Posts

Showing posts from May, 2015

ಬಿಂಕದ ಚೆಲುವೆ

Image
ಕಾಲ್ಗಳಿಗೆ ನಾ ಬಿದ್ದರೆನುತಲಿ ಪಾದ ಮುಚ್ಚುತ ನಿರಿಯಲಿ
ಬಂದನಸುನಗೆಯನ್ನಡಗಿಸುತ ನೇರ ನೋಟವ ತಪ್ಪಿಸಿ
ನುಡಿಯುತಿರೆ ನಾ ನಡುವೆ ಗೆಳತಿಯ ಕೂಡೆ ಮಾತಿಗೆ ತೊಡಗುವ
ಒಲವುತುಂಬಿದೆ ಚೆಲುವೆಯೀಕೆಯ ಬಿಂಕವೆನಿತಿದು ಸೊಗವಿದೆ!

ಸಂಸ್ಕೃತ ಮೂಲ (ಅಮರುಶತಕ ೪೩/೪೭):

ಆಶಂಕ್ಯ ಪ್ರಣತಿಂ ಪಟಾಂತಪಿಹಿತೌ ಪಾದೌ ಕರೋತ್ಯಾದರಾತ್
ವ್ಯಾಜೇನಾಗಮತವೃಣೋತಿ ಹಸಿತಂ ನ ಸ್ಪಷ್ಟಮುದ್ವೀಕ್ಷತೇ
ಮಯ್ಯಾಲಾಪವತಿ ಪ್ರತೀಪವಚನಂ ಸಖ್ಯಾ ಸಹಾಭಾಷತೇ
ತಸ್ಯಾಸ್ತಿಷ್ಠತು ನಿರ್ಭರಪ್ರಣತಿತಾ ಮಾನೋsಪಿ ರಮ್ಯೋದಯಃ

आशङ्क्य प्रणतिं पटान्तपिहितौ पादौ करोत्यादरात्
व्याजेनागतमावृणोति हसितं न स्पष्टमुद्वीक्षते ।
मय्यालापवति प्रतीपवचनं सख्या सहाभाषते
तस्यास्तिष्ठतु निर्भरप्रणयिता मानोऽपि रम्योदयः ॥ Amaruka || ४२॥(४७)
-ಹಂಸಾನಂದಿ

ಕೊ: ಪತ್ನಿಯರ/ಪ್ರೇಯಸಿಯರ ಕಾಲಿಗೆ ಪತಿ/ಪ್ರಿಯಕರರು ಬೀಳುವುದರ ಬಗ್ಗೆ ಅಮರು ಶತಕದ ಹಲವು ಪದ್ಯಗಳು ಹೇಳುತ್ತವೆ. ಈಗಿನ ಕಾಲಕ್ಕೆ ಇದು ಸ್ವಲ್ಪ ಆಶ್ಚರ್ಯುವಾಗಿ ಕಾಣಬಹುದೇನೋ. ಆದರೆ ಅಲ್ಲಿ, ಅದು ಉತ್ಕಟ ಪ್ರೇಮದ ಸಂಕೇತವಾಗೇ ನಿಲ್ಲುತ್ತದೆ. ಈ ಪದ್ಯದಲ್ಲಿ, ಕಾಲಿಗೆ ಬೀಳಲು ಅವಕಾಶ ಕೊಡಬಾರದೆಂದು ತನ್ನ ಪಾದಗಳನ್ನು ಸೀರೆಯ ನೆರಿಗೆಯೊಳಗೆ ಮುಚ್ಚಿಕೊಳ್ಳುವ, ಮತ್ತೆ ಬೇರೆ ಬೇರೆ ನೆಪಗಳಿಂದ ಪ್ರಿಯಕರನನ್ನು ಉಪೇಕ್ಷೆಮಾಡುವ ನಟನೆಮಾಡುವ ನಾಯಕಿ ಇದ್ದರೆ, ಇದನ್ನೆಲ್ಲ ನೋಡಿ, ಈ ಬಿಂಕವೂ ಅದೆಷ್ಟು ಸೊಗಸಾಗಿದೆ ಎಂದು ಮೆಚ್ಚುವ …

ಭಯವೇಕೆ ಬೆಡಗಿ?

