Posts

Showing posts from April, 2009

ಅಡಿಗೆಯಲ್ಲೇಕೆ ಕೀಳರಿಮೆ?

ಈ ವಿಷಯದ ಬಗ್ಗೆ ಎಷ್ಟೋ ದಿವಸದಿಂದ ಬರೀಬೇಕು ಅಂತಿದ್ರೂ, ಇವತ್ತು ಕಾಲ ಬಂತು!

ನಮಗ್ಯಾಕೆ ನಮ್ಮ ಅಡಿಗೆ ಊಟದ ಬಗ್ಗೆ ಕೀಳರಿಮೆ ಇರ್ಬೇಕು? ಬೆಂಗಳೂರಲ್ಲಿ, ಮೈಸೂರಲ್ಲಿ ಮಾಡುವ ಎಂಟಿಆರ್, ಆರ್ಕೇ ಮೊದ್ಲಾದವರ ಇನ್ಸ್ಟಾಂಟ್ ಪ್ರಾಡಕ್ಟ್ ಗಳನ್ನ ನೋಡಿ - ಅದು ಯಾಕೆ ’ರವಾ ಇಡ್ಲಿ ಮಿಕ್ಸ್’ ’ರವಾ ದೋಸಾ ಮಿಕ್ಸ್’ ’ರಸಂ ಪೌಡರ್’ ’ಇನ್ಸ್ಟಾಂಟ್ ಉಪ್ಮ’ ’ಮುರುಕು’ ಆಗಿರ್ಬೇಕು? ರವೆ ಇಡ್ಲಿ, ರವೆ ದೋಸೆ, ಸಾರಿನ ಪುಡಿ, ಹುಳೀ ಪುಡಿ, ಚಕ್ಲಿ ಅಂತ ಯಾಕಿರ್ಬಾರ್ದು? ಒಂದು ಕಡೆ ಅಂತೂ ಕೋಡುಬಳೆಗೆ ’spicy rice rings' ಅಂತಲೋ ಏನೋ ಬರೆದಿದ್ದನ್ನ ನೋಡಿದ್ದೆ! ಗುಜರಾತಿಗಳು ಅವರ ಡೋಕ್ಲಾನ ಮಾರೋವಾಗ ಡೋಕ್ಲಾ ಅಂತ್ಲೇ ಬರೀತಾರೆ. ಮಲಯಾಳಿಗಳು ಅವರ ಪುಟ್ಟು ನ ಪುಟ್ಟು ಅಂತ್ಲೇ ಕರೀತಾರೆ. ಅಂತಾದ್ರಲ್ಲಿ ನಮ್ಮ ಗೊಜ್ಜು, ಪಲ್ಯ, ಒಬ್ಬಟ್ಟು, ಕೋಡ್ಬಳೇನಾ ಹಾಗೇ ಬರೆಯೋಕೆ, ಹಾಗೇ ಪ್ರಚಾರ ಮಾಡೋಕೆ ನಮಗ್ಯಾಕೆ ಆಗ್ಬಾರ್ದು?

ಬೆಂಗಳೂರಲ್ಲಿ ಎಷ್ಟೋ ಕಡೆ ಮುದ್ದೆ ಊಟ ಸಿಗೋ ಜಾಗಗಳಲ್ಲಿ 'Ragi Balls Available' ಅಂತ ಬರೆದಿರತ್ತೆ. ಇದಕ್ಕೂ ಅಪದ್ಧ ಬೇಕಾ? ಮುದ್ದೆಯ ಸವಿ ಗೊತ್ತಿದ್ದು ಅದನ್ನ ತಿನ್ನಕ್ಕೆ ಬರೋವ್ರಿಗೆ ’ರಾಗಿ ಮುದ್ದೆ’ ಅಂತ (ಲಿಪಿ ಯಾವುದೇ ಇರಲಿ) ಬರೆದ್ರೆ ಸಾಲೋದಿಲ್ವಾ?

