Posts

Showing posts from 2012

ಯೇಸು ಜನನ

Image
ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂಬಡಿಕೆ (New Testament) ನಲ್ಲಿ, ಇಂತಹದ್ದೇ ದಿನ ಕ್ರಿಸ್ತ ಹುಟ್ಟಿದ್ದು ಅನ್ನುವುದಕ್ಕೆ ಸರಿಯಾದ ಆಧಾರಗಳಿಲ್ಲವಂತೆ. ಅಲ್ಲದೇ, ಬೈಬಲ್ಲಿನಲ್ಲಿ ವಿವರಿಸಿರುವ ಘಟನೆಗಳನ್ನು ನೋಡಿದರೆ, ಡಿಸೆಂಬರ್ ಕೊನೆಯ ಚಳಿಗಾಲದಲ್ಲಿ ಕ್ರಿಸ್ತ ಹುಟ್ಟಿರುವುದು ಸಾಧ್ಯವಿಲ್ಲವೆಂದೂ, ಆ ದಿನ ವಸಂತದಲ್ಲೋ, ಹೇಮಂತದಲ್ಲೋ ಆಗಿರಬೇಕೆಂದೂ ಅಂತ ಕೆಲವು ಬೈಬಲ್ ವಿದ್ವಾಂಸರ ಅಭಿಪ್ರಾಯ ಕೂಡ ಇದೆ. ಪಂಚಾಗ ನೋಡಿ, ಇಂತಹ ತಿಥಿ ವಾರ ನಕ್ಷತ್ರ ಎಂದು ಬರೆದಿಟ್ಟಿದ್ದರೆ ನೋಡಿ, ಸರಿಯಾಗಿರುತ್ತಿತ್ತು, ಅಲ್ವೇ? ಆ ಸಮಯದಲ್ಲು  ಆಗಸದಲ್ಲಿ ಕಂಡವೆನ್ನಲಾದ ಕೆಲವು ಆಧಾರಗಳಿಂದ ಕ್ರಿಸ್ತ ಹುಟ್ಟಿದ ದಿನವನ್ನು ಸರಿಯಾಗಿ ಹೇಳಲು ಪ್ರಯತ್ನಗಳು ನಡೆದಿವೆಯಾದರೂ, ಇದಮಿತ್ಥಂ ಎಂದು ಒಂದು ತೀರ್ಮಾನಕ್ಕೆ ಬರಲಾಗಿಲ್ಲವಂತೆ.ಅದಿರಲಿ. ನೆನ್ನೆ ನಾನು ಓದುವ ಫೇಸ್ ಬುಕ್ ಬಳಗದಲ್ಲೊಂದು ಪದ್ಯ ಬರೆಯುವ ಸಮಸ್ಯೆ ನೋಡಿದೆ.  ಸಮಸ್ಯೆ ಹೀಗಿತ್ತು.
ಮೇರಿ ಪಡೆದಳೇಸುತನಯನಿಂ ಕೀರ್ತಿಸುಖಂ"  ಕಂದ ಪದ್ಯದ ಕಡೆಯ ಸಾಲು ಹೀಗೆ ಬರುವಂತೆ ಪದ್ಯವನ್ನು ಮುಗಿಸಿರೆಂಬುದು ಪ್ರಶ್ನೆ.

ಆದರೆ ನನಗೆ ಕಂದವನ್ನು ಬರೆಯಲು ಬರುವುದಿಲ್ಲವಲ್ಲ? ಆದರೇನಾಯಿತು? ಪರೀಕ್ಷ…

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||
ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ -ಯೆಂದು ಬಣ್ಣಿಸುವುದೆಲ್ಲ   ಹಳೆಯದಾಯ್ತು ಸಂದುಗೊಂದಿಯಪಾರ್ಟುಮೆಂಟಿನಲಿ ವಾಸಿಸಿರ -ಲಿಂದು ಕವಿಕಣ್ಣುಗಳೆ ಮಾಯವಾಯ್ತು  ||2||
ಉದಯದಲಿ ಗಿರಿಮೇಲೆ ರವಿಯ ಹೊಂಗಿರಣಗಳು ಹದವಾದ ಲಾನಿಗಿರೆ ಮಂಜು ಹೊದಿಕೆ ಚದುರಿಹವು ಬಣ್ಣದೆಲೆ ತುಸುಕುಳಿರ ಗಾಳಿಯಲಿ ಮುದದ ಮುಂಜಾವಗಳು ಫಾಲಿನಲ್ಲೆ  ||3||
ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ ಒಳಿತಾದ ಸ್ಟಾರ್ಬಕ್ಸು ಕಾಫಿಯನ್ನು ಗಳಹುತ್ತ ಫೇಸ್ಬುಕ್ಕಿನಲ್ಲಿಯಪ್ಡೇಟಿಸುವುದ ಸುಳುವಾಗಿಸಿದ ಮಾರ್ಕು ಜ಼ುಕರ್ಬರ್ಗನು ||4||
-ಹಂಸಾನಂದಿ
ಕೊ: ಪದ್ಯಪಾನದಲ್ಲೊಂದು ಹಳೆಯ ಪ್ರಶ್ನೆ ನೋಡಿದೆ- ಮುಂಜಾವಿನ ಸೊಬಗನ್ನು ಚೌಪದಿಯಲ್ಲಿ ವರ್ಣಿಸಿ, ಕಲ್ಪನೆಗಳು ಹೊಸದಾಗಿರಲಿ ಅಂತ. ಅದನ್ನು ನೋಡಿ, ಕಂಗ್ಲಿಷ್ ನಲ್ಲಿ ಇವತ್ತು ಬರೆದ ನಾಲ್ಕು ಚೌಪದಿಗಳಿವು. ತಲೆಬರಹ ಸೂಚಿಸಿದ್ದು ಗೆಳೆಯ ಸುಬ್ರಹ್ಮಣ್ಯ ಅವರು.

ಕೊ.ಕೊ: ಮಿಲ್ಪಿಟಸ್ ಎಂಬುದು ನಾನಿರುವ ಊರಿನ ಹೆಸರು; ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯ ಪಕ್ಕದಲ್ಲಿರುವ ಊರಿದು. ಊರಿನ ಪೂರ್ವಕ್ಕಿರುವ ಮಾನ್ಯುಮೆಂಟ್ ಬೆಟ್ಟದಲ್ಲಿ ಪ್ರತಿದಿನ ನಮ್ಮ ಕಿಟಕಿಯಲ್ಲಿ ಕಾಣುವ ಸೂರ್ಯೋದಯದಿಂದ ಸ್ವಲ್ಪ ಪ್ರಭಾವಿತವಾದ ಚೌಪದಿಗಳಿವು ಎಂದರೂ ತಪ್ಪಿಲ್ಲ.


ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ!

ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ ಯೋಚಿಸಿದಾಗ ಹೊಳೆದದ್ದಿದು.

ಸೀತೆ ರಾವಣನ ಬಂಧನದಿಂದ ಹೊರಬಂದು, ರಾಮನೊಡನೆ ಅಯೋಧ್ಯೆಗೆ ಮರಳಿದ್ದಾಳೆ. ವನವಾಸದಲ್ಲಿ ಏನು ಪೂಜೆ ಮಾಡಿದ್ದಳೋ ಇಲ್ಲವೋ ಪಾಪ,ಮಂಗಳಗೌರಿಗೆ ಲಕ್ಷಪೂಜೆಯನ್ನು ಮಾಡುವ ಹರಕೆ ಹೊತ್ತಿದ್ದಾಳೆ. ಆದರೆ ಲಕ್ಷ ಹೂಗಳನ್ನು ಕಿತ್ತಿ ಬಿಡಿಸುವುದೇನು ಸಾಮಾನ್ಯವೇ? ಆದರೆ ಸೀತೆಗೆ ಆ ಭಯವಿಲ್ಲ! ಯಾಕೆಂದರೆ ರಾಮನಿಗಾಗದಿದ್ದರೂ ವಾನರ ಸೈನ್ಯದ ಸಹಾಯವಿದೆಯಲ್ಲ ಅವಳಿಗೆ!

ನೇಮದಲಿ ಹಂಬಲಿಸೆ ಸೀತೆಯು
ಕಾಮ ವೈರಿಯ ಮಡದಿ ಮಂಗಳ
ಧಾಮೆ ಗೌರಿಯ ಲಕ್ಷ ಪೂಜೆಗೆ ವಾನರರ ಸೈನ್ಯ
ಆಮರೀಮರಕೆಲ್ಲ ನೆಗೆದಾ-
ರಾಮದಲಿ ಹೂಗಳನು ಬಿಡಿಸಿರೆ
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

ಇದಕ್ಕೆ ಬೇರೆ ಪದ್ಯಪಾನಿಗಳು ಬರೆದ ಉತ್ತರಗಳನ್ನು ಇಲ್ಲಿ ನೋಡಬಹುದು.

-ಹಂಸಾನಂದಿ

ಗಜೇಂದ್ರ ಮೋಕ್ಷ -2

Image
ಗಜೇಂದ್ರ ಮೋಕ್ಷ -2

ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನು ಬಳಸಬೇಕಿತ್ತು. ಆಗ ಬರೆದ ಪದ್ಯವನ್ನು ಓದಲು ಇಲ್ಲಿ ಚಿಟಕಿಸಿ.


ಕಳೆದ ವಾರ ನಡೆದ ಶತಾವಧಾನದಲ್ಲಿ ಕೆಲವು ಪೃಚ್ಛಕರು ಒಂದೇ ಸಮಸ್ಯೆಗೆ ಹತ್ತು-ಇಪ್ಪತ್ತು-ಮೂವತ್ತು ಉತ್ತರಗಳನ್ನು ಬರೆದ ವಿಷಯ ನೋಡಿದಾಗಿನಿಂದ ಇಪ್ಪತ್ತು ಬೇಡ ಹೋಗಲಿ, ಒಂದು ಪ್ರಶ್ನೆಗೆ ನನಗೆ ಎರಡು ಉತ್ತರವನ್ನಾದರೂ ಬರೆಯುವುದು ಸಾಧ್ಯವೇ ಅನ್ನುವ ಪ್ರಶ್ನೆ ಬಂತು . ಇರಲಿ.  ಇನ್ನೊಂದು ಅವಧಾನದ ವಿಡಿಯೋ ನೋಡುವಾಗ ಅಲ್ಲಿ ಇದೇ ಗಜೇಂದ್ರ ಮೋಕ್ಷಕ್ಕೆ ತುಸು ಬೇರೆ ಪದಗಳನ್ನು ಕೊಡಲಾಗಿತ್ತು - ಸರಿ, ಅದಕ್ಕೆ ಒಂದು ಕೈ ಹಾಕೋಣವೆಂದು ಈ ಪ್ರಯತ್ನ. ಹಾಗಾಗಿ ಒಂದೇ ಸಮಸ್ಯೆ ಅಲ್ಲದಿದ್ದರೂ ಒಂದೇ ತರಹದ ಸಮಸ್ಯೆ  ಅನ್ನಬಹುದು!

ಈ ಬಾರಿ ಇಲ್ಲಿ ಬಳಸಬೇಕಾದ ಪದಗಳೂ ಚಕ್ರಿಗಳೇ - ಅಂದರೆ ಚಕ್ರಗಳನ್ನು ಹೊಂದಿದವೇನೇ: ಸೈಕಲ್ (Cycle)  , ವ್ಯಾನ್ (Van), ಲಾರಿ (Van)  ಮತ್ತೆ ಕಾರ್ (Car).