Image
ಎದೆಮೇಲೆ ಹೊಳೆವ ಸರ ಸೊಂಟದಲ್ಲೊಡ್ಯಾಣ
ಕಾಲ್ಗೆಜ್ಜೆ ಗಣಗಣಿಪ ದನಿಯು ಸಾರಿರಲು
ಡಂಗುರವ ನೀ ತೆರಳುತಿರಲು ನಿನ್ನಿನಿಯನೆಡೆ
ಅಂಜಿನಡುಗುತ ಸುತ್ತಲೇಕೆ ನೋಡುತಿಹೆ? ಸಂಸ್ಕೃತ ಮೂಲ: ಅಮರುಕನ ಅಮರು ಶತಕ, (೨೮/೩೧) उरसि निहितस्तारो हारः कृता जघने घने
कलकलवती काञ्ची पादौ क्वणन्मणिनूपुरौ ।
प्रियमभिसरस्येवं मुग्धे समाहतडिण्डिमा
यदि किमधिकत्रासोत्कम्पं दिशः समुदीक्षसे ॥२८॥(३१) ಉರಸಿ ನಿಹಿತಸ್ತಾರೋ ಹಾರಃ ಕೃತಾ ಜಘನೇ ಘನೇ
ಕಲಕಲವತೀ ಕಾಂಚೀ ಪಾದೌ ಕ್ವಣನ್ಮಣಿನೂಪುರೌ
ಪ್ರಿಯಮಭಿಸರಸ್ಯೇವಂ ಮುಗ್ಧೇ ಸಮಾಹತಡಿಂಡಿಮಾ
ಯದಿ ಕಿಮಧಿಕತ್ರಾಸೋತೋತ್ಕಂಪಂ  ದಿಶ: ಸಮುದೀಕ್ಷಸೇ || -ಹಂಸಾನಂದಿ

ಕೊ: ಸಾಮಾನ್ಯವಾಗಿ ಮೂಲದಲ್ಲಿ ಇರುವ ಎಲ್ಲವನ್ನೂ ಹೇಳಬೇಕಾದ್ದು ಅನುವಾದದ ಧರ್ಮ. ಆದರೂ ಈ ಪದ್ಯದಲ್ಲಿ, ಘಲ್ಲೆನುವ ಗೆಜ್ಜೆಗನ್ನೂ , ಗಣಗಣಿಸುವ ಡಾಬಿನ ಸದ್ದನ್ನೂ ಒಟ್ಟುಗೂಡಿಸಿ ಹೇಳಬೇಕಾಯ್ತು. ಒಟ್ಟಿನಲ್ಲಿ, ತನ್ನ ನಡಿಗೆಯಿಂದ, ತನ್ನ ಒಡವೆಗಳಿಂದ, ಎಲ್ಲರ ಗಮನವನ್ನು ಡಂಗೂರ ಸಾರಿದಂತೆ ಸೆಳೆಯುತ್ತಿರುವ ಈ ಅಭಿಸಾರಿಕೆ, ಅತ್ತಿತ್ತ ನೋಡುತ್ತ ಹೆದರುತ್ತ ಅಂಜುತ್ತ ಹೋಗುವುದೇಕೆ ಎಂದು ಚೇಷ್ಟೆಯಿಂದ ಕವಿ ಪ್ರಶ್ನಿಸುತ್ತಿದ್ದಾನೆ ಎಂಬುದು ಭಾವ.

ಕೊ.ಕೊ: ಮೂಲವು ಹರಿಣೀ ಎಂಬ ವೃತ್ತದಲ್ಲಿದೆ. ಅನುವಾದವು ಪಂಚಮಾತ್ರಾ ಚೌಪದಿಯಲ್ಲಿದೆ. ಪ್ರಾಸವನ್ನಿಟ್ಟಿಲ್ಲ.

ಕೊ.ಕೊ.ಕೊ: ಅಭಿಸಾರಿಕೆ ಎಂದರೆ ತನ್ನಿನಿಯನನ್ನು ನೋಡಹೊರಟಿರುವ ಹೆಣ್ಣು. ಚಿತ್…

ಹರನಿಗೊಂದು ಸ್ತುತಿ

Image
ಬಟ್ಟೆಬಿಟ್ಟವನೆಂದುನಾಚಿಕೆಕಾಮವೈರಕೆನಸುನಗು ನಂಜನುಂಡವನೆಂದುಅಚ್ಚರಿಹಿಡಿದಬುರುಡೆಗೆನಡುಕವು ಗಂಗೆಮುಡಿಯೇರಿಸಿದ ಹರನನು ಕರುಬಿ ನೋಡುತ ಪಾರ್ವತಿ ಹಾವುಸುತ್ತಿರಲದಕೆಬೆದರಿರಲವನೆಕಾಯಲಿನಮ್ಮನು!
ಸಂಸ್ಕೃತ ಮೂಲ: (ವಿದ್ಯಾಕರನ ಸುಭಾಷಿತ ರತ್ನ ಕೋಶ ೪-೩೬, ವಿನಯದೇವನದೆಂದು ಹೇಳಲಾದ ಪದ್ಯ): 