ಇನ್ನು ಹೊಸ ರುಚಿ ವಿಭಾಗ - ಟಿವಿಯಲ್ಲಿ ತೋರಿಸೋ ಅಡಿಗೆಗಳು, ಕೆಲವು ಮಟ್ಟಿಗೆ ಪ್ರಿಂಟ್ ಮೀಡಿಯಾದಲ್ಲೂ - ಅದನ್ನ ಕೇಳ್ಲೇ ಬೇಡಿ. ಅಡುಗೆ ಮಾಡಿ ತೋರಿಸ್ತಿರೋದು ಕನ್ನಡ…

ಗೆಳೆತನ

ಬಲವುಳ್ಳವರ ಗೆಳೆತನವೋ
ಬಲವಿರುವವರಿಗೇ ಮೀಸಲು;
ದೀಪವಾರಿಸುವ ಗಾಳಿರಾಯ
ಕಾಳ್ಗಿಚ್ಚನು ಪುಟಗೊಳಿಸುವನು!

ಸಂಸ್ಕೃತ ಮೂಲ:

ಬಲಿನೋ ಬಲಿನಃ ಸ್ನಿಹ್ಯಂತ್ಯಬಲಂ ತು ನ ಗೃಹ್ಣತೇ|
ದಾವಂ ದೀಪಯತೇ ಚಂಡೋ ದೀಪಂ ವ್ಯಾಹತಿ ಮಾರುತಃ ||

ಆರದ ಗಾಯ

ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;

ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.


ಸಂಸ್ಕೃತ ಮೂಲ:

ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||

-ಹಂಸಾನಂದಿ

ಪಾಣಿನಿಯ ತಪ್ಪು

ಮನಸು ಗಂಡಲ್ಲ ಹೆಣ್ಣಲ್ಲ
ಎನುವ ಪಾಣಿನಿಯ ನೆಚ್ಚಿ
ಮನವ ನಿನ್ನಲಿ ಕಳುಹಿ
ನಾನಂತೂ ಕೆಟ್ಟೆ ನಲ್ಲೆ!

ಮನವೇನೋ ನಲಿಯತಿದೆ
ನೆಲೆಸಿ ಅಲ್ಲೇನೇ; ಆದರೆ
ಪಾಣಿನಿಯ ತಪ್ಪಿಂದ
ನಾವಂತೂ ಸತ್ತೆವಲ್ಲೆ!


ಸಂಸ್ಸ್ಕೃತ ಮೂಲ (ಧರ್ಮಕೀರ್ತಿ) :

ನಪುಂಸಕಮಿತಿ ಜ್ಞಾತ್ವಾ ತಾಂ ಪ್ರತಿ ಪ್ರೇಷಿತಂ ಮಯಾ|
ಮನಸ್ ತತ್ರೈವ ರಮತೇ ಹತಾಃ ಪಾಣಿನಿನಾ ವಯಮ್

(ಈ ಅನುವಾದಕ್ಕೆ ಹೊಳವು ಕೊಟ್ಟಿದ್ದು ಅನಿವಾಸಿಯವರ ಈ ಬರಹಗಳು:

http://www.sampada.net/blog/anivaasi/22/04/2009/19421

http://anivaasi.wordpress.com/2009/04/22/%E0%B2%AE%E0%B2%A8%E0%B2%A6%E0%...)

-ಹಂಸಾನಂದಿ

ಬೊಗಸೆಯ ಹೂವುಗಳು

ಬೊಗಸೆಯಲಿದ್ದರೆ ಹೂವುಗಳು
ಅಂಗೈಯೆರಡೂ ಘಮಘಮವು;
ಅಂತೆಯೆ ಪ್ರೀತಿಯು ಸುಜನರದು
ಎಡಬಲಕೆರಡಕು ಸರಿಸಮವು!

ಸಂಸ್ಕೃತ ಮೂಲ:

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ|
ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ||

-ಹಂಸಾನಂದಿ

ಎರಡು ಕಣ್ಣು ಒಂದು ನಾಲಗೆ

ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!

