Posts

Showing posts from August, 2010

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾಗೂ ಮಹಾಕಾವ್ಯಗಳಲ್ಲಿಯೂ ಸುಭಾಷಿತಗಳ ಗುಂಪಿಗೆ ಸೇರಬಹುದಾದಂತಹ ಅನೇಕ ಶ್ಲೋಕಗಳು ಕಂಡು ಬರುತ್ತವೆ. ಸುಭಾಷಿತಕ್ಕೆ ಅಕ್ಷರಶಃ ಒಳ್ಳೆಯ ನುಡಿ ಎಂದು ಅರ್ಥ. ಎಷ್ಟೋ ಬಾರಿ ಒಗಟುಗಳು, ಚಮತ್ಕಾರೀ ಪದ್ಯಗಳು ಮುಂತಾದುವುಗಳನ್ನೂ ಸುಭಾಷಿತಗಳ ಗುಂಪಿಗೆ ಸೇರಿಸುವುದು ಉಂಟು. ಎಷ್ಟೋ ಸುಭಾಷಿತಗಳನ್ನು ಬರೆದವರು ಯಾರು ಎಂಬುದು ತಿಳಿಯದಿದ್ದರೂ, ಅವು ಶತಮಾನಗಳ ನಂತರವೂ ಬಳಕೆಯಲ್ಲಿರುವುದು ಗಮನಿಸಬೇಕಾದ ಸಂಗತಿ. ಅವುಗಳ ವಸ್ತು ಜಳ್ಳಾಗಿಲ್ಲದೇ, ಗಟ್ಟಿಯಾಗಿರುವುದು ಇದಕ್ಕೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.

ಸಂಸ್ಕೃತದಲ್ಲಿ ಹಲವಾರು ಸುಭಾಷಿತಕೋಶಗಳಿವೆ. ಎಷ್ಟೋ ಸುಭಾಷಿತಗ್ರಂಥಗಳಲ್ಲಿ ವಿವಿಧ ಕರ್ತೃಗಳ ಸುಭಾಷಿತಗಳನ್ನು ಸೇರಿಸಲಾಗಿದೆ. ಸುಭಾಷಿತರತ್ನಕೋಶ, ಸುಭಾಷಿತರತ್ನಭಾಂಡಾಗಾರ, ಸೂಕ್ತಿಮುಕ್ತಾವಳೀ ಮೊದಲಾದುವು ಕೆಲವು ಪ್ರಸಿದ್ಧವಾದ ಸುಭಾಷಿತ ಸಂಗ್ರಹಗಳು. ಇವೆಲ್ಲಕ್ಕಿಂತ ಹೆಚ್ಚಿನ ಖ್ಯಾತಿ ಹೊಂದಿರುವ ಸುಭಾಷಿತಸಂಗ್ರಹವೆಂದರೆ ಭರ್ತೃಹರಿಯ ಸುಭಾಷಿತ ತ್ರಿಶತಿ. ಒಬ್ಬನೇ ಕವಿಯಿಂದ ರಚಿತವಾದ ಸುಭಾಷಿತಗಳ ಸಂಗ್ರಹ ಇದೆಂಬುದು ಇದರ ಹೆಗ್ಗಳಿಕೆ.

ಭರ್ತೃಹರಿ ಒಬ್ಬ ಕವಿಯಷ್ಟೇ ಅಲ್ಲದೆ ಪ್ರಸಿದ್ಧ ವೈಯಾಕರಣಿಯೂ, ತತ್ತ್ವಶಾಸ್ತ್ರಜ್ಞನೂ ಆಗಿ…

ದೇವರೆಲ್ಲಿದ್ದಾನೆ?

