸಿರು ಹೊನ್ನು - ಬಿ.ಜಿ.ಎಲ್.ಸ್ವಾಮಿ
೯.ಮುಳುಗಡೆ - ನಾ.ಡಿ’ಸೋಜ
೧೦.ನಿರಂತರ - ಕೆ.ಟಿ.ಗಟ್ಟಿ

ಇವು ಅಲ್ಲದೇ, ಇನ್ನೂ ಕೆಲವು ಈ ಪಟ್ಟಿಯಲ್ಲಿ ಇರಬೇಕಾಗಿತ್ತು ಎನ್ನಿಸುತ್ತಿದೆ - ಆದರೆ, ಅವುಗಳನ್ನು ಪೂರ್ತಿ ಓದಿಲ್ಲವಾಗಿ, (ಅಥವಾ ಅವು ಕಥೆಗಳ, ಹರಟೆಗಳ ಸಂಗ್ರಹಗಳಾಗಿರುವುದರಿಂದ, ಒಟ್ಟಿಗೇ ಒಂದೇಸಲ ಕೂತು ಓದದ ಕಾರಣ) ಇಲ್ಲಿ ಸೇರಿಸದೇ ಹೋದೆ (ಉದಾ: ಮಾಸ್ತಿ ಅವರ ಕತೆಗಳು, ಮಂಕುತಿಮ್ಮನ ಕಗ್ಗ, ಅಶ್ವತ್ಥರ ಕತೆಗಳು, ಮೂರ್ತಿರಾಯರ ಹರಟೆಗಳು, ಟಿ.ಕೆ. ರಾಮರಾಯರ ಪತ್ತೇದಾರಿ ನೀಳ್ಗತೆಗಳು ಇತ್ಯಾದಿ).

-ಹಂಸಾನಂದಿ

ಸಂಗೀತ ರಾಜ್ಯಕ್ಕೆ ಹೀಗೊಬ್ಬ ರಾಜ!

ಇಂದು ಜನವರಿ ಆರು. ಸರಿಯಾಗಿ ನೂರೈವತ್ತೊಂಬತ್ತು ವರ್ಷದ ಹಿಂದೆ, ನಾವು ಒಬ್ಬ ರಾಜನನ್ನು ಕಳೆದುಕೊಂಡೆವು. ಅಥವಾ ನಿಜ ಹೇಳಬೇಕೆಂದರೆ, ಅವತ್ತಿನಿಂದ ಆತ ಚಿರಂಜೀವಿಯಾಗಿಹೋದರು. ಈ ರಾಜ ಯಾವ ಯುದ್ಧವನ್ನೂ ಮಾಡಿ ಜಯಿಸಿಲಿಲ್ಲ. ಯಾವ ರಾಜ್ಯಕ್ಕೂ ರಾಜನಾಗಲಿಲ್ಲ. ಎಲ್ಲವನ್ನೂ ’ತ್ಯಾಗ’ ಮಾಡಿದರೂ, ಸಂಗೀತ ಪ್ರಪಂಚಕ್ಕೇ ರಾಜರಾಗಿ ಮೆರೆದರು.

