Posts

Showing posts from May, 2012

ತರುಣಿಯರ ಬೆಡಗು

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ
ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ
ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ
ಚಿಗರೆಗಣ್ಣಿಯರಲ್ಲದಾವ    ಸೊಗಸಿರದು?


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):

ಸ್ಮಿತಂ ಕಿಂಚಿದ್ವಕ್ತ್ರೇ  ಸರಲತರಲೋ  ದೃಷ್ಟಿ    ವಿಭವಃ
ಪರಿಸ್ಪಂದೋ ವಾಚಾಮಾಭಿನವ  ವಿಲಾಸೋಕ್ತಿ ಸರಸ: |
ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ
ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ ||


स्मित-किञ्चिन्-मुग्धं सरल-तरलो दृष्टि-विभवः परिस्पन्दो वाचाम् अभिनव-विलासोक्ति-सरसः | गतानाम् आरम्भः किसलयित-लीला-परिकरः स्पृशन्त्यास्तारुण्यं किम् इव न हि रम्यं मृगदृशः||

-ಹಂಸಾನಂದಿ

ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ.

ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು.


ಹಮ್ಮು ತೊರೆದವಳು

ಇಲ್ಲಿವಳು ಹುಬ್ಬುಗಂಟಿಕ್ಕಿದರು ಕಣ್ಣುಗಳು ಚಡಪಡಿಸಿ ನೋಡುತಿಹವು ಸೊಲ್ಲಡಗಿ ನೊಂದಿದ್ದ ಮೊಗದಲ್ಲಿ ಮುಗುಳುನಗೆ ತಂತಾನೆ ತೋರ್ಪಡುವುದು ಕಲ್ಲೆದೆಯ ಮಾಡಿದರು ಅದರ ಕುರುಹರಿಯದಿಹ ಒಡಲು ನವಿರೇಳುತಿಹುದು ನಲ್ಲ ಕಣ್ಣೆದುರಲ್ಲಿ  ಬಂದಮೇಲೀತರಳೆ ಸೆಡವೆಂತು ತೋರಿಯಾಳು?  

ಸಂಸ್ಕೃತ ಮೂಲ (ಅಮರುಕನ ಅಮರು ಶತಕ, ಪದ್ಯ-೨೮):
ಭ್ರೂಭಂಗೇ ರಚಿತೇಽಪಿ ದೃಷ್ಟಿರಧಿಕಮ್ ಸೋಽತ್ಕಂಠಂ ಉದ್ವೀಕ್ಷ್ಯತೇ ರುದ್ಧಾಯಾಮಪಿ ವಾಚಿ ಸಸ್ಮಿತಮಿದಮ್ ದಗ್ಧಾನನಮ್ ಜಾಯತೇ | ಕಾರ್ಕಶ್ಯಂ ಗಮಿತೇಽಪಿ ಚೇತಸಿ ತನುಃ  ರೋಮಾಂಚಮಾಲಂಬತೇ ದೃಷ್ಟೇ ನಿರ್ವಹಣಮ್ ಭವಿಷ್ಯತಿ ಕಥಮ್ ಮಾನಸ್ಯ ತಸ್ಮಿನ್ ಜನೇ ||
-ಹಂಸಾನಂದಿ

ಎದೆಯಲ್ಲಿರುವನಲ್ಲ

ಬಾಳನೆಲ್ಲವು ನೀನು ಮುಗುದೆತನದಲ್ಲಿಯೇ ಹಾಳು ಮಾಡಲು ಹೊರಟಿರುವೆಯೇಕೆ ಹೆಣ್ಣೆ?

