Posts

Showing posts from 2015

ಮುನಿದವಳು

Image
ಮನಸನರಿತಿಹೆನಲ್ಲ ಸುಮ್ಮನೆ ಮಾತಿದೇತಕೆ ಹೊರಡು ನೀ
ನನಗೆ ತಿರುಗಿರೆ ಹಣೆಯ ಬರಹವು ನಿನ್ನ ತಪ್ಪೇನಿರುವುದು?
ಇನಿಯ ನಿನ್ನಯ ಗಾಢಪ್ರೇಮವೆ ಇಂದು ಈ ದೆಸೆ ತಳೆದಿರೆ
ಅನಿಸದಾವುದು ನೋವು ಸೊರಗಿರುವೆನ್ನ ಜೀವವು ಹೋದರೆ

ಸಂಸ್ಕೃತ ಮೂಲ (ಅಮರು ಶತಕ, ೩೧):

ಭವತು ವಿದಿತಂ ವ್ಯರ್ಥಾಲಾಪೈರಲಂ ಪ್ರಿಯ ಗಮ್ಯತಾಂ
ತನುರಪಿ ನತೇ ದೋಷೋSಸ್ಮಾಕಂ ವಿಧಿಸ್ತು ಪರಾಙ್ಮುಖಃ
ತವ ಯದಿ ತಥಾರೂಢಂ ಪ್ರೇಮ ಪ್ರಪನ್ನಮಿಮಾಂ ದಶಾಂ
ಪ್ರಕೃತಿ ತರಲೇ ಕಾ ನಃ ಪೀಡಾ ಗತೇ ಹತಜೀವಿತೇ

-ಹಂಸಾನಂದಿ

ಕೊ: ಮೂಲವು ಹರಿಣೀ ಎಂಬ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯಲ್ಲಿದೆ.

ಚಿತ್ರ: ದಖನಿ ಶೈಲಿಯಲ್ಲಿ ಲಲಿತಾ ರಾಗಿಣಿಯ ರಾಗಮಾಲಾ ಚಿತ್ರ - ಈ ಪುಟದಿಂದ ತೆಗೆದುಕೊಂಡದ್ದು http://bibliodyssey.blogspot.com/2014/01/a-garland-of-ragas.html

ಓ ಪ್ರಿಯತಮ! ಕರುಣೆಯಾ ತೋರೆಯಾ!

Image
ಸುತ್ತಮುತ್ತಲ ಹಚ್ಚಹಸಿರಿದು ನಿಚ್ಚ ಪೊಸದೆಂದೆನಿಸಿರಲ್
ಮತ್ತ ಕೋಕಿಲವಿತ್ತ ಪಂಚಮದಲ್ಲಿ ಪಾಡುತ ನಲಿದಿರಲ್
ಇತ್ತ ಗೆಳತಿಯ ಚಿತ್ತವೆಲ್ಲಿಯೊ ನಮ್ಮ ಮರೆತೇ ಪೋದುದೋ?
ಮತ್ತೆ ಓಲೆಯ ಬರೆಯುತಲೆ ಮನವಿವಳದೆಲ್ಲಿಗೆ ಜಾರಿತೋ?

-ಹಂಸಾನಂದಿ

ಕೊ: ಈ ವಾರದ ಪದ್ಯಪಾನದ "ಚಿತ್ರಕ್ಕೆ ಪದ್ಯ" ಸಾಲಿನ ಪ್ರಶ್ನೆಗೆ ನಾನು ಬರೆದ ಉತ್ತರ ಇದು. ಅನಸೂಯೆ ಪ್ರಿಯಂವದೆಗೋ, ಪ್ರಿಯಂವದೆ ಅನಸೂಯೆಗೋ ಹೇಳಿದ್ದ ಮಾತು ಎಂದುಕೊಳ್ಳಿ.

ಕೊ.ಕೊ: ಪದ್ಯವು ಮಾತ್ರಾ ಮಲ್ಲಿಕಾಮಾಲೆಯ ಛಂದಸ್ಸಿನಲ್ಲಿ ಇದೆ. ಸ್ವಲ್ಪ ನಡುಗನ್ನಡ ಶೈಲಿಯನ್ನು ಬಳಸುವ ಪ್ರಯತ್ನ ಮಾಡಿರುವೆ.

ಕೊ.ಕೊ.ಕೊ: ಇದಾವ ಚಿತ್ರ ಎಂದು ಹೇಳಲೇಬೇಕಿಲ್ಲವಲ್ಲ? ರಾಜ್ ಕುಮಾರ್ ಅವರ ಕವಿರತ್ನ ಕಾಳಿದಾಸ ಚಲನ ಚಿತ್ರವನ್ನು ನೋಡಿದವರಿಗೆಲ್ಲ ಈ ಸಂದರ್ಭದಲ್ಲಿ ಬರುವ ಹಾಡು ತಿಳಿದೇ ಇರುವುದರಿಂದ ಆ ತಲೆಬರಹವನ್ನೇ ಕೊಟ್ಟಿದ್ದಾಯಿತು.

ಚಿತ್ರ:  ರಾಜಾ ರವಿವರ್ಮನ ಶಕುಂತಲಾ ಪತ್ರ ಲೇಖನ. ಲಿಥೋ ಪ್ರತಿ.

ನೀರೆಯ ಸೀರೆ

Image
ಸೀರೆಯದುವೇ ನಿಖಿಲಜಗಕಾ
ಧಾರವದುವೇ ಕೇಳು ಜಗ ನಿ
-ಸ್ಸಾರವಹುದೈ ಸೀರೆಯುಟ್ಟಿಹ ನೀರೆಯಿಲ್ಲದಿರೆ|
ನಾರಿ ತನ್ನಯ ಸೊಬಗ ಮುದದಲಿ
ತೋರುವಳು ತಾ ಬಣ್ಣ ಬಣ್ನದ
ಚಾರು ಚಿತ್ರದ ಪಟ್ಟೆಸೀರೆಗಳುಟ್ಟು ಸಂತಸದಿ ||


-ಹಂಸಾನಂದಿ

ಕೊ: ಇದು ಫೇಸ್ ಬುಕ್ ಕಳೆದ ವರ್ಷ ಇದೇ ದಿನದಂದು, ಗೆಳೆಯರೊಬ್ಬರ ಬರಹಕ್ಕೆ ನಾನು ಟಿಪ್ಪಣಿಸಿದ್ದರ ಫಲ. ಜೈ ಮಾರ್ಕ್ ಜ಼ುಕರ್ಬರ್ಗ್!

ಕೊ.ಕೊ:  ಛಂದೋಬದ್ಧ ಪದ್ಯವನ್ನ,  ಶೈಲಿ ಹಳೆಯದಾದರೂ, ಯಾವ ವಿಷಯದ ಬಗ್ಗೆಯೂ ಬರೆಯಬಹುದು ಅಂತ ಮಾತಾಡುತ್ತಿದ್ದಾಗ, ಸೀರೆಯ ಬಗ್ಗೆ ಒಂದು ಪದ್ಯ ಬರೆಯಲು ಗೆಳೆಯರು ಹೇಳಿದಾಗ ಬರೆದಿದ್ದಿದು. ಸಾಮಾನ್ಯವಾಗಿ, ಸಮಯದ ಮಿತಿಯೊಳಗೆ, ಕೇಳಿದ ವಿಷಯದ ಬಗ್ಗೆ ಪದ್ಯವನ್ನು ಬರೆಯುವುದಕ್ಕೆ ಆಶುಕವಿತೆ ಎಂದು ಹೆಸರು.

ಕೊ.ಕೊ.ಕೊ: ಪದ್ಯವು, ಭಾಮಿನೀ ಎಂಬ ಷಟ್ಪದಿಯಲ್ಲಿದೆ. ಭಾಮಿನೀ ಷಟ್ಪದಿಯನ್ನು ಭಾಮಿನಿಯುಟ್ಟ ಸೀರೆಯನ್ನು ಬಣ್ಣಿಸಲು ಬಳಸಿದ್ದು ಕೇವಲ ಕಾಕತಾಳೀಯ

ಚಿತ್ರ ಕೃಪೆ: ನಲ್ಲಿ ಸಿಲ್ಕ್ಸ್  ನ ಜಾಹೀರಾತಿನಿಂದ

ಚಲಿಸುವ ಮೋಡಗಳು

Image
ನೀಲಿಯಾಗಸದಲ್ಲಿ ತುಂಬಿದ ಬಿಳಿಯ ಮೋಡವು ಚದುರುತ
ಹೇಳುತಿರುವುದು ನೀತಿಯೊಂದನು ಕೇಳು ನೀಮೊದಲೆನ್ನುತ
"ಗಾಳಿ ಬಂದೆಡೆ ತೂರಿಕೊಂಡರೆ ನಮ್ಮ ರೀತಿಯೆ ಕರಗುವೆ
ಬಾಳಿನಲ್ಲಿಡೆ ದಿಟ್ಟ ಹೆಜ್ಜೆಯ ಹಾದಿ ಮುಂದಕೆ ಸುಗಮವೆ "

-ಹಂಸಾನಂದಿ 

ಕೊ: ಮೂರು ವರ್ಷದ ಹಿಂದೆ ಇದೇ ದಿನ ಬರೆದ ಪದ್ಯವಿದೆಂದು ಫೇಸ್ ಬುಕ್ ದೇವರು ತೋರಿಸಿದ ಮೇಲೆ, ಅದನ್ನು ಇಲ್ಲಿ ಹಾಕಿಲ್ಲವೆನ್ನುವುದನ್ನು ಗಮನಿಸಿ ಇಲ್ಲಿಗೂ ಸೇರಿಸಿದೆ.