ನಾನು ಬರೆದ ಪದ್ಯ ಹೀಗಿದೆ ನೋಡಿ. ಹೇಗಿದೆ ಹೇಳಿ!

ಅಸುವು ಹೋಗುತಲಿಹವು ವ್ಯಾನಾದಿ ಪಂಚಕವು
ತುಸು ನೀನು ಕರುಣಿಸೈ ಕಲ್ಲಾಗಿಸದೆ ಮನವ
ಮೊಸಳೆಯಿಂದೆನ್ನುಳಿಸಲಾರಿಹರೆನಲು ಗಜವು
ಎಸೆವ ಕಾರ್ಮುಗಿಲಿಂದ ಗರುಡ…

ಪದ್ಯಪಾನದ ಅಮಲು

Image
ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:1)
ಚೆಲ್ಲಿರಲು ಹೂವುಗಳು ಆಗಸದಿ ಭರದಿಂದ
ಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳು
ಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ
-ಳಿಲ್ಲಿ ಬಂದಿಹಳೆಂಬ ಬೆರಗು ತರಿಸಿ!

(ಅವಧಾನ ಮುಗಿದ ನಂತರ ಹೂಮಳೆ ಸುರಿದಾಗ , ಮನಸಿನಲ್ಲಿ ಮೂಡಿದ ಭಾವವಿದು)


2)
ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !

-ಹಂಸಾನಂದಿ

ಕೊ: ರಾಗ: ರಾ.ಗಣೇಶ್ ; ಸೊಲ್ಲ ಹೆಣ್ = ಮಾತಿನ ದೇವತೆ, ನುಡಿದೇವಿ, ಸರಸ್ವತಿ

ಕೊ.ಕೊ: ಶತಾವಧಾನ ಆದಮೇಲೆ, ಅದನ್ನು ಆಯೋಜಿಸಿದ ಪದ್ಯಪಾನ ಹಲವರಿಗೆ ಹೊಸದಾಗಿ ಪರಿಚಿತವಾಗಿದ್ದರಿಂದ, ಮರುದಿನ ಆ ವೆಬ್ ಸೈಟ್ ನ ಸರ್ವರ್  ಬಂದ ಜನರ ಪ್ರವಾಹವನ್ನು ತಡೆಯಲಾಗದೇ ತೊಂದರೆಗೊಳಗಾಗಿತ್ತು. ಆಮೇಲೆ ಸರಿಪಡಿಸಿದ್ದಾರೆನ್ನಿ. ಆ ಸಂದರ್ಭದಲ್ಲಿ ಹೊಳೆದ ಪದ್ಯ ಎರಡನೆಯದು. ಪದ್ಯಪಾನದ ಮತ್ತಿನ ಬಗ್ಗೆಯ ಈ ಪದ್ಯ ಮತ್ತಕೋಕಿಲ ಎಂಬ ಛಂದಸ್ಸಿನಲ್ಲಿದೆ :)

ಅರ್ಧನಾರೀಶ್ವರ

Image
ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ- ನ್ನಂಗದರ್ಧದಲ್ಲಿನಿಯೆಯನ್ನಿಟ್ಟು ಅಂಗನೆಯ ಸಂಗವನು ಬಿಟ್ಟ ಬೈರಾಗಿಗಳ ಶೃಂಗದಲ್ಲಿಯೆ ನೆಲೆವಡೆದಿರಲು ಶಿವನು ಅಂಗಜನ ಹಾವುನಂಜುರಿಯುಳ್ಳ  ಬಾಣಗಳ ಚುಂಗು ಚುಚ್ಚಿಸಿಕೊಂಡ ಸಾಮಾನ್ಯರು ಭಂಗಗೊಳುವರು ನರಳಿ ಬಯಕೆ ಕೋಟಲೆಯಲ್ಲಿ ಹಂಗು ಬಿಡಲಾರದೇ ಸುಖ ಹೊಂದದೇ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ - ೯೭):

ಏಕೋ ರಾಗಿಷು ರಾಜತೇ ಪ್ರಿಯತಮಾದೇಹಾರ್ಧಧಾರೀ ಹರೋ
ನೀರಾಗಿಷ್ವಾಪಿ ಯೋ ವಿಮುಕ್ತ ಲಲನಾಸಂಗೋ ನ ಯಸ್ಮಾತ್ಪರಃ
ದುರ್ವಾರ ಸ್ಮರಬಾಣಪನ್ನಗವಿಷಜ್ವಾಲಾವಲೀಢೋ ಜನಃ ***
ಶೇಷಃ ಕಾಮವಿಡಂಬಿತೋ ಹಿ ವಿಷಯಾನ್ ಭೋಕ್ತುಂ ನ ಮೋಕ್ತುಂ ಸಮಃ


-ಹಂಸಾನಂದಿ


ಕೊ:  ಈ ಸಾಲಿಗೆ  "ದುರ್ವಾರ ಸ್ಮರಬಾಣ ಪನ್ನಗವಿಷವ್ಯಾಬಿದ್ಧ ಮುಗ್ಧೋ ಜನೌ" ಅನ್ನುವ ಪಾಠಾಂತರವೂ ಇದ್ದಂತೆ ತೋರುತ್ತದೆ.
ಕೊ.ಕೊ: ಇದರ ಬಗ್ಗೆ ಇನ್ನೊಂದಷ್ಟು ವಿವರಣೆ ಗದ್ಯದಲ್ಲಿ, ಈ ಮೊದಲು ಬರೆದಿದ್ದ  ಕಾಮನ ಹಬ್ಬ ಎನ್ನುವ ಬರಹದಲ್ಲಿ ಮಾಡಿದ್ದೆ. ಸ್ಮರ, ಕಾಮ, ಅನಂಗ, ಎಲ್ಲವೂ ಮನ್ಮಥನನ್ನೇ ( ಅಥವಾ ಪ್ರೀತಿಯ ಸೆಳೆತವನ್ನೇ) ಸೂಚಿಸುವ ಪದಗಳು. 
ಕೊ.ಕೊ.ಕೊ: ಮೂಲದಲ್ಲಿ ಬರುವ ಪನ್ನಗ, ವಿಷ, ಜ್ವಾಲೆ ಮೊದಲಾದ ಪದಗಳು ಶಿವನ ಕೊರಳ ಸುತ್ತಿನ ಹಾರವಾದ ಸರ್ಪ, ಕಂಠದಲ್ಲಿ ಅವನು ಧರಿಸಿದ ವಿಷ, ಹಣೆಗಣ್ಣಿನಲ್ಲಿ ಕಾಣುವ ಉರಿ ಮೊದಲಾದುವುಗಳನ್ನು ಸುಂದರವಾಗಿ ಶ್ಲೇಷೆಯಲ್ಲಿ ತೋರಿಸುತ್ತದೆ. ಅಂತಹ ಒಳ್ಳೆಯ ಶ್ಲೇಷೆಯನ್ನು ಕನ್ನಡದಲ್ಲಿ ತರಲು ಸೋತಿರುವುದು ನಿಜವ…

ಬೊಂಬೆ ಹಬ್ಬ ೨೦೧೨

Image
ಈ ವರ್ಷದ ಬೊಂಬೆ ಹಬ್ಬ ಮುಗಿದಿದೆ.

ಪ್ರತಿ ವರ್ಷದಂತೆ  ಈ ಬಾರಿಯೂ ನಮ್ಮ ಮನೆಯಲ್ಲಿಟ್ಟ ಒಂದಷ್ಟು ಬೊಂಬೆಗಳ ನೋಟ, ನಿಮಗಾಗಿ:

ಬೊಂಬೆ ಹಬ್ಬ ೨೦೧೨ಹಾಗೇ ಹಿಂದಿನ ಕೆಲವು ವರ್ಷಗಳ ವಿಡಿಯೋ ಕೂಡ ಇಲ್ಲೇ ಹಾಕುತ್ತಿದ್ದೇನೆ:

ಬೊಂಬೆ ಹಬ್ಬ ೨೦೧೧
ಬೊಂಬೆ ಹಬ್ಬ ೨೦೧೦
ಬೊಂಬೆ ಹಬ್ಬ ೨೦೦೯ಮತ್ತೆ ಮುಂದಿನ ಶರತ್ಕಾಲದ ವರೆಗೆ ಬೊಂಬೆಗಳಿಗೆ ವಿರಾಮ!

-ಹಂಸಾನಂದಿ

ಕರುಣಾ ಪೂರ್ಣೆ

Image
ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ
-ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು
ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು
ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!

-ಹಂಸಾನಂದಿ

ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ  ಉತ್ತರವಾಗಿ  ನಾನು ಬರೆದಿದ್ದಿದು. ಪಂಚಮಾತ್ರಾ ಚೌಪದಿ ಛಂದಸ್ಸಿನಲ್ಲಿದೆ.

ಕೊ: ಈ ನಸುನಗೆಯ ಮೊಗದ ದೇವಿಗೆ ದುರ್ಗೆ ಎಂಬ ಹೆಸರೇ ಸರಿಯಿಲ್ಲ ಎನ್ನಿಸುತ್ತಿದ್ದಾಗಲೇ ಕಾಳಿದಾಸನ(ದೆನ್ನಲಾದ) ಕಮಲೇ ಕಮಲೋತ್ಪತ್ತಿಃ ನೆನಪಿಗೆ ಬಂದು ಈ ಚೌಪದಿಯನ್ನು ಬರೆದೆ.

ಶರತ್ಕಾಲ

Image
ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. ಹೊಸ ಚಿತ್ರಕ್ಕೆ ಹಳೆ ಧಾಟಿಯಲ್ಲಿ, ಅಂದರೆ ಭಾಮಿನಿ ಷಟ್ಪದಿಯಲ್ಲಿ ಪದ್ಯ ಬರೆದರೆ ಹೇಗಿರುತ್ತೆ ನೋಡೋಣ ಅಂತ ಒಂದು ಪ್ರಯತ್ನ -  ಕ್ಷೇತ್ರ  ಮುದ್ರೆಯ ಸಹಿತ :)


ಕೊಲ್ಲಿ ಬಲಬದಿಯಲ್ಲಿ ಕಯೊಟೀ
ಹಿಲ್ಲಿನಾ ಸುತ್ತಣದ ಚೆಲುವಿನ
ಹುಲ್ಲುಗಾವಲಿನಲ್ಲಿ ಉಸುರಿಹುದೆನಗೆ ಚೆಲ್ವ ತೆನೆ
ಮೆಲ್ಲ ದನಿಯಲಿ ಪ್ರಶ್ನಿಸುತ್ತಿಹು
ದಿಲ್ಲಿ ನಿಲ್ವುವೆ ಬಿಸಿಲ ದಿನಗಳು?
ಸಲ್ಲದಾಸೆಯ ತೊರೆಯುತಣಿಯಾಗಿನ್ನು ಶಿಶಿರಕ್ಕೆ!


