Posts

Showing posts from April, 2013

ಚೆಲ್ವಾಯ್ತು ಚಂದ್ರೋದಯಂ!

ಎರಡು ವೃತ್ತಗಳು: (ಪದ್ಯಸಪ್ತಾಹ 67 ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ)

|| ಶಾರ್ದೂಲವಿಕ್ರೀಡಿತ || ಸೀತಾಮಾತೆಯ ಕಾಣಪೋದ ಹನುಮಂ ಕಂಡಾಕೆಯಂ ರಾತ್ರಿಯೊಳ್
ಮಾತೊಂದಾಡದೆ ಮುನ್ನಮೇ ತೆಗೆಯುತುಂ ಪೊನ್ನುಂಗುರಂ ಮುದ್ರೆಯಂ
ತಾ ತಂದಿರ್ಪುದ ತೋರಿ “ರಾಮ ಬರುವನ್” ಎನ್ನುತ್ತ ಸಂತೈಸಿರಲ್
ಹಾ! ತಂಪಾದುದು ತಾಪಗೊಂಡ ಮನಮುಂ! ಚೆಲ್ವಾಯ್ತು ಚಂದ್ರೋದಯಂ ! (ಸುಂದರ ಕಾಂಡದಲ್ಲಿ ಸೀತೆಯನ್ನು ಅಶೋಕ ವನದಲ್ಲಿ ಹನುಮ ಕಂಡು ಅವಳಿಗೆ ಮುದ್ರೆಯುಂಗುರ ವನ್ನು ತೋರಿ, ರಾಮ ಬರುವನೆಂಬ ಮಾತನ್ನು ಹೇಳಿದಾದ ಸೀತೆಯ ಮನಸ್ಸೂ ತಂಪಾಗಿ, ಆಗ ಉದಯಿಸುತ್ತಿದ್ದ ಚಂದ್ರನೂ ಸೊಗಸಾಗಿ ಕಂಡ) ॥ ಮತ್ತೇಭವಿಕ್ರೀಡಿತ ॥ ಸತಿ ಚಿನ್ನಾಂಬಿಕೆ ಮಾಘದೊಂದಿರುಳೊಳಾ ಪಂಪಾನದೀ ತೀರದೊಳ್
ಮತಿಯೊಳ್ ಬೇಡುತ ರಾಯನಾವಿಜಯಮಂ ತಾ ಚಿಂತಿಸುತ್ತಿರ್ದಪಳ್
ಸ್ಮೃತಿಯೊಳ್ ವೇಂಕಟನಾಥನಂ ಬಗೆದಿರಲ್ ಬಂದೋರ್ವ ದೂತಂ ಸುಸಂ-
ಗತಿಯಂ ಪೇಳ್ದೊಡನಾಕೆಗಾದುದು ಮುದಂ! ಚೆಲ್ವಾಯ್ತು ಚಂದ್ರೋದಯಂ! ಹಿನ್ನಲೆ: ಹದಿನೈದನೇ ಶತಮಾನದ ಕಥೆ – ಕೃಷ್ಣದೇವರಾಯನು ಯಾವುದೋ ಯುದ್ಧಕ್ಕೆ ಹೋಗಿರುವಾಗ, ಅವನ ಮಡದಿ ಚಿನ್ನಾದೇವಿಯು ಒಂದು ಸಂಜೆ ತುಂಗಭದ್ರೆಯ ದಡದಲ್ಲಿ ಪತಿಗೆ ಗೆಲುವಾಗಲೆಂದು ದೇವರನ್ನು ಬೇಡುತ್ತಿರುವಾಗಲೇ ದೂತನೊಬ್ಬ ಬಂದು ಒಳ್ಳೆಯ ಸುದ್ದಿ (ಪತಿಯ ಗೆಲುವನ್ನೋ, ಊರಿಗೆ ಮರಳುತ್ತಿರುವುದನ್ನೋ) ಹೇಳಲಾಗಿ, ಆಗ ಉದಯಿಸುತ್ತಿದ್ದ ಚಂದ್ರ ಆಕೆಗೆ ಸೊಗಸಾಗಿ ಕಂಡನು! – ನನ್ನ ಕಲ್ಪನೆಯ ಸಂದರ್ಭವಷ್ಟೇ -ಹಂಸಾನಂದಿ ಕೊ:ಈ ಪದ್ಯವನ್…

