Posts

Showing posts from 2010

ಸಂಕೇತಿ ಸಮ್ಮೇಳನ ೨೦೧೦/೨೦೧೧

Image
೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ!

ಶಿವಮೊಗ್ಗ ಜಿಲ್ಲೆಯ ಮತ್ತೂರು-ಹೊಸಳ್ಳಿಗಳಲ್ಲಿ ನಡೆಯುತ್ತಿರುವ ಈ ಮೂರು ದಿನದ ಸಮ್ಮೇಳನ, ಕರ್ನಾಟಕವನ್ನು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಬಂದು ತಮ್ಮ ಮನೆಯಾಗಿಸಿಕೊಂಡ ಎಲ್ಲ ಸಂಕೇತಿಗಳಿಗೂ ಒಂದು ಸಂಭ್ರಮದ ಆಚರಣೆಯೇ ಸರಿ.

ಸಮ್ಮೇಳನದ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ: www.sankethi.net/

ಸಮ್ಮೇಳನಕ್ಕೆ ನಾನಂತೂ ಹೋಗಲಾಗಲಿಲ್ಲ, ಆದರೇನಂತೆ? ಈ ಸಾವಿರ ವರ್ಷದ ಹಿಂದಿನ ಈ ವಲಸೆಯ ಬಗ್ಗೆ ಇರುವ, ಬಾಯಿಂದ ಬಾಯಿಗೆ ಹರಿದು ಬಂದಿರುವ ಕಥೆಯೊಂದಕ್ಕೆ ನನ್ನದೇ ತಿರುವೊಂದನ್ನು ಕೊಟ್ಟು ನಾನು ಬರೆದಿದ್ದ ಸಣ್ಣ ಕಥೆಯೊಂದನ್ನ ಮತ್ತೆ ಇಲ್ಲಿ ಹಾಕುತ್ತಿದ್ದೇನೆ. ಮೊದಲು ಈ ಕಥೆ ಬರೆದಾಗ ನನಗೆ ಗೊತ್ತಿಲ್ಲದಿದ್ದ ಕೆಲವು ಸಂಗತಿಗಳು ಈಗ ತಿಳಿದು ಬಂದಿದ್ದರಿಂದ, ಒಂದೆರಡು ವಿವರಗಳನ್ನು ಅದಕ್ಕೆ ತಕ್ಕಂತೆ ಬದಲಿಸಿರುವೆ.(ಸಂಕೇತಿಗಳು ತಮ್ಮ ವಲಸೆಗೆ ಕಾರಣಳಾದವಳೆಂದು ಸ್ಮರಿಸುವ ನಾಚಾರಮ್ಮನ ವಿಗ್ರಹ,
ಲಕ್ಷ್ಮೀಕೇಶವ ದೇವಾಲಯ, ಕೌಶಿಕ, ಹಾಸನ ಜಿಲ್ಲೆಯಲ್ಲಿ)

-----------------------------------------------------------------------------------------------------------------------------------------------------------
ಒಂದು ವಲಸೆಯ ಹಿಂದೆ...
----------------------…

ಬದಲಾಗುವ ಬಣ್ಣಗಳು

Image
ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ ಬಣ್ಣಗಳೇ ಬೇರೆ! ’ಕಾಲಾಯ ತಸ್ಮೈ ನಮಃ ’ ಅಂತ ಕಾಲ ಕಾಲಕ್ಕೆ ಬಣ್ಣ ಬದಲಿಸೋ ಗಿಡ ಮರಗಳ ಬಗ್ಗೆ ಹೇಳ್ತಿದೀನಿ ನಾನು. ಭೂಮಧ್ಯರೇಖೆ ಇಂದ ದೂರ ಹೋದಷ್ಟೂ, ಚಳಿಗಾಲದಲ್ಲಿ ಎಲೆ ಉದುರಿಸೋ ಮರಗಳು ಹೆಚ್ಚುತ್ತಾ ಹೋಗುತ್ತವೆ. ಎಲೆ ಉದುರಿಸೋ ಮೊದಲು ಇವು ಹಳದಿ ಕೆಂಪು ಕಂದುಗಳ ನೂರಾರು ಛಾಯೆಗಳನ್ನು ತಾಳಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಎಷ್ಟೋ ಬಾರಿ ಹೀಗೆ ಬದಲಾಗುವ ಬಣ್ಣಗಳನ್ನ ನೋಡೋದಕ್ಕೇ ಅಂತಲೇ ನೂರಾರು ಮೈಲಿ ಹೋಗಿದ್ದೂ ಇದೆ. ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎಲೆ ಉದುರಿಸುತ್ತಾ ನವಂಬರ್ ಹೊತ್ತಿಗೆ ಮರಗಳೆಲ್ಲ, ಪಾಪ, ಬೋಳಾಗಿ ನಿಂತು ಬಿಡುತ್ತವೆ. ಮತ್ತೆ ಮಾರ್ಚ್ ತಿಂಗಳಲ್ಲಿ ವಸಂತ ಬಂದ ಮೇಲೆಯೇ ಇವು ಚಿಗುರಬೇಕು.

ನಾನು ಇರುವ ಕಡೆ ಈ ದೇಶದ ಬೇರೆಡೆಗಳಿಗಿಂತ ಚಳಿ ಕಡಿಮೆ. ಹಾಗಾಗಿ ಇಲ್ಲಿ ಎಲೆ ಉದುರಿಸದ ಸೂಚೀಪರ್ಣ (ಕೋನಿಫರ್) ಮರಗಳೇ ಹೆಚ್ಚಾದ್ದರಿಂದ, ಎಲೆ ಉದುರಿಸುವ ಮರಗಳ ವರ್ಣ ವೈಭವ ಕಡಿಮೆಯಾದರೂ ಇಲ್ಲ ಅಂತಿಲ್ಲ. ಅದರಲ್ಲೂ, ರಸ್ತೆ ಬದಿಯಲ್ಲಿ ನೆಟ್ಟ ಮರಗಳು ಮೂಲವಾಗಿ ಇನ್ನೂ ಚಳಿಯಿರುವ ಕಡೆಯಿಂದ ಬಂದ ಮರಗಳಾಗಿದ್ದರೆ (ಉದಾ: ಕೆನೇಡಿಯನ್ ಮೇಪಲ್), ಇಲ್ಲೂ ಒಳ್ಳೊಳ್ಳೆ ಬಣ್ಣಗಳು ಬರುವುದುಂಟು. ಆದರೆ ಇಲ್ಲಿ ಅದಕ್ಕೆ ಸುಮಾರು ಡಿಸೆಂಬರ್ ವರೆಗೂ ಕಾಯಬೇಕು.

ಕಲ್ಲು ಕಟ್ಟಿ ನೀರಿಗೆ ತಳ್ಳು!

ಕತ್ತಿಗೆ ಕಲ್ಲನು ಕಟ್ಟಿ ನೀರಿಗೆ
ತಳ್ಳುವುದೊಳಿತು ಇಬ್ಬರನು;
ಇದ್ದರೂ ಪರರಿಗೆ ಕೊಡದವನ
ಉಜ್ಜುಗಿಸದ ಹಣವಿರದವನ!

ಸಂಸ್ಕೃತ ಮೂಲ:

ದ್ವೌ ಅಂಭಸಿ ನಿವೇಷ್ಟವ್ಯೋ ಗಲೇ ಬದ್ಧ್ವಾ ದೃಢಾಂ ಶಿಲಾಮ್ |
ಧನವಂತಂ ಅದಾತಾರಂ ದರಿದ್ರಂ ಚ ಅತಪಸ್ವಿನಮ್ ||

द्वौ अम्भसि निवेष्टव्यौ गले बद्ध्वा दॄढां शिलाम् ।
धनवन्तम् अदातारम् दरिद्रं च अतपस्विनम् ॥

-ಹಂಸಾನಂದಿ

ಮುಕುಂದಾಷ್ಟಕ

Image
ಅಂಗೈದಾವರೆಯಿಂದಂಗಾಲತಾವರೆಯನ್ನು
ಮೊಗದತಾವರೆಯೊಳಗೆ ಇರಿಸಿದವನ
ತೆರೆದಾಲದೆಲೆ ಮೇಲೆ ತಾ ಪವಡಿಸಿರುವ
ಎಳೆಯ ಮುಕುಂದನನು ನೆನೆವೆ ಮನದಲ್ಲಿ ||೧||

ಲೋಕಗಳ ಕೊನೆಗೊಳಿಸಿ ಆಲದೆಲೆಮೇಲೆ
ಮಲಗಿಹನ ಕೊನೆಮೊದಲೆರಡೂ ಇlಲ್ಲದವನ
ಎಲ್ಲರೊಡೆಯನ ನಮ್ಮ ಒಳಿತಿಗೈತಂದಿರುವ
ಮುದ್ದು ಮುಕುಂದನನು ನಾನು ನೆನೆವೆ ಮನದಲ್ಲಿ ||೨||

ಕನ್ನೈದಿಲೆಯ ತೆರದ ನವಿರು ಮೈಯವನ
ದೇವದೇವತೆಗಳಾದರಿಸಿದ ಪಾದ ಕಮಲನ
ಆಸರೆಯಲಿರುವರಿಗೆ ಕೇಳಿದೆಲ್ಲವ ಕೊಡುವ
ಪುಟ್ಟ ಮುಕುಂದನನು ನಾನು ನೆನೆವೆ ಮನದಲ್ಲಿ ||೩||

ಎಸೆವ ಮುಂಗುರುಳವನ ಸರಗಳಲಿ ಮೆರೆಯುವನ
ಸಿಂಗರದಿ ಮೂಡಿರುವ ಸುಲಿಪಲ್ಲ ಚೆಲುವನ
ತೊಂಡೆ ತುಟಿ ಸೊಗಸಿನ ಅಗಲ ಕಂಗಳಿಹ
ಕೂಸು ಮುಕುಂದನ ನಾನು ನೆನೆವೆ ಮನದಲ್ಲಿ ||೪||

ಹೊರಹೋದ ಗೋಪಿಯರ ಮನೆಗಳಲಿರುವ
ನಿಲುವಿನ ಹಾಲ್ಬೆಣ್ಣೆ ಮೊಸರುಗಳೆಲ್ಲವನು
ಮನಸಾರೆ ತಿಂದು ಕಪಟದಿ ನಿದ್ದೆಯಗೈವ
ಕಳ್ಳ ಮುಕುಂದನನು ನಾನು ನೆನೆವೆ ಮನದಲ್ಲಿ ||೬||

ಯಮುನೆಯೊಳಡಗಿದ್ದ ಘೋರ ಕಾಲಿಯನ
ಹೆಡೆಮೇಲೆ ಕುಣಿದು ನಲಿದದರ ಬಾಲವನೇ
ಕೈಲಿ ಹಿಡಿದವವನ ಚಂದಿರನ ಮೊಗದವನ
ಬಾಲ ಮುಕುಂದನ ನಾನು ನೆನೆವೆ ಮನದಲ್ಲಿ ||೬||

ಒರಳುಕಲ್ಲಿಗೆ ಕಟ್ಟಿಸಿಕೊಂಡ ಉದಾರಿ ಶೌರಿಯ
ಮತ್ತಿ ಮರ ಜೋಡಿಯನು ಕೆಡಹಿಬೀಳಿಸಿದನ
ಅರಳಿರುವ ತಾವರೆಯ ದಳದಗಲ ಕಣ್ಣಿರುವ
ಪೋರ ಮುಕುಂದನನು ನೆನೆವೆ ಮನದಲ್ಲಿ ||೭||

ಮೊಲೆಹಾಲ ಕುಡಿಯುತಲಿ ತಾಯ ಮೊಗವನ್ನು
ಆದರದಿ ನೋಡುತಿಹ ಕಮಲ ಕಣ್ಣವನ
ಮೊದಲಿಗನ ಚಿನ್ಮಯನ ಅಳವು ಮೀರಿದನ
ಕಂದ ಮುಕುಂದನ ನಾನು ನೆನೆವೆ ಮನದಲ್ಲಿ ||೮||

ಸಂಸ್ಕೃತ ಮೂಲ:

ರಾಜ್ಯೋತ್ಸವ ೨೦೧೦

ರಾಜ್ಯೋತ್ಸವಕ್ಕೆಂದು ಎರಡು ವಾರಗಳ ಹಿಂದೆ ಇಲ್ಲೊಂದು ವಿಶೇಷ ಸಂಗೀತ ಕಚೇರಿ ನಡೆಯಿತು. ಕರ್ನಾಟಕ ಸಂಗೀತದ ಕಚೇರಿ ಎಂದರೆ ಸಾಧಾರಣವಾಗಿ ಮೂರು ನಾಲ್ಕು ಭಾಷೆಗಳ ರಚನೆಗಳನ್ನು ಹಾಡುವುದು ರೂಢಿ. ಆದರೆ ಇದು ರಾಜ್ಯೋತ್ಸವಕ್ಕಾದ್ದರಿಂದ ಒಳ್ಳೆಯ ಕನ್ನಡ ರಚನೆಗಳನ್ನೇ ಆಯ್ದು ಹಾಡಿದವರು ಶ್ರೀ ರಾಘವನ್ ಮಣಿಯನ್. ಇದರಲ್ಲಿ ಈ ಸಂದರ್ಭಕ್ಕೆಂದೇ ರಚಿಸಿದ ವಿಶೇಷ ರಾಗ-ತಾನ-ಪಲ್ಲವಿಯೂ ಇತ್ತು.

