Posts

Showing posts from September, 2012

ನೋಟ

ಆತನೊಳಬರುವುದನು ತಡೆಯಲಿಲ್ಲ;
ಮೊಗವ ಮತ್ತೊಂದೆಡೆಗೆ ತಿರುವಲಿಲ್ಲ;
ಕಟಪಟೆಯ ಸೆಡವು ಮಾತಾಡಲಿಲ್ಲ.
ಮೊದಲಿನಿಯನಾಗಿದ್ದುದನು  ಗಣಿಸಲಿಲ್ಲ
ನೇರ ದಿಟ್ಟಿಯ ಕಣ್ಣ ನೋಟವಿಟ್ಟು
ಪರಕೀಯನೆಂಬಂತೆ ಕಂಡಳಲ್ಲ!

ತೊಗೊಳ್ಳೀ ಸ್ವಾಮಿ, ಇದೇ ಪದ್ಯದ ಇನ್ನೊಂದು ರೂಪ , ಒಂದು ಭಾಮಿನಿ ಷಟ್ಪದಿಯಲ್ಲಿ:

ತಡೆಯದವನೊಳ ಬರುವುದನು ಬೇ
ರೆಡೆಗೆ ತಿರುವದೆ ತನ್ನ ಮೊಗವನು
ಸೆಡವಿನಲಿ ಕಟಪಟೆಯ ನುಡಿಗಳನಾಡದೆಲೆಯವಳು
ನೆಡುತ ನೇರದ ದಿಟ್ಟಿಯವನಲಿ
ಪೆಡೆಯನಂತೆಯೆ ಕಾಣುತಿರುವಳು
ಗೊಡವೆಯಿಲ್ಲದೆ ಮೊದಲಿಗವ ತನ್ನಿನಿಯನೆಂಬುದನು

ಸಂಸ್ಕೃತ ಮೂಲ:  (ಅಮರುಕವಿಯ ಅಮರು ಶತಕದಿಂದ)

ನಾಂತಃ ಪ್ರವೇಶಮರುಣದ್ವಿಮುಖೀ ನ ಚಾಸೀ-
ದಾಚಷ್ಟ ರೋಷಪರುಷಾಣಿ ನ ಚಾಕ್ಷರಾಣಿ |
ಸಾ ಕೇವಲಂ ಸರಲಪಕ್ಷ್ಮಭಿರಕ್ಷಿಪಾತೈಃ
ಕಾಂತಂ ವಿಲೋಕಿತವತೀ ಜನನಿರ್ವಿಶೇಷಮ್ ||

नान्तः प्रवेशमरुणाद्विमुखी न चासी-
दाचष्टरोष परुषाणि न चाक्षराणि  ।
सा केवलं सरलपक्ष्मभिरक्षिपातैः
कान्तं विलोकितवती जननिर्विशेषं  । ।

-ಹಂಸಾನಂದಿ

ಕೊ: ಪೆಡೆಯ = ಹೊಸಬ

ಕೊ.ಕೊ: ಈ ಪದ್ಯದ ಬಗ್ಗೆ ಮಾತಾಡುತ್ತಿದ್ದಾಗ ಗೆಳೆಯ ಮಂಜುನಾಥ ಕೊಳ್ಳೇಗಾಲ ಅವರೊಡನೆ, ಈ ಪದ್ಯವನ್ನೂ ನನ್ನ ಅನುವಾದವನ್ನೂ ಹಂಚಿಕೊಂಡೆ. ಆಗ ಅವರು ಇದಕ್ಕೆ ಅಮರುವಿನ ಕವಿತೆಯ ನವಿರುತನವನ್ನು ಉಳಿಸಿಕೊಳ್ಳುವಂತಹ  ,  ಅನುವಾದವೆಂದರೆ ಹೀಗಿರಬೇಕೆನ್ನಿಸುವಂತಹ  ಒಂದು ಅತಿ ಸುಂದರ ಅನುವಾದವನ್ನು ಹೀಗೆ ಚೌಪದಿಯನ್ನು ಹೀಗೆ ಬರೆದಿದ್ದಾರೆ. ಅದನ್ನು  ನ…

ಉದುರೆಲೆಕಾಲ

Image
ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ
ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ;
ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ-
ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!

-ಹಂಸಾನಂದಿ

ಚಿತ್ರಕೃಪೆ: ಪೂರ್ಣಿಮಾ

ಲೆಕ್ಕಾಚಾರ

ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು
ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ;
ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ  
ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!

