ಊರಿನಲ್ಲಿ ತೇರು


ಮುಗುಳು ನಗುವನ ಮಿಗದ ಕಣ್ಣನ
ಮುಗಿಲ ಬಣ್ಣನ ಖಗವನೇರ್ದನ
ತಿಗರಿಯಲಸುರ ದುರುಳರನು ತಾ ಮಡುಹಿ ಕೆಡಹಿದನ
ಮಗುವಿನಂತೆಲ್ಲರನು ಕಾಯ್ವನ
ಜಗವ ನಡೆಸುವ ಕೇಶವೇಶನ
ಸುಗುಣಿಜನರೇಂ ಪುಣ್ಯಗೈದರೊ ತೇರನೆಳೆಯಲಿಕೆ
ಜಗವ ಕಾಯುವನಿವನು ನಂಬಿರೊ
ಮಿಗೆ ಸಲಹುವನು ನೆಚ್ಚಿದವರನು
ಹೊಗಳುವರಿನಿತು ಕಾಲದಿಂದಲು ಲಕುಮಿ ಕೇಶವನ
ಬಗೆಯುತಿರಲಿವನನ್ನನುದಿನದೊ
ಳಗಣ ಕಲುಷವು ಪೋಪುದಾಕ್ಷಣ
ಸುಗುಣಿಜನಹಿತ ನೋಳ್ಪವನು ಈ ಕೌಶಿಕೇಶ್ವರನು
ಚಿಗುರು ತುಳಸೀ ಮಾಲೆ ಧರಿಸಿದ
ಮುಗಿಲ ಕಾಂತಿಯ ಮೀರುವಾತನು
ಮಿಗಿಲು ತಾ ಮೆರೆಯುತಿರುತಿಹನಿವನೂರ ತೇರಿನಲಿ
ಬಗೆಯಗೊಳ್ಳುವ ತನ್ನ ಚೆಲುವಲಿ
ಹಗುರಗೊಳಿಸೈ ಜೀವ ಭಾರವ
ಹಗೆಗಳಿರದಿರುವಂತೆ ಮಾಡುತ ನಮ್ಮ ಬದುಕಿನಲಿ
-ಹಂಸಾನಂದಿ 
ಕೊ: ಮಿತ್ರ ಕಲಾವಿದ ಲೋಕೇಶ್ ಆಚಾರ್ಯ ಅವರು ಚಿತ್ರಿಸಿದ ಅವರೂರ ತೇರಿನ ವರ್ಣಚಿತ್ರ ನೋಡಿ ನನಗೆ ನಮ್ಮೂರ ತೇರಿನ ನೆನಪಾಯಿತು. ಆ ನೆನಕೆಯಲ್ಲಿ ಈ ಮೂರು ಭಾಮಿನಿ ಷಟ್ಪದಿಗಳು
ಕೊ.ಕೊ: ಬಲಭಾಗದಲ್ಲಿರುವುದು ಹಾಸನ  ಜಿಲ್ಲೆಯ ಕೌಶಿಕ ಎಂಬ ಹಳ್ಳಿಯಲ್ಲಿರುವ ಲಕ್ಷ್ಮೀಕೇಶವ ಮೂರ್ತಿ. ಈ ಪದ್ಯಗಳನ್ನು ಬರೆದಾಗ ಆ ಸುಂದರ ಮೂರ್ತಿಯೇ ಮನಸ್ಸಿನಲ್ಲಿತ್ತು. 
ಕೊ.ಕೊ.ಕೊ: ಈ ಮೂರ್ತಿ ಹೊಯ್ಸಳ ಶೈಲಿಯಲ್ಲಿದ್ದರೂ ದೇವಾಲಯದಲ್ಲಿ ಹೊಯ್ಸಳರದ್ದೇ ಎಂದು ಗುರುತಿಸಬಲ್ಲಂತಹ ಇತರ ಕಲೆಗಾರಿಕೆ ಇಲ್ಲ. 

Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