Posts

Showing posts from April, 2012

ನಾ ನಿನ್ನೊಳನ್ಯ ಬೇಡುವುದಿಲ್ಲ

Image
ನಿನ್ನಡಿಗಳಲೆ ಮನವು ನಿಂತಿಹು
-ದಿನ್ನು ಕೊಂಡಾಡಿಹುದು ನಾಲಗೆ
ಎನ್ನ ಕಿವಿಗಳು ಕೇಳ್ವುದೆಂದಿಗು ನಿನ್ನ ಕಥೆಗಳನೇ;
ನಿನ್ನ ಪೂಜೆಯ ಮಾಳ್ಪ ಕೈಗಳು
ನಿನ್ನ ನೆನಹಲೆ ಬುದ್ಧಿ ಕಣ್ಣಿರ-
ಲಿನ್ನು ಹೊತ್ತಿಗೆಯಾಸರೆಯ ನಾ ತೊರೆವೆ ಪರಶಿವನೇ!


ಸಂಸ್ಕೃತ ಮೂಲ (ಆದಿ ಶಂಕರರ  ಶಿವಾನಂದ ಲಹರಿ, ಶ್ಲೋಕ ೭):

ಮನಸ್ತೇ ಪಾದಾಬ್ಜೇ ನಿವಸತು ವಚಃ ಸ್ತೋತ್ರಫಣಿತೌ
ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ |
ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ
ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತಃ ||


ಈ ಹಿಂದೆ ನಾನು ಮಾಡಿರುವ ಶಂಕರಾಚಾರ್ಯರ ಕೆಲವು ಶ್ಲೋಕಗಳ ಅನುವಾದಗಳನ್ನು ಇಲ್ಲಿ ಚಿಟಕಿಸಿ ಓಡಬಹುದು
ಶಿವನ ಪೂಜೆಯ ಹೂ
ಲಕುಮಿಯ ನೋಟ
ಸಿರಿಯ ನೋಟ
ಭಕ್ತಿ
ಅರಿವೆಂಬ ಕಣ್ಣು
ಶಿವರಾತ್ರಿಗೊಂದು ಶಿವಸ್ತುತಿ


-ಹಂಸಾನಂದಿ

ಕೊ: ಇವತ್ತು ವೈಶಾಖ ಶುದ್ಧ ಪಂಚಮಿ - ಶಂಕರ ಜಯಂತಿ ; ಕ್ರಿ.ಶ:೭೮೮ ರಲ್ಲಿ ಆದಿಶಂಕರರು ಹುಟ್ಟಿದ ದಿವಸ. ಹಾಗಾಗಿ ಅವರ ಒಂದು ಪದ್ಯವನ್ನು  ಹೊಸದಾಗಿ  ಅನುವಾದಿಸಬೇಕೆನ್ನಿಸಿತು. ಅದಕ್ಕಾಗಿ ಈ ಷಟ್ಪದಿ.

ಕೊ.ಕೊ: ನಾ ನಿನ್ನೊಳನ್ಯ ಬೇಡುವುದಿಲ್ಲ  (ನಾ ನಿನಗೇನು ಬೇಡುವುದಿಲ್ಲ ಅನ್ನುವ ಪಾಠಾಂತರವೂ ಇದೆ) ಅನ್ನುವುದು ಶ್ರೀಪಾದರಾಯರ ಒಂದು ಪ್ರಸಿದ್ಧ ರಚನೆ. ಅದರ ಚರಣಗಳಲ್ಲಿ ಬರುವ ಭಾವಕ್ಕೂ, ಈ ಪದ್ಯದ ಭಾವಕ್ಕೂ ಬಹಳ ಹೋಲಿಕೆ ಕಂಡಿದ್ದರಿಂದ ಆ ತಲೆಬರಹ ಕೊಟ್ಟಿರುವೆ.
ಎರಡು ಕಿವಿಮಾತುಗಳು

Image
ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ?

ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ.

ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಳು?  ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ!

