Posts

Showing posts from December, 2012

ಯೇಸು ಜನನ

Image
ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂಬಡಿಕೆ (New Testament) ನಲ್ಲಿ, ಇಂತಹದ್ದೇ ದಿನ ಕ್ರಿಸ್ತ ಹುಟ್ಟಿದ್ದು ಅನ್ನುವುದಕ್ಕೆ ಸರಿಯಾದ ಆಧಾರಗಳಿಲ್ಲವಂತೆ. ಅಲ್ಲದೇ, ಬೈಬಲ್ಲಿನಲ್ಲಿ ವಿವರಿಸಿರುವ ಘಟನೆಗಳನ್ನು ನೋಡಿದರೆ, ಡಿಸೆಂಬರ್ ಕೊನೆಯ ಚಳಿಗಾಲದಲ್ಲಿ ಕ್ರಿಸ್ತ ಹುಟ್ಟಿರುವುದು ಸಾಧ್ಯವಿಲ್ಲವೆಂದೂ, ಆ ದಿನ ವಸಂತದಲ್ಲೋ, ಹೇಮಂತದಲ್ಲೋ ಆಗಿರಬೇಕೆಂದೂ ಅಂತ ಕೆಲವು ಬೈಬಲ್ ವಿದ್ವಾಂಸರ ಅಭಿಪ್ರಾಯ ಕೂಡ ಇದೆ. ಪಂಚಾಗ ನೋಡಿ, ಇಂತಹ ತಿಥಿ ವಾರ ನಕ್ಷತ್ರ ಎಂದು ಬರೆದಿಟ್ಟಿದ್ದರೆ ನೋಡಿ, ಸರಿಯಾಗಿರುತ್ತಿತ್ತು, ಅಲ್ವೇ? ಆ ಸಮಯದಲ್ಲು  ಆಗಸದಲ್ಲಿ ಕಂಡವೆನ್ನಲಾದ ಕೆಲವು ಆಧಾರಗಳಿಂದ ಕ್ರಿಸ್ತ ಹುಟ್ಟಿದ ದಿನವನ್ನು ಸರಿಯಾಗಿ ಹೇಳಲು ಪ್ರಯತ್ನಗಳು ನಡೆದಿವೆಯಾದರೂ, ಇದಮಿತ್ಥಂ ಎಂದು ಒಂದು ತೀರ್ಮಾನಕ್ಕೆ ಬರಲಾಗಿಲ್ಲವಂತೆ.ಅದಿರಲಿ. ನೆನ್ನೆ ನಾನು ಓದುವ ಫೇಸ್ ಬುಕ್ ಬಳಗದಲ್ಲೊಂದು ಪದ್ಯ ಬರೆಯುವ ಸಮಸ್ಯೆ ನೋಡಿದೆ.  ಸಮಸ್ಯೆ ಹೀಗಿತ್ತು.
ಮೇರಿ ಪಡೆದಳೇಸುತನಯನಿಂ ಕೀರ್ತಿಸುಖಂ"  ಕಂದ ಪದ್ಯದ ಕಡೆಯ ಸಾಲು ಹೀಗೆ ಬರುವಂತೆ ಪದ್ಯವನ್ನು ಮುಗಿಸಿರೆಂಬುದು ಪ್ರಶ್ನೆ.