ಬಿಟ್ಟು ನೇರದ ದಾರಿ ತುಸುಸೆಡವು ತೋರಿಸುತ ದಿಟ್ಟೆಯಾಗುವುದಿಂದು ನಿನಗೆ ಬಹು ಒಳಿತು!
ಮುದದಿ ಗೆಳತಿಯು ಹೀಗೆ ಕಿವಿಮಾತು ಹೇಳಿರಲು  ಬೆದರುಮೊಗದಲ್ಲೀಕೆ  ಮರುನುಡಿಯುತಿಹಳು 
ಮೆಲ್ಲ ನುಡಿ ಸಖಿ ನೀನು! ಕೇಳಿಬಿಟ್ಟಾನವನು ನಲ್ಲ ನೆಲೆನಿಂತಿರುವನೆನ್ನ ಎದೆಯಲ್ಲೆ! 

ಸಂಸ್ಕೃತ ಮೂಲ (ಅಮರುಶತಕ -೭೦):
ಮುಗ್ಧೇ ಮುಗ್ಧತಾಯೈವ ನೇತುಮಖಿಲಃ ಕಾಲಃ ಕಿಮಾರಭ್ಯತೇ ಮಾನಂ ಧತ್ಸ್ವ ಧೃತಿಮ್ ಬಾಧನ ಋಜುತಂ ದೂರೇ ಕುರು ಪ್ರೇಯಸಿ | ಸಖ್ಯೈವಂ ಪ್ರತಿಬೋಧಿತಾ ಪ್ರತಿವಚಸ್ತಾಮಾಹ ಭೀತಾನನಾ ನೀಚೈಃ ಶಂಸ ಹೃದಿ ಸ್ಥಿತೋ ಹಿ ನನು ಮೇ ಪ್ರಾಣೇಶ್ವರಃ ಶ್ರೋಸ್ಯತಿ ||
-ಹಂಸಾನಂದಿ

ಕೊ: ಇದಕ್ಕೆ ತಲೆಬರಹ ಕೊಡುವುದಕ್ಕೆ ತಿಣುಕಾಡುತ್ತಿದ್ದಾಗ, ಸಲಹೆ ನೀಡಿದ ಗೆಳೆಯ ಅನಿಲ್ ಜೋಶಿ ಅವರಿಗೆ ಧನ್ಯವಾದಗಳು.

ಬರಡು ಮಾತುಗಳು

ಬಣ್ಣದಲದೆಷ್ಟು ಸೊಗಸಾಗಿದ್ದರು
ಕಂಪಿಲ್ಲದ ಹೂವಿಗೆ ಕಳೆಯಿಲ್ಲ;
ಮಾತುಗಳೆಷ್ಟು ಸವಿಯಾಗಿದ್ದರು
ಉಜ್ಜುಗಿಸದಿದ್ದರೆ ಬೆಲೆಯಿಲ್ಲ!

ಸಂಸ್ಕೃತ ಮೂಲ:

ಕುಸುಮಂ ವರ್ಣಸಂಪನ್ನಂ ಗಂಧಹೀನಂ ನ ಶೋಭತೇ
ನ ಶೋಭತೇ ಕ್ರಿಯಾಹೀನಂ ಮಧುರಂ ವಚನಂ ತಥಾ

-ಹಂಸಾನಂದಿ

ಪಾಡ್ಯದ ಚಂದಿರ

Image
ಹೊತ್ತು ಮುಳುಗಿತು ಸಂಜೆಯಾಯಿತು
ಮತ್ತೆ ಪೂರ್ವದಿ ಬಂದು ಚಂದಿರ
ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
ಚಿತ್ತವಿನ್ನದರಿಂದ ಬೇರೆಡೆ
ಯೆತ್ತ ಪೋಪುದು? ಬಾನ ಹೆಣ್ಣಿನ
ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!

