Posts

Showing posts from March, 2014

ಯುಗ ಯುಗಾದಿ ಕಳೆದರೂ ...

Image
ಎತ್ತನೋಡಿರತ್ತ ಚಿಗುರನು ಹೊತ್ತು ಮರಗಳು ನಲಿದಿರೆ ಮತ್ತೆ ಬಂದಿಹುದೀ ಯುಗಾದಿಯು ಹೊಸತು ವರ್ಷಕ್ಕಾದಿಯು
ಉಲಿವ ಕೋಗಿಲೆ ಚಿಗುರು ಮಾವೆಲೆ ನೀಲಿಬಣ್ಣದ ಆಗಸ ಹುರುಪು ಹೆಚ್ಚಿಸುವಂಥ ಚೆಲುವಿದು ತಂತು ಮನದಲಿ ಸಂತಸ
ಮೂಡಣದ ಆಗಸದಿ ನೇಸರನ ಓಕುಳಿ ಮನೆಮನೆಯ ಮುಂದೂ ರಂಗವಲ್ಲಿ ಮಾಂದಳಿರ ತೋರಣವು ತೂಗಿ ಬಾಗಿಲಲಿ ಹೊಸಕನಸ  ಚಿಮ್ಮಿಸುವುದೀ ಮನದಲಿ
ಬೆಳಗಾಗ ಏಳುತಲೆ ಮಾಡೋಣ ಅಭ್ಯಂಗ ಹೊಸ ವಸ್ತ್ರಗಳ ಧರಿಸಿ ನಾವು ನಲಿಯೋಣ ಮುಂಬರುವ ವರ್ಷಕ್ಕೆ  ಹರುಷವನೆ ಕೋರುತ್ತ ಬೇವುಬೆಲ್ಲವನು ತಿಂದು ಸಜ್ಜಾಗಿರೋಣಹೊಸವರ್ಷದಾದಿಯಲಿ ಬೇವು ಬೆಲ್ಲಗಳೇಕೆ ಬೆಲ್ಲವೇ ಸಾಕೆಮಗೆ ಎಂಬ ಬಗೆ ಬೇಡೈ ಬಾಳಿನಲಿ ಬಂದೀತು ಸುಖದುಃಖಗಳು ಎರಡು ಕಷ್ಟ ಸಹಿಸುವ ಶಕ್ತಿ ದೇವ ನೀಡೈ
ವರುಷಕಿದುವೇ ಮೊದಲ ಹಬ್ಬ ಯುಗಾದಿ ತರುತಿರಲಿ ಎಣೆಯಿರದ ಹರುಷ ನಮಗೆಲ್ಲ ಬರುವ ತೊಡಕುಗಳನೆಲ್ಲ ಬೇವಂತೆ ನೀಗುತ್ತ ಹರಸುವಾ ಬಾಳ ತುಂಬಿರಲಿ ಬೆಲ್ಲ
ಹಬ್ಬದೂಟಕ್ಕೆಂದು ಮಾಗಾಯಿ ಚಿತ್ರಾನ್ನ ಒಬ್ಬಟ್ಟು ಹೂರಣದ ಜೊತೆಗೆ ಸವಿಯೋಣ

ಅವಳ ನೋಟ

Image
ದೂರದಿಂದಲಿ ಹುರುಪಿನಲಿ   ಬಂದರೆಲ್ಲಿಗೋ ಜಾರಿದವು ಮಾತನಾಡಿಸಲು ಥಟ್ಟನೇ ಬಿರಿದವು  

ಅಪ್ಪಿಕೊಂಡರೆ ಕೆಂಪಾದುವು ಉಡುಗೆಯನು  ಹಿಡಿಯೆ ಸಿಟ್ಟಿನಲಿ ಹುಬ್ಬ ಗಂಟಿಕ್ಕಿದವು

ಪಾದವೇ ಗತಿಯೆನುತ ಅವಳಡಿಗೆ ಬೀಳಲು ಚಣ ಮಾತ್ರದಲಿ ನೀರು ತುಂಬಿದವು

ಹಾ! ಏನಚ್ಚರಿಯೊ! ಇವಳ ಕಣ್ಣುಗಳು ನಲ್ಲನ ತಪ್ಪಿಗೆ  ತಕ್ಕ ಚತುರತೆಯ ತಾಳಿಹವು!ಹಂಸನಾದ 150000

Image
ನೆನ್ನೆ ಯಾವಾಗಲೋ ೧೫೦,೦೦೦ ನೇ ಜೊತೆ ಕಣ್ಣುಗಳು ಹಂಸನಾದ ವನ್ನು ನೋಡಿವೆ.
ಬಂದು, ನೋಡಿ, ಓದಿದವರಿಗೆಲ್ಲ ಧನ್ಯವಾದಗಳು!
-ಹಂಸಾನಂದಿ