ಕೊ.ಕೊ: ಇದು ಹೊಸಗನ್ನಡದಲ್ಲಿ ಬಹಳ ಜನಪ್ರಿಯವೇ ಆದ ಮಾತ್ರಾ ಮಲ್ಲಿಕಾಮಾಲೆ ಎಂಬ ಛಂದಸ್ಸಿನಲ್ಲಿದೆ. ಪ್ರತಿ ಸಾಲೂ ೩/೪/೩/೪/೩/೪/೩/‍೨ ಈ ರೀತಿಯಲ್ಲಿ ಇರುತ್ತವೆ. "ಭಾಮಿನೀಗತಿಯೊಪ್ಪಿರಲ್ ನವ ಮಾಲೆಮಲ್ಲಿಕೆ ಸಂದುದೇ" ಎಂಬುದನ್ನು ಈ ಛಂದಸ್ಸಿನ ಮಟ್ಟು ಮನಸ್ಸಿಗೆ ನಿಲ್ಲಿಸಿಕೊಳ್ಳಬಹುದು. ಅದೇ ರೀತಿ, ದೋಣಿಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಹಾಡೂ ಕೂಡ.

ಚಿತ್ರ ಕೃಪೆ:  ನನ್ನ ಮಡದಿ ಪೂರ್ಣಿಮಾಳ ಕೈಚಳಕ

ಕೊಳಲನೂದುವ ಚತುರನಿಗೆ

Image
ಇನಿಗೊಳಲಿನಿಂಪುದನಿ ಜೊತೆಯಲ್ಲೆಯೇ ನಿನ್ನ
ಸವಿನೋಟ ಬೀರುತಲಿ ಕರುಣಿಸೋ ನನ್ನ!
ನೀನು ಕೃಪೆ ತೋರಿರಲು ಇಹಪರಗಳಿಂದೇನು?
ನೀನು ಕೃಪ ತೋರದಿರೆ ಇಹಪರಗಳೇನು?

ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ೧-೨೯) :

ಮಯಿ ಪ್ರಸಾದಮ್ ಮಧುರೈಃ ಕಟಾಕ್ಷೈಃ ವಂಶೀ ನಿನಾದಾನುನುಚರೈಃ ವಿಧೇಹಿ ತ್ವಯಿ ಪ್ರಸನ್ನೇ ಕಿಮಿಹಾಪರೈರ್ನ್ನಃ ತ್ವಯ್ಯಪ್ರಸನ್ನೇ ಕಿಮಿಹಾಪರೈರ್ನ್ನಃ
मयि प्रसादम् मधुरैः कटाक्षैः वंशी निनादानुनुचरैः विधेहि त्वयि प्रसन्ने किमिहापरैर्न्नः त्वय्यप्रसन्ने किमिहापरैर्न्नः

-ಹಂಸಾನಂದಿ

 ಕೊ:  ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ, ಪ್ರಾಸವನ್ನಿಟ್ಟಿಲ್ಲ.

ಕೊ.ಕೊ: ಈ ಅನುವಾದ ಮಾಡಲು ಸಹಾಯ ಮಾಡಿದ ಹಿರಿಯ ಮಿತ್ರ ಶ್ರೀ ಕೃಷ್ಣಪ್ರಿಯ ಅವರಿಗೆ ನಾನು ಆಭಾರಿ

ಕೊ.ಕೊ: ಕೊಳಲನೂದುವ ಚದುರನಾರೇ ಪೇಳಮ್ಮ ಅನ್ನುವುದು ವ್ಯಾಸರಾಯರ ಒಂದು ಸುಪರಿಚಿತ ದೇವರನಾಮ.

ಚಿತ್ರ: ಬೆಳವಾಡಿ ದೇವಾಲಯ ಮುದ್ದು ಮುರಳೀ ಕೃಷ್ಣ, http://www.indyachalo.com/hoysala.html ಪುಟದಿಂದ ತೆಗೆದುಕೊಂಡದ್ದು.

ಕಮಲ ಮುಖಿಗೆ

Image
ಕಮಲದಲಿ ಕುಳಿತವಳೆ ಕಮಲವನೆ ಪಿಡಿದವಳೆ
ಪರಿಮಳದಹಾರ ಬಿಳಿಸೀರೆಯಲಿ ಮೆರೆಯುವಳೆ
ಭಗವತೀ ಹರಿಯೊಡತಿ ಸೊಬಗಿ ನೆಮ್ಮದಿಯನ್ನು
ಮೂಲೋಕಕೀಯುವಳೆ ನನ್ನ ಕಾಪಾಡೇ

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾ ಸ್ತೋತ್ರ, ೧೮)

ಸರಸಿಜನಿಲಯೇ ಸರೋಜಹಸ್ತೇ
ಧವಲತಮಾಂಶುಕಗಂಧಮಾಲ್ಯ ಶೋಭೇ |
ಭಗವತಿ ಹರಿವಲ್ಲಭೇ ಮನೋಜ್ಞೇ
ತ್ರಿಭುವನಭೂತಿಕರಿ ಪ್ರಸೀದ ಮಹ್ಯಮ್ ||18||

सरसिजनिलये सरोजहस्ते
धवलतमांशुकगंधमाल्य शोभे ।
भगवति हरिवल्लभे मनोज्ञे
त्रिभुवनभूतिकरि प्रसीद मह्यम्

- ಹಂಸಾನಂದಿ

ಕೊ: ಅನುವಾದವು ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ, ಆದರೆ ಪ್ರಾಸವನ್ನಿಟ್ಟಿಲ್ಲ

ಕೊ.ಕೊ: ಲಕ್ಷ್ಮಿಯನ್ನು ಮನೋಜ್ಞೆ ಎಂದು ಕರೆದಿದ್ದಾರೆ. ಮನಸ್ಸಿಗೆ ತಿಳಿದವಳು,  ಸೊಬಗಿನವಳು ಅನ್ನುವುದಷ್ಟೇ ಅಲ್ಲದೆ, ಹೊನ್ನಾವರಿಕೆ ಹೂವು ಎಂಬ ಅರ್ಥವೂ ಇದೆ. ಲಕ್ಷ್ಮಿ  ಹೊಂಬಣ್ಣದವಳು ಎಂದು ಹೇಳುತ್ತಿದ್ದಾರೆಯೇ ಇಲ್ಲಿ ಅನ್ನುವುದು ನನಗೆ ಸರಿಯಾಗಿ ತಿಳಿದಿಲ್ಲವಾದರೂ , ದೀಪಾವಳಿಯ ಸಮಯದಲ್ಲಿ  ಹೊನ್ನೋ ಹೊನ್ನೋ ಅಂತ ಹೊನ್ನಾವರಿಕೆ ಹೂವನ್ನು ಮನೆ ಸುತ್ತ ಹಾಕುತ್ತಿದ್ದ ಸಂಪ್ರಾಯ ನೆನಪಾಗಿದ್ದರಿಂದ, ಈ ಪದ್ಯವನ್ನು ಇಂದು ಅನುವಾದಿಸಿದ್ದಾಯಿತು.

ಮಸುಕು ಬೆಟ್ಟದ ದಾರಿ

Image
ಮಸುಕು ಬೆಟ್ಟದ ದಾರಿ - ದತ್ತಾತ್ರಿ  ಎಂ ಆರ್ ಅವರ  ಎರಡನೇ ಕಾದಂಬರಿ.

ಇವರ ಮೊದಲ   ಕಾದಂಬರಿಯಾದ "ದ್ವೀಪವ ಬಯಸಿ" ಆರ್ಥಿಕ ಕುಸಿತದ ಹಿನ್ನಲೆಯಲ್ಲಿ, ಬೇಲೂರಿನ ಬಳಿಯ ಹಳ್ಳಿಯೊಂದರಲ್ಲಿ ಮತ್ತೆ ಲಾಸ್ ಏಂಜಲೀಸ್ ಸುತ್ತಮುತ್ತ ನಡೆಯುವ ಕಥೆಯಾಗಿದ್ದರೆ, ಈ ಎರಡನೆಯ ಪುಸ್ತಕದಲ್ಲಿ, ಮರೆಯಲಾರದ ಖಾಯಿಲೆ (ಮರೆವಿನ ಖಾಯಿಲೆ ಅಲ್ಲ) ಇರುವ ಒಬ್ಬಾತನನ್ನ ಕೇಂದ್ರವಾಗಿರಿಸಿಕೊಂಡ ಕಾದಂಬರಿ.

 ಜೀವನದ ಸಣ್ಣಪುಟ್ಟ ವಿವರಗಳೂ ಎಷ್ಟೇ ವರ್ಷಗಳು ಕಳೆದರೂ ಮರೆಯದೇ ಹೋಗುವ ನಿರಂಜನ ಈ ಕಥೆಯ ನಾಯಕ. ಆ ಕಾರಣದಿಂದಲೇ ಶಾಲಾ ಕಾಲೇಜುಗಳಲ್ಲಿ ಬೇರೆಯವರಂತೆ ಯಶಸ್ವಿಯಾಗದೇ ಹೋಗುವ ನಿರಂಜನನ ಐದಾರು ವರ್ಷದ ಬಾಲ್ಯದಿಂದ ಸುಮಾರು ೧೯೭೦ರ ವೇಳೆಗೆ ಆರಂಭವಾಗುವ ಕಥೆ, ಅವನ ಕುಟುಂಬ, ಅವನ ನೆರೆಹೊರೆ, ಗೆಳೆಯರ ಕಥೆಗಳೊಂದಿಗೆ ಬೆಸೆದುಕೊಳ್ಳುತ್ತಾ ಬೆಳೆದು, ಹೊಸ ಶತಮಾನ ಆರಂಭವಾಗುವ ಸಮಯದಲ್ಲಿ ಮಗಿತಾಯ ಹೊಂದುತ್ತೆ. ಇದಕ್ಕಿಂತ ಹೆಚ್ಚು ಹೇಳೋಲ್ಲ, ಓದಿ ನೋಡಿ!

