Posts

Showing posts from March, 2009

ಮೌನವೆಂಬ ಒಡವೆ

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳ್ಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ

ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಸ್ವಾಯತ್ತಮೇಕಾಂತ ಗುಣಂ ವಿಧಾತಾ
ವಿನಿರ್ಮಿತಂ ಛಾದನಮಜ್ಞತಾಯಾಃ
ವಿಶೇಷತಃ ಸರ್ವವಿದಾಂ ಸಮಾಜೇ
ವಿಭೂಷಣಂ ಮೌನಮಪಂಡಿತಾನಾಮ್ ||

-ಹಂಸಾನಂದಿ

ಬೆಲೆಯಿರದ ನಿಧಿ

ಹೊತ್ತಿಗೆಯೊಳಗೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ

-ಹಂಸಾನಂದಿ
(ಈ ಸುಭಾಷಿತವನ್ನು ನೆನಪಿಸಿದ ಡಾ.ಕೇಶವ ಕುಲಕರ್ಣಿ ಅವರಿಗೆ ಧನ್ಯವಾದಗಳು)

ಬ್ಲಾಗಿಗೆ ಮರುಳಾದೆಯಾ? ಮನವೇ?

(ಕನ್ನಡ ಬ್ಲಾಗಿಗರ ಕೂಟದ ಬಗ್ಗೆ ಅಶೋಕ್ ಅವರು ನೆನ್ನೆ ಬರೆದಿದ್ದರು. ಅಲ್ಲಿ ನಾನೂ ಒಬ್ಬ ಸದಸ್ಯ. ಅದನ್ನು ನಡೆಸುತ್ತಿರುವವರು ನಿಮ್ಮ ಮೆಚ್ಚಿನ ಬ್ಲಾಗಿನ ಬಗ್ಗೆ ಸ್ವಲ್ಪ ಬರೀರಿ ಅಂತ ಎಲ್ಲರಿಗೂ ಸೇರಿಸಿ ಕರೆಕೊಟ್ಟಿದ್ದರು. ಅದಕ್ಕೆ ನಾನು ಬರೆದ ಉತ್ತರವನ್ನ ಇವತ್ತು ಕನ್ನಡ ಬ್ಲಾಗರ್ಸ್ ಪುಟದಲ್ಲಿ (http://kannadablogs.ning.com/) ಹಾಕಿದಾರೆ. ಅದನ್ನೇ ಇಲ್ಲಿ ಕತ್ತರಿಸಿ ಅಂಟಿಸಿರುವೆ. - ಹಂಸಾನಂದಿ)

====================================================================================

ಸ್ವಾಮೀ,

ನೀವು ಬರೀರಿ ಅಂದ್ರಿ. ನಾನು ಬರ್ದಿದೀನಿ. ಆದ್ರೆ ಈ ಪಾಟಿ ಒಳ್ಳೊಳ್ಳೇ ಬ್ಲಾಗುಗಳಿರೋವಾಗ ನೀವು ಒಂದು ಮೆಚ್ಚಿದ ಬ್ಲಾಗ್ ಬಗ್ಗೆ ಬರೀರಿ ಅನ್ನೋದು ಬರೀ ಮೋಸ ಅಂತೀನಿ ನಾನು.

ಆದ್ರೆ ಒಂದರ ಬಗ್ಗೆ ಬರೆಯೋದು ಅಷ್ಟು ಸುಲಭ ಅಲ್ವೇ ಅಲ್ಲ. ಅದಕ್ಕೇ ನನ್ನ ಮನಸ್ಸಿಗೆ ಹಿಡಿಸಿದ ಕೆಲವನ್ನು ಸೇರಿಸಿ ಈ ಹಾಡು. ಈ ಹಾಡಲ್ಲಿ ಇಲ್ಲದಿರೋ ಎಷ್ಟೋ ಬ್ಲಾಗುಗಳೂ ನನಗೆ ಮೆಚ್ಚುಗೆಯಾಗಿವೆ. ಆದ್ರೆ , ಹಾಡಿಗೆ ಮೂರು ಚರಣಕ್ಕಿಂತ ಹೆಚ್ಚಿದ್ರೆ ಚೆನ್ನಾಗಿರೋದಿಲ್ಲ ಅನ್ನಿಸ್ತು. ಅದಕ್ಕೇ ಅಷ್ಟಕ್ಕೇ ಬ್ರೇಕ್ ಹಾಕ್ದೆ.