ಪಲ್ಲವಿಯ ಸಾಹಿತ್ಯ ಹೀಗಿತ್ತು:

ಕನ್ನಡದ ಕಾವೇರಿ
ಶಾರದೆಯ ಶೃಂಗೇರಿ
ನವರಸದಿ ಮಿನುಗುತಲಿ
ಕನ್ನಡಮ್ಮ ಭುವನೇಶ್ವರಿ!

ಎರಡು ರಾಗಗಳಲ್ಲಿ ಮೂಡಿದ ಈ ಪಲ್ಲವಿ ಕನ್ನಡ - ಮತ್ತೆ ನವರಸ ಕನ್ನಡ ರಾಗಗಳಲ್ಲಿದ್ದು ಈ ಸಂದರ್ಭಕ್ಕೆ ಬಲು ತಕ್ಕದ್ದಾಗಿತ್ತು.

ಈ ಕಚೇರಿಗೆ ನನ್ನದೂ ಒಂದು ಚೂರು ಅಳಿಲು ಸೇವೆ ಇತ್ತು. ನಾನು ಬಸವಣ್ಣನವರ ವಚನವೊಂದರ ಸಾಹಿತ್ಯವನ್ನಿಟ್ಟುಕೊಂಡು ರಚಿಸಿದ್ದ ವರ್ಣವೊಂದನ್ನು ರಾಘವನ್ ಅವರು ಹಾಡಿದ್ದು ನನಗೆ ಬಹಳ ಸಂತೋಷ ಆಯ್ತು ಅಂತ ಹೇಳ್ಬೇಕಾಗೇ ಇಲ್ಲ :) ಕೆಳಗಿನ ವಿಡಿಯೋದಲ್ಲಿ ಮೊದಲು ಎರಡು ಪದ್ಯಗಳ ನಂತರ ಈ ವರ್ಣ ಮೊದಲಾಗುತ್ತೆ - "ನಾದಪ್ರಿಯ ಶಿವನೆಂಬರು" - ಇದು ನಾಗಸ್ವರಾವಳಿ ರಾಗದಲ್ಲಿದೆ.ಒಂದು ಕಚೇರಿಯಲ್ಲಿ ತ್ಯಾಗರಾಜರ ರಚನೆಗಳಿರದೇ ಇರುವುದು ಅಪರೂಪವೇ. ತ್ಯಾಗರಾಜರು ಕನ್ನಡ ಭಾಷೆಯಲ್ಲಿ ರಚನೆಮಾಡಿಲ್ಲ. ಆದರೆ, ನಾನು ಮಾಡಿದ್ದ ಅನುವಾದವೊಂದನ್ನು, ಮೂಲದ ಮಟ್ಟಿನಲ್ಲೇ ರಾಘವನ್ ಅವರು ಹಾಡಿದ್ದನ್ನು ಇಲ್ಲಿ ನೋಡಿ. ರಾಗ ಆಂದೋಳಿಕ - ರಾಗಸುಧಾರಸ:ಬಯಕೆಯ ಗಾಳ

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

-ಹಂಸಾನಂದಿ

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ.

ಕೊ.ಕೊ: ಯಾವಾಗಲೂ ಏನಾದರೂ ಅನುವಾದ ಮಾಡಿದಾಗ, ಅನುವಾದ ಮಾಡೋದಕ್ಕಿಂತ ಹೆಚ್ಚಿಗೆ ವೇಳೆ ಅದಕ್ಕೆ ತಲೆಬರಹದ ಮೇಲೆ ಯೋಚಿಸಬೇಕಾಗತ್ತೆ ನನಗೆ. ಅಷ್ಟು ಯೋಚಿಸಿದರೂ ಒಂದು ಒಳ್ಳೇ ತಲೆಬರಹ ಹೊಳೆಯೋದೂ ಕಷ್ಟ. ಇವತ್ತು ಒಂದಲ್ಲ ಮೂರು ಒಳ್ಳೇ ತಲೆ ಬರಹಗಳು ಸಿಕ್ಕವು -ಗೆಳೆಯರಿಂದ. ಆದರೆ ಒಂದೇ ತಾನೇ ಇಡಕ್ಕಾಗೋದು :) - ಇನ್ನೆರಡು ತಲೆಬರಹಗಳೂ ಕೂಡ ನನಗೆ ಹಿಡಿಸಿದವು - "ಬಾಳಿನಿಂದ ಬೆಂಕಿಗೆ" ಮತ್ತೆ "ಮುತ್ತಿನ ಬೆಲೆ". ಅದಕ್ಕೆ ಇಲ್ಲಿ ಟಿಪ್ಪಣಿ ಹಾಕಿದೆ!

ಮರೆಯಲಾರದ ಹಳೆಯ ಕಥೆಗಳು - ೨

ಹಲವಾರು ದಿನಗಳ ನಂತರ ಒಂದು ಮರೆಯಲಾರದ ಕಥೆಯ ಬಗ್ಗೆ ಬರೆಯಬೇಕೆನ್ನಿಸಿತು. ಕೆಲವು ದಿನಗಳ ಹಿಂದೆ ಅಶ್ವತ್ಥರ ನಾಸೀಂ ಬೇಗಂ ಅನ್ನುವ ಒಂದು ಸಣ್ಣಕತೆಯ ಬಗ್ಗೆ ಬರೆದಿದ್ದೆ. ಇವತ್ತೂ ಅವತ್ತಿನ ತರಹವೇ ಇನ್ನೊಂದು ಸರಳವಾದ ಕಥೆಯಮೇಲೆ ಬರೆಯುತ್ತೇನೆ.

ಗೊರೂರು ರಾಮಸ್ವಾಮಯ್ಯಂಗಾರರು ಹೆಚ್ಚಾಗಿ ಹರಟೆ, ಅನುಭವಕಥನ, ಹಳ್ಳಿಯ ಜೀವನದ ವಿಶೇಷತೆಗಳನ್ನು ಹೆಕ್ಕಿ ತೋರಿಸುವ ಬರಹಗಳಿಗೆ ಪ್ರಖ್ಯಾತರು. ಅಲ್ಲದೆ ಸಣ್ಣಕತೆಗಳನ್ನೂ, ನೀಳ್ಗತೆಗಳನ್ನೂ ಬರೆದಿದ್ದಾರೆ. ’ನಮ್ಮೂರ ರಸಿಕರು’, ’ಹಳ್ಳಿಯ ಚಿತ್ರಗಳು’ ಮೊದಲಾದ ಅವರ ಪ್ರಬಂಧ ಸಂಕಲನಗಳು ಬಹಳ ಚೆನ್ನಾಗಿವೆ. ನಮಗೆ ೧೯೩೦ ರ ದಕ್ಷಿಣ ಕರ್ನಾಟಕದ ಹಳ್ಳಿಯ ಜನಜೀವನವನ್ನು ರಸವತ್ತಾಗಿ ಇಲ್ಲಿ ಅವರು ಚಿತ್ರಿಸಿದ್ದಾರೆ. ಚಲನಚಿತ್ರವಾಗಿ ಭಾರೀ ಯಶಸ್ಸು ಗಳಿಸಿದ ಇವರ ಬೂತಯ್ಯನ ಮಗ ಅಯ್ಯು ಕಥೆ ಯಾರಿಗೆ ಗೊತ್ತಿಲ್ಲ ಹೇಳಿ? ಅಲ್ಲದೆ ಪ್ರವಾಸಿಯ ವರದಿಯಾದ ಅಮೆರಿಕೆಯಲ್ಲಿ ಗೊರೂರು ಎಂಬ ಇವರ ಪುಸ್ತಕವೂ ಓದಬೇಕಾದಂತಹದ್ದೇ. ಬಹುಶಃ ತಮ್ಮ ೭೦ ರ ಮೇಲಿನ ವಯಸ್ಸಿನಲ್ಲಿ ಅವರು ಮಾಡಿದ ವಿದೇಶ ಯಾತ್ರೆಯ ಅನುಭವವನ್ನು ಅವರು ಸೊಗಸಾಗಿ ಹೇಳಿದ್ದಾರೆ. ಈ ಪುಸ್ತಕಗಳನ್ನು ಓದದಿದ್ದವರು ಖಂಡಿತ ಓದಿ ಎನ್ನುವ ಶಿಫಾರಸು ನನ್ನದು.

ರಾಮಸ್ವಾಮಯ್ಯಂಗಾರರ ಸಣ್ಣ ಕಥೆಯೊಂದು ವರ್ಷಗಟ್ಟಲೆಯಿಂದ ನನ್ನ ಮನಸ್ಸಿನಲ್ಲಿ ನೆಲೆನಿಂತಿದೆ. ಇದೊಂದು ಎಲ್ಲಾ ಕಾಲಕ್ಕೂ, ಎಲ್ಲಾ ದೇಶಕ್ಕೂ ಹೊಂದುವಂತಹ ಕಥೆ. ಒಳ್ಳೆಯ ಸಣ್ಣ ಕಥೆಗಳ ಹಿರಿಮೆಯೇ ಅದಲ್ಲವೇ? ಅದಕ್ಕೇ …

ವಕ್ರನಾದ ಶುಕ್ರ

Image
ಇದೇನಿದು? ಶುಕ್ರನಿಗೆ ವಕ್ರದೃಷ್ಟಿ ಬೀರ್ತಾನೆ ಅನ್ನೊ (ಕು)ಖ್ಯಾತಿ ಅಷ್ಟೇನೂ ಇಲ್ಲ, ಅಂತಹದರಲ್ಲಿ ತಲೆಬರಹ ಹೀಗಿದೆಯಲ್ಲ ಅಂತ ಮೂಗೆಳೀಬೇಡಿ. ನಿಜ; ಹಾಗೆ ನೋಡಿದರೆ ಶನಿಗೆ ಆ ಪಟ್ಟ ಸಿದ್ಧವಾಗಿಹೋಗಿದೆ. 'ರಾಮೇಶ್ವರಕ್ಕೆ ಹೋದ್ರೂ ಶನೀಶ್ವರ ಬಿಡ' ಅನ್ನೋ ಗಾದೆ ಕೇಳಿದೀರಲ್ಲ. ಆದ್ರೆ ಶನಿ ಒಂದು ಪಾಪದ ಪ್ರಾಣಿ. ಬೇಡ. ಪ್ರಾಣಿ ಅಲ್ಲ. ಪಾಪದ ಗ್ರಹ ಅನ್ನೋಣ. ಅದರ ಹೆಸರಲ್ಲೇ ಅದು ಗೊತ್ತಾಗತ್ತೆ. ಅದು ನಿಜವಾಗಿ ಶನೀಶ್ವರನಲ್ಲ. ಶನೈಶ್ಚರ. ಶನೈ: ಚರತಿ ಅಯಂ ಇತಿ ಶನೈಶ್ಚರಃ. ಈ ಗ್ರಹ ನಿಧಾನವಾಗಿ(ಶನೈ:) ಹೋಗುತ್ತೆ (ಚರತಿ), ಅದಕ್ಕೆ ಅವನು ಶನೈಶ್ಚರ. ಅಷ್ಟೇ. ಆಕಾಶದಲ್ಲಿ ಯಾವುದೇ ಒಂದು ಜಾಗದಿಂದ ಹೊರಟು ಮತ್ತೆ ಅದೇ ಜಾಗಕ್ಕೆ ಮರಳಿ ಬರೋದಕ್ಕೆ ಶನಿಗೆ ಮೂವತ್ತು ವರ್ಷ ಬೇಕು!

