Posts

Showing posts from March, 2010

ಕೊಡುಗೈ ದಾನಿ

ಜಿಪುಣನಿಗಿಂತಲು ಕೊಡುಗೈ ದಾನಿ
ಹಿಂದಿರಲಿಲ್ಲ ಮುಂದೆ ಬರಲಾರ
ತಾನೇ ಮುಟ್ಟದ ಹಣಕಾಸೆಲ್ಲವ
ಕಂಡವರಿಗುಳಿಸಿ ಹೋಗುವನಲ್ಲ!


ಸಂಸ್ಕೃತ ಮೂಲ:

ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||

-ಹಂಸಾನಂದಿ

ವಸಂತಕಾಲ ಬಂದಾಗ ..

ಕಾಗೆಯು ಕಪ್ಪು ಕೋಗಿಲೆ ಕಪ್ಪು
ಹೇಗವುಗಳ ಬೇರ್ಪಡಿಸುವುದು?
ವಸಂತ ಕಾಲವು ಬಂದಿರಲು
ತನ್ನಲೆ ತಾನೇ ತೋರುವುದು!

ಸಂಸ್ಕೃತ ಮೂಲ:
ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |
ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕಃ ||

-ಹಂಸಾನಂದಿ
ಕೊಸರು: ಮಾರ್ಚ್ ೨೦, ೨೦೧೦ರಂದು ಸಮಹಗಲಿರುಳು - ವಸಂತದ ಮೊದಲ ದಿನ. ಅದಕ್ಕೇ ಇರಬೇಕು, ಈ ಸುಭಾಷಿತ ಇನ್ನೊಮ್ಮೆ ನೆನಪಾದದ್ದು!

ಮುಖ ನೋಡಿ ಮಣೆ ಹಾಕೋದು

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನ
ಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;
ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟ
ಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ!

ಸಂಸ್ಕೃತ ಮೂಲ:

ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಪೀತಾಂಬರಂ ವೀಕ್ಷ್ಯ ದದೌ ಸ್ವಕನ್ಯಾಂ ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ||

किम् वाससॆत्यत्र पिचारणीयम् वासः प्रदानम् खलु यॊग्यतायाः |
पीतांबरम् वीक्ष्य ददौ स्वकन्यां चर्मांबरम् वीक्ष्य विषम् समुद्रः ||

-ಹಂಸಾನಂದಿ

ಕೊಸರು: ವಯಿನ, ವೈನ : ಸೊಗಸು, ತಕ್ಕದ್ದು, ಅಚ್ಚುಕಟ್ಟು

ಹೆಂಗಸರ ಸಿಂಗಾರ

ಕೊಂಕಾದ ಕುಡಿಹುಬ್ಬು ಕಡೆಗಣ್ಣುಗಳ ನೋಟ
ನಯವಾದ ಮೆಲುನುಡಿ ನಾಚಿಕೆಯ ನಸುನಗೆ
ಲೇಸಾದ ನಿಲುಮೆ ಜೊತೆಗೆ ಹಿತವಾದ ನಡಿಗೆ
ಪೆಣ್ಗಳಿಗಿವು ಸಿಂಗರವು ಮತ್ತವೇ ಆಯುಧವು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಭ್ರೂ ಚಾತುರ್ಯಾಕುಂಚಿತಾಕ್ಷಾಃ ಕಟಾಕ್ಷಾಃ
ಸ್ನಿಗ್ಧಾ ವಾಚೋ ಲಜ್ಜಿತಾಶ್ಚೈವ ಹಾಸಾಃ |
ಲೀಲಾಮಂದ್ರಂ ಪ್ರಸ್ಥಿತಂ ಚ ಸ್ಥಿತಂ ಚ
ಸ್ತ್ರೀಣಾಮೇತದ್ ಭೂಷಣಂ ಚಾಯುಧಂ ಚ ||

-ಹಂಸಾನಂದಿ

ಗಟ್ಟಿಗರಿಗೂ ಬೇಕು ಬೆಂಬಲ

ಗಟ್ಟಿಗನಾದರೂ ಬಲ್ಲವನಾದರೂ
ಒಬ್ಬನೇ ಏನನು ಮಾಡಬಹುದು?
ಸುಯ್ಯುವ ಗಾಳಿಯ ಬೆಂಬಲವಿಲ್ಲದ
ಕಿಚ್ಚದು ತಂತಾನೇ ನಂದುವುದು!