ಪುರಂದರ ದಾಸರ ಕ್ಷೀರಾಬ್ದಿ ಕನ್ನಿಕೆ ಶ್ರೀಮಹಾಲಕುಮಿ ಯಾರಿಗೆ ವಧುವಾಗುವೆ ಧಾಟಿಯಲ್ಲಿ ಓದಿಕೊಳ್ಳಿ - ದಾಸಶ್ರೇಷ್ಠರ ಕ್ಷಮೆ ನಾನೇನೂ ಕೋರುತ್ತಿಲ್ಲ. ಯಾಕಂದ್ರೆ ಅವರು ದಯಾನಿಧಿಗಳಲ್ವೇ ? ಪುರಂದರ ಗುರುಂ ವಂದೇ ದಾಸ ಶ್ರೇಷ್ಠಂ ದಯಾನಿಧಿ…

ಮನವ ಕಸಿವ ಗುರು

ಕಲಿಸುವವರು ಹಲವರಿಹರು
ಕಲಿಯುವರ ಹಣವ ಕಸಿವರು;
ಬಲು ವಿರಳವದು ದೊರಕುವುದು
ಕಲಿವರ ಮನವ ಕಸಿವ ಗುರು!

ಸಂಸ್ಕೃತ ಮೂಲ:

ಗುರವೋ ಬಹವಃ ಸಂತಿ ಶಿಷ್ಯವಿತ್ತಾಪಹಾರಕಾಃ |
ದುರ್ಲಭಃ ಸ ಗುರುರ್ಲೋಕೇ ಶಿಷ್ಯಚಿತ್ತಾಪಹಾರಕಃ ||

ಹಿರಿಯರ ಸಿರಿ

ಕಡಲು ತಾನೇ ಮುತ್ತಿನೊಡವೆಯನು ತೊಡುವುದೆ?
ವಿಂಧ್ಯಗಿರಿ ಬಯಸುವುದೆ ಆನೆಗಳ ಪಹರೆ?
ಮಲೆನಾಡ ಗಿರಿಬೆಟ್ಟ ಗಂಧಲೇಪವ ಕೇಳೀತೆ?
ಹಿರಿಯರ ಸಿರಿಯೆಲ್ಲ ಪರರ ನೆರವಿಗೆಂದೆ!

ಸಂಸ್ಕೃತ ಮೂಲ (ಸುಭಾಷಿತರತ್ನಭಾಂಡಾಗಾರದಿಂದ):

ರತ್ನಾಕರಃ ಕಿಂ ಕುರುತೇ ಸ್ವರತ್ನೈಃ
ವಿಂಧ್ಯಾಚಲಃ ಕಿಂ ಕರಿಭಿಃ ಕರೋತಿ |
ಶ್ರೀಗಂಧಖಂಡೈಃ ಮಲಯಾಚಲಂ ಕಿಂ
ಪರೋಪಕಾರಾಯ ಸತಾಂ ವಿಭೂತಯಃ ||

(ಕೊಸರು: ಮೂಲದಲ್ಲಿಲ್ಲದ ಕೆಲವು ವಾಕ್ಯರಚನೆಯನ್ನು ನಾನು ಅನುವಾದದಲ್ಲಿ ಬಳಸಿದೆನಾದರೂ, ಮೂಲದ ಆಶಯಕ್ಕೆ ಧಕ್ಕೆ ತಂದಿಲ್ಲ ಎಂದುಕೊಂಡಿರುವೆ :)

ಗಂಧದ ಜೊತೆಗೆ ಗುದ್ದಾಟವೂ ಲೇಸು

ಕೂರೋದೊಳ್ಳೇದ್ ತಕ್ಕೋರ್ಜೊತೆಗೆ
ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ
ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ
ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ

ಸಂಸ್ಕೃತ ಮೂಲ:

ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |
ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||

(ಈ ಸುಭಾಷಿತವನ್ನು ತೋರಿಸ್ಕೊಟ್ಟ ಡಾ.ಕೇಶವ ಕುಲ್ಕರ್ಣಿ ಅವ್ರಿಗೆ ಧನ್ಯವಾದಗಳು :) - ಈ ಮೊದ್ಲು ನಾನಿದನ್ಕೇಳಿರ್ಲಿಲ್ಲ)

ಹಾವ ತಿಂಬವರು

ಬೇಡ ಹಗೆ ಬಲು ಜನರೊಡನೆ
ತೊಡಕು ಗೆಲುವುದು ಗುಂಪನ್ನು;
ಕಟ್ಟಿರುವೆಗಳು ಕಚ್ಚಿ ತಿನಬಹುದು
ಹೆಡೆ ಭುಸುಗುಡುತಿಹ ಹಾವನ್ನೂ!

