Posts

Showing posts from October, 2009

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ..

ಮಡದಿ ಮನೆಯಲಿ ಇಲ್ಲದಿರೆ
ಮನೆ ಮನೆಯಾಗುವುದುಂಟೇ?
ಮನೆಯೊಡತಿ ಇರದ ಮನೆ
ಕಡು ಕಗ್ಗಾಡಿಗಿಂತಲೂ ಕೇಡೇ!ಸಂಸ್ಕೃತ ಮೂಲ:

ನ ಗೃಹಂ ಗೃಹಮಿತ್ಯಾಹುಃ ಗೃಹಿಣೀ ಗೃಹಮುಚ್ಯತೇ |
ಗೃಹಂ ತು ಗೃಹಿಣೀ ಹೀನಂ ಕಾಂತಾರಾದತಿರಿಚ್ಯತೇ||

-ಹಂಸಾನಂದಿ

ದುಷ್ಟರ ಕಂಡರೆ ದೂರವಿರು

ದುಷ್ಟ್ರನ್ನ್ ಕಂಡ್ರೆ ಬಲುದೂರ ಇರ್ಬೇಕು
ಅವರೆಷ್ಟೋದ್-ಬರ್ದು ಮಾಡಿದ್ರೂನೂ!
ಹೆಡೇಲಿ ಬಣ್ಣದ್ ಮಣಿ ಇದ್ಮಾತ್ರಕ್ಕೆ
ಹಾವಿನ್ ಕೆಟ್ಟ್ ವಿಷ ಕಡ್ಮೆಯಾಗತ್ತೇನು?


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ದುರ್ಜನಃ ಪರಿಹರ್ತವ್ಯೋ ವಿದ್ಯಯಾಲಂಕೃತೋSಪಿ ಸನ್‌|
ಮಣಿನಾಭೂಷಿತಃ ಸರ್ಪಃ ಕಿಮಸೌನ ಭಯಂಕರಃ||

-ಹಂಸಾನಂದಿ

ಕೊ.ಕೊ: ಕೆಲವು ಹಾವುಗಳ ಹೆಡೆಯಲ್ಲಿ ಮಣಿಯಿರುತ್ತದೆ ಎಂದೊಂದು ನಂಬಿಕೆ ಇದೆ.

ಒಳಿತನು ತರುವ ನಾಲ್ಕು ಸಂಗತಿಗಳು

ಸಂತಸವೆನುವುದೆ ಸಾಟಿಯಿರದ ಗಳಿಕೆ
ಒಳ್ಳೆಯವರೊಡನಾಟ ಎಣೆಯಿರದ ಹಾದಿ
ತಿಳುವಳಿಕೆ ಹಿರಿದು ವಿಚಾರಿಸಿ ನೋಳ್ಪುದು
ತಳಮಳವಿರದಿದುದೆ ಮಿಗಿಲಾದ ನಲಿವು


ಸಂಸ್ಕೃತ ಮೂಲ:

ಸಂತೋಷಃ ಪರಮೋ ಲಾಭಃ ಸತ್ಸಂಗಃ ಪರಮಾ ಗತಿ:|
ವಿಚಾರಃ ಪರಮಂ ಜ್ಞಾನಂ ಶಮೋ ಹಿ ಪರಮಂ ಸುಖಂ ||

सन्तोषः परमो लाभः सत्सङ्गः परमा गतिः ।
विचारः परमं ज्ञानं शमो हि परमं सुखम् ॥

-ಹಂಸಾನಂದಿ

ಕೊ.ಕೊ: ಈ ಶ್ಲೋಕವನ್ನು ನನ್ನ ಗಮನಕ್ಕೆ ತಂದ ತೊದಲು ಮಾತಿನ ಡಾ.ಕೇಶವಕುಲಕರ್ಣಿಯವರಿಗೆ ನಾನು ಆಭಾರಿ

ಯಾರಿಗೆ ಯಾರ ಜೊತೆ?

ಬಂಗಾರ ರತುನದ ಗಾಜಿನ ಮಣಿಗಳ
ಒಟ್ಟಿಗೆ ಒಂದೇ ಸಾಲಲಿ ತಿಳಿಯದೆ
ಹೆಣ್ಗಳು ಪೋಣಿಸುವುದರಲಿ ಅಚ್ಚರಿಯಿಲ್ಲ;

ಒಂದೇ ಸಾಲಿನಲಿ ಪಂಡಿತ ಪಾಣಿನಿ
ಇಂದ್ರನ ಹಾಗೂ ಹರೆಯದ ಯುವಕರ
ನಾಯಿಕುನ್ನಿಗಳೊಡನೆ ಸೇರಿಸಿಹನಲ್ಲ!ಸಂಸ್ಕೃತ ಮೂಲ:

ಕಾಚಂ ಮಣಿಂ ಕಾಂಚನಮೇಕ ಸೂತ್ರಂ
ಮುಗ್ಧಾ ನಿಬದ್ಧಂತಿ ಅತ್ರ ಕಿಮತ್ರ ಚಿತ್ರಂ
ವಿಚಾರವಾನ್ ಪಾಣಿನಿರೇಕ ಸೂತ್ರೇ
ಶ್ವಾನಂ ಯುವಾನಂ ಮಘವಾನಮಾಹ