ಆದರೆ ನನಗೆ ಕಂದವನ್ನು ಬರೆಯಲು ಬರುವುದಿಲ್ಲವಲ್ಲ? ಆದರೇನಾಯಿತು? ಪರೀಕ್ಷ…

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ ಕಲ್ಪಿಸಿದೆ ಕಂಗ್ಲೀಷು  ಚೌಪದಿಗಳ ಜಲ್ಪಿಸುತ್ತಿಹೆಯೆನದೆ ಸುಮ್ಮನೇ ಓದಿಬಿಡಿ ಸೊಲ್ಪ ನಾನ್ಸೆನ್ಸಾದರೂ ಲೈನ್ಗಳ      ||1||
ಮುಂದೆ ಮುಂಜಾವಿನಲಿ ಮೂಡು ಕೆಂಪೇರುತಿದೆ -ಯೆಂದು ಬಣ್ಣಿಸುವುದೆಲ್ಲ   ಹಳೆಯದಾಯ್ತು ಸಂದುಗೊಂದಿಯಪಾರ್ಟುಮೆಂಟಿನಲಿ ವಾಸಿಸಿರ -ಲಿಂದು ಕವಿಕಣ್ಣುಗಳೆ ಮಾಯವಾಯ್ತು  ||2||
ಉದಯದಲಿ ಗಿರಿಮೇಲೆ ರವಿಯ ಹೊಂಗಿರಣಗಳು ಹದವಾದ ಲಾನಿಗಿರೆ ಮಂಜು ಹೊದಿಕೆ ಚದುರಿಹವು ಬಣ್ಣದೆಲೆ ತುಸುಕುಳಿರ ಗಾಳಿಯಲಿ ಮುದದ ಮುಂಜಾವಗಳು ಫಾಲಿನಲ್ಲೆ  ||3||
ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಾಲಿ ಒಳಿತಾದ ಸ್ಟಾರ್ಬಕ್ಸು ಕಾಫಿಯನ್ನು ಗಳಹುತ್ತ ಫೇಸ್ಬುಕ್ಕಿನಲ್ಲಿಯಪ್ಡೇಟಿಸುವುದ ಸುಳುವಾಗಿಸಿದ ಮಾರ್ಕು ಜ಼ುಕರ್ಬರ್ಗನು ||4||
-ಹಂಸಾನಂದಿ
ಕೊ: ಪದ್ಯಪಾನದಲ್ಲೊಂದು ಹಳೆಯ ಪ್ರಶ್ನೆ ನೋಡಿದೆ- ಮುಂಜಾವಿನ ಸೊಬಗನ್ನು ಚೌಪದಿಯಲ್ಲಿ ವರ್ಣಿಸಿ, ಕಲ್ಪನೆಗಳು ಹೊಸದಾಗಿರಲಿ ಅಂತ. ಅದನ್ನು ನೋಡಿ, ಕಂಗ್ಲಿಷ್ ನಲ್ಲಿ ಇವತ್ತು ಬರೆದ ನಾಲ್ಕು ಚೌಪದಿಗಳಿವು. ತಲೆಬರಹ ಸೂಚಿಸಿದ್ದು ಗೆಳೆಯ ಸುಬ್ರಹ್ಮಣ್ಯ ಅವರು.

ಕೊ.ಕೊ: ಮಿಲ್ಪಿಟಸ್ ಎಂಬುದು ನಾನಿರುವ ಊರಿನ ಹೆಸರು; ಸ್ಯಾನ್ ಹೊಸೆ, ಕ್ಯಾಲಿಫೋರ್ನಿಯ ಪಕ್ಕದಲ್ಲಿರುವ ಊರಿದು. ಊರಿನ ಪೂರ್ವಕ್ಕಿರುವ ಮಾನ್ಯುಮೆಂಟ್ ಬೆಟ್ಟದಲ್ಲಿ ಪ್ರತಿದಿನ ನಮ್ಮ ಕಿಟಕಿಯಲ್ಲಿ ಕಾಣುವ ಸೂರ್ಯೋದಯದಿಂದ ಸ್ವಲ್ಪ ಪ್ರಭಾವಿತವಾದ ಚೌಪದಿಗಳಿವು ಎಂದರೂ ತಪ್ಪಿಲ್ಲ.


ರಾಮಗಾಗದ ಕಾರ್ಯ ಕಪಿಗಳ ಗುಂಪಿಗತಿ ಸುಲಭ!

ಇದರಲ್ಲೇನಿದೆ ಹೆಚ್ಚುಗಾರಿಕೆ ಅಂದ್ರಾ? ಸಮುದ್ರವನ್ನು ದಾಟಲು ವಾನರ ಸೈನ್ಯವೇ ತಾನೆ ಸೇತುವೆ ಕಟ್ಟಿದ್ದು ಹೊರತು ರಾಮ ಅಲ್ವಲ್ಲಾ ಅಂದಿರಾ? ಅದು ನಿಜವೇ. ಆದರೆ ಪದ್ಯಪಾನದ ಒಂದು ಹಳೆಯ ಪ್ರಶ್ನೆ ನೋಡಿದಾಗ ಇದನ್ನ ಬೇರೆತರಹ ಉತ್ತರಿಸಿದರೆ ಹೇಗೆ ಅಂತ ಯೋಚಿಸಿದಾಗ ಹೊಳೆದದ್ದಿದು.