ಸಂಸ್ಕೃತ ಮೂಲ - ಪಂಚತಂತ್ರದ ಕಾಕೋಲೂಕೀಯದಿಂದ

ಬಹವೋ ನ ವಿರೋದ್ಧವ್ಯಾ ದುರ್ಜಯಾ ಹಿ ಮಹಾಜನಾಃ
ಸ್ಫುರಂತಮಪಿ ನಾಗೇಂದ್ರಂ ಭಕ್ಷಯಂತಿ ಪಿಪೀಲಿಕಾಃ

-ಹಂಸಾನಂದಿ

ಹೊಸತೋ? ಹಳತೋ?

ಹಳತೆಂಬ ಕಾರಣಕೆ ಒಳಿತಾಗಬೇಕಿಲ್ಲ
ಹೊಸತಿದು ಎಂಬುದಕೆ ಹೊರದೂಡಬೇಕಿಲ್ಲ
ಅರಿತವರು ಒರೆಗಿರಿಸಿ ಬಳಿಕ ಹೊಗಳುವರು
ಮರುಳರವರಿವರಮಾತ ತಲೆಗೇರಿಸುವರು

ಸಂಸ್ಕೃತ ಮೂಲ - ಕಾಳಿದಾಸನ ಮಾಲವಿಕಾಗ್ನಿಮಿತ್ರದಿಂದ:

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇನಬುದ್ಧಿಃ ||

ಕೊಸರು: ಇದು ಬರೆಯುವಾಗಲೇ, ಈ ಪದ್ಯವನ್ನು ಮೊದಲೇ ಅನುವಾದಿಸಿದ್ದೆನೇನೋ ಎನ್ನಿಸಿತು. ಹೇಗಾದರಾಗಲೆಂದು ಬರೆದು ಹಾಕಿದ ಮೇಲೆ, ಅದು ನಿಜವೆನ್ನುವುದು ಖಾತ್ರಿಯಾಯಿತು. ಇರಲಿ, ಪರವಾಗಿಲ್ಲ ಅಂತ ಹಾಗೇ ಇಟ್ಟೆ. ಆ ಪದ್ಯವನ್ನು ನೋಡಲು ಕೆಳಗಿನ ಕಾಳಿದಾಸ ಅನ್ನುವ ಲೇಬಲ್ ಅನ್ನು ಚಿಟಕಿಸಿ.

ಗೆಜ್ಜೆಯ ದನಿ

ಕೇಡಿಗರ ಒರಟು ನುಡಿಗಳೋ ಕೊಳಕಿನೊಡನೆ
ಕಾಡುವುವು ಕಾಲ ಕಟ್ಟುವ ಸಂಕಲೆಯ ತೆರದಿ
ಸಾಧುಗಳ ಮೆಲುನುಡಿಯ ಮಾತುಗಳೊ ಮನವ
ಕದ್ದಾವು ಕಾಲಂದುಗೆಯ ನಲುದನಿಯ ತೆರದಿಸಂಸ್ಕೃತ ಮೂಲ:

ಕಟು ಕ್ವಣಂತೋ ಮಲದಾಯಕಾಃ ಖಲಾಃ
ತುದಂತ್ಯಲಂ ಬಂಧನಶೃಂಖಲಾ ಇವ |
ಮನಸ್ತು ಸಾಧುಧ್ವನಿಭಿಃ ಪದೇ ಪದೇ
ಹರಂತಿ ಸಂತೋ ಮಣಿನೂಪುರಾ ಇವ ||

-ಹಂಸಾನಂದಿ

ಅಹಿರ್ ಭೈರವ್

ಅಹಿರ್ ಭೈರವ್ ಒಂದು ಹಿಂದೂಸ್ತಾನಿ ರಾಗ - ಇದಕ್ಕೆ ಹತ್ತಿರವಾದ ದಕ್ಷಿಣಾದಿ ರಾಗದ ಹೆಸರು ಚಕ್ರವಾಕ ಎಂದು. ಕರ್ನಾಟಕ ಸಂಗೀತದಲ್ಲಿ ೧೬ನೇ ಮೇಳಕರ್ತವಾದ ಈರಾಗವನ್ನ ಹಿಂದೂಸ್ತಾನಿಯಲ್ಲಿ ಭೈರವ್ ಥಾಟ್ ಗೆ ಸೇರಿಸಲಾಗುತ್ತೆ. ಚಕ್ರವಾಕಕ್ಕೂ ಆಹಿರ್ ಭೈರವ್ ಗೂ ಸ್ವರಗಳು ಒಂದೇ ಆದರೂ, ಹಾಡುವ ಶೈಲಿಯಲ್ಲಿ ವ್ಯತ್ಯಾಸ ಇದೆ.

