Posts

Showing posts from December, 2008

ಹೊಸ ವರ್ಷದ ಮುನ್ನಾದಿನ ಒಂದಷ್ಟು ಪುಡಿ ನೆನಪುಗಳು

ಮತ್ತೊಂದು ವರ್ಷ ಕಳೆದು ಹೋಯ್ತು. ಸಾಧಿಸಿದ್ದೇನಾದ್ರೂ ಉಂಟೇ ಅಂದ್ರೆ ಉತ್ತರಕ್ಕೆ ತಡಕಾಡಬೇಕು. ಅದಿರಲಿ, ಎಲ್ಲಾದನ್ನೂ ನಾವು ಯಾವುದಾದರೂ ಸಾಧನೆಗಾಗಿ ಅಂತಲೇ ಯಾಕೆ ಮಾಡ್ಬೇಕು? ನಾಕು ಜನರಿಗೆ ತೊಂದ್ರೆ ಆಗದ್‍ಹಾಗೆ ನಡ್ಕೊಂಡು, ಆಗೋದಾದ್ರೆ ಒಂದೋ ಎರಡೋ ಒಳ್ಳೇ ಕೆಲಸ ಮಾಡಿ, ಕಷ್ಟದಲ್ಲಿದ್ದೋರಿಗೆ ಅಯ್ಯೋ ಪಾಪ ಅಂದು ಕೈಲಾದ ಸಹಾಯ ಮಾಡಿದ್ರೆ ಸಾಕಲ್ಲಪ್ಪ? ಎತ್ತೆತ್ತರದ ಗುರಿಗಳನ್ನ ಇಟ್ಟುಕೊಂಡಿರುವವರಿಗೆ ಅದು ಸಾಕು ಅನ್ನಿಸದಿರಬಹುದು. ಆದರೆ ನನ್ನ ಮಟ್ಟಿಗೆ ಅದು ಸಾಕು. ಯಾಕಂದ್ರೆ, ಬಸವಣ್ಣೋರು ಹೇಳಿರೋದು ಕೇಳಿದ್ದೀವಲ್ಲ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ.

ಹಾಗಿದ್ದ ಮೇಲೆ, ನಮ್ಮ ನಮ್ಮ ತನು-ಮನಕ್ಕೆ ಹಿತವಾಗೋ ಕೆಲಸ ನಾವು ಮಾಡ್ಕೊಂಡು ಹೋಗ್ತಾ ಇದ್ರೆ ಸಾಕು. ಈ ವರ್ಷ ಅಂತಾ ಒಂದು ಕೆಲಸದಲ್ಲಿ ಕೈಯಿಟ್ಟ ನೆಮ್ಮದಿ ನನಗಿದೆ. ಹಿಂದೆ ಯಾವಾಗಲೋ ಒಂದು ಪೇಪರ್ ಬರೆಯೋವಾಗ ದಾಸಸಾಹಿತ್ಯ ಅಂತರ್ಜಾಲದಲ್ಲಿ ಸಿಗೋ ಹಾಗೆ ಮಾಡ್ಬೇಕು ಅನ್ನೋದು ನನ್ನ ಕನಸು ಅಂತ ಬರೆದಿದ್ದರ ನೆನಪಿದೆ. ಆದರೆ ಆ ಗಳಿಗೆಯಲ್ಲಿ ನನಗೆ ಅದಕ್ಕೆ ಯಾವರೀತಿ ತಾಂತ್ರಿಕ ಪರಿಣತಿ ಬೇಕಾಗುತ್ತೆ ಅನ್ನೋದೂ ಕೂಡ ಗೊತ್ತಿರಲಿಲ್ಲ. ಆದರೆ ಆ ಪರಿಣತಿ ನನ್ನಲ್ಲಿಲ್ಲದಿದ್ದರೂ, ಒಂದಲ್ಲ ಒಂದು ದಿವಸ ಕನಸು ನನಸು ಮಾಡಬೇಕು ಅನ್ನೋ ಆಸೆಯಂತೂ ಇತ್ತು.

