Posts

Showing posts from August, 2009

ಬಾಗುವ ಮರಗಳು

Image
ತೊಂಗುವುವು ಹಣ್ಣಿರುವ ಮರಗಳು
ಅಂತೆಯೇ ಬಾಗುವರು ಬಲ್ಲವರು
ತಿಳಿಗೇಡಿಗಳು ಮತ್ತೊಣಕಟ್ಟಿಗೆಯು
ಬಳುಕದೇ ಬಾಗದೇ ಮುರಿಯುವರು!

ತೊಂಗು = ಬಾಗು,ಬಗ್ಗು; ಬೇಂದ್ರೆಯವರ "ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ .." ಅನ್ನುವ ಸಾಲನ್ನು ನೆನಪಿಸಿಕೊಳ್ಳಿ.

ಸಂಸ್ಕೃತ ಮೂಲ:

ನಮಂತಿ ಫಲಿತಾಃ ವೃಕ್ಷಾಃ
ನಮಂತಿ ವಿಬುಧಾಃ ಜನಾಃ |
ಶುಷ್ಕ ಕಾಷ್ಟಾನಿ ಮೂರ್ಖಾಶ್ಚ
ಭಿದ್ಯಂತೇ ನ ನಮಂತಿ ಚ |

नमन्ति फलिताः वृक्षाः
नमन्ति विबुधाः जनाः ।
शुष्ककाष्ठानि मूर्खाश्च
भिद्यन्ते न नमन्ति च ॥

-ಹಂಸಾನಂದಿ

*ಚಿತ್ರ ನಾನೇ ತೆಗೆದಿದ್ದು; ನಮ್ಮ ಮನೆಯ ಹಿತ್ತಿಲಲ್ಲಿ.

ಅರಳುವ ತಾವರೆ

Image
ಬರೆದು ಓದಿ ನೋಡಿ ಕೇಳಿ
ಅರಿತವರಾಸರೆ ಪಡೆದವನ
ಅರಿಮೆ ಅರಳುವುದು ತಾವರೆ
ಬಿರಿವೊಲು ರವಿಯ ಕದಿರಿಗೆ

ಸಂಸ್ಕೃತ ಮೂಲ (ಸುಭಾಷಿತ ರತ್ನ ಭಾಂಡಾಗಾರದಿಂದ) :
ಯ: ಪಠತಿ ಲಿಖತಿ ಪಶ್ಯತಿ ಪರಿಚ್ಛತಿ ಪಂಡಿತಾನುಪಾಶ್ರಯತಿ |
ತಸ್ಯ ದಿವಾಕರ ಕಿರಣೈಃ ನಲಿಲೀದಲಮಿವ ವಿಕಾಸ್ಯತೇ ಬುದ್ಧಿಃ||ಕೊ: ಅರಿಮೆ = ತಿಳುವಳಿಕೆ

ಕೊ.ಕೊ: ಕದಿರು = ಕಿರಣ; ಹೊಸದಾಗಿ ನೆನಪಿಸಿಕೊಂಡ ಅಚ್ಚಕನ್ನಡ ಪದ (ಜಿ.ವೆಂಕಟಸುಬ್ಬಯ್ಯ ಅವರ ನಿಘಂಟುವಿನಿಂದ)