-ಹಂಸಾನಂದಿ

ಕೊ: ಸಂಸ್ಕೃತದ ಸೂತ್ರ ಅನ್ನುವುದರ ಶ್ಲೇಷವನ್ನು ಉಳಿಸಿಕೊಳ್ಳಲು ’ಸಾಲು’ ಅನ್ನುವ ಪದ ಬಳಸಿದ್ದೇನೆ.ಸರವನ್ನು ಒಂದು ದಾರದಲ್ಲಿ ಪೋಣಿಸುವಂತೆ, ಒಂದು ಸಾಲಲ್ಲಿ ಪೋಣಿಸುವುದು ನಿಜ ತಾನೇ!

ಕೊ.ಕೊ: ಪಾಣಿನಿಯು ಅವನ ಅಷ್ಟಾಧ್ಯಾಯಿಯಲ್ಲಿ ವ್ಯಾಕರಣದ ನಿಯಮಗಳನ್ನು ಸೂತ್ರ ರೂಪದಲ್ಲಿ ಕೊಟ್ಟಿದ್ದಾನೆ. ಅದರಲ್ಲಿ ೬.೪.೧೩೩ ಸೂತ್ರ ಹೀಗಿದೆ -ಶ್ವ ಯುವ ಮಘೋಣಾಂ ಅತದ್ಧಿತೇ (६. ४. १३३ श्व(न्)युव(न्)मघोणां अतद्धिते ।). ಇದು ಯಾವ ನಿಯಮವನ್ನು ಹೇಳುತ್ತದೆ ಅಂತ ನನಗೆ ಗೊತ್ತಿಲ್ಲವಾದರೂ, ಈ ಮೂರು ಪದಗಳು ಒಂದು ನಿಯಮಕ್ಕೆ ಒಳಗಾಗುತ್ತವೆ ಅಂತಷ್ಟು ಮಾತ್ರ ನಿಖರವಾಗಿ ಹೇಳಬಹುದು.

ತೇಲುವ ಮೋಡಗಳು

ನೀಡುವುದರಲಿ ಇರುವ ಹಿರಿಮೆ
ಗಳಿಸಿ ಕೂಡಿಡುವುದರಲ್ಲಿದೆಯೆ?
ಮಳೆಯನೀವ ಮುಗಿಲೆಂದಿಗು ಮೇಲೇ
ಕೆಳಗಿರುವುದು ಕೂಡಿಡುವ ಕಡಲೇ!

ಸಂಸ್ಕೃತ ಮೂಲ:

ಗೌರವಂ ಪ್ರಾಪ್ಯಯೇ ದಾನಾತ್
ನ ತು ವಿತ್ತಸ್ಯ ಸಂಚಯಾತ್
ಸ್ಥಿತಿರುಚ್ಚೈಃ ಪಯೋದಾನಾಂ
ಪಯೋಧಿನಾಂ ಅಧಃ ಸ್ಥಿತಿಃ

गौरवं प्राप्यते दानात्
न तु वित्तस्य सञ्चयात् ।
स्थितिरुच्चैः पयोदानाम्
पयोधीनां अधः स्थितिः ॥

(ಇವತ್ತು ಸುಭಾಷಿತ ಮಂಜರಿಯಲ್ಲಿ ಓದಿದ್ದಿದು)

-ಹಂಸಾನಂದಿ

ಮಜ್ಜಿಗೆ ಸಿಗದ ದೇವೇಂದ್ರ

ಊಟದ ಕೊನೇಲೇನ್ಕುಡೀಬೇಕು?
ಜಯಂತ ಯಾರಿಗೆ ಮಗ ಗೊತ್ತಾ?
ಹರಿಯ ಆಸರೆ ಎಲ್ಲರಿಗೂ ಸಿಕ್ಕುತ್ತಾ?
ಮಜ್ಜಿಗೆ; ಇಂದ್ರನಿಗೆ ; ಸಿಗೋದಿಲ್ಲ.

ಸಂಸ್ಕೃತ ಮೂಲ:

ಭೋಜನಾಂತೇ ಚ ಕಿಂ ಪೇಯಂ ಜಯಂತಃ ಕಸ್ಯ ವೈ ಸುತಃ |
ಕಥಂ ವಿಷ್ಣು ಪದಂ ಪ್ರೋಕ್ತಂ ತಕ್ರಂ ಶಕ್ರಸ್ಯ ದುರ್ಲಭಂ ||

ಕೊಸರು: ಇದೊಂದು ತರಹ ಚಮತ್ಕಾರದ ಪದ್ಯ. ಅರ್ಥವಿರದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸಬೇಕಾದಂಥಹ ಒಗಟು. ’ಮಜ್ಜಿಗೆ ಇಂದ್ರಗೆ ಸಿಗೋದಿಲ್ಲ’ ಅನ್ನುವ ತರಹ ಅರ್ಥವಿರದ ಸಾಲಿಗೆ ಮೂರು ಪ್ರಶ್ನೆ ಸೇರಿಸಿ, ಒಂದೊಂದು ಪದವೂ ಒಂದೊಂದು ಸಾಲಿಗೆ ಉತ್ತರವಾಗುವಂತೆ ಮಾಡುವುದು ಇದರ ಹೆಚ್ಚಾಯ. ಇದೇ ರೀತಿ ಹಲವಾರು ಸಮಸ್ಯಾ ಪದ್ಯಗಳಿವೆ.

