Posts

Showing posts from July, 2010

ಬಿಲ್ಲುಗಾರ್ತಿಗೆ

ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||

-ಹಂಸಾನಂದಿ

ಕೊ: ** ಮೂಲದಲ್ಲಿರುವ ಶ್ಲೇಷವೊಂದನ್ನು ಕನ್ನಡದಲ್ಲೂ ತರುವ ಪ್ರಯತ್ನ ಮಾಡಿದ್ದೇನೆ. ಗುಣ ಎಂದರೆ ರೂಢಿಯಲ್ಲಿರುವ ಅರ್ಥವಲ್ಲದೆ, ಬಿಲ್ಲಿನ ಹೆದೆ, ಹೆದೆಗೆ ಕಟ್ಟುವ ದಾರ ಅನ್ನುವ ಅರ್ಥವೂ ಇದೆಯಂತೆ. ಬಾಣವನ್ನು ಬಿಡುವಾಗ ಹೆದೆಯನ್ನು ಸೆಳೆಯಬೇಕಾಗುವುದು ಸಹಜ ತಾನೇ? ಹಾಗಾಗಿ ’ಬರೀ ಸೆಳೆತದಲೇ’ ಅನ್ನುವುದು ಬಿಲ್ಲನ್ನು ಸೆಳೆಯುವ ಕ್ರಿಯೆ ಅಥವಾ ಆಕರ್ಷಣೆ ಎನ್ನುವ ಎರಡೂ ತಿಳಿವನ್ನು ಕೊಡುತ್ತದೆ ಎನ್ನಿಸಿ ಹಾಗೆ ಮಾಡಿರುವೆ.

ಕೊ.ಕೊ: ’ಗುಣ’ ಪದಕ್ಕಿರುವ ಶ್ಲೇಷೆ ನನಗೆ ನೆನ್ನೆಯವರೆಗೆ ಗೊತ್ತಿರಲಿಲ್ಲ. ನೆನ್ನೆ ತಾನೆ ಒಂದು ಪುಸ್ತಕ ಓದುವಾಗ ಸಿಕ್ಕಿತು :) ಜೈ ಗೂಗಲೇಶ್ವರ!

ಸಂಜೆ ಆಗಸದಲ್ಲೊಂದು ಗ್ರಹ ಕೂಟ

Image
ಸಂಜೆ ಹೊತ್ತಿನಲ್ಲಿ ನಿಮಗೆ ಪಶ್ಚಿಮದ ಆಕಾಶ ಕಾಣೋ ಹಾಗಿದ್ದರೆ, ಈ ದಿನಗಳಲ್ಲಿ ಸೂರ್ಯ ಮುಳುಗಿ ಕತ್ತಲಾಗ್ತಾ ಇದ್ದ ಹಾಗೆ ನೋಡೋದು ಮರೀಬೇಡಿ. ಒಂದಲ್ಲ, ಎರಡಲ್ಲ ಮೂರು ಗ್ರಹಗಳನ್ನ , ಅದೃಷ್ಟ ಇದ್ದರೆ ನಾಲ್ಕನೇದನ್ನೂ ನೋಡಬಹುದು.