-ಹಂಸಾನಂದಿಕೊ: ವಾಗ್ಗೇಯಕಾರರು ತಮ್ಮ ರಚನೆಗಳಲ್ಲಿ ತಮ್ಮ ಹೆಸರನ್ನು ಸೂಚಿಸುವುದು ವಾಡಿಕೆ. ಇದರಲ್ಲಿ ಸ್ವನಾಮ ಮುದ್ರೆ ( ತ್ಯಾಗರಾಜ ಪುರಂದರ ದಾಸ, ಮೈಸೂರು ವಾಸುದೇವಾಚಾರ್ಯ ಮೊದಲಾದವರು ), ಇಷ್ಟದೇವತಾ ಮುದ್ರೆ (ಗುರುಗುಹ - ಮುದ್ದುಸ್ವಾಮಿ ದೀಕ್ಷಿತ, ಶ್ರೀಕೃಷ್ಣ - ವ್ಯಾಸರಾಯ , ಕಾಗಿನೆಲೆಯಾದಿಕೇಶವ - ಕನಕದಾಸ ಇತ್ಯಾದಿ) ಇವು ಹೆಚ್ಚು  ಎಲ್ಲರಿಗೂ ತಿಳಿದಿರುವಂತಹದ್ದೇ, ಹಾಗೇ ಎಷ್ಟೋ ರಚನೆಗಳಲ್ಲಿ ರಾಗದ ಹೆಸರು ಬರುವಂತೆ ಇರುವ ರಾಗಮುದ್ರೆ ( ಮೋಹನ ರಾಮ- ಮೋಹನ ರಾಗ, ಆನಂದಾಮೃತಕರ್ಷಿಣಿ ಅಮೃತವರ್ಷಿಣಿ - ಅಮೃತವರ್ಷಿಣಿ ರಾಗ ಮೊದಲಾದುವು) ಕೂಡ ಪರಿಚಿತವಾಗಿರುವಂತಹದ್ದೇ. ಜೊತೆಗೆ ಕೆಲವು ಸಂಗೀತ ರಚನೆಗಳಲ್ಲಿ ಅದನ್ನು ಎಲ್ಲಿ ರಚಿಸಲಾಯಿತು, ಅಥವಾ ಎಲ್ಲಿಯ ದೇವಾಲಯದ ದೇವ ದೇವಿಯರ ಬಗ್ಗೆ ರಚಿಸಲಾಯಿತು ಎನ್ನುವ ಸೂಚನೆಯೂ ಇರುತ್ತದೆ…

ಕೇಳಬಾರದ್ದು

ಮೇಲ್ಮೆಯನು ಕೇಳು ನೀ ಚೆಲುವನಲ್ಲ
ನಡತೆಯೆಂಬುದ ಕೇಳು ಕುಲವನಲ್ಲ;
ಕೈಗೂಡಿಸಿದ ಕೇಳು ಕಲಿಕೆಯಲ್ಲ
ನಲಿವು ಪಡೆದುದ  ಕೇಳು ಗಳಿಕೆಯಲ್ಲ!

ಸಂಸ್ಕೃತ ಮೂಲ:

ಗುಣಂ ಪೃಚ್ಛಸ್ವ ಮಾ ರೂಪಂ ಶೀಲಂ ಪ್ರಚ್ಛಸ್ವ ಮಾ ಕುಲಂ
ಸಿದ್ಧಿಂ ಪೃಚ್ಛಸ್ವ ಮಾ ವಿದ್ಯಾ ಸುಖಂ ಪೃಚ್ಛಸ್ವ ಮಾ ಧನಂ


-ಹಂಸಾನಂದಿ

ಕೊ: ಇವತ್ತು ತಾನೇ ಶತಾವಧಾನಿ ಗಣೇಶ್ ಅವರ ಉಪನ್ಯಾಸದಲ್ಲಿ ಕೇಳಿದ ಸುಭಾಷಿತವಿದು.ನೋಟ

ಆತನೊಳಬರುವುದನು ತಡೆಯಲಿಲ್ಲ;
ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ;
ಕಟಪಟೆಯ ಸೆಡವು ಮಾತಾಡಲಿಲ್ಲ.
ಮೊದಲಿನಿಯನಾಗಿದ್ದುದನು  ಗಣಿಸಲಿಲ್ಲ
ನೇರ ದಿಟ್ಟಿಯ ಕಣ್ಣ ನೋಟವಿಟ್ಟು
ಪರಕೀಯನೆಂಬಂತೆ ಕಂಡಳಲ್ಲ!

ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು ರೂಪ , ಒಂದು ಭಾಮಿನಿ ಷಟ್ಪದಿಯಲ್ಲಿ:

ತಡೆಯದವನೊಳ ಬರುವುದನು ಬೇ
ರೆಡೆಗೆ ತಿರುವದೆ ತನ್ನ ಮೊಗವನು
ಸೆಡವಿನಲಿ ಕಟಪಟೆಯ ನುಡಿಗಳನಾಡದೆಲೆಯವಳು
ನೆಡುತ ನೇರದ ದಿಟ್ಟಿಯವನಲಿ
ಪೆಡೆಯನಂತೆಯೆ ಕಾಣುತಿರುವಳು
ಗೊಡವೆಯಿಲ್ಲದೆ ಮೊದಲಿಗವ ತನ್ನಿನಿಯನೆಂಬುದನು

ಸಂಸ್ಕೃತ ಮೂಲ:  (ಅಮರುಕವಿಯ ಅಮರು ಶತಕದಿಂದ)

ನಾಂತಃ ಪ್ರವೇಶಮರುಣದ್ವಿಮುಖೀ ನ ಚಾಸೀ-
ದಾಚಷ್ಟ ರೋಷಪರುಷಾಣಿ ನ ಚಾಕ್ಷರಾಣಿ |
ಸಾ ಕೇವಲಂ ಸರಲಪಕ್ಷ್ಮಭಿರಕ್ಷಿಪಾತೈಃ
ಕಾಂತಂ ವಿಲೋಕಿತವತೀ ಜನನಿರ್ವಿಶೇಷಮ್ ||

नान्तः प्रवेशमरुणाद्विमुखी न चासी-
दाचष्टरोष परुषाणि न चाक्षराणि  ।
सा केवलं सरलपक्ष्मभिरक्षिपातैः
कान्तं विलोकितवती जननिर्विशेषं  । ।

-ಹಂಸಾನಂದಿ

ಕೊ: ಪೆಡೆಯ = ಹೊಸಬ

ಕೊ.ಕೊ: ಈ ಪದ್ಯದ ಬಗ್ಗೆ ಮಾತಾಡುತ್ತಿದ್ದಾಗ ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರೊಡನೆ, ಈ ಪದ್ಯವನ್ನೂ ನನ್ನ ಅನುವಾದವನ್ನೂ ಹಂಚಿಕೊಂಡೆ. ಆಗ ಅವರು ಇದಕ್ಕೆ ಅಮರುವಿನ ಕವಿತೆಯ ನವಿರುತನವನ್ನು ಉಳಿಸಿಕೊಳ್ಳುವಂತಹ  ,  ಅನುವಾದವೆಂದರೆ ಹೀಗಿರಬೇಕೆನ್ನಿಸುವಂತಹ  ಒಂದು ಅತಿ ಸುಂದರ ಅನುವಾದವನ್ನು ಹೀಗೆ ಚೌಪದಿಯನ್ನು ಹೀಗೆ ಬರೆದಿದ್ದಾರೆ. ಅದನ್ನು  ನ…

ಉದುರೆಲೆಕಾಲ

Image
ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ
ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ;
ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ-
ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!

-ಹಂಸಾನಂದಿ

ಚಿತ್ರಕೃಪೆ: ಪೂರ್ಣಿಮಾ

ಲೆಕ್ಕಾಚಾರ

ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು
ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ;
ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ  
ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!

                     ****

ಚಿತ್ತದಲಿ ನಿನಗೆನ್ನ ಮೇಲಾಗಿರಲು ಮುನಿಸು
ಉತ್ತರವ ನಾನಿನ್ನು ಕೊಡುವುದೇನು?
ಮತ್ತೆ ಕೇಳೆನು ಬೇರೆ ಕೊಟ್ಟುಬಿಡು ನಾನು ಮೊದ-
ಲಿತ್ತ ಮುತ್ತುಗಳನ್ನು ಬಿಗಿವಪ್ಪುಗೆಯನು!


ಸಂಸ್ಕೃತ ಮೂಲ(ಅಮರು ಕವಿಯ ಅಮರುಶತಕ- ೧೩೩):


ಕೋಪಸ್ತ್ವಯಾ ಹೃದಿ ಕೃತೋ ಯದಿ ಪಂಕಜಾಕ್ಷಿ
ಸೋಽಸ್ತು ಪ್ರಿಯಸ್ತವ ಕಿಮತ್ರ ವಿಧೇಯಮನ್ಯತ್ |
ಆಶ್ಲೇಷಮರ್ಪಯ ಮದರ್ಪಿತ ಪೂರ್ವಮುಚ್ಚೈಃ
ಮಹ್ಯಂ ಸಮರ್ಪಯ ಮದರ್ಪಿತ ಚುಂಬನಂ ಚ ||


-ಹಂಸಾನಂದಿ

ಕೊ: ಇದೇನಿದು, ಮೂಲ ಒಂದೇ ಪದ್ಯ ಇದೆ, ಎರಡು ಕನ್ನಡ ಪದ್ಯಗಳಿವೆ ಎಂದಿರಾ? ಎರಡೂ ಅನುವಾದಗಳೂ ಒಂದೇ ಮೂಲಕ್ಕೇ, ಸುಮ್ಮನೆ ಸ್ವಲ್ಪ  ಬೇರೆ ರೀತಿಯ ಎರಡು ಅನುವಾದಗಳು. ಅಷ್ಟೇ.

ಕೊ.ಕೊ: ಸಾಮಾನ್ಯವಾಗಿ ಮೂಲದಲ್ಲಿಲ್ಲದ ಪದಗಳನ್ನೂ, ಅಭಿಪ್ರಾಯಗಳನ್ನೂ ಅನುವಾದದಲ್ಲಿ ಬಳಸಬಾರದೆಂದೂ, ಅಲ್ಲಿರುವುದನ್ನು ಬಿಡಬಾರದೆಂದೂ ಒಂದು ಕಟ್ಟಳೆ. ಈ ಪದ್ಯದಲ್ಲಿ ಮೂಲದಲ್ಲಿದ್ದ "ಪಂಕಜಾಕ್ಷಿ" ಒಂದು ಅನುವಾದದಲ್ಲಿ ಚೆನ್ನೆಯಾಗಿ ಬದಲಾಗಿದ್ದರೆ, ಇನ್ನೊಂದರಲ್ಲಿ ಆ ಸಂಬೋಧನೆಯೇ ಮಾಯವಾಗಿದೆ. ನಾನು ಮೂಲದ ಅಭಿಪ್ರಾಯವನ್ನು ಬದಲಾಯಿಸದಿರುವುದರಿಂದ  ಓದುಗರಿಗೆ ಒಪ್ಪಿಗೆಯಾಗಬಹುದೆಂದು ಎದುರುನೋಡುವೆ.

ಕೊ.ಕೊ.ಕೊ: ಅಮರು ಶತಕವೆಂದರೆ ೧೦೦…

ಎಂಟು ಚಕ್ರ, ಒಂದು ಪದ್ಯ:

Image
ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.

ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಹಲವು ಬಾರಿ ಬರೆದಿದ್ದೆ. ಕೆಲವು ಪದಗಳನ್ನ ಕೊಟ್ಟು ಅದನ್ನು ಉಪಯೋಗಿಸಿ ಪದ್ಯ ಬರೆಯಬೇಕಾದ ಸಮಸ್ಯೆಯನ್ನ ’ದತ್ತಪದಿ’ ಅನ್ನುತ್ತಾರೆ. ಈ ಬಾರಿಯ ದತ್ತಪದಿ ವಿಶೇಷವಾಗಿತ್ತು. ಅವರದೇ ಮಾತಿನಲ್ಲಿ ಹೇಳೋದಾದರೆ

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)
ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

ಸ್ವಲ್ಪ ತಿಣುಕಾಡಿ ನಾನು ಬರೆದ ಪದ್ಯ ಹೀಗಿದೆ. ಗೂಗಲೇಶ್ವರನ ಪೂಜೆಯನ್ನು ಚೆನ್ನಾಗಿ ಮಾಡಿದ್ದಿದ್ದರಿಂದ ಕೈನೆ ಅನ್ನುವ ಒಂದು ಹೊಸ ಪದವನ್ನೂ ಅರಿತಂತಾಯಿತು. ಈಗ ಓದಿ:

ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ

ಸ್ವಲ್ಪ ಇದಕ್ಕೆ ಹಿನ್ನುಡಿಯೂ ಬೇಕಾಗಬಹುದು. ಇಲ್ಲಿ ನಡೆಯುವ ಮಾತುಕತೆ ಒಬ್ಬ ಒಡತಿ ಮತ್ತೆ ಅವಳ ಸೇವಕಿಯ ನಡುವೆ. ಇಬ್ಬರೂ ಸುಂದರಿಯರೇ ಅಂತ ಹೇಳಲೇಬೇಕಿಲ್ಲ ಮತ್ತೆ ? ಹರೆಯದ ಒಡತಿಯನ್ನು ಚಿಕ್ಕ…

ಒಳಗುಟ್ಟು

ಒಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                                                          
ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ  ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ : ಪದ್ಯ-50  ) :
ಅಂಗಾನಾಮತಿತಾನವಮ್ ಕಥಮಿದಮ್ ಕಂಪಶ್ಚ ಕಸ್ಮಾತ್ಕುತೋ ಮುಗ್ಧೇ ಪಾಂಡುಕಪೋಲಮಾನನಮಿತಿ ಪ್ರಾಣೇಶ್ವರೇ ಪೃಚ್ಛತಿ ತನ್ವ್ಯಾ ಸರ್ವಮಿದಮ್ ಸ್ವಭಾವಜಮಿತಿ ವ್ಯಾಹೃತ್ಯ ಪಕ್ಷ್ಮಾಂತರಾ ವ್ಯಾಪೀ ಭಾಷ್ಪಭರಸ್ತಯಾ ಚಲಿತಯಾ ನಿಶ್ವಸ್ಯ ಮುಕ್ತೋಽಅನ್ಯತಃ
-ಹಂಸಾನಂದಿ

ಗೊಲ್ಲ ಬಾಲನಿಗೊಂದು ನಮನ

Image
ಬಣ್ಣದಲಿ ಮುಂಗಾರ ಮುಗಿಲಹೋಲುವನ
ಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನ
ಆಸರೆ ಬಯಸಿದವರ ಪಾರಿಜಾತನ 
ಮಿಂಚಂತೆ ಹೊಳೆವರಿವೆಯುಳ್ಳವನ

ದೇವವೈರಿಕುಲವ ತೊಡೆದಿಹನ 
ಸುಜನರೆಲ್ಲರ ಬಗೆಗೊಳ್ವ ಚಿತ್ತಾರನ
ಸುರಮುನಿಗಳೆಲ್ಲ ಮಣಿವಾತನ 
ನಾನು ಕೊಂಡಾಡುವೆನಾ ಗೊಲ್ಲಬಾಲನ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ ೨-೧೨):

ಸಜಲ ಜಲದನೀಲಂ ವಲ್ಲವೀಕೇಳಿಲೋಲಂ
ಶ್ರಿತಸುರತರುಮೂಲಂ ವಿದ್ಯುದುಲ್ಲಾಸಿಚೇಲಮ್ |
ಸುರರಿಪುಕುಲಕಾಲಂ ಸನ್ಮನೋಬಿಂಬಲೀಲಂ
ನತಸುರಮುನಿಜಾಲಂ ನೌಮಿ ಗೋಪಾಲಬಾಲಮ್ ||

-ಹಂಸಾನಂದಿ

ಕೊ: ಸುರತರು= ದೇವಲೋಕದ ವೃಕ್ಷ, ಪಾರಿಜಾತ;ಸ್ವರ್ಗದಿಂದ ಭೂಮಿಗೆ ಸತ್ಯಭಾಮೆಗೆಂದು ಕೃಷ್ಣ ಸ್ವರ್ಗದಿಂದ ಭೂಮಿಗೆ ಪಾರಿಜಾತವನ್ನು ತಂದ ಕಥೆ ಪ್ರಸಿದ್ಧವೇ ಆಗಿದೆ.


ಚಿತ್ರ ಕೃಪೆ: http://diyala.kochiknacha.com/2011/01/somnathpur-temple-tribute-in.html - ಇಲ್ಲಿಂದ ತೆಗೆದುಕೊಂಡ ಸೋಮನಾಥಪುರದ ವೇಣುಗೋಪಾಲನ ಮೂರ್ತಿ

ಸೆರೆ

Image
ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿ
ಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿ
ಸವಿಯನ್ನೆ ಸುರಿಯುತಿಹ ನಸುನಗುವ ಮೊಗದ
ಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!


ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):

ಕರಕಮಲ ದಲಕಲಿತ ಲಲಿತತರ ವಂಶೀ
ಕಲನಿನದ ಗಳದಮೃತ ಘನಸರಸಿ ದೇವೇ |
ಸಹಜರಸ ಭರಭರಿತ ದರಹಸಿತ ವೀಥೀ
ಸತತವಹಧರಮಣೀಮಧುರಿಮಣಿ ಲೀಯೇ ||-ಹಂಸಾನಂದಿ

ಕೊ: ಸಾಮಾನ್ಯವಾಗಿ ಅನುವಾದಿಸುವಾಗ ಮೂಲದಲ್ಲಿಲ್ಲದ ಪದಗಳನ್ನು ಸೇರಿಸುವುದೂ, ಮೂಲದಲ್ಲಿರುವ ಪದಗಳನ್ನು (ಅಥವಾ ಅರ್ಥವನ್ನೂ) ಪೂರಾ ಬಿಟ್ಟುಬಿಡಬಾರದೆಂಬುದೊಂದು ಕಟ್ಟುಪಾಡು. ಆದಷ್ಟೂ ನಾನು ಇದಕ್ಕೆ ಕಟ್ಟುಬೀಳಲು ಪ್ರಯತ್ನಿಸುವುದಾದರೂ, ಈ ಬಾರಿ ಹಾಗೆ ಮಾಡಲಿಲ್ಲ

ಕೊ.ಕೊ: ಮೂಲದಲ್ಲಿರುವ ೫/೫/೫/೪ ಮಾತ್ರೆಗಳ ಓಟವನ್ನು ಇದ್ದಿದ್ದರಲ್ಲಿ ಉಳಿಸುವ ಪ್ರಯತ್ನ ಮಾಡಿದ್ದೇನೆ.

ಚಿತ್ರ ಕೃಪೆ: ಮಿತ್ರ ಸುಯೋಗ್ ಗೈಧಾನಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ , ನಿಜ ಹೇಳಬೇಕೆಂದರೆ, ಈ ಚಿತ್ರವನ್ನು ನೋಡಿದ ಮೇಲೆ, ಇದಕ್ಕೆ ತಕ್ಕ ಪದ್ಯವನ್ನು ಹುಡುಕಲೇಬೇಕೆಂದು ಕೃಷ್ಣಕರ್ಣಾಮೃತದಲ್ಲಿ ಅನೇಕ ಹೊಸ ಪದ್ಯಗಳನ್ನು ಓದಿ, ನಂತರ ನನಗೆ ಬಹಳ ಹಿಡಿಸಿದ್ದೂ, ಮತ್ತೆ ನನ್ನ ಅನುವಾದಿಸುವ ಅಳವಿಗೆ ಸ್ವಲ್ಪವಾದರೂ ದಕ್ಕೀತೆಂದು ಈ ಪದ್ಯವನ್ನು ತೆಗೆದುಕೊಂಡೆ. ಎಷ್ಟೆಂದರೂ ಮೂಲ ಮೂಲವೇ, ಅನುವಾದ ಅನುವಾದವೇ.  ಮೂಲದಲ್ಲಿರುವ ಲಾಲಿತ್ಯ ನನ್ನ ಅನುವಾದದಲ್ಲಿ ಇಲ್ಲವೆನಿಸಿದರೂ,  ಹೆತ್ತವರಿಗೆ ಹೆಗ್ಗಣ ಮುದ್ದು …

ಎಳೆಯನ ಚೆಲುವು

Image
ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು
ಕೊಳಲ ನಾದದಿ ತಂಪನೆರೆಯುತಿಹ  ಮೊಗದ
ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ
ತಿಳಿಸುತಲಿವನ ಸೊಗವ ತುಸುವಾದರೂ!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :


ಕಮನೀಯ ಕಿಶೋರ ಮುಗ್ಧ ಮೂರ್ತೇಃ
ಕಲವೇಣುಕ್ವಣಿತಾರ್ದ್ರಾನನೇಂದೋಃ
ಮಮ ವಾಚಿ ವಿಜೃಂಭತಾಂ ಮುರಾರೇಃ
ಮಧುರಿಂಣಃ ಕಣಿಕಾಪಿ ಕಾಪಿ ಕಾಪಿ

-ಹಂಸಾನಂದಿ


ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್ 

ಕೊಳಲನೂದುವ ಚದುರನಿಗೆ

Image
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!
ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿ
ತಂಪು ತುಂಬಿಹ ಹರುಷದುಲಿಯೂದೆ ಕೊಳಲು;
ಮಂಪರೇರಿಸಿ ಮತ್ತೆ  ಸೆಳೆಯುತ್ತ ಬಗೆಬಗೆಯ-
-ಲಿಂಪುಗಳ ತೋರುತಲಿ ಮನವ ಪೆರ್ಚಿಸುತ!