                     ****

ಚಿತ್ತದಲಿ ನಿನಗೆನ್ನ ಮೇಲಾಗಿರಲು ಮುನಿಸು
ಉತ್ತರವ ನಾನಿನ್ನು ಕೊಡುವುದೇನು?
ಮತ್ತೆ ಕೇಳೆನು ಬೇರೆ ಕೊಟ್ಟುಬಿಡು ನಾನು ಮೊದ-
ಲಿತ್ತ ಮುತ್ತುಗಳನ್ನು ಬಿಗಿವಪ್ಪುಗೆಯನು!


ಸಂಸ್ಕೃತ ಮೂಲ(ಅಮರು ಕವಿಯ ಅಮರುಶತಕ- ೧೩೩):


ಕೋಪಸ್ತ್ವಯಾ ಹೃದಿ ಕೃತೋ ಯದಿ ಪಂಕಜಾಕ್ಷಿ
ಸೋಽಸ್ತು ಪ್ರಿಯಸ್ತವ ಕಿಮತ್ರ ವಿಧೇಯಮನ್ಯತ್ |
ಆಶ್ಲೇಷಮರ್ಪಯ ಮದರ್ಪಿತ ಪೂರ್ವಮುಚ್ಚೈಃ
ಮಹ್ಯಂ ಸಮರ್ಪಯ ಮದರ್ಪಿತ ಚುಂಬನಂ ಚ ||


-ಹಂಸಾನಂದಿ

ಕೊ: ಇದೇನಿದು, ಮೂಲ ಒಂದೇ ಪದ್ಯ ಇದೆ, ಎರಡು ಕನ್ನಡ ಪದ್ಯಗಳಿವೆ ಎಂದಿರಾ? ಎರಡೂ ಅನುವಾದಗಳೂ ಒಂದೇ ಮೂಲಕ್ಕೇ, ಸುಮ್ಮನೆ ಸ್ವಲ್ಪ  ಬೇರೆ ರೀತಿಯ ಎರಡು ಅನುವಾದಗಳು. ಅಷ್ಟೇ.

ಕೊ.ಕೊ: ಸಾಮಾನ್ಯವಾಗಿ ಮೂಲದಲ್ಲಿಲ್ಲದ ಪದಗಳನ್ನೂ, ಅಭಿಪ್ರಾಯಗಳನ್ನೂ ಅನುವಾದದಲ್ಲಿ ಬಳಸಬಾರದೆಂದೂ, ಅಲ್ಲಿರುವುದನ್ನು ಬಿಡಬಾರದೆಂದೂ ಒಂದು ಕಟ್ಟಳೆ. ಈ ಪದ್ಯದಲ್ಲಿ ಮೂಲದಲ್ಲಿದ್ದ "ಪಂಕಜಾಕ್ಷಿ" ಒಂದು ಅನುವಾದದಲ್ಲಿ ಚೆನ್ನೆಯಾಗಿ ಬದಲಾಗಿದ್ದರೆ, ಇನ್ನೊಂದರಲ್ಲಿ ಆ ಸಂಬೋಧನೆಯೇ ಮಾಯವಾಗಿದೆ. ನಾನು ಮೂಲದ ಅಭಿಪ್ರಾಯವನ್ನು ಬದಲಾಯಿಸದಿರುವುದರಿಂದ  ಓದುಗರಿಗೆ ಒಪ್ಪಿಗೆಯಾಗಬಹುದೆಂದು ಎದುರುನೋಡುವೆ.

ಕೊ.ಕೊ.ಕೊ: ಅಮರು ಶತಕವೆಂದರೆ ೧೦೦…

ಎಂಟು ಚಕ್ರ, ಒಂದು ಪದ್ಯ:

Image
ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.

ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಹಲವು ಬಾರಿ ಬರೆದಿದ್ದೆ. ಕೆಲವು ಪದಗಳನ್ನ ಕೊಟ್ಟು ಅದನ್ನು ಉಪಯೋಗಿಸಿ ಪದ್ಯ ಬರೆಯಬೇಕಾದ ಸಮಸ್ಯೆಯನ್ನ ’ದತ್ತಪದಿ’ ಅನ್ನುತ್ತಾರೆ. ಈ ಬಾರಿಯ ದತ್ತಪದಿ ವಿಶೇಷವಾಗಿತ್ತು. ಅವರದೇ ಮಾತಿನಲ್ಲಿ ಹೇಳೋದಾದರೆ