ಇದೇನಪ್ಪ? ತಲೆಬರಹ ಇರೋದು ಶುಕ್ರ. ಮಾತೆಲ್ಲ ಶನಿಯದ್ದು ಎನ್ನಬೇಡಿ. ಈಗ ಗ್ರಹಗಳು ವಕ್ರನೋಟ ಯಾಕೆ ಬೀರುತ್ತವೆ ಅಂತ ತಿಳಿದುಕೊಳ್ಳೋಣ. ಗ್ರಹಗಳೆಲ್ಲ ಸೂರ್ಯನ ಸುತ್ತ ಸುತ್ತುತ್ತಿವೆ ಅಂತ ನಮಗೆ ಗೊತ್ತು. ಆದರೆ ಭೂಮಿ ಮೇಲೆ ನಮಗೆ, ಗ್ರಹಗಳು ನಕ್ಷತ್ರಗಳ ಹಿನ್ನೆಲೆಯಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ನಿದಾನವಾಗಿ ಚಲಿಸೋ ಹಾಗೆ ಕಾಣುತ್ತವೆ. ಗ್ರಹಗಳು ಎಲ್ಲಿವೆ ಅಂತ ಹೇಳೋದಕ್ಕೆ ನಾವು ನಕ್ಷತ್ರಗಳ ಆಸರೆ ಬಳಸ್ತೀವಿ. ಯಾಕಂದ್ರೆ, ನಕ್ಷತ್ರಗಳು ಗ್ರಹಗಳ ತರಹ ಓಡಾಡದೆ, ಇದ್ದಲ್ಲೇ (ಪರಸ್ಪರ) ಇರುತ್ತವೆ. ಶನಿ ಜ್ಯೇಷ್ಟಾ ನಕ್ಷತ್ರದಲ್ಲಿದೆ ಎಂದರೆ, ಆಕಾಶದಲ್ಲಿ ಶನಿ ಜ್ಯೇಷ್ಟಾ…

ನವರಾತ್ರಿಯ ಹತ್ತನೇ ದಿನ

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.


ನೆನ್ನೆ ವಾಸುದೇವಾಚಾರ್ಯರ ಬಗ್ಗೆ ಹೇಳುವಾಗ, ಅವರ ಪ್ರಸಿದ್ಧ ಶಿಷ್ಯರೊಬ್ಬರನ್ನು ಹೆಸರಿಸಿದ್ದೆ. ಹೌದು, ಇವತ್ತು ಆ ಶಿಷ್ಯರ ರಚನೆಯನ್ನೇ ನಾನು ಕೇಳಿಸುವುದು. ಮೈಸೂರು ರಾಜ್ಯದ ಕಡೆಯ ದೊರೆಗಳಾದ ಜಯಚಾಮರಾಜೇಂದ್ರ ಒಡೆಯರು ಒಬ್ಬ ಪ್ರತಿಭಾನ್ವಿತ ಸಂಗೀತಗಾರರು, ವಾಗ್ಗೇಯಕಾರರೂ ಆಗಿದ್ದರೆಂಬುದು ಎಷ್ಟೋ ಜನಕ್ಕೆ ತಿಳಿದಿಲ್ಲದಿರುವುದು ದೌರ್ಭಾಗ್ಯವೇ ಸರಿ.

ಜಯಚಾಮರಾಜೇಂದ್ರ ಒಡೆಯರು ಮೊದಲು ಕಲಿತದ್ದು ಪಾಶ್ಚಾತ್ಯ ಸಂಗೀತ. ಲಂಡನ್ನಿನ್ಸ್ ಟ್ರಿನಿಟಿ ಕಾಲೇಜಿನಲ್ಲಿ ಪಿಯಾನೋ ವಿದ್ಯಾರ್ಥಿಗಳಿಗೆ ದೊರೆಯಬಹುದಾದ ಅತಿ ಹೆಚ್ಚಿನ ಪ್ರಶಸ್ತಿಗಳನ್ನು ಪಡೆದು ಅವರು ಹೊರಬಂದರು. ಪಟ್ಟವೇರಿದ ಮೇಲೆ, ಸುಮಾರು ಆರು ವರ್ಷ ಕಾಲ ವಾಸುದೇವಾಚಾರ್ಯರಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡಿದರು. ೧೯೪೫ ರಿಂದ ೧೯೪೭ರ ವರೆಗೆ ಸುಮಾರು ಎರಡುವರ್ಷಗಳ ಅವಧಿಯಲ್ಲಿ ತೊಂಬತ್ತನಾಕು ಕೃತಿಗಳನ್ನು ರಚಿಸಿದ್ದಾರೆ ಒಡೆಯರು. ತಮ್ಮ ರಚನೆಗಳನ್ನು ಇವರು ಮೊದಲು ಪಿಯಾನೋದಲ್ಲೇ ನುಡಿಸಿ, ಅದನ್ನು ತಿದ್ದಿ ತೀಡಿ, ನಂತರ ತಮ್ಮ ಗುರುಗಳಿಗೂ, ಹಾಗೂ ಅರಮನೆಯ ಇತರ ವಿದ್ವಾಂಸರಿಗೂ ಕೇಳಿಸಿ, ಅವರ ಅಭಿಪ್ರಾಯವನ್ನು ಕೇಳಿ, ನಂತರ ತಮ್ಮ ಕೃತಿಗಳಿಗೆ ಪೂರ್ಣಸ್ವರೂಪವನ್ನು ಕೊಡುತ್ತಿದ್ದ ವಿ…

ನವರಾತ್ರಿಯ ಒಂಬತ್ತನೇ ದಿನ

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಅದಕ್ಕೆಂದು ಈ ಮೊದಲೇ ನಾನು ಕನ್ನಡಕ್ಕೆ ಅನುವಾದಿಸಿದ್ದ ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಹಾಕಿದ್ದೇನೆ. ಓದಿ ನಂತರ ಹಾಡು ಕೇಳಬಹುದು. ಅಲ್ಲವೇ?

ಮೈಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸಿ ಆಲಸಿಕೆಯನ್ನು

ಸಂಸ್ಕೃತ ಮೂಲ:
ಯಾ ಕುಂದೇಂದು ತುಷಾರಹಾರ ಧವಳಾ ಯಾ ಶುಭ್ರ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ|
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ||

ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು

ಸಂಸ್ಕೃತ ಮೂಲ:
ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ|
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಶಾರದೆಯೆ ನಮಿಸುವೆನು ಕಾಶ್ಮೀರದಲಿ ನೆಲೆಸಿಹಳೆ
ಕೋರುವೆನು ಅನುದಿನವು ಅರಿವು ತಿಳಿವನು ನೀಡು

ಸಂಸ್ಕೃತ ಮೂಲ:
ನಮಸ್ತೇ ಶಾರದಾ ದೇವೀ ಕಾಶ್ಮೀರ ಪುರವಾಸಿನೀ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾ ಬುದ್ಧಿಂ ಚ ದೇಹಿಮೇ||


ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ನವರಾತ್ರಿಯ ಒಂಬತ್ತನೆ ದಿವಸ ಹಾಡುವ…

ನವರಾತ್ರಿಯ ಎಂಟನೇ ದಿನ

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ.

ಮೊದಲು, ಇವತ್ತಿನ ಸ್ವಾತಿ ತಿರುನಾಳರ ನವರಾತ್ರಿ ಕೃತಿ ಯಾವುದೆಂದು ಹೇಳಿಬಿಡುವೆ. ಅದು, ನಾಟಕುರಂಜಿ ರಾಗದಲ್ಲಿರುವ ಪಾಹಿ ಜನನಿ ಸಂತತಂ ಎಂಬುದು. ಅದನ್ನು ನೀವು ಇಲ್ಲಿ ಕ್ಲಿಕ್ಕಿಸಿ ಕೇಳಬಹುದು.


ಇವತ್ತು ನಾನು ಕೇಳಿಸಲಿರುವ ರಚನೆ ಒಂದು ರಾಗಮಾಲಿಕೆ. ಹೆಸರೇ ಸೂಚಿಸುವಂತೆ ಇದು ರಾಗಗಳ ಸರಮಾಲೆ. ಎಷ್ಟೋ ರಚನೆಗಳಲ್ಲಿ, ಆಯಾ ರಾಗದ ಭಾಗದಲ್ಲಿ ಆಯಾ ರಾಗದ ಹೆಸರನ್ನೂ ಚಮತ್ಕಾರಿಕವಾಗಿ ಸೇರಿಸಿ ಸೂಚಿಸುವುದುಂಟು. ಅದಕ್ಕೆ ರಾಗಮುದ್ರೆ ಎನ್ನುತ್ತೇವೆ. ಇವತ್ತು ನಾನು ಕೊಡುತ್ತಿರುವ ರಾಗಮಾಲಿಕೆಯ ವಿಶೇಷವೇನೆಂದರೆ, ಅದರ ಪ್ರತಿ ರಾಗದ ಭಾಗದಲ್ಲಿಯೂ ಆಯಾ ರಾಗದ ರಾಗಮುದ್ರೆ ಇದೆ.

ಈ ರಚನೆಯ ಹೆಸರು ರಂಜನಿ ಮಾಲಾ. ಇದರ ಸಾಹಿತ್ಯ ಹೀಗಿದೆ - ರಾಗಗಳ ಹೆಸರುಗಳನ್ನು ದಪ್ಪ ಅಕ್ಷರದಲ್ಲಿ ಸೂಚಿಸಿರುವೆ.

ರಂಜನಿ ಮೃದು ಪಂಕಜ ಲೋಚನಿ

ಮಂಜು ಭಾಷಿಣಿ ಮನೋಲ್ಲಾಸಿನಿ ಮಂದಗಮನಿ ಶ್ರೀರಂಜನಿ

ಸಾಮಗಾನ ವಿನೋದಿನಿ ಶಶಾಂಕವದನಿ ಮೇಘರಂಜನಿ

ಪಾಮರಜನ ಪಾಲಿನಿ ಶೂಲಿನಿ ಪಾಪವಿಮೋಚನಿ ಜನರಂಜನಿ

ಪ್ರತಿಸಾಲಿನ ನಡುವೆಯೂ ಸುಂದರವಾದ ಚಿಟ್ಟೆಸ್ವರಗಳಿವೆ. ಇದನ್ನು ನೀವು ಈ ಕ…

ನವರಾತ್ರಿಯ ಏಳನೇ ದಿನ

ಇವತ್ತು ನವರಾತ್ರಿಯ ಏಳನೇ ದಿನ. ನವರಾತ್ರಿ ಮಂಡಪದಲ್ಲಿ ಮೊದಲ ಆರು ದಿನ ಸರಸ್ವತಿಯ ಮೇಲಿನ ಕೃತಿಗಳು ಮೂಡಿ ಬಂದರೆ, ಕಡೆಯ ಮೂರು ದಿನ ಪಾರ್ವತಿಯ ಮೇಲೆ ಬರೆದಿರುವ ಕೃತಿಗಳ ಸರತಿ. ಈ ದಿನ ಅಲ್ಲಿ ಕೇಳಿ ಬರುವ ರಚನೆ ಶುದ್ಧಸಾವೇರಿ ರಾಗದ ’ಜನನಿ ಪಾಹಿ ಸರಾ’. ಅದನ್ನು ನೀವು ಇಲ್ಲಿ ಚುಟುಕಿಸಿ ಕೇಳಬಹುದು.