ಸಿಕ್ಕಾಪಟ್ಟೆ ಬಿಳಿ ಬಣ್ಣದಲ್ಲಿ ಹೊಳೆಯೋದೇ ಬೆಳ್ಳಿ - ಅಂದರೆ ಶುಕ್ರ. ಅದಕ್ಕೆ ಸ್ವಲ್ಪ ಮೇಲೆ ಎಡಗಡೆ ಮೂಲೆಯಲ್ಲಿರೋದು ಮಂಗಳ. ಅದಕ್ಕೆ ಹತ್ತಿರವಾಗಿ ಸ್ವಲ್ಪ ಮೇಲಿರೋದು ಶನಿ.
ಶುಕ್ರನಿಗಿಂಗ ಕೆಳಗೆ ಸ್ವಲ್ಪ ಬಲಕ್ಕೆ ಮೂಲೆಯಾಗಿ, ಸಿಂಹ ರಾಶಿಯ ಅತೀ ಪ್ರಕಾಶಮಾನವಾದ ತಾರೆ ಮಖಾ ನಕ್ಷತ್ರದ ಪಕ್ಕದಲ್ಲೇ ಬುಧನಿದ್ದಾನೆ. ಮುಳುಗಿದ ಸೂರ್ಯನಿಗೆ ಬಹಳ ಹತ್ತಿರದಲ್ಲಿರುವುದರಿಂದ, ಸಂಜೆಬೆಳಕಿನಲ್ಲಿ ಕಾಣುವುದು ಕಷ್ಟವೇ ಆಗಬಹುದು. ಒಂದು ವೇಳೆ ನಿಮಗೆ ಕಂಡರೆ, ನಾಲ್ಕು ಗ್ರಹಗಳನ್ನು ಒಟ್ಟಿಗೆ ಆಕಾಶದಲ್ಲಿ ನೋಡಿದ ಭಾಗ್ಯ ನಿಮ್ಮದಾಗುವುದು!

-ಹಂಸಾನಂದಿ

ಚಿತ್ರ ಕೃಪೆ: ಸ್ಟೆಲ್ಲೇರಿಯಂ ಬಳಸಿ ನಾನೇ ಹಿಡಿದ ತೆರೆಚಿತ್ರ. ಚಿತ್ರದ ಮೇಲೆ ಚಿಟಕಿದರೆ ದೊಡ್ಡದಾಗಿಸಿ ನೋಡಬಹುದು.

ಜೀವನವೆಂಬ ವನ

ಸಾವು ಬಳಿ ಬಂದಿರಲು ಯಾರು ಯಾರನು ಕಾಯ್ದಾರು?
ಹಗ್ಗ ಹರಿಯಲು ಬಿಂದಿಗೆಯ ಇನ್ಯಾರು ಹಿಡಿಯುವರು?
ಈ ಜಗದ ಬಾಳುವೆಯು ಅಡವಿಯ ಮರಗಳ ಸಾಟಿ
ಕಡಿಯುವುದು ಚಿಗುರುವುದು ನಡೆಯುತಲೆ ಇರುವುದು

ಸಂಸ್ಕೃತ ಮೂಲ - (ಸ್ವಪ್ನವಾಸವದತ್ತ ನಾಟಕದ ಆರನೇ ಅಂಕದಿಂದ)

ಕಃ ಕಂ ಶಕ್ತೋ ರಕ್ಷಿತುಂ ಮೃತ್ಯುಕಾಲೇ
ರಜ್ಜುಚ್ಛೇದೇ ಕೇ ಘಟಂ ಧಾರಯಂತಿ
ಏವಂ ಲೋಕಸ್ತುಲ್ಯಧರ್ಮೋ ವನಾನಾಂ
ಕಾಲೇ ಕಾಲೇ ಛಿದ್ಯತೇ ರುಹ್ಯತೇ ಚ ||

-ಹಂಸಾನಂದಿ

(ಇದೇ ತಾನೇ ಶ್ರೀ ಹರಿಹರೇಶ್ವರ ಅವರ ಸಾವಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಕ್ಯಾಲಿಫೋರ್ನಿಯಾದಲ್ಲಿ ಹಲವಾರು ವರ್ಷಗಳಿದ್ದು, ಈಚೆಗೆ ಮೈಸೂರು ವಾಸಿಯಾಗಿದ್ದ ಹರಿ ಅವರು ಒಳ್ಳೇ ವಿದ್ವಾಂಸ, ಮಾತುಗಾರ, ಬರಹಗಾರ, ಅನುವಾದಕ ಇವೆಲ್ಲಕ್ಕೂ ಹೆಚ್ಚಾಗಿ ಒಬ್ಬ ಸಹೃದಯಿಯಾಗಿದ್ದವರು.ಹರಿಯವರ ಆತ್ಮಕ್ಕೆ ಶಾಂತಿ ಇರಲಿ, ಮತ್ತೆ ಅವರ ಹತ್ತಿರದವರಿಗೆ ಈ ನೋವನ್ನು ತಡೆವ ಶಕ್ತಿ ದೇವರು ಕೊಡಲೆಂಬುದೊಂದೇ ನನ್ನ ಕೋರಿಕೆ.http://thatskannada.... )

ವಾರದಲ್ಲಿ ಏಳೇ ದಿನ ಏಕಿರಬೇಕು?