ವಸಂತದ ಗಾಳಿ

Image
ಬೀಳ್ವ ಮಂಜನು ಬೀಳ್ಕೊಡುವುದಕೆ  ಋತು ವಸಂತನು ಬಂದಿರೆ
ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ
ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ
ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ!


ಸಂಸ್ಕೃತ ಮೂಲ (ಕಾಳಿದಾಸನ ಋತುಸಂಹಾರ, 6ನೇ ಸರ್ಗ-22):

ಅಕಂಪಯನ್ ಕುಸುಮಿತಾ: ಸಹಕಾರ ಶಾಖಾ
ವಿಸ್ತಾರಯನ್ ಪರಭೃತಸ್ಯ  ವಚಾಂಸಿ ದಿಕ್ಷು
ವಾಯುರ್ವಿವಾತಿ ಹೃದಯಾನಿ ಹರನ್ನರಾಣಾಂ
ನೀಹಾರಪಾತ ವಿಗಮಾತ್ ಸುಭಗೋ ವಸಂತೇ


-ಹಂಸಾನಂದಿ

ಕೊ: ಮಾರ್ಚ್ ೨೦ ವಸಂತ ವಿಷುವ - ಅಂದರೆ  ವಸಂತದ ಮೊದಲ ದಿನ. ಈ ದಿನ ಹಗಲು ಇರುಳು ಭೂಮಿಯ ಮೇಲೆ ಎಲ್ಲ ಕಡೆಯಲ್ಲೂ ಒಂದೇ ಸಮನಾಗಿರುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಇಲ್ಲಿ ಮತ್ತೆ ಇಲ್ಲಿ ನೀವು ಓದಬಹುದು.

ಕೊ.ಕೊ: ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ಈ ಮನ್ಮಥ ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ (ಮಾವು) ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ. ಇಂತಹ ಹೂ ಬಾಣ ಹಿಡಿದವನ ಮೇಲೊಂದು ಹಳೆಯ ಹರಟೆ ಇಲ್ಲಿದೆ.

ಕೊ.ಕೊ.ಕೊ: ಇಂತಹ ವಸಂತ ಕಾಲದಲ್ಲಿ ಬ…

ಬುದ್ಧನ ದಾರಿ

Image
ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ ಮೊಗವ ನೋಡಿರೆ  ಚಣವು ಬಿಡುತಿದ್ದನೇ? ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ  ಸೃಷ್ಟಿಸಿದನೆಂದರದ  ನಂಬಬಹುದೇ?
ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು  ಸೃಷ್ಟಿಸುವನೊಬ್ಬನೂ ಇಲ್ಲವೆಂದು  ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ  ಹಿಡಿವುದೊಂದೇ ಈಗ ಸರಿದಾರಿಯು!  

ಸಂಸ್ಕೃತ ಮೂಲ ( ವಿದ್ಯಾಕರನ ಸುಭಾಷಿತ ರತ್ನ ಕೋಶದಲ್ಲಿ  ೧೬.೫೭, ೪೪೦ ; ಧರ್ಮಕೀರ್ತಿ ಬರೆದ ಪದ್ಯ  ) 
ಯಾತಾ ಲೋಚನ ಗೋಚರಂ ಯದಿ ವಿಧೇರೇಣೇಕ್ಷಣಾ ಸುಂದರೀ ನೇಯಂ ಕುಂಕುಮಪಂಕಪಿಂಜರಮುಖೀ ತೇನೋಜ್ಝ್ಹಿತಾ ಸ್ಯಾತ್ ಕ್ಷಣಂ | ನಾಪ್ಯಾಮೀಲಿತ ಲೋಚನಸ್ಯ ರಚನಾದ್ರೂಪಂ ಭವೇದೀಶ್ವರಂ ತಸ್ಮಾತ್ಸರ್ವಮಕರ್ತೃಕಂ ಜಗದಿದಂ ಶ್ರೇಯೋ ಮತಂ ಸೌಗತಂ || 