ಸಂಸ್ಕೃತ ಮೂಲ (ಪಂಚತಂತ್ರದ ಕಾಕೋಲೂಕೀಯದಿಂದ)

ಅಸಹಾಯಃ ಸಮರ್ಥೋSಪಿ ತೇಜಸ್ವೀ ಕಿಂ ಕರಿಷ್ಯತಿ |
ನಿರ್ವಾತೇ ಜ್ವಲಿತೋ ವಹ್ನಿಃ ಸ್ವಯಮೇವ ಪ್ರಶಾಮ್ಯತಿ ||

-ಹಂಸಾನಂದಿ

ಬೇಕಿಲ್ಲದ ವಸ್ತುಗಳು

ಮನ್ನಿಸುವ ಗುಣವಿರಲು ಕವಚವೇಕೆ?
ಮುಂಗೋಪಕಿಂತಲು ಹಿರಿಯ ಹಗೆಯುಂಟೆ?
ಸುಡುಬೆಂಕಿಯೇಕೆ ಪುಂಡುದಾಯಾದಿಗಳಿರಲು?
ಮನವನವರಿವ ಗೆಳೆಯಗೂ ಮಿಗಿಲಾವ ಮದ್ದು?
ಕೇಡಿಗರು ಬಳಿಯಲಿರೆ ಹಾವಿಗೆ ಅಂಜುವರೆ?
ನೆಮ್ಮದಿಯ ತಿಳಿವಿರಲು ಹಣದ ಹಂಗೇಕೆ?
ನಾಚುವ ಮೊಗಕೆ ಬೇರೆ ಸಿಂಗರ ಬೇಕೆ?
ನಲ್ಗಬ್ಬಗಳನೋದಿ ನಲಿವನು ಆಳ ಬಯಸುವನೆ?

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಕ್ಷಾಂತಿಶ್ಚೇದ್ಕವಚೇನ ಕಿಂ ಕಿಮರಿಭಿಃ ಕ್ರೋಧೋಸ್ತಿ ಚೇದ್ದೇಹಿನಾಂ
ಜ್ಞಾತಿಶ್ಚೇದನಲೇನ ಕಿಂ ಯದಿ ಸುಹೃದ್ದಿವ್ಯೌಷಧೈಃ ಕಿಂ ಫಲಂ |
ಕಿಂ ಸರ್ಪೈರ್ಯದಿ ದುರ್ಜನಾಃ ಕಿಮು ಧನೈರ್ವಿದ್ಯಾSನವದ್ಯಾ ಯದಿ
ವ್ರೀಡಾ ಚೇತ್ಕಿಮು ಭೂಷಣೈಃ ಸುಕವಿತಾ ಯದ್ಯಸ್ತಿ ರಾಜ್ಯೇನ ಕಿಂ ||

क्षान्तिश्चेद्कवचेन किं किमरिभि: क्रोधोऽस्ति चेद्देहिनां
ज्ञातिश्चेदनलेन किं यदि सुहृद्दिव्यौषधै: किं फलम्।
किं सर्पैर्यदि दुर्जना: किमु धनैर्विद्याऽनवद्या यदि
व्रीडा चेत्किमु भूषणै: सुकविता यद्यस्ति राज्येन किम्।।

-ಹಂಸಾನಂದಿ

ಕೊಸರು: ಪದಶಃ ಕನ್ನಡಿಸುವುದರ ಬದಲು, ಭಾವವನ್ನಷ್ಟೇ ತೋರಿಸಲು ಪ್ರಯತ್ನಿಸಿರುವೆ.