Posts

Showing posts from 2009

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು. ಅದರಲ್ಲಿ ಶಿವಮೊಗ್ಗ ಸುಬ್ಬಣ್ಣ, ಸುಲೋಚನಾ, ಮತ್ತೆ ಅಶ್ವಥ್ ಹಾಡಿದ್ದ ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳಿದ್ದವು. ಆ ಹಾಡುಗಳನ್ನು ನಂತರ ಕಡಿಮೆ ಎಂದರೆ ನೂರಾರು ಸಲವಾದರೂ ಕೇಳಿದ್ದಿರಬೇಕು ಅನ್ನಿಸುತ್ತೆ. ಅದರ ನಂತರ, ಅವರ ರಾಗ ಸಂಯೋಜನೆಯಲ್ಲಿದ್ದ ’ಬಾರೋ ವಸಂತ’, ’ಮೈಸೂರ ಮಲ್ಲಿಗೆ’ ಯ ಭಾವಗೀತೆಗಳು ಮತ್ತೆ ಶಿಶುನಾಳ ಷರೀಫರ ಹಲವಾರು ರಚನೆಗಳು ನನಗೆ ಮೆಚ್ಚಾದವು.

ಹೆಚ್ಚಿನ ಗಾಯಕರ ಕಂಠಕ್ಕಿಂತ ಬೇರೆಯದಾಗಿದ್ದ ಅಶ್ವಥ್ ಧ್ವನಿ ಮನಸೆಳೆದ್ದಿದ್ದಂತೂ ಸುಳ್ಳಲ್ಲ. ಎಲ್ಲ ಹಾಡುಗಳಿಗೂ ಅಂತಹ ಹೊಂದದ ಧ್ವನಿ ಅವರದು. ನಿಜ ಹೇಳಬೇಕೆಂದರೆ, ಅವರು ಹಾಡುವುದಕ್ಕಿಂತ, ಬೇರೆ ಕಲಾವಿದರ ಕಂಠವನ್ನು ಬಳಸಿ, ಅವರು ರಾಗ ಸಂಯೋಜಿಸಿರುವ ಹಾಡುಗಳೇ ನನಗೆ ಹೆಚ್ಚು ಹಿಡಿಸುತ್ತಿದ್ದವು.

ನನಗೆ ಬಹಳ ಹಿಡಿಸಿದ, ಈ ಕ್ಷಣದಲ್ಲಿ ಮನಸ್ಸಿಗೆ ಬಂದ, ಕೆಲವು ಹಾಡುಗಳನ್ನಷ್ಟೇ ಪಟ್ಟಿ ಮಾಡುತ್ತಿರುವೆ.

೧. ನೇಸರ ನೋಡು ನೇಸರ ನೋಡು (ಕಾಕನಕೋಟೆ ಚಿತ್ರದ್ದು)
೨. ಹಾವು ತುಳಿದೇನೆ ಮಾನಿನಿ ಹಾವು ತುಳಿದೇನೆ
೩. ಸ್ನೇಹ ಮಾಡಬೇಕಿಂಥವಳ
೪. ಎಂಥಾ ಮರುಳಯ್ಯ ಇದು ಎಂಥ ಮರುಳು (ಸ್ಪಂದನ ಚಿತ್ರದ್ದು)
೫. ಅಳಬೇಡ ತಂಗಿ ಅಳಬೇಡ
೬. ಮದುವೆಯಾಗಿ ತಿಂಗಳಿಲ್ಲ
೭. ಈ…

ಯೋಗಿಗಳಿಗೂ ನಿಲುಕದ್ದು

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;
ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ!
ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ
ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಮೌನಾನ್ಮೂಕಃ ಪ್ರವಚನಪಟುರ್ವಾಚಕೋ ಜಲ್ಪಕೋ ವಾ
ಕ್ಷಾಂತ್ಯಾ ಭೀರುರ್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಧೃಷ್ಟಃ ಪಾರ್ಶ್ವೇ ವಸತಿ ನಿಯತ ದೂರತಶ್ಚಾಪ್ರಗಲ್ಭಃ
ಸೇವಾಧರ್ಮಃ ಪರಮ ಗಹನೋ ಯೋಗಿನಾಮಪ್ಯಗಮ್ಯಃ

-ಹಂಸಾನಂದಿ

ಕತ್ತೆಗೊಂದು ಕಿವಿಮಾತು

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?
ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು.
"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.
ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಇರುವರು ಸುಮ್ಮನೆ

ಸಂಸ್ಕೃತ ಮೂಲ:

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪೃಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ

-ಹಂಸಾನಂದಿ

ಕೊಸರು: ಇತ್ತೀಚೆಗೆ ಕರ್ನಾಟಕ ಸರ್ಕಾರ ’ವಿಕಿಪೀಡಿಯಾ’ ಮಾದರಿಯ ’ಕಣಜ’ (http //kanaja.in/) ಅನ್ನುವ ಜಾಲತಾಣವನ್ನು ಅನಾವರಣೆಗೊಳಿಸಿದ್ದಕ್ಕೂ, ಈ ಪದ್ಯವನ್ನು ನಾನು ಅನುವಾದ ಮಾಡಿದ್ದಕ್ಕೂ ಯಾವುದೇ ನಂಟಿಲ್ಲ ಅನ್ನುವುದನ್ನು ತಿಳಿಯಪಡಿಸಬಯಸುವೆ ;)

ತಿಳಿಗೇಡಿಗಳ ಗುರುತು

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಮತ್ತೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

-ಹಂಸಾನಂದಿ

ಐದು ವರ್ಷಗಳ ’ಯುಗ’

ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.

ರಾಮ ತ್ರೇತಾಯುಗದಲ್ಲಿದ್ದನಂತೆ. ಕೃಷ್ಣ ದ್ವಾಪರಯುಗದಲ್ಲಿದ್ದನಂತೆ. ಒಂದೊಂದು ಯುಗಕ್ಕೂ ಎಷ್ಟೋ ಸಾವಿರಾರು ವರ್ಷಗಳು ಅಂತ ಲೆಕ್ಕಾಚಾರವೇ ಇದೆ. ಅದೆಲ್ಲಾ ಹೇಳಿ ತಲೆ ಕೊರೆಯೋದಿಲ್ಲ ಈಗ. ಆದ್ರೆ, ಯಾವಾಗಲೂ ’ಯುಗ’ ಅನ್ನೋ ಮಾತಿಗೆ ಈ ತಿಳಿವು ಇರಲಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸೋಕೆ ಒಂದು ನಾಕು ಸಾಲು ಬರೆಯುವೆ ಅಷ್ಟೇ.

ವೇದಗಳಲ್ಲಿ ಇರುವ ಜ್ಯೋತಿಷಕ್ಕೆ (astronomy) - ಅಂದರೆ ಆಕಾಶಕಾಯಗಳ, ಮತ್ತೆ ಅವು ಹುಟ್ಟುವ ಮುಳುಗುವ ಸಮಯಗಳನ್ನು ಕಂಡುಹಿಡಿಯುವ ಲೆಕ್ಕಾಚಾರಗಳ ತಿಳುವಳಿಕೆ ಅಂತಲೇ ಅರ್ಥ. "ನಿಮಗೆ ಶನಿಕಾಟ ಇದೆ, ರಾಹು ಕ್ರೂರ ದೃಷ್ಟಿ ಇದೆ" ಅನ್ನೋ ತರಹದ ಫಲಜ್ಯೋತಿಷ (astrology) ಅಲ್ಲ. ಈ ಜ್ಯೋತಿಷಕ್ಕೆ ನಮಗೆ ಸಿಗೋ ಒಳ್ಳೇ ಆಕರ ಅಂದರೆ ಲಾಗಧನ ವೇದಾಂಗ ಜ್ಯೋತಿಷ. ಭಾರತದಲ್ಲಿ ಜ್ಯೋತಿಷ್ಶಾಸ್ತ್ರದ ಬಗ್ಗೆ ದೊರಕಿರುವ ಅತೀ ಹಳೇ ಹೊತ್ತಿಗೆ. ಈ ಪುಸ್ತಕದಲ್ಲಿ ಇರುವ ಅಂತರಿಕ ಆಧಾರಗಳಿಂದ ಈ ಪುಸ್ತಕವನ್ನ ಬರೆದಿರೋದು ( ಬರೀತಿದ್ರೋ ಇಲ್ವೋ, ಆಗ ಬರವಣಿಗೆ ಇತ್ತೇ, ಲಿಪಿ ಇತ್ತೇ, ಇವೆಲ್ಲ ಜಿಜ್ಞಾಸೆ ಈಗ ಬೇಡ - ಆದರೆ ಒಟ್ಟುಗೂಡಿಸಿರೋದು (compilation) ಅಂತಲಾದ್ರೂ ಹೇಳಬಹುದು - ಸುಮಾರು ಕ್ರಿ.ಪೂ.೧೪೦೦ ರಲ್ಲಿ; ಅಂದರೆ ಹ…

ಕುರುಡರ ಕೈ ಹಿಡಿದವರು

ಸ್ವಂತದ ತಿಳಿವೇ ಇರದ ಕಡುಮರುಳರು
ತಾವೇ ’ದಿಟ್ಟರು-ಅರಿತವರು’ ಎಂಬುವ
ಭ್ರಮೆಯಲೇ ನಡೆಸಲೆಳಸುವರು ಪರರ
ಕುರುಡರ ಮುನ್ನಡೆಸುವ ಕುರುಡನೊಲು!

ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)

ಅವಿದ್ಯಾಮಂತರೇ ವರ್ತಮಾನಾಃ
ಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ |
ದಂದ್ರಮ್ಯಮಾಣಾಃ ಪರಿಯಂತಿ ಮೂಢಾ
ಅಂಧೇನೈವ ನೀಯಮಾನಾ ಯಥಾಂಧಾಃ ||

(ಈ ಶ್ಲೋಕವನ್ನು ಮೊನ್ನೆ ತಾನೇ ನೋಡಿದೆ. ಅದರಲ್ಲಿ ಒಂದು ಪದಕ್ಕೆ ಎರಡು ಪಾಠಾಂತರವಿರುವುದೂ ಕಂಡುಬಂತು. ಅನುವಾದವನ್ನು ಮಾಡುವಲ್ಲಿ ಬೇರೆ ಬೇರೆ ಇಂಗ್ಲಿಷ್ ಅನುವಾದಗಳ ಸಹಾಯ ತೆಗೆದುಕೊಂಡಿರುವೆ. ಜೈ ಗೂಗಲೇಶ್ವರ!)

-ಹಂಸಾನಂದಿ

ಶ್ರೀಕಾಂತ ಕೃತಿ ಸೌರಭ

ಹೋದ ತಿಂಗಳು 'ಶ್ರೀಕಾಂತ ಕೃತಿ ಸೌರಭ' ದ ಬಿಡುಗಡೆಯ ಸುದ್ದಿ ನೋಡಿದಾಗಿನಿಂದಲೂ ಈ ಸಿಡಿ ಗಳಲ್ಲಿ ಇರುವ ರಚನೆಗಳನ್ನು ಕೇಳಲು ನಾನು ಕುತೂಹಲಿಯಾಗೇ ಇದ್ದೆ. ಈ ಮೊದಲೇ ಶ್ರೀಕಾಂತ್ ಅವರ ಹಲವು ರಚನೆಗಳನ್ನು ಕೇಳಿದ್ದರಿಂದ ಈ ಕಾಯುವಿಕೆ ಸಹಜವೂ ಆಗಿತ್ತು.
ಮೊನ್ನೆ ಮೊನ್ನೆ ಈ ಜೋಡಿ ಸಿಡಿಗಳು ಬಂದ ಮೇಲೆ ನಾಕಾರು ಬಾರಿ ಕೇಳಿದ್ದೂ ಆದಮೇಲೆ ಕೆಲವು ಅನಿಸಿಕೆಗಳನ್ನು ಬರೆಯಹೊರಟೆ.

ಈ ಜೋಡಿ ಸಿಡಿಗಳಲ್ಲಿ ಕನ್ನಡ, ಸಂಸ್ಕೃತ ಮತ್ತು ಸಂಕೇತಿ ನುಡಿಗಳಲ್ಲಿ ರಚಿತವಾದ ರಚನೆಗಳನ್ನು ಪ್ರಸ್ತುತಪಡಿಸಲಾಗಿದೆ. ಸಂಕೇತಿ ಮಾತಾಡುವರಲ್ಲಿ ಹಲವಾರು ಪ್ರಸಿದ್ಧ ಸಂಗೀತಗಾರರಿದ್ದರೂ, ಸಂಕೇತಿ ನುಡಿಯಲ್ಲಿ ಮೊದಮೊದಲು ಈ ರೀತಿ ಸಂಗೀತರಚನೆಗಳನ್ನು ಮಾಡಿರುವುದರಲ್ಲಿ ಮೊದಲಾಗಿರುವುದಕ್ಕೆ ಶ್ರೀಕಾಂತ್ ಮೂರ್ತಿ ಅವರನ್ನು ಅಭಿನಂದಿಸುವೆ. ಮೊದಲನೇ ಸಿಡಿಯಲ್ಲಿ ವಿದುಷಿ ಟಿ.ಎಸ್.ಸತ್ಯವತಿ ಮತ್ತು ಅವರ ಶಿಷ್ಯರು ಹಾಡಿರುವ ಒಂಬತ್ತು ರಚನೆಗಳಿದ್ದು, ಎರಡನೇ ಸಿಡಿ ಯಲ್ಲಿ ವಿದುಷಿ ಸುಕನ್ಯಾ ಪ್ರಭಾಕರ್ ಅವರು ಹಾಡಿರುವ ಐದು ರಚನೆಗಳಿವೆ.

ಕರ್ನಾಟಕ ಸಂಗೀತದಲ್ಲಿ ಇರುವ ಹಲವಾರು ಬಗೆಯ ರಚನೆಗಳಾದ ವರ್ಣ, ಕೃತಿ, ಪದ - ಇವೆಲ್ಲ ಪ್ರಕಾರಗಳೂ ಇಲ್ಲಿವೆ. ಜನಪ್ರಿಯ ರಾಗಗಳಾದ ಕಾಂಬೋಧಿ, ಮಧ್ಯಮಾವತಿ, ಆನಂದ ಭೈರವಿ, ಸುರಟಿ, ಗೌಳ ಮೊದಲಾದ ರಾಗಗಳಲ್ಲೂ, ಹಾಗೇ ಸಂಗೀತ ರಸಿಕರಿಗೆ ಸ್ವಲ್ಪ ಅಪರಿಚಿತವೇ ಎನ್ನಬಹುದಾದ ಗೌರೀವೇಳಾವಳಿ, ಜಯಶುದ್ಧಮಾಳವಿ, ಕೋಕಿಲಾರವ ಮೊದಲಾದ ಅಸಂಪೂರ್ಣ ಮೇಳರಾಗಗಳ…

ಕೂಡಿಡುವ ಮೊದಲು..

ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!


ಸಂಸ್ಕೃತ ಮೂಲ:

ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||

-ಹಂಸಾನಂದಿ

ನಿಜವ ನುಡಿವುದು ಹೇಗೆ?

ದಿಟವ ನುಡಿಯುತಿರು ಹಿತವ ನುಡಿಯುತಿರು
ಹಿತವಿರದ ನಿಜ ನುಡಿಯೆ ಹಿಂಜರಿಯುತಿರು
ಹಿತವೆಂದು ಹುಸಿಯನೆಂದು ನೀ ನುಡಿಯದಿರು
ಹಳೆಯ ಮಾತಿದು ಕೇಳು ಇದನು ಮರೆಯದಿರು

ಸಂಸ್ಕೃತ ಮೂಲ:

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ ||.

ತಲೆಯ ಮೇಲಿಟ್ಟ ಹೊರೆ

ಎಳವೆಯಲುಣಿಸಿದ ತುಸು ನೀರಿನಾಸರೆಯನೇ ನೆನೆದು
ತಲೆಮೇಲೆ ಹೊರೆಯನಿಟ್ಟು ಕೊನೆಯವರೆಗೂ ತೆಂಗು
ಮರಳಿಸುವುದು ಮನುಜರಿಗೆ ಅಮೃತದೆಳನೀರನ್ನು;
ಮರೆಯರು ಸುಗುಣಿಗಳೆಂದೂ ನೆರವು ನೀಡಿದವರನು!

ಸಂಸ್ಕೃತ ಮೂಲ:

ಪ್ರಥಮವಯಸಿ ಪೀತಂ ತೋಯಮಲ್ಪಮ್ ಸ್ಮರಂತಂ
ಶಿರಸಿ ನಿಹಿತ ಭಾರಃ ನಾರಿಕೇಳಂ ನರಾಣಾಂ |
ಉದಕಮಮೃತಕಲ್ಪಂ ದದ್ಯುಃ ಆಜೀವನಾಂತಂ
ನಹಿಕೃತಮುಪಕಾರಂ ಸಾಧವೋ ವಿಸ್ಮರಂತಿ ||

-ಹಂಸಾನಂದಿ

ಬಾಯಿ ಸುಟ್ಟವರ ಕಥೆ

ಕೇಡಿಗರ ಕಿರುಕುಳದಿ ನೊಂದವರು
ಒಳಿತ ಬಯಸುವರನೂ ನಂಬರು;
ಬಿಸಿ ಹಾಲಿನಲಿ ಬಾಯಿ ಸುಟ್ಟವರು
ಮಜ್ಜಿಗೆಯ ’ಉಫ್’ ಎನಿಸಿ ಕುಡಿವರು!

ಸಂಸ್ಕೃತ ಮೂಲ:

ದುರ್ಜನ ದೂಷಿತಮನಸಾಂ ಪುಂಸಾಂ ಸುಜನೇSಪಿ ನಾಸ್ತಿ ವಿಶ್ವಾಸಃ
ದುಗ್ಧೇನ ಧಗ್ದವದನಸ್ತಕ್ರಂ ಫೂಕೃತ್ಯ ಪಾಮರಃ ಪಿಬತಿ

-ಹಂಸಾನಂದಿ

ಹುಡುಕಾಟ

ಮನವು ತಿಳಿಯಾಗಿರಲು ಬುವಿಯೆಲ್ಲ ಸೊಗಸೇ;
ಮನ ನೋಯುತಿರಲು ಬುವಿ ಬರಿಯ ನೋವೇ.
ಸಂತಸದ ಆಸೆಯಲಿ ಎಲ್ಲೆಲ್ಲೋ ಅರಸದೆ
ಮನದಲೇ ನೆಮ್ಮದಿಯ ಮೊದಲು ನೀ ಗಳಿಸು


ಸಂಸ್ಕೃತ ಮೂಲ:

ಚಿತ್ತೇ ಪ್ರಸನ್ನೇ ಭುವನಂ ಪ್ರಸನ್ನಂ
ಚಿತ್ತೇ ವಿಷಣ್ಣೇ ಭುವನಂ ವಿಷಣ್ಣಂ
ಅತೋಭಿಲಾಷೋ ಯದಿ ತೇ ಸುಖೇ ಸ್ಯಾತ್
ಚಿತ್ತಪ್ರಸಾದೇ ಪ್ರಥಮಂ ಯತಸ್ವ

ಗಳಿಸುವ ರೀತಿ

ಜಾಣರು ಮುಪ್ಪು ಸಾವಿಲ್ಲದವರ ತೆರದಿ
ಹಣವನ್ನೂ ಅರಿವನ್ನೂ ಗಳಿಸುತಿರಬೇಕು;
ಮುಂದಲೆಯನೇ ಯಮನು ಹಿಡಿದೆಳೆದಿರುವಂತೆ
ಒಳ್ಳೆಯ ಕೆಲಸಗಳನೇ ಮಾಡುತಿರಬೇಕು!