-ಹಂಸಾನಂದಿ
ಕೊ: ಧರ್ಮಕೀರ್ತಿ  ಆರನೇ ಶತಮಾನದಲ್ಲಿದ್ದ ಒಬ್ಬ ಬೌದ್ಧ ತತ್ತ್ವ ಜ್ಞಾನಿ. ವಿದ್ಯಾಕರ ಹನ್ನೊಂದನೇ ಶತಮಾನದಲ್ಲಿದ್ದ ಇನ್ನೊಬ್ಬ ಬೌದ್ಧ ಕವಿ. ಇವನ ಸುಭಾಷಿತ ರತ್ನ ಕೋಶವೆಂಬ ಸಂಗ್ರಹದಲ್ಲಿ ಸುಮಾರು ೧೮೦೦ಕ್ಕೂ ಹೆಚ್ಚು ಪದ್ಯಗಳಿವೆ.

ಕೊ.ಕೊ ಮೂಲದಲ್ಲಿ  ಕಡೆಯ ಒಂದು ಸಾಲಿನಲ್ಲಿ ಹೇಳಿರುವ ವಿಚಾರವನ್ನು ನಾನು ಸ್ವಲ್ಪ ಹಿಗ್ಗಿಸ ಬೇಕಾಯಿತು. "ಅದಕೆ ಹೇಳುವೆ ಕೇಳು" ಅನ್ನುವ ಮಾತು ಮೂಲದಲ್ಲಿಲ್ಲ!  ಆದರೂ ಮೂಲದ ಆಶಯಕ್ಕೆ ಧಕ್ಕೆ ಆಗಿಲ್ಲ ಎಂದುಕೊಂಡಿದ್ದೇನೆ.  ಅನುವಾದವು ಪಂಚಮಾತ್ರಾ ಚೌಪದಿಯ ಧಾಟಿಯ ಎರಡು ಪದ್ಯಗಳಲ್ಲಿ ಹಂಚಿಕೊಂಡಿದೆ. ಪದ್ಯಗಳಲ್ಲಿ ಪ್ರಾಸ ಮತ್ತೆ ಸಂಧಿ ನಿಯಮಗಳನ್ನು…

ಚತುರೆಯ ಮುನಿಸು

Image
ನಲ್ಲ ಬಂದುದ ನೋಡಿ ನಿಂತು ಸ್ವಾಗತಿಸುತ್ತ ಪಕ್ಕದಲಿ ಕೂರುವುದ ತಪ್ಪಿಸಿದಳು ; ತಾಂಬೂಲವನು ಕೊಡುವ ನೆವದಿಂದ ಒಳಹೋಗಿ ಅಪ್ಪುಗೆಗೆ ಅಡ್ಡಿಯನು ತಂದಿಟ್ಟಳು ; ಜೊತೆಯ ಪರಿಜನರೊಡನೆ ತೊಡಗುತ್ತ ಸೋಗಿನಲಿ ಅವನ ಮಾತಿಗೆ ತಾನು  ಸಿಗದಿದ್ದಳು ; ಮಾಡುವುಪಚಾರದಲಿ ಕೊರತೆಯನು ಕಾಣಿಸದೆ ಚದುರೆ ಮನಸಿನ ಮುನಿಸ ಮೈವೆತ್ತಳು ! 