ಕಟ್ಟಿಗೆಯಲ್ಲಿ ಇಲ್ಲ ದೇವನು
ಮಣ್ಣಲೂ ಕಲ್ಲಲೂ ಅವನಿಲ್ಲ;
ನಮ್ಮಯ ಮನದಲೇ ಅವನಿದ್ದಾನು
ಎಲ್ಲಕು ಕಾರಣ ಭಾವನೆಯು

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ’ಚಾಣಕ್ಯ ನೀತಿದರ್ಪಣ’ ದಿಂದ)

ನ ದೇವೋ ವಿದ್ಯತೇ ಕಾಷ್ಟೇ ನ ಪಾಷಾಣೇ ನ ಮೃಣ್ಮಯೇ|
ಭಾವೇ ಹಿ ವಿದ್ಯತೇ ದೇವ: ತಸ್ಮಾದ್ಬ್ಭಾವೋ ಹಿ ಕಾರಣಂ||

-ಹಂಸಾನಂದಿ

ಕೊ: ಸುಮಾರು ಮೂರುವರ್ಷಕ್ಕೂ ಮೊದಲು ಮಾಡಿದ್ದ ಅನುವಾದವಿದು. ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಹಾಕಿದ್ದೇನೆ.

ಕೆಲಸಕ್ಕೆ ಬಾರದ್ದು

ಹೊತ್ತಿಗೆಯೊಳಗೆ ಅಡಗಿದ ತಿಳಿವು
ಮತ್ತಾರಿಗೋ ಕೊಟ್ಟಿರುವ ಹಣವು
ತಟ್ಟನೆ ಬೇಕಿರಲು ಒದಗದೆ ಇರಲು
ದುಡ್ಡಲ್ಲ ಅದು; ತಿಳಿವಲ್ಲ ಅದು!

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ’ಚಾಣಕ್ಯ ನೀತಿ ದರ್ಪಣ’ದಿಂದ) :

ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತ ಗತಂ ಧನಂ |
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ಸ ತದ್ ಧನಂ ||

-ಹಂಸಾನಂದಿ

ಕೊ: ಸುಮಾರು ಮೂರು ವರ್ಷಗಳ ಹಿಂದೆ ಮಾಡಿದ್ದ ಅನುವಾದವಿದು. ಒಂದೆರಡು ಚಿಕ್ಕ ತಿದ್ದುಪಡಿಗಳೊಂದಿಗೆ ಹಾಕಿರುವೆ.

ಮಾತಿಗೇಕೆ ಬಡತನ?

ಒಳ್ಳೆಯ ಮಾತನು ಕೇಳುತಲಿರಲು
ಎಲ್ಲರು ಸಂತಸ ಹೊಂದುವರು;
ಅದಕೇ ಅಂತಹ ಮಾತನೆ ನೀ ನುಡಿ
ಬರೀ ಮಾತಿಗೇಕೆ ಬಡತನವು?

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿದರ್ಪಣದಿಂದ):

ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ
ತಸ್ಮಾತ್ ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ?

-ಹಂಸಾನಂದಿ

ಸಿರಿಯ ನೋಟ

ಮೊಗ್ಗೊಡೆದ ಲವಂಗ ಮರವನು ಮುತ್ತುವ
ಹೆಣ್ಣು ದುಂಬಿಯಂತೆ ಹರಿಯ ಬಳಿಸಾರಿ ನಲಿವಾಕೆ
ಕಣ್ಣಿನೋರೆ ನೋಟದಲೆ ಸಕಲ ಸುಖಗಳನಿತ್ತು
ಒಳ್ಳಿತನೇ ಮಾಡಿ ಕಾಯಲೆನ್ನ ಆ ಮಂಗಳದೇವತೆ

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರದಿಂದ)

ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ ಮಂಗಲದೇವತಾಯಾಃ

-ಹಂಸಾನಂದಿ

ಕೊ: ಇಲ್ಲಿಯವರೆಗೆ ನಾನು ಈ ಸ್ತ್ರೋತ್ರವನ್ನು ಓದಿರಲಿಲ್ಲ. ಇವತ್ತು www.sanskritdocuments.org ನಲ್ಲಿ ಓದಿದಾಗ ಕನ್ನಡಿಸಬೇಕೆನಿಸಿ ಮಾಡಿದ ಪ್ರಯತ್ನವಿದು. ನಾಳೆ ಬರುವ ವರಲಕ್ಷ್ಮೀ ಹಬ್ಬಕ್ಕೂ ಒಂದು ಒಳ್ಳೇ ಮುನ್ನುಡಿ ಎನಿಸಿ ಹಾಕುತ್ತಿದ್ದೇನೆ. ಕನ್ನಡಕ್ಕೆ ತರುವಲ್ಲಿ ಆ ಜಾಲತಾಣದಲ್ಲಿರುವ ಇಂಗ್ಲಿಷ್ ಅನುವಾದ ಉಪಯೋಗಕ್ಕೆ ಬಂತು!