ಸಂಸ್ಕೃತ ಮೂಲ:

ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||

-ಹಂಸಾನಂದಿ

ಹರಡುವ ಕಂಪು

ಅಸು ನೀಗುವಾಗಲೂ ಮರೆಯದೇ ಮನುಜರು
ಎಸಗುತಿರಬೇಕು ಪರರಿಗೆ ಒಳಿತನ್ನು;
ಹೊತ್ತಿ ಉರಿವಾಗಲೂ ಚಂದನದ ಮರವು
ಹತ್ತು ದಿಸೆಯಲು ಹರಡುವುದು ಕಂಪನ್ನು!


ಸಂಸ್ಕೃತ ಮೂಲ:

ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂ
ದಿಶಃ ಸುಗಂಧಯತ್ಯೇವ ವಹ್ನೌ ಕ್ಷಿಪ್ತೋಪಿ ಚಂದನಃ

ದುಡ್ಡಿದ್ದವನೇ ದೊಡ್ಡಪ್ಪ

ಅರಿವೂ ಮನೆತನವೂ ತರಲಾರವು ಹಿರಿಮೆ
ಎಂದಿಗೂ ಹಣವುಳ್ಳವರಲೇ ಜನರ ಒಲುಮೆ;
ಶಿವನು ತಲೆಯ ಮೇಲೆ ಹೊತ್ತಾಡಿದರೇನು?
ಗಂಗೆ ಸೇರುವುದು ರತ್ನಾಕರ*ನಲ್ಲವೇನು?


ಸಂಸ್ಕೃತ ಮೂಲ:

ನ ವಿದ್ಯಯಾ ನೈವ ಕುಲೇನ ಗೌರವಂ
ಜನಾನುರಾಗೋ ಧನಿಕೇಷು ಸರ್ವದಾ |
ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ
ಪ್ರಯಾತಿ ರತ್ನಾಕರಮೇವ ಸರ್ವಾದಾ ||-ಹಂಸಾನಂದಿಕೊ.ಕೊ: ರತ್ನಾಕರ = ಮುತ್ತು ರತ್ನಗಳಿಗೆ ಆಗರವಾದ ಸಾಗರ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ..

ಮಡದಿ ಮನೆಯಲಿ ಇಲ್ಲದಿರೆ
ಮನೆ ಮನೆಯಾಗುವುದುಂಟೇ?
ಮನೆಯೊಡತಿ ಇರದ ಮನೆ
ಕಡು ಕಗ್ಗಾಡಿಗಿಂತಲೂ ಕೇಡೇ!ಸಂಸ್ಕೃತ ಮೂಲ:

ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ |
ಗೃಹಂ ತು ಗೃಹಿಣೀ ಹೀನಂ ಕಾಂತಾರಾದತಿರಿಚ್ಯತೇ||

-ಹಂಸಾನಂದಿ

ದುಷ್ಟರ ಕಂಡರೆ ದೂರವಿರು

ದುಷ್ಟ್ರನ್ನ್ ಕಂಡ್ರೆ ಬಲುದೂರ ಇರ್ಬೇಕು
ಅವರೆಷ್ಟೋದ್-ಬರ್ದು ಮಾಡಿದ್ರೂನೂ!
ಹೆಡೇಲಿ ಬಣ್ಣದ್ ಮಣಿ ಇದ್ಮಾತ್ರಕ್ಕೆ
ಹಾವಿನ್ ಕೆಟ್ಟ್ ವಿಷ ಕಡ್ಮೆಯಾಗತ್ತೇನು?


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ದುರ್ಜನಃ ಪರಿಹರ್ತವ್ಯೋ ವಿದ್ಯಯಾಲಂಕೃತೋSಪಿ ಸನ್‌|
ಮಣಿನಾಭೂಷಿತಃ ಸರ್ಪಃ ಕಿಮಸೌನ ಭಯಂಕರಃ||

-ಹಂಸಾನಂದಿ

ಕೊ.ಕೊ: ಕೆಲವು ಹಾವುಗಳ ಹೆಡೆಯಲ್ಲಿ ಮಣಿಯಿರುತ್ತದೆ ಎಂದೊಂದು ನಂಬಿಕೆ ಇದೆ.

ಒಳಿತನು ತರುವ ನಾಲ್ಕು ಸಂಗತಿಗಳು

ಸಂತಸವೆನುವುದೆ ಸಾಟಿಯಿರದ ಗಳಿಕೆ
ಒಳ್ಳೆಯವರೊಡನಾಟ ಎಣೆಯಿರದ ಹಾದಿ
ತಿಳುವಳಿಕೆ ಹಿರಿದು ವಿಚಾರಿಸಿ ನೋಳ್ಪುದು
ತಳಮಳವಿರದಿದುದೆ ಮಿಗಿಲಾದ ನಲಿವು


ಸಂಸ್ಕೃತ ಮೂಲ:

ಸಂತೋಷಃ ಪರಮೋ ಲಾಭಃ ಸತ್ಸಂಗಃ ಪರಮಾ ಗತಿ:|
ವಿಚಾರಃ ಪರಮಂ ಜ್ಞಾನಂ ಶಮೋ ಹಿ ಪರಮಂ ಸುಖಂ ||

सन्तोषः परमो लाभः सत्सङ्गः परमा गतिः ।
विचारः परमं ज्ञानं शमो हि परमं सुखम् ॥

-ಹಂಸಾನಂದಿ

ಕೊ.ಕೊ: ಈ ಶ್ಲೋಕವನ್ನು ನನ್ನ ಗಮನಕ್ಕೆ ತಂದ ತೊದಲು ಮಾತಿನ ಡಾ.ಕೇಶವಕುಲಕರ್ಣಿಯವರಿಗೆ ನಾನು ಆಭಾರಿ

ಯಾರಿಗೆ ಯಾರ ಜೊತೆ?

ಬಂಗಾರ ರತುನದ ಗಾಜಿನ ಮಣಿಗಳ
ಒಟ್ಟಿಗೆ ಒಂದೇ ಸಾಲಲಿ ತಿಳಿಯದೆ
ಹೆಣ್ಗಳು ಪೋಣಿಸುವುದರಲಿ ಅಚ್ಚರಿಯಿಲ್ಲ;

ಒಂದೇ ಸಾಲಿನಲಿ ಪಂಡಿತ ಪಾಣಿನಿ
ಇಂದ್ರನ ಹಾಗೂ ಹರೆಯದ ಯುವಕರ
ನಾಯಿಕುನ್ನಿಗಳೊಡನೆ ಸೇರಿಸಿಹನಲ್ಲ!ಸಂಸ್ಕೃತ ಮೂಲ:

ಕಾಚಂ ಮಣಿಂ ಕಾಂಚನಮೇಕ ಸೂತ್ರಂ
ಮುಗ್ಧಾ ನಿಬದ್ಧಂತಿ ಅತ್ರ ಕಿಮತ್ರ ಚಿತ್ರಂ
ವಿಚಾರವಾನ್ ಪಾಣಿನಿರೇಕ ಸೂತ್ರೇ
ಶ್ವಾನಂ ಯುವಾನಂ ಮಘವಾನಮಾಹ

-ಹಂಸಾನಂದಿ

ಕೊ: ಸಂಸ್ಕೃತದ ಸೂತ್ರ ಅನ್ನುವುದರ ಶ್ಲೇಷವನ್ನು ಉಳಿಸಿಕೊಳ್ಳಲು ’ಸಾಲು’ ಅನ್ನುವ ಪದ ಬಳಸಿದ್ದೇನೆ.ಸರವನ್ನು ಒಂದು ದಾರದಲ್ಲಿ ಪೋಣಿಸುವಂತೆ, ಒಂದು ಸಾಲಲ್ಲಿ ಪೋಣಿಸುವುದು ನಿಜ ತಾನೇ!

ಕೊ.ಕೊ: ಪಾಣಿನಿಯು ಅವನ ಅಷ್ಟಾಧ್ಯಾಯಿಯಲ್ಲಿ ವ್ಯಾಕರಣದ ನಿಯಮಗಳನ್ನು ಸೂತ್ರ ರೂಪದಲ್ಲಿ ಕೊಟ್ಟಿದ್ದಾನೆ. ಅದರಲ್ಲಿ ೬.೪.೧೩೩ ಸೂತ್ರ ಹೀಗಿದೆ -ಶ್ವ ಯುವ ಮಘೋಣಾಂ ಅತದ್ಧಿತೇ (६. ४. १३३ श्व(न्)युव(न्)मघोणां अतद्धिते ।). ಇದು ಯಾವ ನಿಯಮವನ್ನು ಹೇಳುತ್ತದೆ ಅಂತ ನನಗೆ ಗೊತ್ತಿಲ್ಲವಾದರೂ, ಈ ಮೂರು ಪದಗಳು ಒಂದು ನಿಯಮಕ್ಕೆ ಒಳಗಾಗುತ್ತವೆ ಅಂತಷ್ಟು ಮಾತ್ರ ನಿಖರವಾಗಿ ಹೇಳಬಹುದು.

ತೇಲುವ ಮೋಡಗಳು

ನೀಡುವುದರಲಿ ಇರುವ ಹಿರಿಮೆ
ಗಳಿಸಿ ಕೂಡಿಡುವುದರಲ್ಲಿದೆಯೆ?
ಮಳೆಯನೀವ ಮುಗಿಲೆಂದಿಗು ಮೇಲೇ
ಕೆಳಗಿರುವುದು ಕೂಡಿಡುವ ಕಡಲೇ!

ಸಂಸ್ಕೃತ ಮೂಲ:

ಗೌರವಂ ಪ್ರಾಪ್ಯಯೇ ದಾನಾತ್
ನ ತು ವಿತ್ತಸ್ಯ ಸಂಚಯಾತ್
ಸ್ಥಿತಿರುಚ್ಚೈಃ ಪಯೋದಾನಾಂ
ಪಯೋಧಿನಾಂ ಅಧಃ ಸ್ಥಿತಿಃ

गौरवं प्राप्यते दानात्
न तु वित्तस्य सञ्चयात् ।
स्थितिरुच्चैः पयोदानाम्
पयोधीनां अधः स्थितिः ॥

(ಇವತ್ತು ಸುಭಾಷಿತ ಮಂಜರಿಯಲ್ಲಿ ಓದಿದ್ದಿದು)

-ಹಂಸಾನಂದಿ

ಮಜ್ಜಿಗೆ ಸಿಗದ ದೇವೇಂದ್ರ

ಊಟದ ಕೊನೇಲೇನ್ಕುಡೀಬೇಕು?
ಜಯಂತ ಯಾರಿಗೆ ಮಗ ಗೊತ್ತಾ?
ಹರಿಯ ಆಸರೆ ಎಲ್ಲರಿಗೂ ಸಿಕ್ಕುತ್ತಾ?
ಮಜ್ಜಿಗೆ; ಇಂದ್ರನಿಗೆ ; ಸಿಗೋದಿಲ್ಲ.

ಸಂಸ್ಕೃತ ಮೂಲ:

ಭೋಜನಾಂತೇ ಚ ಕಿಂ ಪೇಯಂ ಜಯಂತಃ ಕಸ್ಯ ವೈ ಸುತಃ |
ಕಥಂ ವಿಷ್ಣು ಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಂ ||

ಕೊಸರು: ಇದೊಂದು ತರಹ ಚಮತ್ಕಾರದ ಪದ್ಯ. ಅರ್ಥವಿರದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸಬೇಕಾದಂಥಹ ಒಗಟು. ’ಮಜ್ಜಿಗೆ ಇಂದ್ರಗೆ ಸಿಗೋದಿಲ್ಲ’ ಅನ್ನುವ ತರಹ ಅರ್ಥವಿರದ ಸಾಲಿಗೆ ಮೂರು ಪ್ರಶ್ನೆ ಸೇರಿಸಿ, ಒಂದೊಂದು ಪದವೂ ಒಂದೊಂದು ಸಾಲಿಗೆ ಉತ್ತರವಾಗುವಂತೆ ಮಾಡುವುದು ಇದರ ಹೆಚ್ಚಾಯ. ಇದೇ ರೀತಿ ಹಲವಾರು ಸಮಸ್ಯಾ ಪದ್ಯಗಳಿವೆ.

ಕೊನೆಯ ಕೊಸರು: ಇದನ್ನೇ ಮಾದರಿಯಾಗಿಟ್ಟುಕೊಂಡೇ ನಾನು ’ಕನ್ನಡ ಬರ್ದೋನು ಕೋಡಂಗಿ’ ಅಂತ ಒಂದು ನನ್ನದೇ ಚುಟುಕ ಬರೆದಿದ್ದೆ ನೋಡಿ.

ಕೊಟ್ಟ ಕೊನೆಯ ಕೊಸರು: ಸಮಸ್ಯಾ ಪದ್ಯಗಳ ಮೇಲೆ ಒಂದೆರಡು ವರ್ಷ ಮೊದಲು ಇಲ್ಲೊಂದಿಷ್ಟು, ಮತ್ತೆ ಇಲ್ಲೊಂದಿಷ್ಟು ಬರೆದಿದ್ದೆ.

-ಹಂಸಾನಂದಿ

ಬೊಂಬೆ ಹಬ್ಬ ೨೦೦೯

ಹಬ್ಬಗಳು ಬರೋದೇ ಚೆನ್ನ! ಆದ ಮೇಲೆ ಆಗೇ ಹೋಯ್ತಲ್ಲ ಅನ್ಸತ್ತಲ್ಲ!

ಈ ವರ್ಷ ನಮ್ಮ ಮನೆಯಲ್ಲಾದ ನವರಾತ್ರಿಯ ಬೊಂಬೆ ಹಬ್ಬದ ಕೆಲವು ನೋಟಗಳು ಇಲ್ಲಿವೆ:


-ಹಂಸಾನಂದಿ

ವಿಷಯ ಇದ್ದಹಾಗೆ ಹೇಳೋದಕ್ಕೇನು ತೊಂದರೆ?

ಈಗ ತಾನೇ ಬಜಾಜ್ ನ ಒಂದು ಕಮರ್ಶಿಯಲ್ ನೋಡಿದೆ. ಟೀವಿಯಲ್ಲಿ ಬರ್ತಿರತ್ತೇನೋ, ನಾನು ನೋಡಿಲ್ಲ ಇಲ್ಲೀ ತನಕ.ಇದನ್ನ ಮಾಡ್ದವರಿಗೆ ದಿಟವಾಗಿ ಮಾತಾಡೋದಕ್ಕೆ ಏನಾಗಿತ್ತು? ಮೊದಲು ಊರಿನ ಹೆಸರೇ ತಪ್ತಪ್ಪಾಗಿ ಹೇಳಿದ್ದಾರೆ. ’ಮಾತುರ್’ ಅಂತೆ! ಮತ್ತೆ ಅಲ್ಲಿ ’ಬರೀ’ ಸಂಸ್ಕೃತ ಮಾತಾಡ್ತಾರೆ ಅಂತ ಹಸೀ ಸುಳ್ಳನ್ನ ಹೇಳ್ತಿದಾರೆ.

ಅಲ್ಲಿ ಸಂಸ್ಕೃತವನ್ನು ಮಾತಾಡೋವ್ರು ಇರೋದೇನೋ ನಿಜವೇ. ಆದರೆ ಅವರು ’ಸಂಸ್ಕೃತವನ್ನೂ’ ಮಾತಾಡಬಲ್ಲರು, ಮಾತಾಡ್ತಾರೆ -ಹೊರತು ’ಸಂಸ್ಕೃತವೊಂದನ್ನೇ’ ಅಲ್ಲ. ಅವೆರಡಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ ಅಲ್ವೇ?

ಬಜಾಜ್ ಬೈಕ್ ಒಂದು ಲೀಟರ್ ನಲ್ಲಿ ಮಂಗಳೂರಿಂದ ಮತ್ತೂರಿಗೆ ಹೋಗಬಹುದೇನೋ ನಿಜ. ಆದರೆ ಅಲ್ಲಿನವರೊಡನೆ ಮಾತಾಡ್ಬೇಕಾದ್ರೆ, ಅವರ ಮಾತನ್ನ ಅರ್ಥ ಮಾಡ್ಕೋಬೇಕಾದ್ರೆ ಸಂಸ್ಕೃತ ತಿಳೀಬೇಕು ಅನ್ನೋ ತರಹ ತೋರಿಸಿರೋದು ಸುಳ್ಳು.

ಅಂದಹಾಗೆ ಮತ್ತೂರು ಶಿವಮೊಗ್ಗದಿಂದ ಸುಮಾರು ಐದಾರು ಕಿಲೋಮೀಟರ್ ದೂರದಲ್ಲಿದೆ

-ಹಂಸಾನಂದಿ

ವೈದ್ಯನ ಅಚ್ಚರಿ

ಮಸಣದಲುರಿವ ಚಿತೆಯ ಕಂಡು
ವೈದ್ಯನಿಗಾಯಿತು ಅಚ್ಚರಿ
ನಾ ಹೋಗಿರಲಿಲ್ಲ ನನ್ನಣ್ಣನೂ* ಅಲ್ಲ
ಯಾರದಿರಬಹುದು ಕೈ ಚಳಕ?


ಸಂಸ್ಕೃತ ಮೂಲ:

ಚಿತಾಂ ಪ್ರಜ್ವಲಿತಂ ದೃಷ್ಟ್ವಾ ವೈದ್ಯೋ ವಿಸ್ಮಯಮಾಗತಃ|
ನಾಹಂ ಗತಃ ನ ಮೇ ಭ್ರಾತಾ ಕಸ್ಯೇದಂ ಹಸ್ತಲಾಘವಂ ||

ಕೊ.ಕೊ: * - ಹಿಂದಿನ ಕಾಲದಲ್ಲಿ ವೈದ್ಯವೃತ್ತಿಯೂ ವಂಶ ಪಾರಂಪರ್ಯವಾಗಿ ಬರುತ್ತಿದ್ದ ಕಾಲದ ಮಾತಿದು :)

-ಹಂಸಾನಂದಿ

ನಾಲ್ಗೇಗ್ ಬೇಕು ಕಡಿವಾಣ

ಉಣ್ಣೋದ್ರಲ್ಲಿ ಮಾತಾಡೋದ್ರಲ್ಲಿ
ಇರ್ಬೇಕು ನಾಲ್ಗೆಗೆ ಕಡಿವಾಣ;
ಊಟ ಮಾತು ವಿಪರೀತ್ವಾದ್ರೆ
ಹೋಗೇ ಬಿಡ್ಬಹುದು ಪ್ರಾಣ!