Image
’ಏಳು ಸ್ವರವು ಸೇರಿ ಸಂಗೀತವಾಯಿತು- ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು - ಏಳು ದಿನವು ಸೇರಿ ಒಂದು ವಾರವಾಯಿತು - ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು ’ ಎಂದು ಪಿ.ಸುಶೀಲಾ ಅವರು ಸೊಗಸಾಗಿ ಹಾಡಿರೋದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಸ್ವರಗಳು ಏಳೇ ಏಕಿರಬೇಕು? ಇದಕ್ಕೆ ಉತ್ತರ ಹೇಳಲು ಸಾಧ್ಯವಾದರೂ, ಸ್ವಲ್ಪ ಕಷ್ಟ. ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಗುವುದನ್ನು ನಾವೆಲ್ಲ ವರ್ಣಚಕ್ರದಲ್ಲಿ ನೋಡೇ ಇದ್ದೇವೆ. ಇನ್ನು, ಏಳು ನಕ್ಷತ್ರಗಳು ಸೇರಿ ಆಕಾಶದಲ್ಲಿ ಚಿತ್ರಿಸುವ ಸಪ್ತಋಷಿ ಮಂಡಲ ಆಗಸದಲ್ಲಿ ಅತಿ ಸುಲಭವಾಗಿ ಗುರುತಿಸಬಲ್ಲಂತಹ ರಾಶಿ ಚಿತ್ರ (constellation) ಅಂದ್ರೆ ತಪ್ಪೇ ಇಲ್ಲ.

ಅದೇ ರೀತಿ ಏಳುದಿನವು ಸೇರಿ ಒಂದು ವಾರವಾಗುವ ವಿಷಯವಂತೂ ಮೂರು ವರ್ಷದ ಮಗುವಿಗೂ ತಿಳಿದಿರುವ ವಿಷಯ. ಆದರೆ, ವಾರಕೆ ಏಕೆ ಏಳೇ ದಿನ? ಎಂಬ ಪ್ರಶ್ನೆಯನ್ನು ನಿಮಗೆ ನೀವು ಕೇಳಿಕೊಂಡಿದ್ದೀರಾ? ಅಲ್ಲದೆ, ಭಾನುವಾರವಾದ ಮೇಲೆ ಸೋಮವಾರ ಯಾಕೆ? ಬುಧವಾರ ಆದಮೇಲೆ ಗುರುವಾರ ಯಾಕೆ ಎಂದು ಕೇಳಿದರೆ ಅದಕ್ಕೆ ಉತ್ತರ ಇದೆಯಾ ನಿಮ್ಮ ಬಳಿ? ನಿಮಗೆ ಗೊತ್ತಿಲ್ಲದಿದ್ದರೆ, ಅದರ ಹಿನ್ನೆಲೆಯನ್ನಿಲ್ಲಿ ನೀವು ಓದಬಹುದು.