ಕೊ.ಕೊ: ಈ ಅನುವಾದ ಮಾಡುವಲ್ಲಿ ತಮ್ಮ ಒಳ್ಳೆಯ ಸಲಹೆಗಳನ್ನು ಕೊಟ್ಟ ಮಂಜುನಾಥ ಕೊಳ್ಳೇಗಾಲ ಅವರಿಗೆ ನಾನು ಆಭಾರಿ.

’ಬೇಸಿಗೆ ತ್ರಿಕೋನ’

Image
ಚಿಕ್ಕವನಾಗಿದ್ದಾಗ ಈ ’ಬೇಸಿಗೆ ತ್ರಿಕೋನ’ (Summer Triangle) ಅನ್ನೋ ಹೆಸರು ನೋಡಿದಾಗ, ಅದರ ಬಗ್ಗೆ ಓದುತ್ತಿದ್ದಾಗ ಯಾವಾಗಲೂ ಒಂದು ವಿಚಿತ್ರ ಅನ್ನಿಸ್ತಿತ್ತು. ಮೂರು ನಕ್ಷತ್ರಗಳಿರೋ ಇದಕ್ಕೆ ಹೆಸರೇನೋ ಬೇಸಿಗೆ ತ್ರಿಕೋನ. ಜುಲೈ -ಆಗಸ್ಟ್ ನಲ್ಲಿ ಕಾಣತ್ತಂತೆ! ಅದು ಹೇಗೆ ಸಾಧ್ಯ? ಅದು ಮಳೆಗಾಲ ಅಲ್ವೇ? ಜುಲೈ ಆಗಸ್ಟ್ ಅಂದ್ರೆ ನಮ್ಮೂರಲ್ಲಿ ಆಕಾಶದಲ್ಲಿ ಮೋಡ ಬಿಟ್ಟು ಮತ್ತೇನೂ ಕಾಣಿಸ್ತಿರಲಿಲ್ಲ. ಇನ್ನು ನಕ್ಷತ್ರ ಎಲ್ಲಿಂದ ಕಾಣಬೇಕು, ಅಂದ್ಕೋತಿದ್ದೆ.

ಜುಲೈ-ಅಗಸ್ಟ್ ನಲ್ಲಿ ಆಕಾಶದಲ್ಲಿ ಕಾಣೋ ಮೂರು ಪ್ರಕಾಶಮಾನವಾದ ತಾರೆಗಳ ಗುಂಪಿಗೆ ’ಬೇಸಿಗೆ ತ್ರಿಕೋನ’ ಅಂತ ಕರೆಯೋದು ರೂಢಿ. ಲೈರಾ ತಾರಾಪುಂಜ (constellation) ದಲ್ಲಿರುವ ಅಭಿಜಿತ್ ನಕ್ಷತ್ರ (Vega), ಅಕ್ವಿಲಾ (Aquila) ತಾರಾಪುಂಜದಲ್ಲಿರುವ ಶ್ರವಣ ನಕ್ಷತ್ರ (Altair) ಮತ್ತೆ ಸಿಗ್ನಸ್ (Cygnus) ತಾರಾಪುಂಜದಲ್ಲಿ ಇರುವ ಡೆನೆಬ್ (ಇದಕ್ಕೆ ಕನ್ನಡದಲ್ಲಿ ಹೆಸರಿಲ್ಲ)- ಇವೇ ಈ ಮೂರು ನಕ್ಷತ್ರಗಳು.

