ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ!

ನಮ್ಮಲ್ಲಿ ಹೆಚ್ಚಿನ ಕನ್ನಡದ ಜನರಲ್ಲಿ ಒಂದು  ಭ್ರಮೆ ಇದೆ (ಅದು ಬೇರೆ ನುಡಿಯಾಡುವ ಜನರಲ್ಲೂ ಇರಬಹುದು, ಆದರೆ ಈ ಬರಹವನ್ನು ಓದುವವರು ಕೇವಲ ಕನ್ನಡಿಗರಾದ್ದರಿಂದ ನನ್ನ ಮಾತುಗಳನ್ನು ಆ ಚೌಕದೊಳಗೇ ಮೀಸಲಾಗಿಡುತ್ತೇನೆ).  ಪ್ರಾಕೃತವೆಂಬ ಭಾಷೆಯಿಂದ (ಅಥವಾ ಭಾಷೆಗಳಿಂದ) ಸಂಸ್ಕೃತ ಎನ್ನುವ ಭಾಷೆಯನ್ನು ಶೋಧಿಸಿ, "ಕಟ್ಟಲಾಯಿತು" ಎನ್ನುವುದೇ ಈ ಭ್ರಮೆ. ಈ ಭ್ರಮೆಯನ್ನು ಚಾಲ್ತಿಯಲ್ಲಿಡಲು ಹಲವರು ಪ್ರಯತ್ನಗಳನ್ನು ನಡೆಸುತ್ತಲೇ ಇರುತ್ತಾರೆ. ಅದು  ಅವರವರ ವಾದಗಳಿಗೆ ಸಮಜಾಯಿಶಿ ಕೊಡಲು ಮಾಡುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.

ಈ ಭ್ರಮೆಗೆ ನಮ್ಮ ಶಾಲಾ ಕಾಲೇಜು ಪಠ್ಯ ಪುಸ್ತಕಗಳಲ್ಲಿರುವ ಅರೆಬೆಂದ ಪಾಠಗಳನ್ನೇ ಓದಿ, ಅದನ್ನೇ ನಿಜವೆಂದು ನಂಬಿ ಅದನ್ನೇ ಪಾಠ ಮಾಡಿ, ಮತ್ತೆ ಮುಂದಿನ ಪೀಳಿಗೆಗೂ ಅಜ್ಞಾನ ಪ್ರಸಾರ ಮಾಡುತ್ತಿರುವವರದ್ದೂ,  ಇನ್ನೊಂದು ಭಾಷೆಯನ್ನು ಓದದೇ ತಿಳಿಯದೇ ಅದರ ಬಗ್ಗೆ ದೊಡ್ಡ ವಿನ್ಯಾಸವಾಗಿ ಬಣ್ಣಬಣ್ಣವಾಗಿ ಮಾತಾಡುವಂತಹ ಸಾಹಿತಿಗಳದ್ದೂ, ಬುದ್ಧಿಜೀವಿಗಳು , ಜಾತ್ಯತೀತರು ಎಂಬ ಕಿರೀಟವನ್ನು ಹೊತ್ತು ಮೆರೆಯುವ ಮಹನೀಯರದ್ದೂ, ಇನ್ನು ಇವತ್ತಿನ ಮಟ್ಟಿಗೆ ಬಂದರೆ ವಾಟ್ಸಪ್ ನಲ್ಲಿಯೋ, ಯಾವುದೋ ಫೇಸ್ ಬುಕ್ ಗುಂಪಿನಲ್ಲೋ,  ಅಥವಾ ಯಾವುದೋ ಪತ್ರಿಕೆ ಅಂಕಣದಲ್ಲಿ ಓದಿದ್ದೆಲ್ಲ ನಿಜವೆಂದು ತಿಳಿಯುವ ಮುಗ್ಧರದ್ದೂ - ಈ ರೀತಿಯ ಹಲವಾರು ಬಗೆಯ ಜನಗಳ ದೊಡ್ಡ ಕಾಣಿಕೆ, ಈ ಭ್ರಮೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಇದೆ. ದೊಡ್ಡ ವಿದ್ವಾಂಸರಾಗಿ,  ಹೆಬ್ಬೊತ್ತಗೆಗಳನ್ನು ಬರೆದ ಡಾ. ಷಟ್ಟರ್ ಅವರ ಪುಸ್ತಕಗಳಲ್ಲೇ ಇಂತಹ ಅರ್ಥ ಬರುವ ಮಾತುಗಳು ಇರುವಾಗ, ಜನಸಾಮಾನ್ಯರು ಶಂಖದಿಂದ ಬಂದದ್ದೆಲ್ಲಾ ತೀರ್ಥ ಎಂದು ಬಗೆದು, ಕುರಿಗಳಂತೆ ಹಿಂಬಾಲಿಸುವುದರಲ್ಲೇ  ಸಾರ್ಥಕತೆಯನ್ನು ಕಾಣಬಯಸುವುದೇ ಬಹಳ ಬೇಸರದ ಸಂಗತಿ.