ಎಲ್ಲಾ ಪುರಾತನ ನಾಗರೀಕತೆಗಳೂ, ಆಕಾಶವನ್ನು ನೋಡುತ್ತಾ, ಆಕಾಶಕಾಯಗಳಿಗೂ ಕಾಲಮಾನಕ್ಕೂ ಇರುವ ಸಂಬಂಧವನ್ನು ಕಂಡುಕೊಂಡಿದ್ದವರೇ. ನಮ್ಮ ದೇಶದಲ್ಲಿ ತಿಂಗಳುಗಳ ಎಣಿಕೆಗೆ ಚಂದ್ರನ ಚಲನೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು. ನಕ್ಷ್ಜತ್ರಗಳ ಹಿನ್ನಲೆಯಲ್ಲಿ ಚಲಿಸುವ…

ದುರ್ಭಿಕ್ಷದಲ್ಲಿ ಅಧಿಕ ಮಾಸ

Image
’ದುರ್ಭಿಕ್ಷದಲ್ಲಿ ಅಧಿಕ ಮಾಸ’ ಅನ್ನೋ ಗಾದೆಯನ್ನು ನೀವೆಲ್ಲ ಕೇಳೇ ಇರುತ್ತೀರಿ. ’ಮೊದಲೇ ಕೊಳೆ ಅದರ ಮೇಲೆ ಮಳೆ’ ಅನ್ನೋ ಗಾದೆಗೂ ಇದೇ ಅರ್ಥ. ಮೊದಲೇ ಕಷ್ಟಗಳು ಇದ್ದಾಗ, ಅದರ ಮೇಲೆ ಇನ್ನಷ್ಟು ಕಷ್ಟಗಳನ್ನು ಬರುವುದನ್ನು ಸೂಚಿಸುತ್ತವೆ ಹೀಗೆ ದುರ್ಭಿಕ್ಷದಲ್ಲಿ ಅಧಿಕಮಾಸ ಅಂತ ಗಾದೆ ಯಾಕೆ ಬಂದಿದೆ ಗೊತ್ತಾ? ಇದ್ದಕ್ಕಿದ್ದ ಹಾಗೆ ಒಂದು ತಿಂಗಳು ಹೆಚ್ಚಾಗಿ ಹೇಗೆ ಬರುತ್ತೇ ಅಂತೀರಾ?

ಈ ಮಾಸ ಅನ್ನೋ ಪದ ಮಾ ಅನ್ನೋ ಮೂಲದಿಂದ ಬಂದಿದೆ. ಪೂರ್ಣಿ’ಮಾ’, ಅ’ಮಾ’ವಾಸ್ಯೆ ಗಳಲ್ಲಿರುವ ಮಾ ಇದೇನೆ. ಕನ್ನಡದಲ್ಲಿ ಚಂದ್ರ ಅನ್ನೋ ಅರ್ಥ ಬರುವ ತಿಂಗಳು ಎನ್ನುವ ಪದವನ್ನೇ ನಾವು ಮಾಸ ಅನ್ನೋ ಅರ್ಥದಲ್ಲೇ ಬಳಸ್ತೀವೆ. ಈ ಓವರ್‌ಲೋಡೆಡ್ ಪದ ಎಷ್ಟು ಸರ್ವೇಸಾಮಾನ್ಯ ಆಗಿಹೋಗಿದೆ ಅಂದರೆ, ತಿಂಗಳು ಎಂದರೆ ಚಂದ್ರ ಅನ್ನೋದೇ ನಮ್ಮಲ್ಲಿ ಹಲವರಿಗೆ ಮರೆತುಹೋಗಿದೆ. ಆದಿರಲಿ. ತಿಂಗಳು, ಅಥವಾ ಮಾಸ, ಎಂದರೆ, ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಯವರೆಗಿರುವ ಅವಧಿ. ಇದು ಸುಮಾರಾಗಿ ಇಪ್ಪತ್ತೊಂಬತ್ತೂವರೆ ದಿನ, ಅಥವಾ ಸುಲಭವಾಗಿ ಮೂವತ್ತು ದಿನ ಅಂತ ಇಟ್ಟುಕೊಳ್ಳಬಹುದು.

