Posts

Showing posts from March, 2016

ದ್ರೌಪದೀ ಸ್ವಯಂವರ

Image
ಇವತ್ತು ಹೋಳಿ ಹುಣ್ಣಿಮೆ. ಕಾಮನ ಹಬ್ಬ.  ಕೆಲವು ವರ್ಷಗಳ ಹಿಂದೆ ಇದೇ ದಿನ ನಾನು ಸೀತಾ ಸ್ವಯಂವರದ ಬಗ್ಗೆ ಒಂದು ನೀಳ್ಗವಿತೆಯನ್ನು ಬರೆದಿದ್ದೆ.  ಕಾಕತಾಳೀಯವಾಗಿ, ಇವತ್ತು ಅದೇ ದಿವಸ, ದ್ರೌಪದಿಯ ಸ್ವಯಂವರದ ಬಗ್ಗೆ ಬರೆಯುವ ಅವಕಾಶ ಸಿಕ್ಕಿತು!

ಅದರಲ್ಲೂ , ಗೆಳೆಯರಾದ ಕಲಾವಿದ ರಾಜೇಶ್ ಶ್ರೀವತ್ಸ ಅವರು, ಈ ಪದ್ಯಗಳಿಗೆ ಕಣ್ಣಿಗೆ ಕಟ್ಟುವಂತಹ ದ್ರೌಪದಿಯನ್ನು ಚಿತ್ರಿಸಿರುವುದು ನನ್ನ ಅದೃಷ್ಟವೇ ಸರಿ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ಮೆಲ್ಲನಡಿಗೆಯ ಪುಲ್ಲಲೋಚನೆ ಹೆಜ್ಜೆಯಿಡುತಿರೆ ಚೆಂದದಿಂ l
ಘಲ್ಲುಘಲ್ಲನೆ ನುಡಿದಿರಲು ನಲ್ಗೆಜ್ಜೆ ಪಾದದೊಳಿಂಪಿನಿಂ l
ಝಲ್ಲುಝಲ್ಲೆನೆ ಅರಸುಕುವರರ ಗಟ್ಟಿಯದೆಯೂ ತವಕದಿಂ l
ಕೊಲ್ಲುತಿಹಳೀ ದ್ರೌಪದಿಯು ಭಾರತದ ಯುದ್ಧಕೆ ಮೊದಲಿನಿಂ ll

ಇಂಚರವು ಕೇಳಿರಲು ಘಲ್ಲೆನುತಿರುವ ಗೆಜ್ಜೆಯ ಸಂಗಡ l
ಕೊಂಚೆ ನಡಿಗೆಯ ದುರುಪದಿಯು ಕಾಣದಿರೆ ತಳಮಳಗೊಳ್ಳುತ l
ಮಿಂಚು ಬಂದುದೆ? ಬೇಸಿಗೆಯಲಿದೇನಿದುವೆ ಅಚ್ಚರಿಯನ್ನುತ l
ಕೊಂಚ ಮರುಳಾಗಿಹರು ನೆರೆದಿಹ ರಾಜ ಕುವರರು ಖಂಡಿತ ll

ತರುಣಿ ದುರುಪದಿ ಮಾಲೆ ಹಿಡಿಯುತ
ಬರುತಲಿರೆ ಮೆಲುನಡಿಗೆಯಲಿ ತಾ
ಸಿರಿಯೆ ಹೊಕ್ಕಂತಾದುದೈ ಕೇಳ್ ಸಭೆಯ ಮಂಟಪದಿ l
ಅರಸಕುವರರು ಕಣ್ಣ ಕೋರೈ-
ಸಿರುವ ಕಾಂತಿಯ ತನುವ ನೋಡುತ
ಕೊರಗಿದರು ದುಃಶಕ್ಯವೀಕೆಯ ಪಡೆಯುವುದೆನ್ನುತಲಿ ll

-ಹಂಸಾನಂದಿ

ಕೊ: ಮೊದಲೆರಡು ಪದ್ಯಗಳು ’ಭಾಮಿನೀಗತಿಯ’ ಮಾತ್ರಾ ಮಲ್ಲಿಕಾಮಾಲೆಯಲ್ಲಿದ್ದರೆ, ಕೊನೆಯ ಪದ್ಯವು ಭಾಮಿನಿ ಷಟ್ಪದಿಯಲ್ಲಿದೆ

