Posts

Showing posts from August, 2012

ಗೊಲ್ಲ ಬಾಲನಿಗೊಂದು ನಮನ

Image
ಬಣ್ಣದಲಿ ಮುಂಗಾರ ಮುಗಿಲಹೋಲುವನ
ಗೋಪಿಯರ ಕೆಳೆಯಲ್ಲಿ ನಲಿವ ಚಿಣ್ಣನ
ಆಸರೆ ಬಯಸಿದವರ ಪಾರಿಜಾತನ 
ಮಿಂಚಂತೆ ಹೊಳೆವರಿವೆಯುಳ್ಳವನ

ದೇವವೈರಿಕುಲವ ತೊಡೆದಿಹನ 
ಸುಜನರೆಲ್ಲರ ಬಗೆಗೊಳ್ವ ಚಿತ್ತಾರನ
ಸುರಮುನಿಗಳೆಲ್ಲ ಮಣಿವಾತನ 
ನಾನು ಕೊಂಡಾಡುವೆನಾ ಗೊಲ್ಲಬಾಲನ!


ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣಕರ್ಣಾಮೃತ ೨-೧೨):

ಸಜಲ ಜಲದನೀಲಂ ವಲ್ಲವೀಕೇಳಿಲೋಲಂ
ಶ್ರಿತಸುರತರುಮೂಲಂ ವಿದ್ಯುದುಲ್ಲಾಸಿಚೇಲಮ್ |
ಸುರರಿಪುಕುಲಕಾಲಂ ಸನ್ಮನೋಬಿಂಬಲೀಲಂ
ನತಸುರಮುನಿಜಾಲಂ ನೌಮಿ ಗೋಪಾಲಬಾಲಮ್ ||

-ಹಂಸಾನಂದಿ

ಕೊ: ಸುರತರು= ದೇವಲೋಕದ ವೃಕ್ಷ, ಪಾರಿಜಾತ;ಸ್ವರ್ಗದಿಂದ ಭೂಮಿಗೆ ಸತ್ಯಭಾಮೆಗೆಂದು ಕೃಷ್ಣ ಸ್ವರ್ಗದಿಂದ ಭೂಮಿಗೆ ಪಾರಿಜಾತವನ್ನು ತಂದ ಕಥೆ ಪ್ರಸಿದ್ಧವೇ ಆಗಿದೆ.


ಚಿತ್ರ ಕೃಪೆ: http://diyala.kochiknacha.com/2011/01/somnathpur-temple-tribute-in.html - ಇಲ್ಲಿಂದ ತೆಗೆದುಕೊಂಡ ಸೋಮನಾಥಪುರದ ವೇಣುಗೋಪಾಲನ ಮೂರ್ತಿ

ಸೆರೆ

Image
ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿ
ಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿ
ಸವಿಯನ್ನೆ ಸುರಿಯುತಿಹ ನಸುನಗುವ ಮೊಗದ
ಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!


ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):

ಕರಕಮಲ ದಲಕಲಿತ ಲಲಿತತರ ವಂಶೀ
ಕಲನಿನದ ಗಳದಮೃತ ಘನಸರಸಿ ದೇವೇ |
ಸಹಜರಸ ಭರಭರಿತ ದರಹಸಿತ ವೀಥೀ
ಸತತವಹಧರಮಣೀಮಧುರಿಮಣಿ ಲೀಯೇ ||-ಹಂಸಾನಂದಿ

ಕೊ: ಸಾಮಾನ್ಯವಾಗಿ ಅನುವಾದಿಸುವಾಗ ಮೂಲದಲ್ಲಿಲ್ಲದ ಪದಗಳನ್ನು ಸೇರಿಸುವುದೂ, ಮೂಲದಲ್ಲಿರುವ ಪದಗಳನ್ನು (ಅಥವಾ ಅರ್ಥವನ್ನೂ) ಪೂರಾ ಬಿಟ್ಟುಬಿಡಬಾರದೆಂಬುದೊಂದು ಕಟ್ಟುಪಾಡು. ಆದಷ್ಟೂ ನಾನು ಇದಕ್ಕೆ ಕಟ್ಟುಬೀಳಲು ಪ್ರಯತ್ನಿಸುವುದಾದರೂ, ಈ ಬಾರಿ ಹಾಗೆ ಮಾಡಲಿಲ್ಲ

ಕೊ.ಕೊ: ಮೂಲದಲ್ಲಿರುವ ೫/೫/೫/೪ ಮಾತ್ರೆಗಳ ಓಟವನ್ನು ಇದ್ದಿದ್ದರಲ್ಲಿ ಉಳಿಸುವ ಪ್ರಯತ್ನ ಮಾಡಿದ್ದೇನೆ.