ಇವತ್ತಿನ ದಿನ ನೀವು ಕೇಳಲು ನಾನು ಆಯ್ದ ರಚನೆ ಕನಕದಾಸರು ಮಾಡಿರುವ, ಮಾತಿನ ದೇವತೆ ಶಾರದೆಯ ಮೇಲಿನ ಒಂದು ಸುಂದರ ದೇವರನಾಮ:

ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವೀ || ಪಲ್ಲವಿ||

ಶಶಿಮುಖದ ನಸುನಗೆಯ ಬಾಲೇ!
ಎಸೆವ ಕರ್ಣದ ಮುತ್ತಿನ ಓಲೇ
ನಸುವ ಸುಪಲ್ಲ ಗುಣಶೀಲೇ ದೇವೀ
ಬಿಸಜಾಕ್ಷಿ ಎನ್ನ ಹೃದಯದಲಿ ನಿಂದು ||ಚರಣ ೧||

ರವಿ ಕೋಟಿ ತೇಜ ಪ್ರಕಾಶೇ ಸದಾ
ಕವಿ ಜನ ಹೃತ್ಕಮಲ ವಾಸೇ
ಅವಿರಳಪುರಿ ಕಾಗಿನೆಲೆಯಾದಿ ಕೇ-
ಶವನ ಸುತನಿಗೆ ಸನ್ನುತ ರಾಣಿವಾಸೇ || ಚರಣ ೨||

ಹೆಚ್ಚಿನ ದಾಸರ ರಚನೆಗಳನ್ನು, ನಂತರದ ಸಂಗೀತಗಾರರು ಸಂಗೀತಕ್ಕೆ ಅಳವಡಿಸಿರುತ್ತಾರೆ. ಕೆಲವು ರಚನೆಗಳಲ್ಲಿ ಮಾತ್ರ ಮೂಲ ಮಟ್ಟುಗಳು ಉಳಿದುಕೊಂಡಿವೆ. ಈ ರಚನೆಯನ್ನು ಬಹಳ ಸುಂದರವಾಗಿ ರಂಜನಿ ರಾಗದಲ್ಲಿ ಅಳವಡಿಸಿರುವುದು ಬೆಂಗಳೂರಿನ ಸಂಗೀತವಿದ್ವಾಂಸರಾದ ತಿರುಮಲೆ ಶ್ರೀನಿವಾಸ್ (ತಿರುಮಲೆ ತಾತಾಚಾರ್ಯ ಶರ್ಮ ಅವರ ಮೊಮ್ಮೊಗ) ಅನ್ನುವುದು ನನಗೆ ಈಗ ತಾನೇ ತಿಳಿದುಬಂತು. ಹಾಡಿರುವುದು ಡಾ.ನಾಗವಲ್ಲಿ ನಾಗರಾಜ್ ಮತ್ತು ರಂಜನಿ ನಾಗರಾಜ್.ಎಲ್ಲರಿಗೂ ಸರಸ್ವತೀ ಪೂಜೆಯ ಶುಭ ಹಾರೈಕೆಗಳು.

-ಹಂ…

ನವರಾತ್ರಿಯ ಆರನೇ ದಿನ

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ ಏಳನೆಯ ದಿನ ಬರುತ್ತದೆ.

ಇವತ್ತು ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಕೇಳಿಬರುವ ಸ್ವಾತಿ ತಿರುನಾಳ್ ಮಹಾರಾಜರ ಕೃತಿ ಕಾಮವರ್ಧಿನಿ ರಾಗದಲ್ಲಿರುವ ಸರೋರುಹಾಸನ ಜಾಯೇ ಎಂಬುದು.ಈ ರಾಗವನ್ನು ತಮಿಳುನಾಡಿನಲ್ಲಿ ಹೆಚ್ಚಾಗಿ ಪಂತುವರಾಳಿ ಎಂಬ ಹೆಸರಿಂದ ಕರೆಯುತ್ತಾರೆ. ಇದನ್ನ ಈಗ ಕೇಳಿ - ಹಾಡುತ್ತಿರುವುದು ಸ್ವಾತಿ ತಿರುನಾಳರ ವಂಶದವರೇ ಆದ ರಾಮವರ್ಮ. ಈ ಮುದ್ರಿಕೆ ನವರಾತ್ರಿ ಮಂಡಪದಲ್ಲೇ, ಎರಡು ವರ್ಷದ ಹಿಂದೆ ನಡೆದ ಕಚೇರಿಯದು - ಹಾಗಾಗಿ ಅಲ್ಲಿನ ವಾತಾವರಣ ಹೇಗಿದೆ ಎನ್ನುವುದನ್ನು ಚೆನ್ನಾಗಿ ತೋರಿಸುತ್ತೆ.ಸರಸ್ವತಿಯನ್ನು ಕಲಿಕೆಯ ಅಧಿದೇವತೆ ಎಂದು ನಂಬುವವರು ನಾವು. ಹಾಗಾಗೇ, ವಿದ್ಯಾರಂಭದಲ್ಲಿ ಸರಸ್ವತಿಯ ಪೂಜೆ ಗೈಯುವುದು ರೂಢಿ. ಲಲಿತಕಲೆಗಳಾದ ಸಂಗೀತ ನೃತ್ಯ ಮೊದಲಾದುವುಗಳನ್ನು ಕಲಿಯಲಾರಂಭಿಸುವಾಗಲಂತೂ ಕಡ್ಡಾಯವೇ ಎನ್ನಬಹುದು. ಹಾಗಾಗಿ, ನವರಾತ್ರಿಯ ಆರನೇ ದಿನ ಸರಸ್ವತಿಯ ಸ್ತುತಿಯೊಂದನ್ನು ನಾವು ಕೇಳಿದ್ದು ಅರ್ಥಪೂರ್ಣವಾಗಿಯೇ ಇದೆ.

ಸಂಗೀತಾಭ್ಯಾಸಿಗಳು ಮೊದಲಿಗೆ ಕಲಿಯುವುದು ಮಾಯಾಮಾಳವಗೌಳ ರಾಗದಲ್ಲಿ ಸರಳೆವರಸೆ-ಜಂಟ…

ನವರಾತ್ರಿಯ ಐದನೇ ದಿನ

ಇವತ್ತು ನವರಾತ್ರಿಯ ಐದನೆಯ ದಿನ. ಇಂದು ಸಂಜೆ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದ ಪಕ್ಕದಲ್ಲಿರುವ ನವರಾತ್ರಿ ಮಂಡಪದಲ್ಲಿ ಪ್ರಮುಖವಾಗಿ ವಿಸ್ತರಿಸುವುದು ಭೈರವಿ ರಾಗ. ಮತ್ತೆ ಅದರಲ್ಲಿ, ಸ್ವಾತಿ ತಿರುನಾಳ್ ಮಹಾರಾಜರ ಜನನೀ ಮಾಮವ ಮೇಯೆ ಎಂಬ ಕೃತಿಯನ್ನು ಹಾಡಲಾಗುತ್ತೆ.


ಭೈರವಿ ರಾಗ ಕರ್ನಾಟಕ ಸಂಗೀತಕ್ಕೆ ಸೀಮಿತವಾದ ರಾಗ - ಇದಕ್ಕೆ ಹತ್ತಿರವಾದ ರಾಗ, ಹಿಂದೂಸ್ಗಾನಿ ಸಂಗೀತದಲ್ಲಾಗಲಿ, ಅಥವಾ ಪ್ರಪಂಚದ ಬೇರೆ ಯಾವುದೇ ಸಂಗೀತದಲ್ಲೂ ಇದನ್ನು ಹೋಲುವ ರಾಗವಿಲ್ಲ. ನೀವು ತರಾಸು ಅವರ ಹಂಸಗೀತೆಯನ್ನು ಓದಿದ್ದರೆ, ಅದರ ಮೇಲೆ ಆಧಾರಿತವಾದ ಚಲನಚಿತ್ರವನ್ನು ನೋಡಿದ್ದರೆ, ಅದರಲ್ಲಿ ಬರುವ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿಮಗೆ ತಿಳಿದೇ ಇರುತ್ತೆ. ಇಲ್ಲಿ ಒಂದು ವಿಷಯವನ್ನು ಹೇಳಿಬಿಡುತ್ತೇನೆ. ಈ ಭೈರವಿ ವೆಂಕಟಸುಬ್ಬಯ್ಯ ತರಾಸು ಅವರ್ ಕಲ್ಪನೆಯ ಪಾತ್ರವೇ ಹೊರತು ಚಾರಿತ್ರಿಕ ವ್ಯಕ್ತಿಯಲ್ಲ.

ಇವತ್ತು ನಾನು ಆಯ್ಕೆ ಮಾಡಿಕೊಂಡು ಹೇಳಲಿರುವ ರಚನೆ ಮುತ್ತುಸ್ಬಾಮಿ ದೀಕ್ಷಿತರದ್ದು. ಸಂಗೀತ ತ್ರಿಮೂರ್ತಿಗಳಲ್ಲಿ ಇವರು ಎಲ್ಲರಿಗಿಂತ ಕಡಿಮೆ ಕಾಲ ಬದುಕಿದ್ದರೂ (ಕ್ರಿ.ಶ.೧೭೭೫-೧೮೩೫) , ಸಂಗೀತ ಸಾಧನೆಯಲ್ಲಿ ಇನ್ನಿಬ್ಬರಿಗೆ ಸಾಟಿಯಾದವರು ಇವರು. ವೈಣಿಕ ಮತ್ತು ಹಾಡುಗಾರರಾಗಿದ್ದ ಇವರಿಗೆ ಹಿಂದೂಸ್ತಾನಿ ಸಂಗೀತದ ಪರಿಚಯವೂ ಇತ್ತು. ಇವರು ದಕ್ಷಿಣಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ, ಅಲ್ಲಿನ ದೇವ ದೇವತೆಗಳಬಗ್ಗೆ ತಮ್ಮ ರಚನೆಗಳನ್ನು ಹಾಡಿದ್ದಾರೆ. ಇವರು …

ನವರಾತ್ರಿಯ ನಾಲ್ಕನೇ ದಿನ

Image
ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ನೆನ್ನೆ ಇಲ್ಲಿ ನವರಾತ್ರಿಗೋಸ್ಕರ ನಡೆಯುತ್ತಿದ್ದ ಸಂಗೀತ ಕಚೇರಿಯೊಂದಕ್ಕೆ ಹೋಗುವ ಅವಕಾಶ ಸಿಕ್ಕಿತು; ಅಲ್ಲಿಯೂ ಕೂಡ ಒಂದು ಒಳ್ಳೆ ತೋಡಿ ರಾಗದ ಉಣಿಸು ಸಿಕ್ಕಿತು. ಮುತ್ತುಸ್ವಾಮಿ ದೀಕ್ಷಿತರ ಕಮಲಾಂಬಾ ನವಾವರಣದ ಧ್ಯಾನ ಕೃತಿಯಾದ ಕಮಲಾಂಬಿಕೇ. ತೋಡಿ ರಾಗದ ಒಂದು ವಿಶೇಷ ರಚನೆ ಅದು.