ಕಾದಂಬರಿ ಚಿಕ್ಕಮಗಳೂರಿನ ರತ್ನಗಿರಿ ಬೋರೆ, ಮತ್ತೆ ಮುಳ್ಳಯ್ಯನ ಗಿರಿ ಎರಡನ್ನೂ ಜೀವತುಂಬಿದ ಪಾತ್ರಗಳನ್ನಾಗಿಸಿರುವುದು ಬಹಳ ಹಿಡಿಸಿತು. ಎಪ್ಪತ್ತರ ದಶಕದ ಬೆಳೆಯುತ್ತಿರುವ ಬೆಂಗಳೂರು, ಮತ್ತೆ ಶತಮಾನದಂಚಿನ ಧಾವಿಸುವ ವೇಗದ ಬೆಂಗಳೂರು, ಜೀವನದಲ್ಲಿ ಕಾಣಸಿಗುವ ನ್ಯಾಯಾನ್ಯಾಯಗಳು - ಒಳ್ಳೆಯ, ಕೆಟ್ಟ, ಎಲ್ಲ ರೀತಿಯ ಪಾತ್ರಗಳ ಚಿತ್ರಣ , ಕತೆಯನ್ನು ವೈವಿಧ್ಯಮಯವಾಗಿ, ಸುಲಭವಾಗಿ ಓದಿಸಿಕೊಂಡು ಹ…

ವಾಲ್ಮೀಕಿ ಜಯಂತಿ

Image
ಕೊಂಚೆವಕ್ಕಿಗಳೆನಿತೊ ಸಿಲುಕಿವೆ ಬೇಡ ಹೊಡೆದಿಹ ಬಾಣಕೆ
ಮುಂಚೆ ರಾಮಾಯಣವು ಮಾತ್ರವು ಹುಟ್ಟಿತೊಂದೇ ಬಾರಿಗೆ
ಕೊಂಚ ಕಾಲವು ಒಳ್ಳೆ ಮನಸಿನ ಕವಿಯ ಪದಗಳ ಜೊತೆಯಲಿ
ಸಂಚುಮಾಡಲುಬೇಕು ಸರಸತಿಯೊಡನೆ ಸೊಬಗಿನ ಕವಿತೆಗೆ

ಸಂಸ್ಕೃತ ಮೂಲ - ಜಗನ್ನಾಥ ಪಾಠಕ್ ಅವರದು:

कियद्वारं क्रौञ्चा इह न निहता व्याधविशिखैः
परं काव्यं रामायणमिदम् इहैक समुदितम् ।
स कर्ता कालोsसौ स च हृदयवान् सा च कविता
समेत्य द्द्योतन्ते यदि वलति वाणीविलसितम् ॥

-ಹಂಸಾನಂದಿ

ಕೊ: ಇವತ್ತಿನ ವಾಲ್ಮೀಕಿ ಜಯಂತಿಯ ಸಂದರ್ಭಕ್ಕೆ, ನಾನು ಮಾಡಿದ ಒಂದು ಅನುವಾದವಿದು.

ಕೊ.ಕೊ: ಕೊಂಚೆವಕ್ಕಿ = ಕ್ರೌಂಚ ಪಕ್ಷಿ; ಬೇಡನೊಬ್ಬನು ಜೋಡಿ ಹಕ್ಕಿಗಳಲ್ಲಿ ಒಂದನ್ನು ಹೊಡೆದಾಗ, ಅದನ್ನು ನೋಡಿದ ವಾಲ್ಮೀಕಿ, ಆ ಬೇಡನಿಗೆ ಶಾಪದ ನುಡಿಯನ್ನು ನುಡಿದದ್ದೂ, ಅದೇ ರಾಮಾಯಣಕ್ಕೆ ಮಂಗಳಶ್ಲೋಕವಾಗಿದ್ದೂ ಎಲ್ಲರಿಗೂ ಗೊತ್ತಿರುವ ಕಥೆಯೇ!

ಕೊ.ಕೊ.ಕೊ: ಮೂಲವು ಶಿಖರಿಣೀ ಎಂಬ ವೃತ್ತದಲ್ಲೂ, ಅನುವಾದವು ಮಾತ್ರಾ ಮಲ್ಲಿಕಾಮಾಲೆ ಎಂಬ ವೃತ್ತದಲ್ಲೂ ಇವೆ.

ಬೊಂಬೆ ಹಬ್ಬ ೨೦೧೫

Image
ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇಶ್ ಭಟ್ ಅವರದು. ಹಾಡಿರುವವರು ರಾಗಿಣಿ ಸನತ್.-ಹಂಸಾನಂದಿ.

ಗೌರಿಗೊಂದು ಸ್ತುತಿ

Image
ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು
ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ
ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ
ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ!


ಸಂಸ್ಕೃತ ಮೂಲ:

ಸಂಧ್ಯಾರಾಗವತೀ ಸ್ವಭಾವಕುಟಿಲಾ ಗಂಗಾ ದ್ವಿಜಿಹ್ವಃ ಫಣೀ ವಕ್ರಾಂಗೈರ್ಮಲಿನಃ ಶಶೀ ಕಪಿಮುಖೋ ನಂದೀಚ ಮೂರ್ಖೋ ವೃಷಃ | ಇತ್ಥಂದುರ್ಜನ ಸಂಕಟೇ ಪತಿಗೃಹೇ ವಸ್ತವ್ಯಮೇತತ್ಕಥಂ ಗೌರೀತ್ಥಂ ನೃಕಪಾಲಪಾಣಿಕಮಲಾ ಚಿಂತಾನ್ವಿತಾ  ಪಾತು ವಃ ||
सन्ध्यारागवती स्वभावकुटिला गंगा द्विजिह्वः फणी
वक्रांगैर्मलिनः शशी, कपिमुखो नंदीच मूर्खो वृषः ।
इत्थंदुर्जन संकटे पतिगृहे वस्तव्यमेतत्कथं
गौरीत्थं नृकपालपाणिकमला चिन्तान्विता पातु वः ॥

-ಹಂಸಾನಂದಿ

ಕೊ: ನವರಾತ್ರಿಯ ಸಮಯದಲ್ಲಿ ಒಂದಾದರೂ ಹೊಸ ದೇವೀಸ್ತುತಿಯನ್ನು ಅನುವಾದಮಾಡಬೇಕೆನ್ನಿಸಿ ಇದನ್ನು ಹುಡುಕಿ ಅನುವಾದಿಸಿದ್ದಾಯ್ತು

ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಧಾಟಿಯಲ್ಲಿದ್ದರೂ, ಪ್ರಾಸವನ್ನಿಟ್ಟಿಲ್ಲ.

ಕೊ.ಕೊ.ಕೊ: ಗೌರಿಯಂತಹ ಗೌರಿಗೇ ಗಂಡನ ಮನೆಯಲ್ಲಿ ಬಾಳಲಾಗದಷ್ಟು ಕಷ್ಟಗಳಂತೆ! ಒಂದುಕಡೆ ಚಂಚಲವಾದ ಹೀಗೋ ಹಾಗೋ ಹೇಗೋ ಹರಿಯುವ ಅಂಕುಡೊಂಕಿನ ಗಂಗೆ, ಇನ್ನೊಂದು ಕಡೆ ಎರಡು ಕೋಡಿನ, ಮುಖವೆಲ್ಲ ಕಲೆ ತುಂಬಿದ ಚಂದ್ರ - ಹೊರಗೆ ನೋಡಿದರೆ, ಮೊದ್ದು ಮುಖದ ಪೆದ್ದು ನಂದಿ.  ಹೀಗೆ ಗಂಡನ ಮನೆಯಲ್…

ಪಯಣಕ್ಕೆ ಮೊದಲು

Image
ಗಂಟೆಹೊಡೆಯುವ ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ

ಸಂಸ್ಕೃತ ಮೂಲ ( ಅಮರುಕ ಶತಕ, ೯/೧೨):

प्रहरविरतौ मध्ये वाह्नस्ततोऽपि परेऽथवा
किमुत सकले जाते वाह्निप्रिय त्वमिहैष्यसि ।
इति दिनशतप्राप्यं देशं प्रियस्य यियासतो
हरति गमनं बालालापैः सबाष्पगलज्जलैः ॥९॥(१२)

ಪ್ರಹರವಿರತೌ ಮಧ್ಯೇ ವಾಹನಸ್ತತೋsಪಿ ಪರೇsತಥಾ
ಕಿಮುತ ಸಕಲೇ ಜಾತೇ ವಾಹಿನಪ್ರಿಯ ತ್ವಮಿಷೈಹ್ಯಸಿ
ಇತಿ ದಿನಶತಪ್ರಾಪ್ಯಂ ದೇಶಂ ಪ್ರಿಯಸ್ಯ ಯಿಯಾಸತೋ
ಹರತಿ ಗಮನಂ ಬಾಲಾಲಾಪೈಃ ಸಬಾಷ್ಪಗಲಜ್ಜಲೈಃ

-ಹಂಸಾನಂದಿ

ಕೊ: ಮೂಲವು ಹರಿಣೀ ಎಂಬ ಛಂದಸ್ಸಿನಲ್ಲೂ, ಅನುವಾದವು ಮಾತ್ರಾ ಮಲ್ಲಿಕಾಮಾಲೆಯಲ್ಲೂ ಇವೆ. ಪ್ರಾಸವನ್ನಿಟ್ಟಿಲ್ಲ

ಕೊ.ಕೊ: ವ್ಯಾಪಾರಕ್ಕೆ ಹೋಗುವ ಗಂಡಸರು, ಮತ್ತೆ ಅವರ ಅಗಲಿಕೆಯಲ್ಲಿರುವ ಪ್ರೇಯಸಿಯರ ಪ್ರಸ್ತಾವನೆ ಅಮರುಕ ಶತಕದಲ್ಲಿ ಬಹಳ ಕಡೆ ಕಂಡುಬರುತ್ತದೆ. ಆ ಕಾರಣದಿಂದ, ಏಳೆಂಟನೇ ಶತಮಾನದ ಸಮಯದಲ್ಲಿ ದೂರದ ಪ್ರಾಂತ್ಯಗಳೊಡನೆ ವ್ಯಾಪಾರ ನಮ್ಮ ದೇಶದಲ್ಲಿ ಬಹಳ ಹಾಸು ಹೊಕ್ಕಾಗಿತ್ತು ಎಂದು ತಿಳಿದುಕೊಳ್ಳಬಹುದು.