ಕರ್ನಾಟಕದಲ್ಲಿ ನಮಗೆ ವರ್ಷದ ಮೊದಲ ಹಬ್ಬ ಯುಗಾದಿ. ಕರಾವಳಿಯಲ್ಲಿ ಬಿಟ್ಟರೆ, ಉಳಿದವರೆಲ್ಲ ಚಾಂದ್ರಮಾನ ಯುಗಾದಿಯನ್ನೇ ಆಚರಿಸುವುದು ಪದ್ಧತಿ. ಯುಗಾದಿ ಬರುವುದು ಚೈತ್ರದ ಮೊದಲ ದಿನ. ಅಂದ ಹಾಗೆ, ತಿಂಗಳುಗಳಿಗೆ ಚೈತ್ರ, ವೈಶಾಖ ಅಂತಲೇ ಹೆಸರೇಕೆ ಬಂತು ಗೊತ್ತಾ? ಇದೂ ನೂರಾರು ವರ್ಷ ಆಕಾಶವನ್ನು ನೋಡ್ತಾ ಬಂ…

ಮದ್ದಿಲ್ಲದ ರೋಗ

ಬೆಂಕಿಗೆ ನೀರು, ಬಿಸಿಲಿಗೆ ಕೊಡೆ;
ನಂಜು ಏರಿದರೆ ಮಂತ್ರದ ತಡೆ;
ಮದಿಸಿದ ಆನೆಗೆ ಅಂಕುಶದಿರಿತ;
ಕತ್ತೆ ಆಕಳಿಗೆ ದೊಣ್ಣೆಯ ಗುದ್ದು,
ರೋಗ ರುಜಿನಕೆ ವೈದ್ಯನ ಮದ್ದು;
ಹುಡುಕಬಹುದು ಉಳಿದೆಲ್ಲಕು ಮದ್ದು,
ವಾಸಿಯಾಗದ್ದೊಂದೇ - ಪೆದ್ದನ ಮೊದ್ದು.

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಶಕ್ಯೋ ವಾರಯಿತುಂ ಜಲೇನ ಹುತಭುಕ್ ಛತ್ರೇಣ ಸೂರ್ಯಾತಪೋ
ನಾಗೇಂದ್ರೋ ನಿಶಿತಾಂಕುಶೇನ ಸಮದೌ ದಂಡೇನ ಗೋಗರ್ದಭೌ
ವ್ಯಾಧಿರ್ಭೇಷಜ ಸಂಗ್ರಹೈಶ್ಚ ವಿವಿಧೈರ್ಮಂತ್ರಪ್ರಯೋಗೈರ್ವಿಷಂ
ಸರ್ವಸ್ಯೌಷದಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತ್ಯೌಷಧಂ