ಸಂಸ್ಕೃತ ಮೂಲ:

ಜಿಹ್ವೇ ಪ್ರಮಾಣಂ ಜಾನೀಹಿ
ಭಾಷಣೇ ಭೋಜನೇSಪಿ ಚ |
ಅತ್ಯುಕ್ತಿರತಿಭುಕ್ತಿಶ್ಚ
ಸತ್ಯಂ ಪ್ರಾಣಾಪಹಾರಿಣೀ ||

जिह्वे प्रमाणं जानीहि
भाषणे भोजनेऽपि च ।
अत्युक्तिरतिभुक्तिश्च
सत्यं प्राणापहारिणी ॥

(ಸುಭಾಷಿತ ಮಂಜರಿಯಲ್ಲಿ ಇವತ್ತು ಓದಿದ್ದಿದು).

-ಹಂಸಾನಂದಿ

ನವರಾತ್ರಿಯ ಸಮಯದಲ್ಲೊಂದು ಹೊಸ ಜತಿಸ್ವರ

ಇಲ್ಲಿ ಬಂದವರಲ್ಲಿ ಸಂಗೀತದಲ್ಲಿ ಆಸಕ್ತರಾದವರಿಗೆ, ನನ್ನ ಕಂಗ್ಲಿಷ್ ಬ್ಲಾಗಿನಲ್ಲಿರುವ ಈ ಬರಹ ಆಸಕ್ತಿ ಮೂಡಿಸಬಹುದು ಎನ್ನಿಸಿದ್ದರಿಂದ, ಅದಕ್ಕೊಂದು ಕೊಂಡಿ ಹಾಕುತ್ತಿದ್ದೇನೆ.

ನವರಾತ್ರಿಯ ಸಮಯದಲ್ಲೊಂದು ಹೊಸ ಜತಿಸ್ವರ

Get this widget | Track details | eSnips Social DNA

ಈ ಜತಿಸ್ವರವನ್ನು ಕೇಳಲು ಇಲ್ಲಿ ಚಿಟಕಿಸಿ.

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

-ಹಂಸಾನಂದಿ

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಕಾಳ್ಗಿಚ್ಚಿನ ಕೆನ್ನಾಲಗೆಗಳ
ಕುದುರಿಸುವ ಗಾಳಿರಾಯ
ಆರಿಸುವನು ಕಿರುಸೊಡರನ್ನು!
ಕಿರಿಯರಿಗೆಲ್ಲಿಯ ಗೆಳೆತನವು?


ಸಂಸ್ಕೃತ ಮೂಲ:
ವನಾನಿ ದಹತೇ ವಹ್ನೇಃ ಸಖಾ ಭವತಿ ಮಾರುತಃ ||
ಸ ಏವ ದೀಪನಾಶಾಯ ಕೃಶೇ ಕಸ್ಯ ಅಸ್ತಿ ಸೌಹೃದಂ ||

ಕೊ: ಈ ಸುಭಾಷಿತ, ಈ ಮೊದಲೇ ನಾನು ಅನುವಾದಿಸಿದ್ದ ಗೆಳೆತನ ಎಂಬ ಸುಭಾಷಿತದ ಅಚ್ಚು ಅಂದರೂ ತಪ್ಪಿಲ್ಲ!

ಕೊ.ಕೊ: ಈ ಮೊದಲೇ ಇದೇ ತಲೆಬರಹ ಇಟ್ಟು, ಇನ್ನೊಂದು ಅನುವಾದ ಮಾಡಿದ್ದೆ ಅನ್ನೋದು ಈಗ ನೆನಪಿಗೆ ಬಂತು!

-ಹಂಸಾನಂದಿ

ಹೀಗೊಂದು ಪ್ರಶ್ನೋತ್ತರ: ಸುಮ್ಮನೆ, ತಮಾಷೆಗೆ..

ಮೊನ್ನೆ ನಾನು ಓದಿದ ಬರಹವೊಂದು ಇದಕ್ಕೆ ಪ್ರೇರೇಪಣೆ. ಪೂರ್ತಿ ಅರ್ಥವಾಗೋದಕ್ಕೆ, ಕರ್ನಾಟಕ ಸಂಗೀತದ ಸ್ವಲ್ಪ ಪರಿಚಯ ಬೇಕಾಗಬಹುದೇನೋ :)

ಪ್ರಶ್ನೆ: ಅಯ್ಯಂಗಾರ್ ಬೇಕರಿಗಳಲ್ಲಿರೋವ್ರಿಗೆ ಬಹಳ ಇಷ್ಟವಾಗೋ ರಾಗ ಯಾವುದು?
ಉತ್ತರ: ವನಸ್ಪತಿ

ಪ್ರಶ್ನೆ: ಮಹೇಂದರ್ ಹೊಸ ಸಿನೆಮಾ ಮಾಡಿದರೆ, ಅದರಲ್ಲಿ ಹಾಡುಗಳು ಚೆನ್ನಾಗಿರೋಲ್ಲ, ಯಾಕೆ?
ಉತ್ತರ: ಯಾಕಂದ್ರೆ, ಅವರೀಗ ಶ್ರುತಿ ಬಿಟ್ಟು ಹಾಡ್ಬೇಕಾಗತ್ತೆ

ಪ್ರಶ್ನೆ: ಸಂಶೋಧಕ ಚಿದಾನಂದ ಮೂರ್ತಿ ಅವರ ಅಚ್ಚುಮೆಚ್ಚಿನ ರಾಗ ಯಾವ್ದು?
ಉತ್ತರ: ಕನ್ನಡ

ಪ್ರಶ್ನೆ: ಸಂಗೀತಗಾರನ ಹೆಂಡ್ತೀಗೆ ಮಿತಿ ಮೀರಿದ ಕೋಪ ಯಾಕೆ ಬಂತು?
ಉತ್ತರ: ಯಾಕಂದ್ರೆ ಅವನು ಹಾಡಿದ್ದು "ನಿಮಮ ದಪ, ನಿಮಪ ದಪ, ನೀ.. ದಪ" ಅಂತ

ಪ್ರಶ್ನೆ: ಟೆಲಿಸ್ಕೋಪ್ ಇಟ್ಕೊಂಡೋರ್ಗೆ ಇಷ್ಟವಾಗೋ ರಾಗಗಳನ್ನು ಹೆಸರಿಸಿ
ಉತ್ತರ: ಮಂಗಳಕೈಶಿಕಿ, ಬುಧಮನೋಹರಿ, ಗುರುಪ್ರಿಯ ಇತ್ಯಾದಿ....

ಪ್ರಶ್ನೆ: ಪಿ ಟಿ ಉಷಾ ಸ್ಪರ್ಧೆಗಳಲ್ಲಿ ಓಡೋ ಮೊದಲು ಕೇಳ್ತಿದ್ದ ರಾಗ ಯಾವುದು?
ಉತ್ತರ: ವೇಗವಾಹಿನಿ

ಪ್ರಶ್ನೆ: ಅಭಿನವ್ ಭಿಂದ್ರಾಗೆ ತುಂಬಾ ಇಷ್ಟವಾಗೋ ರಾಗಗಳು ಯಾವುದು?**
ಉತ್ತರ: ಮಾರರಂಜಿನಿ, ಚಾರುಕೇಶಿ, ಸರಸಾಂಗಿ, ಹರಿಕಾಂಭೋಜಿ, ಶಂಕರಾಭರಣ ಮತ್ತೆ ನಾಗಾನಂದಿನಿ

ಪ್ರಶ್ನೆ: ಆಕಾಶದಲ್ಲಿ ದುರ್ಬೀನು ಇಟ್ಕೊಂಡು ನೋಡೋ ವಿಜ್ಞಾನಗಳಿಗೆ ಯಾವ ರಾಗಗಳನ್ನ ಕಂಡರಾಗೋದಿಲ್ಲ?
ಉತ್ತರ: ಚಂದ್ರಿಕಾ, ಪೂರ್ಣಚಂದ್ರಿಕಾ, ಸೂರ್ಯಕಾಂತ , ಚಂದ್ರಜ್ಯೋತಿ

ಪ್ರಶ್ನೆ: ಸೂರ್ಯ ಗ್ರಹಣದ ದಿನ ಹಾಡೋದಕ್ಕೆ …

ಬೇಡತಿಗೆ ಬೇಡದ ಮುತ್ತು

ಹೆರರ ಹಿರಿಮೆಗಳ ಅರಿಯದಾ ಮೂಳರು
ಅವರ ಹಳಿಯುವುದರಲಿ ಅಚ್ಚರಿಯೆ ಇಲ್ಲ;
ಆನೆ ನೆತ್ತಿಯ ಸುಪ್ಪಾಣಿ ಮುತ್ತುಗಳ ಬಿಟ್ಟು
ಬೇಡತಿಯು ಗುಲಗಂಜಿಸರವ ತೊಡುವಳಲ್ಲ!


ಸಂಸ್ಕೃತ ಮೂಲ(’ಚಾಣಕ್ಯ ನೀತಿ’ ಯಿಂದ):

ನ ವೇತ್ತಿ ಯೋ ಯಸ್ಯ ಗುಣ ಪ್ರಕರ್ಷಂ
ಸ ತಂ ಸದಾ ನಿಂದತಿ ನಾSತ್ರ ವಿಚಿತ್ರಂ |
ಯಥಾ ಕಿರಾತೀ ಕರಿಕುಂಭಜಾತಾ
ಮುಕ್ತಾಃ ಪರಿತ್ಯಜ್ಯ ಬಿಭಾರ್ಥಿ ಗುಂಜಾಃ ||

-ಹಂಸಾನಂದಿ

ಬಾಗುವ ಮರಗಳು

Image
ತೊಂಗುವುವು ಹಣ್ಣಿರುವ ಮರಗಳು
ಅಂತೆಯೇ ಬಾಗುವರು ಬಲ್ಲವರು
ತಿಳಿಗೇಡಿಗಳು ಮತ್ತೊಣಕಟ್ಟಿಗೆಯು
ಬಳುಕದೇ ಬಾಗದೇ ಮುರಿಯುವರು!

ತೊಂಗು = ಬಾಗು,ಬಗ್ಗು; ಬೇಂದ್ರೆಯವರ "ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ .." ಅನ್ನುವ ಸಾಲನ್ನು ನೆನಪಿಸಿಕೊಳ್ಳಿ.

ಸಂಸ್ಕೃತ ಮೂಲ:

ನಮಂತಿ ಫಲಿತಾಃ ವೃಕ್ಷಾಃ
ನಮಂತಿ ವಿಬುಧಾಃ ಜನಾಃ |
ಶುಷ್ಕ ಕಾಷ್ಟಾನಿ ಮೂರ್ಖಾಶ್ಚ
ಭಿದ್ಯಂತೇ ನ ನಮಂತಿ ಚ |

नमन्ति फलिताः वृक्षाः
नमन्ति विबुधाः जनाः ।
शुष्ककाष्ठानि मूर्खाश्च
भिद्यन्ते न नमन्ति च ॥

-ಹಂಸಾನಂದಿ

*ಚಿತ್ರ ನಾನೇ ತೆಗೆದಿದ್ದು; ನಮ್ಮ ಮನೆಯ ಹಿತ್ತಿಲಲ್ಲಿ.

ಅರಳುವ ತಾವರೆ

Image
ಬರೆದು ಓದಿ ನೋಡಿ ಕೇಳಿ
ಅರಿತವರಾಸರೆ ಪಡೆದವನ
ಅರಿಮೆ ಅರಳುವುದು ತಾವರೆ
ಬಿರಿವೊಲು ರವಿಯ ಕದಿರಿಗೆ

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :
ಯ: ಪಠತಿ ಲಿಖತಿ ಪಶ್ಯತಿ ಪರಿಚ್ಛತಿ ಪಂಡಿತಾನುಪಾಶ್ರಯತಿ |
ತಸ್ಯ ದಿವಾಕರ ಕಿರಣೈಃ ನಲಿಲೀದಲಮಿವ ವಿಕಾಸ್ಯತೇ ಬುದ್ಧಿಃ||ಕೊ: ಅರಿಮೆ = ತಿಳುವಳಿಕೆ

ಕೊ.ಕೊ: ಕದಿರು = ಕಿರಣ; ಹೊಸದಾಗಿ ನೆನಪಿಸಿಕೊಂಡ ಅಚ್ಚಕನ್ನಡ ಪದ (ಜಿ.ವೆಂಕಟಸುಬ್ಬಯ್ಯ ಅವರ ನಿಘಂಟುವಿನಿಂದ)

-ಹಂಸಾನಂದಿ

’ಸಿಟಿ’ಯ ಸುತ್ತ ಒಂದು ಸುತ್ತು

Image
ಕಳೆದ ವಾರ ಮನೆಗೆ ಬಂದ ನೆಂಟರ ಜೊತೆ ಒಂದು ಸಲ ಸಿಟಿ ಯಾತ್ರೆ ಮಾಡಿದ್ದಾಯಿತು. ಮನೆಗೆ ಯಾರಾದರೂ ಗೆಳೆಯರು, ನೆಂಟರು ಬಂದಾಗ ’ಸಿಟಿ’ಯನ್ನು ತೋರಿಸಲು ಹೋಗುವುದು ರೂಢಿ.ಎಷ್ಟು ಸಲ ಹೋದರು ಪ್ರತೀ ಸಲ ಹೋಗುವಾಗ ಎಲ್ಲಿ ದಾರಿ ತಪ್ಪುವುದೋ ಅನ್ನುವ ಮುಜುಗರ ಇರುವುದೇ. ಯಾಕಂದ್ರೆ ಅಲ್ಲಿಯ ರಸ್ತೆಗಳೇ ಹಾಗೆ! ಎಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗುವ ಒನ್-ವೇ ಗಳು, ಅದಕ್ಕೂ ಹೆಚ್ಚಾಗಿ ಇದ್ದಕ್ಕಿದ್ದ ಹಾಗೆ ಬೆಟ್ಟದ ಮೇಲೆ ಹತ್ತಿಬಿಡುವ, ಇಳಿದು ಬಿಡುವ ರಸ್ತೆಗಳು. ಇನ್ನು ಪಾರ್ಕಿಂಗ್ ಹುಡುಕುತ್ತಲೇ ಸುತ್ತಿಸುತ್ತಿ ಸುಣ್ಣವಾಗಬೇಕಾದಂತಹ ರಸ್ತೆಗಳು, ಇವೆಲ್ಲ ನೆನಪಾಗಿ ಹೋಗುವುದೇ ಬೇಡವೇ ಅಂತ ಅನ್ನಿಸುವುದೂ ಉಂಟು.

ಈ ಬಾರಿ ಪ್ರತೀ ಸಲದ ದಾರಿ ಬಿಟ್ಟು ಹೋದರೂ, ದಾರಿ ಎಲ್ಲೂ ತಪ್ಪದೇ ಹೋಗಿದ್ದು ಹೆಚ್ಚಾಯವೇ. ಅವತ್ತು ಸ್ಟಿಯರಿಂಗ್ ಹಿಂದಿನಿಂದ ತೆಗೆದ ಚಿತ್ರಗಳಲ್ಲಿ ಕೆಲವನ್ನು ಹಾಕಿರುವೆ (ಗಾಜಿನ ಹಿಂದೆ ತೆಗೆದಿರುವುದರಿಂದ ಕೆಲವು ಮಸುಕಾಗಿಯೂ ಇವೆ), ನೋಡಿ.

ಎಂಬಾರ್ಕೆಡೆರೋ ನಿಂದ ’ಸಿಟಿ’ಯ ಗಗನಚುಂಬಿಗಳು

ಒಂದು ರಸ್ತೆ - ಒಂದಕ್ಕೊಂದು ಅಂಟಿದಂತಿರುವ ಮನೆಗಳನ್ನ ಗಮನಿಸಿ:
ಚೈನಾ ಟೌನ್ - ಚೈನೀಸ್ ಬರಹವನ್ನ ನೋಡಿ. ಇಲ್ಲಿ ಮುಕ್ಕಾಲುಪಾಲು ವ್ಯಾಪಾರಿಗಳಿಗೆ ಇಂಗ್ಲಿಷ್ ಸ್ವಲ್ಪವೂ ಬರೋದಿಲ್ಲ!
ಗೋಲ್ಡನ್ ಗೇಟ್ ಸೇತುವೆ - ಮಟಮಟ ಮಧ್ಯಾಹ್ನ ದಲ್ಲಿ ಕವಿಯುತ್ತಿರುವ ಬೇಸಿಗೆ ಕಾವಳ:ಗೋಲ್ಡನ್ ಗೇಟ್ ಸೇತುವೆಯ ಇನ್ನೊಂದು ನೋಟ:

ಮಾರ್ಕೆಟ್ ಸ್ಟ್ರೀಟ್:ಮಾರ್ಕೆಟ್ ಸ್ಟ್ರೀಟ್ ನ …

ಕಂಚಿನ ಗಂಟೆ

ಅರಿಯದವರಷ್ಟು ಮಾತಾಳಿ
ಇರದಿರಬಹುದು ಅರಿತವರೂ!
ಕಂಚಿನ ಗಂಟೆಯ ಅನುರಣನ
ಇರದು ಚಿನ್ನದ ಗಂಟೆಯಲೂ!

ಸಂಸ್ಕೃತ ಮೂಲ:

ಉತ್ತಮೋ ನಾತಿವಕ್ತಾ ಸ್ಯಾತ್ ಅಧಮೋ ಬಹುಭಾಷತೇ|
ನ ಕಾಂಚನೇ ಧ್ವನಿ: ತಾದೃಕ್ ಕಾಂಸ್ಯೇ ಪ್ರಜಾಯತೇ ||

उत्तमो नातिवक्ता स्यात् अधमो बहुभाषते |
न काञ्चने ध्वनिस्तादृक् यादृक् कांस्ये प्रजायते ||

-ಹಂಸಾನಂದಿ

ತಂಪು

ಚಂದನ ತೊಡೆವುದು ಒಡಲಿಗೆ ತಂಪು
ತಿಂಗಳ ಕಾಂತಿಯು ಅದಕೂ ಮೇಲು
ಚಂದಿರ ಚಂದನ ಎರಡಕು ಹೆಚ್ಚಿಗೆ
ತಂಪದು ಒಳ್ಳೆಯ ಜನಗಳ ಸಂಗ !