ಸಂಸ್ಕೃತ ಮೂಲ:

ಈಕ್ಷಣಂ ದ್ವಿಗುಣಂ ಪ್ರೋಕ್ತಂ ಭಾಷಣಸ್ಯೇತಿ ವೇಧಸಾ |
ಅಕ್ಷಿಣಿ ದ್ವೇ ಮನುಷ್ಯಾಣಾಂ ಜಿಹ್ವಾ ತ್ವೈಕೇವ ನಿರ್ಮಿತಾ ||

-ಹಂಸಾನಂದಿ

ಬಸಂತ್ ಮುಖಾರಿ

ಅವತ್ತಿನಿಂದ ಡಾ.ಕೇಶವ ಕುಲಕರ್ಣಿ ಅವರು ಯಾವುದಾದರೂ ರಾಗದ ಬಗ್ಗೆ ಬರ್ದಿಲ್ವಲ್ಲ ಅಂತ ಹೇಳ್ತಾನೇ ಇದ್ರು. ಇವತ್ತು ಇದ್ದಕ್ಕಿದ್ದ ಹಾಗೆ ಈಗಿನ್ನೂ ವಸಂತ ಋತು ಅನ್ನೋದು ನೆನಪಾಯ್ತು. ಇವತ್ತು ಇಲ್ಲಿ ಕನ್ನಡಕೂಟದ ಕಾರ್ಯಕ್ರಮದಲ್ಲಿ ವಸಂತ ರಾಗದಲ್ಲಿ ಕೊಳಲು ಜುಗಲ್ಬಂದಿ ಅಂತಲೂ ನೋಡ್ದೆ, ಆದ್ರೆ ಇವತ್ತು ಬೇರೆ ಕೆಲಸ ಇರೋದ್ರಿಂದ ನಾನು ಕನ್ನಡಕೂಟದ ವಸಂತೋತ್ಸವ ಕಾರ್ಯಕ್ರಮಕ್ಕೆ ಚಕ್ಕರ್ ಹಾಕ್ಬೇಕಾಯ್ತು.

ಆದ್ರೆ ಹಿಂದೂಸ್ತಾನಿ ಪದ್ಧತಿಯಲ್ಲಿ ಕರ್ನಾಟಕ ಸಂಗೀತದ ವಸಂತಕ್ಕೆ ತೀರಾ ಹತ್ತಿರವಾದ ರಾಗ ಯಾವ್ದೂ ಇಲ್ಲವಲ್ಲ? ಬಸಂತ್ ರಾಗ ಹೆಸರಿನಲ್ಲಿ ಹತ್ತಿರವಾಗಿದ್ರೂ ರಾಗದ ಸ್ವರಗಳಲ್ಲಾಗಲೀ ಚಲನೆಯಲ್ಲಾಗಲೀ ಹತ್ತಿರವಿಲ್ಲ. ಇನ್ನು ಹಿಂದೂಸ್ತಾನಿಯ ಭಿನ್ನಷಡ್ಜ ರಾಗಕ್ಕೂ, ದಕ್ಷಿಣಾದಿಯ ವಸಂತಕ್ಕೂ ಸ್ವಲ್ಪ ಹೋಲಿಕೆ ಇದ್ದರೂ ಪೂರ್ತಿ ಒಂದೇ ಇಲ್ಲ. ಇರಲಿ, ಯಾವ ರಾಗ ನುಡಿಸಿದರು ಅಂತ ಆಮೇಲೆ ತಿಳ್ಕೊಂಡ್ರಾಯ್ತು.

ಆದ್ರೆ ವಸಂತ ಅನ್ನೋ ಹೆಸರು ಬರುವಂತಹ ದಕ್ಷಿಣಾದಿಯ ರಾಗಗಳು ಹಲವು ಇವೆ. ಹಿಂದೋಳ ವಸಂತ, ಶುದ್ಧವಸಂತ, ವಸಂತ ವರಾಳಿ, ವಸಂತ ಭೈರವಿ ಹೀಗೆ. ಇವುಗಳಲ್ಲಿ ವಸಂತ ಭೈರವಿ ಅನ್ನುವುದು ಸ್ವಲ್ಪ ಹಳೆಯ ರಾಗ. ಹದಿನಾಕು ಹದಿನೈದನೇ ಶತಮಾನದಲ್ಲಿ ಪ್ರಸಿದ್ಧವಾಗಿದ್ದ ರಾಗವೇ.
ವಿಜಯನಗರದ ಅಳಿಯ ರಾಮರಾಯನ ಕಾಲದಲ್ಲಿದ್ದ ರಾಮಾಮಾತ್ಯ ವಸಂತ ಭೈರವಿಯನ್ನ ಒಂದು ಮೇಳವಾಗಿಯೂ, ರಾಗವಾಗಿಯೂ ಹೇಳುತ್ತಾನೆ. ಅಂದಿನಿಂದ ಈ ರಾಗ ದಕ್ಷಿಣಾದಿ ಸಂಗೀತದಲ್ಲಿ ಹೆಚ್ಚಾಗಿ ಬದಲಾವಣೆಗಳ…