ಮಾನ್ಸೂನ್ ಹವಾಮಾನದ ನಮ್ಮೂರನ್ನು ಬಿಟ್ಟು ಬೇರೆ ಸಮಶೀತೋಷ್ಣ ವಲಯದ ಊರಿಗೆ ವಲಸೆ ಬಂದಾಗ ತಿಳೀತು ಇದ್ಯಾಕೆ ಬೇಸಿಗೆ ತ್ರಿಕೋನ ಅಂತ! ಇಲ್ಲಂತೂ ಜುಲೈ ಆಗಸ್ಟ್ ಅಂದರೆ ಬೆಟ್ಟ ಬೇಸಿಗೆ! ಹಾಗೇ ಮುಕ್ಕಾಲುಪಾಲು ದಿನಗಳಲ್ಲಿ ಆಕಾಶದಲ್ಲಿ ಮೋಡದ ಹೆಸರೂ ಇರೋದಿಲ್ಲ. ಹಾಗಾಗಿ ಇಂತಹ ಜಾಗದಲ್ಲಿದ್ದವರ್ಯಾರೋ ಇದಕ್ಕೆ ಹೀಗೆ ’ಸಮ್ಮರ್ ಟ್ರಯಾಂಗಲ್’’ ಅಂತ ಕರೆದಿದ್ದರೆ ಅದು ಅನ್ವ…

ಆತ್ಮ

ಎಳ್ಳಿನೊಳಗೆಣ್ಣೆ ಹಾಲಿನಲಿ ಬೆಣ್ಣೆ
ಕಟ್ಟಿಗೆಯಲಿ ಕಿಚ್ಚು ಹೂವಿನಲಿ ಕಂಪು
ಕಬ್ಬಿನಲಿ ಬೆಲ್ಲವು ಇರುವ ತೆರದಲ್ಲೇ
ಒಡಲಲಿನಲಿ ಆತ್ಮವನು ನೀ ಕಾಣು

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ) ಪುಷ್ಪೇ ಗಂಧಂ ತಿಲೇ ತೈಲಂ ಕಾಷ್ಟೇSಗ್ನಿಂ ಪಯಸಿ ಘೃತಂ
ಇಕ್ಷೌ ಗೂಡಮ್ ತಥಾ ದೇಹೇ ಪಶ್ಯಾತ್ಮಾನಂ ವಿವೇಕತಃ-ಹಂಸಾನಂದಿ
ಕೊ: ಮೂರು ವರ್ಷದ ಹಿಂದೆ ಮಾಡಿದ್ದ ಅನುವಾದವಿದು. ಕೆಲವು ಬದಲಾವಣೆಗಳೊಂದಿಗೆ ಹಾಕಿದ್ದೇನೆ.

ಚೈನಾಟೌನ್

Image
ಕೆಲವು ದಿನಗಳ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋ ನಲ್ಲಿನ ಚೈನಾ ಟೌನ್ ಗೆ ಹೋಗುವ ಅವಕಾಶ ಒದಗಿತು. ಸುಮಾರು ನೂರೈವತ್ತು ವರ್ಷಗಳ ಹಿಂದೇ ಇಲ್ಲಿಗೆ ಬಂದ ಚೀನೀಯರು ಸ್ಯಾನ್ ಫ್ರಾನ್ಸಿಸ್ಕೋ ನಟ್ಟ ನಡುವೆ ಒಂದು ಮಿನಿ ಚೈನಾವನ್ನೇ ಸೃಷ್ಟಿ ಮಾಡಿದ್ದಾರೆ! ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ಇಲ್ಲಿ ಹಾಕಿದ್ದೇನೆ.


ಚೈನಾ ಟೌನ್ ನ ಒಂದು ಮುಖ್ಯ ಬೀದಿ - ಗ್ರಾಂಟ್ ರಸ್ತೆಯ ಒಂದು ನೋಟ

ಅದೇ ರಸ್ತೆಯಲ್ಲೊಂದು ಬೌದ್ಧ ಮಠ


ಅಂಗಡಿಯೊಂದರಲ್ಲಿ ಕಂಡ ಹದಿನಾರು ತೋಳುಗಳ ಬುದ್ಧ(?)


ಅದೇ ಬೀದಿಯ ಇನ್ನಷ್ಟು ಬಣ್ಣ ಬಣ್ಣದ ಕಟ್ಟಡಗಳು


ಇಪ್ಪತ್ನಾಲ್ಕು ತೋಳುಗಳ ದೇವತೆ - ಲಕ್ಷ್ಮಿಯಂತೆ ಕಮಲ ಸಂಭವೆ!
ಜ್ಯಾಕ್ಸನ್ ಸ್ಟ್ರೀಟ್

ಚೈನಾ ಟೌನ್ ನ ಒಂದು ಗಲ್ಲಿ


ಪೀಕಿಂಗ್ ಬಜಾರ್!

