ಮಳೆಗಾಲದ್ದೊಂದು ಕಥೆ


ಹಳ್ಳಿ ಮಲಗಿರೆ ಮೋಡ ಮೊರೆದಿರೆ ಕಣ್ಣ ನೀರನು ಸುರಿಸುತ
ತನ್ನ ದುಃಖವ ನೆನೆದು ನೆನೆಯುತ ಹಾಡನಾಗಿಸೆ ಪಯಣಿಗ 
ಉಬ್ಬಿರುವ ಗಂಟಲಿನ ದನಿಯನು ಕೇಳಿ ಊರಿನ ಪೆಣ್ಗಳು
ಒದ್ದೆ ಕಣ್ಣಲಿ ಪಯಣ ತೆರಳಿಹ ತಮ್ಮಿನಿಯರನು ನೆನೆವರು

ಸಂಸ್ಕೃತ ಮೂಲ ( ಸದುಕ್ತಿಕರ್ಣಾಮೃತ, ಪದ್ಯ ೯೦೬)

सुप्ते ग्रामे नदति जलदे शान्तसंपातरम्यं
पान्थेनात्मव्यसनकरुणोदस्रु गीतं निशीथे ।
स्फीतोत्कण्ठापरिगतधिया प्रोषितस्त्रीजनेन
ध्यानावेशस्तिमितनयनं श्रूयते रुद्यते च ॥९०६॥

-ಹಂಸಾನಂದಿ


ಕೊ: ಸುಮಾರು ಸಾವಿರ ವರ್ಷ ಹಿಂದಿನ ಜನಜೀವನವನ್ನ ಈ ಪದ್ಯ ನಮ್ಮ ಕಣ್ಣಮುಂದೆ ತಂದಿಡುತ್ತದೆ. ಅಂದಿನ ದಿನಗಳಲ್ಲಿ ವ್ಯಾಪಾರಿಗಳು ದೇಶದ ಒಂದು ಕಡೆಯಿಂದ ಮತ್ತೊಂದು ಕಡೆಗೆ ತಮ್ಮ ಸರಕುಗಳನ್ನು ಮಾರಲು ಹೋಗುತ್ತಿದ್ದಿದುಂಟು. ಸಾಮಾನ್ಯವಾಗಿ, ಇವರು ಮಳೆಗಾಲ ಆರಂಭವಾಗುವ ಮೊದಲು ತಮ್ಮ ತಮ್ಮ ಊರು ಸೇರಿಕೊಳ್ಳುತ್ತಿದ್ದರು. ಮಳೆ ಬರತೊಡಗಿದ ನಂತರ, ನದಿಗಳೆಲ್ಲ ಉಕ್ಕಿ ಹರಿಯತೊಡಗಿ, ಪ್ರಯಾಣ ಅಪಾಯಕಾರಿಯೂ , ಕಷ್ಟವೂ ಆಗುತ್ತಿದ್ದರಿಂದ, ಮಳೆಗಾಲಕ್ಕೆ ಮುನ್ನ ಊರು ಸೇರಿಕೊಳ್ಳದಿದ್ದರೆ ಮತ್ತೆ ಮರಳಿ ಹೋಗಲು ೩-೪ ತಿಂಗಳು ಆಗುತ್ತಿದ್ದಿದುಂಟು. ಹಾಗಾಗಿ ಹಳೆಯ ಸಂಸ್ಕುತ ಪದ್ಯಗಳಲ್ಲಿ ಮಳೆಗಾಲ, ಮತ್ತೆ ಒಬ್ಬರಿಂದೊಬ್ಬರು ದೂರವಿರುವ ಗಂಡಹೆಂಡಿರ ನೋವುಗಳು ಮತ್ತೆ ಮತ್ತೆ ಬರುವುದುಂಟು.

ಕೊ.ಕೊ: ಈ ಪದ್ಯದಲ್ಲಿ ಕವಿ ಅಂತಹ ಎರಡು ಪ್ರಸಂಗಗಳನ್ನು ಜೊತೆಗೂಡಿಸಿದ್ದಾನೆ.  ಮಳೆಗಾಲದ ಒಂದು ರಾತ್ರಿ. ಹಳ್ಳಿಯೊಂದರಲ್ಲಿ ತಂಗಿರುವ ಪ್ರಯಾಣಿಕನೊಬ್ಬ ರಾತ್ರಿ ಹೊತ್ತಿನಲ್ಲಿ ತನ್ನ ನೋವನ್ನೆಲ್ಲ ಹಾಡಾಗಿಸಿ ಹಾಡುತ್ತಿದ್ದಾನೆ. ಕವಿ ಅವನ ದುಃಖ ಯಾವುದರದ್ದು ಎಂದು ಹೇಳದೇ, ಅದನ್ನು ಓದುಗರ ಕಲ್ಪನೆಗೇ ಬಿಟ್ಟಿದ್ದಾನೆ.  ಆದರೆ, ಆ ಅಳಲುದುಂಬಿದ ಧ್ವನಿ, ಈ ಹಳ್ಳಿಯಲ್ಲಿರುವ , ಗಂಡಂದಿರು ವ್ಯಾಪಾರಕ್ಕೆ ಪರವೂರಿಗೆ ಹೋಗಿದ್ದು, ಇನ್ನೂ ಹಿಂತಿರುಗದಿರುವ ಹೆಣ್ಣುಗಳಿಗೆ ತಡೆಯಲಾರದ ದುಃಖವನ್ನು ತಂದಿದೆ.

ಕೊ.ಕೊ.ಕೊ: ಮೂಲ ಪದ್ಯವು ಮಂದಾಕ್ರಾಂತಾ ಎಂಬ ವೃತ್ತದಲ್ಲಿದೆ. ಕನ್ನಡ ಅನುವಾದವು ಮಾತ್ರಾ ಮಲ್ಲಿಕಾಮಾಲೆ ಎಂಬ ವೃತ್ತದಲ್ಲಿದೆ. ಪ್ರಾಸವನ್ನಿಡದಿದ್ದರೂ, ಪ್ರಾಸಸ್ಥಾನಗಳಲ್ಲಿ ಒತ್ತಕ್ಷರಗಳನ್ನಿಟ್ಟಿರುವುದನ್ನು ಗಮನಿಸಬಹುದು. 

ಚಿತ್ರ: ರಾಜಾಸ್ತಾನ್ ಶೈಲಿಯ ಪಟಮಂಜರಿ ರಾಗವನ್ನು ಸೂಚಿಸುವ ರಾಗಮಾಲಾ ಚಿತ್ರ.  ಬ್ರಿಟಿಷ್ ಮ್ಯೂಸಿಯಂ ನ ಸಂಗ್ರಹದಿಂದ  ~೧೮೦೦ ರ ಸುಮಾರಿನದು (https://es.pinterest.com/pin/550565123174263289/)
Popular posts from this blog

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