ಮತ್ತೊಂದು ಗ್ರಹಕೂಟ

Image
ಬರುವ ವಾರ ಚಂದ್ರ ಶುಕ್ರ ಮಂಗಳ ಗಳ ಯುತಿ, ಅಂದ್ರೆ ಕಂಜಂಕ್ಷನ್ ಇದೆ. ಆದಿನದ ಆಕಾಶ ಹೇಗಿರತ್ತೆ ಅಂತ ತೋರಿಸೋಣ ಅಂತ ಇದು.ಇಲ್ಲಿ ಹಾಕಿರೋ ಚಿತ್ರದಲ್ಲಿ ಹಳದಿ ಚುಕ್ಕೆಗಳಿಂದಾದ ಗೆರೆಯೇ ಕ್ರಾಂತಿವೃತ್ತ (ecliptic). ಅಂದ್ರೆ, ಆಕಾಶದಲ್ಲಿ ಸೂರ್ಯ ಹೋಗೋ ದಾರಿ ಅಂದ್ಕೊಳಿ. ಏಪ್ರಿಲ್ ೨೩ ರ ದಿನ ಸೂರ್ಯ ಎಲ್ಲಿರ್ತಾನೆ ಅನ್ನೋದನ್ ಚಿತ್ರದಲ್ಲಿ ನೋಡಿ. ಸೂರ್ಯ ಕಂಡಮೇಲೆ,ನೀವು ಆಕಾಶದಲ್ಲಿ ನೋಡೋದೇನು ಬಂತು? ಸೂರ್ಯನ್ನ ಬಿಟ್ಟು, ಅಲ್ವಾ? ಆದ್ರೆ ಸೂರ್ಯನ್ನ ತೋರ್ಸಿರೋದು ಯಾಕೆ ಅಂದ್ರೆ, ಈ ಗ್ರಹಗಳಕೂಟವನ್ನ ಯಾವಾಗ ನೋಡ್ಬೇಕು ಅನ್ನೋ ಅಂದಾಜು ಬರೋದಕ್ಕೆ. ಹಾಗೇ ಚಿತ್ರದಲ್ಲಿ ಸ್ವಲ್ಪ ಮೇಲೆ ಹೋದ್ರೆ, ನಿಮಗೆ ಶುಕ್ರ(Venus), ಮಂಗಳ (Mars), ಮತ್ತೆ ಚಂದ್ರ - ಈ ಮೂವರೂ ಎಲ್ಲಿರ್ತಾರೆ ಅನ್ನೋದೂ ಕಾಣತ್ತೆ. ಸೂರ್ಯನಿಗೂ, ಈ ಮೂವರಿಗೂ ಸುಮಾರಾಗಿ ಎರಡು ಅಡ್ಡ ಗೆರೆಗಳ ಅಂತರ ಇದೆ. ಪ್ರತಿಯೊಂದು ಅಡ್ಡಸಾಲೂ ಹದಿನೈದು ಡಿಗ್ರಿ, ಅಥವಾ ಒಂದು ಗಂಟೆ ಸಮಯ ಸೂಚಿಸುತ್ತೆ. ಅಂದರೆ, ಈ ಮೂರೂ ಹುಟ್ಟೋದು ಸೂರ್ಯ ಹುಟ್ಟೋ ಸುಮಾರ ೨ ಗಂಟೆ ಮೊದಲು. ಆದ್ರೆ, ಸಾಧಾರಣವಾಗಿ ದಿಗಂತದಲ್ಲಿ ಯಾವಾಗ್ಲೂ ಸ್ವಲ್ಪ ಮೋಡ್ವೋ ಗೀಡ್ವೋ ಇರತ್ತಲ್ಲ. ಹಾಗಾಗಿ, ಸೂರ್ಯ ಹುಟ್ಟೋಕೆ ಸುಮಾರು ಒಂದು ಗಂಟೆಯಿಂದ ಮುಕ್ಕಾಲು ಗಂಟೆಯ ನಡುವೆ ಇವುಗಳನ್ನ ನೋಡೋ ಅವಕಾಶ ಇರತ್ತೆ. ಇನ್ನೊಂದ್ ವಿಷಯ ಇದು ಅಮಾವಾಸ್ಯೆಗೆ ತೀರಾ ಹತ್ತಿರವಾಗಿರೋದ್ರಿಂದ, ಚಂದ್ರ ಕಾಣೋದು ಸ್ವಲ್ಪ ಕಷ್ಟವೇ! ಬೇಜಾರ್ಮಾಡ…

