Posts

Showing posts from December, 2009

ಅಶ್ವಥ್ - ನನ್ನ ಮೆಚ್ಚಿನ ಕೆಲವು ಹಾಡುಗಳು

ಸುಮಾರು ೮೦ನೇ ಇಸವಿಯ ಸಮಯ ಇರಬೇಕು. ನಾನು ಬಹುಶ ಮಿಡಲ್ ಸ್ಕೂಲ್ ನಲ್ಲಿ ಇದ್ದಿರಬೇಕು. ನನ್ನ ಮಾವ ಒಂದು ಕಸೆಟ್ಟ್ ತಂದಿದ್ದರು. ಆ ’ದೀಪಿಕಾ’ ಅನ್ನುವ ಭಾವಗೀತೆಗಳ ಮೊದಲ ಕಸೆಟ್ಟಿನಲ್ಲೇ ನಾನು ಅಶ್ವಥ್ ಅವರ ಧ್ವನಿಯನ್ನು ಮೊದಲು ಕೇಳಿದ್ದು. ಅದರಲ್ಲಿ ಶಿವಮೊಗ್ಗ ಸುಬ್ಬಣ್ಣ, ಸುಲೋಚನಾ, ಮತ್ತೆ ಅಶ್ವಥ್ ಹಾಡಿದ್ದ ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಗಳಿದ್ದವು. ಆ ಹಾಡುಗಳನ್ನು ನಂತರ ಕಡಿಮೆ ಎಂದರೆ ನೂರಾರು ಸಲವಾದರೂ ಕೇಳಿದ್ದಿರಬೇಕು ಅನ್ನಿಸುತ್ತೆ. ಅದರ ನಂತರ, ಅವರ ರಾಗ ಸಂಯೋಜನೆಯಲ್ಲಿದ್ದ ’ಬಾರೋ ವಸಂತ’, ’ಮೈಸೂರ ಮಲ್ಲಿಗೆ’ ಯ ಭಾವಗೀತೆಗಳು ಮತ್ತೆ ಶಿಶುನಾಳ ಷರೀಫರ ಹಲವಾರು ರಚನೆಗಳು ನನಗೆ ಮೆಚ್ಚಾದವು.

ಹೆಚ್ಚಿನ ಗಾಯಕರ ಕಂಠಕ್ಕಿಂತ ಬೇರೆಯದಾಗಿದ್ದ ಅಶ್ವಥ್ ಧ್ವನಿ ಮನಸೆಳೆದ್ದಿದ್ದಂತೂ ಸುಳ್ಳಲ್ಲ. ಎಲ್ಲ ಹಾಡುಗಳಿಗೂ ಅಂತಹ ಹೊಂದದ ಧ್ವನಿ ಅವರದು. ನಿಜ ಹೇಳಬೇಕೆಂದರೆ, ಅವರು ಹಾಡುವುದಕ್ಕಿಂತ, ಬೇರೆ ಕಲಾವಿದರ ಕಂಠವನ್ನು ಬಳಸಿ, ಅವರು ರಾಗ ಸಂಯೋಜಿಸಿರುವ ಹಾಡುಗಳೇ ನನಗೆ ಹೆಚ್ಚು ಹಿಡಿಸುತ್ತಿದ್ದವು.

ನನಗೆ ಬಹಳ ಹಿಡಿಸಿದ, ಈ ಕ್ಷಣದಲ್ಲಿ ಮನಸ್ಸಿಗೆ ಬಂದ, ಕೆಲವು ಹಾಡುಗಳನ್ನಷ್ಟೇ ಪಟ್ಟಿ ಮಾಡುತ್ತಿರುವೆ.

೧. ನೇಸರ ನೋಡು ನೇಸರ ನೋಡು (ಕಾಕನಕೋಟೆ ಚಿತ್ರದ್ದು)
೨. ಹಾವು ತುಳಿದೇನೆ ಮಾನಿನಿ ಹಾವು ತುಳಿದೇನೆ
೩. ಸ್ನೇಹ ಮಾಡಬೇಕಿಂಥವಳ
೪. ಎಂಥಾ ಮರುಳಯ್ಯ ಇದು ಎಂಥ ಮರುಳು (ಸ್ಪಂದನ ಚಿತ್ರದ್ದು)
೫. ಅಳಬೇಡ ತಂಗಿ ಅಳಬೇಡ
೬. ಮದುವೆಯಾಗಿ ತಿಂಗಳಿಲ್ಲ
೭. ಈ…

ಯೋಗಿಗಳಿಗೂ ನಿಲುಕದ್ದು

ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;
ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ!
ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ
ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!

ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ)

ಮೌನಾನ್ಮೂಕಃ ಪ್ರವಚನಪಟುರ್ವಾಚಕೋ ಜಲ್ಪಕೋ ವಾ
ಕ್ಷಾಂತ್ಯಾ ಭೀರುರ್ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಧೃಷ್ಟಃ ಪಾರ್ಶ್ವೇ ವಸತಿ ನಿಯತ ದೂರತಶ್ಚಾಪ್ರಗಲ್ಭಃ
ಸೇವಾಧರ್ಮಃ ಪರಮ ಗಹನೋ ಯೋಗಿನಾಮಪ್ಯಗಮ್ಯಃ

-ಹಂಸಾನಂದಿ

ಕತ್ತೆಗೊಂದು ಕಿವಿಮಾತು

ಎಲೇ ಕತ್ತೆ, ಬಟ್ಟೆ ಗಂಟನು ಹೊರುತ ಒಣಹುಲ್ಲ ತಿನುವೆಯೇಕೆ?
ರಾಜಲಾಯಕೆ ನಡೆದು ನೀ ಕಡಲೆ ಉಸಳಿಯ ಸುಖದಿ ಮೆಲುತಿರು.
"ಬಾಲವಿದ್ದರೆ ಕುದುರೆ" ಎಂದೆನುವ ಜನರದೇ ಉಸ್ತುವಾರಿ ಅಲ್ಲಿ.
ಅವರು ನುಡಿದರೆ ರಾಜನೊಪ್ಪುವನು ಮಿಕ್ಕವರು ಇರುವರು ಸುಮ್ಮನೆ

ಸಂಸ್ಕೃತ ಮೂಲ:

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪೃಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ

-ಹಂಸಾನಂದಿ

ಕೊಸರು: ಇತ್ತೀಚೆಗೆ ಕರ್ನಾಟಕ ಸರ್ಕಾರ ’ವಿಕಿಪೀಡಿಯಾ’ ಮಾದರಿಯ ’ಕಣಜ’ (http //kanaja.in/) ಅನ್ನುವ ಜಾಲತಾಣವನ್ನು ಅನಾವರಣೆಗೊಳಿಸಿದ್ದಕ್ಕೂ, ಈ ಪದ್ಯವನ್ನು ನಾನು ಅನುವಾದ ಮಾಡಿದ್ದಕ್ಕೂ ಯಾವುದೇ ನಂಟಿಲ್ಲ ಅನ್ನುವುದನ್ನು ತಿಳಿಯಪಡಿಸಬಯಸುವೆ ;)

ತಿಳಿಗೇಡಿಗಳ ಗುರುತು

ತಿಳಿಗೇಡಿಗಳ ಗುರುತಿಸುವುದು ಹೇಗೆನುವಿರಾ?
ಕೇಳಿ - ಇವೆಯಲ್ಲ ಕುರುಹುಗಳು ಐದು!
ಸಿಡುಕು; ಸೊಕ್ಕು; ಪರರ ಮಾತಲುದಾಸೀನ;
ಮೊಂಡುವಾದ ಮತ್ತೆ ಕೆಡುಕು ತುಂಬಿದ ಮಾತು!