ಈಗ ಈ ರಾಗದಲ್ಲಿ ಒಂದು ಒಳ್ಳೇ ತಿಲ್ಲಾನವನ್ನು ನೋಡಿ - ಡಾ.ಬಾಲಮುರಳಿಕೃಷ್ಣ ಅವರ ರಚನೆ.ಇದು ಹಿಂದೂಸ್ತಾನಿ ಸಂಗೀತದಿಂದ ಈಚೀಚೆಗೆ ಕರ್ನಾಟಕ ಸಂಗೀತದಲ್ಲಿ ಬಳಕೆಯಾಗುತ್ತಿರುವ ರಾಗವಾದ್ದರಿಂದ, ಇದರಲ್ಲಿ ಹೆಚ್ಚಾಗಿ ಚಿಕ್ಕ ರಚನೆಗಳು - ವಚನ-ದೇವರನಾಮ-ಭಜನ್ ಇಂತಹವುಗಳನ್ನು ಮಾತ್ರ ಹಾಡುವ ರೂಢಿ ಹೆಚ್ಚು.

ಈಗ ಇದೇ ರಾಗದಲ್ಲಿ ಒಂದು ಒಳ್ಳೇ ಚಿತ್ರ ಗೀತೆಯನ್ನು ಕೇಳಿ - ಡಾ.ರಾಜ್ ಮತ್ತು ಬೆಂಗಳೂರು ಲತಾ ಅವರ ಧ್ವನಿಯಲ್ಲಿ:ಕರ್ನಾಟಕ ಸಂಗೀತದಲ್ಲಿ ಇನ್ನೊಂದು ರಾಗ ಇದಕ್ಕೆ ಹೋಲುವಂತೆ ಇದೆ - ಅದು ಬಿಂದುಮಾಲಿನಿ ಅನ್ನುವ ರಾಗ. ತ್ಯಾಗರಾಜರ ಎಂತ ಮುದ್ದೋ ಎಂತ ಸೊಗಸೋ ಎಂಬ ರಚನೆ ಈ ರಾಗದಲ್ಲಿ ಪ್ರಸಿದ್ಧವಾಗಿದೆ. ಇದರ ಹಲವು ಸಂಚಾರಗಳು ಅಹಿರ್ ಭೈರವ್ ಅನ್ನು ಹೋಲುತ್ತವೆ.

ಒಂದು ಮುದ್ರಿಕೆ ನೋಡಿ - ಇದು ಸುಮಾರು ೨೫ ವರ್ಷಗಳ ಹಿಂದಿನದ್ದಿರಬಹುದು. ಯು.ಶ್ರೀನಿವಾಸ್ - ಆಗ ಮಾಸ್ಟರ್ ಯು.ಶ್ರೀನಿವಾಸ್ ಅಂತಿದ್ದರು - ಅವರ ಕೈಚಳಕದಲ್ಲಿ ಮ್ಯಾಂಡೊಲಿನ್ ನಲ್ಲಿ - ಎಂತ ಮುದ್ದೋ ಎಂತ ಸೊಗಸೋ. ರಾಗಾಲಾಪನೆಯಲ್ಲಿ ಅಹಿರ್ ಭೈರವ್ ನ ನೆರಳನ್ನು ಗುರುತಿಸಿ.-ಹ…

ಹೆಂಡ್ತೀರ್ ಮಾತು ಗಂಡಂದ್ರು ಯಾಕೆ ಕೇಳ್ತಾರೆ?

Image
ಒಂದಿವಸ ಒಬ್ಬರು ಹೇಳ್ತಿದ್ದು ಕೇಳಿದೆ. ಗಂಡಸ್ರಿಗೆ ಮದ್ವೆ ಆಗೋ ತನಕ, ಯಾವಾಗ ಏನ್ಕೆಲ್ಸ ಮಾಡ್ಬೇಕು ಅಂತ ತಿಳೀದೆ ನೂರಿಪ್ಪತ್ತೆಂಟಕ್ಕೆ ಕೈಹಾಕ್ತಿರ್ತಾರೆ ಅಂತ. ನಾನೂ ಮದ್ವೆ ಆಗಿರೋನೇ, ಆದ್ರೂ ನೂರಿಪ್ಪತ್ತೆಂಟು ಕೆಲಸ ಕೈಗಂಟ್ಕೊಂಡಿರತ್ತಲ್ಲ ಅಂತ ನನಗನಿಸ್ತು. ಅದಕ್ಕೇ ಅವರನ್ನ ಹಾಗೇ ಕೇಳೂಬಿಟ್ಟೆ.