ಏಲಾವತಾರಮೆತ್ತಿತಿವೋ?

ಇವತ್ತು ಒಂದು ಒಳ್ಳೇ ಸಂಗೀತ ಕಚೇರಿಗೆ ಹೋಗಿದ್ದೆ. ಟಿ.ಎಮ್.ಕೃಷ್ಣ ಅವರ ಹಾಡುಗಾರಿಕೆ.ಪಕ್ಕವಾದ್ಯದಲ್ಲಿ ನಾಗೈ ಶ್ರೀರಾಮ್ ಮತ್ತು ಪ್ರೊ.ತಿರುಚಿ ಶಂಕರನ್. ಅಂದ್ಮೇಲೆ ಹೇಳಬೇಕಾದ್ದೇ ಇಲ್ಲ. ವಿಸ್ತರಿಸಲು ಕೃಷ್ಣ ಮುಖಾರಿ ರಾಗವನ್ನು ತೆಗೆದುಕೊಂಡಿದ್ದರು. ಎಷ್ಟೋ ಜನ ಸ್ವಲ್ಪ ಸಂಗೀತದ ತಿಳಿವು ಇರುವವರೂ ಮುಖಾರಿ ರಾಗ ಶೋಕರಸದ ರಾಗ ಅಂದುಕೊಂಡಿರ್ತಾರೆ. ಆದ್ರೆ ಅದು ಅಷ್ಟು ಸರಿ ಇಲ್ಲ. ಕೆಲವು ಸಂಚಾರಗಳಲ್ಲಿ ಶೋಕವನ್ನು ವ್ಯಕ್ತ ಪಡಿಸಬಹುದಾದರೂ, ಈ ರಾಗದ ಮುಖ್ಯ ರಸ ಅದ್ಭುತ ಅಥವಾ ಅಚ್ಚರಿ ಅನ್ನುವುದು ಸರಿ. ತ್ಯಾಗರಾಜರ ಮುಖಾರಿ ರಾಗದ ಹಲವು ರಚನೆಗಳನ್ನು ಗಮನಿಸಿದಾಗ, ಈ ವಿಷಯ ಸ್ಪಷ್ಟವಾಗುತ್ತೆ. ಉದಾಹರಣೆಗೆ ಇವತ್ತು ಕೃಷ್ಣ ಅವರು ಹಾಡಿದ ಏಲಾವತಾರಮೆತ್ತಿತಿವೋ? ಎನ್ನುವ ರಚನೆ. ಅದರಲ್ಲಿ ರಾಮಭಕ್ತ ತ್ಯಾಗರಾಜರು ಈ ರಾಮ ಎಂಬುವನು ಭೂಮಿಯ ಮೇಲೆ ಏಕೆ ಅವತಾರ ಎತ್ತಿರಬಹುದು ಅನ್ನುವ ಪ್ರಶ್ನೆಗೆ ತಮ್ಮ ಉತ್ತರವನ್ನು ಕಂಡುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ತಮಗೇ ಹಾಕಿಕೊಳ್ಳುತ್ತಾರೆ. ಅದೇ ಗುಂಗಿನಲ್ಲಿ ಮನೆಗೆ ಬಂದಮೇಲೆ, ಆ ರಚನೆಯನ್ನು ಕನ್ನಡಿಸಬೇಕೆನಿಸಿ, ಹೀಗೆ ಅನುವಾದಿಸಿದೆ: ಏನಕವತಾರವನೆತ್ತಿದೆಯೋ?
ಏನದು ಕಾರಣವೋ? ರಾಮನೆಂ||ದೇನಕವತಾರವನೆತ್ತಿದೆಯೋ?|| ಕಾಳಗವನು ಮಾಡಲಿಕೋ? ಅಯೋಧ್ಯಾ
ಪಾಲನವ ಮಾಡಲಿಕೋ? ರಾಘವ ನೀ || ನೇನಕವತಾರವನೆತ್ತಿದೆಯೋ?|| ಯೋಗಿಗಳಿಗೆ ಕಾಣಿಸಲಿಕೋ? ಭವ
ರೋಗಗಳ ದೂಡಲಿಕೋ? ಶತ
ರಾಗ ರತ್ನ ಮಾಲಿಕೆಯ ರಚಿಸಿದ ತ್ಯಾಗ
ರ…