ದಿಗ್ವಾಸಾ ಇತಿ ಸತ್ರಪಂ ಮನಸಿಜದ್ವೇಷೀತಿ ಮುಗ್ಧಸ್ಮಿತಂ
ಸಾಶ್ಚರ್ಯಂ ವಿಷಮೇಕ್ಷಣೋSಯಮಿತಿ ಚ ತ್ರಸ್ತಂ ಕಪಾಲೀತಿ ಚ ಮೌಲಿಸ್ವೀಕೃತಜಾಹ್ನವೀಕ ಇತಿ ಚ ಪ್ರಾಪ್ತಾಭ್ಯಸೂಯಂ ಹರಃ ಪಾರ್ವತ್ಯಾಸಭಯಂ ಭುಜಂಗವಲಯೀತ್ಯಾಲೋಕಿತಃ ಪಾತು ವಃ
दिग्वासा इति सत्रपं मनसिजद्वेषीति मुग्धस्मितं
साश्चर्यं विषमेक्षणोऽयमिति च त्रस्तं कपालीति च |
मौलिस्वीकृतजाह्नवीक इति च प्राप्ताभ्यसूयं हरः
पार्वत्या सभयं भुजङ्गवलयीत्यालोकितः पातु वः ||४. ३६||( ६५)
-ಹಂಸಾನಂದಿ
ಕೊ: ಬೇರೆ ಬೇರೆ ಕಾರಣಗಳಿಂದ ಪಾರ್ವತಿಯಲ್ಲಿ ನಾಚಿಕೆ, ಮಂದಸ್ಮಿತ, ಆಶ್ಚರ್ಯ, ನಡುಕ, ಅಸೂಯೆ, ಹೆದರಿಕೆ ಹೀಗೆ ಹಲವು ಬೇರೆಬೇರೆ ಭಾವನೆಗಳನ್ನು ತರುವ ಹರನು ನಮ್ಮಲ್ಲಿ ಕಾಪಾಡಲಿ ಎಂದು ಕವಿ ಕೋರುತ್ತಾನೆ. 
ಕೊ.ಕೊ: ಮೂಲವು ಶಾರ್ದೂಲ ವಿಕ್ರೀಡಿತವೆಂಬ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯೆಂಬ ಛಂದಸ್ಸಿನಲ್ಲಿದೆ. ಪ್ರಾಸವನ್ನು ಇಟ್ಟಿಲ್ಲ.
ಕೊ.ಕೊ.ಕೊ: ಚಿತ್ರವು ಎಲ್ಲೋರದ ಕೈಲಾಸ ದೇವಾಲಯದ ಗೋಡೆಯೊಂದರ ಮೇಲೆ ಕಾಣಬರುವ ಶಿವನ ಮೂರ್ತಿ.  ವಿಕಿಪೀಡಿಯಾ ಕೃಪೆ.