-ಹಂಸಾನಂದಿ

ಕೊ: ಅನುವಾದದಲ್ಲಿ ತಕ್ಕ ಬದಲಾವಣೆಗಳನ್ನು ಸೂಚಿಸಿದ ಗೆಳೆಯ ಶ್ರೀನಿವಾಸ್ ಅವರಿಗೆ ನಾನು ಆಭಾರಿ

ಚಿತ್ರಗೀತೆಗಳಲ್ಲಿ ಶಾಸ್ತ್ರೀಯ ಸಂಗೀತ - ಡಾ.ರಾಜ್ ವಿಶೇಷ

Image
ಸಾಧಾರಣವಾಗಿ ಶಾಸ್ತ್ರೀಯ ಗಾಯನ ಬಲ್ಲವರಿಗೆ, ಚಿತ್ರಗಳಲ್ಲಿ ಹಿನ್ನೆಲೆಗಾಯಕರಾಗಿ ಅಷ್ಟಾಗಿ ಯಶಸ್ಸು ಸಿಗುವುದು ಕಷ್ಟ. ಏಕೆಂದರೆ ಶಾಸ್ತ್ರೀಯ ಸಂಗೀತ ಬಯಸುವ ಕಂಠದ ಒನಪು, ಗಮಕಗಳೇ ಬೇರೆ. ಚಿತ್ರ ಸಂಗೀತಕ್ಕೆ ಬೇಕಾದ್ದೇ ಬೇರೆ. ಎಲ್ಲ ರೀತಿಯ ಹಾಡುಗಳಿಗೆ ಶಾಸ್ತ್ರೀಯ ಗಾಯಕರಿಗೆ, ತಮ್ಮ ಕಂಠವನ್ನು ಹೊಂದಿಸಿಕೊಳ್ಳುವುದೂ ಬಹಳ ಕಷ್ಟ. ಉದಾಹರಣೆಗೆ ಹೇಳುವುದಾದರೆ, ಬಾಲಮುರಳಿಕೃಷ್ಣ ಅವರು ಹಲವು ಚಿತ್ರಗೀತೆಗಳನ್ನು ಹಾಡಿರುವುದಾದರೂ, ಅವರ ಶೈಲಿ ಕೆಲವೇ ಬಗೆಯ ಹಾಡುಗಳಿಗೆ, ಸನ್ನಿವೇಶಗಳಿಗೆ ಹೊಂದಬಲ್ಲುದು. ಅದೇರೀತಿ, ಚಿತ್ರಗಳಲ್ಲಿ ಹಾಡಿ ಪರಿಶ್ರಮವಿರುವವರಿಗೆ, ಶಾಸ್ತ್ರೀಯಗಾಯನವೂ ಕಷ್ಟವೇ. ಎಸ್.ಪಿ.ಬಾಲಸುಬ್ರಮಣ್ಯಮ್, ಎಸ್.ಜಾನಕಿ ಮೊದಲಾದವರು ಎಷ್ಟೇ ಒಳ್ಳೆಯ ಗಾಯಕರಾದರೂ, ಪಕ್ಕಾ ಶಾಸ್ತ್ರ್ರೀಯ ಸಂಗೀತಕ್ಕೆ ಅವರ ಕಂಠಸಿರಿ ಅಷ್ಟಾಗಿ ಒಪ್ಪದು. ಈ ದಿಸೆಯಲ್ಲಿ ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಗಾಯಕ ಎಂದರೆ ಅದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಶಾಸ್ತ್ರ್ರೀಯ, ಅರೆ-ಶಾಸ್ತ್ರ್ರೀಯ, ಮತ್ತೆ ಪಕ್ಕಾ ಫಿಲ್ಮೀ ಗೀತೆಗಳನ್ನು - ಹೀಗೆ ಎಲ್ಲ ಬಗೆಯ ಹಾಡುಗಳನ್ನು ಹಾಡುವುದರಲ್ಲಿ, ಅವರಷ್ಟು ಎತ್ತಿದ ಕೈ ಯಾರೂ ಇಲ್ಲ ಎಂದು ನನ್ನ ಭಾವನೆ. ಹಾಗಾಗಿ, ಅವರು ಹಾಡಿರುವ ಕೆಲವು ಶಾಸ್ತ್ರೀಯ ಗೀತೆಗಳನ್ನು ನೆನೆಸಿಕೊಳ್ಳೋಣ ಎನ್ನಿಸಿತು. ನಾನೀಗ ಹೇಳುತ್ತಿರುವುದೆಲ್ಲ ಬಹಳ ಪ್ರಸಿದ್ಧ ಗೀತೆಗಳೇ,ಎಲ್ಲರಿಗೂ ತಿಳಿದುರುವಂತಹವೇ. ನಾನು, ಅಲ್ಲಲ್ಲಿ ಅದು …

ಬೇಸಗೆಯಲ್ಲಿ ಮಂಜು

Image
ಮೌಂಟ್ ಶಾಸ್ತಾ, ಪಕ್ಕದಲ್ಲೇ ಶಾಸ್ತಿನಾ, ಉತ್ತರ ದಿಕ್ಕಿನಿಂದ ನೋಟಮೌಂಟ್ ಶಾಸ್ತಾ (೧೪೧೭೯ ಅಡಿ ಎತ್ತರ), ದಕ್ಷಿಣ ದಿಕ್ಕಿನಿಂದ ನೋಟ - ಮೌಂಟ್ ಶಾಸ್ತಾ ಪಟ್ಟಣದೊಳಗಿಂದ ಕಾಣುವಂತೆ

ಬೆಟ್ಟದ ಮೇಲೊಂದು ಮನೆಯ ಮಾಡಿ!