ಸಂಪದದ ಹರಿಪ್ರಸಾದ ನಾಡಿಗರ ಸಹಯೋಗದಿಂದ ಹರಿದಾಸ ಸಂಪದ ಈ ವರ್ಷ ಹುಟ್ಟಿ, …

ವರ್ಷವನ್ನು ಬೀಳ್ಕೊಡುತ್ತಾ ಒಂದು ಗ್ರಹಕೂಟ

೨೦೦೮ ವರ್ಷದ ಕಡೆಯ ದಿನ ಆಕಾಶದಲ್ಲೊಂದು ಗ್ರಹಕೂಟ ಕಾಣುತ್ತಿದೆ.

ಸಾಮಾನ್ಯವಾಗಿ ಬರಿಗಣ್ಣಿಂದ ನೋಡಲು ಕಷ್ಟವಾದ ಬುಧ ಮತ್ತು ಗುರು ಸಂಜೆಯ ಆಕಾಶದಲ್ಲಿ ಬಹಳ ಹತ್ತಿರ ಬಂದಿದ್ದಾರೆ.

ಸಂಜೆ ಸೂರ್ಯ ಮುಳುಗಿದ ಕೂಡಲೆ, ಪಶ್ಚಿಮ ದಿಗಂತ ಕಾಣುವಂತಹ ಎಡೆಯಲ್ಲಿ ನಿಂತು ನೀವಿದನ್ನು ನೋಡಬಹುದು. ಆಕಾಶ ನೋಡಲು ನೂಕುನುಗ್ಗಲೇ? ಇಲ್ಲ. ಆದರೆ, ಸೂರ್ಯ ಮುಳುಗಿ ಸುಮಾರು ಒಂದು ಗಂಟೆಯೊಳಗೆ ಈ ಗ್ರಹಗಳೂ ಮುಳುಗಿಬಿಡುವುದರಿಂದ ನೀವು ಓಡಬೇಕಾಗಬಹುದು, ದಿಗಂತ ಕಾಣುವ ಕಡೆಗೆ!

ಹೆಚ್ಚಿನ ಮಾಹಿತಿಗೆ ಇಲ್ಲಿ ಚಿಟಕಿಸಿ.

-ಹಂಸಾನಂದಿ

ವಿದ್ಯೆ

ತಾಯಂತೆ ಸಲಹುವುದು ತಂದೆಯೊಲು ನಡೆಸುವುದು
ಬೇಸರದಿ ಮನವ ನಲಿಸುವುದು ಇನಿಯೆಯೊಲು
ಸಿರಿಯ ತರಿಸುವುದು ಹೆಸರ ಮೆರೆಸುವುದು
ಏನೇನ ಮಾಡದದು ಕಲಿಕೆಯ ಕಲ್ಪತರುವು!

ಸಂಸ್ಕೃತ ಮೂಲ:

ಮಾತೇವ ರಕ್ಷತಿ ಪಿತೇವ ಹಿತೇ ನಿಯುಂಕ್ತೇ
ಕಾಂತೇವ ಚಾಭಿರಮಯಂತ್ಯಪನೀಯ ಖೇದಮ್ |
ಲಕ್ಷ್ಮೀಂ ತನೋತಿ ವಿತನೋತಿ ಚ ದಿಕ್ಷು: ಕೀರ್ತಿಮ್
ಕಿಮ್ ಕಿಮ್ ನ ಸಾಧಯತಿ ಕಲ್ಪ ಲತೇವ ವಿದ್ಯಾ|| ೨||

-ಹಂಸಾನಂದಿ

ದಾರಿ ಯಾವುದಯ್ಯಾ ವೈಕುಂಠಕೆ?