ಅದಿರಲಿ. ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು…

ನವರಾತ್ರಿಯ ಮೂರನೇ ದಿನ

ಇವತ್ತು ನವರಾತ್ರಿಯ ಮೂರನೆಯ ದಿನ. ಮೈಸೂರು ಮತ್ತು ತಂಜಾವೂರು ಎರಡೂ ೧೮-೧೯ ನೆ ಶತಮಾನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಸಾಂಸ್ಕೃತಿಕ ನೆಲೆಗಳಾಗಿ ರೂಪುಗೊಂಡವು. ಹಾಗಾಗಿಯೇ ಇಂದಿಗೂ ನಾವು ವೀಣೆ, ಚಿತ್ರಕಲೆ ಮತ್ತು ಭರತನಾಟ್ಯ ಇವೆರಡರಲ್ಲೂ, ಮೈಸೂರು ಶೈಲಿ ಮತ್ತು ತಂಜಾವೂರು ಶೈಲಿ ಎಂದು ಎರಡು ಪ್ರಮುಖ ಶೈಲೆಗಳನ್ನು ನೋಡಬಹುದು. ಕರ್ನಾಟಕ ಸಂಗೀತ ತ್ರಿಮೂರ್ತಿಗಳೆಂದೇ ಹೆಸರಾದ ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮತ್ತು ಶಾಮಾಶಾಸ್ತ್ರಿ ಅವರು ಬಾಳಿದ್ದು ತಂಜಾವೂರು ರಾಜ್ಯದಲ್ಲೇ. ಅದರಲ್ಲಿಯೂ ಶಾಮಾಶಾಸ್ತ್ರಿ ಅವರು ಇದ್ದದ್ದಂತೂ ತಂಜಾವೂರು ನಗರದಲ್ಲೇ.

ಶಾಮಾಶಾಸ್ತ್ರಿ ಅವರ ನಿಜವಾದ ಹೆಸರು ವೆಂಕಟಕೃಷ್ಣ. ಆದರೆ, ಹೆಚ್ಚಾಗಿ ಅವರು ಶಾಮಾಶಾಸ್ತ್ರಿ ಎನ್ನುವ ಹೆಸರಿನಿಂದಲೇ ಪ್ರಖ್ಯಾತರಾಗಿದ್ದಾರೆ.ತಮ್ಮ ರಚನೆಗಳಲ್ಲಿ ಶಾಮಕೃಷ್ಣ ಎಂಬ ಅಂಕಿತವಿಟ್ಟಿದ್ದಾರೆ. ಇವರು ತಮ್ಮ ರಚನೆಗಳಲ್ಲಿ ದೇವಿಯನ್ನು, ಸಾಧಾರಣವಾಗಿ ಶಾಮಕೃಷ್ಣಸೋದರಿ ಎಂದು ಕರೆಯುತ್ತಾರೆ. ಇವರು ತಂಜಾವೂರಿನ ಬಂಗಾರು ಕಾಮಾಕ್ಷಿಯ ಅರ್ಚಕರಾಗಿದ್ದರು. ಹೆಚ್ಚಾಗಿ ಇವರ ರಚನೆಗಳು ಈ ಬಂಗಾರು ಕಾಮಾಕ್ಷಿಯ ಮೇಲೇ ರಚಿತವಾಗಿವೆ. ಸಂಗೀತ ತ್ರಿಮೂರ್ತಿಗಳಲ್ಲಿ, ಸಂಖ್ಯೆಯ ದೃಷ್ಟಿಯಿಂದ ನೋಡಿದರೆ, ಇವರು ಎಲ್ಲರಿಗಿಂತ ಕಡಿಮೆ ರಚನೆಗಳನ್ನು ಮಾಡಿದ್ದಾರೆ. ಆದರೆ, ಒಂದೂಂದೂ ಅನರ್ಘ್ಯ ರತ್ನವೆಂದು ಹೇಳಬಹುದು.

ಶರಭೋಜಿ (ಕ್ರಿ.ಶ.1777-1832) ತಂಜಾವೂರಿನ ರಾಜನಾಗಿದ್ದಾಗ, ಬೊಬ್ಬಿಲಿ ಕೇಶವಯ್ಯ ಎಂಬ ಸಂಗೀ…

ನವರಾತ್ರಿಯ ಎರಡನೇ ದಿನ

ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ; ಅವರು ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ೧೮-೧೯ ನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು.
ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ. ಅದೇನೋ, ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್…

ನವರಾತ್ರಿಯ ಮೊದಲ ದಿನ

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.ಈ ರಚನೆಯನ್ನು ಕೇಳಲಿಕ್ಕೆ ಇಲ್ಲಿ ಚಿಟಕಿಸಿ.

ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂ…

"ಕರ್ನಾಟಕದ ದೇಗುಲಗಳ ಸುತ್ತ ಒಂದು ಸುತ್ತು" - ಒಂದು ಸಂಗೀತ ಕಚೇರಿ

Image
ಕರ್ನಾಟಕ ಸಂಗೀತ ದೇವಾಲಯಗಳ ಸುತ್ತ ಬೆಳೆಯಿತು, ಹಿಂದೂಸ್ತಾನಿ ಸಂಗೀತ ಸುಲ್ತಾನರ ಆಸ್ಥಾನಗಳಲ್ಲಿ ಬೆಳೆಯಿತು ಅನ್ನೋ ಮಾತಿದೆ. ಆದರೂ ಕರ್ನಾಟಕ ಸಂಗೀತಕ್ಕೆ ಮೈಸೂರು ಒಡೆಯರ, ತಂಜಾವೂರಿನ ನಾಯಕರ, ಮರಾಠೀ ದೊರೆಗಳ ಪ್ರೋತ್ಸಾಹ ಹೆಚ್ಚಿಗೆ ಇದ್ದೇ ಇತ್ತು. ಅದು ಹೇಗೇ ಇರಲಿ, ಅಂದರೆ ಇಂದು ಒಂದು ಕರ್ನಾಟಕ ಸಂಗೀತ ಕಚೇರಿಗೆ ಹೋದರೆ ಹೆಚ್ಚಾಗಿ ಭಕ್ತಿ ಪ್ರಧಾನ ರಚನೆಗಳನ್ನು ಕೇಳುವ ಸಾಧ್ಯತೆಯೇ ಹೆಚ್ಚು ಅನ್ನುವುದೇನೋ ನಿಜ.

ಈಗ ರಾಜಾಸ್ಥಾನಗಳಿಲ್ಲವಲ್ಲ- ಆದರೆ ಅದರ ಬದಲು ವಿಶೇಷ ಸಂದರ್ಭಗಳಲ್ಲಿ ಮನೆಗಳಲ್ಲೇ ಕಚೇರಿ ನಡೆಸುವ ಪದ್ಧತಿ ಬೆಳೆದು ಬಂದಿದೆ. ಇಂತಹ ಮನೆ-ಕಚೇರಿಗಳು ಸಭೆಯಲ್ಲಿ ನಡೆವ ಕಚೇರಿಗಳಿಗಿಂತ ಒಂದು ರೀತಿಯ ಆಪ್ತ ಅನುಭವವನ್ನೂ ನೀಡುತ್ತವೆ.

ಹೀಗೇ, ಹೋದ ತಿಂಗಳು ನಮ್ಮ ಮನೆಯಲ್ಲೊಂದು ಸಂಗೀತ ಕಚೇರಿ ಇಟ್ಟುಕೊಂಡಿದ್ದೆವು. ಸುಮ್ಮನೆ ಒಂದು ಕಚೇರಿ ಮಾಡುವ ಬದಲು ಯಾವುದಾದರೊಂದು ವಿಶೇಷ ವಿಷಯವನ್ನಾಯ್ಕೆಮಾಡಿಕೊಂಡರೆ ಚೆನ್ನಾಗಿರುತ್ತೆ ಅನ್ನಿಸಿತು. ಹಾಗಾಗಿ ಅವತ್ತಿನ ಕಚೇರಿಗೆ ಆಯ್ಕೆ ಮಾಡಿಕೊಂಡ ವಿಷಯ ’ಕರ್ನಾಟಕದ ದೇಗುಲಗಳು’.ಒಂದು ಕಚೇರಿಗೆಂದು ಹಾಡುಗಳನ್ನು ಆಯುವುದು ಕಷ್ಟವಾದ ಕೆಲಸವೇ. ಏಕೆಂದರೆ ರಾಗ-ತಾಳಗಳ ಸಮತೋಲನ, ವಿಳಂಬ-ದುರಿತ ಗತಿಯ ರಚನೆಗಳ ಸಮತೋಲಮ್ನ, ಬೇರೆ ಬೇರೆ ರಚನಾಕಾರರ ರಚನೆಗಳ ಸಮತೋಲನ, ವರ್ಣ, ಕೃತಿ, ತಿಲ್ಲಾನ,ದೇವರನಾಮ - ಇತ್ಯಾದಿ ರಚನೆಗಳ ವೈವಿಧ್ಯ - ಇವೆಲ್ಲ ಇರಲೇಬೇಕಾಗುತ್ತೆ. ಇಲ್ಲವಾದರೆ ಕಚೇರಿ ಕಳೆಗಟ್ಟುವುದಿಲ್ಲ. …

ಕೈ ಕೆಸರಾದರೆ ಬಾಯ್ಮೊಸರು

ಬಯಕೆಯು ಇದ್ದು ಜತುನವಿಲ್ಲದಿರೆ
ಕೆಲಸವೆಂದು ಕೈಗೂಡದು;
ಮಲಗಿದ ಸಿಂಹದ ಬಾಯಲಿ ಜಿಂಕೆಯು
ತಾನಾಗೇ ಹೊಕ್ಕಾಡದು!


ಸಂಸ್ಕೃತ ಮೂಲ (ಪಂಚತಂತ್ರದ ಮಿತ್ರ ಸಂಪ್ರಾಪ್ತಿ ಯಿಂದ)


ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ||

-ಹಂಸಾನಂದಿ

ದಯ ತೋರಲಿದುವೆ ವೇಳೆಯು, ದಾಶರಥಿ!

ದಯ ತೋರಲಿದುವೆ ವೇಳೆಯು, ದಾಶರಥೀ ||

ಜಗದ ಬವಣೆಯೆಂಬಾನೆಯ
ಸಿಂಗದೊಲು ನೀನಳಿಸುವೆ
ಜಗದಯ್ಯ ಆ ಬೊಮ್ಮನಿಗು
ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||

ಮುನ್ನ ನೀ ಕೊಟ್ಟಾಣತಿಯನು
ಮನಸಾರೆ ನಿದಾನದಲಿ ನಾ
ಸನ್ನಡತೆಯಲಿ ಪಾಲಿಸಿಹೆ! ಈ
-ಗೆನ್ನ ಬಳಿಸಾರಿ ಈ ತ್ಯಾಗರಾಜನಿಗೆ || ದಯ ತೋರಲಿದುವೆ ವೇಳೆಯು! ||

-ಹಂಸಾನಂದಿ


(ತ್ಯಾಗರಾಜರ ಗಾನವಾರಿಧಿ ರಾಗದ, ’ದಯಜೂಚುಟಕಿದಿ ವೇಳರಾ’ ಎಂಬ ರಚನೆಯ ಅನುವಾದ. ಸುಮಾರು ಮೂರು ವರ್ಷದ ಹಿಂದೆ ಮಾಡಿದ್ದು, ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹಾಕಿರುವೆ )

ತಿಗಣೆಗಂಜಿದ ದೇವರು!

ಅನ್ನಮಯ್ಯ ಒಂದು ಕೀರ್ತನೆಯಲ್ಲಿ, ಬೆಳಗಾಗುತ್ತಲೇ, ಹಾವಿನ ಹೆಡೆಯೇ ಸೊಳ್ಳೆಗಳಿಂದ ಕಾಯುವ ತೆರೆ (ಸೊಳ್ಳೆ ಪರದೆ ಎನ್ನಿ) ಆಗಿರುವ ಶ್ರೀಹರಿಗೆ ಹಾಲುಣಿಸುವುದನ್ನು ನೆನೆದಿದ್ದಾರಂತೆ. ಅನ್ನಮಯ್ಯ ಶ್ರೀಹರಿಯನ್ನು, ಭಕ್ತಕೋಟಿಯ ಕಷ್ಟಕೋಟಲೆಗಳನ್ನು ನಿವಾರಿಸಲು, ಸೊಳ್ಳೆಪರದೆಯಂತಿರುವ ಆದಿಶೇಷನ ಹೆಡೆಯನ್ನು ಸರಿಸಿ, ಹೊರಗೆ ಬಾ ಎನ್ನುವುದು ನನಗೇನೋ ಅದಂತೂ ಬಹಳ ಸಹಜವೇ ಅನ್ನಿಸ್ತಾ ಇದೆ.

