Posts

Showing posts from September, 2011

ದೊಣ್ಣೆ ಹಿಡಿಯದ ದೇವರು

ಆವ ಕಾಯ್ವ ಗೊಲ್ಲನಂತೆ
ದೈವ ಕೋಲನು ಹಿಡಿಯದು ;
ಯಾವನ ಕಾಪಿಡಲು ಬೇಕೋ
ಅವಗೆ ಬುದ್ಧಿಯ ಈವುದು!

ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)

ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|
ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತಮ್||

-ಹಂಸಾನಂದಿ

ಕೊ: ಆವು = ಹಸು; ಆಕಳು ಎಂಬ ಬಹುವಚನವನ್ನು ನೆನೆಸಿಕೊಳ್ಳಿ

ಕೊ.ಕೊ: ಸಂಸ್ಕೃತದಲ್ಲಿ ಪಶು ಎಂದರೆ ಯಾವ ಪ್ರಾಣಿಗೆ ಬೇಕಾದರೂ ಹೇಳಬಹುದು. ಇಲ್ಲಿ ನಾನು ಬಳಸಿದ "ಆವು" ಪದದಿಂದ ಅದರ ಹರಹು ಕಡಿಮೆ ಆಗಿರಬಹುದೆನಿಸಿದರೂ, ಅರ್ಥಕ್ಕೆ ಅಂತಹದ್ದೇನೂ ಅಡ್ಡಿ ಬಂದಿಲ್ಲ ಎಂದು ಭಾವಿಸಿರುವೆ.

ಬದುಕುವ ದಾರಿ

ವಿಷವಿರದ ಹಾವಾದರೂ
ಹಿರಿದಾಗಿ ಹೆಡೆ ಎತ್ತಲಿ;
ವಿಷವು ಇಹುದೋ ಇಲ್ಲವೋ
ಹಗೆಯ ಹೆದರಿಸಿ ಗೆಲ್ಲಲಿ ;

ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ಚಾಣಕ್ಯನೀತಿಯಿಂದ):

ನಿರ್ವಿಷೇಣಾಪಿ ಸರ್ಪೇಣ ಕರ್ತವ್ಯಾ ಮಹತೀ ಫಣಾ |
ವಿಷಮಸ್ತು ನ ಚಾಪ್ಯಸ್ತು ಫಟಾಟೋಪೋ ಭಯಂಕರಃ ||

-ಹಂಸಾನಂದಿ

ಕೊ: ಚಾಣಕ್ಯ ನೀತಿಯನ್ನು ಬರೆದ ಚಾಣಕ್ಯ ಪಂಡಿತನು ಚಂದ್ರಗುಪ್ತನ ಗುರುವಾದ, ಅರ್ಥಶಾಸ್ತ್ರವನ್ನು ಬರೆದ ಕೌಟಲ್ಯನೇ ಎಂದು ಒಂದು ಮತ. ಈ ಚಾಣಕ್ಯ ಪಂಡಿತ ಬೇರೊಬ್ಬ ನಂತರ ಬಂದ ಕವಿ ಎಂಬುದು ಇನ್ನೊಂದು - ಹೀಗೆ ಎರಡೂ ಅಭಿಪ್ರಾಯಗಳು ಚಲಾವಣೆಯಲ್ಲಿವೆ.

ಹಣೆಬರಹ

ಒಲವು ತುಂಬಿದ ಸಂಜೆ ಹೆಣ್ಣಿನ
ಕಣ್ಣ ಮುಂದೆ ಇನಿಯ ನೇಸರು;
ಅಯ್ಯೋ ಹಣೆಬರಹವಿದೆಯಲ್ಲ
ಒಟ್ಟು ಸೇರಲು ಬಿಡುವುದಿಲ್ಲ!


ಸಂಸ್ಕೃತ ಮೂಲ (ರಾಮಾಯಣ, ಕಿಷ್ಕಿಂದಾ ಕಾಂಡ):

ಅನುರಾಗವತೀ ಸಂಧ್ಯಾ ದಿವಸಸ್ತತ್ಪುರಸ್ಸರಃ |
ಅಹೋ ದೈವಗತಿಃ ಕೀದೃಕ್ ತಥಾಪಿ ನ ಸಮಾಗಮಃ ||

-ಹಂಸಾನಂದಿ

ಕೊ: ಈ ಪದ್ಯವು ಆನಂದವರ್ಧನನ ಧ್ವನ್ಯಾಲೋಕದ್ದು ಎಂದು ತೀನಂಶ್ರೀ ಅವರ  "ಕಾವ್ಯಮೀಮಾಂಸೆ" ಎಂಬ ಪುಸ್ತಕದಲ್ಲಿ ನೋಡಿದ್ದೇನೆ.