ಸಂಸ್ಕೃತ ಮೂಲ: 

 (ಲೀಲಾಶುಕನ ಕೃಷ್ಣಕರ್ಣಾಮೃತ-೬)
ಮುಕುಲಾಯಮಾನ ನಯನಾಂಬುಜಂ ವಿಭೋಃ ಮುರಲೀ ನಿನಾದ ಮಕರಂದ ನಿರ್ಭರಂ | ಮುಕುರಾಯಮಾಣಮೃದುಗಂಡಮಂಡಲಂ ಮುಖಪಂಕಜಂ ಮನಸಿ ಮೇ ವಿಜೃಂಭತಾಂ || 

(ಲೀಲಾಶುಕನ ಕೃಷ್ಣಕರ್ಣಾಮೃತ-೩೬)
ಅಧೀರ ಬಿಂಬಾಧರ ವಿಭ್ರಮೇಣ  ಹರ್ಷಾರ್ದ್ರ ವೇಣುಸ್ವರ ಸಂಪದಾ ಚ | ಅನೇನ ಕೇನಾಪಿ ಮನೋಹರೇಣ ಹಾ ಹಂತ ಹಾ ಹಂತ ಮನೋ ಧುನೋತಿ ||

-ಹಂಸಾನಂದಿ


(ಅನುವಾದಿಸುವಾದ ಸಲಹೆ ನೀಡಿದ ಗೆಳೆಯ ಎಂ.ಜಿ.ಹರೀಶ್ ಅವರಿಗೆ ವಂದನೆಗಳು)


ಕೊ: ನಾಳೆ ಬರುವ ಕೃಷ್ಣಾಷ್ಟಮಿಯ ಸಮಯಕ್ಕೆ ಅತಿ ಸುಂದರವಾದ ಎರಡು ಸಂಸ್ಕೃತ ಶ್ಲೋಕಗಳನ್ನು ಅನುವಾದಿಸಿ ಹಂಚಿಕೊಳ್ಳುವುದು ಬಹಳ ಸಂತಸ ತಂದ ಸಂಗತಿ.  ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಜನಪ್ರಿಯ ರಚನೆ, ಹಾಗಾಗಿ ತಲೆಬರಹವನ್ನು ಹೀಗಿಟ್ಟದ್ದು.

ಕೊ.ಕೊ:  ಎಸೆ  ಎನ್ನುವುದು   ಶೋಭಿಸು ಎನ್ನುವ ಅರ್ಥದ ದೇಶ್ಯ ಪದ, ಹರಿದಾಸರು ತಮ್ಮ ರಚನೆಗಳಲ್ಲಿ ಬಳಸಿದ್ದಾರೆ; ಉದಾಹರಣೆಗೆ,   "ಶಶಿ ಮುಖದ ನಸುನಗೆಯ ಬಾಲೆ, ಎಸೆವ ಕರ್ಣದ ಮುತ್ತಿನ ಓಲೆ!" ಎನ್ನುವ ಅ…

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

Image
ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! 


ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.

ಕೆಳಗಿನ ಲೇಖನ ಇಂದಿನ (೮/೧/೨೦೧೨) ಗಿಜ಼್‍ಬಾಟ್ ಪೋರ್ಟಲ್ ನಲ್ಲಿ ಬಂದಿದೆ. ಅದರ ಕೊಂಡಿ - http://kannada.gizbot.com/news/kannada-1st-android-app-on-subhashita

ನಿಮ್ಮಲ್ಲಿ ಆನ್ಡ್ರೋಯ್ಡ್ ಫೋನ್/ಟ್ಯಾಬ್ಲೆಟ್ ಇದ್ದಲ್ಲಿ ಗೂಗಲ್ ಪ್ಲೇ ಇಂದ ಇಳಿಸಿಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ, ಈ ರೀತಿಯ ಕೆಲಸ ಮಾಡುತ್ತಿರುವವರಿಗೆ, ಅದು ಖಂಡಿತ ಪ್ರೋತ್ಸಾಹಕಾರಿ.

-ಹಂಸಾನಂದಿ

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App ! August 1, 2012, 10:46 [IST] | Gadget Guru Ads by Google Introducing Nexus 7 play.google.com Built to bring you the best of Google. Buy now for $199
ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ, ಆಭಿಮಾನವಿದೆಯೋ ಅಷ್ಟೇ ಗೌರವ ನಮಗೆ ಸಂಸ್ಕೃತದ ಬಗ್ಗೆಯೂ ಇದೆ. ಹಾಗಾಗಿ  ಅದರ ರಸಸ್ವಾದ ನಮ್ಮ ಜನರಿಗೂ ದಕ್ಕಲಿ ಎಂದೇ ಹಲವಾರು ಮಹನೀಯರು ಸಂಸೃತದಿಂದ ಕನ್ನಡಕ್ಕೆ ಬೃಹತ್ ಗ್ರಂಥಗಳಿಂದ ಹಿಡಿದು, ಭಗವದ್ಗೀತೆಯನ್ನೂ ಅನುವಾದಿಸಿ ಅದರ ರುಚಿಯನ್ನು ಉಣಬಡಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನ ನಡೆಸಿ ಸಂಸ್ಕೃತ ಸುಭಾಷಿತಗ…

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

Image
ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.

ಕಾಳಿದಾಸ ಬರೆದಿದ್ದು ಏಳು ಕೃತಿಗಳು - ರಘು ವಂಶ ಮತ್ತೆ ಕುಮಾರ ಸಂಭವ ಅನ್ನೋ ಎರಡು ಮಹಾಕಾವ್ಯಗಳು. ಇದರಲ್ಲೂ ಕುಮಾರ ಸಂಭವವನ್ನು ಅವನು ಪೂರ್ತಿ ಮುಗಿಸಲೇ ಇಲ್ಲವಂತೆ. ಋತು ಸಂಹಾರ ಮತ್ತೆ ಮೇಘದೂತ ಎಂಬ ಎರಡು ಖಂಡಕಾವ್ಯಗಳು. ಮತ್ತೆ ಮಾಲವಿಕಾಗ್ನಿಮಿತ್ರ, ವಿಕ್ರಮೋರ್ವಶೀಯ, ಮತ್ತು ಅಭಿಜ್ಞಾನ ಶಾಕುಂತಲ ಎಂಬ ಮೂರು ನಾಟಕಗಳು. ಕಾಳಿದಾಸನ ಅತ್ಯುತ್ತಮ ಕೃತಿಯೆಂದೇ ಪರಿಗಣಿಸಿರುವ ಶಾಕುಂತಲ ನಾಟಕದಿಂದ, ವ್ಯಾಸರ ಮಹಾಭಾರತದಲ್ಲೊಂದು ಸಣ್ಣ ಕಥೆಯಾಗಿದ್ದ ದುಷ್ಯಂತ ಶಕುಂತಲೆಯ ಕಥೆ ಜನಜನಿತವಾಗಿಹೋಯಿತು!

೧೯೮೦ರ ಶತಕದಲ್ಲಿ ಬಂದ ಕನ್ನಡ ಚಲನಚಿತ್ರ ಕವಿರತ್ನ ಕಾಳಿದಾಸದಿಂದ ಕನ್ನಡಿಗರೆಲ್ಲ ಕವಿರತ್ನ ಕಾಳಿದಾಸ ಯಾರು ಅಂದರೆ, ಡಾ.ರಾಜ್ ಕುಮಾರ್ ಅಂತಲೇ ಉತ್ತರಿಸುವ ಹಾಗಾಯಿತು. ಅಷ್ಟು ಸೊಗಸಾಗಿ, ಕವಿ ಕಾಳಿದಾಸನ, ಮತ್ತೆ ಅವನ ನಾಟಕದ ನಾಯಕ ದುಷ್ಯಂತನಾಗಿ ಕನ್ನಡಿಗರ ಮನದಲ್ಲಿ ಅವರು ನಿಂತುಬಿಟ್ಟಿದ್ದಾರೆ ಅಂದರೆ ತಪ್ಪೇನಿಲ್ಲ; ಮೊದಮೊದಲು ಕಣ್ವಾಶ್ರಮಕ್ಕೆ ಬಂದ ದುಷ್ಯಂತ ಅಲ್ಲಿ ಸಖಿಯರಾದ  ಪ್ರಿಯಂವದೆ, ಮತ್ತು ಅನಸೂಯೆಯರ ಜೊತೆ ಸುಳಿದಾಡುತ್ತಿದ್ದ ಶಕುಂತಲೆಯನ್ನು ಕಾಣುತ್ತಾನೆ. ಅವಳ ಚೆಲುವಿಗೆ ಮಾರುಹೋಗಿ ಮರೆಯಲ್ಲೇ ನೋಡುತ್ತ ನಿಂತಿರುತ್ತಾನೆ.  ಆ ವೇಳೆಗೆ, ಜೇನುದುಂಬಿಯೊಂದು ಶಕುಂತಲೆಯ ಬೆನ್ನು ಹತ್ತಬೇಕೇ? ಕಾಪಾಡಿ, ಕಾಪಾಡಿ ಎಂದು ಶಕುಂತಲೆ ಕೂಗಲು…

ಜೊತೆ

Image
ಸುತ್ತ ಮುತ್ತಲು ಮಬ್ಬು ಕಂಡಿರ- ಲೆತ್ತ ಸಂತಸ ದಣಿದ ಮನಸಿಗೆ? ಚಿತ್ತವನು ನಲಿಸೀತೆ ಬಣ್ಣದ ಹಾಯಿರುವ ನಾವೆ? ಕುತ್ತು ಕಳವಳಗಳನು ತಾ ಮರೆ- ಸುತ್ತ ತುಂಬಲು ಹುರುಪು ಸಹಚರಿ ಮತ್ತೆ ಹಾಯೆನಿಸೀತು ಜೀವಕೆ ಕವಿದ ಮುಸುಕಿನಲು!
-ಹಂಸಾನಂದಿ
ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟಿದ್ದ ಚಿತ್ರಕ್ಕೊಂದು ಕವಿತೆ ಪ್ರಶ್ನೆಗೆ ನನ್ನ ಉತ್ತರ ಇದು. ಆ ಪುಟಕ್ಕೆ ಹೋದರೆ ಇದೇ ಚಿತ್ರಕ್ಕೆ ಹಲವು ಉತ್ತಮ ಉತ್ತರಗಳನ್ನು ಓದಬಹುದು!
ಕೊ.ಕೊ: ಈ ಚಿತ್ರ ಕೂಡ ಪದ್ಯಪಾನದಿಂದ ಲೇ ತೆಗೆದುಕೊಂಡದ್ದು. ಅಲ್ಲಿ ಕೂಡ ಕೃಪೆ- ಅಂತರ್ಜಾಲ ಅಂತಷ್ಟೇ ಹಾಕಿದ್ದಾರೆ. ಮೂಲ ಪುಟವನ್ನಿಲ್ಲಿ ನೋಡಬಹುದು (http://padyapaana.com/?p=1236)ಮನಮೋಹಕ ಅಲಾಸ್ಕಾ

Image
ಕೆಲವು ದಿನಗಳ ಹಿಂದಿನ ನಮ್ಮ ಅಲಾಸ್ಕಾ ಪ್ರವಾಸದ ಚಿತ್ರಗಳು. ಎಲ್ಲವೂ ನನ್ನ ಸ್ಯಾಮ್ಸಂಗ್ ಕ್ಯಾಪ್ಟಿವೇಟ್ ಫೋನ್ ನ ಕ್ಯಾಮೆರಾದಲ್ಲಿ ತೆಗೆದವು.
ನಾವು ಹೊರಟೆವು ಅಲಾಸ್ಕಾಗೆ! 