ಕಾಲವನ್ನು ತಡೆಯೋರು ಯಾರೂ ಇಲ್ಲ!

ನೀನೊಳ್ಳೆ ಕೆಲ್ಸ ಮಾಡ್ಲಿ ಅಂತ
ರೋಗ ರುಜಿನ ಕಾಯೋದಿಲ್ಲ;
ನಿನ್ನಿಂದಿನ್ನೂ ಒಳ್ಳೇದಾಗ್ಬೇಕ್
ಅಂತ ಯಮನೂ ನಿಲ್ಲೋದಿಲ್ಲ;
ಮನಸ್ನೊಳಗೆ ಒಳ್ಳೇ ಕೆಲ್ಸ
ಮಾಡ್ಬೇಕಂತ ಅನ್ನಿಸ್ತಿದ್ರೆ
ಮಾಡಿಮುಗಿಸ್ಬೇಕ್ ಅವಾವಾಗ್ಲೇ
ಕಾಲವನ್ನ ತಡೆಯೋರಿಲ್ಲ!

ಸಂಸ್ಕೃತ ಮೂಲ ( ಮಹಾಭಾರತ, ಸಭಾಪರ್ವ ೫೬-೧೦ )

ಸ ವ್ಯಾಧಯೋ ನಾಪಿ ಯಮಃ ಪ್ರಾಪ್ತುಂ ಶ್ರೇಯಃ ಪ್ರತೀಕ್ಷತೇ|
ಯಾವದೇವ ಭವೇತ್ ಕಲ್ಪಸ್ತಾವಚ್ಛ್ರೇಯಂ ಸಮಾಚರೇತ್ ||