ಮನ್ಮಥನ ಹತ್ತು ಬಾಣಗಳು

Image
ಇದೇನು ಸ್ವಾಮೀ? ಮನ್ಮಥನ ಹತ್ತಿರ ಇರೋದು ಐದು ಬಾಣಗಳು ಅಂದಿರಾ? ಅದು ಸರಿಯೇ.  ನಾಳೆ ಚಿತ್ರಾ ಪೂರ್ಣಿಮೆ. ಚೈತ್ರಮಾಸದ ಹುಣ್ಣಿಮೆ. ಚೈತ್ರ ಅಂದ್ರೆ ಎಲೆಚಿಗುರಿ, ಗಿಡಮರಗಳೆಲ್ಲ ಹೂತಾಳೋ ಕಾಲ ಅನ್ನೋದು ನಿಮಗೆ ಗೊತ್ತೇ ಇರುತ್ತೆ. ಚೈತ್ರ ಅಂದರೆ ವಸಂತ ಕಾಲ. ಈ ವಸಂತಕಾಲ ಅಂತಿಂತಹದ್ದಲ್ಲ. ಸಾಕ್ಷಾತ್ ಮನ್ಮಥನ ಬಂಟ ಈತ. ಶಿವಪಾರ್ವತಿಯರ ಮದುವೆಯ ಕಥೆ ನೀವು ಕೇಳೇ ಇರ್ತೀರ. ದಕ್ಷಬ್ರಹ್ಮನ ಮಗಳಾದ  ದಾಕ್ಷಾಯಣಿಯನ್ನಯನ್ನ ಮದುವೆಯಾಗಿದ್ದವನು ಶಿವ. ಒಮ್ಮೆ ಯಾಗ ಮಾಡುವಾಗ, ಅವನು ಬೇಕೆಂದೇ ಮಗಳು ಅಳಿಯನನ್ನ ಕರೆಯಲಿಲ್ಲ. ಅವಮಾನ ತಾಳದ ದಾಕ್ಷಾಯಣಿ, ಆ ಯಾಗದಲ್ಲಿಯ ಅಗ್ನಿಯೊಳಗೇ ನೆಗೆದು ಅಸುನೀಗಿದಳು. ಹೆಂಡತಿಯನ್ನು ಕಳೆದುಕೊಂಡ ಶಿವ ಎಲ್ಲರಿಂದ ದೂರವಾಗಿ ಕೈಲಾಸಪರ್ವತದಲ್ಲಿ ಘೋರ ತಪಸ್ಸು ಮಾಡತೊಡಗಿದ.


ಅತ್ತಕಡೆ ತಾರಕಾಸುರನ ಕಾಟ ದೇವತೆಗಳಿಗೆ ವಿಪರೀತವಾಗಿಹೋಯಿತು. ಶಿವನಮಗನೊಬ್ಬನೇ ಆ ತಾರಕನನ್ನು ಕೊಲ್ಲಬಲ್ಲ. ಆದರೆ, ಸಂಸಾರದಿಂದ ದೂರವಾದ ಶಿವನಿಂದ ತಾಳಿ ಕಟ್ಟಿಸಿಕೊಳ್ಳಬಲ್ಲವರು ಯಾರು? ಪರ್ವತರಾಜನ ಮಗಳು ಪಾರ್ವತಿಗೇನೋ ಶಿವನ ಮೇಲೆ ಮೋಹ. ಆದರೆ ಅವಳ ಆರಾಧನೆಗೆ ಶಿವ ಕಣ್ಣು ತೆರೆದು ನೋಡಿದರೆ ತಾನೇ? ಅವಳ ಕಡೆಗೆ ಕಣ್ಣೆತ್ತಿ ನೋಡಿದರೆ ಅವಳ ಪ್ರೀತಿಯಲ್ಲಿ ಶಿವನು ಬೀಳಬಹುದೆಂದು ದೇವತೆಗಳು ಶಿವನೆಡೆಗೆ, ಮನ್ಮಥ,ರತಿ ಮತ್ತೆ ಅವರ ಸಹಾಯಕ್ಕೆ ವಸಂತನನ್ನು ಕಳಿಸಿದರು. ಮನ್ಮಥನು ತನ್ನ ಹೂಬಾಣದಲ್ಲಿ ವಸಂತ ಕಾಲದಲ್ಲಿ ಬಿಡುವ ಅರವಿಂದ, ಅಶೋಕ,ಚೂತ(ಮಾವು),ನ…

ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ!

ಸಮಸ್ಯಾಪೂರಣದ ಬಗ್ಗೆ ಈ ಹಿಂದೆಹಲವು ಬಾರಿ ಬರೆದಿದ್ದೆ - ಪದ್ಯದಲ್ಲಿ ಒಂದು ಸಾಲನ್ನು ಕೊಟ್ಟು, ಉಳಿದ ಸಾಲುಗಳನ್ನು ಕೊಟ್ಟ ಛಂದಸ್ಸಿಗೆ ಹೊಂದುವಂತೆ ಬರೆಯಬೇಕೆನ್ನುವುದೇ ಸವಾಲು. ಶತಮಾನಗಳ ಹಿಂದಿನಿಂದಲೂ ಬೆಳೆದು ಬಂದ ಈ ಕಲೆಯ ಬಗ್ಗೆ ನನಗೆ ಓದುವ ಆಸಕ್ತಿ ಇದ್ದರೂ ಈ ರೀತಿಯ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಕೈ ಹಾಕುವುದನ್ನು ದೈರ್ಯ ನನಗೆ ಬಂದಿದ್ದು ಈಚೆಗೆ ಪದ್ಯಪಾನದಲ್ಲಿ ಕೆಲವು ಸಮಸ್ಯೆಗಳನ್ನು ನೋಡಿದ ಮೇಲೆಯೇ. ಕೆಲವು ತಿಂಗಳ ಹಿಂದೆ ನಡೆದ ಶತಾವಧಾನದಲ್ಲಿ ಕೊಟ್ಟ ಸಮಸ್ಯೆಗೆ ಕೆಲವು ಪ್ರೇಕ್ಷಕರು 10-20 ಉತ್ತರಗಳನ್ನು ಕೊಟ್ಟಿದ್ದನ್ನು ನೋಡಿದಾಗಿನಿಂದ ನನಗೂ ಅಂತಹ ಪ್ರಯತ್ನ ಮಾಡಬೇಕಂತ ಅನ್ನಿಸಿತ್ತು. ಆದರೆ, ನನಗೆ ಸರಿಯಾಗಿ ಮನವರಿಕೆಯಾಗಿರುವ ಛಂದಸ್ಸುಗಳೇ ಒಂದೋ ಎರಡೋ! ಅಲ್ಲದೆ ಬಗೆಬಗೆಯ ಉತ್ತರ ಕೊಡುವಂತಹ ಸಮಸ್ಯೆಯೂ ಬೇಕಲ್ಲ!  

ಇವತ್ತು (ಅಂದರೆ ಏಪ್ರಿಲ್ 21ರಂದು) ಪುತ್ತೂರಿನಲ್ಲಿ ನಡೆದ ಅಷ್ಟಾವಧಾನದ ಆಯೋಜಕರಲ್ಲೊಬ್ಬರಾಗಿದ್ದ ನನ್ನ ಗೆಳೆಯರೊಬ್ಬರು ಈ ಅವಧಾನದಲ್ಲಿ ಹೀಗೊಂದು ಸಮಸ್ಯೆ ಕೊಡುವ ಉದ್ದೇಶವಿದೆ ಅಂತ ಆ ಸಾಲನ್ನು ನನಗೆ ಕೆಲದಿನಗಳ ಹಿಂದೆಯೇ ತೋರಿಸಿದ್ದರು:
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ

ಕೃಷ್ಣ ಅರ್ಜುನನಿಗೆ ಸಾರಥಿಯಾಗಿದ್ದು ಗೊತ್ತಿರುವ ಸಮಾಚಾರವೇ. ಆದರೆ ಅರ್ಜುನ ಕೃಷ್ಣನಿಗೆ ಸಾರಥಿಯಾಗಿದ್ದು ಯಾವಾಗ? ಒಳ್ಳೇ ಸಮಸ್ಯೆಯೇ ಅನ್ನಿಸಿತು. ಜೊತೆಗೆ ಈ ಸಾಲು ಭಾಮಿನೀ ಷಟ್ಪದಿಯಲ್ಲಿದ್ದುದ್ದು ನನಗೆ ಖುಷಿಯಾಯ್ತು. ಏಕೆಂದ…

ವಸಂತ

ಕೆಂಬಣ್ಣದಾ ಚಿಗುರ ಹೊತ್ತು ತಲೆಬಾಗಿರುವ
ಕೊಂಬೆಕೊಂಬೆಗೆ ಹೂತ ಮಾಮರಗಳೀಗ
ತಂಬೆಲರಿನಲಿ ತೂಗಿ ಹುಟ್ಟಿಸಿದ್ದಾವು ಮಿಗೆ
ಹಂಬಲವ ಹೆಣ್ಣುಗಳ ಮನದಿ ತವಕದಲಿ

ಸಂಸ್ಕೃತ ಮೂಲ ( ಕಾಳಿದಾಸನ ಋತುಸಂಹಾರ, ಸರ್ಗ 6, ಪದ್ಯ 15) :

ತಾಮ್ರ ಪ್ರವಾಲ ಸ್ತಬಕಾವನಮ್ರಾಃ
ಚೂತದ್ರುಮಾಃ ಪುಷ್ಪಿತಚಾರುಶಾಖಾಃ
ಕುರ್ವಂತಿ ಕಾಮಂ ಪವನಾವಧೂತಾಃ
ಪರ್ಯುತ್ಸುಕಂ ಮಾನಸಮಂಗನಾನಾಮ್

ताम्रप्रवालस्तवकावनम्राश्-
चूतद्रुमाः पुष्पितचारुशाखाः।
कुर्वन्ति कामम् पवनावधूताः
पर्युत्सुकम् मानसम् अङ्गनानाम्॥

ಎಲ್ಲರಿಗೂ ಬರಲಿರುವ 'ವಿಜಯ' ಸಂವತ್ಸರವು ನೆಮ್ಮದಿಯಿಂದ ಕೂಡಿರಲೆಂದ ಹಾರೈಕೆಗಳು.

-ಹಂಸಾನಂದಿ

ಕೊ:  ತಂಬೆಲರು = ತಂಪಾದ ಗಾಳಿ


ಕೊ.ಕೊ: ಏಪ್ರಿಲ್ 10, 2013, ಯುಗಾದಿ ಹಬ್ಬ. ವಸಂತದ ಮೊದಲ ದಿನ. ಅದಕ್ಕೇ ಆ ವಸಂತನ ಬಗ್ಗೆ ಇರುವ ಒಂದು ಪದ್ಯವನ್ನು ಅನುವಾದಿಸಬೇಕೆಂದು ಇದನ್ನು ಹುಡುಕಿ ಬರೆದೆ. ಕಾಳಿದಾಸ ಇದನ್ನು ಬರೆದಾಗ, ಯುಗಾದಿಯ ಸಮಯದಲ್ಲಿ ವಸಂತ ನಿಜವಾಗಿಯೂ ಮೊದಲಾಗುತ್ತಿತ್ತು ಈಗ ಪ್ರಿಸಿಶನ್ ನಿಂದ ಕಾಲಗಳು ಸ್ವಲ್ಪ ಹಿಂದೆ ಹೋಗಿದ್ದರೂ ಸಹ!