ಕೊ.ಕೊ.ಕೊ: ಈ ಪದ್ಯದಲ್ಲಿ ಬರುವ ವ್ಯಾಪಾರಿ ಹೋಗುತ್ತಿರುವ ಸ್ಥಳ ತಲುಪಲು ನೂರು ದಿನವಾಗುವಷ್ಟು ದೂರ. ಅಂತಹದರಲ್ಲಿ ಅವನ ಪ್ರೇಯಸಿ, ಅವನು ಬರುವ ಹೊತ್ತಿಗೆ ದಿನ ಕಳೆದಿರುವುದೋ, …

ನಿರ್ಧಾರ

Image
ಕಣ್ಣದುರುತಲಿ ಬದಿಗೆ ತಿರುಗಲಿ ಗೆಳತಿ ಇನಿಯನು ಕಾಣಲು ಜಾರಿ ಹೋದರು ಸೊಂಟದೊಡವೆಯು ಎದೆಯ ನಡುಕಕೆ ಕುಬುಸವು ಸೀಳಿ ಹೋದರು ಮಾತನಾಡೆನು ಮೋಸಗಾರನ ಜೊತೆಯಲಿ ಮೌನ ತಾಳದೆ ಎನ್ನ ಹೃದಯವೆ ಒಡನೆ ಒಡೆಯದೆ ಹೋದರೆ ಸಂಸ್ಕೃತ ಮೂಲ (ವಿದ್ಯಾಕರನ ಸುಭಾಷಿತ ರತ್ನಕೋಶ 636; ಇದು ಅಮರುಕನದ್ದೆಂದು ಅವನು ಹೇಳುತ್ತಾನೆ): ವಲತು ತರಲಾ ದೃಷ್ಟಾ ದೃಷ್ಟಿಃ ಖಲಾ ಸಖಿ ಮೇಖಲಾ ಸ್ಖಲತು ಕುಚಯೋರುತ್ಕಂಪಾನ್ಮೇ ವಿದೀರ್ಯತು ಕಂಚುಕಮ್ ತದಪಿ ನ ಮಯಾ ಸಂಭಾಷ್ಯೋಸೌ ಪುನರ್ದಯಿತಃ ಶಠಃ ಸ್ಫುರತಿ ಹೃದಯಂ ಮೌನೇನಾಂರರ್ನ ಮೇ ಯದಿ ತತ್ಕ್ಷಣಾತ್ वलतु तरला दृष्टा दृष्टिः खला सखि मेखला स्खलतु कुचयोः उत्कम्पान्मे विदीर्यतु कञ्चुकम् तदपि न मया सम्भाष्योऽसौ पुनर्दयितः शठः स्फुरति हृदयं मौनेनान्तर्न मे यदि तत्क्षणात् -ಹಂಸಾನಂದಿ ಕೊ:ಚಲತು ತರಲಾ ಧೃಷ್ಟಾ ... ತದಪಿ ನ ಮಯಾ ಸಂಭಾವ್ಯೋಸೌ ಸ್ಫುಟತಿ ಹೃದಯಂ ಮಾನಾನಾಂತ ಎಂಬ ಪಾಠಾಂತರವೂ ಇದೆ , ಅರ್ಥದಲ್ಲಿ ಅಂತಹ ಬದಲಾವಣೆ ಆಗದು. ಕೊ.ಕೊ. ಮೂಲವು ಹರಿಣೀ ವೃತ್ತದಲ್ಲಿದ್ದರೆ ಅನುವಾದವು ಮಾತ್ರಾ ಮಲ್ಲಿಕಾ ಮಾಲೆಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ. ಕೊ.ಕೊ.ಕೊ: ಕಾಫಿ ರಾಗವನ್ನು ಬಿಂಬಿಸುವ ರಾಗಮಾಲಾ ವರ್ಣಚಿತ್ರ http://ids.lib.harvard.edu/ids/view/43534021 ಇಲ್ಲಿಂದ ತೆಗೆದುಕೊಂಡದ್ದು

ಹತ್ತು ಕೋತಿ ಮರಿಗಳು!

Image
ಪುಟ್ಟದೊಂದು ಸಣ್ಣದೊಂದು ಚಿಕ್ಕದೊಂದು ಕೋತಿಮರಿ ಕುಳ್ಳದೊಂದು ಡುಮ್ಮದೊಂದು ತೆಳ್ಳದೊಂದು ಕೋತಿಮರಿ || ಬೆಳ್ಳದೊಂದು ಕಪ್ಪಗೊಂದು ಕೆಂಚಗೊಂದು ಕೋತಿ ಮರಿ ಮಳ್ಳನಂತೆ ಸುಳ್ಳನಂತೆ ಕೊನೆಯ ಕಳ್ಳ ಕೋತಿ ಮರಿ || ಮರದ ಮೇಲೆ ಕುಣಿಯುತಿದ್ದವೊಟ್ಟು ಹತ್ತು ಕೋತಿ ಮರಿ ಒಟ್ಟು ಹತ್ತು ಕೋತಿ ಮರಿ! ಒಟ್ಟು ಹತ್ತು ಕೋತಿ ಮರಿ ||
ಹತ್ತು ಕೋತಿ ಮರಿಗಳು ಬಾಳೆ ಹಣ್ಣು ತಿನ್ನಲು ಒಂದಕುಸಿರು ಕಟ್ಟಿ ಉಳಿದ ವೊಂಬತ್ತು ಕೋತಿ ಮರಿ!  || ೧||
ಒಂಬತ್ತು ಕೋತಿ ಮರಿಗಳು ರಾತ್ರಿ ಮಲಗಿಕೊಂಡವು ಒಂದು ಮತ್ತೆ ಏಳದೇನೆ ಉಳಿದುವೆಂಟು ಕೋತಿ ಮರಿ! ||೨||
ಎಂಟು ಕೋತಿ ಮರಿಗಳು ಆಟವಾಡುತಿದ್ದವು ಒಂದು ಹೊರಗೆ ಕುಳಿತುಕೊಂಡು ಒಳಗೆ ಏಳೆ ಕೋತಿ ಮರಿ! ||೩||
ಏಳು ಕೋತಿ ಮರಿಗಳು ಬತ್ತ ಕುಟ್ಟ ಹೊರಟವು ಒನಕೆ ಏಟಿಗೊಂದು ಸಿಕ್ಕಿ ಈಗ ಆರು ಕೋತಿ ಮರಿ! ||೪||
ಆರು ಕೋತಿ ಮರಿಗಳು ಬಟ್ಟೆ ಹೊಲೆಯುತಿದ್ದವು ಒಂದಕ್ಕೆ ಸೂಜಿ ಚುಚ್ಚಿ ಉಳಿದವೈದು ಕೋತಿ ಮರಿ ||೫||
ಐದು ಕೋತಿ ಮರಿಗಳು ಪಟಾಕಿ ಹಚ್ಚುತಿದ್ದವು ಕೈಯೊಳಗೇ ಸಿಡಿದುಬಿಡಲು ಇನ್ನು ನಾಲ್ಕೆ ಕೋತಿ ಮರಿ ||೬|||
ನಾಲ್ಕು ಕೋತಿ ಮರಿಗಳು ಪಗಡೆ ಕಾಯಿ ಕೊಲ್ಲಲು ಕೋಡಗನ್ನ ಕೋಳಿ ನುಂಗಿ ಈಗ ಮೂರೆ ಕೋತಿ ಮರಿ ||೭||
ಮೂರು ಕೋತಿ ಮರಿಗಳು ಜೂಟಾಟವನಾಡಲು ಒಂದು ಎಡವಿ ತಲೆಯು ಒಡೆದು ಉಳಿಯಿತೆರಡು ಕೋತಿ ಮರಿ ||೮||
ಎರಡು ಕೋತಿಮರಿಗಳು ಜಗಳವಾಡುತಿದ್ದವು ಒಂದನೊಂದು ಸುಟ್ಟುಬಿಟ್ಟು ಇನ್ನು ಒಂದೆ ಕೋತಿ ಮರಿ ||೯||
ಉಳಿದ ಕೊನೆಯ ಕೋತಿ ಮರಿ ಒಂಟಿ ತನವ ತಾಳದೇ ನೇಣು ಹಾಕಿಕೊಂಡು ಸತ್ರೆ ಒಂದೂ ಇಲ್ಲ …

ಮಿಂಚಿನ ನೋಟ

Image
ಕರಿಮೋಡದೊಡಲಲ್ಲಿ  ಹೊಳೆವ ಮಿರುಮಿಂಚಂತೆ
ಕೈಟಭನ ಕೊಂದಾತನೆದೆಯ ಮೇಲೆ
ಸೊಗದಲ್ಲಿ ನೆಲೆ ನಿಂತ ಮೂರು ಲೋಕದ ತಾಯಿ
ಹರಸುತಲಿ ದಿಟ್ಟಿಸೆನ್ನನು ಭಾರ್ಗವಿ!