ಅಲಾಸ್ಕಾದಲ್ಲಿ ಇರೋದರಲ್ಲಿ ಸುಮಾರು ೪೦% ಜನರೆಲ್ಲ ವಾಸ ಮಾಡೋದು ಏಂಕರೇಜ್ ನಲ್ಲೇ.  ನಾವು ಅಲ್ಲಿ ಸೇರಿದಾಗ ಸಮಯ ರಾತ್ರಿ ಹನ್ನೆರಡೂವರೆ. ಆಗ ತಾನೇ ಸೂರ್ಯ ಮುಳುಗಿದ್ದರಿಂದ, ಇನ್ನೂ ಮುಸ್ಸಂಜೆಯ ವಾತಾವರಣ.  ಸ್ವಲ್ಪ ಮೋಡ ಕವಿದಿತ್ತು.ಏಂಕರೇಜ್ ನ ರೈಲ್ವೆ ನಿಲ್ದಾಣದ ಮುಂದೆ:

ರೈಲ್ವೆ ಸ್ಟೇಷನ್ನಿನ ಟಿಕೆಟ್ ಮಳಿಗೆ:


ವಿಟ್ಟಿಯರ್ ಗೆ ಹೋಗ್ತಾ,  ರೈಲಿನ ಕಿಟಕಿಯೊಳಗಿಂದ ಒಂದು ಒಳ್ಳೆ ನೋಟ:


ಕಾಣಿಸ್ತಿದೆಯಲ್ಲಪ್ಪ, ಮೊದಮೊದಲ ಹಿಮನದಿ (ಗ್ಲೇಶಿಯರ್)!


ವಿಟ್ಟಿಯರ್ ಬಂದಾಯ್ತು. ಇನ್ನೇನು ಹಡಗು ಹತ್ತಿ ಹೋಗೋದೇ:


ಬ್ಲ್ಯಾಕ್ ಸ್ಟೋನ್ ಬೇ ನಲ್ಲಿ ದೋಣಿ ಭರ್ರಂತ ಹೊರಟಿದೆ:


ಹೆಸರೇನೋ ಕಪ್ಪುಕಲ್ಲು ಕೊಲ್ಲಿ (Black Stone bay) ಅಂತ, ಆದ್ರೆ ನೀರು ಒಳ್ಳೇ ಪಚ್ಚೆ ಬಣ್ಣ!

ಅರರೆ! ಇಲ್ಲಿ  ನೀರಂತೂ ಅಚ್ಚ ನೀಲಿ ಬಣ್ಣಕ್ಕೆ ತಿರುಗಿದೆಯಲ್ಲಪ್ಪ!

ಹಿಮನದಿಯ ಹತ್ತಿರಕ್ಕೇ ಬಂದಾಯ್ತು! ತೇಲುತ್ತಿರುವ ಮಂಜುಗಡ್ಡೆಯ ತುಂಡುಗಳನ್ನ ನೋಡಿ:

ಹಿಮನದಿ ಕರಗಿ ನೀರಾಗಿ ಜಲಪಾತವಾಗುವ ಧಾರೆ:


ಹಿಮನದಿಯಡಿಯಲಿ ಗುಹೆಯಿಂದ , ಹರಿದಿದೆ ನೀರು ಚೆಲುವಿಂದ ...

ಮರುದಿನ, ಮೂಸ್ ಪಾಸ್ ನಲ್ಲಿ ಮಾಡೋಣ ಸ್ವಲ್ಪ ಮೋಜು!


 ಒಂದೇ ಕೈಯಳತೆ, ಗ್ಲೇಸಿಯರ್ ಗೆ! ಪುಟಾಣಿ ವಿಮಾನದಲ್ಲಿ ಹಾರಾಟ:ಲೇಕ್ ಲುಯಿ ಲಾಡ್ಜ್ , ಗ್ಲ…

ಹಾಳು ಮದನನಿಗೊಂದು ಧಿಕ್ಕಾರ

ಎರಡು ಕನಸು, ಬಂಧನ ಮೊದಲಾದ ಕನ್ನಡ ಚಲನಚಿತ್ರಗಳನ್ನು ನೋಡಿ ಪಳಗಿರುವವರಿಗೆ,  ಪ್ರೇಮ ತ್ರಿಕೋನಗಳೇನು ಹೊಸದಲ್ಲ. ಆದರೆ, ಪ್ರೇಮ ಚೌಕ , ಪ್ರೇಮ ಪಂಚಕೋನಗಳನ್ನ ಕಂಡಿದ್ದೀರ?  ಇಲ್ಲಿದೆ ನೋಡಿ ಅಂತಹದ್ದೊಂದು ಪ್ರಸಂಗ:

ನಾನವಳ  ಬಿಡದೆಲೇ ನೆನೆಯುತಿರಲು
ಒಟ್ಟು ಕಡೆಗಣಿಸಿಹಳಲ್ಲ ನನ್ನನವಳು;

ಅವಳು ಬಯಸಿಹಳಲ್ಲ ಮತ್ತೊಬ್ಬ ನಲ್ಲನನು
ಆವನ ಮನ ಸೆಳೆದಾಕೆ  ಬೇರೊಬ್ಬಳು.

ಇತ್ತ ಕಡೆ ಚಡಪಡಿಸಿ ನನಗೋಸ್ಕರ
ಸುರುಟಿ ಹೋಗಿಹಳಲ್ಲ ಮತ್ತೋರ್ವಳು

ಹಾ ! ಇರಲಿ ಧಿಕ್ಕಾರ ಅವನಿಗೂ ಅವಳಿಗೂ
ಹಾಳು ಮದನಗು ಮತ್ತೆ ಇವಳಿಗೂ ನನಗೂ!

ಸಂಸ್ಕೃತ ಮೂಲ  (ಭರ್ತೃಹರಿಯ ನೀತಿಶತಕ -೨ ):

ಯಾಮ್ ಚಿಂತಯಾಮಿ ಸತತಂ ಮಯಿ ಸಾ ವಿರಕ್ತಾ
ಸಾಪ್ಯನ್ಯಮಿಚ್ಛತಿ ಜನಂ ಸ ಜನೋಽನ್ಯಸಕ್ತಃ
ಅಸ್ಮತ್ಕೃತೇ ಚ ಪರಿಶುಷ್ಯತಿ  ಕಾಚಿದನ್ಯಾ
ಧಿಕ್ ತಾಮ್ ಚ ತಮ್ ಚ ಮದನಮ್ ಚ ಇಮಾಮ್ ಚ ಮಾಮ್ ಚ ||

याम् चिन्तयामि सततम् मयि सा विरक्ता
साप्यन्यमिच्छति जनम् स जनो.अन्यसक्तः।
अस्मत्क्रिते च परिशुष्यति काचिदन्या
धिक् ताम् च तम् च मदनम् च इमाम् च माम् च॥

ಹೊಸತಲೆಮಾರಿನ ನಿರ್ದೇಶಕರಾದ  ಯೋಗರಾಜ ಭಟ್ಟರು ತಮ್ಮ  "ಮನಸಾರೆ" ಚಲನಚಿತ್ರದಲ್ಲಿ ಬಹಳ ಹಳೆ ತಲೆಮಾರಿನ ಈ ಪದ್ಯವನ್ನು ನೇರವಾಗಿ ಭಟ್ಟಿ ಇಳಿಸಿ, ಆ ಚಿತ್ರದಲ್ಲೊಂದು ಪ್ರಸಂಗಗನ್ನು ಹೆಣೆದಿರುವುದು, ಆ ಚಿತ್ರವನ್ನೂ ನೋದಿದ್ದವರಿಗೆ ನೆನಪಾದರೂ ನೆನಪಾಗಬಹುದು!

-ಹಂಸಾನಂದಿ

ಕೊ: ಇದು ಭರ್ತೃಹರಿಯ ಜೀವನದಲ್ಲಿ …

ವ್ಯತ್ಯಾಸ

ಹಿಗ್ಗುತ ಕಾಲವ ಕಳೆಯುವರು
ಕಬ್ಬ-ಕಲಿಕೆಯಲಿ ತಿಳಿದವರು
ಕೆಟ್ಟ ಚಟಗಳಲಿ ಜಗಳದಲಿ
ಮತ್ತೆ ನಿದ್ದೆಯಲಿ ಕಡುಮೂಳರು


ಸಂಸ್ಕೃತ ಮೂಲ:

ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಮ್
ವ್ಯಸನೇನ ಚ ಮೂರ್ಖಾನಾಂ ನಿದ್ರಯಾ ಕಲಹೇನ ವಾ

काव्यशास्त्रविनोदेन कालो गच्छति धीमताम् ।
व्यसनेन च मूर्खाणां निद्रया कलहेन वा ॥

-ಹಂಸಾನಂದಿ

ಸಮಸ್ಯಾ ಪೂರಣ: ಗುಳು ಗುಗ್ಗುಳು ಗುಗ್ಗುಳೂ

ಕವಿತೆಯಲ್ಲಿ ಸಮಸ್ಯಾಪೂರಣದ ಬಗ್ಗೆ ನೀವು ಕೇಳೇ ಇರಬಹುದು. ಹಿಂದೆ ನಾನೂ ಕೂಡ ಒಂದೆರಡು ಬಾರಿ ಇದರ ಬಗ್ಗೆ ಬರೆದಿದ್ದೆ ಕೂಡ. ಪದ್ಯದ ಒಂದು ಸಾಲನ್ನು ಕೊಟ್ಟು ಉಳಿದ ಸಾಲುಗಳನ್ನು ತುಂಬಿಸುವುದು ಇದರ ಉದ್ದೇಶ. ಈಚೀಚೆಗೆ ಪದ್ಯಪಾನ ದಲ್ಲಿ ಬರುವ ಈ ರೀತಿ ಪಾದಪೂರಣದ ಸಮಸ್ಯೆಗಳನ್ನ ಓದುತ್ತಿರುತ್ತೇನೆ.  ಬಹಳ ಆಸಕ್ತಿ ಹುಟ್ಟಿಸುವಂತಿರುತ್ತವೆ. ಆದರೆ ಇಂತಹದ್ದನ್ನು ಬಿಡಿಸುವುದಕ್ಕಿನ್ನಷ್ಟು ಕೈ ಪಳಗಬೇಕು, ಬಿಡಿ.


ಕಂತಿ ಹಂಪನದೆಂದು ಪ್ರಸಿದ್ಧವಾದ, ಕಾಳಿದಾಸನದ್ದೆಂದು ಹೇಳಲಾದ ಈ ರೀತಿಯ ಹಲವು ಸಮಸ್ಯೆಗಳಿವೆ. ಅದರಲ್ಲೊಂದು "ಗುಳು ಗುಗ್ಗುಳು ಗುಗ್ಗುಳೂ" ಅನ್ನುವುದು. ಕಾಳಿದಾಸನದೆಂದೇ ಹೇಳಲಾಗುವ  ಠಾಠಂಠಠಂ ..,"ಕ ಖ ಗ ಘ.." ಇದರ ಜಾತಿಯದ್ದೇ ಈ ಸಮಸ್ಯೆ ಅಂದರೆ ತಪ್ಪಿಲ್ಲ. ಅಂದರೆ, ಅರ್ಥವಿಲ್ಲದ ಒಂದು ಸಾಲನ್ನು ತೆಗೆದುಕೊಂಡು ಪದ್ಯ ಪೂರ್ತಿ ಮಾಡುವಂತಹದ್ದು,

ಈ ಪ್ರಶ್ನೆ ಭೋಜ ಕೇಳಿದನಂತೆ. ಆಸ್ಥಾನ ಪಂಡಿತರಿಗೂ ರಾಜ ಕೊಟ್ಟ ಸಮಸ್ಯೆ ಬಿಡಿಸಿದರೆ ಮಾನ ಬಹುಮಾನಗಳು ಸಿಗುವ ಆಸೆ ಇದ್ದೇ ಇರಬಹುದು. ಆದರೆ ಇಂತಹ ಅರ್ಥವಿಲ್ಲದ ಸಾಲಿಗೆ ಪದ್ಯ ಹೊಸೆಯಬಲ್ಲವನು ಕಾಳಿದಾಸನಂತಹವನೇ ಅಲ್ಲವೆ? ಅವನು ಮಾಡಿದ ಪದ್ಯ ಪೂರಣ ಹೀಗಿತ್ತಂತೆ:

ಸಂಸ್ಕೃತ ಮೂಲ (ಭೋಜ ಪ್ರಬಂಧದಿಂದ):

ಜಂಬೂ ಫಲಾನಿ ಪಕ್ವಾನಿ
ಪತಂತಿ   ವಿಮಲೇ ಜಲೇ
ಕಪಿ ಕಂಪಿತ ಶಾಖಾಭ್ಯಾಂ
ಗುಳುಗುಗ್ಗುಳು ಗುಗ್ಗುಳೂ ||

ಹಾಗಂದರೆ ತಿಳಿಗನ್ನಡದಲ್ಲಿ:

ಅಲುಗಾಡಿಸಿ ಕಪಿ ರೆಂಬೆಗಳ
ಕಳಿತ…

ತರುಣಿಯರ ಬೆಡಗು

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ
ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ
ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ
ಚಿಗರೆಗಣ್ಣಿಯರಲ್ಲದಾವ    ಸೊಗಸಿರದು?