- ಹಂಸಾನಂದಿ
ಕೊ: ಚಿತ್ರ ಕೃಪೆ - http://sandersonthird.blogspot.com/2010/11/beaver-moon.html

ಕೊ.ಕೊ: ಇಲ್ಲಿ ಪಾಡ್ಯಮಿ ಎಂದು ಹೇಳಲು ವಿಶೇಷ ಕಾರಣವಿದೆ. ಹುಣ್ಣಿಮೆಯ ಮರುದಿನ ಕೃಷ್ಣ ಪಕ್ಷದ ಪಾಡ್ಯದ ಚಂದ್ರನು ನೋಡಲು ಸರಿಸುಮಾರು ಹುಣ್ಣಿಮೆಯ ಚಂದ್ರನಷ್ಟೇ ದೊಡ್ಡದಾಗಿದ್ದು, ಸೂರ್ಯ ಮುಳುಗಿ ೪೦-೪೫ ನಿಮಿಷಗಳ ನಂತರ ಹುಟ್ಟುತ್ತಾನೆ (ಹುಣ್ಣಿಮೆಯ ಚಂದಿರನು ಸೂರ್ಯಾಸ್ತದ ಹೊತ್ತಿಗೇ ಹುಟ್ಟುತ್ತಾನೆ), ಹಾಗಾಗಿ ಪಾಡ್ಯಮಿಯಂದು ಚಂದ್ರ ಹುಟ್ಟುವ ವೇಳೆಗೆ ಸ್ವಲ್ಪ ಕತ್ತಲು ಹೆಚ್ಚಾಗಿದ್ದು, ಮೂಡಣ ದಿಕ್ಕಿನಲ್ಲಿ ಚಂದಿರನ ಸೊಬಗು ಇನ್ನೂ ಹೆಚ್ಚಾಗಿ ಕಾಣುತ್ತದೆ. ಅದಕ್ಕಾಗಿಯೇ, ನಾನು ಹುಣ್ಣಿಮೆಯ ಚಂದ್ರನ ಬದಲು ಪಾಡ್ಯದ ಚಂದ್ರನನ್ನು ಬಾನ ಹೆಣ್ಣಿನ ಕುತ್ತಿಗೆಯ ಪದಕವನ್ನಾಗಿಸಿದ್ದೇನೆ.

ಕೊ,ಕೊ.ಕೊ: ಇದು ಪದ್ಯಪಾನದಲ್ಲಿ  "Rin", "Win", "Bun" ಮತ್ತು  "Sun" ಈ ಪದಗಳನ್ನು ಬಳಸಿ, ಚಂದ್ರೋದಯವನ್ನು ವರ್ಣಿಸಿ ಎಂದು ಕೊಟ್ಟಿದ್ದ ಪ್ರಶ್ನೆಗೆ ನಾನು ಉತ್ತರವಾಗಿ ಬರೆದ  ಭಾಮಿನಿ ಷಟ್ಪದಿಯ ಒಂದು ಪದ್ಯ. ಸಂಜೆ , ಬಂದು, ಚಿತ್ತವಿನ್ನದರಿಂದ - ಈ ಪದಗಳನ್ನು ಗಮನಿಸಿ.

ಹಿತ ವಸಂತ

ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಅನ್ನೋ ಗಾದೆ ನೀವು ಕೇಳೇ ಇರ್ತೀರ. ಹಾಗೇ ಒಬ್ಬರಿಗಿಂತ ಇಬ್ಬರು ಲೇಸು ಅನ್ನೋದನ್ನೂ ಕೂಡ. ಮೊದಲನೆಯದು ನಿಜವಾದರೆ, ಎರಡನೆಯದಂತೂ ನಿಜವಾಗಲೇಬೇಕಲ್ಲ!  ಒಂದು ಸಮಸ್ಯೆಯನ್ನು ಬಿಡಿಸ ಹೊರಟಾಗ, ಒಬ್ಬರೇ ತಲೆ ಕೆಡಿಸ್ಕೊಳ್ಳೋದಕ್ಕಿಂದ ಇಬ್ಬರೋ ಮೂವರೋ ಸೇರಿದರೆ ವಾಸಿ ಅನ್ನೋದನ್ನ ನಾವೆಲ್ಲ ಕಂಡುಕೊಂಡೇ ಇರ್ತೀವಿ.