ಸಂಸ್ಕೃತ ಮೂಲ:

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢವಾದಶ್ಚ ಪರವಾಕ್ಯೇಶ್ವನಾದರಃ ||

-ಹಂಸಾನಂದಿ

ಐದು ವರ್ಷಗಳ ’ಯುಗ’

ಈಗಂತೂ ನಮಗೆ ’ಯುಗ’ ಅಂದ್ರೆ ಬಹಳ ದೊಡ್ಡ ಕಾಲಮಾನ ಅಂತ ಅಂದ್ಕೊಂಡ್ಬಿಡ್ತೀವಿ. ದಿನ ನಿತ್ಯದ ಮಾತುಕತೇಲೀ ’ಒಂದ್ ಕೆಲಸ ಹೇಳಿದ್ರೆ, ಒಂದ್ ಯುಗ ಮಾಡ್ತಾನೆ’ ಅಂತೆಲ್ಲ ಅಂತಿರ್ತೀವಲ್ಲ, ಅದಕ್ಕೆ ಈ ಭಾವನೆಯೇ ಕಾರಣ.

ರಾಮ ತ್ರೇತಾಯುಗದಲ್ಲಿದ್ದನಂತೆ. ಕೃಷ್ಣ ದ್ವಾಪರಯುಗದಲ್ಲಿದ್ದನಂತೆ. ಒಂದೊಂದು ಯುಗಕ್ಕೂ ಎಷ್ಟೋ ಸಾವಿರಾರು ವರ್ಷಗಳು ಅಂತ ಲೆಕ್ಕಾಚಾರವೇ ಇದೆ. ಅದೆಲ್ಲಾ ಹೇಳಿ ತಲೆ ಕೊರೆಯೋದಿಲ್ಲ ಈಗ. ಆದ್ರೆ, ಯಾವಾಗಲೂ ’ಯುಗ’ ಅನ್ನೋ ಮಾತಿಗೆ ಈ ತಿಳಿವು ಇರಲಿಲ್ಲ ಅನ್ನೋದನ್ನ ಸ್ಪಷ್ಟ ಪಡಿಸೋಕೆ ಒಂದು ನಾಕು ಸಾಲು ಬರೆಯುವೆ ಅಷ್ಟೇ.

ವೇದಗಳಲ್ಲಿ ಇರುವ ಜ್ಯೋತಿಷಕ್ಕೆ (astronomy) - ಅಂದರೆ ಆಕಾಶಕಾಯಗಳ, ಮತ್ತೆ ಅವು ಹುಟ್ಟುವ ಮುಳುಗುವ ಸಮಯಗಳನ್ನು ಕಂಡುಹಿಡಿಯುವ ಲೆಕ್ಕಾಚಾರಗಳ ತಿಳುವಳಿಕೆ ಅಂತಲೇ ಅರ್ಥ. "ನಿಮಗೆ ಶನಿಕಾಟ ಇದೆ, ರಾಹು ಕ್ರೂರ ದೃಷ್ಟಿ ಇದೆ" ಅನ್ನೋ ತರಹದ ಫಲಜ್ಯೋತಿಷ (astrology) ಅಲ್ಲ. ಈ ಜ್ಯೋತಿಷಕ್ಕೆ ನಮಗೆ ಸಿಗೋ ಒಳ್ಳೇ ಆಕರ ಅಂದರೆ ಲಾಗಧನ ವೇದಾಂಗ ಜ್ಯೋತಿಷ. ಭಾರತದಲ್ಲಿ ಜ್ಯೋತಿಷ್ಶಾಸ್ತ್ರದ ಬಗ್ಗೆ ದೊರಕಿರುವ ಅತೀ ಹಳೇ ಹೊತ್ತಿಗೆ. ಈ ಪುಸ್ತಕದಲ್ಲಿ ಇರುವ ಅಂತರಿಕ ಆಧಾರಗಳಿಂದ ಈ ಪುಸ್ತಕವನ್ನ ಬರೆದಿರೋದು ( ಬರೀತಿದ್ರೋ ಇಲ್ವೋ, ಆಗ ಬರವಣಿಗೆ ಇತ್ತೇ, ಲಿಪಿ ಇತ್ತೇ, ಇವೆಲ್ಲ ಜಿಜ್ಞಾಸೆ ಈಗ ಬೇಡ - ಆದರೆ ಒಟ್ಟುಗೂಡಿಸಿರೋದು (compilation) ಅಂತಲಾದ್ರೂ ಹೇಳಬಹುದು - ಸುಮಾರು ಕ್ರಿ.ಪೂ.೧೪೦೦ ರಲ್ಲಿ; ಅಂದರೆ ಹ…