ಸೀತೆ ರಾವಣನ ಬಂಧನದಿಂದ ಹೊರಬಂದು, ರಾಮನೊಡನೆ ಅಯೋಧ್ಯೆಗೆ ಮರಳಿದ್ದಾಳೆ. ವನವಾಸದಲ್ಲಿ ಏನು ಪೂಜೆ ಮಾಡಿದ್ದಳೋ ಇಲ್ಲವೋ ಪಾಪ,ಮಂಗಳಗೌರಿಗೆ ಲಕ್ಷಪೂಜೆಯನ್ನು ಮಾಡುವ ಹರಕೆ ಹೊತ್ತಿದ್ದಾಳೆ. ಆದರೆ ಲಕ್ಷ ಹೂಗಳನ್ನು ಕಿತ್ತಿ ಬಿಡಿಸುವುದೇನು ಸಾಮಾನ್ಯವೇ? ಆದರೆ ಸೀತೆಗೆ ಆ ಭಯವಿಲ್ಲ! ಯಾಕೆಂದರೆ ರಾಮನಿಗಾಗದಿದ್ದರೂ ವಾನರ ಸೈನ್ಯದ ಸಹಾಯವಿದೆಯಲ್ಲ ಅವಳಿಗೆ!

ನೇಮದಲಿ ಹಂಬಲಿಸೆ ಸೀತೆಯು
ಕಾಮ ವೈರಿಯ ಮಡದಿ ಮಂಗಳ
ಧಾಮೆ ಗೌರಿಯ ಲಕ್ಷ ಪೂಜೆಗೆ ವಾನರರ ಸೈನ್ಯ
ಆಮರೀಮರಕೆಲ್ಲ ನೆಗೆದಾ-
ರಾಮದಲಿ ಹೂಗಳನು ಬಿಡಿಸಿರೆ
ರಾಮಗಾಗದ ಕಾರ್ಯ ಕಪಿಗಳಗುಂಪಿಗತಿ ಸುಲಭ!

ಇದಕ್ಕೆ ಬೇರೆ ಪದ್ಯಪಾನಿಗಳು ಬರೆದ ಉತ್ತರಗಳನ್ನು ಇಲ್ಲಿ ನೋಡಬಹುದು.

-ಹಂಸಾನಂದಿ

ಗಜೇಂದ್ರ ಮೋಕ್ಷ -2

Image
ಗಜೇಂದ್ರ ಮೋಕ್ಷ -2

ಕೆಲವು ತಿಂಗಳ ಹಿಂದೆ ಪದ್ಯಪಾನದಲ್ಲಿ   ಕೊಟ್ಟಿದ್ದ ಗಜೇಂದ್ರ ಮೋಕ್ಷವನ್ನು ವರ್ಣಿಸುವ ಒಂದು ದತ್ತಪದಿಯ ಬಗ್ಗೆ ಬರೆದಿದ್ದೆ. ಅಲ್ಲಿ ಆನೆಯನ್ನುಳಿಸಲು, ವಿಷ್ಣು ಗರುಡವಾಹನನಾದ ಪರಿಯನ್ನು ಬಣ್ಣಿಸಲು  Auto (ಆಟೊ), Rickshaw (ರಿಕ್ಷ), Volvo (ವೊಲ್ವೊ), Lorry (ಲಾರಿ) ಪದಗಳನ್ನು ಬಳಸಬೇಕಿತ್ತು. ಆಗ ಬರೆದ ಪದ್ಯವನ್ನು ಓದಲು ಇಲ್ಲಿ ಚಿಟಕಿಸಿ.


ಕಳೆದ ವಾರ ನಡೆದ ಶತಾವಧಾನದಲ್ಲಿ ಕೆಲವು ಪೃಚ್ಛಕರು ಒಂದೇ ಸಮಸ್ಯೆಗೆ ಹತ್ತು-ಇಪ್ಪತ್ತು-ಮೂವತ್ತು ಉತ್ತರಗಳನ್ನು ಬರೆದ ವಿಷಯ ನೋಡಿದಾಗಿನಿಂದ ಇಪ್ಪತ್ತು ಬೇಡ ಹೋಗಲಿ, ಒಂದು ಪ್ರಶ್ನೆಗೆ ನನಗೆ ಎರಡು ಉತ್ತರವನ್ನಾದರೂ ಬರೆಯುವುದು ಸಾಧ್ಯವೇ ಅನ್ನುವ ಪ್ರಶ್ನೆ ಬಂತು . ಇರಲಿ.  ಇನ್ನೊಂದು ಅವಧಾನದ ವಿಡಿಯೋ ನೋಡುವಾಗ ಅಲ್ಲಿ ಇದೇ ಗಜೇಂದ್ರ ಮೋಕ್ಷಕ್ಕೆ ತುಸು ಬೇರೆ ಪದಗಳನ್ನು ಕೊಡಲಾಗಿತ್ತು - ಸರಿ, ಅದಕ್ಕೆ ಒಂದು ಕೈ ಹಾಕೋಣವೆಂದು ಈ ಪ್ರಯತ್ನ. ಹಾಗಾಗಿ ಒಂದೇ ಸಮಸ್ಯೆ ಅಲ್ಲದಿದ್ದರೂ ಒಂದೇ ತರಹದ ಸಮಸ್ಯೆ  ಅನ್ನಬಹುದು!