ಚಿತ್ರ ಕೃಪೆ: ಮಿತ್ರ ಸುಯೋಗ್ ಗೈಧಾನಿ ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ , ನಿಜ ಹೇಳಬೇಕೆಂದರೆ, ಈ ಚಿತ್ರವನ್ನು ನೋಡಿದ ಮೇಲೆ, ಇದಕ್ಕೆ ತಕ್ಕ ಪದ್ಯವನ್ನು ಹುಡುಕಲೇಬೇಕೆಂದು ಕೃಷ್ಣಕರ್ಣಾಮೃತದಲ್ಲಿ ಅನೇಕ ಹೊಸ ಪದ್ಯಗಳನ್ನು ಓದಿ, ನಂತರ ನನಗೆ ಬಹಳ ಹಿಡಿಸಿದ್ದೂ, ಮತ್ತೆ ನನ್ನ ಅನುವಾದಿಸುವ ಅಳವಿಗೆ ಸ್ವಲ್ಪವಾದರೂ ದಕ್ಕೀತೆಂದು ಈ ಪದ್ಯವನ್ನು ತೆಗೆದುಕೊಂಡೆ. ಎಷ್ಟೆಂದರೂ ಮೂಲ ಮೂಲವೇ, ಅನುವಾದ ಅನುವಾದವೇ.  ಮೂಲದಲ್ಲಿರುವ ಲಾಲಿತ್ಯ ನನ್ನ ಅನುವಾದದಲ್ಲಿ ಇಲ್ಲವೆನಿಸಿದರೂ,  ಹೆತ್ತವರಿಗೆ ಹೆಗ್ಗಣ ಮುದ್ದು …

ಎಳೆಯನ ಚೆಲುವು

Image
ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು
ಕೊಳಲ ನಾದದಿ ತಂಪನೆರೆಯುತಿಹ  ಮೊಗದ
ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ
ತಿಳಿಸುತಲಿವನ ಸೊಗವ ತುಸುವಾದರೂ!

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :


ಕಮನೀಯ ಕಿಶೋರ ಮುಗ್ಧ ಮೂರ್ತೇಃ
ಕಲವೇಣುಕ್ವಣಿತಾರ್ದ್ರಾನನೇಂದೋಃ
ಮಮ ವಾಚಿ ವಿಜೃಂಭತಾಂ ಮುರಾರೇಃ
ಮಧುರಿಂಣಃ ಕಣಿಕಾಪಿ ಕಾಪಿ ಕಾಪಿ

-ಹಂಸಾನಂದಿ


ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್ 

ಕೊಳಲನೂದುವ ಚದುರನಿಗೆ

Image
ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!
ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿ
ತಂಪು ತುಂಬಿಹ ಹರುಷದುಲಿಯೂದೆ ಕೊಳಲು;
ಮಂಪರೇರಿಸಿ ಮತ್ತೆ  ಸೆಳೆಯುತ್ತ ಬಗೆಬಗೆಯ-
-ಲಿಂಪುಗಳ ತೋರುತಲಿ ಮನವ ಪೆರ್ಚಿಸುತ!


ಸಂಸ್ಕೃತ ಮೂಲ: 

 (ಲೀಲಾಶುಕನ ಕೃಷ್ಣಕರ್ಣಾಮೃತ-೬)
ಮುಕುಲಾಯಮಾನ ನಯನಾಂಬುಜಂ ವಿಭೋಃ ಮುರಲೀ ನಿನಾದ ಮಕರಂದ ನಿರ್ಭರಂ | ಮುಕುರಾಯಮಾಣಮೃದುಗಂಡಮಂಡಲಂ ಮುಖಪಂಕಜಂ ಮನಸಿ ಮೇ ವಿಜೃಂಭತಾಂ || 

(ಲೀಲಾಶುಕನ ಕೃಷ್ಣಕರ್ಣಾಮೃತ-೩೬)
ಅಧೀರ ಬಿಂಬಾಧರ ವಿಭ್ರಮೇಣ  ಹರ್ಷಾರ್ದ್ರ ವೇಣುಸ್ವರ ಸಂಪದಾ ಚ | ಅನೇನ ಕೇನಾಪಿ ಮನೋಹರೇಣ ಹಾ ಹಂತ ಹಾ ಹಂತ ಮನೋ ಧುನೋತಿ ||