ಕೊನೆಯ ಕೊಸರು: ಇದನ್ನೇ ಮಾದರಿಯಾಗಿಟ್ಟುಕೊಂಡೇ ನಾನು ’ಕನ್ನಡ ಬರ್ದೋನು ಕೋಡಂಗಿ’ ಅಂತ ಒಂದು ನನ್ನದೇ ಚುಟುಕ ಬರೆದಿದ್ದೆ ನೋಡಿ.

ಕೊಟ್ಟ ಕೊನೆಯ ಕೊಸರು: ಸಮಸ್ಯಾ ಪದ್ಯಗಳ ಮೇಲೆ ಒಂದೆರಡು ವರ್ಷ ಮೊದಲು ಇಲ್ಲೊಂದಿಷ್ಟು, ಮತ್ತೆ ಇಲ್ಲೊಂದಿಷ್ಟು ಬರೆದಿದ್ದೆ.

-ಹಂಸಾನಂದಿ

ಬೊಂಬೆ ಹಬ್ಬ ೨೦೦೯

ಹಬ್ಬಗಳು ಬರೋದೇ ಚೆನ್ನ! ಆದ ಮೇಲೆ ಆಗೇ ಹೋಯ್ತಲ್ಲ ಅನ್ಸತ್ತಲ್ಲ!

ಈ ವರ್ಷ ನಮ್ಮ ಮನೆಯಲ್ಲಾದ ನವರಾತ್ರಿಯ ಬೊಂಬೆ ಹಬ್ಬದ ಕೆಲವು ನೋಟಗಳು ಇಲ್ಲಿವೆ:


-ಹಂಸಾನಂದಿ

ವಿಷಯ ಇದ್ದಹಾಗೆ ಹೇಳೋದಕ್ಕೇನು ತೊಂದರೆ?

ಈಗ ತಾನೇ ಬಜಾಜ್ ನ ಒಂದು ಕಮರ್ಶಿಯಲ್ ನೋಡಿದೆ. ಟೀವಿಯಲ್ಲಿ ಬರ್ತಿರತ್ತೇನೋ, ನಾನು ನೋಡಿಲ್ಲ ಇಲ್ಲೀ ತನಕ.ಇದನ್ನ ಮಾಡ್ದವರಿಗೆ ದಿಟವಾಗಿ ಮಾತಾಡೋದಕ್ಕೆ ಏನಾಗಿತ್ತು? ಮೊದಲು ಊರಿನ ಹೆಸರೇ ತಪ್ತಪ್ಪಾಗಿ ಹೇಳಿದ್ದಾರೆ. ’ಮಾತುರ್’ ಅಂತೆ! ಮತ್ತೆ ಅಲ್ಲಿ ’ಬರೀ’ ಸಂಸ್ಕೃತ ಮಾತಾಡ್ತಾರೆ ಅಂತ ಹಸೀ ಸುಳ್ಳನ್ನ ಹೇಳ್ತಿದಾರೆ.

ಅಲ್ಲಿ ಸಂಸ್ಕೃತವನ್ನು ಮಾತಾಡೋವ್ರು ಇರೋದೇನೋ ನಿಜವೇ. ಆದರೆ ಅವರು ’ಸಂಸ್ಕೃತವನ್ನೂ’ ಮಾತಾಡಬಲ್ಲರು, ಮಾತಾಡ್ತಾರೆ -ಹೊರತು ’ಸಂಸ್ಕೃತವೊಂದನ್ನೇ’ ಅಲ್ಲ. ಅವೆರಡಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ ಅಲ್ವೇ?

ಬಜಾಜ್ ಬೈಕ್ ಒಂದು ಲೀಟರ್ ನಲ್ಲಿ ಮಂಗಳೂರಿಂದ ಮತ್ತೂರಿಗೆ ಹೋಗಬಹುದೇನೋ ನಿಜ. ಆದರೆ ಅಲ್ಲಿನವರೊಡನೆ ಮಾತಾಡ್ಬೇಕಾದ್ರೆ, ಅವರ ಮಾತನ್ನ ಅರ್ಥ ಮಾಡ್ಕೋಬೇಕಾದ್ರೆ ಸಂಸ್ಕೃತ ತಿಳೀಬೇಕು ಅನ್ನೋ ತರಹ ತೋರಿಸಿರೋದು ಸುಳ್ಳು.

ಅಂದಹಾಗೆ ಮತ್ತೂರು ಶಿವಮೊಗ್ಗದಿಂದ ಸುಮಾರು ಐದಾರು ಕಿಲೋಮೀಟರ್ ದೂರದಲ್ಲಿದೆ

-ಹಂಸಾನಂದಿ