Posts

Showing posts from September, 2009

ವೈದ್ಯನ ಅಚ್ಚರಿ

ಮಸಣದಲುರಿವ ಚಿತೆಯ ಕಂಡು
ವೈದ್ಯನಿಗಾಯಿತು ಅಚ್ಚರಿ
ನಾ ಹೋಗಿರಲಿಲ್ಲ ನನ್ನಣ್ಣನೂ* ಅಲ್ಲ
ಯಾರದಿರಬಹುದು ಕೈ ಚಳಕ?


ಸಂಸ್ಕೃತ ಮೂಲ:

ಚಿತಾಂ ಪ್ರಜ್ವಲಿತಂ ದೃಷ್ಟ್ವಾ ವೈದ್ಯೋ ವಿಸ್ಮಯಮಾಗತಃ|
ನಾಹಂ ಗತಃ ನ ಮೇ ಭ್ರಾತಾ ಕಸ್ಯೇದಂ ಹಸ್ತಲಾಘವಂ ||

ಕೊ.ಕೊ: * - ಹಿಂದಿನ ಕಾಲದಲ್ಲಿ ವೈದ್ಯವೃತ್ತಿಯೂ ವಂಶ ಪಾರಂಪರ್ಯವಾಗಿ ಬರುತ್ತಿದ್ದ ಕಾಲದ ಮಾತಿದು :)

-ಹಂಸಾನಂದಿ

ನಾಲ್ಗೇಗ್ ಬೇಕು ಕಡಿವಾಣ

ಉಣ್ಣೋದ್ರಲ್ಲಿ ಮಾತಾಡೋದ್ರಲ್ಲಿ
ಇರ್ಬೇಕು ನಾಲ್ಗೆಗೆ ಕಡಿವಾಣ;
ಊಟ ಮಾತು ವಿಪರೀತ್ವಾದ್ರೆ
ಹೋಗೇ ಬಿಡ್ಬಹುದು ಪ್ರಾಣ!


ಸಂಸ್ಕೃತ ಮೂಲ:

ಜಿಹ್ವೇ ಪ್ರಮಾಣಂ ಜಾನೀಹಿ
ಭಾಷಣೇ ಭೋಜನೇSಪಿ ಚ |
ಅತ್ಯುಕ್ತಿರತಿಭುಕ್ತಿಶ್ಚ
ಸತ್ಯಂ ಪ್ರಾಣಾಪಹಾರಿಣೀ ||

जिह्वे प्रमाणं जानीहि
भाषणे भोजनेऽपि च ।
अत्युक्तिरतिभुक्तिश्च
सत्यं प्राणापहारिणी ॥

(ಸುಭಾಷಿತ ಮಂಜರಿಯಲ್ಲಿ ಇವತ್ತು ಓದಿದ್ದಿದು).

-ಹಂಸಾನಂದಿ

ನವರಾತ್ರಿಯ ಸಮಯದಲ್ಲೊಂದು ಹೊಸ ಜತಿಸ್ವರ

ಇಲ್ಲಿ ಬಂದವರಲ್ಲಿ ಸಂಗೀತದಲ್ಲಿ ಆಸಕ್ತರಾದವರಿಗೆ, ನನ್ನ ಕಂಗ್ಲಿಷ್ ಬ್ಲಾಗಿನಲ್ಲಿರುವ ಈ ಬರಹ ಆಸಕ್ತಿ ಮೂಡಿಸಬಹುದು ಎನ್ನಿಸಿದ್ದರಿಂದ, ಅದಕ್ಕೊಂದು ಕೊಂಡಿ ಹಾಕುತ್ತಿದ್ದೇನೆ.

ನವರಾತ್ರಿಯ ಸಮಯದಲ್ಲೊಂದು ಹೊಸ ಜತಿಸ್ವರ

Get this widget | Track details | eSnips Social DNA

ಈ ಜತಿಸ್ವರವನ್ನು ಕೇಳಲು ಇಲ್ಲಿ ಚಿಟಕಿಸಿ.

ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

-ಹಂಸಾನಂದಿ

ಮೆತ್ಗಿದ್ದೋರ್ಗೆ ಮತ್ತೊಂದ್ಗುದ್ದು

ಕಾಳ್ಗಿಚ್ಚಿನ ಕೆನ್ನಾಲಗೆಗಳ
ಕುದುರಿಸುವ ಗಾಳಿರಾಯ
ಆರಿಸುವನು ಕಿರುಸೊಡರನ್ನು!
ಕಿರಿಯರಿಗೆಲ್ಲಿಯ ಗೆಳೆತನವು?


ಸಂಸ್ಕೃತ ಮೂಲ:
ವನಾನಿ ದಹತೇ ವಹ್ನೇಃ ಸಖಾ ಭವತಿ ಮಾರುತಃ ||
ಸ ಏವ ದೀಪನಾಶಾಯ ಕೃಶೇ ಕಸ್ಯ ಅಸ್ತಿ ಸೌಹೃದಂ ||

ಕೊ: ಈ ಸುಭಾಷಿತ, ಈ ಮೊದಲೇ ನಾನು ಅನುವಾದಿಸಿದ್ದ ಗೆಳೆತನ ಎಂಬ ಸುಭಾಷಿತದ ಅಚ್ಚು ಅಂದರೂ ತಪ್ಪಿಲ್ಲ!

ಕೊ.ಕೊ: ಈ ಮೊದಲೇ ಇದೇ ತಲೆಬರಹ ಇಟ್ಟು, ಇನ್ನೊಂದು ಅನುವಾದ ಮಾಡಿದ್ದೆ ಅನ್ನೋದು ಈಗ ನೆನಪಿಗೆ ಬಂತು!

-ಹಂಸಾನಂದಿ

ಹೀಗೊಂದು ಪ್ರಶ್ನೋತ್ತರ: ಸುಮ್ಮನೆ, ತಮಾಷೆಗೆ..

ಮೊನ್ನೆ ನಾನು ಓದಿದ ಬರಹವೊಂದು ಇದಕ್ಕೆ ಪ್ರೇರೇಪಣೆ. ಪೂರ್ತಿ ಅರ್ಥವಾಗೋದಕ್ಕೆ, ಕರ್ನಾಟಕ ಸಂಗೀತದ ಸ್ವಲ್ಪ ಪರಿಚಯ ಬೇಕಾಗಬಹುದೇನೋ :)

ಪ್ರಶ್ನೆ: ಅಯ್ಯಂಗಾರ್ ಬೇಕರಿಗಳಲ್ಲಿರೋವ್ರಿಗೆ ಬಹಳ ಇಷ್ಟವಾಗೋ ರಾಗ ಯಾವುದು?
ಉತ್ತರ: ವನಸ್ಪತಿ

ಪ್ರಶ್ನೆ: ಮಹೇಂದರ್ ಹೊಸ ಸಿನೆಮಾ ಮಾಡಿದರೆ, ಅದರಲ್ಲಿ ಹಾಡುಗಳು ಚೆನ್ನಾಗಿರೋಲ್ಲ, ಯಾಕೆ?
ಉತ್ತರ: ಯಾಕಂದ್ರೆ, ಅವರೀಗ ಶ್ರುತಿ ಬಿಟ್ಟು ಹಾಡ್ಬೇಕಾಗತ್ತೆ

ಪ್ರಶ್ನೆ: ಸಂಶೋಧಕ ಚಿದಾನಂದ ಮೂರ್ತಿ ಅವರ ಅಚ್ಚುಮೆಚ್ಚಿನ ರಾಗ ಯಾವ್ದು?
ಉತ್ತರ: ಕನ್ನಡ

ಪ್ರಶ್ನೆ: ಸಂಗೀತಗಾರನ ಹೆಂಡ್ತೀಗೆ ಮಿತಿ ಮೀರಿದ ಕೋಪ ಯಾಕೆ ಬಂತು?
ಉತ್ತರ: ಯಾಕಂದ್ರೆ ಅವನು ಹಾಡಿದ್ದು "ನಿಮಮ ದಪ, ನಿಮಪ ದಪ, ನೀ.. ದಪ" ಅಂತ