-ಹಂಸಾನಂದಿ

’ಸಿಟಿ’ಯ ಸುತ್ತ ಒಂದು ಸುತ್ತು

Image
ಕಳೆದ ವಾರ ಮನೆಗೆ ಬಂದ ನೆಂಟರ ಜೊತೆ ಒಂದು ಸಲ ಸಿಟಿ ಯಾತ್ರೆ ಮಾಡಿದ್ದಾಯಿತು. ಮನೆಗೆ ಯಾರಾದರೂ ಗೆಳೆಯರು, ನೆಂಟರು ಬಂದಾಗ ’ಸಿಟಿ’ಯನ್ನು ತೋರಿಸಲು ಹೋಗುವುದು ರೂಢಿ.ಎಷ್ಟು ಸಲ ಹೋದರು ಪ್ರತೀ ಸಲ ಹೋಗುವಾಗ ಎಲ್ಲಿ ದಾರಿ ತಪ್ಪುವುದೋ ಅನ್ನುವ ಮುಜುಗರ ಇರುವುದೇ. ಯಾಕಂದ್ರೆ ಅಲ್ಲಿಯ ರಸ್ತೆಗಳೇ ಹಾಗೆ! ಎಲ್ಲೆಲ್ಲೋ ಧುತ್ತನೆ ಪ್ರತ್ಯಕ್ಷವಾಗುವ ಒನ್-ವೇ ಗಳು, ಅದಕ್ಕೂ ಹೆಚ್ಚಾಗಿ ಇದ್ದಕ್ಕಿದ್ದ ಹಾಗೆ ಬೆಟ್ಟದ ಮೇಲೆ ಹತ್ತಿಬಿಡುವ, ಇಳಿದು ಬಿಡುವ ರಸ್ತೆಗಳು. ಇನ್ನು ಪಾರ್ಕಿಂಗ್ ಹುಡುಕುತ್ತಲೇ ಸುತ್ತಿಸುತ್ತಿ ಸುಣ್ಣವಾಗಬೇಕಾದಂತಹ ರಸ್ತೆಗಳು, ಇವೆಲ್ಲ ನೆನಪಾಗಿ ಹೋಗುವುದೇ ಬೇಡವೇ ಅಂತ ಅನ್ನಿಸುವುದೂ ಉಂಟು.

ಈ ಬಾರಿ ಪ್ರತೀ ಸಲದ ದಾರಿ ಬಿಟ್ಟು ಹೋದರೂ, ದಾರಿ ಎಲ್ಲೂ ತಪ್ಪದೇ ಹೋಗಿದ್ದು ಹೆಚ್ಚಾಯವೇ. ಅವತ್ತು ಸ್ಟಿಯರಿಂಗ್ ಹಿಂದಿನಿಂದ ತೆಗೆದ ಚಿತ್ರಗಳಲ್ಲಿ ಕೆಲವನ್ನು ಹಾಕಿರುವೆ (ಗಾಜಿನ ಹಿಂದೆ ತೆಗೆದಿರುವುದರಿಂದ ಕೆಲವು ಮಸುಕಾಗಿಯೂ ಇವೆ), ನೋಡಿ.

ಎಂಬಾರ್ಕೆಡೆರೋ ನಿಂದ ’ಸಿಟಿ’ಯ ಗಗನಚುಂಬಿಗಳು

ಒಂದು ರಸ್ತೆ - ಒಂದಕ್ಕೊಂದು ಅಂಟಿದಂತಿರುವ ಮನೆಗಳನ್ನ ಗಮನಿಸಿ:
ಚೈನಾ ಟೌನ್ - ಚೈನೀಸ್ ಬರಹವನ್ನ ನೋಡಿ. ಇಲ್ಲಿ ಮುಕ್ಕಾಲುಪಾಲು ವ್ಯಾಪಾರಿಗಳಿಗೆ ಇಂಗ್ಲಿಷ್ ಸ್ವಲ್ಪವೂ ಬರೋದಿಲ್ಲ!
ಗೋಲ್ಡನ್ ಗೇಟ್ ಸೇತುವೆ - ಮಟಮಟ ಮಧ್ಯಾಹ್ನ ದಲ್ಲಿ ಕವಿಯುತ್ತಿರುವ ಬೇಸಿಗೆ ಕಾವಳ:ಗೋಲ್ಡನ್ ಗೇಟ್ ಸೇತುವೆಯ ಇನ್ನೊಂದು ನೋಟ:

ಮಾರ್ಕೆಟ್ ಸ್ಟ್ರೀಟ್:ಮಾರ್ಕೆಟ್ ಸ್ಟ್ರೀಟ್ ನ …

ಕಂಚಿನ ಗಂಟೆ

ಅರಿಯದವರಷ್ಟು ಮಾತಾಳಿ
ಇರದಿರಬಹುದು ಅರಿತವರೂ!
ಕಂಚಿನ ಗಂಟೆಯ ಅನುರಣನ
ಇರದು ಚಿನ್ನದ ಗಂಟೆಯಲೂ!