ಅರ್ಧನಾರೀಶ್ವರ

Image
ತಿನ್ನಲಿಕೆ ಬಿಕ್ಕೆಯಲಿ ಇಬ್ಬರ ಜೀವ ಸಾಗುವುದೆಂತಿದು?
ಎನ್ನುತಲಿ ಯೋಚಿಸುತ ಕೂಡಲೆ ಮುಡಿವನೊಂದನು ಮಾಡುತ
ಮುನ್ನವೊಂದಾಗಿಹೆವು ಎಂತೋ ಪ್ರೀತಿತುಂಬಿದೆ ಮನದಲಿ
ಇನ್ನು ಒಂದೇ ದೇಹವಿರಲೆಂದೆಂಬ ಜೋಡಿಯೆ ಕಾಯಲಿ

ಸಂಸ್ಕೃತ ಮೂಲ (ಅಷ್ಟಾವಧಾನಿ ಡಾ.ಶಂಕರ್ ರಾಜಾರಾಮನ್ ಅವರದ್ದು) :

इयत्या भिक्षया नेया लोकयात्रा द्वयोरिति ।
हृदयैक्यमनु प्राप्तौ शरीरैक्यं शिवौ नुमः ॥

ಇಯತ್ಯಾ ಭಿಕ್ಷಯಾ ನೇಯಾ ಲೋಕಯಾತ್ರಾ ದ್ವಯೋರಿತಿ |
ಹೃದಯೈಕ್ಯಮನು ಪ್ರಾಪ್ತೌ ಶರೀರೈಕ್ಯಂ ಶಿವೌ ನುಮಃ ||

-ಹಂಸಾನಂದಿ

ಕೊ: ಶಿವನು ಭಿಕ್ಷಾಪಾತೆಯನ್ನು ಹಿಡಿದವನೆಂಬುದು ತಿಳಿದ ವಿಷಯವೇ. ಇವನು ಮದುವೆಯಾದ ಮೇಲೆ ಇಬ್ಬರಿಗೂ ಭಿಕ್ಷೆ ಬೇಡಿ ಜೀವ ಸಾಗಿಸುವುದು ಕಷ್ಟವೋ ಎಂಬಂತೆ , ಆ ಶಿವಪಾರ್ವತಿಯರು ಒಂದೇ ದೇಹದಲ್ಲಿ ಅರ್ಧ ಅರ್ಧ ರೂಪ ಹೊಂದಿದ ಶರೀರಿಯಾದರು ಎಂಬುದು ಕವಿಯ ಆಶಯ.

ಕೊ.ಕೊ: ಮೂಲವು ಅನುಷ್ಟುಪ್ ಛಂದಸ್ಸಿನಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯಲ್ಲಿದೆ.

ಕೊ.ಕೊ.ಕೊ: ಮೂಲವು ಎರಡೇ ಸಾಲಿನಲ್ಲಿ ಇದ್ದರೆ ಅನುವಾದವು ನಾಲ್ಕು ಸಾಲುಗಳಲ್ಲಿರುವುದನ್ನು ನೀವು ಗಮನಿಸಿರಬಹುದು. ಸಂಸ್ಕೃತದಲ್ಲಿ ಕೆಲವು ವಿಷಯಗಳನ್ನು ಬಹಳ ಚಿಕ್ಕದಾಗಿ ಹೇಳಲು ಸಾಧ್ಯ. ಅದೇ ಅಂಶವನ್ನು ಬೇರೆ ಭಾಷೆಗಳಲ್ಲಿ ಹೊರತರುವಾಗ ಅಷ್ಟು ಚಿಕ್ಕದಾಗಿ ಮಾಡುವುದು ಕಷ್ಟ. ಹಾಗಾಗಿ ಕೆಲವು ಅಂಶಗಳನ್ನು ವಿಸ್ತರಿಸಿ ಹೇಳಿದ್ದೇನೆ. ಅಲ್ಲದೇ ಮೂಲದಲ್ಲಿ ಶಿವ ಪಾರ್ವತಿಯರಿಗೆ ಕವಿ ತಲೆಬಾಗುತ್ತಿದ್ದರೆ…