ಇನ್ನು  ಕಾಲೇಜು, ವಿಶ್ವವಿದ್ಯಾಲಯಗಳ ಮಟ್ಟದಲ್ಲಂತೂ ಭಾಷಾ ಶಾಸ್ತ್ರ ಮಾಯವಾಗಿ ಅದರ ಜಾಗದಲ್ಲಿ ಸಮಾಜ ವಿಜ್ಞಾನ ( ಸೋಸಿಯಾಲಜೀ) ತಜ್ಞರು(?) ಭಾಷೆಯ ವಿಷಯಗಳ ಬಗ್ಗೆ ಮನಬಂದಂತೆ ವಿಶ್ಲೇಷಣೆ ಮಾಡುವ ದರಿದ್ರ ಪರಿಸ್ಥಿತಿ ಎದುರಾಗಿದೆ.  ಇಂತಹವರು ಹರಿ ಬಿಡುವ " ಬುದ್ಧ ಸಂಸ್ಕೃತ ವಿರೋಧಿ, ಅದಕ್ಕಾಗಿ ಅವನು ಪಾಲೀ ಭಾಷೆಯಲ್ಲಿ ತನ್ನ ಧರ್ಮೋಪದೇಶವನ್ನು ಮಾಡಿದ. ಸಂಸ್ಕೃತವು ಕೆಲವರ ಸ್ವತ್ತಾಗಿತ್ತು ,ಅದನ್ನು ತಡೆದು, ತಳ್ಳಿ ಹಾಕಿ,  ವಿರೋಧಿಸಿ, ಜನಸಾಮಾನ್ಯರ ಪಾಲಿಯನ್ನು ಅವನು ಬಳಸಿದ ಅನ್ನುವ ವ್ಯಾಖ್ಯಾನಗಳನ್ನು ಮಾಡುತ್ತಾ ಹೋಗಿದ್ದಾರೆ. ಆದರೆ ಇದಕ್ಕಿಂತ ಸರಳವಾದ ವಿವರಣೆ ಇರಬಹುದು, ಅಥವಾ ಇದೆಯೇ ಅನ್ನುವುದನ್ನೂ ಕೂಡ ಇಂತಹಾ ಮಹಾನುಭಾವರು ಮಾಡಿಲ್ಲ ಅನ್ನುವುದು ಬಹಳ ಸೋಜಿಗದ ವಿಚಾರ.