ಸಿಟ್ಟು

Image
"ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ!
ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?"
ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ 
ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !
ಸಂಸ್ಕೃತ ಮೂಲ (ಅಮರುಕನ ಅಮರು ಶತಕದಿಂದ ಪದ್ಯ-73):
ಸ್ಫುಟತು ಹೃದಯಂ ಕಾಮಃ ಕಾಮಂ ಕರೋತು ತನುಮ್ ತನುಮ್
ನ ಸಖಿ ಚಪಲಪ್ರೇಮ್ನಾ ಕಾರ್ಯಮ್ ಪುನರ್ದಯಿತೇನ ಮೇ |
ಇತಿ ಸರಭಸಂ ಮಾನಾಟೋಪಾದ್ ಉದೀರ್ಯ ವಚಸ್ತಯಾ
ರಮಣಪದವೀ ಸಾರಂಗಾಕ್ಷ್ಯಾ ನಿರಂತರಮೀಕ್ಷಿತಾ ||
-ಹಂಸಾನಂದಿ
ಕೊ: ನಾಯಕಿ ಗೆಳತಿಯೊಡನೆ ಮಾತಾಡುತ್ತ,  ತನ್ನಿಂದ ವಿಮುಖನಾದ ಪ್ರಿಯಕರನನ್ನು ತಾನು ಲೆಕ್ಕಿಸುವುದಿಲ್ಲವೆಂದು ಬರಿ ಮಾತಿನಲ್ಲಿ ಸಿಟ್ಟು ತೋರುತ್ತಿದ್ದರೂ , ಅವಳ ಜಿಂಕೆಕಣ್ಣಿನ ನೋಟ ಅವನು ಹೋದ ಹಾದಿಯನ್ನೇ ನೋಡುತ್ತಿವೆಯೆಂಬುದು ಇದರ ಭಾವ. ಜಿಂಕೆಕಣ್ಣಿನವಳ ಸಿಟ್ಟನ್ನು ಬಣ್ಣಿಸಲು ಜಿಂಕೆಯದೇ ಹೆಸರಿನ "ಹರಿಣೀ"  ವೃತ್ತವನ್ನು ಕವಿ ಬಳಸಿದ್ದಾನೆ.
ಕೊ.ಕೊ: ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಛಂದಸ್ಸಿನಲ್ಲಿದೆ. ಕೆಲವು ವರ್ಷಗಳ ಹಿಂದೆ ಇದೇ ಪದ್ಯವನ್ನು ಬೇರೊಂದು ರೀತಿಯಲ್ಲಿ, ಛಂದೋಬಂಧವಿಲ್ಲದೇ "ಚಿಗರೆಗಣ್ಣವಳ ಸಿಟ್ಟು" ಎಂಬ ಹೆಸರಿನಲ್ಲಿ ಅನುವಾದಿಸಿದ್ದೆ. ಅದನ್ನು ನೀವು ಈ ಕೊಂಡಿಯಲ್ಲಿ ಓದಬಹುದು.  http://hamsanada.blogspot.com/2012/02/blog-post_13.html
ಕೊ,ಕೊ.ಕೊ: ಈ ಚಿತ್ರ ರಾಗ ಕಾಮೋದ ದ ರಾಗಮಾಲಾ ಚಿತ್ರ,, ಬ್ರೂಕ್ಲಿನ…

ಈಕಾಲದ್ದೊಂದು ಕಥೆ

Image
ಈ ಕಾಲದೊಂದೂ ಕಥೆಯನ್ನು ಕೇಳೀ 
ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ 
ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ 
ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ

ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ
ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ
ಇಷ್ಟೆಲ್ಲ ತಿಂದೂ ಕೊನೆಗೀತ ಅಂದಾ
ತೂಕಾನೆ ಯಾಕೋ ಇಳ್ಯೋದೆ ಇಲ್ಲಾ

-ಹಂಸಾನಂದಿ

ಕೊ: ಸುಮ್ನೆ ತಮಾಷೆಗಂತ ಬರೆದದ್ದು ಅಷ್ಟೆ! ಈ ಚುಟುಕಗಳು ಉಪಜಾತಿಯೆಂಬ ಸಾಂಪ್ರದಾಯಿಕ ಛಂದಸ್ಸಿನಲ್ಲಿವೆ - ಇಂದ್ರವಜ್ರ ಮತ್ತೆ ಉಪೇಂದ್ರವಜ್ರ ಎಂಬ ಎರಡೂ ವರ್ಣವೃತ್ತಗಳು ಕಲಬೆರಕೆಯಾದರೆ ಅದಕ್ಕೆ ಉಪಜಾತಿ ಅನ್ನುತ್ತಾರೆ.

ಕೊ.ಕೊ: ಹಲವಾರು ಸಂಸ್ಕೃತ ಸ್ತೋತ್ರಗಳೂ ಈ ಉಪಜಾತಿ ವೃತ್ತದಲ್ಲಿರುತ್ತವೆ. ಕಾಯೇನವಾಚಾ ಮನಸೇಂದ್ರಿಯೇರ್ವಾ .. ಇತ್ಯಾದಿ ಪದ್ಯಗಳನ್ನು ನೆನಪಿಸಿಕೊಳ್ಳಬಹುದು.


ಚಿತ್ರ ಕೃಪೆ:   Picture from: http://www.chrismadden.co.uk/cartoons/food-cartoons-cookery-cartoons/page/obesity-cartoon.html