ಕೊ.ಕೊ.ಕೊ: ಹಿಂದೊಮ್ಮೆ ಮಾಡಿದ್ದ ಋತುಸಂಹಾರದ ಇನ್ನೊಂದು ಪದ್ಯದ ಅನುವಾದ ಇಲ್ಲಿದೆ.ಗೆಳತಿಗೊಂದು ಮಾತು

Image
ಅತ್ತ ಹೊರಗಡೆ ತಲೆಯ ಬಾಗಿಸಿ ನೆಲವ ಕೆರೆಯವ ನಲ್ಲನು ತುತ್ತು ತಿನ್ನದೆ ಹೋದ ಗೆಳತಿಯರತ್ತು ಕಂಗಳು ಬಾತಿವೆ ಮತ್ತೆ ಪಂಜರದಲ್ಲಿ ಗಿಳಿಗಳ ಸದ್ದು ಕೇಳದೆ ಹೋಗಿದೆ ಇತ್ತಲಿಂತಹ ಪಾಡು ನಿನ್ನದು! ತೊರೆಯೆ ಹಠವನು ಬೇಗನೆ!

ಸಂಸ್ಕೃತ ಮೂಲ (ಅಮರುಕನ ಅಮರುಶತಕ, ಶ್ಲೋಕ ೮):
ಲಿಖನ್ನಾಸ್ತೇ ಭೂಮಿಂ ಬಹಿರನತಃ ಪ್ರಾಣದಯಿತೋ ನಿರಾಹಾರಾಃ ಸಖ್ಯಃ ಸತತರುದಿತೋಛ್ಛನ್ನನಯನಾಃ । ಪರಿತ್ಯಕ್ತಂ ಸರ್ವಂ ಹಸಿತಪಠಿತಂ ಪಂಜರಶುಕೈ- ಸ್ತವಾವಸ್ಥಾಚೇಯಂ ವಿಸೃಜ ಕಠಿನೇ! ಮಾನಮಧುನಾ ॥

-ಹಂಸಾನಂದಿ

ಕೊ: ಇಲ್ಲಿರುವ ಚಿತ್ರವನ್ನು ನಾನು  http://www.indianminiaturepaintings.co.uk/Hyderabad_Vilaval_Ragini_23408.html ಇಲ್ಲಿಂದ ತೆಗೆದುಕೊಂಡಿದ್ದೇನೆ. ಇದೊಂದು ರಾಗಮಾಲಾ ಚಿತ್ರ

ಕೊ.ಕೊ: ರಾಗಮಾಲಾ ಚಿತ್ರಗಳು ಸಾಮಾನ್ಯವಾಗಿ  ಹಿಂದೂಸ್ತಾನಿ ಸಂಗೀತದ ರಾಗ ರಾಗಿಣಿಗಳಿಗೊಂದು ವ್ಯಕ್ತಿತ್ವವನ್ನು ಕೊಟ್ಟು  ಚಿತ್ರಿಸುವಂತಹ ಒಂದು ಸಾಂಪ್ರದಾಯಿಕ ವರ್ಣಚಿತ್ರ ಶೈಲಿ.  ಇಲ್ಲಿ ಹಾಕಿರುವ  ವಿಲಾವಲ್ ರಾಗಿಣಿಯನ್ನು ತೋರಿಸುವ ಈ ಚಿತ್ರ ನನಗೆ ಈ ಪದ್ಯದಲ್ಲಿರುವ ನಾಯಕಿ ಮತ್ತು  ಅವಳಿಗೆ ಸಲಹೆ ನೀಡುವ  ಗೆಳತಿಯನ್ನು ಸೂಚಿಸುತ್ತೆ ಅನ್ನಿಸಿದ್ದರಿಂದ ಇಲ್ಲಿ ಬಳಸಿಕೊಂಡಿದ್ದೇನೆ. ಈ ಚಿತ್ರ ಸುಮಾರು ಕ್ರಿ.ಶ.೧೭೫೦ರ ಲ್ಲಿ ಹೈದರಾಬಾದ್ ನಲ್ಲಿ ಚಿತ್ರಿತವಾದದ್ದೆಂದು ಇದನ್ನು ತೆಗೆದುಕೊಂಡ ಜಾಲತಾಣದಲ್ಲಿ ಹಾಕಲಾಗಿದೆ.