ಯಾಕಂತೀರಾ?

ನಿಜ ಹೇಳಬೇಕೆಂದರೆ, ಶ್ರೀಹರಿ ಕ್ಷೀರಸಾಗರಕ್ಕೆ ಹೋಗಿ ಹಾವಿನ ಹಾಸಿಗೆಯ ಮೇಲೆ ಮಲಗಿದ್ದೇ, ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆಗಳ ಕಾಟ ತಪ್ಪಿಸ್ಕೊಳ್ಳೋದಿಕ್ಕೆ. ಹೇಗೆ ಅಷ್ಟು ಖಾತ್ರಿಯಾಗಿ ಹೇಳ್ತೀಯಾ ಅಂತೀರಾ? ನನ್ನ ಹತ್ತಿರ ಪುರಾವೆ ಇದೆ ಸ್ವಾಮೀ!

ಇಲ್ಲಿ ನೋಡಿ ಒಂದು ಸಂಸ್ಕೃತ ಸುಭಾಷಿತ:

ಕಮಲೇ ಕಮಲಾ ಶೇತೇ
ಹರಃ ಶೇತೇ ಹಿಮಾಲಯೇ
ಕ್ಷೀರಾಬ್ದೌ ಚ ಹರಿಃ ಶೇತೇ
ಮನ್ಯೇ ಮತ್ಕುಣ ಶಂಕಯಾ
ಹಾಗಂದರೆ,ಕಮಲದಲಿ ಮಲಗುವಳು ಲಕುಮಿ
ಶಿವ ಮಲಗುವ ಹಿಮಾಲಯದಲಿ
ಪಾಲ ಕಡಲಲಿ ಪವಡಿಸುವನು ಹರಿ
ತಿಗಣೆ ಕಡಿತದ ಅಂಜಿಕೆಯಿಂದ!
ನೋಡಿದ್ರಲ್ಲ! ಹರಿ ಹಾಲ್ಗಡಲಿಗೆ ಹೋಗಿದ್ದೇ ಸೊಳ್ಳೆ, ತಿಗಣೆ ಹೀಗೆ ಹುಳುಹುಪ್ಪಟೆ, ಕ್ರಿಮಿಕೀಟಗಳಿಗೆ ಹೆದರಿ; ಅವುಗಳಿಂದ ತಪ್ಪಿಸ್ಕೊಳೋದಿಕ್ಕೆ ಅಂತ. ಅಲ್ಲಿ ಹೋದಮೇಲೆ ಏನಾಯ್ತು? ಬಹುಶಃ ತಿಗಣೆಗಳೇನೋ ಕಾಡಲಿಲ್ಲ ಅಂತ ಕಾಣತ್ತೆ. ಆದರೆ, ಹದಿನಾಲ್ಕೂ ಲೋಕಗಳನ್ನು ವ್ಯಾಪಿಸಿರುವ ಸೊಳ್ಳೆ ರಾಯರು ಅಲ್ಲೂ ಪ್ರತ್ಯಕ್ಷರಾಗಿರಬೇಕು.
ತಾನು ಮಲಗಿರುವ ಹಾವ…

ರಾಮನ ಸ್ವರ್ಗಾರೋಹಣ

ಅಯೋಧ್ಯೆಯ ಬಗ್ಗೆ ನ್ಯಾಯ ಪಂಚಾಯ್ತಿಕೆಯ ತೀರ್ಪನ್ನ ಕೊಡೋದು ಮುಂದಕ್ಕೆ ಹಾಕಿದಾರಂತೆ. ಈ ನೆವದಲ್ಲಿ ನಾನೂ ಅದೂ ಇದೂ ರಾಮಾಯಣದ ಬಗ್ಗೆ ವಿಷಯಗಳನ್ನ ಮೆಲುಕು ಹಾಕಿದ್ದಾಯ್ತು. ಸಾಕೇತ ನಗರ ನಾಥನನ್ನ ನೆನೆಯುತ್ತಾ, ಅಯೋಧ್ಯೆ, ಶ್ರಾವಸ್ತಿ, ಕುಶಾವತಿ, ಲಕ್ಷ್ಮಣಾವತಿ, ಮಿಥಿಲೆ ಹೀಗೆ ಹಲವು ಸ್ಥಳಗಳ ಬಗ್ಗೆ ಟ್ವಿಟರಿನಲ್ಲಿ ಒಂದಷ್ಟು ಚಿಲಿಪಿಲಿಗುಟ್ಟಿಯೂ ಆಯ್ತು.
ಆಗಲೇ, ಹಿಂದೊಮ್ಮೆ ಇನ್ನಾವುದೋ ಬರಹಕ್ಕೆ ಹಾಕಿದ್ದ ರಾಮನ ಸ್ವರ್ಗಾರೋಹಣದ ಬಗ್ಗೆ ಟಿಪ್ಪಣಿಯೊಂದು ನೆನಪಾಗಿ, ಇಲ್ಲಿ ಮತ್ತೆ ಅದನ್ನು ಸ್ವಲ್ಪ ಹಿಗ್ಗಿಸಿ ಹಾಕ್ತಿದೀನಿ.
ರಾಮನ ಸ್ವರ್ಗಾರೋಹಣದ ಪ್ರಸಂಗ ಉತ್ತರಕಾಂಡದ ೧೦೦ ನೇ ಅಧ್ಯಾಯದಲ್ಲಿನ ಬರುತ್ತೆ. ಇದೇ ಉತ್ತರ ಕಾಂಡದ ಕೊನೆಯ ಅಧ್ಯಾಯ.
ಕೆಲವು ಶ್ಲೋಕಗಳ ಭಾವಾನುವಾದವನ್ನಿಲ್ಲಿ ಮಾಡಿರುವೆ.ಮೊದಲಿಗೆ,
ತೆರಳಿ ಅರೆ ಯೋಜನ ದೂರ ಪಡುವಲ ಹರಿವಿನ ಹೊಳೆಯನ್ನ
ಸರಯುವನು ಆ ಪುಣ್ಯನದಿಯನನು ಕಂಡನಾ ರಘುನಂದನ
ಸಂಸ್ಕೃತ ಮೂಲ:ಅಧ್ಯರ್ಧಯೋಜನಂ ಗತ್ಚಾ ನದೀ ಪಶ್ಚಾನ್ಮುಖಾಶ್ರಿತಾಮ್ |
ಸರಯೂಂ ಪುಣ್ಯಸಲಿಲಾಂ ದದರ್ಶ ರಘುನಂದನಃ || (ಅಧ್ಯಾಯ ೧೦೦; ಶ್ಲೋಕ ೧)
ಬಳಿಕ,
ಸರಯೂ ನದಿ ನೀರನ್ನು ರಾಮ ಪಾದಗಳಿಂ ತಾ ಹೊಕ್ಕನು (?)
ಸಂಸ್ಕೃತ ಮೂಲ:
ಸರಯೂ ಸಲಿಲಂ ರಾಮಃ ಪದ್ಭ್ಯಾಂ ಸಮುಪಚಕ್ರಮೇ|| (ಅಧ್ಯಾಯ ೧೦೦, ಶ್ಲೋಕ ೫)ಮತ್ತೇನಾಯ್ತು?
ಆಗ ಪೂರ್ವಿಕರ ಮಾತೊಂದು ಕೇಳಿ ಬಂದಿತು ಮೇಲಿನಾಆಗಸದಿಂದ
"ಮಂಗಳವಾಗಲಿ ವಿಷ್ಣುವೆ ನಿನಗೆ! ನಿನ್ನೆಡೆಗೇ ಮರಳಿ ಬರುವುದರಿಂದ&qu…

ಭಕ್ತಿ

Image
ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,
ಸೂಜಿಗಲ್ಲಿಗೇ ಅಂಟುವ ದಿಕ್ಸೂಚಿಯಂತೆ,
ಹದಿಬದೆಯು ತನ್ನ ಪತಿಯ ಜೊತೆ ಬಿಡದಿರುವಂತೆ,
ಬಳ್ಳಿ ಮರವನು ಹುಡುಕಿ ತಬ್ಬಿ ಹಬ್ಬುವಂತೆ,
ಕಡಲ ದಾರಿಯನರಸಿ ಹರಿದು ಸೇರುವ ಹೊಳೆಯಂತೆ,
ಓ ಶಿವನೆ, ಮನವೆನದು ಅರಸಿ ಅರಸಿ
ಕೊನೆಗೆ ಸೇರಿ ನಿಲ್ಲುವುದು ನಿನ್ನ ಅಡಿದಾವರೆಗಳಲೇ;
ಇದನೆ ತಾನೆ ಭಕ್ತಿಯೆಂದೆನುವುದು!


ಅಂಕೋಲೆ ಗಿಡ(Alangium decapetalum) ಚಿತ್ರ ಕೃಪೆ - ಹರಿಪ್ರಸಾದ್ ನಾಡಿಗ್
ಸಂಸ್ಕೃತ ಮೂಲ (ಶಂಕರಾಚಾರ್ಯರ ಶಿವಾನಂದಲಹರಿಯಿಂದ)

ಅಂಕೋಲಂ ನಿಜಬೀಜ ಸಂತತಿರಯಸ್ಕಾಂತೋಪಲಂ ಸೂಚಿಕಾ
ಸಾಧ್ವೀ ನೈಜವಿಭುಂ ಲತಾ ಕ್ಷಿತಿರುಹಂ ಸಿಂಧುಃ ಸರಿದ್ವಲ್ಲಭಂ
ಪ್ರಾಪ್ನೋತೀಹ ಯಥಾ ತಥಾ ಪಶುಪತೇ ಪಾದಾರವಿಂದದ್ವಯಂ
ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ

-ಹಂಸಾನಂದಿ

ಕೊ: ಅಂಕೋಲೆ ಮರದ (Alangium Salvifolium -ಇದರಲ್ಲಿ Alangium Hexapetalum Alangium decapetalum ಎಂಬ ಉಪ ಪ್ರಬೇಧಗಳೂ ಇರುವಂತೆ ಕಾಣುತ್ತದೆ) ಬೀಜಗಳು ಮರದ ತೊಗಟೆಗೇ ನೆಟ್ಟುಕೊಳ್ಳುತ್ತವಂತೆ. ಶಂಕರಾಚಾರ್ಯರು ಈ ವಿಷಯವನ್ನೇ ಮೊದಲ ಸಾಲಿನಲ್ಲಿ ಹೇಳಿರುವುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದವರು ಗೂಗಲೇಶ್ವರನ ಮೊರೆಹೊಕ್ಕರೆ, ಹೀಗೆ ಬೀಜ ತೊಗಟೆಯಲ್ಲಿ ನೆಟ್ಟುಕೊಂಡ ಕೆಲ ಚಿತ್ರಗಳನ್ನು ನೋಡುವಿರಿ.

ಪಾಲುದಾರರು

ಮಾಡಿದವ ಮಾಡಿಸಿದವ ಬೆಂಬಲಿಸಿದವ ಒಡಂಬಟ್ಟವ
ಕೆಡುಕಾಗಲಿ ಒಳಿತಾಗಲಿ ಆಗುವನು ಸಮ ಪಾಲುದಾರ!

ಸಂಸ್ಕೃತ ಮೂಲ:

ಕರ್ತಾ ಕಾರಯಿತಾಚೈವ ಪ್ರೇರಕಶ್ಚಾನುಮೋದಕ:
ಸುಕೃತೇ ದುಷ್ಕೃತೇ ಚೈವ ಚತ್ವಾರ: ಸಮಭಾಗಿನ:

-ಹಂಸಾನಂದಿ

ಕೊ: ಈಗ ತಾನೇ ವಿಕಾಸ ಹೆಗಡೆ ಅವರ ಗೂಗಲ್ ಬಜ್ ನಲ್ಲಿ ಓದಿದ್ದಿದು. ಚೆನ್ನಾಗಿದೆ ಅನ್ನಿಸಿ ತಕ್ಷಣ ಹೀಗೆ ಅನುವಾದಿಸಿದೆ.