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):

ಸ್ಮಿತಂ ಕಿಂಚಿದ್ವಕ್ತ್ರೇ  ಸರಲತರಲೋ  ದೃಷ್ಟಿ    ವಿಭವಃ
ಪರಿಸ್ಪಂದೋ ವಾಚಾಮಾಭಿನವ  ವಿಲಾಸೋಕ್ತಿ ಸರಸ: |
ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ
ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ ||


स्मित-किञ्चिन्-मुग्धं सरल-तरलो दृष्टि-विभवः परिस्पन्दो वाचाम् अभिनव-विलासोक्ति-सरसः | गतानाम् आरम्भः किसलयित-लीला-परिकरः स्पृशन्त्यास्तारुण्यं किम् इव न हि रम्यं मृगदृशः||

-ಹಂಸಾನಂದಿ

ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ.

ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು.


ಹಮ್ಮು ತೊರೆದವಳು

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು ನಲ್ಲ ಕಣ್ಣೆದುರಲ್ಲಿ  ಬಂದಮೇಲೀತರಳೆ ಸೆಡವೆಂತು ತೋರಿಯಾಳು?  

ಸಂಸ್ಕೃತ ಮೂಲ (ಅಮರುಕನ ಅಮರು ಶತಕ, ಪದ್ಯ-೨೮):
ಭ್ರೂಭಂಗೇ ರಚಿತೇಽಪಿ ದೃಷ್ಟಿರಧಿಕಮ್ ಸೋಽತ್ಕಂಠಂ ಉದ್ವೀಕ್ಷ್ಯತೇ ರುದ್ಧಾಯಾಮಪಿ ವಾಚಿ ಸಸ್ಮಿತಮಿದಮ್ ದಗ್ಧಾನನಮ್ ಜಾಯತೇ | ಕಾರ್ಕಶ್ಯಂ ಗಮಿತೇಽಪಿ ಚೇತಸಿ ತನುಃ  ರೋಮಾಂಚಮಾಲಂಬತೇ ದೃಷ್ಟೇ ನಿರ್ವಹಣಮ್ ಭವಿಷ್ಯತಿ ಕಥಮ್ ಮಾನಸ್ಯ ತಸ್ಮಿನ್ ಜನೇ ||
-ಹಂಸಾನಂದಿ

ಎದೆಯಲ್ಲಿರುವನಲ್ಲ

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ?

ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು!
ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು  ಬೆದರುಮೊಗದಲ್ಲೀಕೆ  ಮರುನುಡಿಯುತಿಹಳು 
ಮೆಲ್ಲ ನುಡಿ ಸಖಿ ನೀನು! ಕೇಳಿಬಿಟ್ಟಾನವನು ನಲ್ಲ ನೆಲೆನಿಂತಿರುವನೆನ್ನ ಎದೆಯಲ್ಲೆ! 

ಸಂಸ್ಕೃತ ಮೂಲ (ಅಮರುಶತಕ -೭೦):
ಮುಗ್ಧೇ ಮುಗ್ಧತಾಯೈವ ನೇತುಮಖಿಲಃ ಕಾಲಃ ಕಿಮಾರಭ್ಯತೇ ಮಾನಂ ಧತ್ಸ್ವ ಧೃತಿಮ್ ಬಾಧನ ಋಜುತಂ ದೂರೇ ಕುರು ಪ್ರೇಯಸಿ | ಸಖ್ಯೈವಂ ಪ್ರತಿಬೋಧಿತಾ ಪ್ರತಿವಚಸ್ತಾಮಾಹ ಭೀತಾನನಾ ನೀಚೈಃ ಶಂಸ ಹೃದಿ ಸ್ಥಿತೋ ಹಿ ನನು ಮೇ ಪ್ರಾಣೇಶ್ವರಃ ಶ್ರೋಸ್ಯತಿ ||
-ಹಂಸಾನಂದಿ

ಕೊ: ಇದಕ್ಕೆ ತಲೆಬರಹ ಕೊಡುವುದಕ್ಕೆ ತಿಣುಕಾಡುತ್ತಿದ್ದಾಗ, ಸಲಹೆ ನೀಡಿದ ಗೆಳೆಯ ಅನಿಲ್ ಜೋಶಿ ಅವರಿಗೆ ಧನ್ಯವಾದಗಳು.

ಬರಡು ಮಾತುಗಳು

ಬಣ್ಣದಲದೆಷ್ಟು ಸೊಗಸಾಗಿದ್ದರು
ಕಂಪಿಲ್ಲದ ಹೂವಿಗೆ ಕಳೆಯಿಲ್ಲ;
ಮಾತುಗಳೆಷ್ಟು ಸವಿಯಾಗಿದ್ದರು
ಉಜ್ಜುಗಿಸದಿದ್ದರೆ ಬೆಲೆಯಿಲ್ಲ!

ಸಂಸ್ಕೃತ ಮೂಲ:

ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ
ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ ತಥಾ

-ಹಂಸಾನಂದಿ

ಪಾಡ್ಯದ ಚಂದಿರ

Image
ಹೊತ್ತು ಮುಳುಗಿತು ಸಂಜೆಯಾಯಿತು
ಮತ್ತೆ ಪೂರ್ವದಿ ಬಂದು ಚಂದಿರ
ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
ಚಿತ್ತವಿನ್ನದರಿಂದ ಬೇರೆಡೆ
ಯೆತ್ತ ಪೋಪುದು? ಬಾನ ಹೆಣ್ಣಿನ
ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!

- ಹಂಸಾನಂದಿ
ಕೊ: ಚಿತ್ರ ಕೃಪೆ - http://sandersonthird.blogspot.com/2010/11/beaver-moon.html

ಕೊ.ಕೊ: ಇಲ್ಲಿ ಪಾಡ್ಯಮಿ ಎಂದು ಹೇಳಲು ವಿಶೇಷ ಕಾರಣವಿದೆ. ಹುಣ್ಣಿಮೆಯ ಮರುದಿನ ಕೃಷ್ಣ ಪಕ್ಷದ ಪಾಡ್ಯದ ಚಂದ್ರನು ನೋಡಲು ಸರಿಸುಮಾರು ಹುಣ್ಣಿಮೆಯ ಚಂದ್ರನಷ್ಟೇ ದೊಡ್ಡದಾಗಿದ್ದು, ಸೂರ್ಯ ಮುಳುಗಿ ೪೦-೪೫ ನಿಮಿಷಗಳ ನಂತರ ಹುಟ್ಟುತ್ತಾನೆ (ಹುಣ್ಣಿಮೆಯ ಚಂದಿರನು ಸೂರ್ಯಾಸ್ತದ ಹೊತ್ತಿಗೇ ಹುಟ್ಟುತ್ತಾನೆ), ಹಾಗಾಗಿ ಪಾಡ್ಯಮಿಯಂದು ಚಂದ್ರ ಹುಟ್ಟುವ ವೇಳೆಗೆ ಸ್ವಲ್ಪ ಕತ್ತಲು ಹೆಚ್ಚಾಗಿದ್ದು, ಮೂಡಣ ದಿಕ್ಕಿನಲ್ಲಿ ಚಂದಿರನ ಸೊಬಗು ಇನ್ನೂ ಹೆಚ್ಚಾಗಿ ಕಾಣುತ್ತದೆ. ಅದಕ್ಕಾಗಿಯೇ, ನಾನು ಹುಣ್ಣಿಮೆಯ ಚಂದ್ರನ ಬದಲು ಪಾಡ್ಯದ ಚಂದ್ರನನ್ನು ಬಾನ ಹೆಣ್ಣಿನ ಕುತ್ತಿಗೆಯ ಪದಕವನ್ನಾಗಿಸಿದ್ದೇನೆ.

ಕೊ,ಕೊ.ಕೊ: ಇದು ಪದ್ಯಪಾನದಲ್ಲಿ  "Rin", "Win", "Bun" ಮತ್ತು  "Sun" ಈ ಪದಗಳನ್ನು ಬಳಸಿ, ಚಂದ್ರೋದಯವನ್ನು ವರ್ಣಿಸಿ ಎಂದು ಕೊಟ್ಟಿದ್ದ ಪ್ರಶ್ನೆಗೆ ನಾನು ಉತ್ತರವಾಗಿ ಬರೆದ  ಭಾಮಿನಿ ಷಟ್ಪದಿಯ ಒಂದು ಪದ್ಯ. ಸಂಜೆ , ಬಂದು, ಚಿತ್ತವಿನ್ನದರಿಂದ - ಈ ಪದಗಳನ್ನು ಗಮನಿಸಿ.

ಹಿತ ವಸಂತ

ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ!  ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ ಕೆಡಿಸ್ಕೊಳ್ಳೋದಕ್ಕಿಂದ ಇಬ್ಬರೋ ಮೂವರೋ ಸೇರಿದರೆ ವಾಸಿ ಅನ್ನೋದನ್ನ ನಾವೆಲ್ಲ ಕಂಡುಕೊಂಡೇ ಇರ್ತೀವಿ.

ಮೊನ್ನೆ ಹಾಗೇ ಆಯಿತು. ಯಾವುದೋ ಪುಸ್ತಕವನ್ನೋದುತ್ತಿದ್ದಾಗ ಅದರಲ್ಲಿ ಕಾಳಿದಾಸನ ಒಂದು ಪದ್ಯದ ಪ್ರಸ್ತಾಪ ಇತ್ತು. ಋತು ಸಂಹಾರದ (೬-೨) ಈ ಕೆಳಗಿನ  ಪದ್ಯ ಓದಿದ ಕೂಡಲೆ ಮನಸ್ಸಿಗೆ ಒಮ್ಮೆಗೇ ನೆಟ್ಟುಬಿಟ್ಟಿತು.