ಸಂಸ್ಕೃತ ಮೂಲ:

ಚಂದನಂ ಶೀತಲಂ ಲೋಕೇ ಚಂದನಾದಪಿ ಚಂದ್ರಮಾಃ
ಚಂದ್ರ ಚಂದನಯೋರ್ಮಧ್ಯೇ ಶೀತಲಾ ಸಾಧು ಸಂಗತಿ:

-ಹಂಸಾನಂದಿ

ಕೃಷ್ಣಾ ನೀ ಬೇಗನೆ ಬಾರೋ

ಕೃಷ್ಣನ ಹೆಸರೆತ್ತಿದ ಕೂಡಲೆ ನೆನಪಾಗೋ ಹಾಡು ಅಂದರೆ, ಕೃಷ್ಣಾ ನೀ ಬೇಗನೆ ಬಾರೋ ಅಂತ ಹೇಳಿದ್ರೆ ತಪ್ಪೇನೂ ಇಲ್ಲ. ವ್ಯಾಸರಾಯರ ಈ ರಚನೆ ಕನ್ನಡ ಬಲ್ಲವರಷ್ಟೇ ಅಲ್ಲದೆ, ಬೇರೆ ಭಾಷೆಯ ಕಲಾವಿದರಿಗೂ ಮೆಚ್ಚಿನದ್ದೇ ಆಗಿದೆ. ವಾತ್ಸಲ್ಯಭಾವವನ್ನು ಎತ್ತಿ ತೋರುವ ಈ ರಚನೆ ಹಾಗೇ ನಾಟ್ಯ ಕಲಾವಿದರಿಗೂ ಅಚ್ಚುಮೆಚ್ಚು.

ಹಿಂದೂಸ್ತಾನಿಯಿಂದ ಕರ್ನಾಟಕ ಸಂಗೀತಕ್ಕೆ ಬಂದಿರುವಂತಹ ಯಮನ್ ಕಲ್ಯಾಣಿ (ಯಮುನಾ ಕಲ್ಯಾಣಿ ಅಂತಲೂ ಹೇಳುವುದಿದೆ)ಯಲ್ಲಿ ಹಾಡುವ ಈ ದೇವರನಾಮದ ಮೂರು ನೋಟಗಳನ್ನು, ಕೃಷ್ಣ ಜನ್ಮಾಷ್ಟಮಿಯ ಈ ದಿನ ಇಲ್ಲಿ ನೋಡಿ, ಕೇಳಿ. ಮೊದಲಿಗೆ ಹಾಡಿನ ಸಾಹಿತ್ಯ ಇಲ್ಲಿದೆ:

ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ

ಕಾಲಲಂದುಗೆ ಗೆಜ್ಜೆ ನೀಲದ ಭಾಪುರಿ
ನೀಲವರ್ಣನೆ ನಾಟ್ಯವಾಡುತ ಬಾರೋ

ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ

ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ

ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ

ಬಾಲಸರಸ್ವತಿ ಅವರ ಅಭಿನಯದಲ್ಲಿ:

http://www.youtube.com/watch?v=axuq7ncvjYE


ಹರಿಹರನ್ ಅವರ ಕಂಠದಲ್ಲಿ:


’ಮದ್ರಾಸ್ ನಾಲ್ವರ’ ವಾದ್ಯ ವೃಂದದಲ್ಲಿ:

-ಹಂಸಾನಂದಿ

ಒಂಟಿ ಗಾಲಿಯ ಬಂಡಿ

ಒಂಟಿ ಗಾಲಿಯ ಬಂಡಿ
ಊರ ಸೇರುವುದಿಲ್ಲ
ಜತುನವಿಲ್ಲದೆ ಬರಿದೆ ದೈವವ
ನೆಚ್ಚಿದರೆ ಏಳಿಗೆಯಿಲ್ಲ!

ಸಂಸ್ಕೃತ ಮೂಲ:

ಯಥಾ ಹಿ ಏಕೇಣ ಚಕ್ರೇಣ ನ ರಥಸ್ಯ ಗತಿಃ ಭವೇತ್ |
ಏವಂ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ ||

-ಹಂಸಾನಂದಿ

ಆಸೆ

ಗಿರಿಯು ಹಿರಿದು ಕಡಲದಕು ಮಿಗಿಲು
ಮೇಲಿರುವ ಆಗಸವು ಕಡಲಿಗೂ ಮಿಗಿಲು;
ಪರಬೊಮ್ಮನಿರಬಹುದು ಆಗಸಕು ಮಿಗಿಲು
ಮನದಾಸೆ ಎಂಬುದದು ಅವನಿಗೂ ಮಿಗಿಲು!

ಸಂಸ್ಕೃತ ಮೂಲ:

ಗಿರಿರ್ಮಹಾನ್ ಗಿರೇರಬ್ಧಿಃ ಮಹಾನಬ್ಧೇರ್ನಭೋ ಮಹತ್ |
ನಭಸೋSಪಿ ಮಹದ್ ಬ್ರಹ್ಮ ತತೋಪ್ಯಾಶಾ ಗರೀಯಸೀ ||

-ಹಂಸಾನಂದಿ

ಲಾಂಟಾನಾ

Image
ಒಂದೊಂದು ಸಲ ಆಶ್ಚರ್ಯ ಆಗುತ್ತೆ. ’ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ” ಅಂತ ಕನಕದಾಸರೇ ಹೇಳಿದಾರಲ್ಲ! ಊರು ಕೇರಿ ದಾಟಿ ಬೇರೆ ಯಾವ್ದೋ ದೇಶದಲ್ಲಿ ಹರಡಿಕೊಂಡಿರೋ ಜೀವಿಗಳ ಪೈಕಿ ಲಾಂಟಾನಾ ಕೂಡ ಒಂದು. ಇದು ಮೊದಲಿಗೆ ದಕ್ಷಿಣ ಅಮೇರಿಕಾದ ಗಿಡವಂತೆ. ಪಾಪ, ಕ್ಯಾಲಿಫೋರ್ನಿಯಾದಲ್ಲಿ, ರಸ್ತೆ ನಡುವೆ ಸಿಂಗಾರಕ್ಕೆ ನೆಟ್ಟು, ನೀರುಹಾಕಿ ಬೆಳಸ್ತಾರೆ. ಆದ್ರೆ, ಕರ್ನಾಟಕದಲ್ಲಿ ಇದು ತಂತಾನೇ ಯಾವ ಆರೈಕೆ ಇಲ್ಲದೆ ಬೆಳೆದು ಬಗೆ ಬಗೆ ಬಣ್ಣ ಬಣ್ಣದ ಹೂವನ್ನೂ ತಳೆಯುತ್ತೆ. ಇಷ್ಟು ಬಣ್ಣವಾದ ಹೂವಿರೋ ಗಿಡದ ಎಲೆ ಮುಟ್ಟಿದರೆ ಮೈ ಕಡಿತ ಹತ್ತಬಹುದು. ಅದಕ್ಕೇ ಈ ಗಿಡಕ್ಕೆ, ತರುಚೀ ಗಿಡ ಅಂತಲೂ ಹೇಳೋದು ಕೇಳಿದೀನಿ. ಸೃಷ್ಟಿ ಎಷ್ಟು ವಿಚಿತ್ರ ಅಲ್ವೇ?

(ಇಲ್ಲಿರುವ ಲಾಂಟಾನಾ ಗಿಡದ ಚಿತ್ರ ತೆಗೆದದ್ದು ನಾನೇ - ಮಾವಿನಕೆರೆ ಬೆಟ್ಟದಲ್ಲಿ. ಜುಲೈ ೨೦೦೯)

-ಹಂಸಾನಂದಿ

ಶ್ರೀ ವರಲಕ್ಷ್ಮೀ ನಮಸ್ತುಭ್ಯಂ

ಈ ಶುಕ್ರವಾರ ಜುಲೈ ೩೧, ೨೦೦೯ ವರಲಕ್ಷ್ಮಿಯ ಹಬ್ಬ. ನಾವು ಆಚರಿಸುವ ಹಬ್ಬಗಳಲ್ಲಿ ಹೆಚ್ಚಿನವು ಚಾಂದ್ರಮಾನ ಮಾಸ-ತಿಥಿಗಳ ಆಧಾರದ್ದು. ಅಂದರೆ ಭಾದ್ರಪದ ಚೌತಿಯ ದಿನ ಗಣಪತಿ ಹಬ್ಬ. ಚೈತ್ರ ಶುದ್ಧ ನವಮಿಯಂದು ರಾಮನವಮಿ ಇತ್ಯಾದಿ. ಕೆಲವು ಅಪವಾದಗಳಿವೆ ಅನ್ನಿ. ಅವುಗಳಲ್ಲೊಂದು ವರ ಮಹಾಲಕ್ಷ್ಮಿಯ ಹಬ್ಬ. ಶ್ರಾವಣದ ಹುಣ್ಣಿಮೆಯ ಹಿಂದಿನ ಶುಕ್ರವಾರ ಬರುವ ಈ ಹಬ್ಬ ನನಗೆ ತಿಳಿದ ಹಾಗೆ ದಕ್ಷಿಣ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಹೆಸರುವಾಸಿ. ಚಿಕ್ಕಂದಿನಲ್ಲಿ ಈ ಹಬ್ಬದ ಬಗ್ಗೆ ಒಂದು ಕಥೆಯನ್ನ ಅಜ್ಜಿ ಹೇಳುತ್ತಿದ್ದಿದ್ದು ನೆನಪಿದೆ. ಕಳಸಾಪುರವೆಂಬ ಊರಿದೆ ( ಹಾಸನ/ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿ). ಒಂದಾನೊಂದು ಕಾಲದಲ್ಲಿ ಆ ಊರಿನಲ್ಲಿ ಒಬ್ಬಾಕೆ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಬೇಕೆಂದು ಬಗೆಬಗೆಯ ಖಾದ್ಯಗಳನ್ನು ಮಾಡಿದ್ದಳು. ಸಂಜೆ ನಡೆಸಬೇಕಾದ ಪೂಜೆಯೆಂದು ಸಂಜೆಯವರೆಗೆ ಎಲ್ಲರಿಗೂ ಉಪವಾಸ. ಪಾಪ, ಮಕ್ಕಳಿಗೆ ತಡೆದೀತೇ? ಆದರೆ ತಾಯಿ ಕಟ್ಟುನಿಟ್ಟಿನವಳು. ಮಕ್ಕಳಾ, ಸ್ವಲ್ಪ ಹೊತ್ತು ಕಾಯಿರಿ. ಇನ್ನೇನು ಪೂಜೆ ವೇಳೆ ಅಂತ ಏನೋ ಸಮಾಧಾನ ಮಾಡಿ, ನೀರು ತರಲೆಂದು ಕೆರೆಗೆ ಹೊರಟಳು. ಮಕ್ಕಳು ಪಾಪ ಸುಸ್ತಾಗಿ ಕೂತರು. ಅದೇನೋ ತಾಯಿಗೆ ಮಕ್ಕಳ ಮೇಲೆ ಕನಿಕರವಾಯಿತೆಂದು ತೋರುತ್ತೆ. ಹೊರಗೆ ಹೋದ ತಾಯಿ ಐದೇ ನಿಮಿಷಕ್ಕೆ ಮರಳಿ ಬಂದು ಮಕ್ಕಳನ್ನ ಕರೆದು "ಹೋಕ್ಕೊಳಲಿ, ಸ್ವಲ್ಪ ತಿನ್ನಿ ತುಂಬಾ ಹೊತ್ತಾಗಿದೆ -ಇನ್ನೂ ಪೂಜೆ ಮುಗಿಯೋ ಹೊತ್ತು ಅಂ…

ಮುಂಗಾರು ಮಳೆ

Image
ನಾನು ತುಂಬಾ ಚಿಕ್ಕ ಹುಡುಗನಾಗಿದ್ದಾಗ ನಮ್ಮ ಮನೇಗೆ ಬರ್ತಿದ್ದ ರೈತರು ಕಾರು ಹಬ್ಬ ಇದೆ ಅಂತ ಹೇಳ್ತಿದ್ದನ್ನ ಕೇಳಿದ್ದೆ. ಆದ್ರೆ ನಮ್ಮ ಹಳ್ಳೀಗೆ ಆಗ ಕಾರಿರಲಿ, ಆಟೋ ಕೂಡ ಹೋಗ್ತಿರಲಿಲ್ಲ. ಇದೇನಿದು ಕಾರು ಹಬ್ಬ ಅಂದ್ರೆ ಅಂತ ಆಶ್ಚರ್ಯ ಆಗ್ತಿತ್ತು. ಪುಣ್ಯಕ್ಕೆ ನಾನು ಸ್ಕೂಲಲ್ಲಿ ಕನ್ನಡ ಓದ್ತಿದ್ದೆನಾದ್ದರಿಂದ, ಕಾರು ಹಬ್ಬ ಅಂದ್ರೆ ಮಳೆಗೆ ಸಂಬಂಧಿಸಿದ ಹಬ್ಬ ಅಂತ ತಿಳೀತು ಅನ್ನಿ. ಕೆಲವು ವರ್ಷಗಳ ಹಿಂದೆ ಕಾಮೆಡಿ ಟೈಮ್ ಗಣೇಶನ ... ಅಬ್ಬಬ್ಬ ಬಾಯ್ತಪ್ಪಿದೆ. ಕ್ಷಮಿಸಿ. ಗೋಲ್ಡನ್ ಸ್ಟಾರ್ ಗಣೇಶನ ’ಮುಂಗಾರು ಮಳೆ’ ಬಂದಾಗ ಅದರ ರಿವ್ಯೂಗಳಲ್ಲಿ ’ಮುಂಗಾರು ಮಳೆ’ ಅಂದ್ರೆ 'pre-monsoon showers' ಅನ್ನೋ ಅನುವಾದ ನೋಡಿ ಸುಸ್ತಾಗಿದ್ದೆ ನಾನು. ನಂಗೆ ಗೊತ್ತಿದ್ದ ಹಾಗೆ, ಯುಗಾದಿ ಹಬ್ಬದ ಹೊತ್ತಿಗೆ, ಮುಂಗಾರಿಗೆ ಮೊದಲು ಬರೋ ಪ್ರಿ-ಮಾನ್ಸೂನ್ ಮಳೆಗೆ ಅಡ್ಡ ಮಳೆ ಅಂತಿದ್ವಿ ನಮ್ಮ ಕಡೆ. ಯೋಗರಾಜಭಟ್ಟರ ಮುಂಗಾರುಮಳೆಗೆ ಅರ್ಥ ಬೇರೆ ಇರಬಹುದು ಬಿಡಿ. ಅದಿರಲಿ. ಈ ಸಲ ಮುಂಗಾರು ಮಳೆ ಚುರುಕಾಗೋ ಕಾಲದಲ್ಲಿ ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಸ್ವಲ್ಪ ಸುತ್ತಾಟ ಮಾಡಿದ್ದಾಯಿತು. ಅಲ್ಲಿಯ ಕೆಲವು ಚಿತ್ರಗಳನ್ನ ನೋಡಿ ಇಲ್ಲಿ: ಹಾಸನ ಪೇಟೆ - ಮಳೆ ಬೀಳುವಾಗ ಬಸ್ಸಿನ ಒಳಗಿಂದ - ಬಿಸಿಲೇ ಇರಲಿ ಮಳೆಯೇ ಇರಲಿ, ನಮ್ಮೂರೆ ನಮಗೆ ಚೆನ್ನ! ಇಪ್ಪತ್ತು ರುಪಾಯಿಗೆ ಮಾರು ಶಾವಂತಿಗೆ: ಬಾನಿಗೆ ಮೋಡದ ಸಿಂಗಾರ, ನಮಗೆ ಹೂವಿನ ಅಲಂಕಾರ - ಮದುವೆಯ…

ವಸಂತಪುರಿ, ಕ್ಯಾಲಿಫೋರ್ನಿಯಾ

Image
ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ ಊರಿನ ಹೆಸರೂ ಕೇಳಿದ್ದೆ. ಆದ್ರೆ ಇದ್ಯಾವ್ದಿದು? ವಸಂತ ಪುರಿ, ಕ್ಯಾಲಿಫೋರ್ನಿಯಾ ಅಂದ್ರಾ?

ಊರು ಬದ್ಲಾದ್ರೂ ಮನುಷ್ಯ ಬದಲಾಗೋದು ಅಷ್ಟು ಸರಾಗ ಅಲ್ಲ ಅಲ್ಬಾ? ಹಳೇ ಪಳೇ ಅಭ್ಯಾಸಗಳನ್ನ, ಸಂಪ್ರದಾಯಗಳನ್ನ ಬಿಡೋದೂ ಸುಲಭದ ಮಾತಲ್ಲ. ಅದಕ್ಕೇ ಇರಬೇಕು ಪೂಜೆ ಪುನಸ್ಕಾರ ಅಂದ್ರೆ ಸಾವಿರಾರು ವರ್ಷದ ಹಿಂದೆ ಬರೆದ ಮಂತ್ರಗಳನ್ನೇ ಇವತ್ತೂ ನಾವು ಪಠಿಸೋದು. ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಅನ್ನೋ ಸಾಲು ಕೇಳೇ ಇರ್ತೀರಿ. ಇದರಲ್ಲಿ ಸಿಂಧು ಬಹುಪಾಲು ಪರದೇಶದ ಪಾಲಾಗಿ ಹೋಗಿದೆ. ಸರಸ್ವತಿ ಅಂತೂ ಒಣಗಿ ನಿಂತೇ ಸಾವಿರಾರು ವರ್ಷಗಳಾಗಿ ಹೋಗಿವೆ. ಆದ್ರೂ ಮಂತ್ರ ಹೇಳೋದು ತಪ್ಪಿಲ್ಲ.

ಕೆಲವರು ಮಾತ್ರ ಅಲ್ಪ ಸ್ವಲ್ಪ ಬದಲಾವಣೆ ಮಾಡಿರೋದು ನೋಡಿದೀನಿ. ಪೂಜೆ ಮಂತ್ರಗಳಲ್ಲಿ ಭಾರತ ವರ್ಷೇ ಭರತಖಂಡೇ .. ಗೋದಾವರ್ಯಾಃ ದಕ್ಷಿಣೇ ತೀರೇ ಅನ್ನೋ ಸಾಲನ್ನ ಇಲ್ಲಿ ಒಬ್ಬರು ಉತ್ತರ ಅಮೇರಿಕಾ ಖಂಡೇ ಕ್ಯಾಲಿಫೋರ್ನಿಯಾ ರಾಜ್ಯೇ ಸಾಕ್ರಮೆಂಟೋ ನದ್ಯಾಃ ಪೂರ್ವೇ ತೀರೇ ಅಂತ ಬದಲಾಯಿಸಿ ಪೂಜೆ ಮಾಡ್ತಿದ್ದಿದ್ದು ಎಷ್ಟೋ ವರ್ಷಗಳ ಹಿಂದೆಯೇ ನೋಡಿದ್ದೆ.