ಕೊಲ್ಲುವ ಕಣ್ಣ ನೋಟ

ಸರ್ರನೇ ಸರಿವಂಥ ಹೊಳೆವ ಚರ್ಮದ ಹಾವು
ಕಚ್ಚುವುದೂ ಮೇಲವಳ ದಿಟ್ಟಿ ಬೀಳ್ವುದಕಿಂತ
ಮದ್ದು ಕೊಟ್ಟಾರಿಲ್ಲಿ ಹಾವು ಕಚ್ಚಿದರೆ; ಚೆಲುವೆ-
ಗಣ್ಣ ಚಣನೋಟಕ್ಕೆನಗೆ ಸಿಗದು ಔಷಧಿಯು!

ಸಂಸ್ಕೃತ ಮೂಲ: (ಭರ್ತೃಹರಿಯ ಶೃಂಗಾರಶತಕದಿಂದ)

ವ್ಯಾದೀರ್ಘೇಣ ಚಲೇನ ವಕ್ರಗತಿನಾ ತೇಜಸ್ವಿನಾ ಭೋಗಿನಾ
ನೀಲಾಬ್ಜದ್ಯುತಿನಾಹಿನಾ ಪರಮಹಮ್ ದಷ್ಟೋ ನ ತಚ್ಚಕ್ಷುಷಾ|
ದಷ್ಟೇ ಸಂತಿ ಚಿಕಿತ್ಸಕಾ ದಿಶಿ ದಿಶಿ ಪ್ರಾಯೇಣ ಧರ್ಮಾರ್ಥಿನೋ
ಮುಗ್ಧಾಕ್ಷೀಕ್ಷಣವೀಕ್ಷಿತಸ್ಯ ನ ಹಿ ಮೇ ಮಂತ್ರೋ ನ ಚಾಪ್ಯೌಷಧಮ್||

-ಹಂಸಾನಂದಿ

ಕೊ: ಹಿಂದೆಂದೋ ಮಾಡಿದ ಅನುವಾದ; ಸ್ವಲ್ಪ ಬದಲಿಸಿದಾಗ ಇನ್ನೂ ಇಷ್ಟವಾಯಿತೆಂದು ಮತ್ತೆ ಹಾಕಿರುವೆ. ಮುಂಚೆ ಮಾಡಿದ್ದ ಅನುವಾದ ಇಲ್ಲಿದೆ.

ಕೊ.ಕೊ: ಈಗಲೂ ಮೂಲದ ಪೂರ್ತಿ ಸೊಗಸನ್ನು ತರಲಾಗಲಿಲ್ಲ. ಅದು ನನ್ನ ಕೊರತೆ.

ಮುನ್ನೆಚ್ಚರಿಕೆ

ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ
ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ?

ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)

ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |
ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||

-ಹಂಸಾನಂದಿ

ಕೊ: ಈ ಹಿಂದೆ ಸುಮಾರು ಇದೇ ಅರ್ಥ ಬರುವ ಇನ್ನೊಂದು ಸುಭಾಷಿತವನ್ನು ಇಲ್ಲಿ ಹಾಕಿದ್ದೆ.

ಜಯ ಗೌರೀ ಜಗದೀಶ್ವರಿ

Image
ನಾಳೆ ಗೌರಿ ಹಬ್ಬ. ಎಲ್ಲರಿಗೂ ಮೊದಲು ಪೂಜಿಸುವ ಗಣೇಶನ ಹಬ್ಬದ ಮುನ್ನಾದಿನವೇ ಗೌರಿ ಹಬ್ಬ. ಅದರಲ್ಲಿಯೂ ಈಕೆ ಬರೀ ಗೌರಿಯಲ್ಲ, ಸ್ವರ್ಣಗೌರಿ. ಅದಕ್ಕೇ ಮೊದಲಿಗೆ ಸ್ವರ್ಣಗೌರಿ ಚಿತ್ರದಿಂದ ಒಂದು ಸುಂದರ ಹಾಡನ್ನ ಕೇಳಿ.ಈ ಸ್ವರ್ಣಗೌರಿಯಂತೂ ಅಂತಿಂತಹವಳಲ್ಲ. ಬಹಳ ಚಾಕಚಕ್ಯತೆ ಉಳ್ಳವಳು. ಇವಳಿಲ್ಲದಿದ್ದರೆ ಶಿವನ ಗತಿ ಏನಾಗುತ್ತಿತ್ತೋ? ’ಶಿವನೇ ಗತಿ’ ಅಂತ ಅವನು ಹೇಳೋದಕ್ಕಾಗೋದಿಲ್ವಲ್ಲ? ಪುಣ್ಯಕ್ಕೆ ಅನ್ನಪೂರ್ಣೆಯಾದ ಗೌರಿ ಮನೆಯಲ್ಲಿ ಇರೋದ್ರಿಂದ ಅವನು ಬದುಕಿದ!

ತನ್ನದೈದು ಬಾಯಿ ಮಗನೊಬ್ಬನಿಗಾರು ಬಾಯಿ
ಇನ್ನೊಬ್ಬ ಮಗನಿಗಿದೆ ಆನೆಯ ಬಾಯಿ!
ಅನ್ನವನುಣಿಸುವ ಅನ್ನಪೂರ್ಣೆ ಮನೆಯಲ್ಲಿ
ಇಲ್ಲದಿರೆಂತು ಜೀವಿಪನು ಬಯಲನುಟ್ಟವನು*?

*ಬಯಲನುಟ್ಟವ - ದಿಗಂಬರ, ಆಕಾಶವನ್ನೇ ಬಟ್ಟೆಯಾಗಿ ಉಳ್ಳವನಾದ ಶಿವ

ಸಂಸ್ಕೃತ ಮೂಲ:
ಸ್ವಯಂ ಪಂಚಮುಖೋ ಪುತ್ರೌ ಗಜಾನನ ಷಡಾನನೌ
ದಿಗಂಬರಃ ಕಥಂ ಜೀವೇತ್ ಅನ್ನಪೂರ್ಣಾ ನ ಚ ಗೃಹೇ!

ಮಕ್ಕಳ ಜಗಳ ಯಾರ ಮನೇಲಿಲ್ಲ? ಮಕ್ಕಳ ಜಗಳ ಬಿಡಿಸೋಕೆ ತಾಯಿ ಬೇಕೇ ಬೇಕು. ಆದರೆ ಒಮ್ಮೊಮ್ಮೆ, ಆ ತಾಯಿ ಗೌರಿಗೂ ಅದು ಆಗೋದಿಲ್ವಂತೆ. ಒಬ್ಬ ಸುಭಾಷಿತಕಾರ ಹೇಳೋದನ್ನ ಕೇಳಿ:

ಅಯ್ಯೋ ಗಣೇಶ! ಯಾಕೋ ಅಳುವೆ? ನನ್ನ ಕಿವಿಗಳನ್ನ ಎಳೀತಾನೆ ನೋಡಮ್ಮ!
ಯಾಕೋ ಸ್ಕಂದ? ಯಾಕೀ ಚೇಷ್ಟೆ? ಅವನು ಯಾಕೆ ಮುಂಚೆ ನನ್ನ ಕಣ್ಣೆಣಿಸಿದ್ದು?
ಆನೇ ಮೊಗದವನೇ! ಇದು ಸರಿಯೇನೋ? ನನ್ನ ಮೂಗನ್ನಳೆದಿದ್ದವನೇ ತಾನೇ?
ಇದ ಕೇಳುತಲೇನೂ ತೋಚದೆ ಹುಸಿಕೋಪವತೋರಿದ ಗೌರಿಯೆ ಕಾಯಲೆಮ್ಮೆಲ್ಲರನ್ನು!

ಸಂಸ್ಕೃ…

ವಾತಾಪಿ ಗಣಪತಿಂ ಭಜೇಹಂ

Image
ಈ ಶನಿವಾರ ಭಾದ್ರಪದ ಶುಕ್ಲ ಚೌತಿ. ಗಣೇಶನನ್ನು ತೊಡಕುಗಳನ್ನು ಕಳೆಯುವವನೆಂದು ನಾವೆಲ್ಲ ಪೂಜಿಸುತ್ತೇವೆ. ನಮ್ಮ ಹಿಂದಿನ ಹರಿದಾಸರು, ಮತ್ತೆ ಹಲವು ಕವಿಗಳು ಗಣಪನನ್ನು ಬಗೆಬಗೆಯಾಗಿ ಹೊಗಳಿರುವವರೇ. ಕನಕದಾಸರ ಹಾಡೊಂದು, ಎಲ್ಲರ ಮನದಲ್ಲಿ ನೆಲೆಯಾಗಿ ನಿಲ್ಲುವಂತೆ ವಿದ್ಯಾಭೂಷಣರು ಹಾಡಿರುವುದು ನಮಗೆಲ್ಲ ತಿಳಿದಿರುವುದೇ - 'ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹನ್ಯಾರಮ್ಮ' ಅನ್ನುವ ಈ ಹಾಡು ಹಂಸಧ್ವನಿ ರಾಗದಲ್ಲಿದೆ. ಅದೇ ಹಂಸದ್ವನಿ ರಾಗದಲ್ಲಿ, ಗಣಪತಿಯ ಮೇಲೆಯೇ ಮತ್ತೊಂದು ಪ್ರಖ್ಯಾತ ರಚನೆ ಇದೆ; ಅದು ಮುತ್ತುಸ್ವಾಮಿ ದೀಕ್ಷಿತರ ವಾತಾಪಿಗಣಪತಿಂ ಭಜೇಹಂ ಅನ್ನುವ ಕೃತಿ. ಸುಮಾರು ಒಂದು ನಾಲ್ಕಾರು ಸಂಗೀತ ಕಚೇರಿಗಳಿಗಾದರೂ ನೀವು ಹೋಗಿದ್ದರೆ, ನಿಮಗೆ ಈ ರಚನೆ ತಿಳಿದೇ ಇರಬೇಕು ಎನ್ನುವಷ್ಟು ಪ್ರಖ್ಯಾತವಾದ ರಚನೆ ಇದು.

ಮುತ್ತುಸ್ವಾಮಿ ದೀಕ್ಷಿತರು ಕರ್ನಾಟಕಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು. ಇವರು ಸುಮಾರು ನಾನೂರು ರಚನೆಗಳನ್ನು ರಚಿಸಿದ್ದಾರೆ. ಅದರಲ್ಲಿ ೩-೪ ಮಾತ್ರ ತೆಲುಗು/ಮಣಿಪ್ರವಾಳದಲ್ಲಿದ್ದು ಉಳಿದದ್ದೆಲ್ಲ ಸಂಸ್ಕೃತದಲ್ಲಿವೆ. ಬಹಳ ಸರಳವಲ್ಲದಿದ್ದರೂ, ಇವರ ರಚನೆಗಳು ಸಂಗೀತರಸದಿಂದ ತುಂಬಿವೆ. ತಂಜಾವೂರಿನ ಬಳಿಯ ತಿರುವಾರೂರಿನಲ್ಲಿ ಜನಿಸಿದ ಇವರು ದೇಶದ ಹಲವೆಡೆಗಳಿಗೆ ಯಾತ್ರಿಕರಾಗಿ ಹೋಗಿ, ಅಲ್ಲಿನ ದೇವಾಲಯಗಳ ದೇವಾನುದೇವತೆಗಳ ಬಗ್ಗೆ ತಮ್ಮ ಕೃತಿಗಳನ್ನು ರಚಿಸಿದ್ದಾರೆ.


ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದ…

ಬ್ಲಾಗ್ ಮತ್ತೆ ಬರಹಗಳ ಗುಣಮಟ್ಟ

ನಾನಂತೂ ಕಾಲೇಜು ಮುಗಿದ ನಂತರ ಕಾಗದದಲ್ಲಿ, ಅದೂ ಕನ್ನಡದಲ್ಲಿ ಬರೆದದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ - ಸುಮಾರು ೯೬ ನೇ ಇಸವಿಯಲ್ಲಿ ಮಾಡಿದ್ದ ಒಂದು ಇಂಗ್ಲಿಷ್ ಕಥೆಯ ಅನುವಾದವಲ್ಲದೇ ಇನ್ನೇನನ್ನೂ ಕಾಗದದ ಮೇಲೆ ಬರೆದ ನೆನಪೇ ಇಲ್ಲ. ಎಷ್ಟೋ ಬಾರಿ ಒಳ್ಳೆಯ ಸುಭಾಷಿತಗಳನ್ನು ನೆನೆಸಿಕೊಂಡಾಗಲೆಲ್ಲ, ಅಥವಾ ಎಸ್ವಿ ಪರಮೇಶ್ವರ ಭಟ್ಟರ ಅಥವಾ ಪಾವೆಂ ಅವರ ಸುಭಾಷಿತಗಳ ಅನುವಾದಗಳನ್ನು ಓದಿದಾಗಲೆಲ್ಲ ನನಗೆ ಹೊಳೆದ ಕನ್ನಡಿಸುವ ಹೊಸ ಸಾಲುಗಳು ಹಾಗೇ ಗಾಳಿಯಲ್ಲೇ ಆರಿಹೋಗುತ್ತಿದ್ದಿದ್ದೂ ನಿಜ. ಈ ನಿಟ್ಟಿನಲ್ಲಿ ನೋಡಿದರೆ ಕಂಪ್ಯೂಟರಿನಲ್ಲಿ ಬರೆಯುವ, ಅಲ್ಲದೆ ಬರೆದದ್ದನ್ನು ನಾಲ್ಕಾರು ಜನ ಓದುವಂಥ ಅವಕಾಶ ಬಂದಿದ್ದು ಏನನ್ನಾದರೂ ಬರೆಯುತ್ತಿರಬೇಕೆಂಬ ಹುಮ್ಮಸ್ಸು ತಂದಿರುವುದಂತೂ ಅಷ್ಟೇ ನಿಜ. ಬ್ಲಾಗಿಷ್ಟನಾಗುವ ಮೊದಲು, ನಮ್ಮ ಕನ್ನಡಕೂಟದ ವಾರ್ಷಿಕ ಸಂಚಿಕೆಗೆ ಒಂದೋ ಎರಡೋ ಎರಡೋ ಬರಹವನ್ನೋ ಚುಟುಕವನ್ನೋ ಪ್ರಬಂಧವನ್ನೋ ಬರೆಯುತ್ತಿದ್ದ ನಾನು ಈಗ ಮೂರು ವರ್ಷದಲ್ಲಿ ಮುನ್ನೂರಕ್ಕೂ ಹೆಚ್ಚು ಬ್ಲಾಗ್ ಪೋಸ್ಟುಗಳನ್ನು ಪೋಸ್ಟಿಸಿದ್ದೇನೆ! ಎಲ್ಲವೂ ಬಹಳ ಸೊಗಸಾಗಿದೆ ಎಂದು ಹೇಳಲಾರೆನಾದರೂ, ಎಲ್ಲವೂ ಜಳ್ಳಲ್ಲ ಅಂತ ಹೇಳುವಷ್ಟು ಧೈರ್ಯವಂತೂ ಇದೆ.

"ಬ್ಲಾಗು ’ಸಾಹಿತ್ಯ’ವೇ?" ಅಂತ ಹೀಗಳೆಯುವ ಗೋಜಿಲ್ಲ ಅನ್ನಿಸುತ್ತೆ ನನಗೆ. ಅಥವಾ, ಈ ಕಾರಣಕ್ಕೆ ಯಾವನೇ ಒಬ್ಬ ಬ್ಲಾಗಿಷ್ಟ ಕೊರಗುವ ಗೋಜೂ ಇಲ್ಲ. ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಪ್ರಕಟವಾಗುವುದು ಮಾತ…

ಮರೆಯಲಾರದ ಹಳೆಯ ಕಥೆಗಳು - ’ನಾಸೀಂ ಬೇಗಂ’

ಕೆಲವು ಕಥೆಗಳಿರುತ್ತವೆ. ಎಷ್ಟು ಬಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬಹುದಾದಂತಹ ಹಥೆಗಳವು. ರಾಮಾಯಣ, ಮಹಾಭಾರತ, ಅಥವ ಶಾಕುಂತಲ ಅಂತಹ ಕತೆಗಳವು. ಗೊತ್ತಿದ್ದರೂ, ಮತ್ತೊಮ್ಮೆ ಅವಕಾಶ ಸಿಕ್ಕರೆ, ಸಿನಿಮಾವೋ, ನಾಟಕವೋ, ಯಕ್ಷಗಾನವೋ, ಮತ್ತೊಂದೋ ಎಲ್ಲಾದರೂ ಆ ಕಥೆಗಳು ಮತ್ತೆ ಮತ್ತೆ ಬಂದರೂ, ಬೇಸರಿಸದೇ ನೋಡುತ್ತೇವೆ. ಮುಂದೇನಾಗುವುದು ಎಂಬ ಕುತೂಹಲವಿಲ್ಲದಿದ್ದರೂ.

ಇನ್ನು ಕೆಲವು ಕಥೆಗಳಿರುತ್ತವೆ. ಒಮ್ಮೆ ಓದಿದ ನಂತರ ಎಷ್ಟೋ ವರ್ಷಗಳವರೆಗೆ, ಮತ್ತೆ ಓದದೆಯೂ, ಕೇಳದೆಯೂ ನೆನಪಿನಲ್ಲಿ ಉಳಿಯುವಂತಹವು ಆ ಕಥೆಗಳು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶಯ್ಯಂಗಾರರ ಅನೇಕ ಕಥೆಗಳು ಈ ಗುಂಪಿಗೆ ಸೇರುತ್ತವೆ ಎಂದು ನನ್ನ ಎಣಿಕೆ.

ಆದರೆ, ಇವತ್ತು ನಾನು ನೆನಪಿಸಿಕೊಂಡ ಕಥೆಗಳೇ ಬೇರೆ. ಅವುಗಳಲ್ಲೊಂದು ಅಶ್ವತ್ಥ ಅವರ ’ನಾಸೀಂ ಬೇಗಂ’ ಎಂಬ ಕಥೆ. ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿನ (ಅಥವಾ ಇನ್ನೂ ಮೊದಲದ್ದೇ ಇರಬಹುದು) ಕಾಶ್ಮೀರದ ಚಿತ್ರಣ ಕೊಡುವ ಈ ಕಥೆ ವಿಶಿಷ್ಟವಾದ್ದು. ನಾಸೀಂ ಬೇಗಂ, ಗಡಿಯ ಬಳಿಯ ಹಳ್ಳಿಯೊಂದರಲ್ಲಿ ಚಹಾ ಮಾರುವ ಪೆಟ್ಟಿಗೆಯಂಗಡಿಯೊಂದನ್ನು ಇಟ್ಟಿರುವ ಇಳಿವಯಸ್ಸಿನ ಮುದುಕಿ. ಈ ಸಮಯದಲ್ಲಿ, ಅವಳ ಅಂಗಡಿಯಲ್ಲಿ ಚಾ ಕುಡಿಯಲು, ಭಾರತದ ಸೈನಿಕರ ಸಮವಸ್ತ್ರ ಧರಿಸಿದ ಐದಾರು ಸೈನಿಕರು ಬರುತ್ತಾರೆ. ಅವರಿಗೆ ಚಹಾ ಮಾಡುತ್ತ, ಅವರ ಮಾತಿನ ಧಾಟಿಯನ್ನು ಕೇಳಿದ ನಾಸೀಮಳಿಗೆ, ಇವರು ಮಾರುವೇಷದಲ್ಲಿರುವ ವಿರೋಧಿ ಪಡೆಯವರು ಎಂದು ಅರ್ಥವಾಗಿಬಿಡುತ್ತೆ. ತ…

ಹರಿ ಸ್ಮರಣೆ

ಇಂದು ಗೋಕುಲಾಷ್ಟಮಿ. ಅದಕ್ಕೇ ಹಿಂದೇ ಕನ್ನಡಿಸಿದ್ದ ಕೆಲವು ಕೃಷ್ಣ ಸ್ತೋತ್ರಗಳನ್ನು ಮತ್ತೆ ಹಾಕಿದ್ದೇನೆ.

ನೀರು ಹರಿಯುವುದು ಕಡಲಿನ ಕಡೆಗೆ
ಬಾನಿಂದ ಬೀಳುವ ಮಳೆಯ ನೀರೆಲ್ಲ ಕಡೆಗೆ ಹರಿವುದು ಕಡಲ ಕಡೆಗೆ
ನೀನಾವ ದೇವನಿಗೆ ಮಣಿವಾಗಲೂ ಅದು ತಲುಪುವುದು ಹರಿಯ ಕಡೆಗೆ!

ಸಂಸ್ಕೃತ ಮೂಲ:
ಆಕಾಶಾತ್ ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ |
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ||


ಕಥೆ ಹೇಳುವ ಪರಿ!
ರಾಮ ಅಂತೊಬಿದ್ದ. ಹುಂ. ಅವನ ಹೆಂಡತಿ ಸೀತೆ. ಹುಂ. ಹುಂ.
ಅಪ್ಪನ ಮಾತಿಗೆ ಪಂಚವಟೀ ದಡದಲ್ಲಿದ್ದಾಗ ರಾವಣ ಅವಳ ಕದ್ದ.
ನಿದ್ದೆ ಬರಲಮ್ಮನ ಕಥೆಯ ಹುಂಗುಟ್ಟುತಿಂತು ಕೇಳುತಿರುವ ಹರಿಯ
"ಲಕ್ಷ್ಮಣಾ ಬಿಲ್ಲೆಲ್ಲಿ ನನಬಿಲ್ಲು" ಎಂಬಾವೇಶದ ಮಾತೆಮ್ಮ ಕಾಯಲಿಂದು

ಸಂಸ್ಕೃತ ಮೂಲ:
ರಾಮೋ ನಾಮ ಬಭೂವ ಹುಂ ತದಬಲಾ ಸೀತೇತಿ ಹುಂ ತಾಂ ಪಿತುಃ
ವಾಚಾ ಪಂಚವಟೀ ತಟೇ ವಿಹರತಃ ತಸ್ಯಾಹರದ್ರಾವಣಃ ||
ನಿದ್ರಾರ್ಥಂ ಜನನೀ ಕಥಾಮಿತಿ ಹರೇಃ ಹುಂಕಾರತಃ ಶ್ರುಣ್ವತಃ
ಸೌಮಿತ್ರೇ ಕ್ವ ಧನುರ್ಧನುರಿತಿ ವ್ಯಗ್ರಾ ಗಿರಃ ಪಾತು ವಃ ||

ದೇವನೊಬ್ಬ ನಾಮ ಹಲವು
ಆವನನು ಶೈವರು ಶಿವನೆಂದು ಹೊಗಳುವರೊ,
ವೇದಾಂತಿಗಳಿಗಾವನು ಪರಬೊಮ್ಮರೂಪಿಯೋ,
ಬೌದ್ಧರು ಬುದ್ಧನಿವನೆಂದಾಣೆ ಇಡುವರೋ,
ನೈಯಾಯಿಕರು ಆವನಿಗೆ ಕರ್ತನಿವನೆಂಬರೋ,
ಜಿನನ ಹಾದಿಯ ಹಿಡಿದವರಿಗಾರು ಅರಿಹಂತನೋ,
ಕಾರಣವ ಹುಡುಕುವರಿಗಿದು ಮಾಡಿದಾ ಕೆಲಸವೋ
ಅವನೆ ಕಾಯಲೆಮ್ಮೆಲ್ಲರನುದಿನವು ಕೇಳಿದುದ ಕೊಟ್ಟು
ಮೂರು ಲೋಕದ ಅರಸು ಬೇಲೂರ ಚೆನ್ನಿಗನು**

ಸಂಸ್ಕೃತ ಮೂಲ:…