Posts

Showing posts from May, 2010

ನಾಟಕ ಚೈತ್ರ ೨೦೧೦

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ ಚಿಗುರು. ಚಿಗುರು ಅಂದ್ರೆ ಹೊಸತು. ಹಾಗಾಗಿ ಹೊಸದಾಗಿ ಏನು ಯೋಚಿಸಿದ್ರೂ ಮಾಡಿದ್ರೂ ಅದನ್ನ ಚೈತ್ರ ಅಂದ್ರೆ ಅದರಲ್ಲೇನಿದೆ ತಪ್ಪು? ಅಲ್ವಾ? ಅಷ್ಟೇ ಅಲ್ಲದೆ ಈ ನಾಟಕ ಚೈತ್ರಕ್ಕೆ ತಾಲೀಮು ಶುರು ಮಾಡಿದ್ದಂತೂ ಚೈತ್ರದಲ್ಲೇ.

ಸುಮಾರು ೨+ ತಿಂಗಳು ನಡೆಸಿದ ಅಭ್ಯಾಸದ ನಂತರ ನೆನ್ನೆ ಸ್ಯಾನ್ ಹೊಸೆಯ ಮೌಂಟ್ ಪ್ಲೆಸೆಂಟ್ ಪ್ರೌಢ ಶಾಲೆಯ ರಂಗ ಮಂದಿರದಲ್ಲಿ ಎರಡು ನಾಟಕಗಳನ್ನು ಆಡಿದ್ದಾಯಿತು. ಒಂದು ಟಿ ಎನ್ ಸೀತಾರಾಮರ ’ನಮ್ಮೊಳಗೊಬ್ಬ ನಾಜೂಕಯ್ಯ’ ಮತ್ತೆ ಮತ್ತೊಂದು ಡುಂಡಿರಾಜರ ’ಕೊರಿಯಪ್ಪನ ಕೊರಿಯೊಗ್ರಫಿ’.

ಸುಮಾರು ೪೦೦ಕ್ಕೂ ಹೆಚ್ಚು ಜನ ಬಂದು ನೋಡಿ ಆನಂದಿಸಿ ಹೋದರು. ಹೌಸ್ ಫುಲ್ ಥಿಯೇಟರ್! ಇದಕ್ಕಿಂದ ಹೆಚ್ಚೇನು ಬೇಕು ನಾಟಕ ಆಡಿಸಿದವರಿಗೆ? ಅಲ್ಲದೆ ಟಿಕೆಟ್ ಮಾರಿ ಬಂದ ಲಾಭವೆಲ್ಲ ಮೈತ್ರಿ www.maitri.org ಅನ್ನುವ ಲಾಭದಾಸೆಇರದ ಸಂಸ್ಥೆಗೆ.
’ನಮ್ಮೊಳಗೊಬ್ಬ ..’ ನಾಟಕದಲ್ಲಿ ನನ್ನದೂ ಒಂದು ಪಾತ್ರ ಇತ್ತು. ಬದಲಾಯಿಸಲು ಕಷ್ಟವಾದ ವ್ಯವಸ್ಥೆಯಲ್ಲಿ ಇರುವ ಒಬ್ಬ ಅಯೋಗ್ಯ ಸರಕಾರಿ ಅಧಿಕಾರಿಯ ಪಾತ್ರ.

ನಾನೂ ಹೀಗೆ ಒಂದು ದೊಡ್ಡ ನಾಟಕ ದಲ್ಲಿ ಪಾತ್ರ ಮಾಡಿ ಬಹಳ ದಿನಗಳೇ ಆಗಿತ್ತು. ನಾಟಕ ಆದಮೇಲೆ, ಎರಡನೇ ನಾಟಕಕ್ಕೆ ಮೊದಲು ತಿಂಡಿ ತೀರ್…

ಹೆಜ್ಜೆ ಇಡುವ ಮೊದಲು

ಗಟ್ಟಿ ನೆಲದ ಮೇಲೆ ಮುಂಗಾಲಿಟ್ಟೇ
ಎತ್ತುವರು ಹಿಂಗಾಲನು ಜಾಣರು;
ಮತ್ತೆ ಮುಂಬರುವುದ ನೋಡದೆಲೆ
ಇದ್ದೆಡೆಯನು ನೀ ತೊರೆಯದಿರು!