ನನ್ನ ಕೇಳಿದ್ರೆ ’ದಾರಿಯಾವುದಯ್ಯಾ, ವೈಕುಂಠಕೆ ದಾರಿತೋರಿಸಯ್ಯ’ ಅಂತ ಕೇಳ್ಬೇಕಾಗೇ ಇಲ್ಲ. ಯಾಕಂತಂದ್ರೆ, ಸಂಸ್ಕೃತದಲ್ಲೊಂದು ಮಾತೇ ಇದೆಯಲ್ಲ?
आकाशात् पतितम् तोयम् यथा गच्छति सागरम् ।
सर्वदेव नमस्कारः केशवम् प्रति गच्छति ॥

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಮ್ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

ಹಾಗಂದ್ರೆ, ಎಲ್ಲಾದಾರಿಗಳೂ ಹೋಗೋದು ವೈಕುಂಠಕ್ಕೇನೇ. ಅಥ್ವಾ, ನಿಮಗೆ ಬೇಕಾದ್ರೆ ಎಲ್ಲಾದಾರಿಗಳೂ ಹೋಗೋದು ಕೈಲಾಸಕ್ಕೆ ಅಂತ ಇಟ್ಕೊಳ್ಳಿ. ತಪ್ಪೇನಿಲ್ಲ. ಅಥವಾ, ಬರೀ ಶಿವ ವಿಷ್ಣು ವಿಷಯ ಯಾಕೆ ಅನ್ನೋದಾದ್ರೆ ’ಎಲ್ಲಾ ದಾರಿಗಳೂ ಸ್ವರ್ಗಕ್ಕೇ ಹೋಗೋದು’ ಅಂತ ಹೇಳ್ಬಿಡಬಹುದು. ಯಾರಿಗೂ ಬೇಜಾರಾಗೋದಿಲ್ಲ. ಆದ್ರೆ ಈಗ ಡಿಸೆಂಬರ್ ತಿಂಗ್ಳಲ್ವಾ, ಅದಕ್ಕೇ ಇದನ್ನ ಸ್ವಲ್ಪ ಬದ್ಲಾಯ್ಸಿ ಹೇಳೋದು ಒಳ್ಳೇದು ಅನ್ಸತ್ತೆ. ’ಎಲ್ಲಾ ದಾರಿಗಳೂ ಹೋಗೋದು ಮೈಲಾಪುರಕ್ಕೆ’ ಅಂದ್ಬಿಡೋಣ. ಹೌದು. ಮೈಲಾಪುರ. ಅಂದ್ರೆ ಸ್ವರ್ಗ. ಸಂಗೀತ ಸ್ವರ್ಗ.

ಗೊತ್ತಾಯ್ತಲ್ಲ? ತಿಂಗಳು ಡಿಸೆಂಬರ್ ಆದ್ರೆ, ನೀವು ಹೋಗ್ಬೇಕಾದ್ದು ಮದರಾಸಿಗೆ. ಮದ್ರಾಸಿಗೆ ಹೋದರೆ, ನೀವು ಅಲ್ಲಿ ತೆರಳಬೇಕಾದ್ದು ಮೈಲಾಪುರಕ್ಕೆ. ಕರ್ನಾಟಕ ಸಂಗೀತ ರಸಿಕರಿಗೆಲ್ಲ ಮೈಲಾಪುರ ಅಂದ್ರೆ, ಡಿಸೆಂಬರ್ ತಿಂಗಳಿನ ಕಾಶಿ ಅಂತಲೇ ಅರ್ಥ. ನೀವು ಸಂಗೀತಪ್ರೇಮಿಯಾಗಿದ್ದು ಈ ತಿಂಗಳು ಅಲ್ಲಿಗೆ ಹೋದ್ರೆ, ಕಾಶೀಯಾತ್ರೆಗಿಂತ ಹೆಚ್ಚು ಫಲ ನಿಮಗೆ ದಕ್ಕುತ್ತೆ ನೋಡಿ.

ಚೆನ್ನೈ, ಸೆನ್ನೈ, ಚೆನ್ನಪಟ್…

ಗ್ರಹಭೇದ

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ! ಮೊನ್ನೆ ಚಿಕ್ಕ ಮಕ್ಕಳಿಗೆ ಒಂದು ವಿಷಯ ಹೇಳಿಕೊಡೋ ಅವಕಾಶ ಬಂದಿತ್ತು. ನನಗೆ ಪ್ರೀತಿಯಾದ ವಿಷಯ. ಹಾಗಾಗಿ, ಹೇಳಿಕೊಡೋದೇನೂ ಕಷ್ಟ ಅನಿಸಲಿಲ್ಲ. ಮಕ್ಕಳೂ ಒಳ್ಳೇ ಚೆನ್ನಾಗಿ ಪಾಲುಗೊಂಡರು. ಅದನ್ನೇ ಹಂಚಿಕೊಳ್ಳೋಣ ಅಂತ ಇಲ್ಲಿ ಹಾಕುತ್ತಿರುವೆ.