ಪ್ರಶ್ನೆ: ಟೆಲಿಸ್ಕೋಪ್ ಇಟ್ಕೊಂಡೋರ್ಗೆ ಇಷ್ಟವಾಗೋ ರಾಗಗಳನ್ನು ಹೆಸರಿಸಿ
ಉತ್ತರ: ಮಂಗಳಕೈಶಿಕಿ, ಬುಧಮನೋಹರಿ, ಗುರುಪ್ರಿಯ ಇತ್ಯಾದಿ....

ಪ್ರಶ್ನೆ: ಪಿ ಟಿ ಉಷಾ ಸ್ಪರ್ಧೆಗಳಲ್ಲಿ ಓಡೋ ಮೊದಲು ಕೇಳ್ತಿದ್ದ ರಾಗ ಯಾವುದು?
ಉತ್ತರ: ವೇಗವಾಹಿನಿ

ಪ್ರಶ್ನೆ: ಅಭಿನವ್ ಭಿಂದ್ರಾಗೆ ತುಂಬಾ ಇಷ್ಟವಾಗೋ ರಾಗಗಳು ಯಾವುದು?**
ಉತ್ತರ: ಮಾರರಂಜಿನಿ, ಚಾರುಕೇಶಿ, ಸರಸಾಂಗಿ, ಹರಿಕಾಂಭೋಜಿ, ಶಂಕರಾಭರಣ ಮತ್ತೆ ನಾಗಾನಂದಿನಿ

ಪ್ರಶ್ನೆ: ಆಕಾಶದಲ್ಲಿ ದುರ್ಬೀನು ಇಟ್ಕೊಂಡು ನೋಡೋ ವಿಜ್ಞಾನಗಳಿಗೆ ಯಾವ ರಾಗಗಳನ್ನ ಕಂಡರಾಗೋದಿಲ್ಲ?
ಉತ್ತರ: ಚಂದ್ರಿಕಾ, ಪೂರ್ಣಚಂದ್ರಿಕಾ, ಸೂರ್ಯಕಾಂತ , ಚಂದ್ರಜ್ಯೋತಿ

ಪ್ರಶ್ನೆ: ಸೂರ್ಯ ಗ್ರಹಣದ ದಿನ ಹಾಡೋದಕ್ಕೆ …

ಬೇಡತಿಗೆ ಬೇಡದ ಮುತ್ತು

ಹೆರರ ಹಿರಿಮೆಗಳ ಅರಿಯದಾ ಮೂಳರು
ಅವರ ಹಳಿಯುವುದರಲಿ ಅಚ್ಚರಿಯೆ ಇಲ್ಲ;
ಆನೆ ನೆತ್ತಿಯ ಸುಪ್ಪಾಣಿ ಮುತ್ತುಗಳ ಬಿಟ್ಟು
ಬೇಡತಿಯು ಗುಲಗಂಜಿಸರವ ತೊಡುವಳಲ್ಲ!


ಸಂಸ್ಕೃತ ಮೂಲ(’ಚಾಣಕ್ಯ ನೀತಿ’ ಯಿಂದ):

ನ ವೇತ್ತಿ ಯೋ ಯಸ್ಯ ಗುಣ ಪ್ರಕರ್ಷಂ
ಸ ತಂ ಸದಾ ನಿಂದತಿ ನಾSತ್ರ ವಿಚಿತ್ರಂ |
ಯಥಾ ಕಿರಾತೀ ಕರಿಕುಂಭಜಾತಾ
ಮುಕ್ತಾಃ ಪರಿತ್ಯಜ್ಯ ಬಿಭಾರ್ಥಿ ಗುಂಜಾಃ ||

-ಹಂಸಾನಂದಿ