ಈ ಬಾರಿ ಇಲ್ಲಿ ಬಳಸಬೇಕಾದ ಪದಗಳೂ ಚಕ್ರಿಗಳೇ - ಅಂದರೆ ಚಕ್ರಗಳನ್ನು ಹೊಂದಿದವೇನೇ: ಸೈಕಲ್ (Cycle)  , ವ್ಯಾನ್ (Van), ಲಾರಿ (Van)  ಮತ್ತೆ ಕಾರ್ (Car).

ನಾನು ಬರೆದ ಪದ್ಯ ಹೀಗಿದೆ ನೋಡಿ. ಹೇಗಿದೆ ಹೇಳಿ!

ಅಸುವು ಹೋಗುತಲಿಹವು ವ್ಯಾನಾದಿ ಪಂಚಕವು
ತುಸು ನೀನು ಕರುಣಿಸೈ ಕಲ್ಲಾಗಿಸದೆ ಮನವ
ಮೊಸಳೆಯಿಂದೆನ್ನುಳಿಸಲಾರಿಹರೆನಲು ಗಜವು
ಎಸೆವ ಕಾರ್ಮುಗಿಲಿಂದ ಗರುಡ…

ಪದ್ಯಪಾನದ ಅಮಲು

Image
ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:1)
ಚೆಲ್ಲಿರಲು ಹೂವುಗಳು ಆಗಸದಿ ಭರದಿಂದ
ಮಲ್ಲೆ ಸಂಪಿಗೆ ಜಾಜಿ ಪಾರಿಜಾತಗಳು
ಸೊಲ್ಲ ಹೆಣ್ಣೇ ಬುವಿಗೆ ರಾಗ ರೂಪವನು ತಾ
-ಳಿಲ್ಲಿ ಬಂದಿಹಳೆಂಬ ಬೆರಗು ತರಿಸಿ!

(ಅವಧಾನ ಮುಗಿದ ನಂತರ ಹೂಮಳೆ ಸುರಿದಾಗ , ಮನಸಿನಲ್ಲಿ ಮೂಡಿದ ಭಾವವಿದು)


2)
ಮದ್ಯಪಾನಕು ಪದ್ಯಪಾನಕು ಭೇದವೊಂದೇ ಅಕ್ಕರ
ವಿದ್ಯಮಾನವ ಕೇಳಿರೈ ಬಲು ವೈಪರೀತ್ಯವು ನಿಚ್ಚಳ
ಮದ್ಯಪಾನವ ಮಾಡಿದರೆ ನಶೆಯಿಳಿವುದೊಂದೇ ಹೊತ್ತಿಗೆ
ಪದ್ಯಪಾನಕೆ ತೊಡಗಿಬಿಟ್ಟರೆ ಕೊನೆಯೆಕಾಣದು ಮತ್ತಿಗೆ !

-ಹಂಸಾನಂದಿ

ಕೊ: ರಾಗ: ರಾ.ಗಣೇಶ್ ; ಸೊಲ್ಲ ಹೆಣ್ = ಮಾತಿನ ದೇವತೆ, ನುಡಿದೇವಿ, ಸರಸ್ವತಿ

ಕೊ.ಕೊ: ಶತಾವಧಾನ ಆದಮೇಲೆ, ಅದನ್ನು ಆಯೋಜಿಸಿದ ಪದ್ಯಪಾನ ಹಲವರಿಗೆ ಹೊಸದಾಗಿ ಪರಿಚಿತವಾಗಿದ್ದರಿಂದ, ಮರುದಿನ ಆ ವೆಬ್ ಸೈಟ್ ನ ಸರ್ವರ್  ಬಂದ ಜನರ ಪ್ರವಾಹವನ್ನು ತಡೆಯಲಾಗದೇ ತೊಂದರೆಗೊಳಗಾಗಿತ್ತು. ಆಮೇಲೆ ಸರಿಪಡಿಸಿದ್ದಾರೆನ್ನಿ. ಆ ಸಂದರ್ಭದಲ್ಲಿ ಹೊಳೆದ ಪದ್ಯ ಎರಡನೆಯದು. ಪದ್ಯಪಾನದ ಮತ್ತಿನ ಬಗ್ಗೆಯ ಈ ಪದ್ಯ ಮತ್ತಕೋಕಿಲ ಎಂಬ ಛಂದಸ್ಸಿನಲ್ಲಿದೆ :)