-ಹಂಸಾನಂದಿ

ಧನ್ಯವಾದ ಸಮರ್ಪಣೆ

ಇವತ್ತು ಬೆಳಗ್ಗೆ ಶ್ರೀಕಾಂತ ಮಿಶ್ರಿಕೋಟಿಯವರು ಹರಿದಾಸ ಸಂಪದಕ್ಕೆ ನಮ್ಮ ಬಳಿ ಇದ್ದ ಎಲ್ಲ ಪುರಂದರ ದಾಸರ ರಚನೆಗಳನ್ನು ಹಾಕಿ ಆಯಿತು ಅಂತ ಹೇಳಿದಾಗ ಸಿಕ್ಕಾಪಟ್ಟೆ ಖುಷಿಯಾಯಿತು ನನಗೆ. ಶ್ರೀಕಾಂತರಿಗೂ, ಮತ್ತೆ ಈ ಕೆಲಸದಲ್ಲಿ ನೆರವಾದ ಎಲ್ಲ ಸಂಪದಿಗರಿಗೂ ನನ್ನ ಧನ್ಯವಾದಗಳು. ಈ ಸಂದರ್ಭದಲ್ಲಿ ಇನ್ನೊಬ್ಬರು ಮಹನೀಯರನ್ನು ನಾನು ನೆನೆಯಲೇ ಬೇಕು. ಅವರೇ ಟೊರಾಂಟೋನಲ್ಲಿರುವ ಶ್ರೀ ಲಕ್ಷ್ಮಣ್. ನಾವು ತಿದ್ದುಪಡಿ ಮಾಡಿ ಇಲ್ಲಿ ಹಾಕಲು ಉಪಯೋಗಿಸಿದ್ದು ಅವರು ಕೊಟ್ಟ ಇ-ಟೆಕ್ಸ್ಟ್. ಸಂಗೀತ ರಚನೆಗಳ ಬಗ್ಗೆ ಅತೀವ ಆಸಕ್ತರಾದ ಅವರು ಕರ್ನಾಟಕ ಸಂಗೀತದಲ್ಲಿ ಹಾಡುವ ಹಾಡಿರಬಹುದಾದ, ಹಾಡಬಹುದಾದ ಸಾವಿರಾರು ರಚನೆಗಳನ್ನು e-text ಆಗಿ ತಂದಿದ್ದ್ದಾರೆ. ಶ್ರೀ ಲಕ್ಷ್ಮಣ್ ಅವರು ಕೊಟ್ಟ ದಾಸರ ಹಾಡುಗಳ ಡೇಟಾಬೇಸ್ ಇಂಗ್ಲಿಷ್ ಲಿಪಿಯಲ್ಲಿತ್ತು. ಮತ್ತು ಲಕ್ಷ್ಮಣ್ ಅವರಿಗೆ ಸ್ವತಃ ಕನ್ನಡ ಬರದಿರುವ ಕಾರಣ ಕೆಲವು ತಪ್ಪುಗಳೂ ನುಸುಳಿದ್ದವು. ಆದರೆ, ಈ ಇ-ಟೆಕ್ಸ್ಟ್ ಇದ್ದಿದ್ದರಿಂದ ಕನ್ನಡದಲ್ಲಿ ಟೈಪಿಸುವ ಕೆಲಸ ಎಷ್ಟೋ ಮಟ್ಟಿಗೆ ಸುಲಭವಾಯಿತು ಅಂತ ಹೇಳಬೇಕು. ಇದರ ಬಗ್ಗೆ ಇನ್ನೊಂದುಚೂರು ವಿವರವಾಗಿ ಇಲ್ಲಿ ಬರೆದಿರುವೆ - ಆಸಕ್ತರು ನೋಡಬಹುದು: http://neelanjana.wordpress.com/2009/04/06/thanksgiving-in-april/

ರಾಮನವಮಿಯ ಸಮಯಕ್ಕೆ ಒಂದು ಮಂಗಳ ಸುಳಾದಿ

Image
ಇಂದು ರಾಮನವಮಿ. ರಾಮ ಹುಟ್ಟಿದ ದಿನವೆಂಬ ನೆನಪಿನಲ್ಲಿ ಮಾಡುವ ಹಬ್ಬ. ಮಂಗಳಕರವಾದ ದಿನವೆಂಬ ನಂಬಿಕೆ. ಇಂತಹ ದಿನಕ್ಕೆ ತಕ್ಕಂತೆ, ಒಂದು ಮಂಗಳಕರ ಸಂಗೀತ ರಚನೆಯನ್ನು ವಿವರಿಸೋಣ ಎನ್ನಿಸಿತು.ಸುಳಾದಿ ಎನ್ನುವುದು ಕರ್ನಾಟಕದ ಹರಿದಾಸರು ಪ್ರಚಾರ ಪಡಿಸಿದ ಒಂದು ಸಂಗೀತ ರಚನಾ ಪ್ರಕಾರ. ಈ ಪದ ಬಂದದ್ದು ಹೇಗೆಂಬ ಜಿಜ್ಞಾಸೆ ಇನ್ನೊಮ್ಮೆ ಮಾಡಬಹುದು. ಆದರೆ, ಸುಳಾದಿಯ ರಚನೆ ಹೇಗಿರುತ್ತೆ ಅನ್ನುವುದನ್ನು ಮಾತ್ರ ಹೇಳುವೆ.