ಹೌದು. ತ್ಯಾಗರಾಜರ ದೇಹಾಂತ್ಯ ಆದದ್ದು ೧೮೪೭ರ ಜನವರಿ ಆರರಂದು. ಆ ದಿನ ಪುಷ್ಯ ಬಹುಳ ಪಂಚಮಿ. ಪುರಂದರ ದಾಸರನ್ನು ಮನಸಲ್ಲೇ ಗುರುವಾಗಿ ನಿಲಿಸಿಕೊಂಡ ತ್ಯಾಗರಾಜರು ದಾಸರ ಆರಾಧನೆಯ ತಿಂಗಳಾದ ಪುಷ್ಯ ಮಾಸದಲ್ಲೇ ದೇಹತ್ಯಾಗ ಮಾಡಿದ್ದು ಕಾಕತಾಳೀಯವಿರಬಹುದು. ಆದರೆ, ಪುರಂದರ ದಾಸರ ರಚನೆಗಳಿಗೂ, ತ್ಯಾಗರಾಜರ ರಚನೆಗಳಲ್ಲೂ ಇರುವ ಹೋಲಿಕೆ ಕಾಕತಾಳೀಯವೇ? ಅಥವಾ, ದಾಸರ ಸಾಹಿತ್ಯ ತ್ಯಾಗರಾಜರ ಮೇಲೆ ಮಾಡಿದ ಪ್ರಭಾವದ ಪರಿಣಾಮವೇ? ಅಥವಾ ಮಹಾತ್ಮರ ಮನಗಳು ಒಂದೇ ತೆರದಲ್ಲಿ ಯೋಚಿಸುವುವೇ?ಈ ಪ್ರಶ್ನೆಗೆ ನನ್ನಲ್ಲಿ ಖಚಿತ ಉತ್ತರವಿಲ್ಲ. ಆದರೆ, ಪ್ರಹ್ಲಾದ ಭಕ್ತಿ ವಿಜಯದ ಮಂಗಳಶ್ಲೋಕದಲ್ಲಿ ತ್ಯಾಗರಾಜರು ಪುರಂದರ ದಾಸರನ್ನು ನೆನೆದಿರುವುದೂ, ಮತ್ತು ಹಲವಾರು ತ್ಯಾಗರಾಜರ ರಚನೆಗಳು ಪುರಂದರ ದಾಸರ ರಚನೆಗಳನ್ನು ಹೋಲುವುದೂ ನಿಜವಾದ ಸಂಗತಿ.ಉದಾಹರಣೆಗೆ ಹೇಳುವುದಾದರೆ, ಪುರಂದರದಾಸರು "ಸಕಲಗ್ರಹಬಲನೀನೆ ಸರಸಿಜಾಕ್ಷ” ಎಂದರೆ, ತ್ಯಾಗರಾಜರು "ಗ್ರಹಬಲಮೇಮಿ? ರಾಮಾನುಗ್ರಹಮೇ ಬಲಮು" (ಗ್ರಹಬಲವೇನದು? ರಾಮನ ಅನುಗ್ರಹವೇ ಬಲ…

ಹಳತು-ಹೊಸತು

ಹಳತು ಬೇಕೋ ಹೊಸತು ಬೇಕೋ ಎಂಬ ತಳಮಳ ಯಾರನ್ನೂ ಬಿಟ್ಟಿಲ್ಲ.

ಹೊಸಚಿಗುರು-ಹಳೆಬೇರು ಕೂಡಿದರೆ ಮರಸೊಬಗು ಎಂಬ ಡಿ.ವಿ.ಜಿ ಅವರ ಮಾತನ್ನು ಮರೆಯಬಾರದು. ಅಲ್ಲದೆ, ಹಳತಾದ ಮಾತ್ರಕ್ಕೆ ಹಳಸಿದ್ದು ಎಂತಲೂ, ಹೊಸದಾದ ಮಾತ್ರಕ್ಕೆ ಒಳ್ಳೆಯದು ಎಂಬ ಧೋರಣೆಯೂ ಒಳ್ಳೇದಲ್ಲ.

ಕಾಳಿದಾಸ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಲ್ಲಿ ಹೀಗೆ ಹೇಳುತ್ತಾನೆ:
पुराणमित्येव न साधु सर्वं न चापि काव्यं नवमित्यवद्यम् ।
सन्तः परीक्ष्यान्यतरद् भजन्ते मूढः पर:प्रत्ययनेयबुद्धिः ॥

ಹಳತಾದ ಮಾತ್ರದಲಿ ಸದಾ ಸೊಗಸಲ್ಲ; ಇದು ಹೊಸತು ಎಂದೆನಲು ತಪ್ಪಿಲ್ಲದೇನಿಲ್ಲ
ಕುಳಿತೋದಿ ಒರೆಯಿಡುವರರಿತವರು - ಕಂಡವರ ಮಾತಿನಲೆ ಗಳಹುವರು ಮೂಳರು!

(ಅನುವಾದ ನನ್ನದು)

ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ, ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅವತ್ತಿಗೂ, ಇವತ್ತಿಗೂ, ಯಾವತ್ತಿಗೂ ಎಲ್ಲ ವಿಷಯಕ್ಕೂ ಹೊಂದುವ ನಲ್ನುಡಿಯಲ್ಲವೇ?

-ಹಂಸಾನಂದಿ

ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ!