ಬಜಾಜ್(Bajaj), ಯಮಹ(Yamaha), ಕವಸಾಕಿ(kawasaki), ಕೈನೆಟಿಕ್(kinetik)
ಈ ನಾಲ್ಕುಪದಗಳನ್ನು ಬಳಸಿ, ನಿಮ್ಮಾಯ್ಕೆಯ ಛ೦ದಸ್ಸಿನಲ್ಲಿ(ಆದಷ್ಟು ಮಟ್ಟಿಗೆ ವರ್ಣವೃತ್ತಗಳನ್ನು ಬಳಸಿ), ಒಬ್ಬಳುಸು೦ದರಿ ಮತ್ತೊಬ್ಬಳ ಗುಣಗಾನವನ್ನು ಮಾಡುವ ವಿಷಯವನ್ನಿಟ್ಟುಕೊ೦ಡು ಪದ್ಯ ರಚಿಸಿ.

ಸ್ವಲ್ಪ ತಿಣುಕಾಡಿ ನಾನು ಬರೆದ ಪದ್ಯ ಹೀಗಿದೆ. ಗೂಗಲೇಶ್ವರನ ಪೂಜೆಯನ್ನು ಚೆನ್ನಾಗಿ ಮಾಡಿದ್ದಿದ್ದರಿಂದ ಕೈನೆ ಅನ್ನುವ ಒಂದು ಹೊಸ ಪದವನ್ನೂ ಅರಿತಂತಾಯಿತು. ಈಗ ಓದಿ:

ಏನು? ಮುಡಿಯಲಿ ತುಂಬ ಜಾಜಿಯ ಹೂವ ಮುಡಿದಿಹೆ ಚೆಂದದಿ
ಏನೊ ಕಾರ್ಯ ಮಹದಾನಂದದಿ ಮಾಡಹೊರಟಿಹೆ ಬಲ್ಲೆನು
ನೀನು ನೋಟದಲೇನೆ ಕೊಲುವುದು ಮಿಕವ ಸಾಕಿನ್ನೆನ್ನುತ
ಕೈನೆ ಟಿಕಲಿಯ ನೊಸಲಿಗಿಡುತಲಿ ಒಡತಿಗೊರೆದಳು ಚೆನ್ನುಡಿ

ಸ್ವಲ್ಪ ಇದಕ್ಕೆ ಹಿನ್ನುಡಿಯೂ ಬೇಕಾಗಬಹುದು. ಇಲ್ಲಿ ನಡೆಯುವ ಮಾತುಕತೆ ಒಬ್ಬ ಒಡತಿ ಮತ್ತೆ ಅವಳ ಸೇವಕಿಯ ನಡುವೆ. ಇಬ್ಬರೂ ಸುಂದರಿಯರೇ ಅಂತ ಹೇಳಲೇಬೇಕಿಲ್ಲ ಮತ್ತೆ ? ಹರೆಯದ ಒಡತಿಯನ್ನು ಚಿಕ್ಕ…

ಒಳಗುಟ್ಟು

ಒಡಲೇಕೆ  ಬಡವಾಯ್ತು? ಬಿಳಿಚಿಕೊಂಡಿದೆ ಗಲ್ಲ?                                                          
ನಡುಗಿಹುದು ಮೈಯೇಕೆ?  ಕೇಳುತಿರೆ ಮನದಿನಿಯ  ಹುಡುಗಿ "ನಾನಿರುವುದೇ ಹೀಗೆಂದು" ಸಾರಿದಳು ನಿಡುಸುಯ್ದು ಹೊರಳಿ ಕಂಬನಿಯ ಕಣ್ಮರೆಸುತಲಿ

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕದಿಂದ : ಪದ್ಯ-50  ) :
ಅಂಗಾನಾಮತಿತಾನವಮ್ ಕಥಮಿದಮ್ ಕಂಪಶ್ಚ ಕಸ್ಮಾತ್ಕುತೋ ಮುಗ್ಧೇ ಪಾಂಡುಕಪೋಲಮಾನನಮಿತಿ ಪ್ರಾಣೇಶ್ವರೇ ಪೃಚ್ಛತಿ ತನ್ವ್ಯಾ ಸರ್ವಮಿದಮ್ ಸ್ವಭಾವಜಮಿತಿ ವ್ಯಾಹೃತ್ಯ ಪಕ್ಷ್ಮಾಂತರಾ ವ್ಯಾಪೀ ಭಾಷ್ಪಭರಸ್ತಯಾ ಚಲಿತಯಾ ನಿಶ್ವಸ್ಯ ಮುಕ್ತೋಽಅನ್ಯತಃ
-ಹಂಸಾನಂದಿ