ಸಂಸ್ಕೃತ ಮೂಲ (ಶಂಕರಾಚಾರ್ಯರ ಕನಕಧಾರಾಸ್ತ್ರೋತ್ರ, ೬):

ಕಾಲಾಂಬುದಾಳಿ ಲಲಿತೋರಸಿ ಕೈಟಭಾರೇಃ
ದಾರಾಧರೇ ಸ್ಫುರತಿ ಯಾ ತಟಿದಂಗನೇವ |
ಮಾತಸ್ಸಮಸ್ತ ಜಗತಾಂ ಮಹನೀಯಮೂರ್ತಿಃ
ಭದ್ರಾಣಿ ಮೇ ದಿಶತು ಭಾರ್ಗವ ನಂದನಾಯಾಃ ||

कालांबुदाळि ललितोरसि कैटभारेः
दाराधरे स्फुरति या तटिदंगनेव ।
मातस्समस्त जगतां महनीयमूर्तिः
भद्राणि मे दिशतु भार्गव नंदनायाः ॥

-ಹಂಸಾನಂದಿ

ಕೊ: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಹಲವು ಬಾರಿ ಲಕ್ಷ್ಮಿಯ ಬಗ್ಗೆ ಇರುವ ಪದ್ಯಗಳನ್ನು ಅನುವಾದಿಸಿದ್ದುಂಟು. ಹಾಗಾಗಿ, ಸಂಪ್ರದಾಯವನ್ನು ಏಕೆ ಮುರಿಯಬೇಕೆಂದು ಇವತ್ತು ಮಾಡಿದ ಭಾವಾನುವಾದವಿದು.

ಕೊ.ಕೊ: ಕೈಟಭನೆಂಬ ರಾಕ್ಷಸನನ್ನು ವಿಷ್ಣು ಕೊಂದನೆಂಬ ಕಥೆಯಿದೆ. ಭಾರ್ಗವಿ ಎನ್ನುವುದು ಲಕ್ಷ್ಮಿಯ ಇನ್ನೊಂದು ಹೆಸರು.

ಕೊ.ಕೊ.ಕೊ: ಮೂಲವು ವಸಂತತಿಲಕ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವನ್ನು ಇಟ್ಟಿಲ್ಲ.

ಚಿತ್ರ ಕೃಪೆ : ಗೌರಿ ಮುರಳಿ ಅವರ ಕೇರಳ ಶೈಲಿಯ ವರ್ಣ ಚಿತ್ರ - http://www.artnindia.com/product/kerala-mural-lakshmi-narayan-painting-handmade-south-indian-hindu-ethnic-art/ ಈ ಪುಟದಿಂದ ತೆಗೆದುಕೊಂಡದ್ದು.

ಗಾಜಿನ ಮನೆ .. ಸದ್ಯದಲ್ಲೇ ..

Image
ಆಗಸ್ಟ್ ೧೪. ೧೫  ಮತ್ತು ೧೬ ರಂದು ರಂಗದ ಮೇಲೆ ಬರುತ್ತಿರುವ ಕುತೂಹಲಕಾರಿ ಕನ್ನಡ ನಾಟಕ ಗಾಜಿನ ಮನೆ

ಇದರ ಕೆಲವು ದೃಶ್ಯಾವಳಿಗಳು, ನಿಮಗಾಗಿ :)ನಿಮ್ಮ ಗೆಳೆಯರು ಸ್ಯಾನ್ ಹೋಸೆ - ಸ್ಯಾನ್ ಫ್ರಾನ್ಸಿಸ್ಕೋ ಸುತ್ತ ಮುತ್ತ ಇದ್ದರೆ, ಅವರಿಗೆ ಈ ನಾಟಕದ ವಿಷಯ ತಿಳಿಸೋದನ್ನ ಮರೀಬೇಡಿ!

-ಹಂಸಾನಂದಿ


ಹೊರಡುವ ಮೊದಲು

Image
ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!

ಸಂಸ್ಕೃತ ಮೂಲ (ಅಮರುಕಶತಕ, ೧೦):

ಯಾತಾಃ ಕಿಂ ನ ಮಿಲಂತಿ ಸುಂದರಿ ಪುನಶ್ಚಿಂತಾ ತ್ವಯೇ ಮತ್ಕೃತೇ
ನೋ ಕಾರ್ಯಾ ನಿತರಾಂ ಕೃಶಾಸಿ ಕಥಯತ್ಯೇವಂ ಸಬಾಷ್ಪೇ ಮಯಿ
ಲಜ್ಜಾಮಾಂಥರತಾರಕೇಣ ನಿಪತತ್ಪೀತಾಶ್ರುಣಾಂ ಚಕ್ಷುಷಾ
ದೃಷ್ಟ್ಚಾ ಮಾಂ ಹಸಿತೇನ ಭಾವಿಮರಣೋತ್ಸಾಹಸ್ತಯಾ ಸೂಚಿತಃ ||೧೦||

याताः किं न मिलंति सुंदरि पुनश्चिन्ता त्वये मत्कृते
नो कार्या नितरां कृशासि कथयत्येवं सबाष्पे मयि
लज्जामान्थरतारकेण निपतत्पीताश्रुणां चक्षुषा
दृष्ट्चा मां हसितॆन भाविमरणोत्साहस्तया सूचितः ||१०||
-ಹಂಸಾನಂದಿ

ಕೊ: ದೂರದೂರಿಗೆ ವ್ಯಾಪಾರಕ್ಕೆ ಗಂಡ ಹೊರಟಾಗ ಸಂದರ್ಭದ ಚಿತ್ರಣವಿದು. ಅಮರುಕ ಶತಕದಲ್ಲಿ ಈ ಸಂಧರ್ಭದ ಹಲವಾರು ಪದ್ಯಗಳು ಬರುವುದರಿಂದ, ಆ ಸಮಯದಲ್ಲಿ ದೂರದೂರಿಗೆ ವ್ಯಾಪಾರಕ್ಕೆ ಹೋಗುವವರ ಸಂಖ್ಯೆ ಬಹಳವಿತ್ತು ಎಂದು ಊಹಿಸಬಹುದು.
ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಚೌಪದಿಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ.
ಚಿತ್ರ ಕೃಪೆ: ಮಾಲವಕೌಶಿಕ (ಮಾಲಕೋಶ್?) ರಾಗಿಣಿಯನ್ನು ಚಿತ್ರಿಸುವ ರಾಗಮಾಲಾ ಶೈಲಿಯ ವರ್ಣಚಿತ್ರ. ವಿಕಿಮೀಡಿಯಾದಿಂದ

(https://commons.wikimedia.org/wiki/Fil…

ಗಾಜಿನ ಮನೆ .. ರಂಗದ ಮೇಲೆ ಸದ್ಯದಲ್ಲೇ!

Image
ಹಲವು ತಿಂಗಳುಗಳಿಂದ ಬ್ಲಾಗ್ ನಲ್ಲಿ ಅಂತಹದ್ದೇನನ್ನೂ ಬರೆಯುತ್ತಿಲ್ಲ. ಅದಕ್ಕೊಂದು ಒಳ್ಳೇ ಕಾರಣವೂ ಇದೆ.

ನಾನು ಬರೆದು ನಿರ್ದೇಶಿಸುತ್ತಿರುವ ಕುತೂಹಲಕಾರಿ ಕನ್ನಡ ನಾಟಕ "ಗಾಜಿನ ಮನೆ" ಸದ್ಯದಲ್ಲೇ ಪ್ರದರ್ಶನಗೊಳ್ಳಲಿದೆ.

ಆಗಸ್ಟ್  ೧೪, ೧೫ ಮತ್ತು ೧೬ ರಂದು, ಈ ನಾಟಕ ಸ್ಯಾನ್ ಫ್ರಾನ್ಸಿಸ್ಕ್ಫೋ ಕೊಲ್ಲಿ ಪ್ರದೇಶದ ಹವ್ಯಾಸೀ ಕಲಾವಿದರ ತಂಡ "ಮಂದಾರ"ದ ವತಿಯಿಂದ ಈ ನಾಟಕ ರಂಗದ ಮೇಲೆ ಬರಲಿದೆ.

ಸ್ಥಳ: ಹಿಸ್ಟಾರಿಕ್ ಹೂವರ್ ರಂಗಮಂದಿರ, ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ

ಅಂದಹಾಗೆ ಈ ನಾಟಕದ ಪ್ರದರ್ಶನದಿಂದ ಗಳಿಸಿದ ಹಣವನ್ನು ಬ್ಲೈಂಡ್ ಫೌಂಡೇಶನ್ ಫಾರ್ ಇಂಡಿಯಾ ನವರು ಕರ್ನಾಟಕದಲ್ಲಿ ನಡೆಸುತ್ತಿರುವ ಒಂದು ಪ್ರಮುಖ ಕಾರ್ಯಕ್ರಮ (ಚಿಕ್ಕಮಕ್ಕಳಲ್ಲಿ ಕುರುಡುತನ ನಿವಾರಣೆ) ಗೆಂದು ಮೀಸಲಿಟ್ಟಿದ್ದೇವೆ.