ನಾನು ಚಿಕ್ಕವನಾಗಿದ್ದಾಗ ನಮ್ಮೂರಿನ ಜಟ್ಕಾ ಗಾಡಿಗಳಲ್ಲಿ, ಅಥವ ಆಟೋ ರಿಕ್ಷಾಗಳಲ್ಲಿ ಈ ರೀತಿ ಸಿನೆಮಾ ಜಾಹೀರಾತು ಕೇಳಿಬರ್ತಿತ್ತು. ಈಗ್ಲೂ ಈ ಪರಿಪಾಠ ಇದ್ಯೋ ಇಲ್ವೋ ಗೊತ್ತಿಲ್ಲ.

ಇವತ್ತು ಮರೆತು ನಿರಾಶನಾಗಬಾರದಂತ ಒಂದು ಘಟನೆ ನಡೆಯೋದರಲ್ಲಿತ್ತು. ಆಕಾಶ್ದಲ್ಲಿ ನಡೆಯೋ ಇದನ್ನ ನೋಡ್ದೇ ಇರೋ ಹಾಗೆ ಮೋಡಗಳು ತುಂಬ್ಕೊಂಬಿಟ್ಟಿವೆ ಇಲ್ಲ್ ಹಾಳಾದ್ದು. ಏನ್ಮಾಡೋದು?

ಇವತ್ತು ಜನವರಿ ಮೂರು. ಆಕಾಶ್ದಲ್ಲಿ ಕ್ವಾಡ್ರಾಂಟಿಡ್ಸ್ ಉಲ್ಕಾವರ್ಷ (Quadrantids meteor shower) ನಡ್ಯೋ ದಿನ. ಹಿಂದೆ ಇದ್ದ ಯಾವ್ದೋ ಕ್ಷುದ್ರ ಗ್ರಹವೋ, ಅಥವಾ ಧೂಮಕೇತೂನೋ ಹೋಗ್ತಾ ಇದ್ದ ದಾರಿಗೆ ಹತ್ತಿರವಾಗಿ ಭೂಮಿ ಪ್ರತಿವರ್ಷ ಜನವರಿ ಒಂದರಿಂದ ಏಳರವರೆಗೆ ಹೋಗಾ ಇರತ್ತೆ. ಆಗ, ಆ ಧೂಮಕೇತು ದಾರಿಲಿ ಬಿಟ್ಟ ಸಣ್ಣಪುಟ್ಟ ಚೂರುಪಾರುಗಳು ನಮ್ಮ ಭೂಮಿ ಸುತ್ತ ಇರೋ ಗಾಳೀಲಿ ಭರ್ರಂತ ಉರ್ದು ಹೋಗತ್ವೆ. ಅದು ಜನವರಿ ಮೂರರ ದಿವಸ ಅತೀ ಜಾಸ್ತಿ- ಅಂದ್ರೆ, ಗಂಟೆಗೆ ಸುಮಾರು ೬೦-೭೦ ಉಲ್ಕೆನಾದ್ರೂ ನೋಡ್ಬೋದಂತೆ. ಸ್ವಲ್ಪ ಕತ್ತಲು ಚೆನ್ನಾಗಿರೋ ಜಾಗಕ್‍ಹೋಗ್ಬೇಕಷ್ಟೆ.

ಈ ಉಲ್ಕೆಗಳು ಆಕಾಶದಲ್ಲಿ ಎಲ್ಲಾದ್ರೂ ಕಾಣಿಸ್ಕೋಬೌದು. ಆದ್ರೆ, ಅವುಗಳ ದಾರೀಲೆ ಹಿಂದಕ್ಕೆ ಹೋದ್ರೆ, ಅವೆಲ್ಲ ಸುಮಾರು ಧ್ರುವನಕ್ಷತ್ರದ ಹತ್ತಿರದಿಂದ ಬರೋ ಹಾಗೆ ತೋರತ್ವೆ. ಅಲ್ಲಿ ಒಂದು ಕ್ವಾಡ್ರನ್ಸ್ ಅನ್ನೋ ರಾಶಿ (constellation) ಇತ್ತು ಹಿಂದೆ. ಅದ್ಕೇ ಇವತ್ತು ಆಗೋ ಉಲ್ಕಾಮಳೆಗೆ ಕ್ವಾಡ್ರಾಂಟಿಡ್ಸ್ ಅಂತ ಹೆಸ್ರಿಟ್…