ಆಗ ಅವ್ರಂದ್ರು - "ಅಲ್ರೀ, ನೀವು ಮಾಡ್ಬೇಕೂ ಅಂದ್ಕೊಂಡಿರೋ ಈ ನೂರಿಪ್ಪತ್ತೆಂಟು ವಿಷಯದಲ್ಲಿ ಮೊದಲ ನೂರು ವಿಷಯಗಳನ್ನಾದ್ರೂ ನಿಮಗೆ ಹೇಳಿರೋದು, ನೆನಪಿಸೋದು ನಿಮ್ಮ ಹೆಂಡ್ತೀ ತಾನೇ?" ಅಂತ. "ಅರೆ, ಹೌದಲ್ಲ!" ಅನ್ನಿಸ್ತು. "ಅದೇರೀ, ಗಂಡಸ್ರಿಗೂ ಹೆಂಗಸ್ರಿಗೂ ಇರೋ ವ್ಯತ್ಯಾಸ. ಯಾವ್ದನ್ನ ಎಲ್ಲಿಡ್ಬೇಕು ಅನ್ನೋದು ಹೆಂಗಸ್ರಿಗಲ್ವೇ ಸರಿಯಾಗ್ಗೊತ್ತಿರೋದು? ಅದು ಅವರ್ಗೆ ಹುಟ್ಟಿಂದ ಬಂದಿರತ್ತೇ ರೀ" ಅಂದ್ಕೊಂಡು ಅವರು ಹೋದ್ರು.

ಹೌದು. ಅದೇನೋ ನಿಜ. ಯಾವ್ದನ್ನ ಎಲ್ಲಿಟ್ಟಿರ್ಬೇಕು, ಯಾರನ್ನ ಎಲ್ಲಿಟ್ಟಿರ್ಬೇಕು ಅನ್ನೋದನ್ನ ಹೆಂಗಸ್ರು ಚೆನ್ನಾಗೇ ತಿಳ್ಕೊಂಡಿರ್ತಾರೆ. ಅದ್ರಲ್ಲೂ, ಅವರವರ ಗಂಡಂದ್ರನ್ನ ಎಲ್ಲಿಟ್ಟಿರ್ಬೇಕು ಅಂತ ಬಹಳ ಚೆನ್ನಾಗೇ ತಿಳ್ಕೊಂಡಿರ್ತಾರೆ. ಇದನ್ನ ಅವರ್ಗೆ ಯಾರೂ ಹೇಳ್ಕೊಡ್ಬೇಕಾಗಿಲ್ಲ. ಯಾರಾದ್ರೂ, ಹೇಳ್ಕೊಡ್ಬೇಕು ಅಂದ್ರೆ, ಅವರವರ ತಾಯಿ ಹೇಳ್ಕೊಡ್ಬೇಕು. ಇಲ್ಲ ಅವರ ನಡವಳಿಕೆ ನೋಡ್ಕೊಂಡು ಕಲ್ತ್ಕೋತಾರೋ? ಗೊತ್ತಿಲ್ಲ. ನನ್ ಹೆಂಡ್ತೀನೇ ಕೇಳಿ ನೋಡ್ಬೇಕು ಅಂದ್ಕೊಂಡಿದ್ದೆ. ಆದ್ರೆ, ಅಷ…

ಕಹಿಮರದಲಿ ಸಿಹಿಹಣ್ಣುಗಳು

ಬಾಳ್ವೆಯೆನುವ ಈ ಕಹಿ ಮರದೊಳು
ಬಿಟ್ಟಾವು ನೋಡೆರಡು ಇನಿವಣ್ಗಳು
ನಲ್ವಾತು*ಗಳ ಸವಿಯುವುದೊಂದು
ಒಳ್ಳೆಯವರೊಡನಾಟ ಎರಡನೆಯದು

ನಲ್ವಾತು: ಒಳ್ಳೆಯ ಮಾತು

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :

ಸಂಸಾರಕಟು ವೃಕ್ಷಸ್ಯ ದ್ವೇಫಲೇ ಹ್ಯಮೃತೋಪಮೇ |
ಸುಭಾಷಿತ ರಸಾಸ್ವಾದಃ ಸಂಗತಿಃ ಸುಜನೇ ಜನೇ ||-ಹಂಸಾನಂದಿ