ಲಿವರ್ ಮೋರ್, ಕ್ಯಾಲಿಫೋರ್ನಿ…

ತಾಳುವಿಕೆಗಿಂತನ್ಯ ತಪವು ಇಲ್ಲ

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ
ನ ಕ್ಷಾಂತಿತುಲ್ಯಂ ಹಿತಮನ್ಯದಸ್ತಿ ||

ಕೊಸರು: ತಾಳುವಿಕೆಗಿಂತನ್ಯ ತಪವು ಇಲ್ಲ ಅನ್ನುವುದೊಂದು ಪ್ರಸಿದ್ಧ ವಚನ(?). ಈ ಸುಭಾಷಿತದಲ್ಲಿ ಅದೇ ಮಾತು ಬರದಿದ್ದರೂ, ಅದನ್ನು ಹೋಲುವ ಮಾತುಗಳಿದ್ದರಿಂದ, ಆ ತಲೆಬರಹ ಕೊಟ್ಟಿದ್ದೇನೆ. ಅಲ್ಲದೆ, ಧನ, ವ್ರತ, ಶುಭ, ಹಿತ, ಮೊದಲಾದ ಕನ್ನಡದಲ್ಲಿ ಹೆಚ್ಚಾಗೇ ಬಳಕೆಯಲ್ಲಿರುವ ಸಮಸಂಸ್ಕೃತ ಪದಗಳ ಬದಲು, ದೇಶ್ಯ ಪದಗಳಾದ ಸಿರಿ, ನೋಂಪಿ, ಒಸಗೆ ಮತ್ತು ಸೇರಿಕೆ - ಈ ಪದಗಳನ್ನು ಬಳಸುವ ಒಂದು ಪ್ರಯತ್ನ ಮಾಡಿದೆ. ಇದರಲ್ಲಿ ಒಂದೆರಡು ಪದಗಳನ್ನು ಹೆಕ್ಕಲು ಜಿವೆಂ ಅವರ ಕನ್ನಡ ನಿಘಂಟು ಸಹಾಯಕ್ಕೆ ಬಂತು.

-ಹಂಸಾನಂದಿ

ಬೆಲ್ಲದ ಕಟ್ಟೆಯ ಕಟ್ಟಿ...

ಬೆಲ್ಲದ ಬೆಟ್ಟದ ನಟ್ಟ ನಡು
ಬೇವಿನ ಬೀಜವೊಂದನು ನೆಟ್ಟು
ಸಾವಿರ ವರುಷ ಹಾಲ್ಮಳೆಗರೆಯಲು
ಸವಿಯಾಗುವುದೇ ಬೇವಿನ ಗಿಡವು?

ಸಂಸ್ಕೃತ ಮೂಲ:

गुलपर्वतमध्यस्थं निम्बबीजं प्रतिष्टितम्।
पयोवर्षसहस्रेण निम्बः किं मधुरं यते॥

ಕೊಸರು: ಇದೇ ತಿಳಿವುಳ್ಳ ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ ಅನ್ನುವ ಬಸವಣ್ಣನವರ ವಚನ, ಮತ್ತು ಬೇವು ಬೆಲ್ಲದೊಳಿಡಲೇನು ಫಲ ಎಂಬ ಪುರಂದರ ದಾಸರ ರಚನೆಗಳು ಬಹಳ ಹೆಸರುವಾಸಿಯಾಗಿವೆ.

-ಹಂಸಾನಂದಿ

ಋಣಂ ಕೃತ್ವಾ ಘೃತಂ ಪಿಬೇತ್

ಮರಳಿ ಬರುವ ದಾರಿಯಿದೆಯೆ
ಉರಿದು ಬೂದಿಯಾದ ಒಡಲು?
ಇರಲಿ ಅದಕೆ ಬಿಡದ ಜತುನ
ಎರವಲಲ್ಲೆ ತುಪ್ಪವುಣಲು!

ಸಂಸ್ಕೃತ ಮೂಲ (ಚಾರ್ವಾಕ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

-ಹಂಸಾನಂದಿ

ಹತ್ತಿರ ಇದ್ದರೂ ದೂರ

ಗೆಲಿಲಿಯೋ ದೂರದರ್ಶಕವನ್ನ ನಿರ್ಮಿಸಿ ಮಾಡಿದ ಕ್ರಾಂತಿ ಗೊತ್ತೇ ಇದೆ. ಅವನು ಗುರುವಿನ ಸುತ್ತುತ್ತಿರುವ ಉಪಗ್ರಹಗಳನ್ನು ಮೊದಮೊದಲಿಗೆ ನೋಡಿದ ಮೇಲೆ, ಈ ನಾನೂರು ವರ್ಷಗಳಲ್ಲಿ ನಮ್ಮ ಸೌರಮಂಡಲವೇಕೆ, ಬೇರೆ ಬೇರೆ ನಕ್ಷತ್ರಗಳ ಸುತ್ತಲೂ ಇರುವ ಗ್ರಹಗಳ ಪತ್ತೆ ಬೇಕಾದಷ್ಟಾಗಿದೆ.

ಹೊರ-ಸೌರ-ಮಂಡಲಗಳನ್ನು ಹುಡುಕುವುದರಲ್ಲಿ ಲಿಕ್ ಅಬ್ಸರ್ವೇಟರಿಯ ಪಾತ್ರ ದೊಡ್ಡದು. ಇದು ಇರುವುದು ಕ್ಯಾಲಿಫೋರ್ನಿಯಾದ ಸ್ಯಾನ್ ಹೊಸೆ ಬಳಿಯ ಹ್ಯಾಮಿಲ್ಟನ್ ಬೆಟ್ಟದ ತಲೆಯ ಮೇಲೆ.

’ಅತಿ ಪರಿಚಯಾತ್ ಅವಜ್ಞಾ..’ ಅನ್ನುವ ಗಾದೆಯೇ ಇದೆಯಲ್ಲ - ದಿನ ನಿತ್ಯ (ದೂರದಿಂದ) ನೋಡುತ್ತಲೇ ಇದ್ದ ಲಿಕ್ ಅಬ್ಸರ್ವೇಟರಿಗೆ ಕೊನೆಗೂ ಒಂದು ಸಲ ಹೋಗೇ ಬಿಟ್ಟೆ; ಅಲ್ಲಿ ನಾನು ತೆಗೆದ ಕೆಲವು ಚಿತ್ರಗಳನ್ನು ನೋಡಲು ಇಲ್ಲಿ ಚಿಟಕಿಸಿ.

-ಹಂಸಾನಂದಿ

ಮನೆ ಹತ್ತಿ ಉರಿವಾಗ...

ಕುತ್ತೊದಗಿದರೆ ಮಾಡುವುದೇನೆಂದು ಎಣಿಸಿರಬೇಕು ಮೊದಲೆ
ಹತ್ತಿ ಉರಿವಾಗ ಮನೆ ಬಾವಿಯ ತೋಡುವುದು ತರವೆ?

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾಗೃಹೇ ||

-ಹಂಸಾನಂದಿ

ಸ್ಪೆಲಿಂಗ್ ಪರಿಣತೆ ಕಾವ್ಯ

ಕನ್ನಡದಂಥ ಭಾಷೆಯಲ್ಲಿ ಪದಗಳನ್ನು ಬರೆಯುವುದೂ, ಉಚ್ಚರಿಸುವುದೂ ಸುಮಾರು ಒಂದೇ ರೀತಿ ಇರುವಾಗ, ಅದರಲ್ಲಿ ಸ್ಪೆಲಿಂಗ್ ಪ್ರಶ್ನೆ ಅಷ್ಟಾಗಿ ಕಾಣಬರುವುದಿಲ್ಲ. ಆದರೆ, ಇಂಗ್ಲಿಷ್ ನಂತಹ ನುಡಿಗಳಲ್ಲಿ ಅದೊಂದು ತೊಡಕೇ - ಕೆಲವರಿಗೆ :)

ಯುಎಸ್ಎ ನಲ್ಲಿ ಪ್ರತಿವರ್ಷ ಸ್ಪೆಲಿಂಗ್ ಬೀ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತೆ. ಕೆಳಗಿನ ಹಲವಾರು ಹಂತಗಳಲ್ಲಿ ಗೆದ್ದು ಬಂದ ೧೧ ಮಕ್ಕಳ ನಡುವೆ ೧೩ ವರ್ಷದ ಕಾವ್ಯ ಶಿವಶಂಕರ್ ಎಂಬ ಮೈಸೂರು ಮೂಲದ ಹುಡುಗಿ ೨೦೦೯ ರ ಸ್ಪೆಲಿಂಗ್ ಬೀ ಯಲ್ಲಿ ಅಗ್ರೇಸರಳಾಗಿ ಆಯ್ಕೆಯಾಗಿದ್ದಾಳೆ. ಇವಳು ಈ ಸ್ಪರ್ಧೆಯಲ್ಲಿ ೩೦೦೦೦ ಡಾಲರ್ ಮೊತ್ತದ ಹಣವನ್ನೂ. ಮತ್ತಿತರ ಬಹುಮಾನಗಳನ್ನೂ ಗೆದ್ದಿದ್ದಾಳೆ. ಇವಳಿಗೆ ಈ ಸ್ಪರ್ಧೆಗೆ ತರಪೇತಿ ಕೊಟ್ಟದ್ದು ತಂದೆ ಮಿರ್ಲೆ ಶಿವಶಂಕರ್.

ಕಾವ್ಯಳೊಡನೆ ಒಂದು ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ:

http://www.kannada.blogkut.com/

-ಹಂಸಾನಂದಿ

ಕೇದಗೆಯ ಕಂಪು

ದೂರದ ನೆಲೆಯಿಹ ಅಗ್ಗಳ*ಗೆ ರಾಯಸ**ಕೆಂದಿವೆ ಹಿರಿಮೆಗಳು
ಹರಡಿದ ಕಂಪಿನ ಜಾಡಿನಲೆ ಕೇದಗೆಯ ಸಂದಾವು ಜೇನುಗಳು

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಗ್ರಾಯ ಸ್ವಯಮಾಯಾಂತಿಷಟ್ಪದಾಃ ||

*ಅಗ್ಗಳ =ಉತ್ತಮ,ಶ್ರೇಷ್ಠ
**ರಾಯಸ = ದೂತ, ಹರಿಕಾರ, ಓಲೆಕಾರ

-ಹಂಸಾನಂದಿ

ಸಂಸಾರೊಂದಿಗರು

ದೂರದಿಂದಾರ ಮನೆಗೆ
ಅತಿಥಿಗಳು ಸಂತಸದಿ
ಬರುವರೋ - ಅವನೀಗ
ದಿಟದಿ ಸಂಸಾರೊಂದಿಗ.

ಮಿಕ್ಕವರಿಗೆ ಏನೆನಬೇಕು
ಎಂದು ಕೇಳುವೆಯಾ?
ಅಲ್ಲವೇ ಅವರು ಬರಿಯ
ಮನೆಯ ಕಾವಲಿನವರು?

ಸಂಸ್ಕೃತ ಮೂಲ:

ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತಾಃ |
ಗೃಹಸ್ಥಃ ತು ವಿಜ್ಞೇಯಾಃ ಶೇಷಾಸ್ತು ಗೃಹರಕ್ಷಿಣಃ ||

-ಹಂಸಾನಂದಿ

ಮಂಗನ ಕೈಗೆ ಮಾಣಿಕ್ಯ

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ
ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ

ಸಂಸ್ಕೃತ ಮೂಲ:

ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ |
ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ ||

मा दद्यात् खलसङ्घेषु कल्पनामधुरागिरः।
यथा वानरहस्तेषु कोमलाः कुसुमस्रजः॥

(ಈ ಸುಭಾಷಿತವನ್ನು ಓದಿದ್ದು http://samskrtam.wordpress.com/ ನಲ್ಲಿ)

-ಹಂಸಾನಂದಿ

ಅಮೃತವರ್ಷಿಣಿ

ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ ಹಿಡಿಸಿಬಿಡ್ತು.

ನೀವೂ ಆ ಹಾಡನ್ನ ಇಲ್ಲಿಂದ ಕೇಳಬಹುದು ನೋಡಿ. ಇದಕ್ಕೆ ಸಂಗೀತ ಕೊಟ್ಟಿರೋದು ಎ.ಟಿ.ರವೀಶ್. ಹಾಡಿರೋದು ಹರಿಹರನ್ ಮತ್ತೆ ಚಿತ್ರಾ. ಚಿತ್ರ - ಸೀನ.

ಜೀವ ಮಿಡಿಯುತಿದೆ ಒಲವಿನ ಸ್ವರಗಳಲಿ

ಈ ಹಾಡು ನನಗೆ ಹಿಡಿಸೋದಕ್ಕೆ ಅದು ನನಗೆ ಇಷ್ಟವಾಗೋ ಒಂದು ರಾಗದಲ್ಲಿ ಇರೋದೂ ಒಂದು ಕಾರಣ ಇರಬಹುದು. ಸಾಧಾರಣವಾಗಿ ಚಿತ್ರಗೀತೆಗಳು ಇಂತಹದ್ದೇ ಶಾಸ್ತ್ರೀಯ ರಾಗದಲ್ಲಿ ಇರಬೇಕು ಅಂತ ಏನೂ ಇಲ್ಲ. ಆದ್ರೆ ಈ ಹಾಡು ಮಾತ್ರ ಪೂರ್ತಿ ಅಮೃತವರ್ಷಿಣಿ ರಾಗದಲ್ಲೇ ಯೋಜಿತವಾಗಿದೆ.

ಹಾಗಂತ ಇದೇನು ಚಿತ್ರಗೀತೆಗಳಲ್ಲಿ ಅಮೃತವರ್ಷಿಣಿ ರಾಗವನ್ನ ಬಳಸಿರೋದು ಇದೇನೂ ಮೊದಲೇನಲ್ಲ. ಉದಾಹರಣೆಗೆ ಆನಂದ ಭೈರವಿ ಅನ್ನೋ ಚಿತ್ರದ ಚೈತ್ರದ ಕುಸುಮಾಂಜಲಿ ಅನ್ನೋ ಹಾಡು. ಇದೂ ಕೂಡ ಪೂರ್ತಿ ಈ ರಾಗದಲ್ಲೇ ಇರೋದು.

ಈಗ ಕೇಳಿ: ಚೈತ್ರದ ಕುಸುಮಾಂಜಲಿ ಅನ್ನೋ ಹಾಡನ್ನ. ಚಿತ್ರ ಆನಂದಭೈರವಿ. ಹಾಡಿರೋದು ಎಸ್.ಪಿ.ಬಾಲಸುಬ್ರಹ್ಮಣ್ಯಂ.

(ಅಂದ್ ಹಾಗೆ, ನೀವು ಕೇಳಿಲ್ದಿದ್ರೆ, ಈ ಚಿತ್ರದ ಬೇರೆ ಹಾಡುಗಳನ್ನೂ ಕೇಳಿ, ಸುಮಾರು ಎಲ್ಲವೂ ಚೆನ್ನಾಗಿವೆ!)

ಅಮೃತ ವರ್ಷಿಣಿ ಅನ್ನೋದು ಹೆಸರಿಂದಲೇ ಮಳೆಗೆ ಸಂಬಂಧಿಸಿರೋ ರಾಗ. ಅದಕ್ಕೇ ಅಂತಲೇ ಈ ಮುತ್ತಿನ ಹಾರ ಚಿತ್ರದ ಈ ಚಿತ್ರಗೀತೆ…

ಯಾರೆದುರು ಹೊಗಳಿಕೊಳ್ಳಬೇಕು?

ಬಲ್ಲವರೆದುರು ಹಿರಿಮೆಯ ಹೇಳದಿರು
ಅರಿತೇ ಅರಿಯುವರು ತಾವಾಗೇ;
ಹೇಳದಿರು ಹಿರಿಮೆಯ ಹುಂಬರೆದುರು
ಅರಿತವರ ನುಡಿಯ ಕೇಳದವರಿಗೆ!

ಸಂಸ್ಕೃತ ಮೂಲ:

ಬುಧಾಗ್ರೇ ನ ಗುಣಾನ್ ಬ್ರೂಯಾತ್ ಸಾಧು ವೇತ್ತಿ ಯಃ ಸ್ವಯಂ
ಮೂರ್ಖಾಗ್ರೇSಪಿ ಚ ನ ಬ್ರೂಯಾತ್ ಬುಧಃ ಪ್ರೋಕ್ತಂ ನ ವೇತ್ತಿ ಸಃ||

-ಹಂಸಾನಂದಿ

ಬದ್ಕಿದ್ದಾಗ್ಲೇ ಸಾಯೋದ್‍ ಹೇಗೆ?

ಸಾಯೋದ್ ಹೇಗಿರತ್ತೆ ಅನ್ನೋದ್ನ
ತಿಳಿಯೋದ್ ಕಷ್ಟ ಇಲ್ಲ;

ಕೇಡ್ಗಿತ್ತಿ ಹೆಂಡ್ತಿ; ಮೋಸ್ಗಾರ ಗೆಳೆಯ
ಮಾತ್ಗೆದುರಾಡೋ ಬಂಟ, ಇಲ್ವೇ
ಹಾವ್ ಹೊಕ್ಕ್ ಮನೇಲ್ವಾಸ;

ಇಷ್ಟ್ರಲ್ ಯಾವ್ದ್ ಒಂದು ಸಿಕ್ಕಿದ್ರೂ
ನಾವಿರುವಲ್ಲೇ ಗೊತ್ತಾಗತ್ತಲ್ಲ!