ಗ್ರಹಭೇದ: ಒಂದು ಕೈಪಿಡಿ

-ಹಂಸಾನಂದಿ

ನೀರು ಹರಿಯುವುದು ಕಡಲಿನ ಕಡೆಗೆ

ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!


ಸಂಸ್ಕೃತ ಮೂಲ:

ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||

(* ಮೂಲದ ಕೇಶವ ಅನ್ನುವ ಪದವನ್ನು ಕನ್ನಡದಲ್ಲಿ ಹರಿ ಎಂದು ಬದಲಾಯಿಸಿದ್ದೇನೆ. ಹರಿ, ಮತ್ತು ಕಡೆ ಎರಡೂ ಪದಗಳಲ್ಲಿ ಶ್ಲೇಷೆ ಮಾಡುವಾಸೆಯಿಂದ)

-ಹಂಸಾನಂದಿ

ಬಾಯ್ಬಿಟ್ಟು ನುಡಿಯಬೇಕೆ?

ಮಿಗಗಳೂ ತಿಳಿದಾವು ಬಾಯ್ಬಿಟ್ಟು ನುಡಿವುದನು
ಆನೆ ಕುದುರೆಗಳೂ ತೋರಿದುದ ಮಾಡುವುವು!
ಜನರವರು ಪಂಡಿತರು ಹೇಳದುದ ಎಣಿಸು*ವರು
ಪರರ ಮನವರಿಯುವುದದುವೆ ಚದುರತನಕೆ ಗೆಲುವು

*ಎಣಿಸು= ಊಹೆ ಮಾಡು, ತರ್ಕಿಸು

ಸಂಸ್ಕೃತ ಮೂಲ (ಹಿತೋಪದೇಶದ ಸುಹೃದ್ಭೇದ ದಿಂದ):

ಉದೀರಿತೋSರ್ಥಃ ಪಶುನಾಪಿ ಗೃಹ್ಯತೇ
ಹಯಾಶ್ಚ ನಾಗಾಶ್ಚ ವಹಂತಿ ದೇಶಿತಾಃ
ಅನುಕ್ತಮಪ್ಯೂಹತಿ ಪಂಡಿತೋ ಜನಃ
ಪರೇಂಗಿತ ಜ್ಞಾನಫಲಾ ಹಿ ಬುದ್ಧಯಃ

-ಹಂಸಾನಂದಿ

ತಂತಾನೇ ಅರಳುವ ಹಿರಿಮೆ

ಹಿರಿಮೆಯಿರಲು ಮನುಜರಲಿ
ಅರಳುವುವು ಅವು ತಂತಾನೇ.
ಪರಿಮಳ ಸೂಸಲು ಕತ್ತುರಿಗೆ
ಹೇರಬೇಕೇನು ಒತ್ತಾಯ?

ಸಂಸ್ಕೃತ ಮೂಲ:

ಯದಿ ಸಂತಿ ಗುಣಾಃ ಪುಂಸಾಂ ವಿಕಸಂತ್ಯೇವ ತೇ ಸ್ವಯಂ
ನ ಹಿ ಕಸ್ತೂರಿಕಾಮೋದಃ ಶಪಥೇನ ವಿಭಾವ್ಯತೇ

-ಹಂಸಾನಂದಿ

ದಿಟವಾದ ಒಲವು

ದಿಟವಾಗಿರುವ ಒಲವೆಂಬುದು
ದೂರವಿದ್ದರು ಕಂಗೆಡದು
ಆಗಸದಿ ಹೊಳೆವ ಚಂದಿರನು
ಚಕೋರಕೆ ತಂಪೆರೆವನು

*ಚಕೋರ ಪಕ್ಷಿಯು ಚಂದ್ರನ ಬೆಳಕಿಗೆ ಕಾಯುತ್ತಿರುತ್ತೆ ಅನ್ನುವುದು ಕವಿಸಮಯ - ಬಸವಣ್ಣನವರ ’ಚಕೋರಂಗೆ ಚಂದ್ರಮನ ಬೆಳಕಿನ ಚಿಂತೆ’ ಎನ್ನುವ ವಚನವನ್ನು ನೆನಪಿಸಿಕೊಳ್ಳಿ.