ಬಳೆ-ಸರ-ಓಲೆ

ಟೋಪಿ ಹಾಕಿಸ್ಕೊಳೋಕೆ ತಯಾರಾ ನೀವು?
ಬಹಳ ದುಡ್ಡು ಉಳಿಸಿದ್ವಾ ಇಲ್ವಾ?


-ಹಂಸಾನಂದಿ

ಮನೆ ಸುಡುವ ಮಗ

ಹೊತ್ತಿದರೊಂದು ಒಣಮರ
ಸುಟ್ಟೀತು ಇಡೀ ಬನ;
ಕೆಟ್ಟ ಮಗನು ಒಬ್ಬ ಸಾಕು
ಸುಟ್ಟುಬಿಡಲು ಮನೆತನ!

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯ ನೀತಿ ದರ್ಪಣದಿಂದ)

ಏಕೇನ ಶುಷ್ಕ ವೃಕ್ಷೇಣ ದಹ್ಯಮಾನೇನ ವಹ್ನಿನಾ
ದಹ್ಯತೇ ತದ್ವನಂ ಸರ್ವಂ ಕುಪುತ್ರೇಣ ಕುಲಂ ಯಥಾ

-ಹಂಸಾನಂದಿ

ಕೊ: ಮೂರು ವರ್ಷದ ಹಿಂದೆ ಮಾಡಿದ ಅನುವಾದವಿದು, ಸ್ವಲ್ಪ ಬದಲಾವಣೆಗಳೊಂದಿಗೆ ಹಾಕಿದ್ದೇನೆ.

ವೆಂಕಟಮಖಿ

ಇದು ಸುಮಾರು ಮೂರು ವರ್ಷದ ಹಿಂದೆ ನಾನು ಬರೆದಿದ್ದು. ಮೊನ್ನೆ ಮೊನ್ನೆ ನಡೆದ ನಾವಿಕ ಸಮ್ಮೇಳನದ ಸ್ಮರಣ ಸಂಚಿಕೆಗೆಂದು ಕಳಿಸಿದ್ದೆ. ಅದನ್ನೇ ಇಲ್ಲಿ ಹಾಕುತ್ತಿದ್ದೇನೆ.
ವೆಂಕಟಮಖಿ ಮತ್ತವನ ಚತುರ್ದಂಡಿ ಪ್ರಕಾಶಿಕೆ


ದಕ್ಷಿಣಾದಿ ಸಂಗೀತಕ್ಕೆ ಕರ್ನಾಟಕ ಸಂಗೀತವೆಂದು ಹೆಸರು ಬರಲು, ಭಾರತೀಯ ಸಂಗೀತ ಎರಡಾಗಿ ಕವಲಾದಾಗ ದಕ್ಷಿಣದ ಕವಲನ್ನು ರೂಢಿಸುವುದರಲ್ಲಿ ಕರ್ನಾಟಕದವರು ಹಲವರು ಲಾಕ್ಷಣಿಕರು ಕೆಲಸ ಮಾಡಿದ್ದೂ ಕೂಡ ಪ್ರಮುಖ ಕಾರಣಗಳಲ್ಲೊಂದು. ಯಾವುದೇ ಕಲೆ, ನಿಂತ ನೀರಲ್ಲ. ಬದಲಾಗುತ್ತ ಹೋಗುತ್ತಿರುತ್ತದೆ. ಆದರೆ, ಈ ಬದಲಾವಣೆಗಳು ಮೂಲವನ್ನೇ ಹಾಳುಗೆಡೆಯುವಂತಿರಬಾರದಲ್ಲ! ಇಂತಹ ಸಂದರ್ಭದಲೇ ಲಾಕ್ಷಣಿಕರು ಬಹಳ ಪ್ರಮುಖರಾಗುತ್ತಾರೆ. ನಾನು ಹಿಂದೆಯೇ ಒಮ್ಮೆ ಹೇಳಿದ್ದೆ - ಸಂಗೀತದಲ್ಲಿ ಲಕ್ಷ್ಯ (practice) ಮತ್ತು ಲಕ್ಷಣ (theory) ಎಂಬವು ಎರಡೂ ಮುಖ್ಯವಾದುವು. ಲಕ್ಷ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಿ, ಅವುಗಳನ್ನು ಲಕ್ಷಣದ ಚೌಕಟ್ಟಿಗೆ ಹೊಂದಿಸುವನು, ಮತ್ತು ಹೇಗೆ ಲಕ್ಷ್ಯ ಬದಲಾಗುತ್ತಿದ್ದಂತೆ, ಲಕ್ಷಣವು ಈ ಬದಲಾವಣೆಗಳನ್ನು ದಾಖಲೆ ಮಾಡುವುದು ಬಹಳ ಬಲು ಜವಾಬ್ದಾರಿಯ ಕೆಲಸ. ಇಂತಹ ಹಲವು ಕನ್ನಡಿಗ ಲಕ್ಷಣಕಾರರು ನಮ್ಮಲ್ಲಿ ಆಗಿಹೋಗಿದ್ದಾರೆ.