ಸಂಸ್ಕೃತ ಮೂಲ (ಗರುಡಪುರಾಣ ೧-೧೦೮-೨೫):

ದುಷ್ಟಾ ಭಾರ್ಯಾ ಶಠಂ ಮಿತ್ರಂ ಭೃತ್ಯಶ್ಚೋತ್ತರದಾಯಕಃ |
ಸಸರ್ಪೇ ಚ ಗೃಹೇ ವಾಸೋ ಮೃತ್ಯುರೇವ ನ ಸಂಶಯಃ ||


-ಹಂಸಾನಂದಿ

ಕೊರತೆಯಲೂ ಕಾಣುವ ಕಾಂತಿ

ಒರೆಹಚ್ಚಿ ಕಿರಿದಾಗಿಸಿದ ರತುನ ಕಾಳಗದಲಿ ಪೆಟ್ಟುಂಡು ಗೆದ್ದಿಹ ಯೋಧ
ಮದವಡಗಿದ ಆನೆ ಹಿಂಗಾರಿನಲಿ ಮಳಲದಂಡೆಯ ತೋರಿ ಹರಿವಹೊಳೆ
ಹುಣ್ಣಿಮೆಯ ಹಿಂದಿನಿರುಳ ಚಂದಿರ ಬೇಟದಲಿ ಬಸವಳಿದ ಹರೆಯದ ಹುಡುಗಿ
ಕೊರತೆಯಲೆ ಮೆರುಗುವರು ಕೊಡುಗೈಯಲಿ ನೀಡಿ ಸಿರಿಯಳಿದವರ ತೆರದಿ

ಸಂಸ್ಕೃತ ಮೂಲ - ಭರ್ತೃಹರಿ

ಮಣಿ ಶಾಣೋಲ್ಲೀಢಃ ಸಮರವಿಜಯೀ ಹೇತಿದಲಿತೋ
ಮದಕ್ಷೀಣೋ ನಾಗ: ಶರದಿ ಸರಿತಾಶ್ಯಾನಪುಲಿನಾ |
ಕಲಾಶೇಷಶ್ಚಂದ್ರಃ ಸುರತಮೃದಿತಾ ಬಾಲವನಿತಾ
ಸನಿಮ್ನಾ ಶೋಭಂತೇ ಗಲಿತವಿಭವಾಶ್ಚಾರ್ಥಿಷು ನರಾಃ ||

मणिः शणोल्लीढः समरविजयी हेतिदलितो
मदक्षीबो नागः शरदि सरिताश्यानपुलिना ।
कलाशेषश्चन्द्रः सुरतमृदिता बालवनिता
सनिम्ना शोभन्ते गलितविभवाश्चार्थिषु नराः ॥

-ಹಂಸಾನಂದಿ

ಮಾತು ಎನ್ನುವ ಒಂದೇ ಒಡವೆ

ಹೊಳೆವ ಕಡಗಗಳು ಚಂದಿರನ ಹೊಳಪಿರುವ ಹಾರಗಳು
ಸ್ನಾನವು ಪೂಸಿರುವ ಲೇಪಗಳು ಮುಡಿದಿರುವ ಹೂವುಗಳು
ಇವು ಅಲ್ಲ ಒಡವೆಗಳು! ನಿನಗಿರಲು ನಲ್ನುಡಿಯ ನಾಲಿಗೆಯು
ಮಾತಿನೊಡವೆಯ ಮುಂದುಳಿದೊಡವೆಗಳು ಸೊರಗುವುವು


ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ
ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ |
ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ
ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ ||

(ಮೂಲದಲ್ಲಿರುವ ಉತ್ತಮ ಪುರುಷ -third person, ಕನ್ನಡಿಸುವಾಗ ಮಧ್ಯಮ ಪುರುಷ ವಾಗಿ ಮಾರ್ಪಡಿಸಿರುವೆ. ಅದುಳಿದು ಉಳಿದದ್ದೆಲ್ಲ ಹಾಗೇ ಇದೆ)

-ಹಂಸಾನಂದಿ

ಅಡಿಗೆಯಲ್ಲೇಕೆ ಕೀಳರಿಮೆ?

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಇವತ್ತು ಕಾಲ ಬಂತು!

ನಮಗ್ಯಾಕೆ ನಮ್ಮ ಅಡಿಗೆ ಊಟದ ಬಗ್ಗೆ ಕೀಳರಿಮೆ ಇರ್ಬೇಕು? ಬೆಂಗಳೂರಲ್ಲಿ, ಮೈಸೂರಲ್ಲಿ ಮಾಡುವ ಎಂಟಿಆರ್, ಆರ್ಕೇ ಮೊದ್ಲಾದವರ ಇನ್ಸ್ಟಾಂಟ್ ಪ್ರಾಡಕ್ಟ್ ಗಳನ್ನ ನೋಡಿ - ಅದು ಯಾಕೆ ’ರವಾ ಇಡ್ಲಿ ಮಿಕ್ಸ್’ ’ರವಾ ದೋಸಾ ಮಿಕ್ಸ್’ ’ರಸಂ ಪೌಡರ್’ ’ಇನ್ಸ್ಟಾಂಟ್ ಉಪ್ಮ’ ’ಮುರುಕು’ ಆಗಿರ್ಬೇಕು? ರವೆ ಇಡ್ಲಿ, ರವೆ ದೋಸೆ, ಸಾರಿನ ಪುಡಿ, ಹುಳೀ ಪುಡಿ, ಚಕ್ಲಿ ಅಂತ ಯಾಕಿರ್ಬಾರ್ದು? ಒಂದು ಕಡೆ ಅಂತೂ ಕೋಡುಬಳೆಗೆ ’spicy rice rings' ಅಂತಲೋ ಏನೋ ಬರೆದಿದ್ದನ್ನ ನೋಡಿದ್ದೆ! ಗುಜರಾತಿಗಳು ಅವರ ಡೋಕ್ಲಾನ ಮಾರೋವಾಗ ಡೋಕ್ಲಾ ಅಂತ್ಲೇ ಬರೀತಾರೆ. ಮಲಯಾಳಿಗಳು ಅವರ ಪುಟ್ಟು ನ ಪುಟ್ಟು ಅಂತ್ಲೇ ಕರೀತಾರೆ. ಅಂತಾದ್ರಲ್ಲಿ ನಮ್ಮ ಗೊಜ್ಜು, ಪಲ್ಯ, ಒಬ್ಬಟ್ಟು, ಕೋಡ್ಬಳೇನಾ ಹಾಗೇ ಬರೆಯೋಕೆ, ಹಾಗೇ ಪ್ರಚಾರ ಮಾಡೋಕೆ ನಮಗ್ಯಾಕೆ ಆಗ್ಬಾರ್ದು?

ಬೆಂಗಳೂರಲ್ಲಿ ಎಷ್ಟೋ ಕಡೆ ಮುದ್ದೆ ಊಟ ಸಿಗೋ ಜಾಗಗಳಲ್ಲಿ 'Ragi Balls Available' ಅಂತ ಬರೆದಿರತ್ತೆ. ಇದಕ್ಕೂ ಅಪದ್ಧ ಬೇಕಾ? ಮುದ್ದೆಯ ಸವಿ ಗೊತ್ತಿದ್ದು ಅದನ್ನ ತಿನ್ನಕ್ಕೆ ಬರೋವ್ರಿಗೆ ’ರಾಗಿ ಮುದ್ದೆ’ ಅಂತ (ಲಿಪಿ ಯಾವುದೇ ಇರಲಿ) ಬರೆದ್ರೆ ಸಾಲೋದಿಲ್ವಾ?

ಇನ್ನು ಹೊಸ ರುಚಿ ವಿಭಾಗ - ಟಿವಿಯಲ್ಲಿ ತೋರಿಸೋ ಅಡಿಗೆಗಳು, ಕೆಲವು ಮಟ್ಟಿಗೆ ಪ್ರಿಂಟ್ ಮೀಡಿಯಾದಲ್ಲೂ - ಅದನ್ನ ಕೇಳ್ಲೇ ಬೇಡಿ. ಅಡುಗೆ ಮಾಡಿ ತೋರಿಸ್ತಿರೋದು ಕನ್ನಡ…

ಗೆಳೆತನ

ಬಲವುಳ್ಳವರ ಗೆಳೆತನವೋ
ಬಲವಿರುವವರಿಗೇ ಮೀಸಲು;
ದೀಪವಾರಿಸುವ ಗಾಳಿರಾಯ
ಕಾಳ್ಗಿಚ್ಚನು ಪುಟಗೊಳಿಸುವನು!

ಸಂಸ್ಕೃತ ಮೂಲ:

ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ|
ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ ||

ಆರದ ಗಾಯ

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.


ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

ಪಾಣಿನಿಯ ತಪ್ಪು

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!

ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!


ಸಂಸ್ಸ್ಕೃತ ಮೂಲ (ಧರ್ಮಕೀರ್ತಿ) :

ನಪುಂಸಕಮಿತಿ ಜ್ಞಾತ್ವಾ ತಾಂ ಪ್ರತಿ ಪ್ರೇಷಿತಂ ಮಯಾ|
ಮನಸ್ ತತ್ರೈವ ರಮತೇ ಹತಾಃ ಪಾಣಿನಿನಾ ವಯಮ್

(ಈ ಅನುವಾದಕ್ಕೆ ಹೊಳವು ಕೊಟ್ಟಿದ್ದು ಅನಿವಾಸಿಯವರ ಈ ಬರಹಗಳು:

http://www.sampada.net/blog/anivaasi/22/04/2009/19421

http://anivaasi.wordpress.com/2009/04/22/%E0%B2%AE%E0%B2%A8%E0%B2%A6%E0%...)

-ಹಂಸಾನಂದಿ

ಬೊಗಸೆಯ ಹೂವುಗಳು

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

-ಹಂಸಾನಂದಿ

ಎರಡು ಕಣ್ಣು ಒಂದು ನಾಲಗೆ

ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!

ಸಂಸ್ಕೃತ ಮೂಲ:

ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ |
ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿತಾ ||

-ಹಂಸಾನಂದಿ

ಬಸಂತ್ ಮುಖಾರಿ

ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು. ಇವತ್ತು ಇಲ್ಲಿ ಕನ್ನಡಕೂಟದ ಕಾರ್ಯಕ್ರಮದಲ್ಲಿ ವಸಂತ ರಾಗದಲ್ಲಿ ಕೊಳಲು ಜುಗಲ್ಬಂದಿ ಅಂತಲೂ ನೋಡ್ದೆ, ಆದ್ರೆ ಇವತ್ತು ಬೇರೆ ಕೆಲಸ ಇರೋದ್ರಿಂದ ನಾನು ಕನ್ನಡಕೂಟದ ವಸಂತೋತ್ಸವ ಕಾರ್ಯಕ್ರಮಕ್ಕೆ ಚಕ್ಕರ್ ಹಾಕ್ಬೇಕಾಯ್ತು.

ಆದ್ರೆ ಹಿಂದೂಸ್ತಾನಿ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ವಸಂತಕ್ಕೆ ತೀರಾ ಹತ್ತಿರವಾದ ರಾಗ ಯಾವ್ದೂ ಇಲ್ಲವಲ್ಲ? ಬಸಂತ್ ರಾಗ ಹೆಸರಿನಲ್ಲಿ ಹತ್ತಿರವಾಗಿದ್ರೂ ರಾಗದ ಸ್ವರಗಳಲ್ಲಾಗಲೀ ಚಲನೆಯಲ್ಲಾಗಲೀ ಹತ್ತಿರವಿಲ್ಲ. ಇನ್ನು ಹಿಂದೂಸ್ತಾನಿಯ ಭಿನ್ನಷಡ್ಜ ರಾಗಕ್ಕೂ, ದಕ್ಷಿಣಾದಿಯ ವಸಂತಕ್ಕೂ ಸ್ವಲ್ಪ ಹೋಲಿಕೆ ಇದ್ದರೂ ಪೂರ್ತಿ ಒಂದೇ ಇಲ್ಲ. ಇರಲಿ, ಯಾವ ರಾಗ ನುಡಿಸಿದರು ಅಂತ ಆಮೇಲೆ ತಿಳ್ಕೊಂಡ್ರಾಯ್ತು.

ಆದ್ರೆ ವಸಂತ ಅನ್ನೋ ಹೆಸರು ಬರುವಂತಹ ದಕ್ಷಿಣಾದಿಯ ರಾಗಗಳು ಹಲವು ಇವೆ. ಹಿಂದೋಳ ವಸಂತ, ಶುದ್ಧವಸಂತ, ವಸಂತ ವರಾಳಿ, ವಸಂತ ಭೈರವಿ ಹೀಗೆ. ಇವುಗಳಲ್ಲಿ ವಸಂತ ಭೈರವಿ ಅನ್ನುವುದು ಸ್ವಲ್ಪ ಹಳೆಯ ರಾಗ. ಹದಿನಾಕು ಹದಿನೈದನೇ ಶತಮಾನದಲ್ಲಿ ಪ್ರಸಿದ್ಧವಾಗಿದ್ದ ರಾಗವೇ.
ವಿಜಯನಗರದ ಅಳಿಯ ರಾಮರಾಯನ ಕಾಲದಲ್ಲಿದ್ದ ರಾಮಾಮಾತ್ಯ ವಸಂತ ಭೈರವಿಯನ್ನ ಒಂದು ಮೇಳವಾಗಿಯೂ, ರಾಗವಾಗಿಯೂ ಹೇಳುತ್ತಾನೆ. ಅಂದಿನಿಂದ ಈ ರಾಗ ದಕ್ಷಿಣಾದಿ ಸಂಗೀತದಲ್ಲಿ ಹೆಚ್ಚಾಗಿ ಬದಲಾವಣೆಗಳ…

ಮತ್ತೊಂದು ಗ್ರಹಕೂಟ

Image
ಬರುವ ವಾರ ಚಂದ್ರ ಶುಕ್ರ ಮಂಗಳ ಗಳ ಯುತಿ, ಅಂದ್ರೆ ಕಂಜಂಕ್ಷನ್ ಇದೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಇದು.ಇಲ್ಲಿ ಹಾಕಿರೋ ಚಿತ್ರದಲ್ಲಿ ಹಳದಿ ಚುಕ್ಕೆಗಳಿಂದಾದ ಗೆರೆಯೇ ಕ್ರಾಂತಿವೃತ್ತ (ecliptic). ಅಂದ್ರೆ, ಆಕಾಶದಲ್ಲಿ ಸೂರ್ಯ ಹೋಗೋ ದಾರಿ ಅಂದ್ಕೊಳಿ. ಏಪ್ರಿಲ್ ೨೩ ರ ದಿನ ಸೂರ್ಯ ಎಲ್ಲಿರ್ತಾನೆ ಅನ್ನೋದನ್ ಚಿತ್ರದಲ್ಲಿ ನೋಡಿ. ಸೂರ್ಯ ಕಂಡಮೇಲೆ,ನೀವು ಆಕಾಶದಲ್ಲಿ ನೋಡೋದೇನು ಬಂತು? ಸೂರ್ಯನ್ನ ಬಿಟ್ಟು, ಅಲ್ವಾ? ಆದ್ರೆ ಸೂರ್ಯನ್ನ ತೋರ್ಸಿರೋದು ಯಾಕೆ ಅಂದ್ರೆ, ಈ ಗ್ರಹಗಳಕೂಟವನ್ನ ಯಾವಾಗ ನೋಡ್ಬೇಕು ಅನ್ನೋ ಅಂದಾಜು ಬರೋದಕ್ಕೆ. ಹಾಗೇ ಚಿತ್ರದಲ್ಲಿ ಸ್ವಲ್ಪ ಮೇಲೆ ಹೋದ್ರೆ, ನಿಮಗೆ ಶುಕ್ರ(Venus), ಮಂಗಳ (Mars), ಮತ್ತೆ ಚಂದ್ರ - ಈ ಮೂವರೂ ಎಲ್ಲಿರ್ತಾರೆ ಅನ್ನೋದೂ ಕಾಣತ್ತೆ. ಸೂರ್ಯನಿಗೂ, ಈ ಮೂವರಿಗೂ ಸುಮಾರಾಗಿ ಎರಡು ಅಡ್ಡ ಗೆರೆಗಳ ಅಂತರ ಇದೆ. ಪ್ರತಿಯೊಂದು ಅಡ್ಡಸಾಲೂ ಹದಿನೈದು ಡಿಗ್ರಿ, ಅಥವಾ ಒಂದು ಗಂಟೆ ಸಮಯ ಸೂಚಿಸುತ್ತೆ. ಅಂದರೆ, ಈ ಮೂರೂ ಹುಟ್ಟೋದು ಸೂರ್ಯ ಹುಟ್ಟೋ ಸುಮಾರ ೨ ಗಂಟೆ ಮೊದಲು. ಆದ್ರೆ, ಸಾಧಾರಣವಾಗಿ ದಿಗಂತದಲ್ಲಿ ಯಾವಾಗ್ಲೂ ಸ್ವಲ್ಪ ಮೋಡ್ವೋ ಗೀಡ್ವೋ ಇರತ್ತಲ್ಲ. ಹಾಗಾಗಿ, ಸೂರ್ಯ ಹುಟ್ಟೋಕೆ ಸುಮಾರು ಒಂದು ಗಂಟೆಯಿಂದ ಮುಕ್ಕಾಲು ಗಂಟೆಯ ನಡುವೆ ಇವುಗಳನ್ನ ನೋಡೋ ಅವಕಾಶ ಇರತ್ತೆ. ಇನ್ನೊಂದ್ ವಿಷಯ ಇದು ಅಮಾವಾಸ್ಯೆಗೆ ತೀರಾ ಹತ್ತಿರವಾಗಿರೋದ್ರಿಂದ, ಚಂದ್ರ ಕಾಣೋದು ಸ್ವಲ್ಪ ಕಷ್ಟವೇ! ಬೇಜಾರ್ಮಾಡ…

ಏಲಾವತಾರಮೆತ್ತಿತಿವೋ?

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ. ವಿಸ್ತರಿಸಲು ಕೃಷ್ಣ ಮುಖಾರಿ ರಾಗವನ್ನು ತೆಗೆದುಕೊಂಡಿದ್ದರು. ಎಷ್ಟೋ ಜನ ಸ್ವಲ್ಪ ಸಂಗೀತದ ತಿಳಿವು ಇರುವವರೂ ಮುಖಾರಿ ರಾಗ ಶೋಕರಸದ ರಾಗ ಅಂದುಕೊಂಡಿರ್ತಾರೆ. ಆದ್ರೆ ಅದು ಅಷ್ಟು ಸರಿ ಇಲ್ಲ. ಕೆಲವು ಸಂಚಾರಗಳಲ್ಲಿ ಶೋಕವನ್ನು ವ್ಯಕ್ತ ಪಡಿಸಬಹುದಾದರೂ, ಈ ರಾಗದ ಮುಖ್ಯ ರಸ ಅದ್ಭುತ ಅಥವಾ ಅಚ್ಚರಿ ಅನ್ನುವುದು ಸರಿ. ತ್ಯಾಗರಾಜರ ಮುಖಾರಿ ರಾಗದ ಹಲವು ರಚನೆಗಳನ್ನು ಗಮನಿಸಿದಾಗ, ಈ ವಿಷಯ ಸ್ಪಷ್ಟವಾಗುತ್ತೆ. ಉದಾಹರಣೆಗೆ ಇವತ್ತು ಕೃಷ್ಣ ಅವರು ಹಾಡಿದ ಏಲಾವತಾರಮೆತ್ತಿತಿವೋ? ಎನ್ನುವ ರಚನೆ. ಅದರಲ್ಲಿ ರಾಮಭಕ್ತ ತ್ಯಾಗರಾಜರು ಈ ರಾಮ ಎಂಬುವನು ಭೂಮಿಯ ಮೇಲೆ ಏಕೆ ಅವತಾರ ಎತ್ತಿರಬಹುದು ಅನ್ನುವ ಪ್ರಶ್ನೆಗೆ ತಮ್ಮ ಉತ್ತರವನ್ನು ಕಂಡುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ತಮಗೇ ಹಾಕಿಕೊಳ್ಳುತ್ತಾರೆ. ಅದೇ ಗುಂಗಿನಲ್ಲಿ ಮನೆಗೆ ಬಂದಮೇಲೆ, ಆ ರಚನೆಯನ್ನು ಕನ್ನಡಿಸಬೇಕೆನಿಸಿ, ಹೀಗೆ ಅನುವಾದಿಸಿದೆ: ಏನಕವತಾರವನೆತ್ತಿದೆಯೋ?
ಏನದು ಕಾರಣವೋ? ರಾಮನೆಂ||ದೇನಕವತಾರವನೆತ್ತಿದೆಯೋ?|| ಕಾಳಗವನು ಮಾಡಲಿಕೋ? ಅಯೋಧ್ಯಾ
ಪಾಲನವ ಮಾಡಲಿಕೋ? ರಾಘವ ನೀ || ನೇನಕವತಾರವನೆತ್ತಿದೆಯೋ?|| ಯೋಗಿಗಳಿಗೆ ಕಾಣಿಸಲಿಕೋ? ಭವ
ರೋಗಗಳ ದೂಡಲಿಕೋ? ಶತ
ರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗ
ರ…

ಕಾಲವನ್ನು ತಡೆಯೋರು ಯಾರೂ ಇಲ್ಲ!