ಸಂಸ್ಕೃತ ಮೂಲ:

ಅಹೋ ಸಾಹಜಿಕಂ ಪ್ರೇಮ ದೂರಾದಪಿ ವಿರಾಜತೇ |
ಚಕೋರ ನಯನದ್ವಂದ್ವಮಾಹ್ಲಾದಯತಿ ಚಂದ್ರಮಾಃ ||

-ಹಂಸಾನಂದಿ

ಮೆರುಗುವುದು ಹೇಗೆ?

ಹೆಚ್ಚಿನ ಬೆಲೆಯ ಮಾಣಿಕಕೂ
ಹೊನ್ನಿನಾಸರೆಯು ಬಲು ಸೊಗಸು
ಹೆಣ್ಣು ಹಂಬುಗಳು ಪಂಡಿತರು
ಒಳ್ಳೆ ಆಸರೆಯಲಿ ಮೆರುಗುವರುಸಂಸ್ಕೃತ ಮೂಲ: ( ಸುಭಾಷಿತ ರತ್ನ ಭಾಂಡಾಗಾರದಿಂದ)

ಅನರ್ಘ್ಯಮಪಿ ಮಾಣಿಕ್ಯಂ ಹೇಮಾಶ್ರಯಮಪೇಕ್ಷತೇ|
ಅನಾಶ್ರಯಾ ನ ಶೋಭಂತೇ ಪಂಡಿತಾ ವನಿತಾ ಲತಾಃ ||

ಕೊಸರು: ಇದು ಸುಭಾಷಿತಕಾರನ ಅಭಿಪ್ರಾಯವೇ ಹೊರತು ನನ್ನ ಅಭಿಪ್ರಾಯ ಎಂದು ಎಣಿಸುವ ಅಗತ್ಯವಿಲ್ಲ

ಕೊನೆಯ ಕೊಸರು: ಇದೇ ಸುಭಾಷಿತಕ್ಕೆ "ಅನಾಶ್ರಯಾ ನ ಶೋಭಂತೇ ಕವಿತಾ ವನಿತಾ ಲತಾಃ" ಎನ್ನುವ ಪಾಠಾಂತರವೂ ಇದೆ ಎಂದು ಕಾಣುತ್ತದೆ.