ಗ್ರಹಣ ಚಕ್ರ

Image
ಇವತ್ತು, ಅಂದರೆ, ಮಾರ್ಚ್ ೮/೯, ೨೦೧೬, ಪೂರ್ಣ ಸೂರ್ಯ ಗ್ರಹಣ ಆಗ್ನೇಯ ಏಷ್ಯಾದಲ್ಲಿ ಕಾಣುತ್ತೆ. ಭಾರತಕ್ಕೆ ಪೂರ್ಣ ಸೂರ್ಯಗ್ರಹಣದ ಭಾಗ್ಯವಿಲ್ಲದಿದ್ದರೂ ಭಾಗಶಃ ಗ್ರಹಣವಾಗಿರುವ ಸೂರ್ಯ ಹುಟ್ಟುವುದೇ ವಿಶೇಷ. ಪೂರ್ವಾಕಾಶ ಕಂಡರೆ, ಮೋಡವಿಲ್ಲದಿದ್ದರೆ ಬೆಳಗ್ಗೆ ಬೇಗನೆದ್ದು ನೋಡುವುದನ್ನು ಮರೆಯದಿರಿ, ಮರೆತು ನಿರಾಶರಾಗದಿರಿ!

ಈ  ಸೂರ್ಯ ಗ್ರಹಣ ಆಗೋದು ಭೂಮಿ ಮೇಲಿರೋವರ ಸೌಭಾಗ್ಯ. ಯಾಕಂದ್ರೆ, ಎರಡು ಉಪಗ್ರಹಗಳಿರೋ ಮಂಗಳನಲ್ಲೇ ಆಗಲಿ, ಎಂಟು ಹತ್ತು ಇಪ್ಪತ್ತು ಉಪಗ್ರಹಗಳಿರೋ ಗುರು ಶನಿ ಅಂತಹ ಗ್ರಹಗಳಲ್ಲೇ ಆಗಲಿ ಈ ರೀತಿ ಸೂರ್ಯ ಗ್ರಹಣ ಆಗೋದಿಲ್ಲ.

ಸೂರ್ಯ ಚಂದ್ರನಿಗಿಂತ ಸುಮಾರು ನಾನೂರರಷ್ಟು ದೊಡ್ಡವನು. ಹಾಗೇ ಚಂದ್ರ ಭೂಮಿಗಿರೋ ದೂರ ಲೆಕ್ಕ ಹಾಕ್ಕೊಂಡ್ರೆ, ಸುಮಾರು ನಾನೂರರಷ್ಟು ಹೆಚ್ಚು ದೂರದಲ್ಲಿದ್ದಾನೆ. ಹಾಗಾಗಿ ಭೂಮಿಯಿಂದ ನೋಡಿದಾಗ ಈ ಎರಡೂ ಕಾಯಗಳು ನಮಗೆ ಸುಮಾರು ಒಂದೇ ಅಳತೆಯಲ್ಲಿ ಕಾಣುತ್ತವೆ. ಅಲ್ಲದೆ, ಅವೆರಡರ ಪಾತಳೀನೂ ಒಂದಕ್ಕೊಂದು ಓರೆಯಾಗಿದ್ರೂ, ಒಂದನ್ನೊಂದು ಅಡ್ಡ ಹಾಯೋ ಸಮಯದಲ್ಲಿ ಎರಡೂ ಒಂದೇ ಕಡೆಯಲ್ಲಿದ್ದರೆ  ಗ್ರಹಣ ಆಗುತ್ತೆ. ಬೇರೆ ಗ್ರಹಗಳಲ್ಲಿ, ಅವುಗಳ ಉಪಗ್ರಹಗಳಿಗೂ, ಸೂರ್ಯನಿಗೂ ಈ ರೀತಿಯ  ಕರಾರುವಾಕ್ಕಾದ ಸಂಬಂಧ ಇಲ್ಲದಿರುವುದರಿಂದ ಇಂತಹ ಸೂರ್ಯ ಗ್ರಹಣಗಳು ಆಗೋಲ್ಲ!

ಈ ಗ್ರಹಣಗಳು ಹದಿನೆಂಟು ವರ್ಷ ೧೦ ದಿನಕ್ಕೆ ಮತ್ತೆ ಮರಳಿ ಬರುತ್ತವೆ ಅನ್ನುವ ವಿಷಯ ಗೊತ್ತಿತ್ತೇ ನಿಮಗೆ? ಇದಕ್ಕೆ ಸೆರಾಸ್ ಸೈಕಲ್ (Saros Cycle) …