ಪ್ರೀತಿಯಿಂದ ಚೆನ್ನಿಗನಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತಿರೆ ನೀನದೆಂತಹ ದೇವನಾಗುವೆಯೊ? ಎಳೆಯ ಮನಸಿಗೆ ಘಾಸಿ ಮಾಡಿ ಹ ದುಳವ  ನೀಗಿಹೆ ಚೆನ್ನ ಬೇಗನೆ  ಕಳೆಯಲಿಕೆ ಬಾ ಮುಗುದೆ ಮನಸಿನ ದುಗುಡವೆಲ್ಲವನು! 
ಚೆನ್ನಿಗನ ಬಗ್ಗೆ ರೋಸಿ ಹೋಗಿ, ಶುಕಭಾಷಿಣಿಗೊಂದು ಕಿವಿಮಾತು :
ಹೊಳೆವ ಕಂಗಳ ಚೆಲುವೆ ಬಣ್ಣದ
ಗಿಳಿಯ ಕೈಯಲಿ ಹಿಡಿದ ಸೊಬಗಿಯಿ-
ವಳನು ಮರೆತವನಾವ ದೇವನದೆಂಥ ಚೆನ್ನಿಗನು?
ಎಳೆಯ ಜೀವವ ನೋಯಿಸುತ್ತ ಹ
-ದುಳವ ನೀಗಿಹನಲ್ತೆ! ಕೇಡಿ ದು
-ರುಳನ ನೆನಹನು ತೊರೆದು ನೆಮ್ಮದಿ ಗಳಿಸು ನೀ ಹೆಣ್ಣೆ !

-ಹಂಸಾನಂದಿ

ಕೊ: ಇದು ಈ ವಾರ ಪದ್ಯಪಾನದಲ್ಲಿ ಕೊಟ್ಟ ಚಿತ್ರಕವಿತೆಗೆ ನಾನು ಬರೆದ ಉತ್ತರ

ಇಷ್ಟು ದೊರಕಿದರೆ ....

ಇರುವುದೇ ಮುಗಿತಾಯ ಮನದಾಸೆಗಳಿಗಿಲ್ಲಿ
ವರುಷ ಕಳೆದಿರಲೇನು ಸಾವಿರವೊ ಲಕ್ಷ ?
ನೆರವೇರಿರಲು ಒಮ್ಮೆ ಬಯಕೆಗಳ ಸಾಲೊಂದು
ಮರಳಿ ಹುಟ್ಟುವುವಲ್ಲ ಮಗದೊಂದು ಸಾಲು!

ಸಂಸ್ಕೃತ ಮೂಲ(ವಿಷ್ಣುಪುರಾಣ, ೪-೨-೧೧೬):

ಮನೋರಥಾನಾಂ ನ ಸಮಾಪ್ತಿರಸ್ತಿ
ವರ್ಷಾಯುತೇನಾಪಿ ತಥಾಬ್ದ ಲಕ್ಷೈಃ ||
ಪೂರ್ಣೇಷು ಪೂರ್ಣೇಷು ಮನೋರಥಾನಾಂ
ಉತ್ಪತ್ತಯಃ ಸಂತಿ ಪುನರ್ನವಾನಾಮ್ ||


-ಹಂಸಾನಂದಿ


ಕೊ: ಬಿನ್ನಹಕೆ ಬಾಯಿಲ್ಲವಯ್ಯ ಅನ್ನುವುದು ಪುರಂದರದಾಸರ, ಕಾಂಭೋಜಿ ರಾಗದಲ್ಲಿ ಹಾಡುವ ಒಂದು ಪ್ರಸಿದ್ಧ ರಚನೆ. ಅದರ  ಕೊನೆಯ ಚರಣ "ಇಷ್ಟುದೊರಕಿದರೆ ಇನ್ನಷ್ಟು ಬೇಕೆಂಬಾಸೆ" ಅನ್ನುವ ಸಾಲು ಈ ಪದ್ಯದ ಹುರುಳಿಗೆ ಬಲು ಹತ್ತಿರವೆನ್ನಿಸಿ ಆ ತಲೆಬರಹ ಕೊಟ್ಟಿದ್ದೇನೆ.

ಕೊ.ಕೊ: ಮೂಲದಲ್ಲಿದ್ದ ಹತ್ತುಸಾವಿರ ವರ್ಷ (ಆಯುತ)ವನ್ನು ನಾನು ಕನ್ನಡದಲ್ಲಿ ಸಾವಿರವಾಗಿಸಿದ್ದೇನೆ. ಇದರಿಂದ ಅರ್ಥಕ್ಕೇನೂ ಹೆಚ್ಚಿನ ಕೊರತೆಯಾಗದೆಂದು ನನ್ನೆಣಿಕೆ.