ಸ್ಯಾನ್ ಹೋಸೆ ಸುತ್ತ ಮುತ್ತ ನಿಮ್ಮ ಗೆಳೆಯರಿದ್ದರೆ ಅವರೊಂದಿಗೆ ಈ ವಿಷಯವನ್ನು ಹಂಚಿಕೊಳ್ತೀರಿ ತಾನೇ?

-ಹಂಸಾನಂದಿ

ಒಂದು ಪ್ರೇಮದ ಕಥೆ

Image
ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ
ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು
ಅತ್ತು ಸೊರಗುವುದನ್ನು ಮೌನದಲಿ ನಗುವನ್ನು
ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ
ಗಟ್ಟಿಮಾಡಿರಿಸಾಯ್ತು ನಾನೀಗಲೇ
ಹಮ್ಮು ತೋರುವುದಕೆಲ್ಲವನು ಅಣಿಮಾಡಿ
ಬಿಟ್ಟಿಹೆನು ಗೆಲುವನ್ನು ಆ ದೈವಕೇ!
ಸಂಸ್ಕೃತ ಮೂಲ (ಅಮರುಕ ಶತಕ ೯೨/೯೭): ಭ್ರೂಭೇದೋ ರಚಿತಶ್ಚಿರಂ* ನಯನಯೋರಭ್ಯಸ್ತಮಾಮೀಲನಂ
ರೋದ್ಧುಂ ಶಿಕ್ಷಿತಮಾದರೇಣ ಹಸಿತಂ ಮೌನೇಭಿಯೋಗಃ ಕೃತಃ
ಧೈರ್ಯಂ ಕರ್ತುಮಪಿ ಸ್ಥಿರೀಕೃತಮಿದಂ ಚೇತಃ ಕಥಂಚಿತ್ ಮಯಾ
ಬಧ್ದೋ ಮಾನಪರಿಗ್ರಹೇ ಪರಿಕರಃ ಸಿದ್ಧಿಸ್ತು ದೈವಸ್ಥಿತಾ
भ्रूभेदो रचितश्चिरं नयनयोरभ्यस्तमामीलनं रोद्धुं शिक्षितमादरेण हसितं मौनेऽभियोगः कृतः ।
धैर्यं कर्तुमपि स्थिरीकृतमिदं चेतः कथञ्चिन्मया
बद्धो मानपरिग्रहे परिकरः सिद्धिस्तु दैवस्थिता ॥९२॥(९७)
-ಹಂಸಾನಂದಿ
ಕೊ:  *ಭ್ರೂಭಂಗೋ ಗುಣಿತಶ್ಚಿರಂ ಅನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಹೆಚ್ಚು ವ್ಯತ್ಯಾಸವಾಗದು.
ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವನ್ನು ಪಂಚಮಾತ್ರಾ ಚೌಪದಿಯ ಎರಡು ಪದ್ಯಗಳಲ್ಲಿ ಅಳವಡಿಸಿದ್ದೇನೆ. ಪ್ರಾಸವನ್ನು  ಇಡದಿದ್ದರೂ, ಪ್ರಾಸವು ಬರಬೇಕಾದ ಕಡೆಯಲ್ಲೆಲ್ಲ ಒತ್ತಕ್ಷರಗಳನ್ನು ಬಳಸಿದ್ದೇನೆ)
ಕೊ.ಕೊ.ಕೊ: ಇದೇ ಪದ್ಯವನ್ನೇ ಹಿಂದೆ ಛಂದಸ್ಸಿನ ಕಟ್ಟಿಲ್ಲದೇ ಅನುವಾದಿಸಿದ್ದೆ. ಅದನ್ನು ಇಲ್ಲಿ ಓದಬಹುದು…

ಋತು ಸಂಹಾರ

Image
ಕಾಳಿದಾಸನ ಹೆಸರನ್ನು ಕೇಳದವರು ವಿರಳ. ಹಿಂದೆ ಮಹಾಕವಿಗಳನ್ನು ಲೆಕ್ಕ ಮಾಡುವ ಸಮಯ ಬಂದಾಗ ಮೊದಲು ಕಾಳಿದಾಸನ ಹೆಸರನ್ನು ಹೇಳಿ, ಕಿರುಬೆರಳನ್ನು ಮಡಿಚಿದರಂತೆ. ಆಮೇಲೆ, ಅವನನ್ನು ಹೋಲುವ, ಮೀರುವ ಮಹಾಕವಿಗಳೇ ಇಲ್ಲದಾಗಿ ಎರಡನೇ ಉಂಗುರದ ಬೆರಳಿಗೆ "ಅನಾಮಿಕಾ" (ಹೆಸರಿಲ್ಲದ್ದು) ಅನ್ನುವ ಹೆಸರು ಸಾರ್ಥಕವಾಯಿತು ಎಂದು ಒಂದು ಹಾಸ್ಯವಾದ ಪದ್ಯವೇ ಇದೆ. ಸಂಸ್ಕೃತ ಸಾಹಿತ್ಯ ಪ್ರಪಂಚಕ್ಕೆ ಎರಡು ಕಿರುಗಾವ್ಯ, ಎರಡು ಮಹಾಕಾವ್ಯ ಮತ್ತು ಮೂರು ನಾಟಕಗಳನ್ನು ಕೊಡುಗೆಯಾಗಿತ್ತಿದ್ದಾನೆ.

ವರ್ಷದ ಆರು ಋತುಗಳನ್ನು ನೂರ ನಲವತ್ತನಾಲ್ಕು ಪದ್ಯಗಳಲ್ಲಿ ವರ್ಣಿಸುವ ಕಾಳಿದಾಸ, ಅವನ ಕೃತಿಯನ್ನು ಬೇಸಿಗೆಯ ಗ್ರೀಷ್ಮ ಋತುವಿನಲ್ಲಿ ಮೊದಲು ಮಾಡಿ, ನಂತರದ ವರ್ಷ, ಶರತ್, ಹೇಮಂತ, ಶಿಶಿರ ಋತುಗಳನ್ನು ದಾಟಿಕೊಂಡು, ಕೊನೆಗೆ ಋತುರಾಜನಾದ ವಸಂತನಲ್ಲಿ ಮುಗಿಸುತ್ತಾನೆ. ಉಪಮಾ ಲೋಲ ಕಾಳಿದಾಸನನ್ನು ಈಗಾಗಲೇ ಕನ್ನಡಕ್ಕೆ ತಂದಿರುವ ಹಲವಾರು ಅನುವಾದಗಳಿದ್ದರೂ, ಕನ್ನಡಿಸುವವರಿಗೆ ಹೊಸಹೊಸ ಹೊಳಪನ್ನು ತರಿಸುವಂತಹ ಚೆಲುವು ಕಾಳಿದಾಸನ ಕಾವ್ಯದ್ದು.

ಈ ಖಂಡ ಕಾವ್ಯವನ್ನು ಕಾಳಿದಾಸನ ಮೊದಲ ಕೃತಿಯೆಂದು ವಿದ್ವಾಂಸರು ಪರಿಗಣಿಸುತ್ತಾರೆ.ಇಲ್ಲಿ ಬಳಸಿರುವ “ಸಂಹಾರ” ಎಂಬ ಪದವು ವಿವಿಧ ಕಾಲಗಳ ಒಟ್ಟುಗೂಡುವಿಕೆಯನ್ನು ಸೂಚಿಸುತ್ತಿದೆ.ಈ ಕಾವ್ಯದಿಂದ ಆಯ್ದ, ನನ್ನ ಮನಸ್ಸಿಗೆ ಹಿಡಿಸಿದ, ನನ್ನ ಅನುವಾದದ ಅಳವಿಗೆ ದಕ್ಕಿದ ಒಟ್ಟು ಹದಿನೈದು ಪದ್ಯಗಳನ್ನು ಇಲ್ಲಿ ನಾನು ಕನ್ನಡಕ್ಕೆ ತಂ…

ಬಿಂಕದ ಚೆಲುವೆ

Image
ಕಾಲ್ಗಳಿಗೆ ನಾ ಬಿದ್ದರೆನುತಲಿ ಪಾದ ಮುಚ್ಚುತ ನಿರಿಯಲಿ
ಬಂದನಸುನಗೆಯನ್ನಡಗಿಸುತ ನೇರ ನೋಟವ ತಪ್ಪಿಸಿ
ನುಡಿಯುತಿರೆ ನಾ ನಡುವೆ ಗೆಳತಿಯ ಕೂಡೆ ಮಾತಿಗೆ ತೊಡಗುವ
ಒಲವುತುಂಬಿದೆ ಚೆಲುವೆಯೀಕೆಯ ಬಿಂಕವೆನಿತಿದು ಸೊಗವಿದೆ!