ಸಂಸ್ಕೃತ ಮೂಲ:

ಉತ್ತಮೋ ನಾತಿವಕ್ತಾ ಸ್ಯಾತ್ ಅಧಮೋ ಬಹುಭಾಷತೇ|
ನ ಕಾಂಚನೇ ಧ್ವನಿ: ತಾದೃಕ್ ಕಾಂಸ್ಯೇ ಪ್ರಜಾಯತೇ ||

उत्तमो नातिवक्ता स्यात् अधमो बहुभाषते |
न काञ्चने ध्वनिस्तादृक् यादृक् कांस्ये प्रजायते ||

-ಹಂಸಾನಂದಿ

ತಂಪು

ಚಂದನ ತೊಡೆವುದು ಒಡಲಿಗೆ ತಂಪು
ತಿಂಗಳ ಕಾಂತಿಯು ಅದಕೂ ಮೇಲು
ಚಂದಿರ ಚಂದನ ಎರಡಕು ಹೆಚ್ಚಿಗೆ
ತಂಪದು ಒಳ್ಳೆಯ ಜನಗಳ ಸಂಗ !

ಸಂಸ್ಕೃತ ಮೂಲ:

ಚಂದನಂ ಶೀತಲಂ ಲೋಕೇ ಚಂದನಾದಪಿ ಚಂದ್ರಮಾಃ
ಚಂದ್ರ ಚಂದನಯೋರ್ಮಧ್ಯೇ ಶೀತಲಾ ಸಾಧು ಸಂಗತಿ:

-ಹಂಸಾನಂದಿ

ಕೃಷ್ಣಾ ನೀ ಬೇಗನೆ ಬಾರೋ

ಕೃಷ್ಣನ ಹೆಸರೆತ್ತಿದ ಕೂಡಲೆ ನೆನಪಾಗೋ ಹಾಡು ಅಂದರೆ, ಕೃಷ್ಣಾ ನೀ ಬೇಗನೆ ಬಾರೋ ಅಂತ ಹೇಳಿದ್ರೆ ತಪ್ಪೇನೂ ಇಲ್ಲ. ವ್ಯಾಸರಾಯರ ಈ ರಚನೆ ಕನ್ನಡ ಬಲ್ಲವರಷ್ಟೇ ಅಲ್ಲದೆ, ಬೇರೆ ಭಾಷೆಯ ಕಲಾವಿದರಿಗೂ ಮೆಚ್ಚಿನದ್ದೇ ಆಗಿದೆ. ವಾತ್ಸಲ್ಯಭಾವವನ್ನು ಎತ್ತಿ ತೋರುವ ಈ ರಚನೆ ಹಾಗೇ ನಾಟ್ಯ ಕಲಾವಿದರಿಗೂ ಅಚ್ಚುಮೆಚ್ಚು.

ಹಿಂದೂಸ್ತಾನಿಯಿಂದ ಕರ್ನಾಟಕ ಸಂಗೀತಕ್ಕೆ ಬಂದಿರುವಂತಹ ಯಮನ್ ಕಲ್ಯಾಣಿ (ಯಮುನಾ ಕಲ್ಯಾಣಿ ಅಂತಲೂ ಹೇಳುವುದಿದೆ)ಯಲ್ಲಿ ಹಾಡುವ ಈ ದೇವರನಾಮದ ಮೂರು ನೋಟಗಳನ್ನು, ಕೃಷ್ಣ ಜನ್ಮಾಷ್ಟಮಿಯ ಈ ದಿನ ಇಲ್ಲಿ ನೋಡಿ, ಕೇಳಿ. ಮೊದಲಿಗೆ ಹಾಡಿನ ಸಾಹಿತ್ಯ ಇಲ್ಲಿದೆ:

ಕೃಷ್ಣಾ ನೀ ಬೇಗನೆ ಬಾರೋ
ಬೇಗನೆ ಬಾರೋ ಮುಖವನ್ನೆ ತೋರೋ

ಕಾಲಲಂದುಗೆ ಗೆಜ್ಜೆ ನೀಲದ ಭಾಪುರಿ
ನೀಲವರ್ಣನೆ ನಾಟ್ಯವಾಡುತ ಬಾರೋ

ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳೊಳು ಧರಿಸಿದ ವೈಜಯಂತಿ ಮಾಲೆ

ಕಾಶಿಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳಗಮ್ಮ

ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ

ಬಾಲಸರಸ್ವತಿ ಅವರ ಅಭಿನಯದಲ್ಲಿ:

http://www.youtube.com/watch?v=axuq7ncvjYE


ಹರಿಹರನ್ ಅವರ ಕಂಠದಲ್ಲಿ:


’ಮದ್ರಾಸ್ ನಾಲ್ವರ’ ವಾದ್ಯ ವೃಂದದಲ್ಲಿ:

-ಹಂಸಾನಂದಿ

ಒಂಟಿ ಗಾಲಿಯ ಬಂಡಿ

ಒಂಟಿ ಗಾಲಿಯ ಬಂಡಿ
ಊರ ಸೇರುವುದಿಲ್ಲ
ಜತುನವಿಲ್ಲದೆ ಬರಿದೆ ದೈವವ
ನೆಚ್ಚಿದರೆ ಏಳಿಗೆಯಿಲ್ಲ!