ಮೊನ್ನೆ ಹಾಗೇ ಆಯಿತು. ಯಾವುದೋ ಪುಸ್ತಕವನ್ನೋದುತ್ತಿದ್ದಾಗ ಅದರಲ್ಲಿ ಕಾಳಿದಾಸನ ಒಂದು ಪದ್ಯದ ಪ್ರಸ್ತಾಪ ಇತ್ತು. ಋತು ಸಂಹಾರದ (೬-೨) ಈ ಕೆಳಗಿನ  ಪದ್ಯ ಓದಿದ ಕೂಡಲೆ ಮನಸ್ಸಿಗೆ ಒಮ್ಮೆಗೇ ನೆಟ್ಟುಬಿಟ್ಟಿತು.

ದ್ರುಮಾಃ ಸಪುಷ್ಪಾಃ ಸಲಿಲಂ ಸಪದ್ಮಂ
ಸ್ತ್ರಿಯಾ ಸಕಾಮಾಃ ಪವನಃ ಸುಗಂಧಿಃ
ಸುಖಾಃ ಪ್ರದೋಷಾ ದಿವಸಾಸ್ಚ ರಮ್ಯಾ
ಸರ್ವಂ ಪ್ರಿಯೇ ಚಾರುತರಂ ವಸಂತೇ

ಕಾಳಿದಾಸನ ಕವಿತೆ ಅಂದರೆ ಮನಸ್ಸಿಗೆ ಹಿತವನ್ನೂ ಕಿವಿಗೆ ಮುದವನ್ನೂ ನೀಡುವಂತದ್ದು. ಒಮ್ಮೆ ಓದಿದರೆ ಮನಸ್ಸಿನಲ್ಲಿಯೇ ಮೊಳಗತೊಡಗುವುದು ಸಹಜ.  ಹೀಗಾದಾಗಲೆಲ್ಲ ಒಮ್ಮೊಮ್ಮೆ ನಾನು ಅಂತಹ ಪದ್ಯವನ್ನ ಕನ್ನಡಿಸುವ ಯತ್ನವನ್ನು ಮಾಡ್ತೇನೆ. ಇದನ್ನೂ ಸರಿ, ಮಾಡೋಣವೆಂದು ಅವತ್ತೂ ಹಾಗೇ ಮಾಡಹೊರಟರೆ ಹಾಳಾದ್ದು, ಕಡೆಯ ಸಾಲಿನಲ್ಲಿ ಪ್ರಾಸಕ್ಕೆ ಸರಿಯಾದ ಒಂದು ಪದ ಹೊಳೆಯಲಾರದೇ ಹೋಯ್ತು.

ಗಾದೆ ಸುಳ್ಳಾದರೂ, ವೇದ ಸುಳ್ಳಾದರೂ, ದಾಸವಾಣಿ ಸುಳ್ಳಲ್ಲ ಬಿಡಿ. ಉತ್ತಮರ ಸಂಗ*ವಿರುವ ನಾನು ಚಿಂತೆ ತಾನೇ ಯಾಕೆ ಮಾಡಲಿ? ಗೆಳೆಯ ಜೀವೆಂ ಅವರಿಗೆ ಮಿಂಚಿಸಿದೆ - ಸ್ವಲ್ಪವೇ ಹೊತ್…

ನಾಲ್ಕು ವಾದ್ಯಗಳು ಒಬ್ಬಳು ಹಾಡುಗಾರ್ತಿ

Image
ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು" ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ.  ಅಷ್ಟೇ.

ಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು ತಿಳಿದು ಹಾಡುವುದಿಲ್ಲ ಅಂತ ಒಂದು ದೂರು ಯಾವಾಗಲೂ ಕೇಳಿಬರುವುದುಂಟು. ಬೇರೆ ಬೇರೆ ಭಾಷೆಯ ಹಾಡುಗಳನ್ನು ಹಾಡುವಂತಹ ಪರಿಪಾಠವಿರುವಾಗ, ತಮಗೆ ತಿಳಿಯದ ಭಾಷೆಯಲ್ಲಿರುವ ಹಾಡುಗಳೆಲ್ಲವನ್ನೂ ಅರ್ಥ ತಿಳಿದು ಹಾಡುವುದಾದರೂ ಹೇಗೆ ಅಂತ ಇದಕ್ಕೊಂದು ಮರುಪ್ರಶ್ನೆ ಹಾಕುವವರಿದ್ದಾರೆ. ಅಲ್ಲದೆ, ಇನ್ನೊಂದು ಕಡೆ ಸಂಗೀತದಲ್ಲಿ ಸಾಹಿತ್ಯವು ಮೇಲುಗೈಯಾಗಿರುವ ಅಗತ್ಯವಿಲ್ಲ ಅನ್ನುವ  ಅಭಿಪ್ರಾಯವೂ ಇದೆ. ವಾದ್ಯ ಸಂಗೀತದಲ್ಲಿ ’ಮಾತು’ ಇರದಿದ್ದರಿಂದ ಹಲವು ಕಲಾವಿದರು ಈಚೆಗೆ ಯಾವ ಹಾಡಿಗೂ ಕಟ್ಟುಬೀಳದೆ, ಕೇವಲ ವಾದ್ಯ ಸಂಗೀತಕ್ಕೆಂದೇ ರಚಿಸಿರುವ ರಚನೆಗಳೂ ಇವೆ.

ಸಂಗೀತ ಕಚೇರಿಗಳಲ್ಲಿ ಯಾವುದಾದರೊಂದು ಕೃತಿಯನ್ನು ವಿಸ್ತಾರವಾಗಿ ಹಾಡಲು ತೆಗೆದುಕೊಂಡಾಗ,  ಒಂದು ಸಾಲನ್ನೇ ಮತ್ತೆ ಮತ್ತೆ ಮರಳಿ ಮರಳಿ ಹಾಡುತ್ತ, ಅದರ ಸಂಗೀತ ಸಾಧ್ಯತೆಗಳನ್ನು ಹೆಚ್ಚಿಸುವ ಒಂದು ವಿಧಾನಕ್ಕೆ ನೆರವಲು ಎಂದು ಹೆಸರು. ಮತ್ತೆ ಮತ್ತೆ ಹಾಡುವಂತಹ ಈ ಸಾಲನ್ನು ತೆಗೆದುಕೊಳ್ಳುವಾಗಲಾದರೂ ಕಲಾವಿದರು ಸಾಹಿತ್ಯಕ್ಕೆ ಸ್ವಲ್ಪ ಹೆಚ್ಚಿನ ಗಮನವಿತ್ತರೆ ಒಳ್ಳಿತು ಅನ್ನುವುದು ಒಬ್ಬಬೇಕಾದ್ದ ಮಾತು. ಇಲ್ಲದಿದ್ದರೆ ಹಾಡು ಅರ್ಥವಾಗುವುದು…

ಗೆಳೆಯನಿಗೊಂದು ಸಲಹೆ

Image
ಸಲ್ಲದೀ ನಡವಳಿಕೆ ನೇಹಿಗ!
ಇಲ್ಲದಿಹ ಬೇಸರದ ಸೋಗಿನ
ಲೊಲ್ಲೆ ಗೆಳೆಯರ ಕೂಟವೆನ್ನುತ ತಿರುಗಿ ಕುಳಿತಿಹೆಯಾ?
ಮೆಲ್ಲ ಯೋಚಿಸು ಮತ್ತೆ ಜೀವನ
ದಲ್ಲಿ ಒಂಟಿಯ ದಾರಿ ಸೊಗಸಿರ
ದೆಲ್ಲರೊಳಗೊಂದಾಗಬೇಕೆಂಬನುಡಿ ಮರೆತಿಹೆಯಾ?

 -ಹಂಸಾನಂದಿ

 ಚಿತ್ರಕೃಪೆ: ಪದ್ಯಪಾನ