ಕ್ರೇಟರ್ ಲೇಕ್, ಆರೆಗನ್
ಮಂಜು ತುಂಬಿರುವ ಬಯಲು, ಕ್ರೇಟರ್ ಲೇಕ್ ಬಳಿಲಾಸೆನ್ಜುಲೈ ಆದರೂ ಮಂಜಿನ್ನೂ ಕರಗಿಲ್ಲ..ಲಾಸೆನ್ ಶಿಖರ (೧೦೪೬೭ ಅಡಿ)


ಲಾಸೆನ್ ಗಿರಿ ಏರುತ್ತಿರುವ ಆರೋಹಿಗಳು
ಕೊತ ಕೊತ ಕುದಿಯುತ್ತಿರುವ ಗಂಧಕದ ನೀರಿನ ಬುಗ್ಗೆ, ಲಾಸೆನ್ಹೆಪ್ಪು ಕಟ್ಟಿರುವ ಕೊಳ - ಲಾಸೆನ್ ನ್ಯಾಷನಲ್ ಪಾರ್ಕ್’ಸಾಕ್ರಮೆಂಟೋತ್ರಿ’ :) - ಕ್ಯಾಲಿಫೋರ್ನಿಯದ ಜೀವನದಿ ಸಾಕ್ರಮೆಂಟೋ ಹುಟ್ಟುವ ಜಾಗ-ಹಂಸಾನಂದಿ

ಚಿತ್ರಗಳು: ನನ್ನ ಕ್ಯಾಮರಾ ಕೃಪೆ

ಒಳಿತ ನಡೆಸುವರು

ಅರಳಿಸುವ ತಾವರೆಗಳ ಆ ನೇಸರ
ಬಿರಿಯಿಸುವ ನೈದಿಲೆಗಳನು ಚಂದಿರ
ಕೋರದೇ ಮಳೆಸುರಿಸೀತು ಮುಗಿಲು
ಹೆರವರೊಳಿತ ತಾವೇ ನಡೆಸುವರಗ್ಗಳರು


ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ):

ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವಚಕ್ರವಾಲಮ್।
ನಾಭ್ಯಾರ್ಥಿತೋ ಜಲಧರೋSಪಿ ಜಲಂ ದದಾತಿ
ಸಂತಃ ಸ್ವಯಂ ಪರಹಿತೇ ನಿಹಿತಾಭಿಯೋಗಾಃ॥


पद्माकरं दिनकरो विकचीकरोति ।
चन्द्रो विकासयति कैरवचक्रवालम्
नाभ्यर्थितो जलधरोऽपि जलं ददाति
सन्तः स्वयं परहिते निहिताभियोगाः ॥

-ಹಂಸಾನಂದಿ

ಹಿಮಾಲಯ

Image
ಉತ್ತರದ ದಿಕ್ಕಿನಲಿ ದೈವ ರೂಪದಲಿರುವ
ಬೆಟ್ಟಗಳಿಗೊಡೆಯನ ಹೆಸರು ಹಿಮಾಲಯ |
ಇಬ್ಬದಿಯಲೂ ಕಡಲು; ಭೂಮಿಯನ್ನಳೆಯಲು
ನೆಟ್ಟಗೇ ನಿಂತನವ ಅಳತೆಗೋಲಿನ ಹಾಗೆ ||

ಸಂಸ್ಕೃತ ಮೂಲ (ಕಾಳಿದಾಸನ ಕುಮಾರಸಂಭವದ ಮೊದಲ ಶ್ಲೋಕ)

ಅಸ್ತ್ಯುತ್ತರಸಸ್ಯಾಮ್ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ |
ಪೂರ್ವಾಪರೌ ತೋಯನಿಧೀವಗಾಹ್ಯಾ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ||

-ಹಂಸಾನಂದಿ

ಕೊ: ಬಹಳ ಹಿಂದೇ ಮಾಡಿದ್ದ ಅನುವಾದವನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಹಾಕಿರುವೆ.

ಕೊ.ಕೊ: ಚಿತ್ರ ಕೃಪೆ:- ಪವನ್ ಕೇಶವಮೂರ್ತಿ

ಮಾತಿನಲ್ಲಿ ಹುರುಳು

Image
ಕಾಳಿದಾಸನ ರಘುವಂಶದ ಮೊದಲ ಶ್ಲೋಕ ಹೀಗಿದೆ:

वागर्थाविव सम्पृक्तौ वागर्थ प्रतिपत्तयॆ |
जगतः पितरौ वन्दे पार्वती परमेश्वरौ ॥

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

ಈ ಪದ್ಯವನ್ನು ಕನ್ನಡಕ್ಕೆ ತರಲು ಇಲ್ಲಿದೆ ನನ್ನ ಪ್ರಯತ್ನ:

ತಲೆವಾಗುವೆ ನಾ ಶಿವಶಿವೆಗೆ
ಜಗದಲಿ ಎಲ್ಲರ ಹೆತ್ತವರ;
ಬಿಡದೊಡಗೂಡಿಯೆ ಇಹರಲ್ಲ!
ಮಾತಿಗೆ ಬೆಸೆದಿಹ ಹುರುಳಂತೆ

ಪದಪದಕ್ಕೆ ಅನುವಾದ ಮಾಡದಿದ್ದರೂ, ಒಟ್ಟಾರೆ ಭಾವನೆಯನ್ನು ಕನ್ನಡಕ್ಕೆ ತರುವ ಪ್ರಯತ್ನವಷ್ಟೇ. ಮಾತು ಮತ್ತು ಅದರ ತಿಳಿವಿನಂತೆ ಸದಾ ಜೊತೆಯಾಗಿರುವ ಪಾರ್ವತೀಪರಮೇಶ್ವರರನ್ನು ಸ್ಮರಿಸುವ ಈ ಪದ್ಯವೇ ಸೂಚಿಸುತ್ತಿದೆ - ಅರ್ಥವಿಲ್ಲದೇ ಮಾತಿಗೆ ಬೆಲೆಯಿಲ್ಲ, ಅಂತೆಯೇ ಪಾರ್ವತಿಯಿಲ್ಲವೇ ಪರಮೇಶ್ವರನಿಗೂ ಬೆಲೆಯಿಲ್ಲ ಎಂದು.

ಶಿವ ಪಾರ್ವತಿಯರನ್ನು ಸ್ಮರಿಸುವುದು ಅವರವರಿಗೆ ಬಿಟ್ಟದ್ದು. ಆದರೆ, ಏನು ಮಾತಾಡುವಾಗಲೂ ಹುರುಳಿಲ್ಲದೇ ಆಡಬಾರದು ಎಂಬುದಕ್ಕೆ ಒಂದು ಎಚ್ಚರಿಕೆ ಇದು ಎಲ್ಲರಿಗೆ!

-ಹಂಸಾನಂದಿ

ಕೊ: ಎರಡು ವರ್ಷಕ್ಕೂ ಹಿಂದೆ ಮಾಡಿದ್ದಿದು - ಈ ಬ್ಲಾಗಿನಲ್ಲಿ ಹಾಕಿಲ್ಲದ್ದರಿಂದ, ಒಂದೆರಡು ಪುಟ್ಟ ಬದಲಾವಣೆಗಳೊಂದಿಗೆ ಇಂದು ಹಾಕುತ್ತಿರುವೆ

ಕೊ.ಕೊ: ಚಿತ್ರ ಕೃಪೆ- ’ಅಮರ ಚಿತ್ರ ಕಥೆ’ ಯಲ್ಲಿ ಶಿವ ಪಾರ್ವತಿ