ಕೊ.ಕೊ: ಶತಾವಧಾನಿ ಗಣೇಶ್ ಅವರ ಒಂದು ಭಾಷಣದಲ್ಲಿ ಈ ಪದ್ಯವು ರಾಮಾಯಣದ ಕಿಷ್ಕಿಂದಾಕಾಂಡದಲ್ಲಿದೆಯಂದು ನನಗೆ ತಿಳಿದು ಬಂತು. ಆನಂದ ವರ್ಧನನು, ಇದನ್ನು ಅಲ್ಲಿಂದ ಉದಾಹರಣೆಗೆ ಎತ್ತಿಕೊಂಡಿರಬಹುದು.

ಕೊ.ಕೊ.ಕೊ: ಮೂಲ ಯಾವುದಾದರೇನು? ಒಳ್ಳೆಯ ಸಂಗತಿಗಳು ಎಲ್ಲಿದ್ದರೂ ತಿಳಿಯೋಣ ಎನ್ನುವ ಕಾರಣಕ್ಕೆ ಕನ್ನಡಿಸಿದೆ!

ಸಂಕೋಲೆಗಳು

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಕಡೆಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ

ಕೊ: ಇದು ಶೃಂಗಾರ ಶತಕದ ಎರಡನೇ ಪದ್ಯ.  ಆಸಕ್ತರಿಗೆ ಶೃಂಗಾರ ಶತಕದ ಮೊದಲ ಪದ್ಯದ ಅನುವಾದ ಇಲ್ಲಿದೆ ಮತ್ತೆ ಮೂರನೆ ಪದ್ಯದ ಅನುವಾದ ಇಲ್ಲಿದೆ.

ಕೊ.ಕೊ: ಯೋಗರಾಜ ಭಟ್ಟರಿಗೂ ಈ ಅನುವಾದಕ್ಕೂ ಯಾವುದೂ ಸಂಬಂಧವಿಲ್ಲ ಅನ್ನೋದನ್ನ ಒಮ್ಮೆ ಸ್ಪಷ್ಟ ಪಡಿಸಿಬಿಡುತ್ತೇನೆ !

ವಿಷವಾಗುವ ಅಮೃತ

ಕಣ್ಣ ಮುಂದಿರುವ ತನಕ ಈಕೆ
ಅಮೃತ ತುಂಬಿದ ಬಿಂದಿಗೆ;
ಕಣ್ಣ ಹಾದಿಯಲಿರದೆ ಹೋದರೆ 
ವಿಷಕ್ಕಿಂತಲೂ ಹೆಚ್ಚಿಗೆ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ):

ತಾವದೇವಾಮೃತಮಯೀ ಯಾವಲ್ಲೋಚನ ಗೋಚರಾ |
ಚಕ್ಷುಶ್ಪಥಾತ್ ಅತೀತಾ ತು ವಿಷಾದಪಿ ಅತಿರಿಚ್ಯತೇ ||-ಹಂಸನಾದ

ಕೊ:ಮೂಲದಲ್ಲಿಲ್ಲದ "ಬಿಂದಿಗೆ" ಅನ್ನುವ ಪದವು ಮೂಲದಲ್ಲಿ ಇಲ್ಲದಿದ್ದರೂ, ಅರ್ಥವನ್ನು ಹೊಮ್ಮಿಸುತ್ತದೆಂದು ಬಳಸಿದ್ದೇನೆ.

ಪಿಳ್ಳಂಗೋವಿಯ ಚೆಲ್ವ ಕೃಷ್ಣನ ...