ಯಾವುದೇ ಪುಸ್ತಕವನ್ನಾಗಲಿ, ಬರಹವನ್ನಾಗಲೀ ಬರೆದವರು, ಅದು ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂದು ಆಸೆ ಪಡುತ್ತಾರೆ. ನಾನು ನನ್ನ ತಾಯಿನುಡಿ (ಸಂಕೇತಿ) ಯಲ್ಲಿ ಬರೆಯದೇ ಕನ್ನಡದಲ್ಲೋ , ಇಂಗ್ಲಿಷ್ ನಲ್ಲೋ ಬರೆಯುವುದರ ಕಾರಣವೇ ಅದು. ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡದಲ್ಲಿ ಬರೆದು ಪ್ರಖ್ಯಾತಿ ಗಳಿಸಿದ್ದೂ ಇದೇ ಕಾರಣಕ್ಕೆ. ಅವರು ತಮ್ಮ ಮನೆಮಾತಿನಲ್ಲಿ ಬರೆದಿದ್ದರೆ ಕನ್ನಡದ ಆಸ್ತಿ ಎಂದು ನಾವವರನ್ನು ಕೊಂಡಾಡುತ್ತಿದ್ದೆವೇ? ಗೌತಮ ಬುದ್ಧ ತನ್ನ ಉಪದೇಶಗಳನ್ನು ಪಾಲಿಯಲ್ಲಿ ಹೇಳಿದ್ದರೆ ಅವನು ಪಾಲಿ ಮಾತಾಡುತ್ತಿದ್ದ ಉತ್ತರ ಮಗಧ, ( ಈಗಿನ ಬಿಹಾರ್ ಮತ್ತೆ ಪೂರ್ವ ಭಾಗದ ಉತ್ತರ ಪ್ರದೇಶ ರಾಜ್ಯ ) ದಲ್ಲೇ ಹೆಚ್ಚು ಸಂಚರಿಸುತ್ತಿದ್ದಿದ್ದು ಕಾರಣ. ಇನ್ನು ಪಾಲಿ ಎಂಬುದೂ ಪೂರ್ತಿ ಬೇರೆ ಭಾಷೆಯಲ್ಲದೇ, ಸಂಸ್ಕೃತದ್ದೇ ಒಂದು ಒಳನುಡಿ ( ಡಯಲೆಕ್ಟ್) ಅಲ್ಲದೇ ಮತ್ತೇನಲ್ಲ ಎಂಬುದನ್ನು ಉದಾಹರಣೆಗಳೊಂದಿಗೆ ಈ ಬ್ಲಾಗ್ ಬರಹ ದಲ್ಲಿ ಹಿಂದೊಮ್ಮೆ ಬರೆದಿದಿದ್ದೆ. ಆಸಕ್ತರು ಕೊಂಡಿಯನ್ನು ಚಿಟಕಿಸಿ ನೋಡಬಹುದು.  ಪಾಲೀ, ಮಾಗಧೀ, ಅರ್ಧಮಾಗದೀ, ಸೌರಸೇನೀ, ಮಹಾರಾಷ್ಟ್ರೀ, ವೈದರ್ಭೀ - ಹೀಗೆ ಹಲವು ಪ್ರಾಕೃತಗಳಿದ್ದ ಬಗ್ಗೆ ನಾವು ತಿಳಿಯಬಹುದು. ದೇಶ-ಕಾಲಗಳಲ್ಲಿ ಈ ಪ್ರಾಕೃತಗಳು ಬದಲಾಗುತ್ತಾ , ಇಂದಿನ ಉತ್ತರ ಭಾರತದ ಭಾಷೆಗಳಾದ ಹಿಂದೀ, ಬಂಗಾಲೀ, ಪಂಜಾಬೀ, ಮೈಥಿಲೀ, ಅವಧೀ, ಮರಾಠೀ, ಛತ್ತೀಸ್ ಘರೀ, ಇಂತಹ ಹಲವಾರು ಭಾಷೆಗಳಿಗೆ ಎಡೆಕೊಟ್ಟಿರುವುದನ್ನೂ ನೋಡಬಹುದು.

ಈಗ ಹಾಲಮಹಾರಾಜ ( ಈತ ಸಾತವಾಹನ ವಂಶದವನು - ಸುಮಾರು  ಕ್ರಿಸ್ತಪೂರ್ವ ೨೦೦ ರ ಸರಿಸುಮಾರಲ್ಲಿ ಇವನು ಇದ್ದಿರಬೇಕು) ಸಂಗ್ರಹಿಸಿರುವ ಗಾಹಾ ಸತ್ತಸಯಿ ಯ ಒಂದು ಪದ್ಯವನ್ನು ಓದೋಣ. ಸದ್ಯಕ್ಕೆ ಅದರ ಅರ್ಥದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.