-ಹಂಸಾನಂದಿ


(ಅನುವಾದಿಸುವಾದ ಸಲಹೆ ನೀಡಿದ ಗೆಳೆಯ ಎಂ.ಜಿ.ಹರೀಶ್ ಅವರಿಗೆ ವಂದನೆಗಳು)


ಕೊ: ನಾಳೆ ಬರುವ ಕೃಷ್ಣಾಷ್ಟಮಿಯ ಸಮಯಕ್ಕೆ ಅತಿ ಸುಂದರವಾದ ಎರಡು ಸಂಸ್ಕೃತ ಶ್ಲೋಕಗಳನ್ನು ಅನುವಾದಿಸಿ ಹಂಚಿಕೊಳ್ಳುವುದು ಬಹಳ ಸಂತಸ ತಂದ ಸಂಗತಿ.  ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಜನಪ್ರಿಯ ರಚನೆ, ಹಾಗಾಗಿ ತಲೆಬರಹವನ್ನು ಹೀಗಿಟ್ಟದ್ದು.

ಕೊ.ಕೊ:  ಎಸೆ  ಎನ್ನುವುದು   ಶೋಭಿಸು ಎನ್ನುವ ಅರ್ಥದ ದೇಶ್ಯ ಪದ, ಹರಿದಾಸರು ತಮ್ಮ ರಚನೆಗಳಲ್ಲಿ ಬಳಸಿದ್ದಾರೆ; ಉದಾಹರಣೆಗೆ,   "ಶಶಿ ಮುಖದ ನಸುನಗೆಯ ಬಾಲೆ, ಎಸೆವ ಕರ್ಣದ ಮುತ್ತಿನ ಓಲೆ!" ಎನ್ನುವ ಅ…

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App !

Image
ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! 


ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.

ಕೆಳಗಿನ ಲೇಖನ ಇಂದಿನ (೮/೧/೨೦೧೨) ಗಿಜ಼್‍ಬಾಟ್ ಪೋರ್ಟಲ್ ನಲ್ಲಿ ಬಂದಿದೆ. ಅದರ ಕೊಂಡಿ - http://kannada.gizbot.com/news/kannada-1st-android-app-on-subhashita

ನಿಮ್ಮಲ್ಲಿ ಆನ್ಡ್ರೋಯ್ಡ್ ಫೋನ್/ಟ್ಯಾಬ್ಲೆಟ್ ಇದ್ದಲ್ಲಿ ಗೂಗಲ್ ಪ್ಲೇ ಇಂದ ಇಳಿಸಿಕೊಳ್ಳಬಹುದು. ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡರೆ, ಈ ರೀತಿಯ ಕೆಲಸ ಮಾಡುತ್ತಿರುವವರಿಗೆ, ಅದು ಖಂಡಿತ ಪ್ರೋತ್ಸಾಹಕಾರಿ.

-ಹಂಸಾನಂದಿ

ಕನ್ನಡದ ಮೊದಲ ಸುಭಾಷಿತ ಆಂಡ್ರಾಯ್ಡ್ App ! August 1, 2012, 10:46 [IST] | Gadget Guru Ads by Google Introducing Nexus 7 play.google.com Built to bring you the best of Google. Buy now for $199
ಕನ್ನಡಿಗರಾದ ನಮಗೆ ನಮ್ಮ ಭಾಷೆಯ ಬಗ್ಗೆ ಎಷ್ಟು ಹೆಮ್ಮೆ, ಆಭಿಮಾನವಿದೆಯೋ ಅಷ್ಟೇ ಗೌರವ ನಮಗೆ ಸಂಸ್ಕೃತದ ಬಗ್ಗೆಯೂ ಇದೆ. ಹಾಗಾಗಿ  ಅದರ ರಸಸ್ವಾದ ನಮ್ಮ ಜನರಿಗೂ ದಕ್ಕಲಿ ಎಂದೇ ಹಲವಾರು ಮಹನೀಯರು ಸಂಸೃತದಿಂದ ಕನ್ನಡಕ್ಕೆ ಬೃಹತ್ ಗ್ರಂಥಗಳಿಂದ ಹಿಡಿದು, ಭಗವದ್ಗೀತೆಯನ್ನೂ ಅನುವಾದಿಸಿ ಅದರ ರುಚಿಯನ್ನು ಉಣಬಡಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸದೊಂದು ಪ್ರಯತ್ನ ನಡೆಸಿ ಸಂಸ್ಕೃತ ಸುಭಾಷಿತಗ…