ಸಂಸ್ಕೃತ ಮೂಲ:

ಚಲತ್ಯೇಕೇನ ಪಾದೇನ ತಿಷ್ಠತ್ಯೇಕೇನ ಪಂಡಿತಃ |
ನಾಸಮೀಕ್ಷ್ಯಾಪರಂ ಸ್ಥಾನಂ ಪೂರ್ವಮಾಯಾತನಂ ತ್ಯಜೇತ್ ||

-ಹಂಸಾನಂದಿ

ಬೆಂಕಿಯಲಿ ಬಿದ್ದ ಚಂದನ

ಅಸು ನೀಗುವ ವೇಳೆಯಲೂ
ಎಸಗಬೇಕುಳಿದವರಿಗೆ ಒಳಿತು!
ಬಿಸುಟರೂ ಉರಿಯಲಿ ಚಂದನವ
ಸೂಸದೆ ಇರುವುದೆ ನರುಗಂಪು?

ಸಂಸ್ಕೃತ ಮೂಲ:

ಪ್ರಾಣನಾಶೇSಪಿ ಕುರ್ವೀತ ಪರೇಷಾಂ ಮಾನವೋ ಹಿತಂ |
ದಿಶಃ ಸುಗಂಧಯತ್ಯೇವ ವಹ್ನೌ ಕ್ಷಿಪ್ತೋSಪಿ ಚಂದನಃ ||

-ಹಂಸಾನಂದಿ

ಕನ್ನಡ ಬಳಕೆಯಲ್ಲೇಕೆ ಕೀಳರಿಮೆ?

ಈಗೀಗ ಪತ್ರಿಕೆಗಳಲ್ಲಿ ಬರುವ ಕೆಲವು ಪದಗಳನ್ನ ನೋಡಿದ್ರೆ ಇದು ಕನ್ನಡವಾ ಅಂತ ಅನುಮಾನ ಬರೋದು ಸಹಜ.

’ಪಠಣ ಅಕ್ಷಮತೆ’ ’ಕಲಿಕಾ ನ್ಯೂನತೆ’ – ಇದ್ಯಾವ್ ಸೀಮೆ ಕನ್ನಡ ಪದಗಳು ರೀ? ಈ ರೀತಿಯ ಪದಗಳನ್ನ ನೀವು ಓದಿಲ್ದಿದ್ರೆ, ಇಲ್ಲಿ ಚಿಟಕಿಸಿ.

ಈಗ ಡಿಸ್ಲೆಕ್ಸಿಯಾಗೆ ಓದುವಲ್ಲಿ ತೊಡಕು – ಓದುವುದರಲ್ಲಿ ತೊಡಕು – ಅಥವಾ ’ತೊಡಕೋದು’ ಅಂತ ಒಂದು ಹೊಸ ಪದವನ್ನು ಹುಟ್ಟಿಸಬಹುದು. ಯಾಕಂದ್ರೆ ಆ ಪದಗಳೇ ಹೇಳುತ್ತೆ - ಓದುವುದರಲ್ಲಿ ತೊಡಕಾಗುತ್ತೆ ಅಂತ. ಅದನ್ನ ಬಿಟ್ಟು ಪಠಣ ಅಕ್ಷಮತೆ ಅಂತೆ ಪಠಣ ಅಕ್ಷಮತೆ!

ಮತ್ತೆ ’ಕಲಿಕಾ ನ್ಯೂನತೆ’ – ಇದೂ ಅಷ್ಟೆ – ಸಂಸ್ಕೃತವೂ ಅಲ್ಲ, ಕನ್ನಡವೂ ಅಲ್ಲದ ಒಂದು ಕಲಸು ಮೇಲೋಗರ; ಆದರೆ ರುಚಿಯೂ ಇಲ್ಲ ಅಷ್ಟೇ ಈ ಮೇಲೋಗರದಲ್ಲಿ. ಕಲಿಕೆ ಏನು ಆಕಾರಾಂತ ಸ್ತ್ರೀಲಿಂಗ ಪದವೇ ಕಲಿಕಾ ಅಂತ ಹೇಳೋದಕ್ಕೆ?