ಸಂಸ್ಕೃತ ಮೂಲ:

ಯಥಾ ಹಿ ಏಕೇಣ ಚಕ್ರೇಣ ನ ರಥಸ್ಯ ಗತಿಃ ಭವೇತ್ |
ಏವಂ ಪುರುಷಕಾರೇಣ ವಿನಾ ದೈವಂ ನ ಸಿಧ್ಯತಿ ||

-ಹಂಸಾನಂದಿ

ಆಸೆ

ಗಿರಿಯು ಹಿರಿದು ಕಡಲದಕು ಮಿಗಿಲು
ಮೇಲಿರುವ ಆಗಸವು ಕಡಲಿಗೂ ಮಿಗಿಲು;
ಪರಬೊಮ್ಮನಿರಬಹುದು ಆಗಸಕು ಮಿಗಿಲು
ಮನದಾಸೆ ಎಂಬುದದು ಅವನಿಗೂ ಮಿಗಿಲು!

ಸಂಸ್ಕೃತ ಮೂಲ:

ಗಿರಿರ್ಮಹಾನ್ ಗಿರೇರಬ್ಧಿಃ ಮಹಾನಬ್ಧೇರ್ನಭೋ ಮಹತ್ |
ನಭಸೋSಪಿ ಮಹದ್ ಬ್ರಹ್ಮ ತತೋಪ್ಯಾಶಾ ಗರೀಯಸೀ ||

-ಹಂಸಾನಂದಿ

ಲಾಂಟಾನಾ

Image
ಒಂದೊಂದು ಸಲ ಆಶ್ಚರ್ಯ ಆಗುತ್ತೆ. ’ಬೆಟ್ಟದಾ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ” ಅಂತ ಕನಕದಾಸರೇ ಹೇಳಿದಾರಲ್ಲ! ಊರು ಕೇರಿ ದಾಟಿ ಬೇರೆ ಯಾವ್ದೋ ದೇಶದಲ್ಲಿ ಹರಡಿಕೊಂಡಿರೋ ಜೀವಿಗಳ ಪೈಕಿ ಲಾಂಟಾನಾ ಕೂಡ ಒಂದು. ಇದು ಮೊದಲಿಗೆ ದಕ್ಷಿಣ ಅಮೇರಿಕಾದ ಗಿಡವಂತೆ. ಪಾಪ, ಕ್ಯಾಲಿಫೋರ್ನಿಯಾದಲ್ಲಿ, ರಸ್ತೆ ನಡುವೆ ಸಿಂಗಾರಕ್ಕೆ ನೆಟ್ಟು, ನೀರುಹಾಕಿ ಬೆಳಸ್ತಾರೆ. ಆದ್ರೆ, ಕರ್ನಾಟಕದಲ್ಲಿ ಇದು ತಂತಾನೇ ಯಾವ ಆರೈಕೆ ಇಲ್ಲದೆ ಬೆಳೆದು ಬಗೆ ಬಗೆ ಬಣ್ಣ ಬಣ್ಣದ ಹೂವನ್ನೂ ತಳೆಯುತ್ತೆ. ಇಷ್ಟು ಬಣ್ಣವಾದ ಹೂವಿರೋ ಗಿಡದ ಎಲೆ ಮುಟ್ಟಿದರೆ ಮೈ ಕಡಿತ ಹತ್ತಬಹುದು. ಅದಕ್ಕೇ ಈ ಗಿಡಕ್ಕೆ, ತರುಚೀ ಗಿಡ ಅಂತಲೂ ಹೇಳೋದು ಕೇಳಿದೀನಿ. ಸೃಷ್ಟಿ ಎಷ್ಟು ವಿಚಿತ್ರ ಅಲ್ವೇ?

(ಇಲ್ಲಿರುವ ಲಾಂಟಾನಾ ಗಿಡದ ಚಿತ್ರ ತೆಗೆದದ್ದು ನಾನೇ - ಮಾವಿನಕೆರೆ ಬೆಟ್ಟದಲ್ಲಿ. ಜುಲೈ ೨೦೦೯)

-ಹಂಸಾನಂದಿ