ಕಿಂ ರುಅಸಿ ಓಣಮುಹೀ ಧವಲಾಅಂತೇಸು ಸಾಲಿಛೇತ್ತೇಸು |
ಹರಿಅಲಮಂಡಿಅಮುಹೀ ಣಡಿವ್ವ ಸಣವಾಡಿಅ ಜಾಆ ||

ಇದರ ಸಂಸ್ಕೃತ ಛಾಯೆ (ಅನುವಾದಕ್ಕೆ ಬದಲಾಗಿ ಛಾಯೆ, ನೆರಳು ಎಂಬ ಹೆಸರನ್ನು ಬೇಕೆಂದೇ ಬಳಸಿರುವೆ) ಹೀಗಿದೆ:

ಕಿಂ ರುದಸಿ ಅವನತಮುಖೀ ಧವಲಾಯಮಾನೇಷು ಶಾಲಿಕ್ಷೇತ್ರೇಶು |
ಹರಿತಾಲಮಂಡಿತಮುಖೀ ನಟೀವ ಶಣವಾಟಿಕಾ ಜಾತಾ ||

ಎರಡನ್ನೂ ಒಮ್ಮೆ, ಅಥವಾ ಒಂದೆರಡು ಬಾರಿಯೇ ಆಗಲಿ,  ಜೋರಾಗಿ ಓದಿಕೊಳ್ಳಿ, ಎರಡೂ ಹೇಗೆ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ನಿಮಗೇ ಮನವರಿಕೆಯಾಗದಿದ್ದರೆ ಕೇಳಿ!

ಹಾಗಿದ್ದರೆ ಸಂಸ್ಕೃತಕ್ಕೆ ಮಾತ್ರವೇ ಒಳನುಡಿಗಳು ಎಂಬ ಪ್ರಶ್ನೆ ಬಂದರ ಅಲ್ಲ ಅನ್ನುವುದೇ ಸರಿಯಾದ ಉತ್ತರ. ಈಗ ನಾನು ಬರೆಯುತ್ತಿರುವುದು ಕನ್ನಡದ "ಸಂಸ್ಕೃತ" - ಎಂದರೆ ಸಾಮಾನ್ಯವಾಗಿ ಎಲ್ಲ ಕನ್ನಡಿಗರಿಗೂ ಸರಾಗವಾಗಿ ತಿಳಿಯುವ, ಬರವಣಿಗೆಯ ಕನ್ನಡ. ನಾನು ಹೀಗೆ ಬರೆದರೂ, ನಾನು ಮನೆಯಲ್ಲಿ ಮಾತನಾಡುವ ಕನ್ನಡವೇ ಬೇರೆ !ಇದೇ ಸಾಲನ್ನು ನಾನು ಮನೆಯಲ್ಲಿ ಹೇಳುವುದು - "ನಾನು ಮನೇಲೆ ಮಾತಾಡೋ ಕನ್ನಡಾನೇ ಬೇರೆ". ಅದು ನನ್ನ ಕನ್ನಡದ ಒಂದು "ಪ್ರಾಕೃತ". ಇದೇ ಸಾಲನ್ನು ಉತ್ತರ ಕನ್ನಡ ಜಿಲ್ಲೆಯ ಕನ್ನಡಿಗರು ಮತ್ತೊಂದು ಬಗೆಯಲ್ಲಿ ಹೇಳಿದರೆ, ಅದು ಇನ್ನೊಂದು ಪ್ರಾಕೃತ. ರಾಯಚೂರು ಗುಲ್ಬರ್ಗಾ ಕನ್ನಡಿಗರು ಮತ್ತೊಂದು ಬಗೆಯಲ್ಲಿ ಹೇಳಿದರೆ, ಅದು ಇನ್ನೊಂದು ಬಗೆಯ ಕನ್ನಡದ ಪ್ರಾಕೃತ!  ತಿಳೀತಲ್ಲ?