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗಿಸ್ಬೇಕ್ ಅವಾವಾಗ್ಲೇ
ಕಾಲವನ್ನ ತಡೆಯೋರಿಲ್ಲ!

ಸಂಸ್ಕೃತ ಮೂಲ ( ಮಹಾಭಾರತ, ಸಭಾಪರ್ವ ೫೬-೧೦ )

ಸ ವ್ಯಾಧಯೋ ನಾಪಿ ಯಮಃ ಪ್ರಾಪ್ತುಂ ಶ್ರೇಯಃ ಪ್ರತೀಕ್ಷತೇ|
ಯಾವದೇವ ಭವೇತ್ ಕಲ್ಪಸ್ತಾವಚ್ಛ್ರೇಯಂ ಸಮಾಚರೇತ್ ||

-ಹಂಸಾನಂದಿ

ಧನ್ಯವಾದ ಸಮರ್ಪಣೆ

ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರಿಗೂ ನನ್ನ ಧನ್ಯವಾದಗಳು. ಈ ಸಂದರ್ಭದಲ್ಲಿ ಇನ್ನೊಬ್ಬರು ಮಹನೀಯರನ್ನು ನಾನು ನೆನೆಯಲೇ ಬೇಕು. ಅವರೇ ಟೊರಾಂಟೋನಲ್ಲಿರುವ ಶ್ರೀ ಲಕ್ಷ್ಮಣ್. ನಾವು ತಿದ್ದುಪಡಿ ಮಾಡಿ ಇಲ್ಲಿ ಹಾಕಲು ಉಪಯೋಗಿಸಿದ್ದು ಅವರು ಕೊಟ್ಟ ಇ-ಟೆಕ್ಸ್ಟ್. ಸಂಗೀತ ರಚನೆಗಳ ಬಗ್ಗೆ ಅತೀವ ಆಸಕ್ತರಾದ ಅವರು ಕರ್ನಾಟಕ ಸಂಗೀತದಲ್ಲಿ ಹಾಡುವ ಹಾಡಿರಬಹುದಾದ, ಹಾಡಬಹುದಾದ ಸಾವಿರಾರು ರಚನೆಗಳನ್ನು e-text ಆಗಿ ತಂದಿದ್ದ್ದಾರೆ. ಶ್ರೀ ಲಕ್ಷ್ಮಣ್ ಅವರು ಕೊಟ್ಟ ದಾಸರ ಹಾಡುಗಳ ಡೇಟಾಬೇಸ್ ಇಂಗ್ಲಿಷ್ ಲಿಪಿಯಲ್ಲಿತ್ತು. ಮತ್ತು ಲಕ್ಷ್ಮಣ್ ಅವರಿಗೆ ಸ್ವತಃ ಕನ್ನಡ ಬರದಿರುವ ಕಾರಣ ಕೆಲವು ತಪ್ಪುಗಳೂ ನುಸುಳಿದ್ದವು. ಆದರೆ, ಈ ಇ-ಟೆಕ್ಸ್ಟ್ ಇದ್ದಿದ್ದರಿಂದ ಕನ್ನಡದಲ್ಲಿ ಟೈಪಿಸುವ ಕೆಲಸ ಎಷ್ಟೋ ಮಟ್ಟಿಗೆ ಸುಲಭವಾಯಿತು ಅಂತ ಹೇಳಬೇಕು. ಇದರ ಬಗ್ಗೆ ಇನ್ನೊಂದುಚೂರು ವಿವರವಾಗಿ ಇಲ್ಲಿ ಬರೆದಿರುವೆ - ಆಸಕ್ತರು ನೋಡಬಹುದು: http://neelanjana.wordpress.com/2009/04/06/thanksgiving-in-april/

ರಾಮನವಮಿಯ ಸಮಯಕ್ಕೆ ಒಂದು ಮಂಗಳ ಸುಳಾದಿ

Image
ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನು ವಿವರಿಸೋಣ ಎನ್ನಿಸಿತು.ಸುಳಾದಿ ಎನ್ನುವುದು ಕರ್ನಾಟಕದ ಹರಿದಾಸರು ಪ್ರಚಾರ ಪಡಿಸಿದ ಒಂದು ಸಂಗೀತ ರಚನಾ ಪ್ರಕಾರ. ಈ ಪದ ಬಂದದ್ದು ಹೇಗೆಂಬ ಜಿಜ್ಞಾಸೆ ಇನ್ನೊಮ್ಮೆ ಮಾಡಬಹುದು. ಆದರೆ, ಸುಳಾದಿಯ ರಚನೆ ಹೇಗಿರುತ್ತೆ ಅನ್ನುವುದನ್ನು ಮಾತ್ರ ಹೇಳುವೆ.

ಸುಳಾದಿ ಎನ್ನುವುದು ಬೇರೆಬೇರೆ ತಾಳಗಳಲ್ಲಿ ರಚಿತವಾಗಿರುವಂತಹ ಒಂದು ತಾಳಮಾಲಿಕೆ. ಸುಳಾದಿಗಳನ್ನು ಹಾಡುವಾಗ ಏಳು ತಾಳಗಳನ್ನು ಉಪಯೋಗಿಸುತ್ತಿದ್ದಿದ್ದರಿಂದ, ಆ ಏಳು ತಾಳಗಳೂ ಸುಳಾದಿ ಸಪ್ತತಾಳಗಳು ಎಂದೇ ಹೆಸರಾಗಿವೆ. ಧ್ರುವ, ಮಠ್ಯ(ಮಟ್ಟೆ), ರೂಪಕ, ಜಂಪೆ(ಜಂಪಟ, ಜೊಂಪಟ,ಝಂಪ), ತ್ರಿಪುಟ (ತ್ರಿವಿಡೆ), ಅಟ್ಟ(ಅಡ), ಮತ್ತು ಏಕ - ಇವೇ ಈ ಏಳು ತಾಳಗಳು. ಸುಳಾದಿಗಳಲ್ಲಿ ಸಾಧಾರಣವಾಗಿ ಏಳಾದರೂ ಖಂಡ(ಭಾಗ)ಗಳಿದ್ದು, ಒಂದೊಂದು ಖಂಡವೂ ಒಂದೊಂದು ತಾಳದಲ್ಲಿರುತ್ತವೆ. ಹೆಚ್ಚು ಖಂಡಗಳಿದ್ದಾಗ, ಒಂದೇ ತಾಳದಲ್ಲಿ ಒಂದಕ್ಕಿಂತ ಹೆಚ್ಚಿನ ಖಂಡಗಳಿರಬಹುದು. ಕಡಿಮೆಯಿದ್ದಾಗ, ಎಲ್ಲ ತಾಳಗಳೂ ಒಂದು ರಚನೆಯಲ್ಲಿ ಇರದೇ ಹೋಗಬಹುದು. ಕೆಲವು ಸುಳಾದಿಗಳಲ್ಲಿ ಆದಿತಾಳ (ಒಂದು ಬಗೆಯ ತ್ರಿಪುಟತಾಳ)ದ ಬಳಕೆಯೂ ಆಗಿದೆ. ಸುಳಾದಿಯ ಕೊನೆಯಲ್ಲಿ ಜೊತೆ(ಜತೆ) ಎಂದು ಕರೆಯುವ ಎರಡು ಸಾಲುಗಳಿದ್ದು ಅದು, ಸುಳಾದಿಯ ಮುಖ್ಯ ಅಂಶವನ್ನು ತೋರುವಂತಿರುತ್ತದೆ.

ಸುಳಾದಿಗಳು…

ಕತ್ತಿಯಲುಗಿನ ಮೇಲೆ ನಡಿಗೆ

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ
ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ
ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ
ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ?

ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ

ಪ್ರದಾನಂ ಪ್ರಚ್ಛನ್ನಂ ಗೃಹಮುಪಗತೇ ಸಂಭ್ರಮವಿಧಿಃ
ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇ |
ಅನುತ್ಸೇಕೋ ಲಕ್ಷ್ಮ್ಯಾಂ ನಿರಭಿಭವಸಾರಾಃ ಪರಕಥಾಃ
ಸತಾಂ ಕೇನೋದ್ದಿಷ್ಟಂ ವಿಷಮಮಸಿಧಾರಾ ವ್ರತಮಿದಮ್ ||

-ಹಂಸಾನಂದಿ

ಮೌನವೆಂಬ ಒಡವೆ

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳ್ಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ

ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಸ್ವಾಯತ್ತಮೇಕಾಂತ ಗುಣಂ ವಿಧಾತಾ
ವಿನಿರ್ಮಿತಂ ಛಾದನಮಜ್ಞತಾಯಾಃ
ವಿಶೇಷತಃ ಸರ್ವವಿದಾಂ ಸಮಾಜೇ
ವಿಭೂಷಣಂ ಮೌನಮಪಂಡಿತಾನಾಮ್ ||

-ಹಂಸಾನಂದಿ

ಬೆಲೆಯಿರದ ನಿಧಿ

ಹೊತ್ತಿಗೆಯೊಳಗೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ

-ಹಂಸಾನಂದಿ
(ಈ ಸುಭಾಷಿತವನ್ನು ನೆನಪಿಸಿದ ಡಾ.ಕೇಶವ ಕುಲಕರ್ಣಿ ಅವರಿಗೆ ಧನ್ಯವಾದಗಳು)

ಬ್ಲಾಗಿಗೆ ಮರುಳಾದೆಯಾ? ಮನವೇ?

(ಕನ್ನಡ ಬ್ಲಾಗಿಗರ ಕೂಟದ ಬಗ್ಗೆ ಅಶೋಕ್ ಅವರು ನೆನ್ನೆ ಬರೆದಿದ್ದರು. ಅಲ್ಲಿ ನಾನೂ ಒಬ್ಬ ಸದಸ್ಯ. ಅದನ್ನು ನಡೆಸುತ್ತಿರುವವರು ನಿಮ್ಮ ಮೆಚ್ಚಿನ ಬ್ಲಾಗಿನ ಬಗ್ಗೆ ಸ್ವಲ್ಪ ಬರೀರಿ ಅಂತ ಎಲ್ಲರಿಗೂ ಸೇರಿಸಿ ಕರೆಕೊಟ್ಟಿದ್ದರು. ಅದಕ್ಕೆ ನಾನು ಬರೆದ ಉತ್ತರವನ್ನ ಇವತ್ತು ಕನ್ನಡ ಬ್ಲಾಗರ್ಸ್ ಪುಟದಲ್ಲಿ (http://kannadablogs.ning.com/) ಹಾಕಿದಾರೆ. ಅದನ್ನೇ ಇಲ್ಲಿ ಕತ್ತರಿಸಿ ಅಂಟಿಸಿರುವೆ. - ಹಂಸಾನಂದಿ)

====================================================================================

ಸ್ವಾಮೀ,

ನೀವು ಬರೀರಿ ಅಂದ್ರಿ. ನಾನು ಬರ್ದಿದೀನಿ. ಆದ್ರೆ ಈ ಪಾಟಿ ಒಳ್ಳೊಳ್ಳೇ ಬ್ಲಾಗುಗಳಿರೋವಾಗ ನೀವು ಒಂದು ಮೆಚ್ಚಿದ ಬ್ಲಾಗ್ ಬಗ್ಗೆ ಬರೀರಿ ಅನ್ನೋದು ಬರೀ ಮೋಸ ಅಂತೀನಿ ನಾನು.

ಆದ್ರೆ ಒಂದರ ಬಗ್ಗೆ ಬರೆಯೋದು ಅಷ್ಟು ಸುಲಭ ಅಲ್ವೇ ಅಲ್ಲ. ಅದಕ್ಕೇ ನನ್ನ ಮನಸ್ಸಿಗೆ ಹಿಡಿಸಿದ ಕೆಲವನ್ನು ಸೇರಿಸಿ ಈ ಹಾಡು. ಈ ಹಾಡಲ್ಲಿ ಇಲ್ಲದಿರೋ ಎಷ್ಟೋ ಬ್ಲಾಗುಗಳೂ ನನಗೆ ಮೆಚ್ಚುಗೆಯಾಗಿವೆ. ಆದ್ರೆ , ಹಾಡಿಗೆ ಮೂರು ಚರಣಕ್ಕಿಂತ ಹೆಚ್ಚಿದ್ರೆ ಚೆನ್ನಾಗಿರೋದಿಲ್ಲ ಅನ್ನಿಸ್ತು. ಅದಕ್ಕೇ ಅಷ್ಟಕ್ಕೇ ಬ್ರೇಕ್ ಹಾಕ್ದೆ.

ಪುರಂದರ ದಾಸರ ಕ್ಷೀರಾಬ್ದಿ ಕನ್ನಿಕೆ ಶ್ರೀಮಹಾಲಕುಮಿ ಯಾರಿಗೆ ವಧುವಾಗುವೆ ಧಾಟಿಯಲ್ಲಿ ಓದಿಕೊಳ್ಳಿ - ದಾಸಶ್ರೇಷ್ಠರ ಕ್ಷಮೆ ನಾನೇನೂ ಕೋರುತ್ತಿಲ್ಲ. ಯಾಕಂದ್ರೆ ಅವರು ದಯಾನಿಧಿಗಳಲ್ವೇ ? ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿ…

ಮನವ ಕಸಿವ ಗುರು

ಕಲಿಸುವವರು ಹಲವರಿಹರು
ಕಲಿಯುವರ ಹಣವ ಕಸಿವರು;
ಬಲು ವಿರಳವದು ದೊರಕುವುದು
ಕಲಿವರ ಮನವ ಕಸಿವ ಗುರು!

ಸಂಸ್ಕೃತ ಮೂಲ:

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |
ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ ||

ಹಿರಿಯರ ಸಿರಿ

ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ?
ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ?
ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ?
ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ!

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

ರತ್ನಾಕರಃ ಕಿಂ ಕುರುತೇ ಸ್ವರತ್ನೈಃ
ವಿಂಧ್ಯಾಚಲಃ ಕಿಂ ಕರಿಭಿಃ ಕರೋತಿ |
ಶ್ರೀಗಂಧಖಂಡೈಃ ಮಲಯಾಚಲಂ ಕಿಂ
ಪರೋಪಕಾರಾಯ ಸತಾಂ ವಿಭೂತಯಃ ||

(ಕೊಸರು: ಮೂಲದಲ್ಲಿಲ್ಲದ ಕೆಲವು ವಾಕ್ಯರಚನೆಯನ್ನು ನಾನು ಅನುವಾದದಲ್ಲಿ ಬಳಸಿದೆನಾದರೂ, ಮೂಲದ ಆಶಯಕ್ಕೆ ಧಕ್ಕೆ ತಂದಿಲ್ಲ ಎಂದುಕೊಂಡಿರುವೆ :)

ಗಂಧದ ಜೊತೆಗೆ ಗುದ್ದಾಟವೂ ಲೇಸು

ಕೂರೋದೊಳ್ಳೇದ್ ತಕ್ಕೋರ್ಜೊತೆಗೆ
ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ
ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ
ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ

ಸಂಸ್ಕೃತ ಮೂಲ:

ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |
ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||

(ಈ ಸುಭಾಷಿತವನ್ನು ತೋರಿಸ್ಕೊಟ್ಟ ಡಾ.ಕೇಶವ ಕುಲ್ಕರ್ಣಿ ಅವ್ರಿಗೆ ಧನ್ಯವಾದಗಳು :) - ಈ ಮೊದ್ಲು ನಾನಿದನ್ಕೇಳಿರ್ಲಿಲ್ಲ)

ಹಾವ ತಿಂಬವರು

ಬೇಡ ಹಗೆ ಬಲು ಜನರೊಡನೆ
ತೊಡಕು ಗೆಲುವುದು ಗುಂಪನ್ನು;
ಕಟ್ಟಿರುವೆಗಳು ಕಚ್ಚಿ ತಿನಬಹುದು
ಹೆಡೆ ಭುಸುಗುಡುತಿಹ ಹಾವನ್ನೂ!

ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ

ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ

-ಹಂಸಾನಂದಿ

ಹೊಸತೋ? ಹಳತೋ?

ಹಳತೆಂಬ ಕಾರಣಕೆ ಒಳಿತಾಗಬೇಕಿಲ್ಲ
ಹೊಸತಿದು ಎಂಬುದಕೆ ಹೊರದೂಡಬೇಕಿಲ್ಲ
ಅರಿತವರು ಒರೆಗಿರಿಸಿ ಬಳಿಕ ಹೊಗಳುವರು
ಮರುಳರವರಿವರಮಾತ ತಲೆಗೇರಿಸುವರು

ಸಂಸ್ಕೃತ ಮೂಲ - ಕಾಳಿದಾಸನ ಮಾಲವಿಕಾಗ್ನಿಮಿತ್ರದಿಂದ:

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇನಬುದ್ಧಿಃ ||

ಕೊಸರು: ಇದು ಬರೆಯುವಾಗಲೇ, ಈ ಪದ್ಯವನ್ನು ಮೊದಲೇ ಅನುವಾದಿಸಿದ್ದೆನೇನೋ ಎನ್ನಿಸಿತು. ಹೇಗಾದರಾಗಲೆಂದು ಬರೆದು ಹಾಕಿದ ಮೇಲೆ, ಅದು ನಿಜವೆನ್ನುವುದು ಖಾತ್ರಿಯಾಯಿತು. ಇರಲಿ, ಪರವಾಗಿಲ್ಲ ಅಂತ ಹಾಗೇ ಇಟ್ಟೆ. ಆ ಪದ್ಯವನ್ನು ನೋಡಲು ಕೆಳಗಿನ ಕಾಳಿದಾಸ ಅನ್ನುವ ಲೇಬಲ್ ಅನ್ನು ಚಿಟಕಿಸಿ.

ಗೆಜ್ಜೆಯ ದನಿ

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು ಕಾಲಂದುಗೆಯ ನಲುದನಿಯ ತೆರದಿಸಂಸ್ಕೃತ ಮೂಲ:

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ
ಹರಂತಿ ಸಂತೋ ಮಣಿನೂಪುರಾ ಇವ ||

-ಹಂಸಾನಂದಿ

ಅಹಿರ್ ಭೈರವ್

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ.