ಸಂಸ್ಕೃತ ಮೂಲ (ಅಮರುಶತಕ ೪೩/೪೭):

ಆಶಂಕ್ಯ ಪ್ರಣತಿಂ ಪಟಾಂತಪಿಹಿತೌ ಪಾದೌ ಕರೋತ್ಯಾದರಾತ್
ವ್ಯಾಜೇನಾಗಮತವೃಣೋತಿ ಹಸಿತಂ ನ ಸ್ಪಷ್ಟಮುದ್ವೀಕ್ಷತೇ
ಮಯ್ಯಾಲಾಪವತಿ ಪ್ರತೀಪವಚನಂ ಸಖ್ಯಾ ಸಹಾಭಾಷತೇ
ತಸ್ಯಾಸ್ತಿಷ್ಠತು ನಿರ್ಭರಪ್ರಣತಿತಾ ಮಾನೋsಪಿ ರಮ್ಯೋದಯಃ

आशङ्क्य प्रणतिं पटान्तपिहितौ पादौ करोत्यादरात्
व्याजेनागतमावृणोति हसितं न स्पष्टमुद्वीक्षते ।
मय्यालापवति प्रतीपवचनं सख्या सहाभाषते
तस्यास्तिष्ठतु निर्भरप्रणयिता मानोऽपि रम्योदयः ॥ Amaruka || ४२॥(४७)
-ಹಂಸಾನಂದಿ

ಕೊ: ಪತ್ನಿಯರ/ಪ್ರೇಯಸಿಯರ ಕಾಲಿಗೆ ಪತಿ/ಪ್ರಿಯಕರರು ಬೀಳುವುದರ ಬಗ್ಗೆ ಅಮರು ಶತಕದ ಹಲವು ಪದ್ಯಗಳು ಹೇಳುತ್ತವೆ. ಈಗಿನ ಕಾಲಕ್ಕೆ ಇದು ಸ್ವಲ್ಪ ಆಶ್ಚರ್ಯುವಾಗಿ ಕಾಣಬಹುದೇನೋ. ಆದರೆ ಅಲ್ಲಿ, ಅದು ಉತ್ಕಟ ಪ್ರೇಮದ ಸಂಕೇತವಾಗೇ ನಿಲ್ಲುತ್ತದೆ. ಈ ಪದ್ಯದಲ್ಲಿ, ಕಾಲಿಗೆ ಬೀಳಲು ಅವಕಾಶ ಕೊಡಬಾರದೆಂದು ತನ್ನ ಪಾದಗಳನ್ನು ಸೀರೆಯ ನೆರಿಗೆಯೊಳಗೆ ಮುಚ್ಚಿಕೊಳ್ಳುವ, ಮತ್ತೆ ಬೇರೆ ಬೇರೆ ನೆಪಗಳಿಂದ ಪ್ರಿಯಕರನನ್ನು ಉಪೇಕ್ಷೆಮಾಡುವ ನಟನೆಮಾಡುವ ನಾಯಕಿ ಇದ್ದರೆ, ಇದನ್ನೆಲ್ಲ ನೋಡಿ, ಈ ಬಿಂಕವೂ ಅದೆಷ್ಟು ಸೊಗಸಾಗಿದೆ ಎಂದು ಮೆಚ್ಚುವ …

ಭಯವೇಕೆ ಬೆಡಗಿ?

Image
ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ
ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು
ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ
ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहितस्तारो हारः कृता जघने घने
कलकलवती काञ्ची पादौ क्वणन्मणिनूपुरौ ।
प्रियमभिसरस्येवं मुग्धे समाहतडिण्डिमा
यदि किमधिकत्रासोत्कम्पं दिशः समुदीक्षसे ॥२८॥(३१) ಉರಸಿ ನಿಹಿತಸ್ತಾರೋ ಹಾರಃ ಕೃತಾ ಜಘನೇ ಘನೇ
ಕಲಕಲವತೀ ಕಾಂಚೀ ಪಾದೌ ಕ್ವಣನ್ಮಣಿನೂಪುರೌ
ಪ್ರಿಯಮಭಿಸರಸ್ಯೇವಂ ಮುಗ್ಧೇ ಸಮಾಹತಡಿಂಡಿಮಾ
ಯದಿ ಕಿಮಧಿಕತ್ರಾಸೋತೋತ್ಕಂಪಂ  ದಿಶ: ಸಮುದೀಕ್ಷಸೇ || -ಹಂಸಾನಂದಿ

ಕೊ: ಸಾಮಾನ್ಯವಾಗಿ ಮೂಲದಲ್ಲಿ ಇರುವ ಎಲ್ಲವನ್ನೂ ಹೇಳಬೇಕಾದ್ದು ಅನುವಾದದ ಧರ್ಮ. ಆದರೂ ಈ ಪದ್ಯದಲ್ಲಿ, ಘಲ್ಲೆನುವ ಗೆಜ್ಜೆಗನ್ನೂ , ಗಣಗಣಿಸುವ ಡಾಬಿನ ಸದ್ದನ್ನೂ ಒಟ್ಟುಗೂಡಿಸಿ ಹೇಳಬೇಕಾಯ್ತು. ಒಟ್ಟಿನಲ್ಲಿ, ತನ್ನ ನಡಿಗೆಯಿಂದ, ತನ್ನ ಒಡವೆಗಳಿಂದ, ಎಲ್ಲರ ಗಮನವನ್ನು ಡಂಗೂರ ಸಾರಿದಂತೆ ಸೆಳೆಯುತ್ತಿರುವ ಈ ಅಭಿಸಾರಿಕೆ, ಅತ್ತಿತ್ತ ನೋಡುತ್ತ ಹೆದರುತ್ತ ಅಂಜುತ್ತ ಹೋಗುವುದೇಕೆ ಎಂದು ಚೇಷ್ಟೆಯಿಂದ ಕವಿ ಪ್ರಶ್ನಿಸುತ್ತಿದ್ದಾನೆ ಎಂಬುದು ಭಾವ.

ಕೊ.ಕೊ: ಮೂಲವು ಹರಿಣೀ ಎಂಬ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ.

ಕೊ.ಕೊ.ಕೊ: ಅಭಿಸಾರಿಕೆ ಎಂದರೆ ತನ್ನಿನಿಯನನ್ನು ನೋಡಹೊರಟಿರುವ ಹೆಣ್ಣು. ಚಿತ್…

ಹರನಿಗೊಂದು ಸ್ತುತಿ

Image
ಬಟ್ಟೆಬಿಟ್ಟವನೆಂದುನಾಚಿಕೆಕಾಮವೈರಕೆನಸುನಗು ನಂಜನುಂಡವನೆಂದುಅಚ್ಚರಿಹಿಡಿದಬುರುಡೆಗೆನಡುಕವು ಗಂಗೆಮುಡಿಯೇರಿಸಿದ ಹರನನು ಕರುಬಿ ನೋಡುತ ಪಾರ್ವತಿ ಹಾವುಸುತ್ತಿರಲದಕೆಬೆದರಿರಲವನೆಕಾಯಲಿನಮ್ಮನು!
ಸಂಸ್ಕೃತ ಮೂಲ: (ವಿದ್ಯಾಕರನ ಸುಭಾಷಿತ ರತ್ನ ಕೋಶ ೪-೩೬, ವಿನಯದೇವನದೆಂದು ಹೇಳಲಾದ ಪದ್ಯ): 

ದಿಗ್ವಾಸಾ ಇತಿ ಸತ್ರಪಂ ಮನಸಿಜದ್ವೇಷೀತಿ ಮುಗ್ಧಸ್ಮಿತಂ
ಸಾಶ್ಚರ್ಯಂ ವಿಷಮೇಕ್ಷಣೋSಯಮಿತಿ ಚ ತ್ರಸ್ತಂ ಕಪಾಲೀತಿ ಚ ಮೌಲಿಸ್ವೀಕೃತಜಾಹ್ನವೀಕ ಇತಿ ಚ ಪ್ರಾಪ್ತಾಭ್ಯಸೂಯಂ ಹರಃ ಪಾರ್ವತ್ಯಾಸಭಯಂ ಭುಜಂಗವಲಯೀತ್ಯಾಲೋಕಿತಃ ಪಾತು ವಃ
दिग्वासा इति सत्रपं मनसिजद्वेषीति मुग्धस्मितं
साश्चर्यं विषमेक्षणोऽयमिति च त्रस्तं कपालीति च |
मौलिस्वीकृतजाह्नवीक इति च प्राप्ताभ्यसूयं हरः
पार्वत्या सभयं भुजङ्गवलयीत्यालोकितः पातु वः ||४. ३६||( ६५)
-ಹಂಸಾನಂದಿ
ಕೊ: ಬೇರೆ ಬೇರೆ ಕಾರಣಗಳಿಂದ ಪಾರ್ವತಿಯಲ್ಲಿ ನಾಚಿಕೆ, ಮಂದಸ್ಮಿತ, ಆಶ್ಚರ್ಯ, ನಡುಕ, ಅಸೂಯೆ, ಹೆದರಿಕೆ ಹೀಗೆ ಹಲವು ಬೇರೆಬೇರೆ ಭಾವನೆಗಳನ್ನು ತರುವ ಹರನು ನಮ್ಮಲ್ಲಿ ಕಾಪಾಡಲಿ ಎಂದು ಕವಿ ಕೋರುತ್ತಾನೆ. 
ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತವೆಂಬ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯೆಂಬ ಛಂದಸ್ಸಿನಲ್ಲಿದೆ. ಪ್ರಾಸವನ್ನು ಇಟ್ಟಿಲ್ಲ.
ಕೊ.ಕೊ.ಕೊ: ಚಿತ್ರವು ಎಲ್ಲೋರದ ಕೈಲಾಸ ದೇವಾಲಯದ ಗೋಡೆಯೊಂದರ ಮೇಲೆ ಕಾಣಬರುವ ಶಿವನ ಮೂರ್ತಿ.  ವಿಕಿಪೀಡಿಯಾ ಕೃಪೆ.