ಸುಳಾದಿ ಎನ್ನುವುದು ಬೇರೆಬೇರೆ ತಾಳಗಳಲ್ಲಿ ರಚಿತವಾಗಿರುವಂತಹ ಒಂದು ತಾಳಮಾಲಿಕೆ. ಸುಳಾದಿಗಳನ್ನು ಹಾಡುವಾಗ ಏಳು ತಾಳಗಳನ್ನು ಉಪಯೋಗಿಸುತ್ತಿದ್ದಿದ್ದರಿಂದ, ಆ ಏಳು ತಾಳಗಳೂ ಸುಳಾದಿ ಸಪ್ತತಾಳಗಳು ಎಂದೇ ಹೆಸರಾಗಿವೆ. ಧ್ರುವ, ಮಠ್ಯ(ಮಟ್ಟೆ), ರೂಪಕ, ಜಂಪೆ(ಜಂಪಟ, ಜೊಂಪಟ,ಝಂಪ), ತ್ರಿಪುಟ (ತ್ರಿವಿಡೆ), ಅಟ್ಟ(ಅಡ), ಮತ್ತು ಏಕ - ಇವೇ ಈ ಏಳು ತಾಳಗಳು. ಸುಳಾದಿಗಳಲ್ಲಿ ಸಾಧಾರಣವಾಗಿ ಏಳಾದರೂ ಖಂಡ(ಭಾಗ)ಗಳಿದ್ದು, ಒಂದೊಂದು ಖಂಡವೂ ಒಂದೊಂದು ತಾಳದಲ್ಲಿರುತ್ತವೆ. ಹೆಚ್ಚು ಖಂಡಗಳಿದ್ದಾಗ, ಒಂದೇ ತಾಳದಲ್ಲಿ ಒಂದಕ್ಕಿಂತ ಹೆಚ್ಚಿನ ಖಂಡಗಳಿರಬಹುದು. ಕಡಿಮೆಯಿದ್ದಾಗ, ಎಲ್ಲ ತಾಳಗಳೂ ಒಂದು ರಚನೆಯಲ್ಲಿ ಇರದೇ ಹೋಗಬಹುದು. ಕೆಲವು ಸುಳಾದಿಗಳಲ್ಲಿ ಆದಿತಾಳ (ಒಂದು ಬಗೆಯ ತ್ರಿಪುಟತಾಳ)ದ ಬಳಕೆಯೂ ಆಗಿದೆ. ಸುಳಾದಿಯ ಕೊನೆಯಲ್ಲಿ ಜೊತೆ(ಜತೆ) ಎಂದು ಕರೆಯುವ ಎರಡು ಸಾಲುಗಳಿದ್ದು ಅದು, ಸುಳಾದಿಯ ಮುಖ್ಯ ಅಂಶವನ್ನು ತೋರುವಂತಿರುತ್ತದೆ.

ಸುಳಾದಿಗಳು…

ಕತ್ತಿಯಲುಗಿನ ಮೇಲೆ ನಡಿಗೆ

ಗುಟ್ಟಿನಲಿ ನೀಡುವುದ ಬಂದವರ ಹದುಳದಲಿ ಕಾಣುವುದ
ಒಳಿತ ಮಾಡಿ ಮೌನದಲಿರುವುದ ಪರರ ನೆರವ ನುಡಿವುದ
ಐಸಿರಿಗರಳದ ಕಂಡವರ ತೆಗಳದೆಂತೆಂಬೀ ಕಡುಕಟ್ಟಳೆಗಳ
ಕತ್ತಿಯಲುಗಿನ ಮೇಲೆನಡೆವುದ ನೇಮಿಸಿದರಾರು ಸುಜನರಿಗೆ?

ಸಂಸ್ಕೃತ ಮೂಲ- ಭರ್ತೃಹರಿಯ ನೀತಿಶತಕದಿಂದ

ಪ್ರದಾನಂ ಪ್ರಚ್ಛನ್ನಂ ಗೃಹಮುಪಗತೇ ಸಂಭ್ರಮವಿಧಿಃ
ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇ |
ಅನುತ್ಸೇಕೋ ಲಕ್ಷ್ಮ್ಯಾಂ ನಿರಭಿಭವಸಾರಾಃ ಪರಕಥಾಃ
ಸತಾಂ ಕೇನೋದ್ದಿಷ್ಟಂ ವಿಷಮಮಸಿಧಾರಾ ವ್ರತಮಿದಮ್ ||

-ಹಂಸಾನಂದಿ