ಅಲ್ಲದೆ ’ಕಲಿಕಾ ನ್ಯೂನತೆ’ ಅಂತ ಅಂದರೆ ಇದನ್ನು (ಈಗಾಗಲೇ ಮಾಡಿರುವ) ಕಲಿಕೆಯಲ್ಲಿ ಕೊರತೆ ಎಂದು ತಿಳಿಯೋಣವೋ? ಇಲ್ಲ (ನಿಜವಾದ ಅರ್ಥದಂತೆ) ಕಲಿಯುವುದಕ್ಕೆ ಆಗದಂತಹ ಕೊರತೆ ಅಂತ ತಿಳಿಯೋಣವೋ? ಬೇಕಾದರೆ ನೇರವಾಗಿ ’ಕಲಿಯಲಾಗದ ಕೊರೆ’ ’ಕಲಿಯಲಾಗದ ಕೊರತೆ’ ಅನ್ನ ಬಹುದು ಅಲ್ವಾ?

ನಾಲ್ಕಾರು ಜನ ಕುಳಿತು ಯೋಚಿಸಿದರೆ ನಾನು ಬರೆದಂತಹ ಪದಗಳಿಗಿಂತ ಇನ್ನೂ ತಿಳಿವಾದ, ಇನ್ನೂ ಒಳ್ಳೆಯ ಪದಗಳು ಖಂಡಿತ ಸಿಗಬಹುದು. ಈ ರೀತಿ ಯೋಚನೆ ಮಾಡಬೇಕಿದೆ ಅಂತ ತೋರಿಸಲಷ್ಟೇ ನಾನಿಲ್ಲಿ ಬರೆದಿದ್ದು.

-ಹಂಸಾನಂದಿ

ಕೊಸರು: ನನಗೆ ಸಂಸ್ಕೃತ ಅರ್ಥವಾಗುತ್ತೆ ಅನ್ನೋ ಕ…

ಗ್ರಹಬಲ

ರಟ್ಟೆಯಲಿ ಕಸುವಿಲ್ಲದವಗೆ ಗಟ್ಟಿ ಮನಸು ಇಲ್ಲದವಗೆ
ನೆರವನು ನೀಡುವನೆಂತು ಆಗಸದಲಿರುವ ಚಂದಿರನು?


ಸಂಸ್ಕೃತ ಮೂಲ:

ಯೇಷಾಂ ಬಾಹುಬಲಂ ನಾಸ್ತಿ ಯೇಷಾಂ ನಾಸ್ತಿ ಮನೋಬಲಮ್ |
ತೇಷಾಂ ಚಂದ್ರಬಲಂ ದೇವಃ ಕಿಂ ಕರೋತಿ ಅಂಬರೇ ಸ್ಥಿತಮ್ ||

ಒಳಿತು

ಸಿರಿಯೆಂಬುದಕಿದೆ ಕಡಲ ಅಲೆಯಂತೆ ಹೊಯ್ದಾಟ
ಹರೆಯವೋ? ಇರಬಹುದು ನಾಲ್ಕಾರು ದಿವಸ;
ಹಿಂಗಾರ ತೆಳುಮುಗಿಲಂತೆ ವಯಸು ಕಳೆವಾಗ
ಹಣದಿಂದಲೇನು? ಪರರೊಳಿತಿನಲಿ ತೊಡಗು!

ಸಂಸ್ಕತ ಮೂಲ (ಸುಭಾಷಿತ ಸುಧಾನಿಧಿಯಿಂದ)

ಸಂಪದೋ ಜಲತರಂಗವಿಲೋಲಾ
ಯೌವನಂ ತ್ರಿಚತುರಾಣಿ ದಿನಾನಿ |
ಶಾರದಾಭ್ರಪರಿಪೇಲವಮಾಯುಃ
ಕಿಂ ಧನೈಃ ಪರಹಿತಾನಿ ಕುರುಧ್ವಮ್ ||

-ಹಂಸಾನಂದಿ

ಕೊ: ಸಂಸ್ಕೃತದ ’ತ್ರಿಚತುರಾಣಿ ದಿನಾನಿ’ ಅನ್ನುವುದನ್ನು ನಾನು ಕನ್ನಡದಲ್ಲಿ ಹೆಚ್ಚು ಬಳಕೆ ಇರುವ ’ನಾಲ್ಕಾರು ದಿವಸ’ ವಾಗಿ ಮಾರ್ಪಡಿಸಿರುವೆ
ಕೊ.ಕೊ: ಶರತ್ಕಾಲದ ಮೋಡಗಳನ್ನು ನಾನು ’ಹಿಂಗಾರಿನ ಮೋಡ’ ವಾಗಿ ಬದಲಾಯಿಸಿದ್ದೇನೆ.

ಸಹವಾಸ ದೋಷ!