ಸಂಸ್ಕೃತ ಮೂಲ (ಅಮರುಕನ ಅಮರು ಶತಕ -  ೧೫) :
ಏಕತ್ರಾಸನ ಸಂಸ್ಥಿತಿಃ ಪರಿಹತಾ ಪ್ರಾದುದ್ಗಮಾದ್ ದೂರತಃ ತಾಂಬೂಲಾಯನಚಲೇನ ರಭಸಾಶ್ಲೇಷೋಪಿ ಸಂವಿಘ್ನಿತಃ | ಆಲಾಪೋsಪಿ ನ ಮಿಶ್ರಿತಃ ಪರಿಜನಂ ವ್ಯಾಪಾರಯನ್ತ್ಯಾಂತಿಕೇ ಕಾಂತಂ ಪ್ರತ್ಯುಪಚಾರತಶ್ಚತುರಯಾ ಕೋಪಃ ಕೃತಾರ್ಥಿಕೃತಃ ||
एकत्रासन संस्थितिः परिहता प्रादुद्गमाद्दूरतः तांबूलायनचलेन रभसाश्लेषोपि संविघ्नितः आलापोsपि न मिश्रितः परिजनं व्यापारयन्त्यान्तिके कांतं प्रत्य्पचारतश्चतुरया कोपः कृतार्थीकृतः 
-ಹಂಸಾನಂದಿ
ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ.  ಅನುವಾದವು ಮಾರ್ಪಡಿಸಿದ ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿದೆ. ಬರೆಯುವಾಗ ಎರಡೆರಡು ಸಾಲಿನ ನಾಲ್ಕು ಘಟಕಗಳಂತೆ ಕಂಡರೂ, ಎರಡು ಸಾಲು ಸೇರಿಸಿ ಒಂದು ಸಾಲು ಎಂದುಕೊಳ್ಳಬಹುದು. ಪ್ರತಿ ಸಾಲಿನಲ್ಲೂ ಐದು ಮಾತ್ರೆಗಳ ಏಳು ಗುಂಪೂ, ಕೊನೆಯಲ್ಲಿ ಒಂದು ಉಳಿಕೆಯ ಗುರುವೂ ಇದೆ. 
ಕೊ.ಕೊ: ನಾಯಕಿಗೆ ಅವಳ ನಲ್ಲನ ಮೇಲೆ ಮುನಿಸು ಏಕೆಂದು ಪದ್ಯ ತಿಳಿಸುವುದಿಲ್ಲ. ಆದರೆ ಅವಳು ಹೇಗೆ ತನ್ನ ಕ…

ಬೆಸೆಯದ ಬೆಸುಗೆ

Image
ಪ್ರೇಮದ ಸರಿಗೆಯು ಕಡಿದಿರಲು ಬೆಸೆದರೆ ಮನಕದು ಮೆಚ್ಚುವುದೆ? ಕಾಯಿಸಿ ಆರಿಸಿ ಇಟ್ಟಿಹ ನೀರದು ದಾಹದ ಬಾಯಿಗೆ ರುಚಿಸುವುದೆ?

ಸಂಸ್ಕೃತ ಮೂಲ (ಮಂಜುನಾಥ ಕವಿಯ ಸಂಸ್ಕೃತ ಗಾಥಾ ಸಪ್ತಶತಿ ೧-೫೩ ):

ಪ್ರೇಮ್ಣೋ ವಿರೋಧಿತಸಂಧಿತಸ್ಯ ಪ್ರತ್ಯಕ್ಷದೃಷ್ಟವ್ಯಲೀಕಸ್ಯ ಉದಕಸ್ಯೇವ   ತಾಪಿತಶೀತಲಸ್ಯ ವಿರಸೋ ರಸೋ ಭವತಿ

ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಯಿ ೧ - ೫೩):
ಪೇಮಸ್ಸ ಚಿರೋಹಿಅಸಂಘಿಅಸ್ಸ ಪಚ್ಚಕ್ಖದಿಟ್ಠವಿಲಿಸಸ್ಸ ಉಅಅಸ್ಸ ವ ತಾವಿಅಸೀಅಲಸ್ಸ ವಿರಸೋ ರಸೋ ಹೋಇ

-ಹಂಸಾನಂದಿ

ಕೊ: ಬೆಸುಗೆ ಅನ್ನುವ ಸಿನಿಮಾಗೂ ಈ ಪದ್ಯಕ್ಕೂ ಏನೇನೂ ಸಂಬಂಧವಿಲ್ಲ :-)

ಕೊ.ಕೊ: ಮೂಲದಲ್ಲಿ ಇಲ್ಲದ ಕೆಲವು ಪದಗಳು ಅನುವಾದದಲ್ಲಿವೆ. ಮೂಲದಲ್ಲಿ ತುಂಡಾಗುವುದು ಎಂದಿದೆಯೇ ಹೊರತು ತಂತಿಯ ಮಾತಿಲ್ಲ. ಹಾಗೇ ಅಲ್ಲಿ ಇರುವ ಹೇಳಿಕೆ, ಅನುವಾದದಲ್ಲಿ ಪ್ರಶ್ನೆಯಾಗಿ ಬದಲಾಗಿದೆ. ಆದರೆ ಪದ್ಯದ ಭಾವನೆ ಬದಲಾಗಿಲ್ಲ ಎಂದುಕೊಂಡಿದ್ದೇನೆ.
ಚಿತ್ರ ಕೃಪೆ: http://theeclecticguitar.files.wordpress.com/2011/09/broken-string-guitar1.jpg