ಈಗ ಈ ರಾಗದಲ್ಲಿ ಒಂದು ಒಳ್ಳೇ ತಿಲ್ಲಾನವನ್ನು ನೋಡಿ - ಡಾ.ಬಾಲಮುರಳಿಕೃಷ್ಣ ಅವರ ರಚನೆ.ಇದು ಹಿಂದೂಸ್ತಾನಿ ಸಂಗೀತದಿಂದ ಈಚೀಚೆಗೆ ಕರ್ನಾಟಕ ಸಂಗೀತದಲ್ಲಿ ಬಳಕೆಯಾಗುತ್ತಿರುವ ರಾಗವಾದ್ದರಿಂದ, ಇದರಲ್ಲಿ ಹೆಚ್ಚಾಗಿ ಚಿಕ್ಕ ರಚನೆಗಳು - ವಚನ-ದೇವರನಾಮ-ಭಜನ್ ಇಂತಹವುಗಳನ್ನು ಮಾತ್ರ ಹಾಡುವ ರೂಢಿ ಹೆಚ್ಚು.

ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಚಿತ್ರ ಗೀತೆಯನ್ನು ಕೇಳಿ - ಡಾ.ರಾಜ್ ಮತ್ತು ಬೆಂಗಳೂರು ಲತಾ ಅವರ ಧ್ವನಿಯಲ್ಲಿ:ಕರ್ನಾಟಕ ಸಂಗೀತದಲ್ಲಿ ಇನ್ನೊಂದು ರಾಗ ಇದಕ್ಕೆ ಹೋಲುವಂತೆ ಇದೆ - ಅದು ಬಿಂದುಮಾಲಿನಿ ಅನ್ನುವ ರಾಗ. ತ್ಯಾಗರಾಜರ ಎಂತ ಮುದ್ದೋ ಎಂತ ಸೊಗಸೋ ಎಂಬ ರಚನೆ ಈ ರಾಗದಲ್ಲಿ ಪ್ರಸಿದ್ಧವಾಗಿದೆ. ಇದರ ಹಲವು ಸಂಚಾರಗಳು ಅಹಿರ್ ಭೈರವ್ ಅನ್ನು ಹೋಲುತ್ತವೆ.

ಒಂದು ಮುದ್ರಿಕೆ ನೋಡಿ - ಇದು ಸುಮಾರು ೨೫ ವರ್ಷಗಳ ಹಿಂದಿನದ್ದಿರಬಹುದು. ಯು.ಶ್ರೀನಿವಾಸ್ - ಆಗ ಮಾಸ್ಟರ್ ಯು.ಶ್ರೀನಿವಾಸ್ ಅಂತಿದ್ದರು - ಅವರ ಕೈಚಳಕದಲ್ಲಿ ಮ್ಯಾಂಡೊಲಿನ್ ನಲ್ಲಿ - ಎಂತ ಮುದ್ದೋ ಎಂತ ಸೊಗಸೋ. ರಾಗಾಲಾಪನೆಯಲ್ಲಿ ಅಹಿರ್ ಭೈರವ್ ನ ನೆರಳನ್ನು ಗುರುತಿಸಿ.-ಹ…

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

Image
ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ. ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ ನನಗನಿಸ್ತು. ಅದಕ್ಕೇ ಅವರನ್ನ ಹಾಗೇ ಕೇಳೂಬಿಟ್ಟೆ.

ಆಗ ಅವ್ರಂದ್ರು - "ಅಲ್ರೀ, ನೀವು ಮಾಡ್ಬೇಕೂ ಅಂದ್ಕೊಂಡಿರೋ ಈ ನೂರಿಪ್ಪತ್ತೆಂಟು ವಿಷಯದಲ್ಲಿ ಮೊದಲ ನೂರು ವಿಷಯಗಳನ್ನಾದ್ರೂ ನಿಮಗೆ ಹೇಳಿರೋದು, ನೆನಪಿಸೋದು ನಿಮ್ಮ ಹೆಂಡ್ತೀ ತಾನೇ?" ಅಂತ. "ಅರೆ, ಹೌದಲ್ಲ!" ಅನ್ನಿಸ್ತು. "ಅದೇರೀ, ಗಂಡಸ್ರಿಗೂ ಹೆಂಗಸ್ರಿಗೂ ಇರೋ ವ್ಯತ್ಯಾಸ. ಯಾವ್ದನ್ನ ಎಲ್ಲಿಡ್ಬೇಕು ಅನ್ನೋದು ಹೆಂಗಸ್ರಿಗಲ್ವೇ ಸರಿಯಾಗ್ಗೊತ್ತಿರೋದು? ಅದು ಅವರ್ಗೆ ಹುಟ್ಟಿಂದ ಬಂದಿರತ್ತೇ ರೀ" ಅಂದ್ಕೊಂಡು ಅವರು ಹೋದ್ರು.

ಹೌದು. ಅದೇನೋ ನಿಜ. ಯಾವ್ದನ್ನ ಎಲ್ಲಿಟ್ಟಿರ್ಬೇಕು, ಯಾರನ್ನ ಎಲ್ಲಿಟ್ಟಿರ್ಬೇಕು ಅನ್ನೋದನ್ನ ಹೆಂಗಸ್ರು ಚೆನ್ನಾಗೇ ತಿಳ್ಕೊಂಡಿರ್ತಾರೆ. ಅದ್ರಲ್ಲೂ, ಅವರವರ ಗಂಡಂದ್ರನ್ನ ಎಲ್ಲಿಟ್ಟಿರ್ಬೇಕು ಅಂತ ಬಹಳ ಚೆನ್ನಾಗೇ ತಿಳ್ಕೊಂಡಿರ್ತಾರೆ. ಇದನ್ನ ಅವರ್ಗೆ ಯಾರೂ ಹೇಳ್ಕೊಡ್ಬೇಕಾಗಿಲ್ಲ. ಯಾರಾದ್ರೂ, ಹೇಳ್ಕೊಡ್ಬೇಕು ಅಂದ್ರೆ, ಅವರವರ ತಾಯಿ ಹೇಳ್ಕೊಡ್ಬೇಕು. ಇಲ್ಲ ಅವರ ನಡವಳಿಕೆ ನೋಡ್ಕೊಂಡು ಕಲ್ತ್ಕೋತಾರೋ? ಗೊತ್ತಿಲ್ಲ. ನನ್ ಹೆಂಡ್ತೀನೇ ಕೇಳಿ ನೋಡ್ಬೇಕು ಅಂದ್ಕೊಂಡಿದ್ದೆ. ಆದ್ರೆ, ಅಷ…

ಕಹಿಮರದಲಿ ಸಿಹಿಹಣ್ಣುಗಳು

ಬಾಳ್ವೆಯೆನುವ ಈ ಕಹಿ ಮರದೊಳು
ಬಿಟ್ಟಾವು ನೋಡೆರಡು ಇನಿವಣ್ಗಳು
ನಲ್ವಾತು*ಗಳ ಸವಿಯುವುದೊಂದು
ಒಳ್ಳೆಯವರೊಡನಾಟ ಎರಡನೆಯದು

ನಲ್ವಾತು: ಒಳ್ಳೆಯ ಮಾತು

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :

ಸಂಸಾರಕಟು ವೃಕ್ಷಸ್ಯ ದ್ವೇಫಲೇ ಹ್ಯಮೃತೋಪಮೇ |
ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ ||-ಹಂಸಾನಂದಿ

ಸುಳ್ಳೇ ನಮ್ಮನೆದೇವರು

ದೇವರಿದ್ದಾನೆಯೇ? ಇಲ್ಲವೇ? ಕಷ್ಟಕ್ಕೆ ಸಿಲುಕಿದಾಗ ಹಾಗೊಬ್ಬ ಸರ್ವಶಕ್ತ ಇದ್ದರೆ ಒಳ್ಳೆಯದೆಂದು ಅನಿಸುವುದು ಸುಳ್ಳಲ್ಲ. ಅದಕ್ಕೇ ಇರಬೇಕು 'ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು' ಎಂದು ಬೇಡಿಕೊಳ್ಳುವುದು. ದೇವರನ್ನು ನಮ್ಮ, ಪರರ ಒಳ್ಳೆಯ ಗುಣದಲ್ಲಿ ಕಾಣಬೇಕು ಅಂತಲು ಹೇಳುತ್ತಾರೆ. ಅದೇ ತರಹ, ದೇವರು ತಾನು ಎಲ್ಲೆಲ್ಲೂ ಇರಲಾರದ್ದಕ್ಕೆಂದೇ ಅಮ್ಮಂದಿರನ್ನು ಸೃಷ್ಟಿಸಿದ ಅನ್ನುವ ಮಾತೂ ನಾವೆಲ್ಲ ಕೇಳಿರುವುದೇ ಆಗಿದೆ.

ಅದಿರಲಿ. ಶಿಶುವಿನಹಾಳದ ಷರೀಫರ 'ಕೋಡಗನ ಕೋಳಿ ನುಂಗಿತ್ತ' ಅನ್ನುವ ಹಾಡು ಒಂದಿಪ್ಪತ್ತು ವರ್ಷಗಳಿಂದ ಬಹಳ ಹೆಸರುವಾಸಿಯಾಗಿದೆ. ಆಗದ ಸಂಗತಿಗಳನ್ನೇ ಹೇಳುತ್ತಾ ಕೇಳುಗರನ್ನು ಗೋವಿಂದ ಗುರುವಿನ ಪಾದದ ಅಗಾಧತೆಯನ್ನು ಮನವರಿಕೆ ಮಾಡಿಕೊಡುವಂತಹ, ಒಂದು ಒಗಟಿನಂತಹ ಹಾಡಿದು. ಇಂತಹ ಹಾಡುಗಳನ್ನು ಬರೆದವರಲ್ಲಿ ಷರೀಫರು ಮೊದಲಿಗರೇನೂ ಅಲ್ಲ. ಹರಿದಾಸರು, ಶಿವಶರಣರು ಈ ರೀತಿಯ ಹಲವು ರಚನೆಗಳನ್ನ ಬರೆದಿರುವುದು ತಿಳಿದ ವಿಷಯವೇ.

ಅಂತಹ ಒಂದು ರಚನೆಯನ್ನು ಈಚೆಗೆ ಓದಿದೆ. ದೇವರ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಅದನ್ನು ಹಾಕೋಣ ಅನ್ನಿಸಿತು. ಓದಿ ನೋಡಿ - ಸುಳ್ಳೇ ನಮ್ಮನೆ ದೇವರು - ಪುರಂದರ ದಾಸರ ಒಂದು ರಚನೆ:

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು ! ||ಪಲ್ಲವಿ||

ಬೆಕ್ಕು ಭಕ್ಕರಿ ಮಾಡೋದ ಕಂಡೆ ಇಲಿಯು ಒಲೆಯ ಚುಚ್ಚೋದ (ಚಾಚೋದ?) ಕಂಡೆ
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆ ಗಡ…

ವಾಹ್ವಾರೆ ಮೆಣಸಿನ ಕಾಯಿ!

Image
ಮೆಣಸಿನಕಾಯಿ ಇಲ್ಲದ ಊಟವನ್ನೇ ನಾವು ಇವತ್ತು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಷ್ಟು ಮಟ್ಟಿಗೆ ಅದು ನಮ್ಮ ಅಡಿಗೆಯ ಮೂಲ ಸಾಮಗ್ರಿ ಆಗಿಹೋಗಿದೆ.(ಚಿತ್ರ ಕೃಪೆ: http://www.thaikingdom.co.uk/)

ಆದರೆ ಈ ಮೆಣಸಿನಕಾಯಿ ಭಾರತದ್ದಲ್ಲವಂತೆ. ಬಲ್ಲವರು ಹೇಳುವ ಪ್ರಕಾರ, ಮಧ್ಯ ಅಮೆರಿಕೆಯಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯನ್ನು, ಅಲ್ಲಿಂದ ಹೊರಜಗತ್ತಿನಲ್ಲಿ ಪರಿಚಯ ಮಾಡಿಸಿದ್ದು ಕೊಲಂಬಸ್. ೧೪೯೪ರಲ್ಲಿ ಸ್ಪೆಯಿನಿಗೆ, ಆಮೇಲೆ ಯೂರೊಪಿನ ಇತರ ದೇಶಗಳು , ನಂತರ ಏಷ್ಯಾದ ಬೇರೆ ಬೇರೆಕಡೆಗೆ ಹೀಗೆ ನಾವಿಕರ ಜೊತೆ ಅದು ಸಾಗಿತಂತೆ. (ಮಾಹಿತಿ:ವಿಕಿಪಿಡಿಯಾ - ಹಾಗೇ ಇದೇ ಅಭಿಪ್ರಾಯವನ್ನು ಬಿ.ಜಿ.ಎಲ್.ಸ್ವಾಮಿಯವರ ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಪುಸ್ತಕದಲ್ಲೂ ಓದಿದ್ದ ನೆನಪಿದೆ)

ಅಂದರೆ ಕ್ರಿ.ಶ.೧೫೦೦ರ ಹೊತ್ತಿಗೆ ಭಾರತಕ್ಕೆ (ಅತೀ ಮೊದಲು ಎಂದರೆ) ಬಂದಿರಬಹುದಾದ ಮೆಣಸಿನಕಾಯಿ ಸುಮಾರು ಐವತ್ತು ವರ್ಷಗಳಲ್ಲೇ ಕನ್ನಡಿಗರ ನಾಲಿಗೆಯನ್ನು ಗೆದ್ದುಬಿಟ್ಟಿತ್ತು ಎನ್ನುವುದಕ್ಕೆ ಪುರಂದರ ದಾಸರ ಈ ರಚನೆಯೇ ಒಂದು ಕುರುಹು

ಈಗ ಓದಿ: ವಾಹ್ವಾರೆ ಮೆಣಸಿನಕಾಯಿ!

ಪಲ್ಲವಿ:
ವಾಹ್ವಾರೆ ಮೆಣಸಿನ ಕಾಯಿ ಒಣರೊಟ್ಟಿಗೆ ತಂದೆನೊ ತಾಯಿ ||

ಚರಣಗಳು:

೧: ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟ ನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹು ರುಚಿಯೆಂಬೆ

೨: ಒಂದೆರಡರೆದರೆ ಬಹು ರುಚಿಯೆಂಬೆ
ಮೇಲೆರಡರೆದರೆ ಬಹು ಖಾರೆಂಬೆ
ಅದು ಎರಡರೆದರೆ ಅತಿ ಖಾರೆಂಬ

೩: ಬಡವರಿಗೆಲ್ಲ ನಿನ್ನಾಧಾ…

ವಾರದ ಕೊನೆಯಲ್ಲಿ ನನ್ನ ಓದು

Image
ಒಂದು ಕಾಲವಿತ್ತು. ಏನಾದರೂ ಓದಬೇಕು ಅಂತ ಕುಳಿತರೆ ಹಾಗೇ ಗಂಟೆಗಟ್ಟಲೆ ಕೂತು ಮುಗಿಸಿಬಿಡ್ತಿದ್ದೆ. ಅದು ಯಾವ ಜವಾಬ್ದಾರಿ ಇಲ್ಲದ ಕಾಲ ಅಂತ ಹೇಳ್ಬೇಕಾಗಿಲ್ಲ ಮತ್ತೆ. ಆದ್ರೆ, ಎಲ್ಲ ದಿವಸಗಳೂ ಒಂದೇ ತರಹ ಇರೋದಿಲ್ಲ ನೋಡಿ. ಹಾಗಿದ್ರೆ ಚೆನ್ನಾಗೂ ಇರೋದಿಲ್ಲ. ಉದಾಹರಣೆಗೆ ಊಹೆ ಮಾಡ್ಕೊಳಿ - ಚಿಕ್ಕಂದಿನಲ್ಲಿ ಯಾರೋ ಯಾವತ್ತೋ ನಿಮಗೆ ಕೊಟ್ಟಿದ್ದ ಹೊಸ ಬಟ್ಟೆಯೋ, ಪುಸ್ತಕವೋ ಈಗಲೂ ನೆನಪಿರುತ್ತೆ. ಆದ್ರೆ ಅದೇ ತರ್ಹ ನೀವೇ ಸಾವಿರ ಹೊಸ ಬಟ್ಟೆ ತೊಗೊಂಡ್ರೂ ಅಂತಹ ಸಂತೋಷ ಆಗೋದಿಲ್ಲ. ಅಂದ್ರೆ, ಅಪರೂಪಕ್ಕೆ ಸಿಕ್ಕಾಗಲೇ ನಮಗೆ ಅದರ ಬೆಲೆ ತಿಳಿಯೋದು. ಒಂದು ಸುಭಾಷಿತವೇ ಇದೆಯಲ್ಲ, ’ಅತಿಪರಿಚಯಾದವಜ್ಞಾ..’ ಅಂತ - ಪರಿಚಯ ಹೆಚ್ಚಾದ್ರೆ ತಾತ್ಸಾರವೇ ಪ್ರಾಪ್ತಿ. ಮಲೆನಾಡಿನ ಬೇಡಹೆಂಗಸು, ಒಲೆ ಉರಿಸೋದೂ ಗಂಧದ ಕಟ್ಟಿಗೇಲಿ ಅಂತ ಅದರ ಸಾರಾಂಶ. ಆ ದೃಷ್ಟೀಲಿ ನೋಡಿದ್ರೆ, ಹೀಗೆ ಅಪರೂಪಕ್ಕೆ ಅನ್ನೋಹಾಗೆ ಒಂದೊಂದು ಪುಸ್ತಕ ಓದಿದರೂ, ಅಂತೂ ಓದಿ ಮುಗಿಸಿದೆನಲ್ಲಾ ಅನ್ನೋ ಸಂತೋಷವೇ ಇರುತ್ತೆ. ಒಟ್ಟಲ್ಲಿ ಈಗಂತೂ ನನಗೆ ಒಂದು ಪುಸ್ತಕ ಓದಿ ಮುಗಿಸೋದು ಅನ್ನೋದು ಎಷ್ಟೋ ದಿವಸಗಳ, ಇಲ್ಲವೇ ವಾರಗಳ ಯೋಜನೆ ಆಗಿಹೋಗುತ್ತೆ. ಒಂದಷ್ಟು ದಿನದ ಹಿಂದೆ ಶಂಕರಭಟ್ಟರ ಕನ್ನಡ ನುಡಿಯ ಬಗ್ಗೆಯ ಪುಸ್ತಕಗಳೊಂದಷ್ಟನ್ನು ಎರವಲು ಪಡೆದೆ. ಸುಭಾಷಿತ ಗೊತ್ತೇ ಇದೆಯಲ್ಲ - ’ಪುಸ್ತಕಂ ವನಿತಾ ವಿತ್ತಂ ...’ ಅಂತ - ಹಾಗಾಗಬಾರದು, ಹಾಗಾಗೋದಿಲ್ಲ ಅಂತ ಮೊದಲೇ ಅವರಿಗೆ ಭರವಸೆ ಕೊಟ್ಟಿದ್ರಿಂದ ಅ…