ದ್ರುಮಾಃ ಸಪುಷ್ಪಾಃ ಸಲಿಲಂ ಸಪದ್ಮಂ
ಸ್ತ್ರಿಯಾ ಸಕಾಮಾಃ ಪವನಃ ಸುಗಂಧಿಃ
ಸುಖಾಃ ಪ್ರದೋಷಾ ದಿವಸಾಸ್ಚ ರಮ್ಯಾ
ಸರ್ವಂ ಪ್ರಿಯೇ ಚಾರುತರಂ ವಸಂತೇ

ಕಾಳಿದಾಸನ ಕವಿತೆ ಅಂದರೆ ಮನಸ್ಸಿಗೆ ಹಿತವನ್ನೂ ಕಿವಿಗೆ ಮುದವನ್ನೂ ನೀಡುವಂತದ್ದು. ಒಮ್ಮೆ ಓದಿದರೆ ಮನಸ್ಸಿನಲ್ಲಿಯೇ ಮೊಳಗತೊಡಗುವುದು ಸಹಜ.  ಹೀಗಾದಾಗಲೆಲ್ಲ ಒಮ್ಮೊಮ್ಮೆ ನಾನು ಅಂತಹ ಪದ್ಯವನ್ನ ಕನ್ನಡಿಸುವ ಯತ್ನವನ್ನು ಮಾಡ್ತೇನೆ. ಇದನ್ನೂ ಸರಿ, ಮಾಡೋಣವೆಂದು ಅವತ್ತೂ ಹಾಗೇ ಮಾಡಹೊರಟರೆ ಹಾಳಾದ್ದು, ಕಡೆಯ ಸಾಲಿನಲ್ಲಿ ಪ್ರಾಸಕ್ಕೆ ಸರಿಯಾದ ಒಂದು ಪದ ಹೊಳೆಯಲಾರದೇ ಹೋಯ್ತು.

ಗಾದೆ ಸುಳ್ಳಾದರೂ, ವೇದ ಸುಳ್ಳಾದರೂ, ದಾಸವಾಣಿ ಸುಳ್ಳಲ್ಲ ಬಿಡಿ. ಉತ್ತಮರ ಸಂಗ*ವಿರುವ ನಾನು ಚಿಂತೆ ತಾನೇ ಯಾಕೆ ಮಾಡಲಿ? ಗೆಳೆಯ ಜೀವೆಂ ಅವರಿಗೆ ಮಿಂಚಿಸಿದೆ - ಸ್ವಲ್ಪವೇ ಹೊತ್…

ನಾಲ್ಕು ವಾದ್ಯಗಳು ಒಬ್ಬಳು ಹಾಡುಗಾರ್ತಿ

Image
ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು" ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ.  ಅಷ್ಟೇ.

ಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು ತಿಳಿದು ಹಾಡುವುದಿಲ್ಲ ಅಂತ ಒಂದು ದೂರು ಯಾವಾಗಲೂ ಕೇಳಿಬರುವುದುಂಟು. ಬೇರೆ ಬೇರೆ ಭಾಷೆಯ ಹಾಡುಗಳನ್ನು ಹಾಡುವಂತಹ ಪರಿಪಾಠವಿರುವಾಗ, ತಮಗೆ ತಿಳಿಯದ ಭಾಷೆಯಲ್ಲಿರುವ ಹಾಡುಗಳೆಲ್ಲವನ್ನೂ ಅರ್ಥ ತಿಳಿದು ಹಾಡುವುದಾದರೂ ಹೇಗೆ ಅಂತ ಇದಕ್ಕೊಂದು ಮರುಪ್ರಶ್ನೆ ಹಾಕುವವರಿದ್ದಾರೆ. ಅಲ್ಲದೆ, ಇನ್ನೊಂದು ಕಡೆ ಸಂಗೀತದಲ್ಲಿ ಸಾಹಿತ್ಯವು ಮೇಲುಗೈಯಾಗಿರುವ ಅಗತ್ಯವಿಲ್ಲ ಅನ್ನುವ  ಅಭಿಪ್ರಾಯವೂ ಇದೆ. ವಾದ್ಯ ಸಂಗೀತದಲ್ಲಿ ’ಮಾತು’ ಇರದಿದ್ದರಿಂದ ಹಲವು ಕಲಾವಿದರು ಈಚೆಗೆ ಯಾವ ಹಾಡಿಗೂ ಕಟ್ಟುಬೀಳದೆ, ಕೇವಲ ವಾದ್ಯ ಸಂಗೀತಕ್ಕೆಂದೇ ರಚಿಸಿರುವ ರಚನೆಗಳೂ ಇವೆ.

ಸಂಗೀತ ಕಚೇರಿಗಳಲ್ಲಿ ಯಾವುದಾದರೊಂದು ಕೃತಿಯನ್ನು ವಿಸ್ತಾರವಾಗಿ ಹಾಡಲು ತೆಗೆದುಕೊಂಡಾಗ,  ಒಂದು ಸಾಲನ್ನೇ ಮತ್ತೆ ಮತ್ತೆ ಮರಳಿ ಮರಳಿ ಹಾಡುತ್ತ, ಅದರ ಸಂಗೀತ ಸಾಧ್ಯತೆಗಳನ್ನು ಹೆಚ್ಚಿಸುವ ಒಂದು ವಿಧಾನಕ್ಕೆ ನೆರವಲು ಎಂದು ಹೆಸರು. ಮತ್ತೆ ಮತ್ತೆ ಹಾಡುವಂತಹ ಈ ಸಾಲನ್ನು ತೆಗೆದುಕೊಳ್ಳುವಾಗಲಾದರೂ ಕಲಾವಿದರು ಸಾಹಿತ್ಯಕ್ಕೆ ಸ್ವಲ್ಪ ಹೆಚ್ಚಿನ ಗಮನವಿತ್ತರೆ ಒಳ್ಳಿತು ಅನ್ನುವುದು ಒಬ್ಬಬೇಕಾದ್ದ ಮಾತು. ಇಲ್ಲದಿದ್ದರೆ ಹಾಡು ಅರ್ಥವಾಗುವುದು…

ಗೆಳೆಯನಿಗೊಂದು ಸಲಹೆ

Image
ಸಲ್ಲದೀ ನಡವಳಿಕೆ ನೇಹಿಗ!
ಇಲ್ಲದಿಹ ಬೇಸರದ ಸೋಗಿನ
ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ?
ಮೆಲ್ಲ ಯೋಚಿಸು ಮತ್ತೆ ಜೀವನ
ದಲ್ಲಿ ಒಂಟಿಯ ದಾರಿ ಸೊಗಸಿರ
ದೆಲ್ಲರೊಳಗೊಂದಾಗಬೇಕೆಂಬನುಡಿ ಮರೆತಿಹೆಯಾ?

 -ಹಂಸಾನಂದಿ

 ಚಿತ್ರಕೃಪೆ: ಪದ್ಯಪಾನ

ನಾ ನಿನ್ನೊಳನ್ಯ ಬೇಡುವುದಿಲ್ಲ

Image
ನಿನ್ನಡಿಗಳಲೆ ಮನವು ನಿಂತಿಹು
-ದಿನ್ನು ಕೊಂಡಾಡಿಹುದು ನಾಲಗೆ
ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ;
ನಿನ್ನ ಪೂಜೆಯ ಮಾಳ್ಪ ಕೈಗಳು
ನಿನ್ನ ನೆನಹಲೆ ಬುದ್ಧಿ ಕಣ್ಣಿರ-
ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ!


ಸಂಸ್ಕೃತ ಮೂಲ (ಆದಿ ಶಂಕರರ  ಶಿವಾನಂದ ಲಹರಿ, ಶ್ಲೋಕ ೭):

ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ |
ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ||


ಈ ಹಿಂದೆ ನಾನು ಮಾಡಿರುವ ಶಂಕರಾಚಾರ್ಯರ ಕೆಲವು ಶ್ಲೋಕಗಳ ಅನುವಾದಗಳನ್ನು ಇಲ್ಲಿ ಚಿಟಕಿಸಿ ಓಡಬಹುದು
ಶಿವನ ಪೂಜೆಯ ಹೂ
ಲಕುಮಿಯ ನೋಟ
ಸಿರಿಯ ನೋಟ
ಭಕ್ತಿ
ಅರಿವೆಂಬ ಕಣ್ಣು
ಶಿವರಾತ್ರಿಗೊಂದು ಶಿವಸ್ತುತಿ


-ಹಂಸಾನಂದಿ

ಕೊ: ಇವತ್ತು ವೈಶಾಖ ಶುದ್ಧ ಪಂಚಮಿ - ಶಂಕರ ಜಯಂತಿ ; ಕ್ರಿ.ಶ:೭೮೮ ರಲ್ಲಿ ಆದಿಶಂಕರರು ಹುಟ್ಟಿದ ದಿವಸ. ಹಾಗಾಗಿ ಅವರ ಒಂದು ಪದ್ಯವನ್ನು  ಹೊಸದಾಗಿ  ಅನುವಾದಿಸಬೇಕೆನ್ನಿಸಿತು. ಅದಕ್ಕಾಗಿ ಈ ಷಟ್ಪದಿ.

ಕೊ.ಕೊ: ನಾ ನಿನ್ನೊಳನ್ಯ ಬೇಡುವುದಿಲ್ಲ  (ನಾ ನಿನಗೇನು ಬೇಡುವುದಿಲ್ಲ ಅನ್ನುವ ಪಾಠಾಂತರವೂ ಇದೆ) ಅನ್ನುವುದು ಶ್ರೀಪಾದರಾಯರ ಒಂದು ಪ್ರಸಿದ್ಧ ರಚನೆ. ಅದರ ಚರಣಗಳಲ್ಲಿ ಬರುವ ಭಾವಕ್ಕೂ, ಈ ಪದ್ಯದ ಭಾವಕ್ಕೂ ಬಹಳ ಹೋಲಿಕೆ ಕಂಡಿದ್ದರಿಂದ ಆ ತಲೆಬರಹ ಕೊಟ್ಟಿರುವೆ.
ಎರಡು ಕಿವಿಮಾತುಗಳು

Image
ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ?

ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ.

ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಳು?  ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ!

ಪ್ರೀತಿಯಿಂದ ಚೆನ್ನಿಗನಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತಿರೆ ನೀನದೆಂತಹ ದೇವನಾಗುವೆಯೊ? ಎಳೆಯ ಮನಸಿಗೆ ಘಾಸಿ ಮಾಡಿ ಹ ದುಳವ  ನೀಗಿಹೆ ಚೆನ್ನ ಬೇಗನೆ  ಕಳೆಯಲಿಕೆ ಬಾ ಮುಗುದೆ ಮನಸಿನ ದುಗುಡವೆಲ್ಲವನು! 
ಚೆನ್ನಿಗನ ಬಗ್ಗೆ ರೋಸಿ ಹೋಗಿ, ಶುಕಭಾಷಿಣಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ
ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತವನಾವ ದೇವನದೆಂಥ ಚೆನ್ನಿಗನು?
ಎಳೆಯ ಜೀವವ ನೋಯಿಸುತ್ತ ಹ
-ದುಳವ ನೀಗಿಹನಲ್ತೆ! ಕೇಡಿ ದು
-ರುಳನ ನೆನಹನು ತೊರೆದು ನೆಮ್ಮದಿ ಗಳಿಸು ನೀ ಹೆಣ್ಣೆ !

-ಹಂಸಾನಂದಿ

ಕೊ: ಇದು ಈ ವಾರ ಪದ್ಯಪಾನದಲ್ಲಿ ಕೊಟ್ಟ ಚಿತ್ರಕವಿತೆಗೆ ನಾನು ಬರೆದ ಉತ್ತರ