Image
ಮೆಲ್ಲಮೆಲ್ಲನೆ ಕೊಳಲಿನಿಂಚರದಿ  ಬೃಂದಾವನವೆಲ್ಲವ ತುಂಬಿದನ
ಮಂದೆ ಮಂದೆ ಆಕಳನೋಡಾಡಿಸುತ ಹಿಂಡಲಿ ನಲಿವ ಕಂದನ
ಇಂದ್ರ ಯಾಗಗಳ ಬೀಳುಗಳೆಯಲೈದ ರಕ್ಕಸರ  ಕೊಂದಿಹನ
ಚಂದದಿ ನೆನೆ  ನಾಲಿಗೆ ನೀ ಗೊಲ್ಲತಿಯರ ಹೆಗಲೇರಿ ಮೆರೆವನ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ):

ಮಂದಂ ಮಂದಂ ಮಧುರ ನಿನದೈಃ ವೇಣುಮ್ ಆಪೂರಯಂತಂ
ಬೃಂದಂ ಬೃಂದಾವನಭುವಿ ಗಾವಂ ಚಾರಯಂತಂ ಚರಂತಂ |
ಛಂದೋಭಾಗೇ ಶತಮಖಮುಖ  ಧ್ವಂಸಿನಾಂ ದಾನವಾನಾಂ
ಹಂತಾರಂ ತಂ ಕಥಯ ರಸನೇ ಗೋಪಕನ್ಯಾ ಭುಜಂಗಂ ||

-ಹಂಸಾನಂದಿ

ಕೊ: 'ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? ' ಅನ್ನುವುದು ಪುರಂದರ ದಾಸರ ಒಂದು ಜನಪ್ರಿಯ ರಚನೆ.

ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿದ್ದರೂ ಭಾವಕ್ಕೆ ಅಷ್ಟು ಅಡ್ಡಿಯಾಗಿಲ್ಲವೆಂದುಕೊಂಡಿರುವೆ.

ಕೊ. ಕೊ. ಕೊ : ನನ್ನ ಆರಿಸಿದ ಅನುವಾದಗಳ ಪುಸ್ತಕ ’ಹಂಸನಾದ’ ಕೊಳ್ಳಲು ಇಲ್ಲಿ ಚಿಟಕಿಸಿ.

(ಚಿತ್ರ ಕೃಪೆ: http://www.exoticindiaart.com/sculptures/fluting_krishna_rk46.jpg)

ತಂಗಾಳಿಯಂತಹ ನಲ್ಲ

ತುರುಬ ಕೆಡಿಸೀತು
ಕಂಗಳ ಮುಚ್ಚಿಸೀತು
ಅರಿವೆಗಳನೊತ್ತಾಯದಲಿ ಸೆಳೆದೀತು;

ಮೈಯ ನವಿರೇಳಿಸೀತು
ಮೆಲ್ಲನ್ನ ನಡುಕವನು ತಂದೀತು
ತುಟಿಗಳ ಬಿಡದೆ ಕಿರುಕುಳವ ಕೊಟ್ಟೀತು;

ಬೀಸುತಿಹ ಕುಳಿರುಗಾಲದ
ತಂಗಾಳಿಯೆಂಬುದು ಪೆಣ್ಗಳಲಿ
ಇನಿಯನಂತೆಯೇ ನಡೆದುಕೊಂಡೀತು!ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ) :
ಕೇಶಾನಾಕುಲಯನ್ ದೃಶೋರ್ಮುಕುಲಯನ್ ವಾಸೋ ಬಲಾದಾಕ್ಷಿಪನ್
ಆತನ್ವನ್ ಪುಲಕೋದ್ಗಮಮ್ ಪ್ರಕಟಯನ್ನಾವೇಗಕಂಪಂ ಶನೈಃ
ವಾರಂವಾರಮುದಾರಸೀತ್ಕೃತಕೃತೋ ದಂತಚ್ಛದಾನ್ಪೀಡಯನ್
ಪ್ರಾಯಃ ಶಿಶಿರಃ ಏಷ ಸಂಪ್ರತಿ ಮರುತ್ಕಾಂತಾಸು ಕಾಂತಾಯತೇ

-ಹಂಸಾನಂದಿ

ಒತ್ತಾಸೆ

"ಎಲ್ಲಿ ಹೋಗುವೆ ಇರುಳಿನಲಿ ತೋರ ತೊಡೆಯವಳೆ?"
"ನನ್ನುಸಿರ ಮಿಗಿಲಾದ ಆ ನನ್ನ ನಲ್ಲನಿರುವೆಡೆಗೆ"
"ಒಬ್ಬಂಟಿ ತೆರಳಲಂಜಿಕೆಯಾಗದೇನೆ ಹೇಳೆ ಗೆಳತಿ?"
"ಒತ್ತಾಸೆಗುಂಟಲ್ಲೆ ಕಮ್ಮಗೋಲನ ಐದು ಅಂಬುಗಳೇ!"

ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ  ಪದ್ಯ-71 ):
ಕ್ವ ಪ್ರಸ್ಥಿತಾಹಿ ಕರಭೋರು ಘನೇ ನಿಶೀಥೇ
ಪ್ರಾಣಾಧಿಕೋ ವಸತಿ ಯತ್ರ ಜನಃ ಪ್ರಿಯೋ ಮೇ |
ಏಕಾಕಿನೀ ವದ ಕಥಂ ನ ಬಿಭೇಷಿ ಬಾಲೇ
ನನ್ವಸ್ತಿ ಪುಂಖಿತಶರೋ ಮದನಃ ಸಹಾಯಃ ||

-ಹಂಸಾನಂದಿ

ಕೊ: ಈ ಪದ್ಯವು ಇಬ್ಬರು ಗೆಳತಿಯರ ನಡುವೆ ನಡೆಯುವ ಮಾತುಕತೆ. ಕಾರ್ಗತ್ತಲಿನಲ್ಲಿ ನಲ್ಲನನ್ನು ನೋಡಹೊರಟಿರುವಳೊಬ್ಬಳು, ಅವಳನ್ನು ಪ್ರಶ್ನಿಸುವ ಅವಳ ಗೆಳತಿಯೊಬ್ಬಳು.

ಕೊ.ಕೊ: ಕಮ್ಮಗೋಲ - ಗಮಗಮಿಸುವ ಹೂಗಳ ಬಾಣವನ್ನು ಹಿಡಿದು ಬರುತ್ತಾನೆಂದು ಪ್ರಸಿದ್ಧನಾದ ಮನ್ಮಥ. ನಮ್ಮಮ್ಮ ಶಾರದೆ ಉಮಾಮಹೇಶ್ವರಿ ಎಂಬ ಪ್ರಸಿದ್ಧ ಕನಕದಾಸರ ಪದದಲ್ಲಿ ಗಣೇಶನನ್ನು "ಕಮ್ಮಗೋಲನ ವೈರಿ ಸುತನಾದ" (ಎಂದರೆ ಮನ್ಮಥನನ್ನು ಸುಟ್ಟ ಶಿವನ ಮಗ) ಎಂದು ಹಾಡಿ ಹೊಗಳಿರುವುದನ್ನು ನೆನೆಸಿಕೊಳ್ಳಿ. ಮೂಲದಲ್ಲಿರುವ ಪುಂಖಿತ ಶರೋ = ರೆಕ್ಕೆಗಳುಳ್ಳ ಬಾಣಗಳು = ಹೂವಿನ ರೇಕುಗಳ ಎಂದು ಅರ್ಥೈಸುವ ಸ್ವಾತಂತ್ರ್ಯ ತೆಗೆದುಕೊಂಡಿದ್ದೇನೆ. ಹಾಗೇ ಮೂಲದಲ್ಲಿರುವ "ಕರಭೋರು" - ಸೊಂಡಿಲಿನಂತಹ ತೊಡೆಯವಳೇ ಎನ್ನುವ ಮಾತನ್ನು ಕನ್ನಡಕ್ಕೆ ಹೊಂದುವಂತೆ ’ತೋರ ತೊಡೆಯವಳೇ ಎಂದು ಹೇಳಿದ್ದೇನೆ.

ನೆರವಿಗೆ ಬರುವವರು

ಕಿರಿಯರಾದರೇನು? ನೆರವಾದಾರು;
ಹಿರಿಯರಿಂದಾಗದಿದ್ದರೆ ಏನು?
ದಾಹವಾರಿಸಲು ಆಗದು ಕಡಲಿಗೆ
ಬಾವಿನೀರದನು ತಣಿಸದೇನು?


ಸಂಸ್ಕೃತ ಮೂಲ:

ಉಪಕರ್ತುಂ ಯಥಾ ಸ್ವಲ್ಪಃ ಸಮರ್ಥಾ ನ ತಥಾ ಮಹಾನ್ ।
ಪ್ರಾಯಃ ಕೂಪಸ್ತೃಷಾಂ ಹಂತಿ ನ ಕದಾಪಿ ತು ವಾರಿಧಿಃ ॥

उपकर्तुं यथा स्वल्पः समर्थो न तथा महान् ।
प्रायः कूपस्तृषां हन्ति न कदापि तु वारिधिः ॥

-ಹಂಸಾನಂದಿ