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನಾಕಾರದಿ ಹೊಳೆವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:


ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||

-ಹಂಸಾನಂದಿ

ಕೊಸರು: ಸ್ವಾತಿ ಮಳೆ ಬೀಳುವಾಗ, ನೀರಹನಿ ನೇರವಾಗಿ ಕಪ್ಪೆಚಿಪ್ಪಿನಲ್ಲಿ ಬಿದ್ದರೆ, ಅದು ಮಾತ್ರ ಮುತ್ತಾಗುತ್ತದೆ ಅನ್ನುವುದು ಹಿಂದೆ ನಂಬಿದ್ದ ಒಂದು ಕವಿಸಮಯ.

ಹುಟ್ಟು ಹಬ್ಬದ ದಿನ

ಇವತ್ತು ಏಟಿಎಮ್ ಗೆ ದುಡ್ಡು ತೆಗೆಯಲು ಹೋದರೆ ಕಿಸೆಯಲ್ಲಿ ಎಟಿಎಮ್ ಕಾರ್ಡೇ ಕಾಣಲಿಲ್ಲ. ಎಲ್ಲಿ ಮರೆತಿರುವೆ ಗೊತ್ತಾಗದೆ ಒಂದು ಸಲ ಮನೆಯಲ್ಲೂ ಹುಡುಕಿದ್ದಾಯ್ತು. ಅಲ್ಲೂ ಕಾಣಲಿಲ್ಲ. ನೆನ್ನೆ-ಮೊನ್ನೆ ತಾನೇ ಉಪಯೋಗಿಸಿದ್ದೂ ನೆನಪಿಗೆ ಬಂತು. ಕೂಡಲೆ ಆನ್-ಲೈನ್ ರೆಕಾರ್ಡ್ ನೋಡಿದರೆ, ದೇವರ ದಯ, ಯಾವುದೇ ಅನುಮಾನ ಹುಟ್ಟುವಂತಹ ಎಂಟ್ರೀ ಕಾಣಲಿಲ್ಲ. ಹೇಗೇ ಇರಲಿ, ಒಮ್ಮೆ ಬ್ಯಾಂಕಿಗೆ ಹೋಗಿ ಹೊಸ ಎಟಿಎಮ್ ಕಾರ್ಡ್ ತೆಗೆದುಕೊಳ್ಳೋಣ ಅಂತ ಹೋದೆ.

ಸರಿ ಎಲ್ಲ ವಿವರಗಳನ್ನು ಕೊಟ್ಟಮೇಲೆ, ಕೌಂಟರ್ನಲ್ಲಿದ್ದಾಕೆ ಮಾಡಬೇಕಿದ್ದ ಸಹಾಯ ಮಾಡಿ ಮುಗಿಸಿ "ಹುಟ್ಟು ಹಬ್ಬದ ಶುಭಾಶಯಗಳು! ನಾಳೆಗೆ ಏನು ವಿಶೇಷ?" ಅಂದಳು. ನಾಳೆ ಹುಟ್ಟುಹಬ್ಬ ಆಚರಿಸುವ ಯಾವುದೇ ಯೋಜನೆಯಿಲ್ಲದ ನಾನು ಒಂದು ಕ್ಷಣ ತಬ್ಬಿಬ್ಬಾದರೂ, "ಥ್ಯಾಂಕ್ಸ್" ಹೇಳಿ ಜಾಗ ಖಾಲಿ ಮಾಡಿದೆ. :)
......

ಆದರೆ ಮೇ-ನಾಕರಂದು ನನಗೆ ತುಂಬಾ ಬೇಕಾದವರೊಬ್ಬರು ಹುಟ್ಟಿದ ದಿನ. ಅವರೇನು ನಮ್ಮ ನೆಂಟರು ಇಷ್ಟರಲ್ಲ! ಅವರು ಇದ್ದಿದ್ದರೆ, ಈಗ ೨೪೩ ವರ್ಷ ಆಗಿರ್ತಿತ್ತು ಅವರು ಯಾರು, ಅವರು ಯಾಕೆ ನನ್ಗೆ ತುಂಬಾ ಬೇಕಾದವರು ಅಂತ ಹೇಳ್ತಿದೀನಿ ಅಂತ ಕುತೂಹಲ ಇದ್ರೆ ಇಲ್ಲಿ ಚಿಟಕಿಸಿ ನೋಡಿ. :)

-ಹಂಸಾನಂದಿ