-ಹಂಸಾನಂದಿ

ಮರೆಯಲಾರದ ಸಣ್ಣ ಕಥೆಗಳು - ೪

Image
ಹಿಂದೆ ಕೆಲವು ಮರೆಯಲಾರದ ಸಣ್ಣ ಕಥೆಗಳ ವಿಷಯ ಬರೆದಿದ್ದೆ. ಇವತ್ತು ನನಗೆ ಹೊಳೆದ ಕಥೆ ಸಂಜಯ ಹಾವನೂರರ ’ಲಿಫ್ಟ್’.ಇದು ನಾನು ಮುಂಚೆ ಹೇಳಿದ ಹಳೆಯ ಕಥೆಗಳಷ್ಟಂತೂ ಹಳೆಯದಲ್ಲ. ೧೯೮೩-೮೪ರಲ್ಲೋ ಏನೋ ಇದು ಮಯೂರದಲ್ಲಿ ಪ್ರಕಟವಾಗಿತ್ತು. ನಂತರ ಭಾರತೀಯ ಭಾಷೆಗಳಲ್ಲಿ ಬಂದಿರುವ ವೈಜ್ಞಾನಿಕ ಹಿನ್ನಲೆಯ (science fiction) ಕಥೆಗಳನ್ನೆಲ್ಲ ಒಟ್ಟುಗೂಡಿಸಿರುವ ಕಥಾಸಂಕಲನವೊಂದರಲ್ಲಿ ಈ ಕಥೆಯ ಇಂಗ್ಲಿಷ್ ಗೆ "The Lift" ಎಂಬ ಹೆಸರಲ್ಲೇ ಅನುವಾದವಾಗಿದೆಯೆಂದು ಎಲ್ಲೋ ಓದಿದ ನೆನಪು.ಕೀಮತಿಲಾಲ್ ದಲಾಲ್ ರಸ್ತೆಯ ಶೇರುಪೇಟೆಯ ಒಬ್ಬ ದಳ್ಳಾಳಿ. ಶೇರುಗಳ ಜೊತೆ ಜೂಜಾಡುವುದೊಂದೇ ಅಲ್ಲ, ಕುದುರೆ ಜೂಜಿನಲ್ಲಿಯೂ ಅವನಿಗೆ ಆಸಕ್ತಿ. ಒಂದು ದಿನ ತನ್ನ ದಕ್ಷಿಣ ಮುಂಬಯಿಯ ಬಹುಮಹಡಿ ಕಟ್ಟದವೊಂದರಲ್ಲಿರುವ ತನ್ನ ಕಚೇರಿಗೆ ಹೋದಾಗ ಲಿಫ್ಹ್ಟಿನಿಂದ ಹೊರ ಬಿದ್ದಾಗ, ಅವನು ಹೊರ ಬರುವಾಗ, ಒಳಗೆ ಯಾರೂ ಇಲ್ಲವೇ ಇಲ್ಲ ಎನ್ನುವ ರೀತಿ ಹೊರಗಿದ್ದ ಜನರೆಲ್ಲ ಅವನ ಮೇಲೇ ಬೀಳುವಂತೆ ಒಳಬರುವುದನ್ನು ಗಮನಿಸುತ್ತಾನೆ. ಏಕೆ ಯಾರಿಗೂ ತಾನು ಕಾಣುತ್ತಲೇ ಇಲ್ಲವ ಎಂದು ಬೈದುಕೊಂಡು ಹೋದ ಅವನಿಗೆ ಇನ್ನೊಂದೆರಡು ಜನರನ್ನು ನೋಡಿದ ಮೇಲೆ, ತಾನು ಯಾರಿಗೂ ಕಾಣದಂತೆ ಆಗಿಹೋಗಿದ್ದಾನೆ ಎಂದು ತಿಳಿಯುತ್ತೆ. ಹಾಗೇ ಅವನಿಗೆ ಕಾಣುತ್ತಿರುವ ನೋಟ, ಜನ ಎಲ್ಲರೂ ಮೂರು ದಿನ ಮೊದಲಿನವು ಎನ್ನುವುದೂ ಅವನಿಗೆ ಅರಿವಾಗುತ್ತೆ. ಚುರುಕು ಬುದ್ಧಿಯ ಕೀಮತಿ ಲಾಲ್, ಈ ಬದಲಾವಣೆ ಲಿಫ್ಟ್ ನ ಒಳಗಿ…

ಚೆಲುವು ಇರುವುದೆಲ್ಲಿ?

ಎಲ್ಲಿಹುದು ಸಾಜದಲಿ
ಚೆಲುವಾದ್ದು ಅಲ್ಲದುದು?
ಒಲುಮೆ ಎಲ್ಲಿಹುದದುವೆ
ಚೆಲುವೆಂದು ತೋರುವುದು! ಮೂಲ ಸಂಸ್ಕೃತ ಶ್ಲೋಕ (ಹಿತೋಪದೇಶದ ಸುಹೃದ್ಭೇದದಿಂದ): ಕಿಮಪ್ಯಸ್ತಿ ಸ್ವಭಾವೇನ ಕಿಂ ಸುಂದರಮಸುಂದರಮ್
ಯದೇವ ರೋಚತೇ ಯಸ್ಮೈ ತದ್ಭವೇತ್ತಸ್ಯ ಸುಂದರಮ್ -ಹಂಸಾನಂದಿ