ಕನ್ನಡದ "ಪ್ರಾಕೃತ" ಉದಾಹರಣೆ ೧:

ಮೂಡಲ್ಕುಣಿಗಲ್ಕೆರೆ ನೋಡೋಕೊಂದೈಬೋಗ
ಮೂಡೀ ಬರ್ತಾನೆ ಚಂದಿರಾಮ ತಾನಂದನೋ
ಮೂಡೀ ಬರ್ತಾನೆ ಚಂದಿರಾಮ

ಬಾಳೇಯಹಣ್ಣೀನಂತೆ ಬಾಗೀ ಕುಣಿಗಲ್ಕೆರೆ
ಭಾವ ತಂದವ್ನೆ ಬಣ್ಣದ್ಸೀರೆ ತಾನಂದನೋ
ಭಾವ ತಂದವ್ನೆ ಬಣ್ಣದ್ಸೀರೆ

ಇದನ್ನೇ ಕನ್ನಡದ . ಎಲ್ಲರಿಗೂ ತಿಳಿಯುವ ಬರವಣಿಗೆಯ ಶೈಲಿಯಲ್ಲಿ , ಅಂದರೆ ಕನ್ನಡದ "ಸಂಸ್ಕೃತದಲ್ಲಿ" ಹೀಗೆ ಬರೆಯಬಹುದೇನೋ:

ಮೂಡಲು ಕುಣಿಗಲ್ಲು ಕೆರೆ ನೋಡುವುದೇ ವೈಭೋಗ
ಮೂಡೀ ಬರುತಿರುವ ಚಂದಿರಾಮ ತಾನಂದನೋ
ಮೂಡೀ ಬರುತಿರುವನಾ ಚಂದಿರಾಮ

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ಲು ಕೆರೆ
ಭಾವ ತಂದಿಹನು ಬಣ್ಣದ ಸೀರೆ ತಾನಂದನೋ
ಭಾವ ತಂದಿಹನೋ ಬಣ್ಣದ ಸೀರೆ

(ಈ ಉದಾಹರಣೆಯಲ್ಲಿ ಆಗಿರುವ ಛಂದಸ್ಸಿನ ತಪ್ಪುಗಳಿಗೆ ಮನ್ನಿಸಿ)


ಇದೇ ರೀತಿ, ಕನ್ನಡದ "ಪ್ರಾಕೃತ" ಉದಾಹರಣೆ ೨:

ಮಾಯದಂತಾ ಮಳೇ ಬಂತಣ್ಣಾ ಮದಗಾದ ಕೆರೀಗೆ
ಅಂಗೈನಷ್ಟು ಮೋಡವಾಗಿ ಭೂಮಿ ತೂಕದ್ಗಾಳೀ ಬೀಸೀ
ಗುಡಗೀ ಗೂಡಾಗಿ ಚೆಲ್ಲಿದಳು ಗಂಗಮ್ಮ ತಾಯಿ ||

ಅದೇ ಕನ್ನಡದ "ಸಂಸ್ಕೃತ" ದಲ್ಲಿ:

ಮಾಯದಂತಹ ಮಳೆಯು ಬಂತಣ್ಣ ಮದಗದ ಕೆರೆಗೆ
ಅಂಗೈಯಷ್ಟು ಮೋಡವಾಗಿ ಭೂಮಿ ತೂಕದ ಗಾಳಿ ಬೀಸಿ
ಗುಡುಗಿ ಗೂಡಾಗಿ ಚೆಲ್ಲಿದಳು ಗಂಗಮ್ಮ ತಾಯಿ||

ಮೂರನೇ ಉದಾಹರಣೆಯೊಂದಿಗೆ ಮುಕ್ತಾಯ ಹಾಡೋಣವೇ?