ವಿಜಯನಗರ ಸಾಮ್ರಾಜ್ಯ ಸ್ಥಾಪನಾಚಾರ್ಯ ಎಂಬ ಬಿರುದು ಹೊತ್ತ ಮಾಧವ ವಿದ್ಯಾರಣ್ಯರು ಸಂಗೀತ ಸಾರ ಎಂಬ ಪುಸ್ತಕವನ್ನು ರಚಿಸಿದ್ದರೆಂದು ತಿಳಿದುಬರುತ್ತದೆ. ಹೇಗೆ ಜೀವಶಾಸ್ತ್ರಕ್ಕೆ ವಿಂಗಡಣಾಶಾಸ್ತ್ರ…

’ಹರಿ’ಯ ನೆನಪಿನಲೊಂದು ಸರಸತಿಯ ಸ್ತುತಿ

ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸುತ ಜಡತೆಯನ್ನು

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶ್ವೇತ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ

-ಹಂಸಾನಂದಿ

ಕೊ: ಸುಮಾರು ಮೂರು ವರ್ಷಗಳ ಹಿಂದೆ ಮಾಡಿದ್ದ ಅನುವಾದವಿದು, ಚಿಕ್ಕಪುಟ್ಟ ಬದಲಾವಣೆಗಳೊಂದಿಗೆ ಹಾಕಿರುವೆ.

ಕೊ.ಕೊ: ** ಮೈಸೂರಿನಲ್ಲಿ ಇತ್ತೀಚೆಗೆ ದಿವಂಗತರಾದ ಎಸ್.ಕೆ. ಹರಿಹರೇಶ್ವರ ಅವರು ಸಂಸ್ಕೃತ, ಕನ್ನಡ ಎರಡರಲ್ಲೂ ಬಹಳ ವಿದ್ವಾಂಸರು. ಹರಿ ಅವರು ಸಂಸ್ಕೃತದಿಂದ ಹಲವಾರು ಉತ್ತಮ ಅನುವಾದಗಳನ್ನೂ ಮಾಡಿದ್ದಾರೆ - ಉದಾಹರಣೆಗೆ ಈ ಕೊಂಡಿಯಲ್ಲಿ ನಿಮಗೆ ಕಾಣಸಿಗುವ ಲಕ್ಷ್ಮೀ ಸ್ತುತಿಗಳನ್ನು ನೋಡಬಹುದು. ನಾನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗಳನ್ನು ಮಾಡಲು, ಒಂದು ರೀತಿಯಲ್ಲಿ, ಸುತ್ತಿ-ಬಳಸಿ ಅವರೂ ಒಬ್ಬ ಪ್ರೇರೇಪಣೆ ಅಂದರೂ ಸರಿಯೇ. ಹರಿಯವರ (ನಾವೆಲ್ಲ ಅವರನ್ನು ಹರಿ ಎಂತಲೇ ಕರೆಯುತ್ತಿದ್ದಿದ್ದು) ನೆನಪಿನಲ್ಲಿ, ಅವರ ಹೆಸರನ್ನೂ (**ಹರಿಹರ) ಒಳಗೊಂಡಿರುವ, ಅವರು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ನಿತ್ಯವೂ ಆರಾಧಿಸಿದ್ದ ಸರಸ್ವತಿಯ ಧ್ಯಾನ ಶ್ಲೋಕ…