ಸಿಟ್ಟು

Image
"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ!
ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?"
ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ 
ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !
ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ ಪದ್ಯ-73):
ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ನಿರಂತರಮೀಕ್ಷಿತಾ ||
-ಹಂಸಾನಂದಿ
ಕೊ: ನಾಯಕಿ ಗೆಳತಿಯೊಡನೆ ಮಾತಾಡುತ್ತ,  ತನ್ನಿಂದ ವಿಮುಖನಾದ ಪ್ರಿಯಕರನನ್ನು ತಾನು ಲೆಕ್ಕಿಸುವುದಿಲ್ಲವೆಂದು ಬರಿ ಮಾತಿನಲ್ಲಿ ಸಿಟ್ಟು ತೋರುತ್ತಿದ್ದರೂ , ಅವಳ ಜಿಂಕೆಕಣ್ಣಿನ ನೋಟ ಅವನು ಹೋದ ಹಾದಿಯನ್ನೇ ನೋಡುತ್ತಿವೆಯೆಂಬುದು ಇದರ ಭಾವ. ಜಿಂಕೆಕಣ್ಣಿನವಳ ಸಿಟ್ಟನ್ನು ಬಣ್ಣಿಸಲು ಜಿಂಕೆಯದೇ ಹೆಸರಿನ "ಹರಿಣೀ"  ವೃತ್ತವನ್ನು ಕವಿ ಬಳಸಿದ್ದಾನೆ.
ಕೊ.ಕೊ: ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಛಂದಸ್ಸಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಇದೇ ಪದ್ಯವನ್ನು ಬೇರೊಂದು ರೀತಿಯಲ್ಲಿ, ಛಂದೋಬಂಧವಿಲ್ಲದೇ "ಚಿಗರೆಗಣ್ಣವಳ ಸಿಟ್ಟು" ಎಂಬ ಹೆಸರಿನಲ್ಲಿ ಅನುವಾದಿಸಿದ್ದೆ. ಅದನ್ನು ನೀವು ಈ ಕೊಂಡಿಯಲ್ಲಿ ಓದಬಹುದು.  http://hamsanada.blogspot.com/2012/02/blog-post_13.html
ಕೊ,ಕೊ.ಕೊ: ಈ ಚಿತ್ರ ರಾಗ ಕಾಮೋದ ದ ರಾಗಮಾಲಾ ಚಿತ್ರ,, ಬ್ರೂಕ್ಲಿನ…

ಈಕಾಲದ್ದೊಂದು ಕಥೆ

Image
ಈ ಕಾಲದೊಂದೂ ಕಥೆಯನ್ನು ಕೇಳೀ 
ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ 
ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ 
ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ

ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ
ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ
ಇಷ್ಟೆಲ್ಲ ತಿಂದೂ ಕೊನೆಗೀತ ಅಂದಾ
ತೂಕಾನೆ ಯಾಕೋ ಇಳ್ಯೋದೆ ಇಲ್ಲಾ

-ಹಂಸಾನಂದಿ

ಕೊ: ಸುಮ್ನೆ ತಮಾಷೆಗಂತ ಬರೆದದ್ದು ಅಷ್ಟೆ! ಈ ಚುಟುಕಗಳು ಉಪಜಾತಿಯೆಂಬ ಸಾಂಪ್ರದಾಯಿಕ ಛಂದಸ್ಸಿನಲ್ಲಿವೆ - ಇಂದ್ರವಜ್ರ ಮತ್ತೆ ಉಪೇಂದ್ರವಜ್ರ ಎಂಬ ಎರಡೂ ವರ್ಣವೃತ್ತಗಳು ಕಲಬೆರಕೆಯಾದರೆ ಅದಕ್ಕೆ ಉಪಜಾತಿ ಅನ್ನುತ್ತಾರೆ.

ಕೊ.ಕೊ: ಹಲವಾರು ಸಂಸ್ಕೃತ ಸ್ತೋತ್ರಗಳೂ ಈ ಉಪಜಾತಿ ವೃತ್ತದಲ್ಲಿರುತ್ತವೆ. ಕಾಯೇನವಾಚಾ ಮನಸೇಂದ್ರಿಯೇರ್ವಾ .. ಇತ್ಯಾದಿ ಪದ್ಯಗಳನ್ನು ನೆನಪಿಸಿಕೊಳ್ಳಬಹುದು.


ಚಿತ್ರ ಕೃಪೆ:   Picture from: http://www.chrismadden.co.uk/cartoons/food-cartoons-cookery-cartoons/page/obesity-cartoon.html

ಒಂದು ಹನಿ

Image
"ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ
ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!"
ಇನಿಯ ನುಡಿದಿರಲಿಂತು ಮರುಮಾತನಾಡದೆಯೆ
ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ!

ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫  ):

ಸುತನು ಜಹಿಹಿ ಕೋಪಂ ಪಶ್ಯ ಪಾದನತಂ ಮಾಮ್
ನ ಖಲು ತವ ಕದಾಚಿತ್ಕೋಪ ಏವಮ್ ವಿಧೋಭೂತ್
ಇತಿ ನಿಗದತಿ ನಾಥೇ ತಿರ್ಯಗಾಮೀಲಿತಾಕ್ಷ್ಯಾ
ನಯನಜಲಮನಲ್ಪಮ್ ಮುಕ್ತಮುಕ್ತಮ್ ನ ಕಿಂಚಿತ್

-ಹಂಸಾನಂದಿ

ಕೊ: ಈ ಪದ್ಯದ ಒಂದೆರಡು ಸಾಲು ಅನುವಾದ ಮಾಡಿಟ್ಟು ೪ ವರ್ಷಗಳೇ ಕಳೆದಿವೆ ಅನ್ನುವುದು ನೋಡಿ, ಇವತ್ತು ಪೂರ್ತಿ ಮಾಡಿದೆ :)

ಕೊ.ಕೊ: ಅಮರು ಶತಕದಲ್ಲಿ, ಪ್ರಿಯೆಯ ಕೋಪವನ್ನು ತಗ್ಗಿಸಲು ಅವಳ ಕಾಲಿಗೆ ಬೀಳುವ ಹಲವು ದೃಷ್ಟಾಂತಗಳಿವೆ. ಅವುಗಳಲ್ಲಿ ಇದೊಂದು.

ಕೊ.ಕೊ.ಕೊ: ಹಿಂದೂಸ್ತಾನಿ ಸಂಗೀತದ ರಾಗ ರಾಮಕಲಿಯ ರಾಗಿಣಿಯನ್ನು ಚಿತ್ರಿಸುವ ಈ ರಾಗಮಾಲಾ ಚಿತ್ರ ಈ ಅನುವಾದಕ್ಕೆ ಸೂಕ್ತವಾಗಿ ಕಂಡಿದ್ದರಿಂದ ಅದನ್ನೇ ಬಳಸಿಕೊಂಡೆ. ಸುಮಾರು ೫೦೦ ವರ್ಷ ಹಿಂದೆ ಚಿತ್ರಿತವಾ ಇದು,  $4000 ಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ!

ಚಿತ್ರದ ಮೂಲ ಇಲ್ಲಿಂದ:  http://www.bonhams.com/auctions/21787/lot/104/ನಾಟ್ಯ ಗುರುವಿಗೆ

Image
"ಕುಡಿಹುಬ್ಬಿನಾಚೆಲುವೆ! ಬಳ್ಳಿದೋಳುಗಳನ್ನುನೀಡು! ನಿಲುವಿರಲಿಯಿಂತು ಬಗ್ಗುವಾಗಿಷ್ಟುಕೈಚಾಚದಿರು, ಕಾಲ್ಬೆರಳುಬಾಗಿರಲಿ, ನನ್ನನೋಡು!" ಮೋಡಮೊರೆದಿರುವಂಥಕಂಠಮೃದಂಗದಲಿಪರಶಿವನುನುಡಿಯುತಿರಲು ಅವನನರ್ತನದಲಯಮುರಿವಚಪ್ಪಾಳೆಸದ್ದೆಮ್ಮನ್ನುಕಾಯುತಿರಲಿ
ಸಂಸ್ಕೃತಮೂಲ:
ಏವಂಸ್ಥಾಪಯಸುಭ್ರುಬಾಹುಲತಿಕಾಂಏವಂಕುರುಸ್ಥಾನಕಂ ನಾತ್ಯುಚ್ಚೈರ್ನಮಕುಂಚಯಾಗ್ರಚರಣೌಮಾಮ್ಪಶ್ಯತಾವತ್ಕ್ಷಣಮ್। ಏವಂನರ್ತಯತಃಸ್ವವಕ್ತ್ರಮುರಜೇನಾಂಬೋಧರಧ್ವಾನಿನಾ
ಶಂಭೋರ್ವಃಪರಿಪಾಂತುನರ್ತಿತಲಯಚ್ಛೇದಾಹತಾಸ್ತಾಲಿಕಾ॥

ಕೊ: ಈ ಹಿಂದೆಯೇ ಈ ಪದ್ಯವನ್ನು ಅನುವಾದಿಸಿದ್ದೆ. ಆದರೆ ಇವತ್ತು " ನೃತ್ಯ ದಿನ" ಎಂದು ತಿಳಿಸುಬಂದದ್ದರಿಂದ ಈ ಬಾರಿ ಸ್ವಲ್ಪ ಛಂದಸ್ಸಿನ ಕಟ್ಟಿನಲ್ಲಿ ಅನುವಾದಿಸಿದ್ದೇನೆ.

ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರೆಯ ನಡಿಗೆಯಲ್ಲಿದೆ ( ಪೂರ್ತಿ ಚೌಪದಿ ಲಕ್ಷಣವನ್ನೂ, ಪ್ರಾಸವನ್ನೂ ಪಾಲಿಸಿಲ್ಲ)