ಕುಂತ್ರೆ ನಿಂತ್ರೆ ಅವನ್ದೆ ದ್ಯಾನ  ಜೀವಕ್ಕಿಲ್ರಿ ಸಮಾಧಾನ
ಅವ್ನಿಗೆ ಎಂತಾ ಬಿಗುಮಾನ ಅವ್ನೇ ನನ್ನ ಗೆಣೆಕಾರ ||

(ಬದಲಾಯಿಸಿದರೆ)

ಕುಳಿತರೆ ನಿಂತರೆ ಅವನದೆ ಧ್ಯಾನ ಜೀವಕ್ಕಿಲ್ಲವು ಸಮಾಧಾನ
ಅವನಿಗೆ ಎಂತಹ ಬಿಗುಮಾನ ಅವನೇ ನನ್ನ ಗೆಣೆಕಾರ ||

ಇವುಗಳನ್ನು ಓದಿದರೆ ಕೆಲವು ಕನ್ನಡ "ಪ್ರಾಕೃತ" ಪದಗಳೂ ಕನ್ನಡ "ಸಂಸ್ಕೃತ" ಪದಗಳಿಗೂ ವ್ಯತ್ಯಾಸವೇ ಇಲ್ಲ, ಕೆಲವಕ್ಕೆ ಇವೆ. ಹಾಗಂತ ಬರವಣಿಗೆಯ ಭಾಷೆಯನ್ನ "ಶೋಧಿಸಿ" "ಕಟ್ಟಿದ" ಭಾಷೆ ಎನ್ನಲಿಕ್ಕೂ ಸಾಧ್ಯವಿಲ್ಲ.  ಎಲ್ಲರಿಗೂ ತಿಳಿಯುವ ಕನ್ನಡದ ಬರವಣಿಗೆಯ ಬಾಷೆ ಹೇಗೋ "ಸಂಸ್ಕೃತ" ಎಂದು ಕರೆಯಲ್ಪಡುವ ಭಾಷೆ ಹಾಗೆ ಅಷ್ಟೆ. ಅದಕ್ಕಿಂತ  ಬೇರೆ ವಿಪರೀತವಾದ ಕಲ್ಪನೆಗಳಿಗೆ, ಹುಚ್ಚಾಟದ ಅರ್ಥಗಳಿಗೆ ಎಡೆ ಕೊಡುವುದು ಸರಿಯೂ ಅಲ್ಲ!

ನಲವತ್ತೈವತ್ತು ವರ್ಷಗಳ ಹಿಂದೆ, ಮೂಲ ಗ್ರಂಥಗಳೇ ಆಗಲಿ , ಅನುವಾದಗಳೇ ಅಗಲಿ ಸಿಗದೇ ಇದ್ದಾಗ ಸಾಮಾನ್ಯ ಜನರಿಗೆ ತಪ್ಪು ಕಲ್ಪನೆಗಳಾಗುತ್ತಿದ್ದದ್ದು , ಸರಿಯಾಗ ವಿಷಯ ತಿಳಿಯದೇ ಹೋಗದೇ ಇದ್ದದ್ದಕ್ಕೂ ಒಂದು ಅರ್ಥವಿತ್ತು. ಆದರೆ ಸಾವಿರಾರು ಮೂಲ ಆಕರಗಳು ಕೈ ಬೆರಳಿಗೇ ಸಿಗುವ ಈ ಇಂಟರ್ನೆಟ್ ಯುಗದಲ್ಲೂ ಈ ರೀತಿ ತಪ್ಪು ತಿಳುವಳಿಕೆಗಳು ಹರಡುತ್ತಲೇ ಹೋಗುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯದಾಗಿದೆ!

-ಹಂಸಾನಂದಿ 

Popular posts from this blog

ನಿಮ್ಮ ರಾಶಿ ಫಲ ನಿಮ್ಮದೇ ? ಅಲ್ಲವೇ?

ಋತು ಸಂಹಾರ