Posts

Showing posts from July, 2011

ಬಲೆಯಲಾಡುವವನ ಹಾಡು

ಏಕೆಂದವತಾರವನೆತ್ತಿದೆನೋ?
ಏನು ಕಾರಣವೋ? ಜಾಲದೊಳು ನಾ||ನೇಕೆಂದವತಾರವನೆತ್ತಿದೆನೋ||

ಬಜ್ಜಿನಲ್ಲಿ ಗುಞ್ ಗುಡಲಿಕೋ? ಫೇಸ್
ಬುಕ್ಕಿನ ಗೋಡೆಯಲಿ ಬರೆಯಲಿಕೋ?
ಟ್ವಿಟ್ಟರಿನಲಿ ಚಿಂವ್ ಚಿಂವ್ ಎನ್ನಲಿಕೋ
ಮತ್ತೆ ಗೂಗಲ್ ಪ್ಲಸ್ಸಿನಲಿ ಹರಿಯಲಿಕೋ ನಾ ||ನೇಕೆಂದವತಾರವನೆತ್ತಿದೆನೋ||

ಹಿನ್ನೆಲೆ ತಿಳಿವಾಗದಿದ್ದವರು ಈ ಹಳೆಯ ಬರಹವನ್ನು ನೋಡಿ :-) - ಏಲಾವತಾರಮೆತ್ತಿತಿವೋ
ಇದನ್ನು ಇಲ್ಲಿಯವರೆಗೆ ಓದಿದ್ದರೆ ನಿಮಗೆ ಇದೂ ಹಿಡಿಸಬಹುದು - ಬ್ಲಾಗಿಗೆ ಮರುಳಾದೆಯಾ?

ಮತ್ತೊಮ್ಮೆ ಪುರಂದರದಾಸರ ಮತ್ತು ತ್ಯಾಗರಾಜರ ಕ್ಷಮೆ ಬೇಡುತ್ತ

-ಹಂಸಾನಂದಿ

ಹಿಗ್ಗುವ ಹರಿ

Image
"ಯಮುನೆಯ ಮರಳಲಿ ಆಡಪೋಗಿಹ
ಅಣ್ಣ ಬಲರಾಮ ಬರುವ ಮುನ್ನವೇ
ಬಟ್ಟಲ ಹಾಲನು ಕುಡಿದರೆ ನಿನ್ನಯ
ಕೂದಲು ಬೆಳೆವುದು ಸೊಂಪಾಗಿ"

ಬಣ್ಣಿಸಿ ಇಂತು ಯಶೋದೆ ನುಡಿದಿರೆ
ಬಟ್ಟಲ ಹಾಲನು ವೇಗದಿ ಕುಡಿಯುತ
ಮುಟ್ಟುತ ಜುಟ್ಟನು ಬೆಳೆದಿಹುದೆನ್ನುತ
ಹಿಗ್ಗುವ ಹರಿಯೇ ಎಮ್ಮ ಕಾಯಲಿ!


ಸಂಸ್ಕೃತ ಮೂಲ:(ಲೀಲಾಶುಕನ ಕೃಷ್ಣಕರ್ಣಾಮೃತ- ಶ್ಲೋಕ ೬೦)

ಕಾಲಿಂದೀ ಪುಲಿನೋದರೇಶು ಮುಸಲೀ ಯಾವದ್ಗತಃ ಖೇಲಿತುಂ
ತಾವತ್ ಕಾರ್ಪರಿಕಂ ಪಯಃ ಪಿಬ ಹರೇ ವರ್ಧಿಷ್ಯತೇ ತೇ ಶಿಖಾ |
ಇತ್ಥಂ ಬಾಲತಯಾ ಪ್ರತಾರಣಪರಾಃ ಶ್ರುತ್ವಾ ಯಶೋದಾಗಿರಃ
ಪಾಯಾನ್ನಸ್ವಶಿಖಾಂ ಸ್ಪೃಶನ್ ಪ್ರಮುದಿತಃ ಕ್ಷೀರೋರ್ಧಪೀತೇ ಹರಿಃ ||

-ಹಂಸಾನಂದಿ

(ಚಿತ್ರ ಕೃಪೆ Image source :http://www.indianhandicrafts.co.in/somalatha-tanjore-art/tanjore-Krishna-painting/tanjore-lord-Krishna-painting.php )

ಪುಸ್ತಕ ಬಿಡುಗಡೆಯ ಕಾರ್ಯಕ್ರಮಕ್ಕೆ ಕರೆಯೋಲೆ

Image
ಎಷ್ಟೋ ದಿನಗಳ ಹಿಂದೆ ಹಂಸನಾದ ಅಂದ್ರೇನು ಅನ್ನುವ ಒಂದು ಪೋಸ್ಟ್ ಹಾಕಿದ್ದೆ. ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.
ಹೀಗೆ ನಾನು ಬರೆದ ಬರವಣಿಗೆಯಲ್ಲಿ ಆಯ್ದ ಕೆಲವು ಸುಭಾಷಿತ ಅನುವಾದಗಳು ಒಂದು ಪುಸ್ತಕವಾಗಿ ಸದ್ಯದಲೇ ಹೊರಬರಲಿದೆ ಎಂಬ ವಿಷಯವನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಹಳ ಸಂತೋಷವಾಗುತ್ತಿದೆ.
ಪುಸ್ತಕದ ಹೆಸರು ಕೂಡ ಹಂಸನಾದ ಅಂತಲೇ!
ಪುಸ್ತಕದ ಬಿಡುಗಡೆ ಜುಲೈ ೧೬ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜೊತೆಯಲ್ಲೇ ನನ್ನ ಶ್ರೀಮತಿಯ ಕಥಾಸಂಕಲನವೊಂದು ಕೂಡ ಬಿಡುಗಡೆ ಆಗುತ್ತಿರುವುದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ.
ಈ ಸಂತಸವನ್ನು ಇನ್ನೂ ಹೆಚ್ಚಿಸಲು ನೀವು ತಪ್ಪದೇ ಬರಬೇಕು, ನಮ್ಮೊಂದಿಗೆ ಇರಬೇಕು. .
ಹಲವು ಬ್ಲಾಗ್ ಗೆಳೆಯರಿಗೆ ಮಿಂಚಂಚೆ ಕಳಿಸಿರುವೆನಾದರೂ, ಕೆಲವರ ಮಿಂಚಂಚೆ ವಿಳಾಸ ಇರದೆಯೋ, ಇಲ್ಲವೇ ಕಣ್ತಪ್ಪಿನಿಂದಲೋ ನಿಮಗೆ ತಲುಪಿಲ್ಲದಿದ್ದರೆ ದಯವಿಟ್ಟು ಇದನ್ನೇ ನನ್ನ ಕರೆಯೋಲೆಯೆಂದು ತಿಳಿಯಬೇಕೆಂದು ಕೋರಿಕೆ.ಕಾರ್ಯಕ್ರಮದಂದು ನಿಮ್ಮನ್ನು ಭೇಟಿಯಾಗಲು ನಾನು ಕಾದಿರುತ್ತೇನೆ. ದಯವಿಟ್ಟು ಬನ್ನಿ.

-ಹಂಸಾನಂದಿ